ಅನಿ ಹನಿ

ಹೊಂಗೆ ಮರದ ನೆರಳಿನಲ್ಲಿ: ಅನಿತಾ ನರೇಶ್ ಮಂಚಿ


ಸಾಮಾಜಿಕ ಜಾಲ ತಾಣದಲ್ಲಿ ಒಂದೇ ಬಗೆಯ ವಿಷಯಗಳ ಒಲುಮೆಯ ಆಧಾರದಲ್ಲಿ ಹಲವಾರು ಗುಂಪುಗಳು ನಿತ್ಯವೂ ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಕೆಲವೊಂದು ಅಲ್ಪಾಯುಷ್ಯದಲ್ಲೇ ಕಾಲನರಮನೆಯನ್ನು ಸೇರಿದರೆ ಇನ್ನು ಕೆಲವು ನಮ್ಮ ಸಮ್ಮಿಶ್ರ ಸರಕಾರಗಳನ್ನು ನೆನಪಿಸುತ್ತವೆ. ತಾವೂ ಏನೂ ಧನಾತ್ಮಕ ವಿಷಯಗಳನ್ನು ನೀಡದೇ, ನೀಡುವವರ ಬಗ್ಗೆಯೂ ಮೆಚ್ಚುಗೆಯ ಮಾತನ್ನಾಡದೇ ಕೇವಲ ಕಾಲೆಳೆಯುವುದನ್ನೇ ಉದ್ಯೋಗವಾಗಿಸಿಕೊಂಡಂತವು. 

ಮತ್ತೆ ಹಲವು  ಹೊಸಾ ಅಗಸ ಬಟ್ಟೆ ಒಗೆದಂತೆ ಮೊದ ಮೊದಲು ಶುಭ್ರವಾಗಿಯೂ, ಸ್ವಚ್ಚವಾಗಿಯೂ ಕಾಣುತ್ತಿರುತ್ತವೆ. ದಿನ ಕಳೆದಂತೆ ಕೊಳಕುಗಳೇ ಉಳಿದು, ಅಲ್ಲಿಂದ ಹೊರ ಬೀಳುವ ದಾರಿಗಾಗಿ ಚಡಪಡಿಸುವಂತಾಗುತ್ತದೆ. ಅಲ್ಲಿನ ಒಳ್ಳೆಯತನದ ಮುಖವಾಡಗಳು ಕಳಚುತ್ತಾ ಹೋದಂತೆ ಪರಿಚಿತವಾಗುವ ನಿಜದ ಬಣ್ಣ ಬೆಚ್ಚಿ ಬೀಳಿಸುವಷ್ಟು ವಿಕಾರವಾಗಿರುತ್ತದೆ ಎಂಬುದೂ ವಿಷಾದದ ಸಂಗತಿ. 

ಇದಕ್ಕೆ ಅಪವಾದವಾಗಿ ಈಗಲೂ ಕೆಲವು ಗುಂಪುಗಳು ತಮ್ಮ ಪಾಡಿಗೆ ತಾವೇ ಹತ್ತು ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವುದೂ ಅಭಿನಂದನೀಯ. ಇಲ್ಲಿನ  ಗೆಳೆತನ ಎಂಬುದು ನಿಜವೋ ಭ್ರಮೆಯೋ ಎಂಬ ಬಗೆ ಹರಿಯದ ಸಮಸ್ಯೆಯ ನಡುವೆಯೂ ಹಲವು ಒಳ್ಳೆಯ ಮನಸ್ಸುಗಳ ಒಡನಾಟ, ಒಳ್ಳೆಯ ಕೆಲಸಗಳನ್ನು ಒಗ್ಗಟ್ಟಿನಿಂದ ಮಾಡುವುದನ್ನು ಕಾಣುವಾಗ ಸಂತಸವೆನಿಸುತ್ತದೆ. ಭರವಸೆಯ ಬೆಳಕು ತಾನೇ ತಾನಾಗಿ ಪಸರಿಸುತ್ತದೆ. 

ಒಂದು ಉತ್ತಮ ಗುರಿಯನ್ನಿಟ್ಟುಕೊಂಡು ಹುಟ್ಟಿದ ಇಂತಹುದೇ ಒಂದು ಗುಂಪು ಇದೀಗ ಕನ್ನಡದ ಮನೆ ಮಾತಾಗುತ್ತಾ, ಎಲ್ಲರ ಮನದೊಳಗೂ ಸ್ಥಾನ ಪಡೆಯುವತ್ತ ಹೆಜ್ಜೆ ಹಾಕುತ್ತಿದೆ. ಅವರ್ಯಾರು ಎಂಬ ಪರಿಚಯ ಮಾಡಿಕೊಳ್ಳಲು ಕಾಲವನ್ನು ಕೊಂಚ ಹಿಂದಕ್ಕೆ ಸರಿಸೋಣ ಬನ್ನಿ. 
ಎಷ್ಟೆಲ್ಲಾ ಸುಂದರ ನೆನಪುಗಳು ಬರಹಗಳ ಮೆರವಣಿಗೆಯದ್ದು.. 

ಕಂಪ್ಯೂಟರಿನ ಭಾಷೆಗಿನ್ನೂ ಪಳಗದ ದಿನಗಳವು. ಕನ್ನಡದಲ್ಲಿ ಬರೆಯುವುದು ಹೇಗೆ ಎಂದೇ ಗೊತ್ತಿಲ್ಲದ ಕಾಲ. ಬರವಣಿಗೆಯ ಬೆನ್ನೇರುತ್ತಾ ಹೊರಟಿದ್ದ ನಾನು  ಮನದೊಳಗಿನ ತುಡಿತವನ್ನು ಕವನ ರೂಪದಲ್ಲಿ ಇಂಗ್ಲಿಷ್ ಅಕ್ಷರಗಳಲ್ಲಿ ಬರೆದು ಆರ್ಕಟ್ ಬಳಗದ ಒಂದು ಕನ್ನಡದ ಗುಂಪಿಗೆ  ಪೋಸ್ಟ್ ಮಾಡಿದ್ದೆ. ನಾನಲ್ಲಿಗೆ ಹೊಸಬಳಾದ ಕಾರಣ ಆತಂಕ. ಅಲ್ಲಿನವರು ಹೇಗೆ ಇದನ್ನು  ಅರ್ಥ ಮಾಡಿಕೊಳ್ಳುತ್ತಾರೋ.. ಬರವಣಿಗೆಯ ಬಗ್ಗೆ ಏನಾದರೂ ಕಮೆಂಟ್ ಮಾಡುತ್ತಾರೋ ಅಂದುಕೊಂಡು ಕಂಪ್ಯೂಟರಿನ ಎದುರು ಆಗಾಗ ಕುಳಿತು ಅದನ್ನು ನೋಡುವುದು, ನಿರಾಸೆಯಿಂದ ಮರಳುವುದು.. ದಿನವಿಡೀ ಇದೇ..

ಮರುದಿನ ನನಗೊಂದು ಅಚ್ಚರಿ ಕಾದಿತ್ತು. ನಾನು ಬರೆದ ಕವನವನ್ನು ಆ ಗುಂಪಿನವರೊಬ್ಬರು ಮುತ್ತಿನಂತಹ ಕನ್ನಡದ ಅಕ್ಷರಗಲಲ್ಲಿ ಬರೆದು ಹಾಕಿ ಅದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದಕ್ಕೆ ಬಂದ ಮೆಚ್ಚುಗೆಗಳು ಕಂಪ್ಯೂಟರಿನ ಸಮರ್ಪಕ ಬಳಕೆ ಮಾಡಿಕೊಳ್ಳಲು ಮತ್ತು ಇದರಲ್ಲಿ ಕನ್ನಡದಲ್ಲೇ ಬರೆಯಲು ಪ್ರೇರೇಪಿಸಿತು. ನನ್ನ ಕಂಪ್ಯೂಟರ್ ಗುರು ಅಶೋಕನ ಬೆನ್ನು ಬಿದ್ದು ಕಂಪ್ಯೂಟರಿನಲ್ಲಿ ಕನ್ನಡ ಬರೆಯಲು ಕಲಿತೆ.

 ಆ ಬರಹದ ಲೋಕಕ್ಕೆ ಮತ್ತೆ ಮತ್ತೆ ಪಯಣ ಮಾಡುವುದು ಸಂತಸದ ವಿಷಯವಾಗಿತ್ತು. ಪಳಗಿದ ಲೇಖಕರಿಂದ ಕಲಿತುಕೊಳ್ಳುತ್ತಲೇ ಮುಂದೆ ಸಾಗುವ ಆ ದಾರಿಯ ಅತ್ತಿತ್ತ ಹಸಿರೇ ತುಂಬಿತ್ತು. ಯಾರೂ ಒಬ್ಬರ ಮನಸ್ಸನ್ನು ನೋಯಿಸದೇ ಆಪ್ತತೆಯಿಂದ ಒಡನಾಡುತ್ತಿದ್ದ ರೀತಿ ನೀತಿಗಳು ಗುಂಪಿನ ಆಶಯಕ್ಕೆ ತಕ್ಕುದಾಗಿಯೂ, ಗೌರವ ಮೂಡಿಸುವಂತೆಯೂ ಇರುತ್ತಿತ್ತು. ತುಂಟತನ ತರಲೆಗಳಿಗೆಂದೇ ಪ್ರತ್ಯೇಕ ಹರಟೆ ಕಟ್ಟೆಯೂ ಇದ್ದ ಕಾರಣ ಅದಕ್ಕೂ ಏನೂ ಕೊರತೆಗಳಿರಲಿಲ್ಲ. 

 ರೂಪಾ ಸತೀಶ್

ಅಂದು ಪುಟ್ಟದಾಗಿ ಪ್ರಾರಂಭವಾಗಿದ್ದ ಈ ಗುಂಪಿನ ಹೆಸರು 3K. ಅಂದರೆ ಕನ್ನಡ ಕವಿತೆ  ಕಥನ. ರೂಪಾ ಸತೀಶ್ ಅವರ ಕನ್ನಡದ ಒಲವಿನ ಕೆಲಸಗಳಿಗೆ ಜೊತೆಯಾದ ಕೈಗಳು ಅನೇಕ.  ಆರ್ಕಟ್ ನಿಂತ ಮೇಲೆ ಅದೇ ಹೆಸರಿನಲ್ಲಿ ಫೇಸ್ ಬುಕ್ ನಲ್ಲಿ ಸೇರ್ಪಡೆಗೊಂಡ ಮೇಲೂ ಗುಂಪಿನ ಆಶಯಗಳಲ್ಲಿ ಬದಲಾವಣೆಯಾಗದೆ ಅದೇ ಸಮಸ್ಥಿತಿಯನ್ನು ಅದೇ ಒಳ್ಳೆಯತನವನ್ನು ಕಾಯ್ದುಕೊಂಡಿರುವುದು ಅದರ ಸದಸ್ಯರ ಹೆಗ್ಗಳಿಕೆ. ಇಲ್ಲಿ ಹಿರಿ ಕಿರಿ ಎನ್ನದೆ ಹಲವು ಕವಿಗಳು, ಸಾಹಿತಿಗಳು ಸೇರ್ಪಡೆಗೊಂಡು ಸದಸ್ಯರ ಸಂಖ್ಯೆ ಎರಡು ಸಾವಿರ ದಾಟಿದೆ.  
ಸಮರ್ಪಕವಾಗಿ ಜಾಲತಾಣದ ಬಳಕೆಯ ಬಗ್ಗೆ, ಅದರಿಂದ ಸಾಧ್ಯವಾಗುವ ಉತ್ತಮ ಸಾಧ್ಯತೆಗಳ ಬಗ್ಗೆ ಆಲೋಚಿಸುತ್ತಾ ಹೊರಟ ಗುಂಪು ತಮ್ಮಲ್ಲೇ ಉತ್ತಮವಾಗಿ ಬರೆಯುವ ಕವಿಗಳ ಕವನ ಸಂಕಲನದ ಸಾಹಸಕ್ಕೆ ದುಮುಕಿತು. ಕವನಗಳನ್ನು ಯಾರು ಓದ್ತಾರೆ ಸ್ವಾಮೀ ಎಂದು ಮೂಗು ಮುರಿಯುವವರು ಹುಬ್ಬೇರಿಸುವಂತೆ ಮಾಡುತ್ತಾ ಹೆಚ್ಚಿನ ಓದುಗರನ್ನು ಸೃಷ್ಟಿಸಿತು. ಈ ಸಾಧನೆ ಅವರಿಗೆ ಇನ್ನಷ್ಟು ಉತ್ತೇಜನ ನೀಡಿತು.  ಮತ್ತಿನದ್ದು ನೂರು ಕವಿಗಳ ನೂರಾರು ಭಾವನೆಗಳನ್ನು ಹೆಣೆದು ನೇಯ್ದ  ಕವನಗಳ ಗುಚ್ಚ. ಇದು ಕೂಡಾ ಓದುಗರ ಉತ್ತಮ ಪ್ರತಿಕ್ರಿಯೆ ಪಡೆಯುವಲ್ಲಿ ಯಶಸ್ವಿಯಾಗಿದೆ.  ಇದೀಗ ಇನ್ನೊಂದು ಹೊಸ ಕೆಲಸದತ್ತ ದಾಪುಗಾಲು ಹಾಕಿರುವ ಬಳಗ ಹಿರಿ, ಕಿರಿಯ  ಇಪ್ಪತ್ತಾರು ಲೇಖಕರ ಸಣ್ಣ ಕಥೆಗಳನ್ನು ಸಂಕಲನ ರೂಪದಲ್ಲಿ ಹೊರತರಲಿದೆ.  ಕನ್ನಡ ಪ್ರೀತಿಯ ತಿಂಗಳಾದ ನವಂಬರಿನಲ್ಲೇ ಬಿಡುಗಡೆಯಾಗುತ್ತಿರುವ  ಪುಸ್ತಕದ ತಂಪು ತಂಪು ಹೆಸರು ‘ಹೊಂಗೆ ಮರದಡಿ’. ಈ ಹೆಸರನ್ನು ಕೂಡಾ ಈ ಗುಂಪಿಗೂ ಅನ್ವರ್ಥ ನಾಮವಾಗಿಯೇ ಬಳಸಬಹುದೇನೋ..!! 

ಕನ್ನಡ ಪ್ರೀತಿಯ ಹತ್ತು ಹಲವು ಇಂತಹ ಕೆಲಸಗಳು ಇನ್ನು ಮುಂದೆಯೂ ಈ ಗುಂಪಿನಿಂದ ನಡೆಯಲಿ ಎಂಬ ಸದಾಶಯದೊಂದಿಗೆ ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಕೆಗಳು. 
-ಅನಿತಾ ನರೇಶ್ ಮಂಚಿ.  


 

ಕನ್ನಡದ ಬರಹಗಳನ್ನು ಹಂಚಿ ಹರಡಿ

6 thoughts on “ಹೊಂಗೆ ಮರದ ನೆರಳಿನಲ್ಲಿ: ಅನಿತಾ ನರೇಶ್ ಮಂಚಿ

 1. 3k ಬಳಗದ ಕನ್ನಡ ಸೇವೆ ನಿಜಕ್ಕೂ ಶ್ಲಾಘನೀಯ. ಅಲ್ಲಿರುವವರೆಲ್ಲರೂ ಹೊಂಗೆ ಮರದ ಕೆಳಗಿನ ತಣ್ಣಗಿನ ಕವಿಗಳು ಮತ್ತು ಕತೆಗಾರರು..ಅವರ ಕಥಾಸಂಕಲನದ ನಿರೀಕ್ಷೆಯಲ್ಲಿ ನಾನು ಇದ್ದೇನೆ.

 2. ನನ್ನ ಅನುಭವವೂ ಇದೆ ರೀತಿ ಆಗಿತ್ತು . ನಾನೊಬ್ಬ ಕನ್ನಡ ಕಥೆ ಕಾದಂಬರಿ ಕವನ ಹಾಡು ಹೀಗೆ ಅಭಿಮಾನಿ.  ೩ಕ ಆರ್ಕುಟ್ ನಿಂದ ಪ್ರೇರಿತನಾಗಿ ಹಲವಾರು ಕವನ ಬರೆದು ತುಂಬು ಪ್ರೋತ್ಸಾಹ ಪಡೆದವನು . ತಪ್ಪು ತಪ್ಪಾಗಿ ಕನ್ನಡ ಲಿಪಿ ಕಲಿತು ಬೆಳೆದವನು ಆಗ ಕೇವಲ ೨೦-೩೦ ಸದಸ್ಯರ ಸದಭಿರುಚಿ ಗುಂಪು ರೂಪ ಸತೀಶ್ ಅನುಪಮ ಹೆಡ್ಗೆ  ರಂಜಿತ್ ಪ್ರೋಮೊದ್ ಹಸ್ಸನ್ ಮಹೇಶ್ ಋತು ಹೀಗೆ ಹಲವರು. ಆ ಸಮಯದಲ್ಲಿ ಒಂದು ಕವನ ಬರೆದಿದ್ದೆ . 
  ಇದು ಬರಿಯ ಹೂ ತೋಟವಲ್ಲ
  ಕನ್ನಡ ಕವನ ಕವಿತೆ ಗಾಗಿ…
  ಇದು ಬರಿಯ ಹೂ ತೋಟವಲ್ಲ
  ಹಚ್ಚಗಿನ ಮನಸುಗಳ
  ಬೆಚ್ಚಗಿನ ಕನಸುಗಳ
  ಬಾವಗಳ ಕೋಳ
  ಸ್ಪಂದಿಸುವ ಹೃದಯಗಳ ಮೇಳ. 

  'ಹಸನ್' ಮಣ್ಣ ಹಸನುಗೊಳಿಸಿ,ಕಸುತುಂಬಿ,
  'ಮಹೇಶ್' ಪಾತಿಮಾಡಿ,ರಸಗೊಬ್ಬರವಾಗಿ 
  'ನಾಗೇಶ್' ಬರವಸೆಯ ಚಿಗುರಾಗಿ 
  ಇಲ್ಲಿ ಎಲ್ಲರು ಮಾಲಿಗಳೇ
  ಸಿಗುವ ಕೂಲಿ ಬರಿಯ ಕೋಟಿಗಳೇ.

  'ರಂಜಿತ್'ರ ಅಪ್ರತಿಮ ಕಲ್ಪನೆಯ
  ರಂಜಿಸುವ ಕುಸುಮಗಳ ರಂಗು.
  ಕನಸುಗಳ ಒಡತಿ 
  'ಋತು'ವಿನ ಋತುಗಾನದ ಗುಂಗು.

  'ರೂಪ'ಳ ಕುಂಚ-ಸಿಂಚನದ
  ವರ್ಣಗಳ ಬೆರಗು
  'ಅನುಪಮ' ಕವಿತೆಗಳ 
  ಹೂದಂಡೆ,ಇನ್ನೆಲ್ಲಿ ಕೊರಗು.

  ಅರಳು ಮಲ್ಲಿಗೆಯ 'ಮಧು' ಮದುರ 
  ಬಿನ್ನಾಣ.
  'ಪ್ರೋಮೋದ' ನಲಿವ ಗುಲಾಬಿಯ
  ಹೂಬಾಣ.

  ಅರಳಿದ ಪುಷ್ಪಗಳ 
  ನಡುವೆ ಮಂತ್ರ ಮುಗ್ಧ 
  'ಹಸುಳೆ' ನಾನು.

  ಇಲ್ಲಿ ಭಾವಕೂ-ಭಾಷೆಗೂ ಬಲು ನಂಟು.
  ರಸಹೀರುವ ಬೃಂಗಗಳು ನೂರೆಂಟು.

  ಇದು ಬರಿಯ ಹೂ ತೋಟವಲ್ಲ. 

  ನಾನು ಕವಿಯಲ್ಲ ಕೇವಲ ಹವ್ಯಾಸಿ ಬರಹಗಾರ . ಅದೇ ಪ್ರೋತ್ಸಾಹ ಇಂದು ೩ಕ ನಲ್ಲಿ ೨೦೦೦ಕ್ಕೂ ಮೀರಿ ಸದಸ್ಯರ ಸಾಲು ಸಾಲು  . ಅತ್ಯಂತ ಆರೋಗ್ಯಕರ ವಾತಾವರಣದಲ್ಲಿ ಸಾಗಿದೆ "ಶತಮಾನಂಭವತಿ" ನನ್ನದೊಂದು ಪುಟ್ಟ ಕವನವಿದೆ ಎಂಬ ಹೆಮ್ಮೆ ಇದೆ. ಶ್ರೀಮತಿ ರೂಪ ಸತೀಶ್ ೩ ಕ ಜನನಿಗೆ ಸಾದಿಸಿದ ಸಾಧನೆಗಳಿಗೆ ವಂದನೆಗಳು . ಈ ಕನ್ನಡ ಸೇವೆ ಹೀಗೇ ಮುಂದುವರಿಯಲಿ 

   

 3. Namaste Anitha Madam. 3k Bagge Neevu Barediruva ee lekana Shlaghaniya Mattu Indingu Orkutnalli Nimagada Anubhavavannu Nenapinallittukondidakke dhanyavaadagalu….

 4. ತುಂಬಾ ಒಳ್ಳೆಯ ಚಟುವಟಿಕೆ…… ಗುಂಪಿನ ಸದಸ್ಯರೆಲ್ಲರಿಗೂ ಅಭಿನಂದನೆಗಳು

 5. ನನಗೂ ಉತ್ತಮವಾಗಿ ಬರೆಯುವುದ ಕಲಿಸಬಹುದೇ ಅನಿತಾ ಮೇಡಂ. ….

Leave a Reply

Your email address will not be published. Required fields are marked *