ಲೇಖನ

ಹೇ ಮಾನವ ನಮ್ಮನ್ನೂ ಬದುಕಲು ಬಿಡಿ: ಮಂಜುಳಾ ಶೆಟ್ಟಿಗಾರ್

ಮುಂಜಾನೆ ಬೇಗನೆ ಎದ್ದೆ  ಕಾರಣ ಬಯಕೆಯ ಹಸಿವು. ಗರ್ಬಿಣಿಯಾಗಿದ್ದರಿಂದ ತುಂಬಾ ಆಯಾಸ ಹಾಗಾಗಿ ಹಿಂದಿನ ದಿನ ರಾತ್ರಿಯಾಗುವುದರೊಳಗೆ ಸಿಕ್ಕಿದ್ದನ್ನು ತಿಂದು ಬೇಗನೆ ಮಲಗಿದ್ದೆ. ಅದೇ ಕಾರಣ ಇಂದು ಸೂರ್ಯನ ರಶ್ಮಿ ಸೊಕುವುದಕ್ಕಿಂತ ಮೊದಲೇ ಹಸಿವು ನನ್ನ ಬಡಿದೆಬ್ಬಿಸಿತು. 

ಸರಿ ಏನಾದರೂ ತಿಂದು ಹೊಟ್ಟೆ ತುಂಬಿಸಿಕೊಳ್ಳಬೇಕು, ನನಗಲ್ಲದಿದ್ದರು ನನ್ನ  ಉದರದಲಿ ಬೆಳೆಯುತ್ತಿರುವ ನನ್ನ ಕನಸಿನ ಕೂಸಿಗೆ ಎಂದು ದೌಡಾಯಿಸಿ ಎದ್ದೆ. ಗರ್ಭಿಣಿಯ ಆಯಾಸ ಕಾಡುತಿತ್ತು. ಆಯಾಸ ಎಂದು ಕೂತವಳಿಗೆ ಮತ್ತೇ ಹಸಿವು ಹೊಟ್ಟೆಯಲ್ಲಿ ಚುರ್ ಎಂದು ಎಚ್ಚರಿಸಿತು. 

ತಡಮಾಡದೆ ಎದ್ದು ಪ್ರಕೃತಿ ಮಾತೆಗೆ ನಮಸ್ಕರಿಸಿ, ಆಹಾರ ಹುಡುಕಲು ಹೊರಟೆ. ಕಾಡಿನಲ್ಲಿ ಸಿಕ್ಕ ಆಹಾರವನ್ನು ಹೊಟ್ಟೆಗೆ ಸೇರಿಸಿಕೊಂಡೆ. ಹಸಿವು ತಣ್ಣಗಾಯಿತು. ಯಾಕೋ ಗರ್ಭಿಣಿಯ ಬಯಕೆ ನನ್ನ ಊರ ಕಡೆ ಮುಖ ಮಾಡುವಂತೆ ಮಾಡಿತು. ಆಸೆಯನ್ನು ತಡೆಯಲಾರದೆ ಊರ ಕಡೆ ಮೆಲ್ಲ ಹೆಜ್ಜೆ ಹಾಕಿದೆ. 

ಹೀಗೆ ಸಾಗುತ್ತ ಬಂದವಳು ಊರನ್ನು ತಲುಪಿದೆ. ಜನರು ನನ್ನನ್ನು ನೋಡಿದರೆ ಓಡಿಸುತ್ತಾರೆ ಎಂದು ಮುಂದೆ ಹೆಜ್ಜೆ ಇಡುವ ಮುನ್ನ ಒಮ್ಮೆ ಯೋಚಿಸಿದೆ. ಅಲ್ಲಿಯೇ ನಿಂತು ಕಣ್ಣ ಹಾಯಿಸಿ ನೋಡಿದೆ. ಅನಾನಸಿನ ತೋಟವೊಂದು ಕಾಣಿಸಿತು. ಬಾಯಲ್ಲಿ ನೀರೂರಿತು. ಹೆದರಿಕೆ ಮತ್ತು ಬಯಕೆಯ ನಡುವೆ ಪೈಪೋಟಿ ನಡೆದು ನನ್ನ ಬಯಕೆಯೇ ಮೇಲುಗೈ ಸಾದಿಸಿತು. 

ಅತ್ತಿತ್ತ ನೋಡಿ ಅನನಾಸಿನ ತೋಟದೊಳಗೆ ಹೆಜ್ಜೆ ಇಟ್ಟೆ. ಕಾಲಿನ ಪಕ್ಕದಲ್ಲಿಯೇ ಒಂದು ಅನನಾಸು ಕಂಡಿತು. ನಾನು ಇದನ್ನೆ ತಿಂದು ಹೋಗುತ್ತೇನೆ ಪಾಪ ತೋಟದ ಮಾಲಿಕನೂ ಅವನ ಹೊಟ್ಟೆ ಪಾಡಿಗೆ ಬೆಳೆಸಿರುತ್ತಾನೆ ಎಂದು ಅವನಿಗೆ ಈ ಒಂದೂ ಅನನಾಸನ್ನು ತಿನ್ನುತ್ತೇನೆ ಎಂದು ಮನಸಲ್ಲೇ ಧನ್ಯವಾದ ಹೇಳಿ ಹಣ್ಣನ್ನು ಬಾಯಿಗೆ ಹಾಕಿಕೊಂಡೆ. ಅಲ್ಲಿಯೇ ನಾ ಮಾಡಿದ ತಪ್ಪು ಕ್ರೂರ ಮಾನವನ ಬಗ್ಗೆ ಕರುಣೆ ತೋರಿ ಅವನ ಮೋಸದ ಬಲೆಗೆ ನಾನು ಬಿದ್ದಾಗಿತ್ತು. ಅನಾನಾಸು ಎಂದು ತಿಂದವಳಿಗೆ ಅದರಲ್ಲಿ ದಾನವನಿಗಿಂತ ಕ್ರೂರಿಯಾದ ಈ ಮಾನವ ಸಿಡಿಮದ್ದನ್ನು ತುಂಬಿದ್ದನೆನ್ನುವ ಅರಿವು ಸಹ ನನಗಿರಲಿಲ್ಲ. 

ಹೊಟ್ಟೆಯಲ್ಲಿ ಒಮ್ಮೆಲೇ ಏನೊ ಸಿಡಿದಂತಾಯಿತು. ಅಯ್ಯೋ ರಾಮ ಇದೇನಾಯಿತು. ಅಯ್ಯೋ ಕ್ರೂರ ಮಾನವನೆ ಮೋಸ ಮಾಡಿ ನನ್ನ ಕೊಲ್ಲುವ ಸಂಚು ಹೂಡಿದೆಯಾ ಎಂದು ಓಡತೊಡಗಿದೆ. ನನ್ನ ಹೊಟ್ಟೆಯಲ್ಲಿ ಬೆಂಕಿ ಉರಿಯುವಂತೆ ಭಾಸವಾಗುತಿತ್ತು. ಗರ್ಭದಲ್ಲಿದ್ದ ಕಂದನ ಬಗ್ಗೆ ಅನಂತ ಆಸೆಗಳನ್ನು ಕಂಡವಳು ನಾನು. ಅದೆಲ್ಲಾ ಸುಟ್ಟು ಕರಕಲು ಮಾಡಿದ್ದ ಈ ಮಾನವ. ಅಯ್ಯೋ ನನ್ನ ಮಗು, ನನ್ನ ಮಗು ಎಂದು  ದಿಕ್ಕೇ ತೋಚದೆ ಆ ನೋವಿನಲ್ಲೂ ಓಡಿದೆ. 

ಓಡುತ್ತ ಸಾಗಿದವಳಿಗೆ ದೂರದಲ್ಲಿ ನದಿಯೊಂದು ಕಾಣಿಸಿತು. ನನ್ನ ಜೀವ ಹೋದರು ಸರಿ ಈ ಸುಡುವ ಬೆಂಕಿಯಿಂದ ನನ್ನ ಮಗು ಬದುಕಬೆಕೇಂದು ನೀರಿನಲ್ಲಿ ಹೋಗಿ, ಗಂಗಾ ಮಾತೆಯಲ್ಲಿ ಪುತ್ರ ಭಿಕ್ಷೆ ಬೇಡಿ ನಿಂತೆ. ನನ್ನ ಜೀವ ಹೋಗುವಷ್ಟು ನೋವು ನನ್ನ ಕಾಡುತಿದ್ದರೂ ನನ್ನ ಮಗು ಬದುಕಬೇಕೆಂಬ ಒಂದೇ ಒಂದೂ ಆಸೆ ನನ್ನನ್ನು ನನ್ನ ಸಾವಿನಲ್ಲೂ ತಡಕಾಡುತಿತ್ತು. 

ಕೊನೆಗೂ ನನ್ನ ಮಗು ನಾನು ತಟಸ್ಥರಾಗಿದ್ದೆವು. ನನ್ನ ಹೋರಾಟ ಫಲಿಸಲಿಲ್ಲ, ಕ್ರೂರ ಮನುಜನ ಸ್ವಾರ್ಥ ಜೀವನಕ್ಕೆ ನನ್ನ ಹಾಗೂ ನನ್ನ ಕಂದಮ್ಮ ಬಲಿಯಾದೆವು. 

ನಿಮ್ಮಂತೆ ದಂಗೆ ಎದ್ದು ನೀಚ ಪದಗಳಿಂದ ಬೈದು ಹೊರಾಡಲು ನಮ್ಮಿಂದಾಗದು, ನಾವು ಮೂಕಪ್ರಾಣಿಗಳು. ಹೇ ಮಾನವನೆ ನಮ್ಮಿಬ್ಬರ ಬಲಿಯೆ ಕೊನೆಯಾಗಲಿ, ಇನ್ನಾದರೂ  ಕರುಣಾಮಯಿ ಆಗಿ ಬದುಕುವುದನ್ನು ಕಲಿ. ಅಲ್ಲದೇ ಹೋದಲ್ಲಿ ನರಕ ಎಂಬುದು ಈ ಭುವಿಯಲ್ಲಿಯೇ ಸೃಷ್ಟಿಯಾಗುತ್ತದೆ, ನಿಮ್ಮ ಸ್ವಾರ್ಥ ಜೀವನದ ಅಂತ್ಯ ಅತೀ ಶೀಘ್ರದಲ್ಲಿ ನಿಮ್ಮನ್ನು ಹುಡುಕಿ ಬರುತ್ತದೆ. 

ಪ್ರಾಣಿಗಳಾದ ನಮಗೂ ಬದುಕಲೂ ಹಕ್ಕಿದೆ ನಮ್ಮನ್ನು ನಿಮ್ಮಂತೆಯೇ ಬದುಕಲು ಬಿಡಿ.

ಮಂಜುಳಾ ಶೆಟ್ಟಿಗಾರ್


ಕನ್ನಡದ ಬರಹಗಳನ್ನು ಹಂಚಿ ಹರಡಿ

4 thoughts on “ಹೇ ಮಾನವ ನಮ್ಮನ್ನೂ ಬದುಕಲು ಬಿಡಿ: ಮಂಜುಳಾ ಶೆಟ್ಟಿಗಾರ್

Leave a Reply

Your email address will not be published.