ಹೇ ಕನಸಿನ ಕೂಸೆ…
ಕುಶಲವೇ..? ಕ್ಷೇಮವೇ..? ಸೌಖ್ಯವೇ..? ಎಲ್ಲಿರುವೇ..? ಹೇಗಿರುವೇ..? ಇನ್ನೂ ಏನೇನೊ ಸಾವಿರ ಮಾಮೂಲಿ ಪ್ರಶ್ನೆಗಳು. ಆದರೆ ನಿನ್ನ ಕುಶಲೋಪರಿಯ ವರದಿ ತಿಳಿಯಲು ನಿನ್ನಿಂದ ಒಂದು ಪತ್ರವು ಇಲ್ಲ, ನಾ ಮೌನಿಯಾದಾಗ ರಚ್ಚೆ ಹಿಡಿದು ಕೆನ್ನೆ ಹಿಂಡಿ, ಕಣ್ಣ ಮಿಟುಕಿಸಿ ಯಾಕೋ ಕೂಸೆ.. ಏನಾಯ್ತು..? ಎನ್ನುವ ಆ ನಿನ್ನ ಸಿಹಿ ಸಾಂತ್ವಾನವು ಇಲ್ಲ. ಯಾಕಾಯ್ತು ಕೂಸೆ ಹೀಗೆ..? ಎಲ್ಲದಕ್ಕೂ ದೇವರಿದ್ದಾನೆ, ಆಗುವುದೆಲ್ಲಾ ಒಳ್ಳೆಯದಕ್ಕೆ ಕಣೋ ಅಂತ ನನ್ನ ಅನುಮಾನಗಳಿಗೆ ನಂಬಿಕೆಯ ನೀರೆರೆದು, ನೀನೇಕೆ ಬತ್ತಿ ಹೋದೆ? ಎಲ್ಲ ಸ್ವಗತ ಪ್ರಶ್ನೆಗಳು. ನಿನ್ನಿಂದ ಮಾತ್ರ ಉತ್ತರವೇ ಇಲ್ಲ. ನನ್ನದೋ ಬರಿ ಮೌನ ಸಂಭಾಷಣೆ..
ನನಗೆ ‘ನೆನಪು’ ಅಂದಾಗ ನೆನಪಾಗೋ ನೆನಪೆಂದರೆ ಅದು ‘ನೀನು’ ಮತ್ತು ನೀನು ಅಳಿಸದೆ ಹಾಗೇ ಉಳಿಸಿದ ಆ ನಿನ್ನ ಸವಿನೆನಪುಗಳು ಮಾತ್ರ. ನಿನಗೆ ನೆನಪಿದೆಯಾ ಕೂಸೆ..? ಇಳಿಸಂಜೆಯಲಿ ಸೊಂಪಾಗಿ ಬೆಳೆದ ಆ ಹಸಿರ ಹಾದಿಯಲಿ ಸಾಗಿ, ತಂಗಾಳಿಗೆ ಮೈಯೊಡ್ಡಿ, ನಿನ್ನ ಹೆಸರ ನಾನು, ನನ್ನ ಹೆಸರ ನೀನು ಆ ನಿನ್ನ ದೇವರ ಕಿವಿಗೆ ಅಪ್ಪಳಿಸುವಂತೆ ಕೂಗಿದ್ದು, ನಾಸ್ತಿಕನಾಗಿದ್ದ ನನ್ನನ್ನು ಗುಡಿಯೊಳಗೆ ಕರೆದುಕೊಂಡು ಹೋಗಿ “ನಾವಿಬ್ಬರು ಜೊತೆ ಇರದ ಸಾವಿರ ಜನ್ಮ ಬೇಡ. ಕೊನೆವರೆಗೂ ಕೂಡಿ ಬಾಳೊ ಈ ಒಂದು ಜನ್ಮ ಕೊಡು ಸಾಕು” ಎಂದು ಆ ಕಲ್ಲು ದೇವರ ಹೃದಯಕ್ಕೆ ತಾಕುವಂತೆ ಪಿಸುಗುಟ್ಟಿದ್ದು, ಆ ಇಳಿಜಾರಿನ ಝರಿಯಲಿ ಜಾರಿ, ತುಂತುರು ಹನಿಗಳಿಗೆ ನಾಲಿಗೆಯೊಡ್ಡಿ ಮೈಯೆಲ್ಲಾ ನೆನೆದದ್ದು. ಮಾರನೇ ದಿನವೇ ನೀ ಜ್ವರ ಬಂದು ಹೊದ್ದು ಮಲಗಿದ್ದು, ಆ ದಿನ ನಿನ್ನ ಕಾಣದೆ ನಾನು ನೊಂದಿದ್ದು.. ನೆನಪಿದೆಯಾ..? ನಾನೆಂಥ ಮೂಢ ನೋಡು ಕೂಸೆ.. ನಿನಗೆ ನೆನಪಿದೆಯಾ ಅಂತ ಕೇಳುತಿದ್ದೇನೆ. ಮರೆಯೊಕಾದರೆ ತಾನೆ ನೆನಪಾಗೊ ಆ ಮಾತು..
ನಾನೆಂದರೆ ಅದೇಷ್ಟು ಪ್ರೀತಿ ಕೂಸೆ ನಿನಗೆ. ನನ್ನ ತಪ್ಪುಗಳನ್ನು ಕೂಡ ನೀ ಇಷ್ಟಪಡುತಿದ್ದೆ. ಈ ಎದೆಯಂಗಳದಿ ಮೊದಲು ಸ್ನೇಹದ ಚುಕ್ಕಿ ಇಟ್ಟೆ ನೀನು. ಆ ನಿನ್ನ ತುಂಟನಗೆಯಲ್ಲೆ ಭಾವನೆಗಳ ತುಂಬಿ ಒಲವಿನ ಗೆರೆಗಳ ಸೇರಿಸಿದೆ. ಪ್ರೀತಿಯ ರಂಗವಲ್ಲಿಯ ಚಿತ್ತಾರ ಮೂಡಿಸಿದೆ. ನಿನ್ನ ಪ್ರೀತಿಗೆ ಶರಣಾದ ನನ್ನ ಮನಸ್ಸು ಎಂದು ಕಂಡರಿಯದ ಖುಷಿಯಲ್ಲಿ ರೆಕ್ಕೆ ಬಲಿತ ಹಕ್ಕಿಯಂತೆ ಮುಗಿಲಗಲ ಹಾರಿತು. ಈ ಲೋಕವೇ ನನ್ನದೆನೋ ಎಂಬ ಭಾವ. ಈ ಬಡವನ ಹೃದಯದಲ್ಲಿ ಹೇಳ’ತೀರದ’ ಸಿರಿ ಸಡಗರ. ಸ್ವತಃ ತಾನೇ ಸಂಗೀತ ಪ್ರವೀಣೆಯಾದರೂ ಹಠ ಹಿಡಿದು ನನ್ನಿಂದ ಹಾಡು ಹೇಳಿಸಿ ಸಂಭ್ರಮಿಸೊ ನಿನ್ನ ಪರಿಗೆ ಆ ಸ್ವರ್ಗವು ನಾಚಿ ನೀರಾಗಬೇಕು. “ಹಾಲುಗೆನ್ನೆಯ ಮೇಲೆ ಜಲಧಾರೆಯಂತೆ ಇಳಿದು ಬಿದ್ದ ಮುಂಗುರುಳು, ತುಟಿಯಂಚಲಿ ತಿಳಿಬೆಳದಿಂಗಳ ಮಂದಹಾಸ, ಕೆಲವೊಮ್ಮೆ ಎಳೆಯ ಕಿರಣಗಳಿಗೆ ಕಣ್ಣ ಮಿಟುಕಿಸುತ್ತಾ, ಸಣ್ಣ ನಗು ಬೀರುತ್ತಾ ಕಿರಣಗಳಿಗೆ ಮತ್ತಷ್ಟು ಹೊಳಪು ನೀಡುವಂತ ನೋಟ.. ಎಂತವರನ್ನು ಬೆರಗುಗೊಳಿಸುವಂತದ್ದು. ಆ ನಿನ್ನ ನೋಟಕ್ಕೆ ಪ್ರತಿ ನೋಟವಿಟ್ಟು ಪ್ರೇಮಯುದ್ಧ ಸಾರಿದೆ. ನಿನ್ನ ನೋಟದ ಪ್ರಖರ ಬಾಣ ಎದುರಿಸಲಾಗದೆ ಸೋತು ಸುಣ್ಣವಾದೆ. ಆ ಸೋಲು ಕೂಡ ನನ್ನ ಗೆಲುವೆನೋ ಎಂಬಂತೆ ಬೀಗುತಿದ್ದೆ. ಏಕೆಂದರೆ ಗೆದ್ದವಳು ನೀನಲ್ಲವೇ.. ನನ್ನವಳು.
ನಾನು ಕೂಡ ಅತೀ ಬೇಸರವಾದಾಗಲೆಲ್ಲಾ ನಿನ್ನ ತೊಡೆ ಮೇಲೆ ಮಗುವಾಗಿ ಮಲಗಿದಾಗ ನನ್ನ ಬೇಸರ ಕಳೆಯಲೆಂದೆ ಹಾಡುತಿದ್ದೆಯಲ್ಲಾ.. ಆಗ ಆ ನಿನ್ನ ಕೆಂದುಟಿಯದಾಟಿ ಧ್ವನಿಯಾಗುವ ಒಂದೊಂದು ಪದಗಳು ಪಾವನ ಕಣೇ ಕೂಸೆ. ನಾನಂತು ನಿಜವಾಗಿಯೂ ಮಗುವಂತಾಗಿಬೀಡುತಿದ್ದೆ, ನನ್ನ ಚೂರು ಬೇಸರವಾಗದಂತೆ ನೋಡಿಕೊಳ್ಳುತಿದ್ದೆಯಲ್ಲಾ ಆ ನಿನ್ನ ಪ್ರೀತಿಗೆ ಈ ಬಡವ ತಾನೆ ಏನು ನೀಡಲು ಸಾಧ್ಯ. ಕವಿವಾಣಿಯಂತೆ “ನಿನ್ನ ಪ್ರೀತಿಗೆ, ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ..”
ಮರಳಿ ಮತ್ತದೇ ಪ್ರಶ್ನೆ.. ಇಷ್ಟೇಲ್ಲಾ ಇದ್ದ ಪ್ರೀತಿಗೆ ಅದೇಕೆ ಹೀಗಾಯ್ತು..? ನಮ್ಮ ಈ ಮಧುರ ಪ್ರೀತಿಗೆ ಜಾತಿ ಎಂಬ ಅಡ್ಡಗೋಡೆಯನ್ನಿಟ್ಟ ಆ ನಿನ್ನ ದೇವರು. ಎಲ್ಲ ಹಾಳಾದ ಪ್ರೇಮಿಗಳ ಕಥೆಯಂತೆ ಮನೆಯಲ್ಲಿ ವಿರೋಧ. ನಾವಿಬ್ಬರು ಒಂದಾದರೆ ಮನೆಯವರು ಸ್ಮಶಾನ ಸೇರುತ್ತೇವೆ ಎಂಬ ಮಾತಿಗೆ ಬೆಲೆಕೊಟ್ಟು ನಮ್ಮ ಅಮರ ಪ್ರೀತಿಯ ಬಲಿಕೊಟ್ಟೆವು. ಅದು ಯಾರೋ ನಿನ್ನ ಜಾತಿಯ ಸಿರಿವಂತ ಹುಡುಗನ ಕೈ ಹಿಡಿದೆ. ಎಲ್ಲಾ ಪ್ರೇಮಿಗಳಂತೆ ನೀ ಸಿಗದಿದ್ದರೂ ನೀ ಮಾತ್ರ ಚೆನ್ನಾಗಿರಬೇಕೆಂದು ಎಂದೂ ಬೇಡದ ಆ ನಿನ್ನ ದೇವರಲ್ಲಿ ಅನುಕ್ಷಣವು ನಿವೇದಿಸಿಕೊಳ್ಳುತಿದ್ದೆ. ಮತ್ತೆ ಎದುರು ಸಿಕ್ಕಾಗ ಆ ನಿನ್ನ ಮಗುವಿನಂತ ನಗು, ಚೆನ್ನಾಗಿದ್ದಿಯಾ..? ಎನ್ನುವ ಒಂದು ಮಾತಿಗಾಗಿ ಕಾಯುತ್ತಾ ನಿನ್ನ ನೆನಪಲ್ಲೆ ಕ್ಷಣಕ್ಷಣವು ಕಾಲ ಕಳೆಯುತ್ತಿದ್ದೆ ಕೂಸೆ..
ಮುಸ್ಸಂಜೆ ಸೂರ್ಯನ ಜೊತೆಗೆ ನಾವು ಸಾಗಿದ ಸಂಜೆಗಳೆಷ್ಟೋ.. ಸಾಗರ ತೀರದಿ ಕುಳಿತು ಸಾಲು ಸಾಲು ಕವಿತೆ ಹೆಣೆಯುತ್ತಾ ಅಲೆಗಳಿಗೆ ಮೈ ಸೋಕಿಸಿ ನಲಿದ ನಲುಮೆಯ ಕ್ಷಣಗಳೆಷ್ಟೋ.. ನಾವು ಮಿಂದ ಮಳೆಗಳೆಷ್ಟೋ.. ಸವೆಸಿದ ದಾರಿಗಳೆಷ್ಟೋ.. ನನ್ನ ನೀನು, ನಿನ್ನ ನಾನು ನೋಡುವ ಕಾತರಕ್ಕೆ ನಿದ್ದೆಗೆಟ್ಟು ಕಾದ ಮುಂಜಾನೆಗಳೆಷ್ಟೋ.. ಅಲ್ಲವೇ ಕೂಸೆ..? ಎಲ್ಲೆ ಇರದ ಈ ಬದುಕಿನುದ್ದಕ್ಕೂ ನಿನ್ನ ಮುಡಿಗೆ ಮಲ್ಲಿಗೆ ಮುಡಿಸಿ ನಿನ್ನ ಕೈ ಹಿಡಿದು ಬದುಕಿನ ತೀರ ಸೇರುವ ಆಸೆ ಹೊತ್ತ ಈ ಎದೆಯ ಕವಾಟಗಳಿಗೆ ಪ್ರೀತಿಯ ಹೊದಿಕೆ ಹೊದಿಸಿ ಕಳೆದು, ಎಂದೂ ತೀರದ ಆಸೆಯಾಗಿ ಬರಿ ಕನಸಾಗಿ ಹೋದೆಯಲ್ಲ ಕೂಸೆ.. ನೀನಿಲ್ಲದ ಈ ನಿನ್ನ ಕೂಸು ಎಷ್ಟೊಂದು ಬಡವಾಗಿದೆ ಎಂದು ಕಾಣದಾದೆಯಾ..?
ನಿನ್ನ ತುಟಿ ತುಂಬಾ ಇಷ್ಟ ಕಣೋ ಕೂಸೆ ಎನ್ನುತ್ತಿದ್ದವಳು ತುಟಿ ಬಿಚ್ಚಿ ಮಾತಾಡದೇ ಹೋಗಿಬಿಟ್ಟೆ. ನಿನ್ನ ನಗು ತುಂಬಾ ಚಂದ ಕಣೋ ಕೂಸೆ ಎನ್ನುತ್ತಿದ್ದವಳು ನನ್ನ ನಗುವನ್ನು ಮರೆಸಿಬಿಟ್ಟೆ. ನಿನ್ನ ಕಣ್ಣಲ್ಲಿ ಏನೋ ಸೆಳೆತವಿದೆ ಕೂಸೆ, ಯಾವಾಗಲೂ ಆ ಕಣ್ಣನ್ನೆ ನೋಡುತ್ತಾ ಕಾಲ ಕಳೆಯಬೇಕು ಎನ್ನುತ್ತಿದ್ದವಳು, ಕಣ್ಣಿಗೂ ಕಾಣದಾಗಿ ಬಿಟ್ಟೆ. ಈ ಹೃದಯ ಪ್ರತಿ ಭಾರಿ ಬಡಿದಾಗ ಅದು ನಿನ್ನ ಹೆಸರನ್ನೆ ಗುನುಗುತ್ತೆ ಕಣೋ, ಈ ಹೃದಯಕ್ಕೆ ನೀನೆ ಉಸಿರು ಎಂದು ನನ್ನ ಉಸಿರು ಕಟ್ಟುವ ಹಾಗೆ ನಿನ್ನ ನೆನಪಲ್ಲೇ ಕಾಲ ಕಳೆಯುವಂತೆ ಒಂಟಿಯಾಗಿ ಬಂಧಿ ಮಾಡಿ ನಿನ್ನುಸಿರ ತೊರೆದು ಮಾತೆಲ್ಲಾ ಮರೆತು ಮೂಕವಾಗಿ ಮತ್ತೆ ಬಾರದ ಊರಿಗೆ ಹೋದೆಯಲ್ಲಾ, ಸಂಗಾತಿಯಾಗುವ ಕನಸು ಹೊತ್ತು ಸಾವೇ ಇರದ ಪ್ರೀತಿಯ ಮುತ್ತನಾಡಿ ಸಾವಿಗೆ ಸಂಗಾತಿಯಾದೆಯಲ್ಲ… ಹೇಳು ಕೂಸೆ.. ನೀನಿರದೇ ಈ ಜೀವ ಹೇಗೆ ತಾನೇ ಉಸಿರಿಸಿತು..? ನೀನಿರದ ಬದುಕಿನಲ್ಲಿ ಏನಿದೆ..? ಸತ್ತು ಬಿಡಲೇ..?!
ನೀನಿಲ್ಲದೇ ಈ ಹಾಳು ಹೃದಯ ಪಾಳುಬಿದ್ದ ಮನೆಯಾಗಿದೆ ಕಣೇ. ಈ ನೊಂದ ಹೃದಯಕ್ಕೆ ಸಾಂತ್ವಾನ ಹೇಳಲಾಗದು, ಅದಕ್ಕೆ ನೀನೆ ಬೇಕು. ಚಿಗುರೊಡೆದ ಪ್ರೀತಿ ಚಿವುಟಿ ಹಾಕೋ ಮನಸ್ಸಾದರೂ ಹೇಗೆ ಬಂತು ಎಂದು ಆ ನಿನ್ನ ಕಲ್ಲು ದೇವರನ್ನು ನಾನು ಕೇಳಲೇಬೇಕು. ನಿನಗಾಗಿ ಕಾದು ಕಾದು ಸಾಕಾಗಿದೆ ಕೂಸೆ. ಇನ್ನು ಕಾಯಲಾರೆ ನೀನ್ನಲ್ಲಿಗೆ ಬೇಗ ಬಂದು ಸೇರುವೆ…
ಇತಿ ನಿನ್ನ ಪ್ರೀತಿಯ
ನಿನಗಾಗಿ ಕಾ(ಸಾ)ಯುತ್ತಿರುವ
ನಿನ್ನ ಕೂಸು…
-ಮಂಜುನಾಥ ಗುಡ್ಡದವರ
Super mama…
Nijavad premiya manadalad matu gala man kalku vantive,,, good