ಪಂಚ್ ಕಜ್ಜಾಯ

ಹೇಳುವುದಕ್ಕೆ ಕೇಳುವುದಕ್ಕೆ ಇವರಿಗೆ ಹಕ್ಕಿದೆಯೇ?: ಗುರುಪ್ರಸಾದ ಕುರ್ತಕೋಟಿ, ಬೆಂಗಳೂರು

ಕೆಲವು ದಿನಗಳ ಹಿಂದೆ ಒಂದು ಪತ್ರಿಕೆಯಲ್ಲಿ ನಮ್ಮ ಭಾರತದ ಸಮಸ್ಯೆಗಳ ಕುರಿತು, ಎಷ್ಟೋ ವರ್ಷಗಳಿಂದ ಅಮೆರಿಕೆಯಲ್ಲಿ ನೆಲೆಸಿರುವ ಒಬ್ಬರು ಬರೆದ “ಹೇಳುವವರು ಕೇಳುವವರು ಇಲ್ಲದ ದೇಶ” ಎಂಬ ಲೇಖನ ಓದಿದೆ. ಭಾರತದ ಬಗೆಗಿನ ಅವರ ಹೊರನೋಟ ಅದಾಗಿತ್ತು. ಅವರು ಇಲ್ಲಿಗೆ ಕೆಲ ದಿನಗಳ ಮಟ್ಟಿಗೆ ಬಂದಾಗ ಆದ ಕಟು ಅನುಭವಗಳ ಕುರಿತು ಪ್ರಸ್ತಾಪಿಸಿದ್ದರು. ಟ್ಯಾಕ್ಸಿಯ ಡ್ಯಾಶ್ ಬೋರ್ಡ್ ಅಲ್ಲಿ ಇಲಿ ಬಂತಂತೆ… ಯಾವ್ದೂ ಸಿಸ್ಟಮ್ ಕೆಲಸ ಮಾಡಲ್ವಂತೆ… ಇಲ್ಲಿನ ಜನ ಏನು ಮಾಡಿದರೂ ಸುಮ್ಮನಿರುತ್ತಾರಂತೆ… ಹಾಗೆ ಹೀಗೆ, ನೂರಾರು ಕಂಪ್ಲೇಂಟ್ ಗಳು …

ಓದಿದ ಮೇಲೆ ಬೇಸರದ ಜೊತೆಗೆ ಆಶ್ಚರ್ಯವೂ ಆಯಿತು! ಅದೇ ಕಾರಣಕ್ಕೆ ಪ್ರತಿಕ್ರಿಯಿಸಲೇ ಬೇಕು ಅನಿಸಿತು. ನನ್ನ ಈ ಪ್ರತಿಕ್ರಿಯೆಯನ್ನು ಅಮೆರಿಕೆಯ ಬಗೆಗಿನ ನನ್ನ ಒಳನೋಟ ಅನ್ನಬಹುದೇನೋ! ಯಾಕೆಂದರೆ ಅಮೇರಿಕಾದ ಜನ ಜೀವನವನ್ನು ಅವರಷ್ಟಲ್ಲದಿದ್ದರೂ ಅಷ್ಟಿಷ್ಟು ನಾನೂ ಕಂಡಿದ್ದೇನೆ. ಹಾಗಂತ ನಮ್ಮಲ್ಲಿರುವ ಸಮಸ್ಯೆಗಳನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ನಾವು ಭಾರತೀಯರು ಇನ್ನೂ ತುಂಬಾ ತುಂಬಾ ಸುಧಾರಿಸಬೇಕಿದೆ ಎಂಬುದನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತಲೇ ಈ ಲೇಖನ ಬರೆಯುವ ಸಾಹಸ ಮಾಡುತ್ತಿದ್ದೇನೆ…

ಅಮೆರಿಕೆಗೆ ಹೋದ ಹೊಸತರಲ್ಲಿ ನಾನು ಟ್ಯಾಕ್ಸಿಗಳ ಮೇಲೆ ಅವಲಂಬಿತನಾಗಿದ್ದೆ. ಯಾಕೆಂದರೆ ನನ್ನ ಬಳಿ ಆಗಿನ್ನೂ ಕಾರ್ ಇರಲಿಲ್ಲ. ಅಲ್ಲಿ ಕಾರಿಲ್ಲವೆಂದರೆ ಕಾಲಿಲ್ಲದಂತೆಯೇ ಸೈ. ಸಾರ್ವಜನಿಕ ಸಾರಿಗೆ ಅಷ್ಟು ಅನುಕೂಲಕರವಾಗಿಲ್ಲ. ದೊಡ್ಡ ದೊಡ್ಡ ಶಹರಗಳಲ್ಲಿ ತಕ್ಕ ಮಟ್ಟಿಗೆ ಇರುತ್ತಾದರೂ ಕಾರಿನ ಮೇಲಿನ ಅವಲಂಬನೆ ಅಲ್ಲಿ ತುಸು ಜಾಸ್ತಿನೆ. ಕೊಳಕು ಪೋಷಾಕು ಧರಿಸಿ, ಗಡ್ಡಧಾರಿಯಾಗಿ, ವಿಚಿತ್ರವಾಗಿ ಕಾಣುತ್ತಿದ್ದ ಡ್ರೈವರ್ ಒಬ್ಬ ಆಗಾಗ ನನ್ನನು ಪಿಕಪ್ ಮಾಡಲು ಬರುತ್ತಿದ್ದ. ಬಹುಶಃ ಗಿರಾಕಿ ಇಲ್ಲದೆ ಗಿರಕಿ ಹೊಡೆಯುವ ಸಮಯದಲ್ಲಿ ಕಾರಿನಲ್ಲಿ ಕುಳಿತೆ ಸಿಗರೇಟು ಸೇದುತ್ತಿದ್ದ ಅನಿಸುತ್ತೆ. ಒಟ್ಟಿನಲ್ಲಿ ಒಂಥರಾ ಗಬ್ಬು ವಾಸನೆ ಕಾರಲ್ಲೆಲ್ಲ ಹರಡಿರುತ್ತಿತ್ತು. ಆ ನಾತವನ್ನು ಸಹಿಸದೆ ಒದ್ದಾಡುತ್ತಿದ್ದೆ. ಟ್ಯಾಕ್ಸಿ ಬುಕ್ ಮಾಡುವಾಗಲೆಲ್ಲ ಆ ಡ್ರೈವರ್ ಮಾತ್ರ ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೆ. ಹಾಗಂತ ಅಲ್ಲಿನ ಎಲ್ಲಾ ಡ್ರೈವರುಗಳೂ ಹಾಗಿರಲಿಲ್ಲ ಬಿಡಿ. ಅದೇ ತರಹ ಇವರಿಗೆ ಅನುಭವವಾದಂತೆ ಭಾರತದ ಎಲ್ಲಾ ಟ್ಯಾಕ್ಸಿಗಳ ಡ್ಯಾಶ್ ಬೋರ್ಡ್ ನಿಂದ ಇಲಿಗಳು ಜಿಗಿಯೋಲ್ಲ! ಪಾಪ ಅವತ್ತು ಅವರ ಅದೃಷ್ಟ ಸರಿ ಇರಲಿಲ್ಲ ಅಥವಾ ಅದರ ಅದೃಷ್ಟ ಚೆನ್ನಾಗಿರಲಿಲ್ಲ ಅಷ್ಟೇ.

ಅಧಾರ ಸಂಖೆಯಿಲ್ಲದೆ ಸಾಫ್ಟ್ವೇರ್ ಕೆಲಸ ಮಾಡೋಲ್ಲ ಅಂತ ಇಲ್ಲಿನ ಬ್ಯಾಂಕ್ ನವರು ಹೇಳಿದರು ಅಂತ ಬರೆದಿದ್ದಾರೆ. ಅಮೆರಿಕೆಯಲ್ಲೂ ಕೂಡ ಕಂಪ್ಯೂಟರೇ ದೈವ. ಅದು ಏನಾದರೂ ಬೇಕು ಅಂದರೆ ಕೊಡಬೇಕು ಅಷ್ಟೇ! ಇಲ್ಲಿಗಿಂತ ಕಂಪ್ಯೂಟರ್ ಮೇಲಿನ ಅವಲಂಬನೆ ಅಲ್ಲಿ ಜಾಸ್ತಿ. ಇಲ್ಲಿ ಅಧಾರ ಇದ್ದಂತೆ ಅಮೆರಿಕೆಯಲ್ಲಿ ಎಲ್ಲದಕ್ಕೂ SSN (Social Security Number) ಕೇಳುತ್ತಾರೆ. ಹೋದ ಹೊಸದರಲ್ಲಿ ನನ್ನ ಬಳಿ ಆ ನಂಬರ್ ಇಲ್ಲ ಅಂದಾಗ ಅಲ್ಲಿನ ಒಬ್ಬ ಸರಕಾರೀ ಅಧಿಕಾರಿ ಅದು ಬೇಕೇ ಬೇಕು ನಮ್ಮ ಸಾಫ್ಟ್ವೇರ್ ಕೇಳುತ್ತೆ ಅಂತಲೇ ಹೇಳಿದ್ದ. ಅದಕ್ಕಾಗಿ ಅಲ್ಲಿಲ್ಲಿ ಎಡತಾಕಿದ್ದು ಇದೆ.

ಅಮೆರಿಕೆಯವರೂ ಕೊಡ ಮೊಟ್ಟ ಮೊದಲ ಬಾರಿಗೆ SSN ಅಳವಡಿಸಿಕೊಂಡಾಗಲೂ ಸಮಸ್ಯೆಗಳು ಆಗಿರಲೇಬೇಕು. ಬಹುಶಃ ಇಲ್ಲಿಗಿಂತ ಕಡಿಮೆ ಆಗಿರಬಹುದು ಯಾಕೆಂದರೆ ಅಲ್ಲಿ ಜನಸಂಖ್ಯೆ ಕಡಿಮೆ ಇದೆ. ಜನಸಂಖ್ಯೆ ಜಾಸ್ತಿ ಇದ್ದಾಗ ದೂರದೃಷ್ಟಿ ಎಷ್ಟಿದ್ದರೂ ಸಾಲದು. ಅಧಾರ ಅವಳವಡಿಕೆ ವಿಷಯದಲ್ಲಿ ನಮ್ಮ ದೇಶದಲ್ಲಿ ಆಗುತ್ತಿರುವುದು ಅದೇ. ಅಂದಹಾಗೆ ಜನಸಂಖೆಯ ಬಗ್ಗೆ ಹೇಳುವಾಗ ನೆನಪಾಯ್ತು. ಒಂದು ಸಲ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಆ ಜನದಟ್ಟಣೆಯ ರಸ್ತೆಯಲ್ಲಿ ಕಾರ್ ಓಡಿಸುವಾಗ ಮಲ್ಲೇಶ್ವರದಲ್ಲಿ ಓಡಿಸಿದ ಅನುಭವ ಆಗಿ ಪುಳಕಿತನಾದೆ! ಇಲ್ಲಾದರೂ ನಮ್ಮ ಜನ ರೂಲ್ಸ್ ಅನುಸರಿಸುತ್ತಾರೆ. ಅಲ್ಲಿ ರೆಡ್ ಸಿಗ್ನಲ್ ಬಿದ್ದಾಗಲೂ ಗಾಡಿ ಓಡಿಸಿಕೊಂಡು ಹೋಗುತ್ತಿದ್ದರು. ಲೇನ್ ಯಾವನೂ ಫಾಲೋ ಮಾಡುತ್ತಿರಲಿಲ್ಲ. ಆದಷ್ಟು ಬೇಗ ಮುಂದೆ ತೂರಿಕೊಳ್ಳುವುದೇ ಅವರ ಧ್ಯೇಯ. ಹಾಗೆ ಮಾಡಿದವರು ಅಲ್ಲಿಯವರೆ, ಭಾರತೀಯರಲ್ಲ! ಆಮೇಲೆ ಪಾರ್ಕಿಂಗಿಗೆ ಜಾಗ ಸಿಗದೇ ಒದ್ದಾಡಿದೆವು.

ಇನ್ನೊಂದು ಸಲ ನಯಾಗರ ನೋಡಲು ಹೋಗುವಾಗ ಮಧ್ಯದಲ್ಲಿ ಒಂದು ಹೋಟೆಲಗೆ ಹೋದೆವು. ಅಲ್ಲಿ ಜನ ಕಿಕ್ಕಿರಿದು ತುಂಬಿರುತ್ತಾರೆ. ಅಲ್ಲಿನ ಟಾಯ್ಲೆಟ್ ಬಳಸಲು ಹೋದಾಗ ಒಳಗೆ ದುರ್ಗಂಧ ಎಷ್ಟಿತ್ತು ಅಂದ್ರೆ ನಮ್ಮ ಬಸ್ ಸ್ಟಾಂಡ್ ನ ಪಬ್ಲಿಕ ಟಾಯ್ಲೆಟ್ ನೆನಪಾಯ್ತು… ನಾ ಹೇಳೋದು ಇಷ್ಟೇ. ಯಾವುದೇ ದೇಶವಿದ್ದರೂ ಜನಸಂಖೆ ಜಾಸ್ತಿ ಇದ್ದಾಗ ಎಷ್ಟು ವ್ಯವಸ್ಥೆ ಮಾಡಿದರೂ ಕಡಿಮೆಯೇ.

ನಾನಲ್ಲಿದ್ದಾಗ ಆದ ಇನ್ನೂ ಕೆಲವು ಅನುಭವಗಳನ್ನು ಹಂಚಿಕೊಳ್ಳಬೇಕೆನಿಸುತ್ತದೆ. ಅಲ್ಲಿ ತುಂಬಾ ವರ್ಷಗಳಿಂದ ನೆಲೆಸಿರುವ ಕೆಲವು ಭಾರತೀಯರು ನಮ್ಮ ದೇಶವನ್ನು ಹೊಸ ತಂತ್ರಜ್ಞಾನದ ಅರಿವಿಲ್ಲದ ದೇಶ ಅಂತ ತಿಳಿದಿದ್ದಾರೆ ಎನಿಸುತ್ತದೆ. ಒಂಬತ್ತು ವರ್ಷದಿಂದ ತನ್ನ ದೇಶವನ್ನು ಭೇಟಿ ಕೂಡ ಮಾಡದ ಒಬ್ಬರು ಭಾರತೀಯ(?) ಗೆಳೆಯ ಇಂಡಿಯಾದಲ್ಲಿ 4G internet ಇದೆಯೇ ಎಂಬ ಮೂರ್ಖತನದ ಪ್ರಶ್ನೆ ಕೇಳಿದ್ದರು! ಅವರು ಹೇಳುವ ಸಿನಿಮಾ ಹೆಸರುಗಳು ಕೂಡ ಮಾಲಾಶ್ರಿ ಕಾಲದವು. ಅಷ್ಟು outadated ಆದ, ಭಾರತದ ಬಗ್ಗೆ ಕನಿಷ್ಠ ಜ್ಞಾನ ಹೊಂದಿರುವ ಅವರಿಗೆ ಏನಂತ ಹೇಳುವುದು?

ಇನ್ನೊಂದು ಸಲ, ಅಮೆರಿಕೆಯ ನಾಗರಿಕರಾಗಿರುವ ಗೆಳೆಯನ ಹೆಂಡತಿಯೊಬ್ಬರು “ಅಯ್ಯೋ ಬೆಂಗಳೂರಿನಲ್ಲಿ ಹೆಣ್ಣು ಮಕ್ಕಳು ಒಬ್ಬೊಬ್ರೆ ಹೇಗಪ್ಪ ಅಡ್ಡಾಡ್ತಾರೆ. ಅಲ್ಲಿ ತುಂಬಾ insecure feel ಆಗುತ್ತೆ” ಅಂತ ಅಂದಿದ್ದರು. ಅಂದರೆ ಇವರ ಭಾವನೆಯಲ್ಲಿ ಭಾರತ ಏನೂ ಸುರಕ್ಷಿತವಲ್ಲ. ಹೆಣ್ಣು ಮಕ್ಕಳಂತೂ ಬೀದಿಯ ಹೊರಗೆ ಬರದಿರುವಂತಹ ಪರಿಸ್ಥಿತಿ! ನಾನು ಹೇಳಿದೆ “ತಾಯಿ ನಮ್ಮ ದೇಶ ನೀವು ಅಂದುಕೊಂಡಷ್ಟು ಕೆಟ್ಟದಾಗೇನಿಲ್ಲ. ನಮ್ಮ ಮನೆಯ ಹೆಣ್ಣು ಮಕ್ಕಳು ಆರಾಮವಾಗಿ ಬೀದಿಯಲ್ಲಿ ಅಡ್ಡಾಡುತ್ತಾರೆ. ನಿಮ್ಮ ಅಮೆರಿಕೆಯ ಬೀದಿಯಲ್ಲಿ ಎಷ್ಟೋ ಸಲ ತಲೆತಿರುಕರು ಎರ್ರಾ ಬಿರ್ರಿ ಗುಂಡು ಹಾರಿಸುವುದ ನೋಡಿದಾಗ ನಮ್ಮ ದೇಶ ಎಷ್ಟೋ ಸುರಕ್ಷಿತ ಅನಿಸುತ್ತದೆ” ಅಂದಾಗ ಅವಳಿಗೆ ಕೋಪ ಬಂದಿತ್ತು. ಅಮೆರಿಕನ್ನರಲ್ಲಿ ಬಹುತೇಕರು ಕೂಪ ಮಂಡೂಕಗಳು. ಅವರಿಗೆ ತಮ್ಮ ದೇಶ ಬಿಟ್ಟರೆ ಬೇರೆ ಜಗತ್ತೇ ಇಲ್ಲ. ಅವರಂತೆಯೇ ನಮ್ಮ ಕೆಲವು ದೇಸಿಗಳು ಕೂಡ ಆಗಿದ್ದಾರೆ.

ಕಠಿಣ ಕಾನೂನು ಇದ್ದಾಗ್ಯೂ ಅಲ್ಲಿ ವರ್ಣಭೇದ ತುಂಬಾ ಇದೆ. ಅವರು ಭಾರತೀಯರನ್ನು ಕಾಣುವ ರೀತಿ ನೋಡಿ ನನಗಲ್ಲಿ ತುಂಬಾ ಕಿರಿಕಿರಿ ಆಗುತ್ತಿತ್ತು. ಶಾಲೆಯಲ್ಲಿ ನನ್ನ ಮಗಳಿಗೆ ಅವಳ ಪ್ರಿನ್ಸಿಪಾಲಳೆ ವರ್ಣಭೇದ ಮಾಡುತ್ತಿದ್ದಳು. ಅಲ್ಲಿನ ಸಮಸ್ಯೆಗಳು ಒಂದೇ ಎರಡೇ? ಡಾಕ್ಟರ ಹಾಗೂ ಇನ್ಸೂರೆನ್ಸ್ ಕಂಪನಿಗಳ ಮಾಫಿಯಾ ಕಂಡು ಬೆಚ್ಚಿ ಬಿದ್ದಿದ್ದೇನೆ. ಅಲ್ಲಿನ ಡಾಕ್ಟರ ಒಬ್ಬರ ನಿರ್ಲಕ್ಷದಿಂದ ಗೆಳೆಯನೊಬ್ಬನ ಹೆಂಡತಿಗೆ ಗರ್ಭಪಾತವಾಯಿತು. ಯಾಕೆಂದರೆ ಅಲ್ಲಿನ ವೈದ್ಯರುಗಳು procedure ಪ್ರಕಾರ ಕೆಲಸ ಮಾಡುವವರು. ಅಲ್ಲಿ ವಯಸ್ಸಾದವರ ಏಕಾಂಗಿತನವನ್ನು ನೋಡಿ ಮರುಗಿದ್ದೇನೆ. ನನ್ನ ಮಗಳಿಗೆ ಸ್ವಿಮ್ಮಿಂಗ್ ಹೇಳಿಕೊಡುತ್ತಿದ್ದ ಹೆಣ್ಣುಮಗಳು ಕೆಲಸ ಕಳೆದುಕೊಂಡು ತನ್ನ ಜೀವನ ನಿರ್ವಹಣೆಗೆ ಎಲ್ಲರಿಂದ ಹಣ ಸಂಗ್ರಹಿಸುವುದ ನೋಡಿ ಆಶ್ಚರ್ಯಪಟ್ಟಿದ್ದೇನೆ. ಅಲ್ಲಿಯೂ ನದಿಗಳು ವರ್ಷಗಳಿಂದ ತಮ್ಮೊಳಗೆ ಬೆರೆತು ಹರಿದ ರಾಸಾಯನಿಕಗಳ ದೆಸೆಯಿಂದ ಬೆಂಕಿ ಹತ್ತಿಸಿಕೊಂಡಿವೆ, ಅಲ್ಲಿನ ಕುಡಿಯುವ ನೀರಿನ ಪೈಪುಗಳಲ್ಲಿ ಪಾದರಸದ ಮಟ್ಟ ಏರಿದೆ. ಎಲ್ಲರೂ ಸೋಲಾರ್ ವಿದ್ಯುತ್ ಅಳವಡಿಸಿಕೊಂಡುಬಿಟ್ಟರೆ ಪೆಟ್ರೋಲ್ ಬೆಲೆ ಕುಸಿಯುತ್ತೆ ಅಂತ powerful ಕಂಪನಿಗಳು ಅಲ್ಲಿಯೂ ಲಾಬಿ ಮಾಡುತ್ತವೆ. ಇದನ್ನೆಲ್ಲಾ ನೋಡಿಕೊಂಡು ಅಲ್ಲಿಯ ಜನರೂ ಸುಮ್ಮನಿದ್ದಾರೆ! ಬರೆಯುತ್ತ ಹೋದರೆ ಮುಗಿಯದ ಕತೆ…

…ಒಟ್ಟಿನಲ್ಲಿ ಸಮಸ್ಯೆಗಳು ಎಲ್ಲ ದೇಶಗಳಲ್ಲೂ ಇರುತ್ತವೆ. ಸ್ವರೂಪಗಳು ಭಿನ್ನವಾಗಿರಬಹುದು ಅಷ್ಟೇ. ಇಲ್ಲಿಗಿಂತ ದೊಡ್ಡದಾದ, ಮಾನಸಿಕ ನೆಮ್ಮದಿಯನ್ನೇ ಹಾಳುಗೆಡಿಸುವ ಸಮಸ್ಯೆಗಳು ಅಲ್ಲಿ ಸಾಕಷ್ಟಿವೆ. ಹಾಗಂತ ಇಲ್ಲಿನ ನಮ್ಮ ಸಮಸ್ಯೆಗಳೊಂದಿಗೆ ಬದುಕಬೇಕು ಅಂತ ನಾನು ಹೇಳುತ್ತಿಲ್ಲ. ಅವುಗಳಿವೆ ಅಂತ ಎಲ್ಲರಿಗೂ ಗೊತ್ತು. ಎಲ್ಲರೂ ಹೇಳೋವ್ರೆ ಆದ್ರೆ ಅದರ ಪರಿಹಾರ ಮಾಡೋವ್ರು ಯಾರು? ಅದಕ್ಕೆ ಮೂರು ದಾರಿಗಳಿವೆ. ಒಂದು: ಅದನ್ನು ನಾವೇ ಖುದ್ದಾಗಿಯೋ ಇಲ್ಲ ಸಂಬಂಧಪಟ್ಟವರ ಗಮನಕ್ಕೆ ತಂದು ಬಗೆಹರಿಸುವುದು. ಎರಡು: ಅದರಲ್ಲೊಂದಾಗಿ ಸುಮ್ಮನಿರೋದು. ಮೂರು: ಆ ಸಮಸ್ಯೆಗಳಿಂದ ಓಡಿ ಹೋಗೋದು. ವಿದೇಶಕ್ಕೆ ಹೋಗಿ ನೆಲೆಸಿರುವ ಎಷ್ಟೋ ಭಾರತೀಯರನ್ನು ಗಮನಿಸಿದಾಗ ಸಮಸ್ಯೆಗೆ ಹೆದರಿ ಓಡಿ ಹೋದವರೇ ಅಧಿಕ ಅಂತ ನನ್ನ ಭಾವನೆ. ಅಲ್ಲಿದ್ದ ಎಷ್ಟೋ NRI ಗಳನ್ನು ಕೇಳಿದಾಗ ಭಾರತದಲ್ಲಿ quality of life ಇಲ್ಲ ಎಂಬ ಅವರ ಮಾತು ಕೇಳಿ ತುಂಬಾ ಸಂಕಟ ಅನುಭವಿಸಿರುವೆ. ಹೀಗೆ ಹೇಳಿಕೊಂಡು ದೇಶ ಬಿಟ್ಟು ಹೋಗುವುದು ಕೂಡ ಒಂದು ರೀತಿಯಲ್ಲಿ ಸಮಸ್ಯೆಗಳನ್ನು ನೋಡಿ ಕಣ್ಣು ಮುಚ್ಚಿಕೊಂಡಂತೆಯೇ ಅಲ್ಲವೇ? ನಾವು ಆ ವ್ಯವಸ್ಥೆಯಲ್ಲಿ ಇಲ್ಲ ಅಂದ ಮೇಲೆ ಅದರ ಬಗ್ಗೆ ಮಾತನಾಡುವ ಹಕ್ಕೂ ನಮಗಿರುವುದಿಲ್ಲ. ಇದು ದೇಶ ಬಿಟ್ಟು ಅಲ್ಲಿದ್ದ ನನಗೂ ಅನ್ವಯಿಸಿತ್ತು, ಹಾಗೆ ಬಿಟ್ಟು ಹೋದ ಎಲ್ಲರಿಗೂ ಅನ್ವಯಿಸುತ್ತದೆ! ಹೇಳುವವರು ಕೇಳುವವರು ಎಲ್ಲಾ ಅಲ್ಲಿ ಹೋಗಿ ಕೂತರೆ ನಮ್ಮ ದೇಶ ಉದ್ಧಾರ ಮಾಡೋರು ಯಾರು? ಹಾಗೆ ಹೋದವರಿಗೆ ನಾನು ಹೇಳೋದಿಷ್ಟೇ… ಇಲ್ಲಿ ತುಂಬಾ ಸಮಸ್ಯೆಗಳು ಇವೆ, ಅವು ನಮ್ಮವೇ! ಬನ್ನಿ ನಮ್ಮ ದೇಶವನ್ನು ಕಟ್ಟೋಣ. ಅಲ್ಲಿ ನೀವು ಕಂಡು ಅನುಭವಿಸಿದ ಒಳ್ಳೆಯದನ್ನು ಇಲ್ಲೂ ಅಳವಡಿಸುವ ಪ್ರಯತ್ನ ಮಾಡೋಣ. ನಿಮ್ಮ ನಿರೀಕ್ಷೆಗೆ ತಕ್ಕಂತೆ ನಮ್ಮ ದೇಶವನ್ನು ಬೆಳೆಸೋಣ. ಹಾಗಿದ್ದರೆ ಬನ್ನಿ …. ಇಲ್ಲವೆ ಸುಮ್ಮನಿರಿ!

ಗುರುಪ್ರಸಾದ ಕುರ್ತಕೋಟಿ, ಬೆಂಗಳೂರು


 

ಕನ್ನಡದ ಬರಹಗಳನ್ನು ಹಂಚಿ ಹರಡಿ

7 thoughts on “ಹೇಳುವುದಕ್ಕೆ ಕೇಳುವುದಕ್ಕೆ ಇವರಿಗೆ ಹಕ್ಕಿದೆಯೇ?: ಗುರುಪ್ರಸಾದ ಕುರ್ತಕೋಟಿ, ಬೆಂಗಳೂರು

  1. ಬಹಳ ದಿನಗಳ ನಂತರ ಪಂಜು ಪತ್ರಿಕೆ ಓದಿದೆ. ಗುರುಪ್ರಸಾದ ಕುರ್ತಕೋಟಿಯವರ ಈ ಪ್ರತಿಕ್ರಿಯೆ ನೋಡಿ ತುಂಬಾ ಖುಷಿ ಕೊಟ್ಟಿತು.ನಾನು ಕೂಡ ಒಬ್ಬ ಅನಿವಾಸಿ ಭಾರತೀಯ ಆದ್ದರಿಂದ ಕುರ್ತಕೋಟಿಯವರು ಬರೆದದ್ದು ಸರಿಯೆನಿಸಿತು. ನಾನು ಮಾತ್ರ ವರ್ಷದಲ್ಲಿ ಒಂದೆರಡು ಬಾರಿ ಊರಿಗೆ ಬರುವವ. ಕಾನೂನುಬದ್ಧ ದಾಖಲೆ ಪತ್ರ ಊರಿಗೆ ಬಂದಾಗ ಮಾಡಿ ಮನೆಯಲ್ಲಿ ಇಟ್ಟು ಬರುತ್ತೇನೆ. ನಾನಿರುವುದು ದುಬೈ ನಲ್ಲಿ. ಇಲ್ಲಿ ಕೂಡಾ ಎಮಿರೇಟ್ಸ್ ಐಡಿ ಯಾವುದೇ ಕೆಲಸಕ್ಕೆ ಬೇಕೇ ಬೇಕು. ಇದು ಕೂಡಾ ಆಧಾರ್ ನಂತೆ ಬಯೋ ಮೆಟ್ರಿಕ್ ಕಾರ್ಡು.ಈ ಕಾರ್ಡು ಇಲ್ಲದೆ ಇಲ್ಲಿ ಯಾವುದೇ ಕೆಲಸ ಆಗುದಿಲ್ಲ. ಇದು ಸದಾ ತಮ್ಮೊಡನೆ ಇಟ್ಟುಕೊಳ್ಳಬೇಕು. ದಾರಿಯಲ್ಲಿ ಪೊಲೀಸರು ರಸ್ತೆ ದಾಟುವಾಗ ಹಿಡಿದರೂ ಈ ಕಾರ್ಡು ತೋರಿಸ ಬೇಕು. ನಮ್ಮ ದೇಶದಲ್ಲಿ ಇಸ್ಟೊಂದು ಖಡಕ್ ಕಾನೂನು ಇಲ್ಲ. ಎಲ್ಲಾ ದೇಶಗಳಲ್ಲಿಯೂ ಒಂದಲ್ಲಾ ಒಂದು ರೀತಿಯ ಸಮಸ್ಯೆ ಎದುರಿಸ ಬೇಕಾಗುತ್ತದೆ.ಆದ್ದರಿಂದ ನಾವು ದೇಶದ ಕಾನೂನಿನ ಬಗ್ಗೆ ಗೌರವ ತೋರಿ ಕಾನೂನಿಗೆ ಬೇಕಾಗುವ ರೀತಿಯ ದಾಖಲೆ ಪತ್ರ ಪಡೆದುಕೊಂಡು ಕಾನೂನು ಹಾಗೂ ದೇಶಕ್ಕೆ ಗೌರವ ತೋರಬೇಕಾಗುತ್ತದೆ.ನಮ್ಮ ದೇಶದ ಏರ್ಪೋರ್ಟ್ ಗಳಲ್ಲಿ ಕನಿಷ್ಠ ಪಕ್ಷ ಸೊಂಟದಲ್ಲಿ ನೆವಾಳ (ಬೆಳ್ಳಿ ದಾರ) ಇದೆ ಎಂದು ಹೇಳಿದರೆ ಅಧಿಕಾರಿಗಳು ಬಿಟ್ಟು ಬಿಡುತ್ತಾರೆ. ಆದರೆ ಇತರ ದೇಶಗಳಲ್ಲಿ ಪ್ಯಾಂಟು ಜಾರಿಸಿ ಸೊಂಟದ ಬೆಳ್ಳಿ ದಾರ ತೋರಿಸದೆ ಕಸ್ಟಮ್ ನಿಂದ ಮುಂದೆ ಹೋಗಲು ಸಾದ್ಯವಿಲ್ಲ. ಹಾಗಾಗಿ ಭಾರತ ಒಂದು ಶ್ರೇಷ್ಠ ದೇಶ.

    1. ಓದಿ ಇಷ್ಟು ಚೆಂದದ ಪ್ರತಿಕ್ರಿಯೆ ಬರೆದದ್ದಕ್ಕೆ ಧನ್ಯವಾದಗಳು ಶ್ರಿನಿವಾಸ! ಹೊರಗೆ ಹೋದಾಗ ನಮ್ಮ ದೇಶ ಎಷ್ಟು ಅದ್ಭುತ ಎಷ್ಟೊಂದು ಸುರಕ್ಷಿತ ಅಂತ ಮನದಟ್ಟಾಗುತ್ತೆ. ಆದರೆ ಇನ್ನೂ ಕೆಲವರಿಗೆ ಅದರ ಅರಿವಾಗುವುದೇ ಇಲ್ಲವೆ ಅಥವಾ ಆದರೂ ಆದಂತೆ ಇರುವರೆ … ಗೊತ್ತಿಲ್ಲ!

  2. ನಿಜ ದೋಸ್ತ್, ನಿಮ್ಮ‌ ಬರಹ ಹಿಡಿಸಿತು.ಬಹಳ ದಿನದ ನಂತರ ಬರೆದದ್ದು ಖುಷಿ…..ನಾನೂ ಇಣುಕಬೇಕಿದೆ…ಮತ್ತೆ

    1. ಧನ್ಯವಾದಗಳು ಗೆಳೆಯ! ಪಂಜುನಲ್ಲಿ‌ ನಿಮ್ಮ ಬರಹಗಳು ಮತ್ತೆ ಮುಂದುವರಿಯಲಿ ಎಂಬ ಹಾರೈಕೆ ನನ್ನದು.

  3. I totally agree with you Guru. Problems are everywhere, it’s just how much we think and care about them. Well written.

    1. ಬರಹವನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು ಮಂಜುನಾಥ!

Leave a Reply

Your email address will not be published. Required fields are marked *