ಹೇಳಿ ಹೋಗು ಕಾರಣ: ಭಾರ್ಗವಿ ಜೋಶಿ

ನಾ ಓದಿದ್ದ ಕೆಲವೇ ಕೆಲವು ಕಾದಂಬರಿಗಳಲ್ಲಿ ತೀರಾ ಕಾಡಿ, ಅಳಿಸಿದ ಕಾದಂಬರಿ ಇದು. ಹಿಂದೆ ಒಮ್ಮೆ ಆವರಣ ಓದಿದಾಗ ವಿಚಿತ್ರ ಆವೇಶ, ಉದ್ವೇಗ. ಆದರೆ ಇದರ ಭಾವವೇ ಬೇರೆ. ಪ್ರೀತಿ ಪ್ರೀತಿ. ಹಿಮೂನ ಪ್ರೀತಿ ಉಕ್ಕಿ ಹರಿಯುತ್ತದೆ. ಹಿಮೂ ಎಂಬ ಪ್ರಾರ್ಥನಾ ಳ ದೇವರು, ತಂದೆಯಂತೆ ಅವಳಿಗೆ ಹೊಸ ಜೀವನ ಕೊಟ್ಟು ಶಿವಮೊಗ್ಗ ಕೇ ಕರೆದು ತರುತ್ತಾನೆ. ಸೋದರನಂತೆ ಯಾವತ್ತು ಅವಳ ಆರೈಕೆ ಮಾಡುತ್ತಾನೆ. ಗೆಳೆಯನಂತೆ ಅವಳ ಕನಸಿಗೆ ಬಣ್ಣ ತುಂಬುತ್ತಾನೆ, ಗುರುವಿನಂತೆ ದಾರಿ ತೋರುತ್ತಾನೆ. ಪ್ರಿಯಕರನಂತೆ ಬೆಚ್ಚಗಿನ ಅಪ್ಪುಗೆ ಪತಿಯಂತೆ ಅರ್ಪಣೆ ಬಯಸಿದ ಅವಳಿಗೆ ಅದನ್ನು ಒದಗಿಸಲು ನಿರಾಕರಿಸುವುದಿಲ್ಲ ಆದರೆ ಅವಸರ ಬೇಡವೆಂದು ದೂರ ನಿಲ್ಲುತ್ತಾನೆ.

ಹೆಣ್ಣು ಚಂಚಲೆ, ಹಾಗೆ ಅವಳು ಅತೀ ಗಟ್ಟಿಗಿತ್ತಿಯು ಕೂಡ. ಬೇಡವಾದ ವಿಷಯಗಳನ್ನು ಶೀಘ್ರವಾಗಿಯೇ ಬದಲಿಸಬಲ್ಲ ಚಂಚಲೆ, ಬೇಕಾದದ್ದನ್ನು ಜತನದಿಂದ ಕಾಪಾಡಿಕೊಳ್ಳಬಲ್ಲ ಗಟ್ಟಿಗಿತ್ತಿ. ವಯೋ ಸಹಜ ಭಾವನೆಗಳು, ಆತುರ, ಆಕರ್ಷಣೆ ಗಳು ಪ್ರಾರ್ಥನಾ ಳನ್ನು ವಶ ಮಾಡಿಕೊಳ್ಳುವುದರಲ್ಲಿ ಗೆದ್ದವು. ಪ್ರಾರ್ಥನಾ ಅವುಗಳಿಗೆ ಸೋತು ದೇಬ್ ಎಂಬ ಆಕರ್ಷಣೆಯೊಳಗೆ ಬಂಧಿಯಾಗುತ್ತಾಳೆ. ಇದರ ಮಧ್ಯ ಬರುವ ಊರ್ಮಿಳಾ ಪಾತ್ರ ಕೊನೆಯವರೆಗೂ ತನ್ನ ಸ್ಥಾನ ಭದ್ರವಾಗಿ ಇಟ್ಟುಕೊಂಡು ಸಾಗುತ್ತದೆ. ಬದುಕಿನಲ್ಲಿ ಮೋಸಹೋಗಿ ಎಲ್ಲ ರೀತಿ hopes ಗಳನ್ನು ಕಳೆದುಕೊಂಡು, ಗಂಡು ಜೀವಿಗಳನ್ನು ಕ್ಷುಲಕವಾಗಿ ಕಂಡು ಸ್ವೇಚ್ಛೆ ಇಂದ ಬದುಕಲು ಹವಣಿಸುತ್ತಿದ್ದ ಊರ್ಮಿಳಾ ಗೆ ಹಿಮವಂತ ನಂತಹ ವ್ಯಕ್ತಿ ಪರಿಚಯ ವಾದದ್ದು ಅವಳ ಬದುಕಿನ ದೊಡ್ಡ ತಿರುವಾಗಿ ಬಿಡುತ್ತದೆ. ಒಂದು ಕ್ಷಣಕ್ಕೆ ಅವನ ಸ್ವಚ್ಛ ಮನಸಿನಲ್ಲಿ ಬೃಹದಾಕಾರವಾಗಿ ಬೆಳೆದು ನಿಂತ ಸ್ವಾಮಿ ವಿವೇಕಾನಂದರು ಕಾಣಿಸುತ್ತಾರೆ. ಇಂತಹ ಗಂಡಸನ್ನು ಪ್ರೀತಿಸದೆ ಗೌರವಿಸದೆ ಇರಲು ಸಾಧ್ಯವೇ ಎನ್ನುವಷ್ಟು ಅವಳು ಅವನೆಡೆಗೆ ವಾಲಿದ್ದಳು. ಆದರೆ ಅದು ಆಕರ್ಷಣೆ ಆಗಿರಲಿಲ್ಲ. ಒಂದು ತಪಸ್ಸಿನಂತೆ ಇತ್ತು. ಮಿಠಾಯಿ ಮಾರುವ ಹಿಮೂ ಪ್ರಾರ್ಥನಾ ಎಂಬ ರೆಕ್ಕೆ ಕಟ್ಟಿಕೊಂಡು ಪ್ರಾರ್ಥನಾ ಲೇಔಟ್ ಎಂಬ ಕನಸನ್ನು ಚೇಸ್ ಮಾಡುವ ವರ್ಣನೆ ಅದ್ಭುತ. ಖಂಡಿತ ಪ್ರೀತಿಗೆ ಆ ಶಕ್ತಿ ಇರುತ್ತದೆ, ಏನನ್ನಾದರೂ ಮಾಡಿಬಿಡುವ, ಎಲ್ಲವನ್ನು ಸಾಧಿಸಿಬಿಡುವ ಶಕ್ತಿ ಪ್ರೀತಿಗೆ ಮಾತ್ರ ಇರುತ್ತದೆ. ಪ್ರೀತಿಯ ಬಗ್ಗೆ ಅವನ ತಪಸ್ಸೇ ಹಾಗಿತ್ತು. ಪ್ರೀತಿಸಿದವಳನ್ನು ನೋಡಿಕೊಂಡ ರೀತಿ, ಅರೆನಗ್ನವಾಗಿ ತೋಳಲ್ಲಿದ್ದ ಪ್ರೀತಿಯನ್ನು ಬಟ್ಟೆ ಹೊದಿಸಿ ಸಂಯಮ ತೋರಿದ ಹಿಮವಂತ್ ನಿಜಕ್ಕೂ ದೇವರಂತೆ ಕಾಣಿಸುತ್ತಾನೆ.

ಅವನ ವೈರಾಗ್ಯ, ತಟಸ್ಥತೆ, ಕನಸನ್ನು ಕಟ್ಟುವಿಕೆ, ನಿಶ್ಚಲ ಮನಸ್ಥಿತಿ, ಅನವಶ್ಯಕ ಇರುವಲ್ಲಿ ನಿರ್ಲಕ್ಷ್ಯ, ಮೌನ, ಗಾಂಭೀರ್ಯ ಇದೆಲ್ಲ ವರ್ಣನೆ ಕೇಳುತ್ತ ಹೋದರೆ ಹೀಗೊಂದು ವ್ಯಕ್ತಿ ಇರಬಹುದೇ ಎಂದು ಅನಿಸುವುದಂತೂ ಸತ್ಯ. ಆದರೆ ಆ ರೀತಿಯ ಒಬ್ಬ ವ್ಯಕ್ತಿಯನ್ನು ನಾನು ಹತ್ತಿರದಿಂದ ನೋಡಿದವಳಾಗಿದ್ದರಿಂದ ಈ ರೀತಿ ವ್ಯಕ್ತಿಗಳು -ವ್ಯಕ್ತಿತ್ವ ಗಳು ಇರುತ್ತವೆ ಎಂಬುದನ್ನು ನಂಬಿದೆ. ಪ್ರಾರ್ಥನಾ ಮೋಸ ಮಾಡಿದವಳು, ನಿಷ್ಕರುಣಿ ಎಂದೆಲ್ಲ ಕಾಣಿಸುತ್ತ ಹೋಗುತ್ತದೆ. ಆದರೆ ಕೊನೆಯಲ್ಲಿ ಅವಳ ಬಗ್ಗೆ ಅನುಕಂಪ ಮೂಡುತ್ತದೆ, ಹೌದು ಹಿಮೂ ದೇವರು, ದೇವರನ್ನು ಪೂಜಿಸಬಲ್ಲಳು. ಸಂಸಾರ ಅಂತ ಬಂದಾಗ ಬದುಕು ಬಯಸುವುದೇ ಬೇರೆ ಏನನ್ನೋ. ಅವುಗಳನ್ನು ನಿಗ್ರಹಿಸಿದ್ದರೆ ಹಿಮೂ ಅಂತಹ ಪರ್ವತ ಏರಿ ಎಲ್ಲ ವಿಷಯ ಸುಖಗಳು ಅವಳಿಗೆ ತೃಣಕ್ಕೆ ಸಮಾನವಾಗಿ ಕಾಣುತ್ತಿದ್ದವು, ಆದರೆ ಅವಳಲ್ಲಿ ಅಷ್ಟು ಪ್ರೌಢತೆ, ತಾಳ್ಮೆ ಇರಲಿಲ್ಲ. ಚಿಕ್ಕ ಪುಟ್ಟ ಬಂಡೆಗಳಿಗೆ ವರಗಿ ಸುಖ ಕಾಣಲು ಹಂಬಲಿಸಿ ಅಲ್ಲೇ ತನ್ನ ನೆಲೆ ಕಂಡುಕೊಂಡಳು.

ಎಲ್ಲ ತಿರುವುಗಳ ನಂತರ ಪ್ರೀತಿಯನ್ನು ಕಳೆದುಕೊಂಡ ಹಿಮೂವಿನ ಕಣ್ಣೀರು, ನೋವು, ಮೌನ ಎಂತಹ ಕಟುಕರ ಕಣ್ಣಲ್ಲೂ ನೀರು ತರಿಸುತ್ತದೆ. ಅಯ್ಯೋ ಹಿಮೂ ಎಂದು ಗೊತ್ತಿಲ್ಲದೇ ಸಣ್ಣ ಕನವರಿಕೆಯೊಂದು ಓದುಗನ ಮನಸಿನಿಂದ ಮೂಡುವುದಂತೂ ಸತ್ಯ. ಆದರೆ. ಆದರೆ. ಬಿಚ್ಚು ಮನಸ್ಸಿನವರು ಮುಂಗೋಪಿಗಳು ಹೇಗೋ ಬೈದೊ, ಹೊಡೆದೋ ತಮ್ಮ ಕೋಪ, ದುಃಖ, ನಿರಾಸೆ ಗಣನ್ನು ಹೊರಹಾಕಿ ಸ್ವಲ್ಪ ಹೊತ್ತಿಗೆ ಶಾಂತರಾಗಿ ಬಿಡುತ್ತಾರೆ. ಆದರೆ ಈ ಅಂತರ್ಮುಖಿಗಳ ಒಂದೇ ಒಂದು ಸಮಸ್ಯೆ ಎಂದರೆ ಅದೇ. ಅವರೊಳಗಿನ ನೋವು -ಕೋಪ ಅನ್ನೋ ಬೆಂಕಿ ಕಿಡಿ ಒಳಗೊಳಗೇ ಕುದಿಸಿ ಜ್ವಾಲಾಮುಖಿಯಾಗುತ್ತದೆ. ಅದು ತನ್ನನ್ನು ಸುಡುತ್ತಾ ಮತ್ತೆ ಏನನ್ನು ಸುಡತ್ತೋ ತಿಳಿಯುವದೇ ಇಲ್ಲ. ಹೀಗೆ ಹಿಮೂವಿನ ರೋಷದ ಕಿಡಿಗೆ ಮೊದಲ ಬಲಿಯಾದ ಸುಜಯ ಬಗ್ಗೆ ಕನಿಕರ ಮೂಡುತ್ತದೆ, ತನ್ನದಲ್ಲದ ಸಣ್ಣ ತಪ್ಪಿಗೆ ಸಾವಿನಂತಹ ಶಿಕ್ಷೆ ಬೇಡವಾಗಿತ್ತು. ಹಿಮೂವಿನ ಕ್ರೌರ್ಯ ದೇಬ್ ಕೊನೆಯಾದಮೇಲಾದರೂ ಪ್ರಾರ್ಥನಾ ಬಂದು ತನ್ನನ್ನು ಸೇರಲಿ ಅನ್ನುವ ಸಣ್ಣ ಮನಸ್ಥಿತಿಗೆ ತಲುಪಿದಾಗ ಎಲ್ಲಿಯ ಆ ದೇವರಾದ ಹಿಮೂ, ಎಲ್ಲಿಯ ಈ ರಾಕ್ಷಸ ಹಿಮೂ. ಪ್ರೀತಿಗೆ ಹೀಗೆ ಮನುಷ್ಯನನ್ನು ದೇವರನ್ನಾಗಿಸುವ, ದೇವರನ್ನು ರಾಕ್ಷಸನಾಗಿಸಿ ಬಿಡುವ ಶಕ್ತಿ ಇದೆಯೇ ಎಂದು ಅನಿಸುತ್ತದೆ. ಅಂತ್ಯದಲ್ಲಿ ಸರಿತಪ್ಪನ್ನು ಬದಿಗೊತ್ತಿ ಸುಖಾಂತ್ಯ ಓದುಗನ ಮನಸಿಗೆ ಸ್ವಲ್ಪ ಸಮಾಧಾನ ಕೊಡುತ್ತದೆ.

ಪ್ರಾರ್ಥನಾಳ ಭಕ್ತಿ ಹಿಮೂಗೆ ಇದ್ದರು ದಾಂಪತ್ಯ ಮಾಡುವ ಉತ್ಕಟ ಪ್ರೀತಿ ದೇಬ್ ಕಡೆ ಇತ್ತು. ಅವಳಿಗೆ ಅವಳ ಪ್ರೀತಿ ಸಿಕ್ಕಿತು. . ಯಾವುದೇ ಸ್ವಾರ್ಥ್ಯ ಇಲ್ಲದೆ ಕಾಯ, ವಾಚಾ, ಮನಸಾ ಹಿಮುವನ್ನು ಪ್ರೀತಿಸಿ, ಆರಾಧಿಸಿದ ಊರ್ಮಿಳಾ ಗೆ ಅವಳ ಪ್ರೀತಿ ದಕ್ಕಿದ್ದು ಸಂತೋಷ ವಾಗುತ್ತದೆ. ಶುರುವಿನಿಂದಲೂ ಕೊನೆಯವರೆಗೂ ವಿಶಿಷ್ಟ ಪಾತ್ರ ನಿರ್ವಹಿಸುವ ರಸೂಲ್ ಜಮಾದಾರ, ಹಿಮೂ ಸಾಧನೆ ಗೆ ಬೆನ್ನೆಲುಬಾಗಿ ನಿಂತ ಶಂಕರಣ್ಣ, ಅವರ ಪತ್ನಿ ನಂದಕ್ಕ, ದೇಬ್ ತಂದೆ ತಾಯಿ ಪಾತ್ರಗಳು ಮನಸಲ್ಲಿ ಉಳಿಯುತ್ತವೆ. ಕೊನೆಯಲ್ಲಿ ಊರ್ಮಿಳಾ ಳ ಜೊತೆ ಹೊಸದೊಂದು ಕನಸು ಕಟ್ಟಲು ಸಿದ್ಧನಾದ ಹಿಮೂ ದೇವರಿಂದ ಮನುಷ್ಯನಾಗುತ್ತಾನೆ. ಹೌದು ಹಿಮೂ ಮನುಷ್ಯನಾಗಿಯೇ ಇರು. ದೇವರಿಗೆ ಏನು ದಕ್ಕುವುದಿಲ್ಲ, ಅವನಿಗೆ ಅಂತ ಮೀಸಲಿಟ್ಟ ನೈವಿದ್ಯ ಕೂಡ ಪ್ರಸಾದ ಅಂತ ತಿನ್ನುವವರು ಇನ್ಯಾರೋ. ಬದುಕಿಬಿಡು ಹಿಮೂ ಮನುಷ್ಯನಾಗಿ, ಎಲ್ಲ ಸುಖ ಸಂತೋಷಗಳು ನಿನ್ನದಾಗಲಿ ಎಂದು ಓದುಗನ ಮನಸು ಹಾರೈಸುತ್ತದೆ.

ಮನಸಿನೊಳಗೆ ಭಾವನೆಗಳ ಜೊತೆ ಕದನವಾದಾಗ ಗೊತ್ತಿಲ್ಲದೇ ಪ್ರಾರ್ಥನಾ ಆಗಿರ್ತೀನಿ. ಅದನ್ನೆಲ್ಲ ದಾಟಿ ನಿರ್ಲಿಪ್ತ ಭಾವ ಒಂದು ತುಂಬಿದಾಗ ಊರ್ಮಿಳಾ ಅನಿಸ್ಕೊಳ್ತಿವಿ. ಒಮ್ಮೆಮ್ಮೆ ಪರಿಸ್ಥಿತಿಗೆ ಅನುಗುಣವಾಗಿ ಮುಖವಾಡ ತೊಟ್ಟು ಬದುಕಿದಾಗ ದೇಬ್ ಆಗಿರ್ತಿವಿ.
ನಮಗಿಂತ ಜಾಸ್ತಿ ನಮ್ಮೊಳಗೇ ಯಾರನ್ನು ಅತಿಯಾಗಿ ಪ್ರೀತಿಸಿ, ಕಳ್ಕೊಂಡ್ರು ಹುಚ್ಚರಂತೆ ಆರಾಧಿಸುವಾಗ ಹಿಮವಂತ್ ಆಗಿರ್ತಿವಿ. ಕಥೆಯನ್ನು ಇಷ್ಟು ಸುಂದರವಾಗಿ ಮನಸಿಗೆ ತಲುಪಿಸಲು ರವಿ ಬೆಳೆಗೆರೆ sir ಗೆ ಬಿಟ್ಟರೆ ಬೇರೆ ಯಾರಿಗೆ ಸಾಧ್ಯ.

-ಭಾರ್ಗವಿ ಜೋಶಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x