ಸಂಪಾದಕೀಯ

ಹೇಗಿದ್ದ ಹೇಗಾದ ಗೊತ್ತಾ: ನಟರಾಜು ಎಸ್. ಎಂ.

ಮೊನ್ನೆ ಶನಿವಾರ ಯೂ ಟ್ಯೂಬ್ ನಲ್ಲಿ ಒಂದಷ್ಟು ಹಿಂದಿ ಕಾಮಿಡಿ ಶೋ ಗಳನ್ನು ನೋಡುತ್ತಾ ಕುಳಿತ್ತಿದ್ದೆ. ಹಿಂದಿಯ ರಿಯಾಲಿಟಿ ಶೋ ಗಳಲ್ಲಿ ತಮ್ಮ ಕಾಮಿಡಿಗಳಿಂದಲೇ ಮಿಂಚಿದ ರಾಜು ಶ್ರೀವತ್ಸವ್, ಕಪಿಲ್ ಶರ್ಮ, ಸುನಿಲ್ ಪಾಲ್ ಹೀಗೆ ಹಲವರ ವಿಡೀಯೋಗಳು ನೋಡಲು ಸಿಕ್ಕಿದ್ದವು. ಒಂದು ರಿಯಾಲಿಟಿ ಶೋ ನ ವಿಡೀಯೋದಲ್ಲಿ ಕಾಮಿಡಿಯನ್ ಜೋಕ್ ಹೇಳಿ ಮುಗಿಸುವ ಮುಂಚೆಯೇ ದೊಡ್ಡದಾಗಿ ಸುಮ್ಮ ಸುಮ್ಮನೆ ನಗುವ ನವಜ್ಯೋತ್ ಸಿದ್ದುವಿನ ಅಬ್ಬರದ ನಗುವನು ನೋಡಿ "ಈ ಯಪ್ಪಾ ಜೋಕ್ ಅಲ್ಲದಿದ್ದರೂ ಸುಮ್ಮ ಸುಮ್ಮನೆ ನಗ್ತಾನೆ" ಅಂದುಕೊಂಡು ಚಾನೆಲ್ ಚೇಂಜ್ ಮಾಡುವ ಹಾಗೆ ಕನ್ನಡ ಕಾಮಿಡಿ ಅಂತ ಯೂ ಟ್ಯೂಬ್ ನಲ್ಲಿ ಟೈಪ್ ಮಾಡಿದೆ. ನಮ್ಮ ಗಂಗಾವತಿ ಪ್ರಾಣೇಶ್ ರಿಂದ ಹಿಡಿದು ಕೋಮಲ್ ವರೆಗಿನ ಕಾಮಿಡಿ ವಿಡೀಯೋಗಳೆಲ್ಲಾ ಕಣ್ಣ ಮುಂದೆ ಲಿಸ್ಟ್ ಆದವು. ಆ ಕ್ಷಣಕ್ಕೆ ಯಾಕೋ ಸಾಧುಕೋಕಿಲ ನೆನಪಾಗಿ ಸಾಧು ಕೋಕಿಲ ಮತ್ತು  ದೊಡ್ಡಣ್ಣ ಜೋಡಿಯ ಒಂದಷ್ಟು ಹಾಸ್ಯ ದೃಶ್ಯಗಳನ್ನು ನೋಡುತ್ತಿದ್ದಾಗ ಎರಡು ವಿಡೀಯೋಗಳು ಆಕಸ್ಮಿಕವಾಗಿ ಕಣ್ಣಿಗೆ ಬಿದ್ದವು. ಮೊದಲನೆಯ ವಿಡೀಯೋ ನಮ್ಮದೇ ಊರಿನ ರಾಜಕಾರಣಿಯೊಬ್ಬರ ಕುರಿತಾದ ವಿಡೀಯೋ ಆಗಿದ್ದರೆ ಮತ್ತೊಂದು ವಿಡೀಯೋ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಸಂದರ್ಶನದ ವಿಡೀಯೋ ಆಗಿತ್ತು. 

ಮೊದಲಿಗೆ ನಮ್ಮೂರಿನ ರಾಜಕಾರಣಿಯ ವಿಡೀಯೋವನ್ನು ಆಸಕ್ತಿಯಿಂದ ನೋಡುತ್ತಾ ಕುಳಿತುಕೊಂಡೆ. ಖಾಸಗಿ ಟೀವಿ ಚಾನೆಲ್ ನ ಸ್ಕ್ರಿಪ್ಟ್ ನ ಕತೆಯ ಪ್ರಕಾರ ಆ ರಾಜಕಾರಣಿಯ ಬದುಕಿನ ಕತೆಯ ಸಾರಾಂಶ ಆ ವಿಡೀಯೋದಲ್ಲಿ ಹೀಗಿತ್ತು. ಒಂದು ಪುಟ್ಟ ಊರಿನಲ್ಲಿ ಬಡರೈತನೊಬ್ಬನ ಮಗನೊಬ್ಬ ಅಲ್ಲಿ ಇಲ್ಲಿ ಪುಂಡಾಟಿಕೆ ಆಡಿಕೊಂಡು ತಿರುಗುತ್ತಿರುತ್ತಾನೆ. ಒಮ್ಮೆ ಆತ ಹತ್ತಿರದ ಕಾಲೇಜೊಂದರಲ್ಲಿ ದಾಖಲಾಗಲು ಹೋದಾಗ ಅವನಿಗೆ ಆ ಕಾಲೇಜಿನ ಆಡಳಿತ ಮಂಡಳಿ ಸೀಟನ್ನು ನಿರಾಕರಿಸುತ್ತದೆ. ಆದ ಕಾರಣ ಆ ಹುಡುಗ ಕೆಂಪು ಬಸ್ಸು ಹತ್ತಿ ಓದುವ ಸಲುವಾಗಿ ಬೆಂಗಳೂರು ತಲುಪುತ್ತಾನೆ. ಬೆಂಗಳೂರಿನ ಕಾಲೇಜೊಂದರಲ್ಲಿ ಸೀಟು ಪಡೆದ ಮೇಲೆ ಕಾಲಕ್ರಮೇಣ ಆ ಕಾಲೇಜಿನಲ್ಲಿ ಆತ ತನ್ನ ಪುಂಡಾಟಿಕೆ ಶುರುವಿಟ್ಟುಕೊಳ್ಳುತ್ತಾನೆ. ಆ ಪುಂಡಾಟಿಕೆ ರೌಡಿಯೊಬ್ಬನ ಜೊತೆ ಗುರುತಿಸುಕೊಳ್ಳುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಹಾಗೆ ರೌಡಿಯೊಬ್ಬನ ಜೊತೆ ಆ ಹುಡುಗ ಗುರುತಿಸಿಕೊಂಡ ಮೇಲೆ ಕಾಲೇಜಿನಲ್ಲಿ ಆತನ ಬಗ್ಗೆ ಬೇರೆಯದೇ ಇಮೇಜ್ ಕ್ರಿಯೇಟ್ ಆಗುತ್ತದೆ. ಆ ಇಮೇಜ್ ನಿಂದ ಆತ ರಾಜಕೀಯ ಪಕ್ಷಗಳ ಜೊತೆಯೂ ಯುವ ನಾಯಕನಾಗಿ ಗುರುತಿಸಿಕೊಳ್ಳುತ್ತಾನೆ. ಭೂಗತ ದೊರೆಯೊಬ್ಬನ ಜೊತೆಗಿನ ಸ್ನೇಹ ಮತ್ತು ಕಾಲೇಜಿನ ಬದುಕು ಆತನ ಬದುಕನ್ನು ಬೆಂಗಳೂರಿನಲ್ಲಿ ಖಾಯಂ ಆಗಿ ನೆಲೆಗೊಳಿಸುತ್ತದೆ ಎಂದುಕೊಳ್ಳುವಾಗ ಆತನನ್ನು ಬೆಂಬಲಿಸುತ್ತಿದ್ದ ಭೂಗತ ದೊರೆಯ ಕೊಲೆಯಾಗುತ್ತದೆ. ಆ ಕೊಲೆಯ ನಂತರ ಆ ಕೊಲೆಗೈದವರ ಮುಂದಿನ ಟಾರ್ಗೆಟ್ ತಾನೇ ಎಂದರಿತ ಹುಡುಗ ಬೆಂಗಳೂರಿನಿಂದ ವಾಪಸ್ಸು ತನ್ನೂರಿಗೆ ಹೋಗುತ್ತಾನೆ. ತನ್ನೂರಿನಲ್ಲಿ ಸಣ್ಣ ಪುಟ್ಟ ರಾಜಕಾರಣಗಳನ್ನು ಮಾಡಿಕೊಂಡು ದೊಡ್ಡ ಮಟ್ಟದ ರಾಜಕಾರಣದ ಕನಸು ಕಾಣತೊಡಗುತ್ತಾನೆ. ಅದೇ ಸಮಯಕ್ಕೆ ಕೆಲವು ಕಂಪನಿಗಳು ಆ ಹುಡುಗನ ಊರಿನ ಅಕ್ಕಪಕ್ಕದ ಊರುಗಳಲ್ಲಿ ಕಲ್ಲಿನ ಬೆಟ್ಟಗಳನ್ನು ಕ್ವಾರೆ ಮಾಡುವ ಬ್ಯುಸಿನೆಸ್ ಶುರುಮಾಡಿರುತ್ತಾರೆ. ಆ ಬ್ಯುಸಿನೆಸ್ ಗೆ ಹೇಗೋ ಎಂಟ್ರಿ ಕೊಟ್ಟ ಹುಡುಗ ಕೊನೆಗೆ ಕಾಲಾಂತರದಲ್ಲಿ ಆ ಕ್ಷೇತ್ರದ ಬಹು ದೊಡ್ಡ ರಾಜಕಾರಣಿಯಾಗಿ ಬೆಳೆಯುವ ಜೊತೆ ಜೊತೆಗೆ ದೊಡ್ಡ ಉದ್ಯಮಿ ಕೂಡ ಆಗುತ್ತಾನೆ. 

ಇದು ಒಂದು ತರವಾದ ಕತೆಯಾದರೆ ಯೂ ಟ್ಯೂಬ್ ನಲ್ಲಿ ಸಂದರ್ಶನದ ರೂಪದಲ್ಲಿದ್ದ ಮತ್ತೊಂದು ಕತೆ ಐಎಎಸ್ ಅಧಿಕಾರಿಯೊಬ್ಬರ ಬದುಕು ಕುರಿತ್ತಿದ್ದಾಗಿತ್ತು. ಯೂ ಟ್ಯೂಬ್ ನಲ್ಲಿ ನೋಡಿದ ಆ ಐಎಎಸ್ ಅಧಿಕಾರಿಯವರ ಬದುಕಿನ ಸಾರಾಂಶ ಏನಾಗಿತ್ತೆಂದರೆ.. ಒಂದು ಪುಟ್ಟ ಹಳ್ಳಿಯಲ್ಲಿ ದಲಿತ ಕುಟುಂಬಕ್ಕೆ ಸೇರಿದ ಹುಡುಗನೊಬ್ಬನಿರುತ್ತಾನೆ. ಆ ಹುಡುಗನ ತಂದೆ ನಾಟಕದ ಮಾಸ್ಟರಾಗಿರುತ್ತಾರೆ. ಪುಟ್ಟ ಗುಡಿಸಿನಲ್ಲಿ ವಾಸಿಸುವ ಆ ಹುಡುಗ ಮನೆಯಲ್ಲಿನ ಬಡತನದ ಕಾರಣದಿಂದ ಹೈಸ್ಕೂಲಿನ ನಂತರ ಜೈಲ್ ಒಂದರಲ್ಲಿ ಟೈಪಿಸ್ಟ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಕೆಲಸದ ಜೊತೆಗೆ ಟೈಪಿಂಗ್, ಶಾರ್ಟ್ ಹ್ಯಾಂಡ್ ಕಲಿತುಕೊಂಡ ಹುಡುಗ ಸಿಐಡಿ ಬ್ರಾಂಚ್ ನಲ್ಲಿ ಪೋಲಿಸ್ ವರದಿಗಾರನಾಗಿ ಸೇರುತ್ತಾನೆ. ನಂತರ ಆ ಕೆಲಸ ಮಾಡುವ ವೇಳೆಯಲ್ಲಿ ಆತ ತನಗೆ ಸಂಬಳ ಬಂದಾಗ ತನಗೆ ಪರಿಚಯದ ತನ್ನೂರಿನ ಓದುವ ಹುಡುಗರನ್ನು ಕರೆದು ಒಂದಷ್ಟು ದುಡ್ಡು ಕೊಟ್ಟು ಕಳಿಸುತ್ತಿರುತ್ತಾನೆ. ಒಮ್ಮೆ ಆತನನ್ನು ನೋಡಲು ಬಂದ ತನ್ನೂರಿನ ಗೆಳೆಯನೊಬ್ಬ ತಾನು ಐಎಎಸ್ ಪರೀಕ್ಷೆ ಬರೆಯಬೇಕೆಂದಿದ್ದೇನೆ ಎಂದಾಗ ಆ ಗೆಳೆಯನಿಂದ ಐಎಎಸ್ ಪರೀಕ್ಷೆಯ ವಿವರಗಳನ್ನು ತಿಳಿದ ಹುಡುಗ ತಾನೂ ಸಹ ಏಕೆ ಐಎಎಸ್ ಪರೀಕ್ಷೆ ಬರೆಯಬಾರದು ಎಂದುಕೊಂಡು ಐಎಎಸ್ ಪರೀಕ್ಷೆಯ ಕನಸು ಕಾಣುತ್ತಾ ಮುಂದೆ ಸಂಜೆ ಕಾಲೇಜಿನಲ್ಲಿ ಡಿಗ್ರಿ, ಮತ್ತು ಕರೆಸ್ಪಾಡೆನ್ಸ್ ನಲ್ಲಿ ಮಾಸ್ಟರ್ ಡಿಗ್ರಿಗಳನ್ನು ಮುಗಿಸಿಕೊಳ್ಳುತ್ತಾನೆ. ಓದಿನ ಜೊತೆಗೆ ಕೆಎಎಸ್ ಮತ್ತು ಐಎಎಸ್ ಪರೀಕ್ಷೆಗಳನ್ನು ಸಹ ಬರೆಯತೊಡಗುತ್ತಾನೆ. ಎಸ್ ಎಸ್ ಎಲ್ ಸಿ, ಪಿಯುಸಿ, ಡಿಗ್ರಿ, ಮಾಸ್ಟರ್ ಡಿಗ್ರಿ ಪರೀಕ್ಷೆಗಳನ್ನು ಎರಡೆರಡು ಅಟೆಂಪ್ಟ್ ಗಳಲ್ಲಿ ಥರ್ಡ್ ಕ್ಲಾಸ್ ನಲ್ಲಿ ಪಾಸುಕೊಂಡು ಬಂದಿದ್ದ ಹುಡುಗ ಸ್ಪರ್ಧಾತ್ಮಕ ಪರೀಕ್ಷೆಗಾಗಿ ದಿನಕ್ಕೆ ಹದಿನೈದು ಗಂಟೆಗಳ ಕಾಲ ಓದಲು ಶುರು ಮಾಡುತ್ತಾನೆ. ಅಷ್ಟು ಶ್ರದ್ಧೆಯಿಂದ ಓದುವ ಆ ಹುಡುಗನಿಗೆ ಆತನ ಶ್ರಮದ ಮೊದಲ ಫಲವೆಂಬಂತೆ ಆತ ಕೆಎಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಡಿವೈಎಸ್ಪಿ ಪದವಿ ದೊರೆಯುತ್ತದೆ. ಮತ್ತೆ ಕೆಎಎಸ್ ಬರೆದಾಗ ಅಸಿಸ್ಟಂಟ್ ಕಮೀಷನರ್ ಪದವಿ ದೊರೆಯುತ್ತದೆ. ತಾನು ಡಿಸಿ ಆದರೆ ಜನರ ಸೇವೆ ಮಾಡಬಹುದು ಎನ್ನುವ ಕನಸು ಕಂಡಿದ್ದ ಹುಡುಗ ಕೊನೆಗೆ ಕನ್ನಡದಲ್ಲಿಯೇ ಐಎಎಸ್ ಬರೆದು ಕನ್ನಡದಲ್ಲಿ ಐಎಎಸ್ ಬರೆದ ಮೊದಲ ಕನ್ನಡಿಗ ಎಂಬ ಗೌರವಕ್ಕೆ ಪಾತ್ರನಾಗುತ್ತಾನೆ. ತನ್ನ ತಂದೆ ನಾಟಕದ ಮಾಸ್ಟರಾಗಿದ್ದ ಕಾರಣ ಅವರಿಂದ ಬಳುವಳಿಯಾಗಿ ಬಂದಿದ್ದ ನಟನೆಯ ಕಾರಣಕ್ಕೆ ಐಎಎಸ್ ಮಾಡುವ ಕನಸಿನ ಜೊತೆಗೆ ಸಿನಿಮಾ ಹೀರೋ ಸಹ ಆಗುವ ಕನಸು ಕಂಡಿದ್ದ ಹುಡುಗ ಕೊನೆಗೆ ಐಎಎಸ್ ವೃತ್ತಿಯ ಜೊತೆ ಸಿನಿಮಾದ ಪ್ರವೃತ್ತಿಯನ್ನು ಮೈಗೂಡಿಸಿಕೊಂಡು ನಾಯಕ ನಟನಾಗಿ ಅಭಿನಯಿಸಿ ಸಿನಿಮಾ ಹೀರೋ ಸಹ ಆಗಿಬಿಡುತ್ತಾನೆ. 

ಈ ಎರಡೂ ಕತೆಗಳು ಯಾವ ವ್ಯಕ್ತಿಗಳ ಕುರಿತಾದದ್ದು ಎಂದು ಓದುಗರಾದ ನಿಮಗೆ ಬಹುಶಃ ತಿಳಿದಿರುತ್ತದೆ. ಮೊದಲನೆಯ ಕತೆ ರಾಜಕಾರಣಿ ಡಿಕೆ ಶಿವಕುಮಾರ್ ರವರದಾದರೆ ಎರಡನೆಯ ಕತೆ ನಿವೃತ್ತ ಐಎಎಸ್ ಅಧಿಕಾರಿ ಕೆ ಶಿವರಾಮ್ ರವರದು. ಈ ಇಬ್ಬರೂ ನಮ್ಮ ಈಗಿನ ರಾಮನಗರ ಜಿಲ್ಲೆಗೆ ಸೇರಿದವರು. ಇಬ್ಬರೂ ಹಳ್ಳಿಯ ಹಿನ್ನೆಲೆಯಲ್ಲಿ ಬಂದವರು. ಶಿವಕುಮಾರ್ ರವರು ಬದುಕು ಕಟ್ಟಿಕೊಂಡ ರೀತಿ ಬೇರೆಯದಾದರೆ ಶಿವರಾಮ್ ರವರು ಬದುಕು ಕಟ್ಟಿಕೊಂಡ ರೀತಿ ಬೇರೆ. ನಮಗೆ ಸಾಮಾನ್ಯವಾಗಿ ರಾಜಕಾರಣದ ಬದುಕು ನೆಗಟೀವ್ ಆಗಿ ಕಂಡರೆ ಓದಿನ ಬದುಕು ಪಾಸಿಟೀವ್ ಆಗಿ ಕಾಣುತ್ತದೆ. ಆ ಕಾರಣಕ್ಕೆ ಹೆಚ್ಚಾಗಿ ನಾವೆಲ್ಲಾ ಓದಿನಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತೇವಾ ಹೊರತು ರಾಜಕಾರಣದಲ್ಲಲ್ಲ. ರಾಜಕಾರಣದಲ್ಲಿ ಆಸಕ್ತಿ ಇರುವವರಿಗೆ ಶಿವಕುಮಾರ್ ರವರಂತಹ ರಾಜಕಾರಣಿಗಳ ಬದುಕು ಒಂದು ತರನಾದ ಸ್ಫೂರ್ತಿಯಾದರೆ ಓದಿನಲ್ಲಿ ಆಸಕ್ತಿ ಇರುವ ಹುಡುಗರಿಗೆ ಶಿವರಾಮ್ ರವರಂತಹ ಬದುಕು ಖಂಡಿತಾ ಒಂದು ಸ್ಫೂರ್ತಿ. ಆ ಸ್ಫೂರ್ತಿಗಳು ಯಾವ ವ್ಯಕ್ತಿಯನ್ನು ಯಾವ ಎತ್ತರಕ್ಕೆ ಏರಿಸುತ್ತದೆ ಎಂಬುದು ಯಾವಾಗಲೂ ಕಾಲ ನಿರ್ಧರಿಸುತ್ತದೆ. ಆ ನಿರ್ಧರಿಸುವ ಕಾಲದಲ್ಲಿ ನಾವೂ ಸಹ ಬದುಕುವಾಗ ನಮ್ಮ ಕಣ್ಣ ಮುಂದೆಯೇ ಬದುಕು ಬದಲಾಯಿಸಿಕೊಂಡವರನ್ನು ಒಮ್ಮೊಮ್ಮೆ ಕಂಡು "ಹೆಂಗಿದ್ದವನು ಹೆಂಗಾದ ಮಗ?" ಎಂದು ಅಚ್ಚರಿಪಟ್ಟುಕೊಳ್ಳುತ್ತೇವೆ. ಆ ಅಚ್ಚರಿಗಳನ್ನು ನಾವು ಜನರ ಕಣ್ಣುಗಳಲ್ಲಿ ಮೂಡಿಸಬೇಕು ಎಂದು ಕನಸತೊಡಗಿದಾಗ ನಮ್ಮೊಳಗಿನ ಕನಸುಗಳು ನನಸುಗಳಾಗಿ ನಾವೂ ಸಹ ಜನರ ಕಣ್ಣುಗಳಲ್ಲಿ ಅಚ್ಚರಿ ತರಿಸುವ ಸಾಧನೆ ಮಾಡಬಲ್ಲೆವು. ಅಂದ ಹಾಗೆ ಲೇಖನದ ಮೊದಲಿಗೆ ಕಾಮಿಡಿ ವಿಡೀಯೋಗಳ ಕುರಿತು ಬರೆದಿದ್ದೆನಲ್ಲಾ ಆ ಕಾಮಿಡಿ ವಿಡೀಯೋಗಳಲ್ಲಿ ಕಾಣಿಸಿಕೊಂಡಿದ್ದ ಹೆಚ್ಚಿನ ಕಲಾವಿದರೂ ಸಹ ನಮ್ಮ ರಾಜಕಾರಣಿಯಂತೆ, ಐಎಎಸ್ ಅಧಿಕಾರಿಯಂತೆ ತುಂಬಾ ಬಡ ಕುಟುಂಬದ ಹಿನ್ನೆಲೆಯಲ್ಲಿ ಬಂದವರು. ಆದರೆ ತಮ್ಮ ಬಡತನಗಳ ಮೆಟ್ಟಿ ಅವರೂ ಸಹ ಸಾಧನೆಯ ಹಾದಿ ತುಳಿದವರು. 

*****

k.shivaram interview with tv9

ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಮೇಲಿನ ಲಿಂಕ್  ಮೇಲೆ ರೈಟ್ ಕ್ಲಿಕ್ ಮಾಡಿ ನಂತರ save as ಆಪ್ಷನ್ ನಿಂದ ನಿಮ್ಮ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ…

ಕನ್ನಡದ ಬರಹಗಳನ್ನು ಹಂಚಿ ಹರಡಿ

4 thoughts on “ಹೇಗಿದ್ದ ಹೇಗಾದ ಗೊತ್ತಾ: ನಟರಾಜು ಎಸ್. ಎಂ.

  1. ಡಿಕೆಶಿ ಬಗ್ಗೆ ಕೇಳಿದ್ದೆ. ಅಥೆಂಟಿಕ್ ಆಗಿ
    ಗೊತ್ತಿರಲಿಲ್ಲ. ಕ‍ಷ್ಟಪಟ್ಟರೆ ಫಲವುಂಟು
    ಎಂಬುದಕ್ಕೆ ಶಿವರಾಂ ಸಾಕ್ಷಿ. ಇಬ್ಬರೂ
    ಶಿವನ ಹೆಸರಿನವರು ಮತ್ತು ರಾಮನಗರದವರು
    ಎಂಬುದು ಕಾಕಾತಾಳೀಯ. ಬರಹ ಚೆನ್ನಾಗಿದೆ
    ಧನ್ಯವಾದಗಳು ಸಂಪಾದಕರೆ.

  2. ಸರ್, ಮಹತ್ವಾಕಾಂಕ್ಷಿ ವ್ಯಕ್ತಿತ್ವಗಳ ಪರಿಚಯಾತ್ಮಕ ಬರಹ…ಕುತೂಹಲ ಮೂಡಿಸಿತು…..ಧನ್ಯವಾದಗಳು

  3. ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಇನ್ನೇನು ಓದಬೇಕೆಂಬ ಕನಸು ಕಾಣತೊಡಗಿದ್ದೆ, ಅಷ್ಟರಲ್ಲಿ ಇಂತಹ ಒಂದು ಒಳ್ಳೆಯ ಲೇಖನ ಸ್ಪೂರ್ತಿಯಾಯಿತಲ್ಲ ಸಾರ್…….. ತುಂಬಾ ಚನ್ನಾಗಿದೆ….  ಧನ್ಯವಾದಗಳು…

Leave a Reply

Your email address will not be published. Required fields are marked *