ಹೆಸರಿಲ್ಲ: ಸಖ್ಯಮೇಧ (ವಿಶ್ವನಾಥ ಗಾಂವ್ಕರ್)

ಸಾಲು ಅಡಿಕೆ ಮರಗಳು ಮುರಿದು ಬೀಳುತ್ತವೇನೋ ಎಂಬಂತೆ ತೂಗುತ್ತಿದ್ದವು  ಬೀಸುಗಾಳಿಗೆ… ಹುಚ್ಚುಗಾಳಿಯು ತರಗೆಲೆಗಳನ್ನು ಧೂಳನ್ನು ಹೊತ್ತು ತರುತ್ತಿತ್ತು… ತೋಟದಾಚೆ ಬಹುದೂರ ಕಾಣುವ ಬೆಟ್ಟದಲ್ಲಿ ಮಳೆ ಸುರಿಯುವುದು ಅಸ್ಪಷ್ಟವಾಗಿ ಕಾಣುತ್ತಿತ್ತು… ಇನ್ನೇನು ಇಲ್ಲೂ ಮಳೆಯಾಗುತ್ತದೆ.. ತಂಪು ಗಾಳಿ ಬೀಸತೊಡಗಿದೆ.. ಮೋಡ ಕವಿದ ಮಲೆನಾಡ ಕತ್ತಲು… ಅವಳೂ ಮಳೆಗಾಗಿಯೇ ಕಾದಿದ್ದಾಳೆ… ಮಳೆಗಾಗಿ ಎನ್ನುವುದಕ್ಕಿಂತ ಮಳೆಯೊಡನೇ ಒತ್ತಿ ಬರುವ ಅವನ ನೆನಪುಗಳಿಗಾಗಿ…ಕಳೆದ ಮಳೆಗಾಲದಲ್ಲಿ ಅವನ ಜೊತೆಯಾಗಿ ಸವಿದ ಮಲೆನಾಡ ಮಳೆಯ ಸವಿನೆನಪು ಮಾತ್ರ ಅವಳ ಪಾಲಿಗೆ ಉಳಿದಿರುವುದು.. ಅವಳ ಹಾಗೂ ಅವನ ಅಭಿರುಚಿಗಳಲ್ಲಿ ಸಾಕಷ್ಟು ಸಾಮ್ಯತೆಯಿತ್ತು.. ಮನೊಭಾವದಲ್ಲಿ ಕೂಡ.. ಅದಕ್ಕೇ ಬಹುಶಃ ಅವರಿಬ್ಬರೂ ಅಷ್ಟು ಗಾಢವಾಗಿ ಪ್ರೀತಿಸಿದ್ದು..

*****

ಸರಿಸುಮಾರು ಒಂದೂವರೆ ವರ್ಷ ಮುಂಚೆ ನಡೆದ ಘಟನೆ.. ಅವಳು ಬೆಳಗಾವಿಯ ಕಾಲೇಜೊಂದರಲ್ಲಿ ಕಲಿಯುತ್ತಿದ್ದ ಸಮಯ.. ಕಲಿಕೆಯ ಜೊತೆಗೇ ಹತ್ತಿರದ ದಿಟಿಪಿ ಸೆಂಟರ್ ಒಂದರಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದಳು.. ಅಲ್ಲಿ  ಬರುವ ಹಣ ಅವಳ ಬೇಕುಬೇಡಗಳಿಗೆ ಸಾಕಾಗುತ್ತಿತ್ತು… ಅವನು ಆಗಾಗ ಒಂದಷ್ಟು ಹಾಳೆಗಳನ್ನು ಹಿಡಿದು ಬರುತ್ತಿದ್ದ.. ಅದರಲ್ಲಿ ಕೈಯ್ಯಲ್ಲಿ ಬರೆದ ಕಥೆ ಕವನ ಚುಟುಕಗಳಿರುತ್ತಿದ್ದವು… ಅದನ್ನು ಟೈಪ್ ಮಾಡುವ ಕೆಲಸ ಇವಳಿಗೇ ಬರುತ್ತಿತ್ತು.. ಇವಳಿಗೊ ಕುತೂಹಲ.. ಇವನ್ಯಾಕೆ ಇಷ್ಟೊಂದು ಬರೆಯುತ್ತಾನೆ? ಯಾಕೆ ಅದನ್ನ್ನೆಲ್ಲ ಪ್ರಿಂಟ್ ಮಾಡಿಸಬೇಕು? ಪ್ರಿಂಟ್ ಮಾಡಿದ ಹಾಳೆಗಳನ್ನ ಏನು ಮಾಡುತ್ತಾನೆ? ಇತ್ಯಾದಿ.. ಅವನು ಪದೇ ಪದೇ ಬಂದು ಸ್ವಲ್ಪ ಪರಿಚಯವಾದ ಮೇಲೆ ಇವಳು ಕೇಳಿದಳು… ಇವನ್ನೆಲ್ಲಾ ನೀವೇ ಬರೆಯುತ್ತೀರಾ ಅಂತ. ಆತ ಹೌದೆಂದಾಗ ಅವಳ ಪ್ರಶ್ನೆ ಅವೆಲ್ಲ ವೈಯ್ಯಕ್ತಿಕ ಬರಹಗಳಾ ಎಂದು. ಅವನು ಹೇಳಿದ; " ಅದರಲ್ಲಿನ ಹಲವು ಭಾವಗಳು ನನ್ನ ಭಾವಗಳು ಕೂಡ..ಆದರೆ ಎಲ್ಲಾ ಬರಹ ಕಾಲ್ಪನಿಕ.." ಇಷ್ಟು ಹೇಳಿ ಅವನು ಹೊರಡುವ ಹೊತ್ತಿಗೆ  ಇವಳಲ್ಲಿ ಅವನ ಕುರಿತು  ಇನ್ನಷ್ಟು ಕುತೂಹಲ ಮೂಡಿತ್ತು…

ಟೈಪಿಂಗ್ ನಲ್ಲಿ ಏನಾದರೂ ತೊಂದರೆಯಾಗದಿರಲಿ ಎಂದು ಕಾರಣ ಕೊಟ್ಟು ಕೆಲ ದಿನದಲ್ಲೇ ಆಕೆ ಅವನ ಮೊಬೈಲ್ ನಂ. ಪಡೆಯುತ್ತಾಳೆ… ಆಗಾಗ ಅವನು ಬರೆದದ್ದು ತಿಳಿಯದಿದ್ದಾಗ ಫೋನ್ ಮಾಡಿ ವಿಚಾರಿಸುತ್ತಾಳೆ.. ಹೀಗೇ ಒಮ್ಮೆ ಕ್ಯಾಂಟೀನ್ ಒಂದರಲ್ಲಿ ಕುಳಿತಿದ್ದಾಗ ಅದೇ ಕ್ಯಾಂಟೀನ್ ಗೆ ಬಂದ ಅವನನ್ನು ಆಕೆ ತನ್ನ ಬಳಿ ಕರೆದು ಕೂರಿಸುತ್ತಾಳೆ.. ಲೋಕಾಭಿರಾಮ ಮಾತುಕತೆ ಮುಗಿದ ಮೇಲೆ ಆತನ ಬಗ್ಗೆ ಕೇಳಿದಾಗ ಅವನೊಬ್ಬ  ಬ್ಯಾಂಕ್ ನೌಕರ ಎಂದೂ, ತನ್ನದೇ ಜಾತಿ ಕುಲದವನೆಂದೂ ತಿಳಿಯುತ್ತದೆ.. ಆತ ತಾನೊಬ್ಬ ಹವ್ಯಾಸಿ ಬರಹಗಾರನೆಂದೂ ಹೇಳಿಕೊಳ್ಳುತ್ತಾನೆ..

ಆ ಭೇಟಿಯ ನಂತರ ಅವರಿಬ್ಬರೂ ಇನ್ನಷ್ಟು ಹತ್ತಿರವಾಗುತ್ತಾರೆ.. ಆತ ಪೇಪರ್ ಕೊಡಲು ಬಂದಾಗಲೆಲ್ಲಾ ಇಬ್ಬರೂ ಕುಳಿತು ಹರಟುತ್ತಾರೆ.. ಈಗೀಗ ಅವನಿಗೂ ಅವಳೆಂದರೆ ಏನೋ ಆಕರ್ಷಣೆ.. ಸ್ನೇಹ ಮುಂದುವರೆದು ಪ್ರೀತಿಯಾಗುವ ವೇಳೆ ಇಬ್ಬರೂ ತುಂಬ ಹತ್ತಿರವಾಗುತ್ತಾರೆ.. ಪ್ರೇಮನಿವೇದನೆ ಮಾಡುವ ಕಷ್ಟ ಇಬ್ಬರಿಗೂ ಬರುವುದೇ ಇಲ್ಲ.. ಏಕೆಂದರೆ ಇಬ್ಬರಿಗೂ ಗೊತ್ತು ಪರಸ್ಪರ ಪ್ರೀತಿಸುತ್ತಿರುವ ವಿಷಯ..

ತಾನು ಅವನನ್ನು ಏಕೆ ಇಷ್ಟಪಟ್ಟೆ ಎಂದು ಅವಳಿಗೆ ಗೊತ್ತಿಲ್ಲ.. ತಾನು ಪ್ರೀತಿಯಲ್ಲಿ ಬೀಳಬಹುದು ಎಂದು ಅವಳು ಯೋಚನೆ ಕೂಡ ಮಾಡಿರಲಿಲ್ಲ.. ಈ ಬಾರಿ ಧೈರ್ಯ ಮಾಡಿ ಮನೆಯಲ್ಲಿ ಈ ವಿಷಯ ಹೇಲಬೇಕು ಎಂದುಕೊಂಡಳು.. ಅಷ್ಟರಲ್ಲೇ ಆತ ಅವಳನ್ನು ಶಿವಮೊಗ್ಗಕ್ಕೆ  ಹೋಗಿ ಕೆಲವು ದಿನ ಸುತ್ತಾಡಿಕೊಂಡು ಬರೋಣ ಎಂದು ಪೀಡಿಸಿದ,.. ಅನಿವಾರ್ಯಕ್ಕೆ ಕಟ್ಟು ಬಿದ್ದು ಒಪ್ಪಿಕೊಂಡಳು.. ಏಳು ದಿನದ ಯಾತ್ರೆಯಲ್ಲಿ ಮೂರು ದಿನ  ಅಲ್ಲಿನ ರಮ್ಯ ಸ್ಥಳಗಳನ್ನು ನೋಡುವುದರಲ್ಲೇ ಕಳೆಯಿತು.. ಅಲ್ಲೇ ಉಳಿದುಕೊಳ್ಳಲು ಆತ ರೂಮೊಂದನ್ನು ಬಾಡಿಗೆ ಪಡೆದಿದ್ದ..

ಅವರು ಸುತ್ತಾಡಿದ್ದಕ್ಕಿಂತ ಒಂದೆಡೆ ಕೂತಿದ್ದೇ ಹೆಚ್ಚು.. ದಟ್ಟ ಕಾಡಿನ ನಡುವೆ ಯಾವುದಾದರೂ ತೊರೆಯ ಪಕ್ಕದಲ್ಲಿ ಮಾತನಾಡುತ್ತಾ ಕುಳಿತಿಬಿಡುತ್ತಿದ್ದರು.. ಈ ಸಮಯದಲ್ಲಿ ಆತ ಅವಳಿಗೆ ಇನ್ನಷ್ಟು ಹತ್ತಿರವಾದ ಎನ್ನಿಸಿತು.. ಅಷ್ಟು ದಿನ ಭಾವನಾತ್ಮಕವಾಗಿದ್ದ ಅವರ ಸಂಬಂಧ ನಾಲ್ಕನೇ ದಿನ ದೈಹಿಕವಾಗಿ ಕೂಡ ಬೆಳೆಯುವಂತ ಲಕ್ಷಣ ಕಂಡುಬಂತು..  ಆತನಲ್ಲಿ ಒಂದು ರೀತಿಯ ಹಠ ತುಂಬಿತ್ತು..  ಅವಳೂ ಅವನನ್ನು ಪೂರ್ತಿಯಾಗಿ ನಂಬಿದ್ದರಿಂದ ಹೆಚ್ಚಿನ ಜಟಿಲತೆ ಕಂಡುಬರಲಿಲ್ಲ.. ಅವಳು ತೀರಾ ಸುಲಭದಲ್ಲಿ ಅವನಿಗೆ ಅರ್ಪಿತವಾಗಿದ್ದಳು..

ಮುಂದಿನ ಮೂರು ದಿನವೂ ಹೀಗೇ ನಡೆಯಿತು.. ನಾಲ್ಕನೇ ದಿನ ಬೆಳಗಾಗುವ ಹೊತ್ತಿಗೆ ರೂಮಿನಲ್ಲಿ ಅವಳು ಏಕಾಂಗಿ.. ಪಕ್ಕದಲ್ಲಿ ಅವನು, ಅವನು ಹೊತ್ತು ತಂದ ಲಗೇಜ್, ಯಾವುದೂ ಇರಲಿಲ್ಲ.. ಒಮ್ಮೆಗೇ ಅವಳ ಮನದಲ್ಲಿ ಕತ್ತಲೆಯೊಂದು ಕವಿಯಿತು..ಅವನು ಅಡಗಿಕೊಂಡು ತಮಾಷೆ ಮಾಡುತ್ತಿದ್ದಾನೆ ಎಂದು ಸಮಾಧಾನ ಮಾಡಿಕೊಂಡರೂ ಪ್ರಜ್ಞೆ ಹೇಳುತ್ತಿತ್ತು ಅವನಿಲ್ಲವೆಂದು.. ರೂಮಿನ ಸುತ್ತಮುತ್ತ ಅಲ್ಲದೇ ಇಲ್ಲಿಯವರೆಗೆ ಸುತ್ತಾಡಿದ್ದ ಎಲ್ಲಕಡೆ ನೋಡಿದರೂ ಅವನಿಲ್ಲ.. ಕೊನೆಗೆ ತನ್ನ ಬಳಿಯಿದ್ದ ಎಟಿಎಂ ಕಾರ್ಡ್ ಬಳಸಿ ಹಣ ತೆಗೆದು ವಾಪಸ್ ಬಂದಳು.. ಅಂದಿನಿಂದ ಮಂಕಾದ ಅವಳ ವಿದ್ಯಾಭ್ಯಾಸ  ಪೇಲವವಾಗಿ ಮುಂದುವರೆದು ಹೇಗೋ ಮುಗಿಯಿತು..ಬೆಳಗಾವಿಯಲ್ಲಿ ಅವನು ಮತ್ತೆಂದೂ ಕಾಣಿಸಲೇ ಇಲ್ಲ..

*****

ಇಂದು ಮಳೆ ಬಂದರೆ ಸಾಕು ಅವನು ನೆನಪಾಗುತ್ತಾನೆ.. ಕೆಲವೊಮ್ಮೆ ಕ್ರೋಧದಿಂದ ಅವನನ್ನು ಶಪಿಸುವ ಅವಳ ಮನಸ್ಸು ಕೆಲವೊಮ್ಮೆ ಅವನನ್ನು ತಪ್ಪಿತಸ್ಥನೆನ್ನಲು ಹಿಂಜರಿತ್ತದೆ..ಅಪ್ಪ ತನಗಾಗಿ ಹತ್ತು ಹಲವು ಸ್ಫುರದ್ರೂಪಿ ಗಂಡುಗಳನ್ನು ನೋಡಿದರೂ ಎಲ್ಲವನ್ನೂ ತಿರಸ್ಕರಿಸುತ್ತಾಳೆ.. ಅವನ ಮೇಲಿನ ಪ್ರೀತಿಯಿಂದಲ್ಲ… ಗಂಡಸರ ಮೇಲಿನ ದ್ವೇಷದಿಂದ..

ಅಂದಿನ ರಾತ್ರಿಯಲ್ಲಿನ ಅವನ ಹಸಿದ ನಡತೆ ಅವಳ ಕಣ್ಮುಂದೆ ಬರುತ್ತಿದೆ,,,  ಹಸಿದ ಭೂಮಿಯ ತೃಷೆಗೆ ಬಿದ್ದ ಮಳೆಹನಿಗಳೆಲ್ಲ ಮಾಯವಾಗುತ್ತಿವೆ..

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x