ಹೆಸರಿಡದ ಕಥೆಯೊಂದು (ಭಾಗ 1): ಪ್ರಶಸ್ತಿ ಪಿ.

ಹೇ ಹೋಳಿಗೊಂದಿನ ರಜಾ ಹಾಕಕ್ಕೆ ಹೇಳೇ ಆ ಸೋಮು ಮತ್ತವನ ಗ್ಯಾಂಗಿಗೆ. ಅವ್ರನ್ನೆಲ್ಲಾ ನೋಡಿ ಸಿಕ್ಕಾಪಟ್ಟೆ ಸಮಯ ಆಯ್ತು. ಸಿಗೋಣಂತೆ ಬಣ್ಣದ ಹಬ್ಬದಲ್ಲಿ…ತಮ್ಮೆಂದಿನ ಪಾನಿ ಪುರಿ ಅಡ್ಡಾದಲ್ಲಿ ಫುಲ್ ಜೋಷಲ್ಲಿ ಮಾತಾಡ್ತಾ ಇದ್ಲು ಶ್ವೇತ ತನ್ನ ಗೆಳತಿ ಶಾರ್ವರಿಯೊಂದಿಗೆ. ಬೇರೆಯವ್ರು ರಜಾ ಹಾಕಿದ್ರು ಹಾಕ್ಬೋದೇನೋ ಆದ್ರೆ ಆ ಶ್ಯಾಮಂದೇ ಡೌಟು ಕಣೇ ಅಂದ್ಲು ಶಾರ್ವರಿ.ಡೌಟಾ ? ಯಾಕೆ ಅಂತ ಕಣ್ಣರಳಿಸಿದ್ಲು ಶ್ವೇತ  ಹೋಳಿಗಾ ? ಒಂದಿಡೀ ದಿನಾನಾ ಅಂತಾನೆ . ಒಂದಿನ ಕೆಲಸಕ್ಕೆ ಹೋಗ್ಬೇಡ ಅಂದ್ರೆ ಲಬೊ ಲಬೋ ಅಂತಾನವ. ಸೂರ್ಯನ ಚಂದ್ರನ ಬದ್ಲು ರಾತ್ರಿಯಾಕಾಶಕ್ಕೆ ತರ್ಸಿದ್ರೂ ತರ್ಸಬಹುದೇನೋ. ಆದ್ರೆ ಈ ಶ್ಯಾಮನ ಕೈಲೊಂದಿನ ರಜ ಹಾಕ್ಸೋದು ಕಷ್ಟವೇ ಅಂತ ನಿಟ್ಟುರಿಸಿಟ್ಲು ಶಾರ್ವರಿ ಅಲಿಯಾಸ್ ಶಾರು. ಹೌದೇನೇ ? ಎಲ್ಲಿ ಕೆಲ್ಸ ಮಾಡ್ತಾನವ. ಎಷ್ಟಂತೆ ಪ್ಯಾಕೇಜು ..? ಕಣ್ಣರಳಲಿಸಿದ್ಲು ಶ್ವೇತ. ನೋಡು. ನೀನುಂಟು. ಆ ಶ್ಯಾಮನುಂಟು. ನಿಮ್ಮ ಈ ದುಡ್ಡು, ಕೆಲಸಗಳ ಸುದ್ದಿ ನನ್ನತ್ರ ಮಾತಾಡ್ಬೇಡ. ಅಷ್ಟಕ್ಕೂ ಅವನೆಲ್ಲಿ ಕೆಲ್ಸ ಮಾಡ್ತಾನೆ , ಏನು ಮಾಡ್ತಾನೆ ಅಂತ ನಂಗಲ್ಲ ಅವ್ನ ಚಡ್ಡಿ ದೋಸ್ತುಗಳಿಗೂ ಗೊತ್ತಿರೋದು ಡೌಟು. ನಾ ಕೇಳಿದಾಗೆಲ್ಲಾ ಏನಾದ್ರೂ ಮಾತು ತಿರುಗಿಸ್ತಾನೆ . ಇಲ್ಲಾ ರೇಗ್ತಾನೆ. ನಾ ಅದಕ್ಕೆ ಬೇಜಾರಾಗಿ ಅದ್ನ ಕೇಳೋದೆ ಬಿಟ್ಟುಬಿಟ್ಟಿದೀನಿ. ನಿಂಗೆ ಇನ್ನೊಂದು ಪ್ಲೇಟು ಪಾನಿಪೂರಿ ಹೇಳ್ಲಾ ಅಥ್ವಾ ಹೊರಡೋಣ್ವಾ ಅಂದ್ಲು ಶಾರು. ಯಾಕೋ ಮಾತು ಎತ್ತೆತ್ತಲೋ ತಿರುಗ್ತಿರೋದ್ನ ನೋಡಿ ಶ್ವೇತಂಗೂ ಮಾತು ಮುಂದುವರಿಸೋ ಮೂಡು ಮುರುಟಿಹೋಗಿತ್ತು. ಪಾನಿಪೂರಿ ಅಂಗಡಿ ಕಹಾನಿ ಕ್ಲೋಸಾಗಿತ್ತು.

ಸೋಂಬೇರಿ ಶ್ಯಾಮ. ಕೊಳಕ ಸ್ಯಾಮ. ಬಡ್ಡಿ ಸ್ಯಾಮ ಅಂತ ನೆಂಟರಲ್ಲೆಲ್ಲಾ ಕುಖ್ಯಾತಿ ಪಡೆದಿದ್ದ ಶ್ಯಾಮನದು ಯಾರಿಗೂ ಹೇಳಲಾಗದ ದುರವಸ್ಥೆ. ಜೊತೆಗೋದಿದ ಗೆಳೆಯರೆಲ್ಲಾ ಎರಡು ಮೂರು ಕಂಪೆನಿ ಇಂಟರ್ವ್ಯೂ ಪಾಸು ಮಾಡಿ ಯಾವುದು ಅಂತ ಲೆಕ್ಕ ಹಾಕ್ತಿದ್ರೆ ಇವನದು ಶೂನ್ಯ ಸಂಪಾದನೆ. ಇವನ ಚಡ್ಡಿ ದೋಸ್ತುಗಳೆಲ್ಲಾ ಕೆಲಸಿಲ್ಲದ ಈ ಶ್ಯಾಮನ ಜೊತೆಗಿರದು ತಮ್ಮ ಸ್ಟೇಟಸ್ಸಿಗೆ ಅವಮಾನ ಅಂತ ಕಾಲೇಜು ಮುಗಿದು ಎರಡು ತಿಂಗಳಲ್ಲಿ ದೂರ ಸರಿದಿದ್ದರು. ಇಡೀ ದಿನ ಮನೇಲೇ ಇರ್ತಾನೆ. ಹೊರಗೆ ಹೋಗಿ ದುಡಿಯೋಕೇನು ದಾಡಿ ಅಂತ ಹೀಯಾಳಿಸೋ ಅಪ್ಪ, ಒಂದು ಗಡ್ಡ ಕೂಡ ಮಾಡೋಲ್ಲ. ಏನಾಗಿದೆ ಇವಂಗೆ. ನನ್ನ ಗೆಳತಿಯರು ಮನೆಗೆ ಬಂದ್ರೆ ಇವ ನನ್ನಣ್ಣ ಅಂತ ಹೇಳ್ಕೊಳ್ಳೋಕೆ ಅವಮಾನ ಆಗತ್ತೆ ನಂಗೆ ಅಂತ ಬಯ್ಯೋ ತಂಗಿ .. ಹಿಂಗೆ ಎಲ್ಲರ ಕೈಯಲ್ಲೂ ಹೀಯಾಳಿಸಿಕೊಳ್ತಿರಬೇಕಿದ್ರೆ ತನ್ನ ದುಃಖ ತೋಡಿಕೊಳ್ಳಲು ಶ್ಯಾಮನಿಗೆ ಸಿಗೋದಾದ್ರೂ ಯಾರು?  ಈ ಬಂಡ ಬಾಳು ಬದುಕೋದಕ್ಕಿಂತ ಸಾಯೋದೇ ಮೇಲಂತ ಎಷ್ಟೋ ಸಾರಿ ಅನಿಸಿದ್ರೂ ಚಿಕ್ಕಂದಿನಲ್ಲೇ ಕಾಯಿಲೆ ಹಿಡಿದು ಮಲಗಿದ್ದ ಅಮ್ಮನಿಗಿತ್ತ ಮಾತು ನೆನಪಾಗತ್ತೆ. ನಾನು ಓದಿ ಒಳ್ಳೇ ಕೆಲಸ ಹಿಡಿತೀನಮ್ಮ. ನೀನು ಪಟ್ಟ ಕಷ್ಟ , ಮಾಡಿದ ಕೂಲಿ ನನ್ನ ತಂಗಿಯೆಂತೂ ಮಾಡದೇ ಆರಾಮಾಗಿರೋ ತರ ನೋಡ್ಕೋತೀನಮ್ಮ ಅಂತ ಶ್ಯಾಮ ಕಣ್ಣೀರಿಡ್ತಿದ್ರೆ ಅವನಮ್ಮನ ಕಣ್ಣಲ್ಲಿ ಯಾವುದೋ ಕಾಲದ ನಂತರ ಒಂದು ಮಿಂಚು , ಮುಖದಲ್ಲೊಂದು ಮುಗುಳ್ನಗು ಮೂಡಿತ್ತು. ಇವನ ಕೈಯನ್ನು ಅಮ್ಮನ ಕೈಯನ್ನು ಗಟ್ಟಿಯಾಗಿ ಹಿಡಿದಿದ್ದೆಂತೂ ನಿಜ. ಆದ್ರೆ ಅವಳ ಪ್ರಾಣ ಪಕ್ಷಿಯನ್ನೆಂತೂ ಹಿಡಿಯಲಾಗಿರಲಿಲ್ಲ. ಅವಳು ಸತ್ತು ವರ್ಷವಾಗೋದ್ರೊಳಗೆ ತಂದೆ ಮರುಮದುವೆಯಾಗಿದ್ದೂ, ಇನ್ನೆರಡು ವರ್ಷ ಕಳೆಯೋದ್ರೊಳಗೆ ಚಿಕ್ಕಮ್ಮನಿಂದ ಒಂದು ಮುದ್ದಾದ ತಂಗಿ ಸಿಕ್ಕಿದ್ದೂ ಆಗಿತ್ತು. ಆ ತಂಗಿ ಬಾಯಲ್ಲಿ ಅಣ್ಣಾ, ಅಕ್ಕಾ ಅನಿಸಿಕೊಳ್ಳೋ ಭಾಗ್ಯವೂ ಇಲ್ಲದೇ ಮೊದಲ ಹೆಂಡತಿ ಮಕ್ಕಳಿಬ್ಬರೂ ಹಾಸ್ಟೆಲ್ಲಿಗೆ ದಬ್ಬಲ್ಪಟ್ಟಿದ್ದವು . ಅದೆಷ್ಟೋ ವರ್ಷ ಮನೆಯಿದ್ದರೂ ಅನಾಥನಿದ್ದಂತವ ಕೆಲಸವಿಲ್ಲದೇ ಪೇಟೆಯಲ್ಲಿ ಕೊಳೆತು ಬೇಜಾರಾಗಿ ಮನೆಗೆ ಬಂದಿದ್ದ. ಮನೆಗೆ ಬಂದರೆ ಈ ಪರಿ.. 

ದುಡ್ಡು, ಕೆಲಸ ಎರಡೂ ಇಲ್ಲದ ಹುಡುಗ ಅಂತ ಎಲ್ಲರ ಬಳಿಯೂ ತಾತ್ಸಾರ. ಯಾವುದೋ ಅಪ್ಲಿಕೇಶನ್ ಹಾಕಲೆಂದು ಅಪ್ಪನ ಬಳಿ ದುಡ್ಡು ಕೇಳಿ ಹೀಯಾಳಿಸಿಕೊಂಡಿದ್ದೇ ಕೊನೆ. ಆಮೇಲೆಂದೂ ಮನೆಯೆಲ್ಲಿ ದುಡ್ಡು ಕೇಳೋ ಧೈರ್ಯ ಬಂದಿರಲಿಲ್ಲ.  ನೆಂಟರೆನಿಸಿಕೊಂಡವ್ರತ್ರ ನೂರಿನ್ನೂರು ರೂಪಾಯಿ ಕೈಸಾಲ ಮಾಡಿದ್ದೇ ತಪ್ಪಾಯ್ತು. ಎಲ್ಲೆಡೆ ಸಾಲದ ಶ್ಯಾಮನಾಗಿಬಿಟ್ಟಿದ್ದ ಇವ. ಕೆಲಸವಿಲ್ಲದೇ ನೊಂದಿದ್ದಾನೆ ಹುಡುಗ. ಸಿಕ್ಕಾಗ ತೀರಿಸುತ್ತಾನೆ ಬಿಡು ಅನ್ನೋ ಉದಾರ ಭಾವ ಇವನ ಎಂತೆಂತಾ ಶ್ರೀಮಂತ ನೆಂಟರಿಗೂ ಬಂದಿರಲಿಲ್ಲ. ಊರಲ್ಲಿನ ಹೀಯಾಳಿಕೆಗಿಂತ ಪಟ್ಟಣ ಸೇರಿ ಅಲ್ಲಿ ಸಿಕ್ಕಿದ ಏನೋ ಒಂದು ಕೆಲಸ ಮಾಡ್ಕೊಂಡು ತನ್ನ ವಿದ್ಯೆಗೆ ತಕ್ಕ ಕೆಲಸ ಹುಡುಕಬಹುದೆಂಬ ಐಡಿಯಾ ಬಂದಿತ್ತು. ಪೀಡೆ ತೊಲಗಿದರೆ ಸಾಕೆಂಬ ಸಂತೋಷದಿಂದ ಪಟ್ಟಣಕ್ಕೆ ಹೋಗುವಷ್ಟಷ್ಟೇ ದುಡ್ಡು ಕೊಟ್ಟು ಚಿಕ್ಕಮ್ಮ ಪೇಟೆಗೆ ಕಳಿಸಿದ್ದರು. ಅಲ್ಲಲ್ಲ ದಬ್ಬಿದ್ದರು . ಒಂದು ರೂಪಾಯಿ ಜಾಸ್ತಿ ಬೇಕೆಂದು ಕೇಳೋ ಬಾಯಿ ಇವನಿಗೂ ಬಂದಿರಲಿಲ್ಲ. ಕೊಡಬೇಕೆಂಬ ಬುದ್ದಿ ಅವರಿಗೂ ಹೊಳೆದಿರಲಿಲ್ಲ.

ಪೇಟೆಗೆ ಬಂದು ದಿನಗಳುರುಳುತ್ತಿದ್ದವು. ಅಲ್ಲಿಲ್ಲಿ ಬೇಡಿ ಬೇಡಿ ಸಿಕ್ಕ ಸಣ್ಣ ಪುಟ್ಟ ಕೆಲಸ ಮಾಡಿದ್ರೂ ಅದು ದಿನದ ಎರಡು ಹೊತ್ತಿನ ಊಟಕ್ಕೆ ಸರಿಯಾಗುತ್ತಿತ್ತು. ಎಷ್ಟೋ ಸಲ ತಂಗಿಯಂದಿರ ನೆನಪಾಗುತ್ತಿತ್ತು. ಸಿಡುಕಿದರೂ ಅಪ್ಪ , ಚಿಕ್ಕಮ್ಮ ಅಪರೂಪಕ್ಕೆ ಆಡುತ್ತಿದ್ದ ಒಳ್ಳೇ ಮಾತುಗಳ ನೆನಪಾಗುತ್ತಿತ್ತು. ಹೇಗೇ ಇದ್ರೂ ಅದು ನಮ್ಮನೆ. ಅಲ್ಲಿಗೇ ಮರಳಿಬಿಡೋಣ. ಊರಲ್ಲೇ ಏನಾದ್ರೂ ಕೂಲಿ ನಾಲಿ ಮಾಡ್ಕೊಂಡು ಇದ್ದುಬಿಡೋಣ ಅನಿಸುತ್ತಿತ್ತು. ಆದ್ರೆ ದುಡ್ಡು ? ಹೌದು. ದುಡ್ಡುಳಿಸಬೇಕು. ಏನಾದ್ರೂ ಆಗಬೇಕು ಜೀವನದಲ್ಲಿ ಅನ್ನೋ ಬಯಕೆಗಳು ಹಲಬಾರಿ ಕಾಡ್ತಿದ್ವು. ಹಿಂಗೇ ತಿಂಗಳುಗಳುರಿದ್ದಾಗ ಅಚಾನಕ್ಕಾಗಿ ಅವ್ಳು ಕಂಡು ಬಿಟ್ಟಿದ್ಲು ಆ ಬೀದಿಯಲ್ಲಿ.. ಆ ದಿನ ಏನಾಯ್ತಪ ಅಂದ್ರೆ..

ಅವತ್ತು ಐಸ್ ಕ್ಯಾಂಡಿ ತಿನ್ನಬೇಕೆಂಬ ಬಹುದಿನದ ಬಯಕೆ ಆ ಮಂಜಷ್ಟೇ ತಣ್ಣಗೆ ಕೊರಿತಾ ಇತ್ತು. ಜೇಬಲ್ಲಿ ದುಡ್ಡಿಲ್ಲದೇ ಅಲ್ಲ. ಜೇಬು ಗಟ್ಟಿಯಿದ್ದರೆ ತಾನೇ ದುಡ್ಡಿರೋದು ! ಆ ಚಡ್ಡಿಗದೆಷ್ಟು ತೇಪೆ ಹಾಕಿದ್ದೇನೋ ನನಗೇ ಗೊತ್ತು. ಬೇಡೋದು ದರಿದ್ರವಂತೆ. ಹೌದು. ಆದ್ರೆ ಕೈಚಾಚದಿದ್ರೆ ಹೊಟ್ಟೆ ಸುಟ್ಟು ಹೊರಬರುವಂತಿರೋ ಉದರಾಗ್ನಿಯ ಶಮನ ಹೇಗೆ ? ಅಂತೂ ತಿಂಗಳೊಂದರ ಬೇಡುವಿಕೆಯ ನಂತರ ಹೇಗೋ ರೂಪಾಯಿ ಗಟ್ಟಿ ಉಳಿದಿತ್ತು. ಮನೆಯ ನೆನಪಾಗಿದ್ದರೆ ಆ ಗಟ್ಟಿಯ ಕರಗೋ ಮಂಜಿಗೆ ಸುರಿಯೋ ಮನಸ್ಸಾಗ್ತಿರಲಿಲ್ಲವೇನೋ. ಆದ್ರೂ ಏನೋ ಗಟ್ಟಿ ಮನಸ್ಸೇ ಕರಗು ಕ್ಯಾಂಡಿಯೆದುರು ಕರಗಿ ಹೋಗಿತ್ತು. ತಗೊಂಡ ಐಸ್ ಕ್ಯಾಂಡಿಯ ಬಾಯಿಗಿಡಬೇಕಷ್ಟೇ. ಎದುರಿಂದ ಅವಳು ಪ್ರತ್ಯಕ್ಷಳಾದಳು.. ಇದ್ದಿದ್ರಲ್ಲೇ ಚೆನ್ನಾಗಿರೋ ಡ್ರೆಸ್ಸಲ್ಲಿದೀನಿ ಅನ್ನೋದೇನೋ ಓಕೆ. ಆದ್ರೆ ನಾನು ಕ್ಯಾಂಡಿ ತಿಂತಿರೋದ್ನ ನೋಡಿ ನಂಗೂ ಕೊಡಿಸೆಂದು ಬಿಟ್ರೆ ದುಡ್ಡು ? ಏನೋ ಇಷ್ಟು ಕೊಳೆ ಬಟ್ಟೆ ? ಓ ಅದಾ ? ಇಲ್ಲೇ ನಮ್ಮನೆ. ಮನೆ ಕ್ಲೀನು ಮಾಡೋಕೆ ಅಂತ ಈ ತರದ ಬಟ್ಟೆ ಹಾಕ್ಕೊಂಡಿದ್ದೆ. ಮತ್ತೆ ನೀನು ? ನನ್ನ ನೋಡಲೊಬ್ಬ ಹುಡ್ಗ ಬರ್ತಾನಂತೆ. ಅದಕ್ಕೆ ಮನೆಗೆ ಏನೋ ತರೋಣ ಅಂತ ಹೊರಟಿದ್ದೆ. ಹೌದಾ ? ಸಂತೋಷ. ಏನ್ಮಾಡ್ತಿದ್ದಾನೆ ಹುಡ್ಗ. ಅವನೋ ಅಗರ್ಭ ಶ್ರೀಮಂತ.. ಹಿಂಗೆ ಮಾತು ಸಾಗ್ತಾ ಇದ್ರೆ ಹಿಂದೆ ಮರೆಮಾಚಿಕೊಂಡಿದ್ದ ಐಸ್ ಕ್ಯಾಂಡಿಯ ಅರ್ಧ ಕಕರಗಿಹೋಗಿತ್ತು. ಆ ಶೀತಲತೆಯ ತಡೆದುಕೊಳ್ಳಲಾಗದ ಕೈಯೊಂದಿಗೆ ಪ್ರೀತಿ ಸತ್ತ ಹೃದಯವೂ ಮರಗಟ್ಟಿಹೋಗಿತ್ತು. ಮದ್ವೆಗೆ ಕರಿತೀನಿ. ಮರಿಬೇಡ ಮತ್ತೆ ಅಂತ ಮುಂದೆ ಹೊರಟೇ ಹೋದ್ಲು. ಕ್ಯಾಂಡಿಯಂತೂ ದೊರಕಲಿಲ್ಲ. ಅದರ ಸಿಹಿ ಕಡ್ಡಿಯನ್ನಾದ್ರೂ ಸೀಪೋಣವೆಂದು ಉಳಿದ ಐಸಿಗೆ ಬಾಯಿಡೋ ಹೊತ್ತಿಗೆ ಏ ಅಂತ ಅವಳು ದೂರದಿಂದ್ಲೇ ತಿರಿಗಿದ್ಲು. ಇವನ ಕೈ ಹಿಂದೆ ಹೋಗಿತ್ತು ಅಚಾನಕ್ಕಾಗಿ. ನನ್ನ ಮದ್ವೆಗೆ ಈ ತರ ಭಿಕ್ಷುಕನ ತರ ಬಂದ್ಬಿಡೇಡ. ಸ್ವಲ್ಪನಾದ್ರೂ ಒಳ್ಳೆ ಬಟ್ಟೆ ಹಾಕ್ಕೊಂಬ ತಿಳೀತಾ. ಇವನ ಆಡಿಸುತ್ತಿದ್ದ ತಲೆಯಲ್ಲಿ ವಾರದ ನಂತರ ಸಿಕ್ಕಿದ್ದ ರೂಪಾಯಿ ಗಟ್ಟಿ ನೀರಾಗಿ ಹೋದ ನೋವಿತ್ತೋ, ಹೇಳಲಾಗದೇ ಒಳಗೇ ಉಳಿದ ಪ್ರೀತಿ ಕರಗಿಹೋದ ನೋವಿತ್ತು ಗೊತ್ತಿಲ್ಲ. ಕಣ್ಣುಗಳಲ್ಲಿ ಇವನಿಗೇ ಅರಿಯದೇ ಆ ನೋವು ನೀರ ರೂಪದಲ್ಲಿ ಇಳಿಯುತ್ತಿತ್ತು.

(ಮುಂದುವರೆಯಲಿದೆ….)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
10 years ago

Interesting!!!

2
0
Would love your thoughts, please comment.x
()
x