ಕೈಯಲ್ಲಿದ್ದ ಕರಗಿದ ಐಸ್ ಕ್ಯಾಂಡಿ ಪಟ್ಟಣಕ್ಕೆ ಬಂದು ಕಳೆದೇ ಹೋಗುತ್ತಿರುವ ಕಾಲದ ಬಗ್ಗೆ, ಇನ್ನೂ ದೊರಕದ ಭದ್ರ ಕೆಲಸದ ನೆನಪ ಹೊತ್ತು ತಂತು. ಬಂದೊಂದು ತಿಂಗಳಿನಲ್ಲೇ ಒಂದು ದಿನವೂ ಬಿಡದೆ ಇಂಟರ್ವ್ಯೂಗಳಿಗೆಂದು ಅಲೆದಿದ್ದರೆ ಏನಾದ್ರೂ ಕೆಲಸ ದಕ್ಕುತ್ತಿತ್ತೇನೋ. ಆದ್ರೆ ದಿನಾ ಅಲೆಯಲು ದುಡ್ಡೆಲ್ಲಿ ? ಕೆಲಸ ಹುಡುಕ್ತಿದಾನೆ ಬೇಕಾಗತ್ತೆ ಅಂತ ಅಪ್ಪ ತಿಳಿದು ಕೊಟ್ಟರೆ ತಾನೆ ಇವನಿಗೆ ದುಡ್ಡು ? ಸ್ನೇಹಿತರತ್ರ ಎಷ್ಟಂತ ಕೇಳೋದು ? ಕಂಡರೆ ಸಾಲ ಕೇಳ್ಬೋದು ಅಂತ ಇವನ ಕಾಲೇಜು ಗೆಳೆಯರೆಲ್ಲಾ ಸಂಬಂಧ ಕಳಚ್ಕೊಂಡೋರ ತರ ಕಣ್ಮರೆಯಾಗಿದ್ರು. ಇವನ ಸ್ಥಿತಿ ಅರಿತಿದ್ದ ಒಂದೆರಡು ಗೆಳೆಯರು ಸಹಾಯ ಮಾಡ್ತಿದ್ರೋ ಏನೋ ಆದ್ರೆ ಅವ್ರ ಸ್ನೇಹವಾದ್ರೂ ಉಳೀಲಿ ಸ್ವಲ್ಪ ದಿನ. ಸಾಲ ಕೇಳಿ ಸಣ್ಣೋನಾಗಬಾರ್ದು ಅಂತ ಶ್ಯಾಮನೇ ಅವರಿಂದ ದೂರಾಗಿ ಬಂದಿದ್ದ. ಪಟ್ಟಣದಲ್ಲಿ ಉಳಿಯೋಕೊಂದು ರೂಮು ಸಿಕ್ಕಿದ್ದೇ ಶ್ಯಾಮನ ಪುಣ್ಯ. ಅದಕ್ಕೆಂದು ತನ್ನ ಬಾಲ್ಯದ ಗೆಳೆಯ ಕಿಟ್ಟಿಗೆ ಅದೆಷ್ಟು ಥ್ಯಾಂಕ್ಸ್ ಹೇಳಿದ್ರೂ ಕಮ್ಮಿಯೇ.
ಕಿಟ್ಟಿ:
ಕಿಟ್ಟಿ ಮತ್ತು ಶ್ಯಾಮ ಎಸ್ಸೆಸ್ಸೆಲ್ಸಿವರೆಗೆ ಗೆಳೆಯರು. ಶ್ಯಾಮ ಎಸ್ಸೆಸ್ಸೆಲ್ಸಿಯಲ್ಲಿ ಶಾಲೆಗೇ ಫಸ್ಟ್ ಬಂದು ಪಿಯೂಸಿ ಸೇರಿದ್ರೆ ಕಿಟ್ಟಿ ಜಸ್ಟ್ ಪಾಸಾಗಿ ಮುಂದೆ ಓದೋ ಆಸೆಯಿಲ್ಲದೆ ಪಟ್ಟಣ ಸೇರಿದ್ದ. ಅಲ್ಲೇನೋ ವರ್ಕಶಾಪಲ್ಲಿ ಕೆಲ್ಸ ಮಾಡ್ತಾ ಇದ್ದಾನೆ ಅಂತ ಅವನು ಯಾವಾಗ್ಲೋ ಊರಿಗೆ ಬಂದಾಗ ಸಿಕ್ಕು ಮಾತಾಡಿದಾಗ ತಿಳಿದಿತ್ತು. ಶ್ಯಾಮನೆಂದ್ರೆ ಕಿಟ್ಟಿಗೆ ಅದೇನೋ ಅಭಿಮಾನ. ನಾವಂತೂ ಚೆನ್ನಾಗಿ ಓದಲಿಲ್ಲ. ನನ್ನ ಆತ್ಮೀಯ ಗೆಳೆಯ ಶಾಲೆಗೇ ಫಸ್ಟ್ ಬಂದಿದ್ದ ಎಸ್ಸೆಸ್ಸೆಲ್ಸಿಯಲ್ಲಿ. ಜೀವನದಲ್ಲಿ ದೊಡ್ಡ ಎತ್ತರಕ್ಕೆ ಹೋಗ್ತಾನವನು. ಅವನ ಆತ್ಮೀಯ ಗೆಳೆಯ ಅಂತ ಹೇಳ್ಕೊಳ್ಳೋದೇ ನನಗೊಂದು ಹೆಮ್ಮೆ ಅಂತ ಬೀಗ್ತಿದ್ದ ಎಷ್ಟೋ ಸಲ. ಹಿಂಗೇ ಒಮ್ಮೆ ಕಿಟ್ಟಿ ಊರಿಗೆ ಬಂದಾಗ ಶ್ಯಾಮ ಕಂಡಿದ್ದ. ಮಾತಾಡ್ಸಿದರೆ ಯಾಕೋ ಮುಂಚಿನ ಲವಲವಿಕೆಯಿರಲಿಲ್ಲ. ಯಾವಾಗ್ಲೂ ಉದಾಸನಾಗಿರುತ್ತಿದ್ದ. ಎರಡು ಮೂರು ದಿನ ಕೇಳಿ ಕೇಳಿ ತಲೆತಿಂದ ಬಳಿಕ ಶ್ಯಾಮ ಸತ್ಯ ಸಂಗತಿಯನ್ನು ಬಾಯ್ಬಿಟ್ಟಿದ್ದ. ತನಗೆ ಕೆಲಸವಿಲ್ಲದ ಬಗ್ಗೆ, ಅದಕ್ಕಾಗಿ ತನಗೆ ಎಲ್ಲೆಡೆ ಆಗುತ್ತಿರೋ ಅವಮಾನದ ಬಗ್ಗೆ, ಅದನ್ನೆಲ್ಲಾ ಕೇಳಿ ಕೇಳಿ ಜೀವನದ ಬಗ್ಗೆಯೇ ತನಗೆ ಜಿಗುಪ್ಸೆ ಮೂಡ್ತಿರೋ ಬಗ್ಗೆ ಎಳೆಯೆಳೆಯಾಗಿ ತನ್ನ ಬಾಲ್ಯದ ಗೆಳೆಯನ ಬಳಿ ಬಿಡಿಸಿಟ್ಟಿದ್ದ. ಬಾಲ್ಯದ ಗೆಳೆಯನಾದರೂ ಕಿಟ್ಟಿಯ ಬಳಿ ತನ್ನ ಪರಿಸ್ಥಿತಿ ಹೇಳ್ಕೊಳ್ಳಬೇಕಂದ್ರೆ ಶ್ಯಾಮನಿಗೆ ಹೃದಯವೇ ಬಾಯಿಗೆ ಬಂದಂಗಾಗಿತ್ತು. ಕಿಟ್ಟಿಗೆ ಕಷ್ಟಗಳು ಹೊಸದೇನಲ್ಲ. ಪಟ್ಟಣಕ್ಕೆ ಬರ್ಬೇಕು ಅಂತ ಯಾರ್ಯಾರ ಬಳಿಯೋ ಬೇಡಿದ್ದು, ಕೊನೆಗೆ ಯಾರೋ ಒಪ್ಪಿ ಇವನನ್ನ ಕರೆಸ್ಕೊಳ್ಳೋಕೆ ಒಪ್ಪಿದ್ದು. ಎರಡೊತ್ತಿನ ಊಟಕ್ಕೆ ರಾತ್ರೆಯವರೆಗೆ ದುಡಿಸಿಕೊಂಡ ದಿನಗಳು ನೆನಪಾದ್ವು. ಈಗ ಕೆಲಸ ಕಲಿತ ಬಳಿಕ ಪರ್ವಾಗಿಲ್ಲವಾದರೂ ತಾನೇನೋ ಓದಿಲ್ಲದವ. ಓದಿದ ತನ್ನ ಗೆಳೆಯನಿಗೂ ಕೆಲಸಕ್ಕೆ ಅಲೆಯೋ ಪರಿಸ್ಥಿತಿ ಬಂತಲ್ಲ ಅಂತ ಇವನ ಕಣ್ಣಲ್ಲೂ ನೀರೂರಿತ್ತು. ಇಲ್ಲಿದ್ದು ಪ್ರಯೋಜನವಿಲ್ಲ. ಪಟ್ಟಣಕ್ಕೆ ಬಂದುಬಿಡು. ನಿನ್ನ ಓದಿಗೆ ತಕ್ಕದಲ್ಲದಿದ್ರೂ ಏನೋ ಒಂದು ಕೆಲ್ಸ ಸಿಕ್ಕೇ ಸಿಗತ್ತೆ ಅಲ್ಲಿ. ಆ ಕೆಲ್ಸ ಮಾಡ್ಕೊಂಡೇ ಬೇರೆ ಕೆಲ್ಸ ಹುಡ್ಕೂವಂತೆ. ಅಲ್ಲಿ ಉಳ್ಕಳೋದೆಂಗೆ ಅಂತ ಏನೂ ಯೋಚ್ನೆ ಮಾಡ್ಬೇಡ. ನಮ್ಮ ರೂಮಿಗೇ ಬಂದು ಬಿಡು ಅಂದಿದ್ದ ಕಿಟ್ಟಿ. ಕಿಟ್ಟಿಯ ಔದಾರ್ಯತೆ ಕಂಡು ಶ್ಯಾಮನ ಕಣ್ಣೂ ತುಂಬಿ ಬಂದಿತ್ತು. ಯಾವ ಜನ್ಮದಲ್ಲಿ ತನ್ನ ಅಣ್ಣನಾಗಿದ್ದನೋ ಇವನು. ಈ ಸಲ ಗೆಳೆಯನಾಗಿ ಸಿಕ್ಕಿದ್ದಾನೆ. ಆದ್ರೆ ಅವನು ಹೇಳ್ತಾನಂತ ನಾನು ಹೋಗೋದು ಸರಿ ಇರಲ್ಲ. ಪಟ್ಟಣದಲ್ಲೊಂದು ಪುಕ್ಸಾಟೆ ರೂಮಿಗಾಗಿ ನಾನು ಈ ತರ ಡ್ರಾಮಾ ಮಾಡಿದ್ದೆ ಅಂದ್ಕೊಬಿಟ್ರೆ ಕೊನೆಗೆ ? !!. ಗೆಳೆಯರು ಅಂತ ಉಳಿದ ಕೆಲವೇ ಕೆಲವರಲ್ಲಿ ಇವನೂ ಒಬ್ಬ, ಇವನನ್ನೂ ದೂರ ಮಾಡ್ಕೊಳ್ಳೋದು ಬೇಡವೆಂದು ಇಲ್ಲಪ್ಪ. ಅದೆಲ್ಲಾ ಬೇಡ ಥ್ಯಾಂಕ್ಸ್ ಅಂದಿದ್ದ. ಶ್ಯಾಮನೇನೋ ಹುಟ್ಟಾ ಇಂತಾ ವಿಪರೀತ ಆಲೋಚನೆ ಬರುವವನು, ನಿರಾಶಾವಾದಿಯೂ ಆಗಿರಲಿಲ್ಲ. ಆದ್ರೆ ಸದ್ಯ ಅವನಿದ್ದ ಪರಿಸರ, ಕಾಲ ಅವನನ್ನು ಹಾಗೆ ಬದಲಾಯಿಸಿಬಿಟ್ಟಿತ್ತು. ಹಾಗಾಗಿ ಎಲ್ಲಾ ಅವಕಾಶಗಳ ಹಿಂದೂ ಅಪಾಯಗಳೇ ಕಾಣಿಸ್ತಿತ್ತು.
ಕಿಟ್ಟಿ ಪಟ್ಟು ಬಿಡಲಿಲ್ಲ. ಅಲ್ಲಪ್ಪಾ, ನೀನು ಮುಂಚೆ ಇದ್ದ ರೂಮುಗಳಷ್ಟು ದೊಡ್ಡದಿಲ್ಲದೇ ಇರಬಹುದು. ಬಡವರ ಇಕ್ಕಟ್ಟಾದ ರೂಮು ಇದು. ಆದ್ರೆ ನೀನೆಷ್ಟು ಸ್ವಾಭಿಮಾನಿ ಅಂತ ಗೊತ್ತು ನಂಗೆ. ನೀನು ಆ ಪಟ್ಟಣದ ಯಾವುದೋ ದೂರದ ನೆಂಟ್ರ ಮನೇಲಿ ಜೀವ ಹಿಂಜಿಕೊಂಡು ಅವರಂದ ಮಾತುಗಳನ್ನೆಲ್ಲಾ ಅನಿಸ್ಕೊಂಡು ಹಿಪ್ಪೆಯಾಗಿ ಬದುಕೋದ್ನ ನನಗೆ ಕಲ್ಪಿಸಿಕೊಳ್ಳೋಕೂ ಆಗಲ್ಲ. ಸುಮ್ನೇ ನನ್ನ ಮಾತು ಕೇಳು ಬಂದು ಬಿಡು ನಮ್ಮ ರೂಮಿಗೆ ಅಂದಿದ್ದ. ಶ್ಯಾಮನಿಗೆ ಕಿಟ್ಟಿಯೆಂದ ಮಾತು ನೂರು ಪ್ರತಿಶತ ಹೌದೆನ್ನಿಸಿ ಒಪ್ಪಿಯೇ ಬಿಡುತ್ತಿದ್ದನೇನೋ. ಆದ್ರೂ ಯಾಕೋ ತಡೆದಿದ್ದ. ತಾನೆಲ್ಲಿ , ಕಿಟ್ಟಿಯೆಲ್ಲಿ ತಾನು ಶಾಲೆಗೇ ಮೊದಲ ಬರುತ್ತಿದ್ದ ಪ್ರತಿಭಾವಂತ, ಕಿಟ್ಟಿಯೂ ಪಾಸಾಗಿದ್ದೇ ದೊಡ್ಡದೆನ್ನುವಂತ ಶತದಡ್ಡ. ಅವನ ರೂಮಲ್ಲಿ ನಾನಿರುವುದೆಂದ್ರೆ.ಛೇ. ಅನ್ನೋ ಅವನ ಹಳೆಯ ಅಹಮ್ಮೂ ಆ ಸಮಯದಲ್ಲಿ ಅವನನ್ನ ತಡೆದಿತ್ತಾ ಗೊತ್ತಿಲ್ಲ. ಪುಕ್ಸಟೆ ಇರಬೇಡಯ್ಯ. ನಿನಗೆ ಕೆಲ್ಸ ಸಿಕ್ಕಿದ ಮೇಲೆ ಬಾಡಿಗೆ ಅಂತ ಬಡ್ಡೀ ಸಮೇತ ನನಗೇ ದುಡ್ಡು ಕೊಡಯ್ಯ. ಸಂತೋಷದಿಂದ ಇಸ್ಕೋತೀನಿ. ನೀನಿಲ್ಲಿ ಹಂಗಿಸ್ಕೊಂಡು ಬದುಕ್ತಿರೋದನ್ನ ಜನ್ರ ಬಾಯಲ್ಲಿ ಕೇಳೋಕೆ ನಂಗೇ ಬೇಜಾರಾಗ್ತಿದೆ. ಬಂದು ಬಿಡೋ ಪಟ್ಟಣಕ್ಕೆ ಅಂದಿದ್ದ. ಕಿಟ್ಟಿ ಹೇಳಿದ ಮಾತುಗಳ ನಿರಾಕರಿಸೋ ಒಂದು ಕಾರಣಗಳೂ ಇಲ್ಲದಿದ್ದರೂ ಶ್ಯಾಮ ಅವನೊಂದಿಗೆ ಅವತ್ತು ಹೊರಡಲು ಒಪ್ಪಿರಲಿಲ್ಲ. ನಿನಗೆ ಯಾವತ್ತಾದ್ರೂ ಪೇಟೆಗೆ ಬರ್ಬೇಕು ಅನ್ನೋ ಮನಸ್ಸು ಬಂದ್ರೆ , ಆ ಮನಸ್ಸು ಬಂದೇ ಬರತ್ತೆ ಅಂದ್ಕೋತೀನಿ… ಮೊದಲು ನಂಗೇ ಕಾಲ್ಮಾಡು. ಅಂತ ತನ್ನ ಮೊಬೈಲ್ ನಂಬರ್ ಕೊಟ್ಟು ಕೊನೆಗೂ ತನ್ನ ಸ್ನೇಹಿತನ ತನ್ನ ಜೊತೆ ಕರೆದೊಯ್ಯಲಾಗದ ಬೇಸರಕ್ಕೆ ಸಪ್ಪೆ ಮೊಗದವನಾಗಿ ಹೋಗಿದ್ದ ಕಿಟ್ಟಿ. ಶ್ಯಾಮನೇನು ಬಯಸಿದ್ನೋ ವಿಧಿಯೇನು ಬಯಸಿತ್ತೋ ಗೊತ್ತಿಲ್ಲ. ಅದಾಗಿ ಎರಡೇ ದಿನಗಳಲ್ಲಿ ಶ್ಯಾಮ ಪೇಟೆಗೆ ಹೊರಟು ಕಿಟ್ಟಿಯ ರೂಮು ಸೇರಿದ್ದ.
ರೂಮೆಂದರೆ ಕಿಟ್ಟಿ ಹೇಳಿದಂತೆ ಚಿಕ್ಕದೇ. ನಾಲ್ಕು ಜನ ಒಟ್ಟಿಗೆ ಮಲಗಿದರೆ ಒಳಗೆ ಬರಬೇಕೆನ್ನೋ ಮತ್ತೊಬ್ಬ ಇವರನ್ನು ತುಳಿದೇ ಬರಬೇಕಿತ್ತು. ಅದೇ ಅವರ ಅಡಿಗೆ ಮನೆ. ಅದೇ ಡೈನಿಂಗ್ ಹಾಲು ! ಅದೇ ಬೆಡ್ ರೂಮು !!! ಅದೇ ವರಾಂಡ . ಕಿಷ್ಕಿಂದೆಯಾಗಿದ್ದ ರೂಮು ಶ್ಯಾಮನಿಗೆ ಏನೂ ಅನಿಸುತ್ತಿರಲಿಲ್ಲ. ತನ್ನ ಕೆಲಸ ಹುಡುಕುವಿಕೆಯ ಬಗ್ಗೆಯಾಗಲಿ , ತಾನು ಪುಕ್ಕಸಟ್ಟೆ ರೂಮು ಕೊಡಿಸಿದ್ದೇನೆಂಬ ಒಣ ಜಂಭವನ್ನಾಗಲಿ ತೋರದೇ ಊರಲ್ಲಿ ಹೇಗಿದ್ದನೋ ಈಗಲೂ ಹಾಗೇ ಇರೋ ಕಿಟ್ಟಿಯ ಹೃದಯ ವೈಶಾಲ್ಯತೆಯ ಬಗ್ಗೆ ಹೆಮ್ಮೆಯಾಗುತ್ತಿತ್ತು. ಎಂದೋ ಹುಟ್ಟಿದ್ದ ಕ್ಲಾಸಲ್ಲಿ ಟಾಪರ್ರಾದ ತಾನೇ ಮೇಲು. ಕಿಟ್ಟಿಯಂತಹ ಶತದಡ್ಡರಾಗಿ ಬದುಕೋದು ಒಂದು ಬಾಳೇ ಎಂಬಂತ ಪುಗಸಟ್ಟೆ ಅಹಮಿಕೆ, ತಾತ್ಸಾರಗಳು ಸತ್ತು ಹೋಗಿದ್ದವು.
ಎಲ್ಲಾದ್ರೂ ಇಂಟರ್ವ್ಯೂಗೆ ಕರಿತಿದಾರಾ ಅಂತ ಹುಡುಕೋದ್ರಲ್ಲೇ ಮೊದಲ ಎರಡು ದಿನಗಳು ಕಳೆದುಹೋಗಿದ್ವು. ಮೊದಲೆರಡು ದಿನಗಳೂ ಕಿಟ್ಟಿಯ ಮನೆಯಲ್ಲೇ ಹೊಟ್ಟೆಗೇನಾದ್ರೂ ಸಿಕ್ಕುತ್ತಿದ್ರಿಂದ ಪೇಟೆಯ ಹಸಿವಿನ ಭೀಕರತೆ ಅರಿವಾಗಿರ್ಲಿಲ್ಲ ಶ್ಯಾಮನಿಗೆ. ಮೂರನೆಯ ದಿನ ಹೊರಟಿದ್ದ ಕೆಲಸದ ಭೇಟೆಗೆ. ಯಾವುದೋ ಕಂಪೆನಿ. ಅದಿದ್ದದೇ ಒಂದು ಮೂಲೆ. ಕಿಟ್ಟಿಯ ರೂಮಿದ್ದಿದ್ದೇ ಒಂದು ಮೂಲೆ. ಬೆಳಗ್ಗೆ ಎಂಟಕ್ಕೇ ಹೊರಟಿದ್ದ ಶ್ಯಾಮ ಆ ಮೂಲೆ ಮುಟ್ಟೋ ಹೊತ್ತಿಗೆ ಹನ್ನೊಂದಾಗಿತ್ತು. ಇದ್ದ ಮೂರು ಖಾಲಿ ಜಾಗಗಳಿಗೆ ಇಪ್ಪತ್ತು ಜನ ಬಂದಿದ್ರು! ಹೋದವರಿಗೆಲ್ಲಾ ಮೊದಲು ಅದೆಂತದೋ ಬರೆಯೋ ಪರೀಕ್ಷೆ ಕೊಟ್ಟಿದ್ರು. ರಿಟನ್ ರೌಂಡ್ ಅಂತೆ. ಕಾಲೇಜು ದಿನಗಳಲ್ಲಿ ಇಂತಹ ಹಲವಾರು ಪರೀಕ್ಷೆ ಎದುರಿಸಿದ್ದ ಶ್ಯಾಮನಿಗೆ ಇದೇನು ಹೊಸದಲ್ಲ. ಅದರಲ್ಲಿ ಸುಲಭವಾಗೇ ಪಾಸಾಗಿದ್ದ. ಅದಾದ ಮೇಲೆ ಪಾಸಾದ ೧೮ ಜನರನ್ನ ಮೂರು ಗ್ರೂಪು ಮಾಡಿ ಗ್ರೂಪ್ ಡಿಸ್ಕಷನ್ ಅಂತ ಮಾಡಿದ್ರು. ಅದರಲ್ಲಿ ಶ್ಯಾಮನಿದ್ದ ಗ್ರೂಪಿಗೆ ಬಂದ ವಿಷಯ ಉದ್ಯೋಗಗಳಲ್ಲಿ ಮೀಸಲಾತಿ ಇರ್ಬೇಕೆ ಬೇಡ್ವೆ ಅಂತ. ಮೊದಲೇ ಕೆಲಸವಿಲ್ಲದೇ ಹೈರಾಣಾಗಿದ್ದ ಶ್ಯಾಮ ಮನೆಯಲ್ಲಿ ಒಳ್ಳೊಳ್ಳೆ ಆಸ್ತಿಪಾಸ್ತಿಯಿದ್ದರೂ ಮೀಸಲಾತಿಯೆಂಬ ಒಂದೇ ಕಾರಣಕ್ಕೆ ಕೆಲಸ ಗಿಟ್ಟಿಸಿದ್ದ ಗೆಳೆಯರ ಬಗ್ಗೆ, ತಮಗೂ ಒಂದು ಮೀಸಲಾತಿಯಿದೆ ಅನ್ನೋದನ್ನೇ ಅರಿಯದೇ ಹಳ್ಳಿಮೂಲೆಗಳಲ್ಲೇ ಉಳಿದು ಮೂಲಭೂತ ಶಿಕ್ಷಣದಿಂದಲೂ ವಂಚಿತರಾಗುತ್ತಿರುವ ಜನರನ್ನೇ ನೋಡಿದ್ದರಿಂದ ಅದರ ಬಗ್ಗೆ ಚೆನ್ನಾಗಿ ಅಭಿಪ್ರಾಯ ಹಂಚಿಕೊಂಡಿದ್ದ. ಇವನ ಮಾತುಗಳಂದ್ರೆ ಬರೀ ಮಾತುಗಳಾಗ್ತಿರಲಿಲ್ಲ. ಉಳಿದವರ ಅಭಿಪ್ರಾಯಕ್ಕೆ ತಲೆದೂಗುವಿಕೆ, ಮತ್ತೊಬ್ಬರು ಯಾವುದೋ ವಿಷಯ ಮಂಡಿಸೋಕೆ ಹೋಗಿ ಸಿಕ್ಕಿಹಾಕಿಕೊಂಡಾಗ ಅಲ್ಲಿ ಸಹಕರಿಸುವಿಕೆ.. ಇಂತಹ ಗುಣಗಳು ಇವನ ಗ್ರೂಪಿನಲ್ಲಿದ್ದ ಉಳಿದವರಿಗೂ ಇವನು ಇಷ್ಟವಾಗೋ ಹಾಗೆ ಮಾಡಿಬಿಟ್ಟಿದ್ವು. ಇವನ ಗ್ರೂಪಿನಲ್ಲೇ ಹೆಚ್ಚು ಜನ ಮುಂದಿನ ರೌಂಡಿಗೆ ಆಯ್ಕೆಯಾಗಿದ್ರು ಅಂದ ಮೇಲೆ ಅವರ ಕಣ್ಮಣಿ ಶ್ಯಾಮನೂ ಆಯ್ಕೆಯಾಗಿದ್ದ ಅನ್ನೋದನ್ನ ಹೇಳಬೇಕಾಗಿರ್ಲಿಲ್ಲ. ಅದಾದ ಮೇಲೆ ಟೆಕ್ನಿಕಲ್ ರೌಂಡು. ಓದಲ್ಲಿ ಮುಂದಿದ್ದ ಶ್ಯಾಮ ಅದರಲ್ಲೂ ಸಹಜವಾಗೇ ಆಯ್ಕೆಯಾಗೋ ನಿರೀಕ್ಷೆಯಲ್ಲಿದ್ದ . ಅದರ ಮುಂದಿನದು ಮಾನವ ಸಂಪನ್ಮೂಲ ಅಥವಾ ಹೆಚ್.ಆರ್ ರೌಂಡ್ ರೌಂಡು. ಅದ್ರಲ್ಲೇನು ಹೊಸದು ಕೇಳ್ತಾರೋ ಅನ್ನೋ ಚಿಂತೆಯಲ್ಲಿದ್ದ. ಟೆಕ್ನಿಕಲ್ಲಲ್ಲಿ ಆಯ್ಕೆಯಾಗಿರಬಹುದಾದ ತನ್ನ ಕರಿತಾರೆ ಕರಿತಾರೆ ಮುಂದಿನ ರೌಂಡಿಗೆ ಅಂತ ಕಾದೇ ಕಾದ. ಇವ್ನ ನಂತರ ಟೆಕ್ನಿಕಲ್ಗೆ ಹೋದವ್ರನ್ನೆಲ್ಲಾ ಮುಂದಿನ ರೌಂಡಿಗೆ ಕರೆದಾಗಿತ್ತು ಇವನನ್ನ ಕರೆದಿರ್ಲಿಲ್ಲ. ಟೆಕ್ನಿಕಲ್ಲಲ್ಲೇ ಆಯ್ಕೆಯಾಗಲಿಲ್ವಾ ನಾನು ಅನ್ನೋ ಶಾಕಾಗಿತ್ತು ಶ್ಯಾಮನಿಗೆ. ಇನ್ನೇನು ಟೆಕ್ನಿಕಲ್ಲಿನ ಕೊನೆಯ ಅಭ್ಯರ್ಥಿಯನ್ನು ಒಳಗೆ ಕರೆಯಬೇಕು. ಅದಕ್ಕೆ ಮುಂಚೆ ಒಂದು ಅನೌಂಸ್ಮೆಂಟು. ಶ್ಯಾಮನನ್ನು ಸೀದಾ ಐದನೇ ಮತ್ತು ಕೊನೆಯ ರೌಂಡಾದ ಮ್ಯಾನೇಜ್ಮೆಂಟ್ ರೌಂಡಿಗೆ ಕರೆದಿದ್ದರು!! ಮೊದಲ ರೌಂಡುಗಳಲ್ಲಿ ಶ್ಯಾಮನ ಪ್ರತಿಭೆಯನ್ನು ಗುರುತಿಸಿದ್ದ ಕಂಪೆನಿಯವ್ರು ಇವ್ನಿಗೆ ಸೀದಾ ಕೊನೆಯ ರೌಂಡಿಗೆ ಕಳಿಸಿಬಿಟ್ಟಿದ್ರು!.
ಶ್ಯಾಮನಿಗೆ ಆಕಾಶಕ್ಕೆ ಮೂರೇ ಗೇಣು ಅನ್ನೊ ತರದ ಅನುಭವ. ತನ್ನಿಷ್ಟು ದಿನದ ಕಷ್ಟಗಳೆಲ್ಲಾ ಕೊಚ್ಚಿಹೋಗೋ ದಿನ ಕೊನೆಗೂ ಬರ್ತಾ ಇದೆ ಅನ್ನೋ ಖುಷಿ ಅವ್ನಿಗೆ. ಮ್ಯಾನೇಜ್ಮೆಂಟು ರೌಂಡು ಶುರುವಾಯ್ತು ಮಧ್ಯಾಹ್ನ ಎರಡರ ಹೊತ್ತಿಗೆ. ಹೊಟ್ಟೆ ಹಸೀತಾ ಇತ್ತು. ಆದ್ರೆ ಪೇಟೆ ಅಂದ್ಲೇಲೆ ಅಲ್ಲೆಲ್ಲಾ ಕಾಸ್ಟ್ಲೀ ದುನಿಯಾ.ಅಲ್ಲೇ ಊಟ ಮಾಡೋಕೋಗಿದ್ರೆ ರೂಮಿಗೆ ವಾಪಾಸಾಗೋಕೆ ದುಡ್ಡಿರ್ಲಿಲ್ಲ !! ಹಸೀತಿರೋ ಹೊಟ್ಟೆ ಮೇಲೆ ಮ್ಯಾನೇಜ್ಮೆಂಟಿನ ಪ್ರಶ್ನೆಗಳ ಸುರಿಮಳೆ ಸಾಗೇ ಸಾಗಿತ್ತು ! ಶ್ಯಾಮ ಒಪ್ಪಿಕೊಂಡೇ ಬಿಡುತ್ತಿದ್ದನೇನೋ. ಆದರೆ ತನಗೆ ಇಂತಿಷ್ಟು ಸಂಬಳ ಸಿಗಬಹುದೇನೋ ಅನ್ನೋ ಒಂದು ನಿರೀಕ್ಷೆಯಿತ್ತು. ಆದ್ರೆ ಕಂಪೆನಿಯವರ ನಿರೀಕ್ಷೆಯೇ ಬೇರೆಯಿತ್ತು. ಇವನ ನಿರೀಕ್ಷೆಯಷ್ಟು ಅವರು ಕೊಡಲೊಪ್ಪದ ಕಾರಣ ಮಧ್ಯಾಹ್ನ ಮೂರರ ಬಿಸಿನಲ್ಲಿ ಹಸಿದ ಹೊಟ್ಟೆಯಲ್ಲಿ, ಬೇಸರದ ಮನಸ್ಸಲ್ಲಿ ಕಿಟ್ಟಿ ಮನೆ ಕಡೆ ಹೋಗೋ ಬಸ್ಸು ಹತ್ತಿದ್ದ. ಕಿಟ್ಟಿಯೇನೋ ಸಂಜೆ ಬೇಗ ಬಂದು ಶ್ಯಾಮನಿಗೆ ಕಾಯ್ತಾ ಇದ್ದ . ಆದ್ರೆ ಟ್ರಾಫಿಕ್ಕಲ್ಲಿ ಸಿಕ್ಕಾಕಿಕೊಂಡ ಶ್ಯಾಮ ಮನೆಗೆ ಬರೋ ಹೊತ್ತಿಗೆ ಹೈರಾಣಾಗಿ ಹೋಗಿದ್ದ. ಕೆಲಸವಿಲ್ಲದ ನೋವು ಹಸಿದ ಹೊಟ್ಟೆಯ ಚುರುಕು ಎಲ್ಲಾ ಶ್ಯಾಮನನ್ನು ಕಿತ್ತು ತಿನ್ನುವಂತಾಗುತ್ತಿತ್ತು. ಅಂತೂ ಮನೆ ಸೇರಿದ ಶ್ಯಾಮ ಅಲ್ಲಿ ಸಿಕ್ಕ ನೀರನ್ನೇ ಗಟ ಗಟ ಕುಡಿದ. ಹೋದ ಅರ್ಧ ಜೀವ ಬಂದಂಗಾಯ್ತು. ಇವ ಸುಧಾರಿಸ್ಕೊಳ್ಳೋ ಹೊತ್ತಿಗೆ ಹೇಗಾಯ್ತೋ ಇಂಟವ್ರ್ಯೂ ಅಂದ ಕಿಟ್ಟಿ ನಿಧಾನಕ್ಕೆ . ಹಿಂಗಿಂಗಾಯ್ತು ಅಂದನಿವ. ಎಲ್ಲಾ ಕತೆ ಕೇಳಿದ ಕಿಟ್ಟಿಯೇ ಕಂಪೆನಿಯವ್ರಿಗೆ ಬಯ್ದ. ನಿನ್ನಂತ ತಲೆನಾ ತಗೋಳೋ ಯೋಗ್ಯತೆಯಿಲ್ಲ ಬಿಡು ಅವ್ರಿಗೆ. ಇದಲ್ಲ ಅಂದ್ರೆ ಇನ್ಯಾವುದೋ ಒಂದು ಸಿಗತ್ತೆ ಅಂದನವ. ಅದು ಹೋಗ್ಲಿ ಊಟ ಆಯ್ತಾ. ಮಧ್ಯಾಹ್ನ ಹೆಂಗಿತ್ತು. ಆ ಕಂಪೆನಿಯ ಊಟ ಹೆಂಗಿತ್ತು ಅಂದ ಕುತೂಹಲದಲ್ಲಿ ಕಿಟ್ಟಿ. ಶ್ಯಾಮನ ಬಾಯಲ್ಲಿ ಬೆಬೆಬೆ ಅನ್ನೋ ತಡವರಿಕೆಗಳ ಬಿಟ್ರೆ ಇನ್ನೇನೋ ಹೊರಡಲಿಲ್ಲ. ದಿನಾ ಸುಳ್ಳು ಹೇಳೋರಿಗೆ ತಕ್ಷಣಕ್ಕೊಂದು ಸುಳ್ಳು ಕಟ್ಟಿ ಹೇಳೋದು ದೊಡ್ಡ ವಿಷಯವಲ್ಲ. ಆದ್ರೆ ಶ್ಯಾಮನಿಗೆ ಹಾಗಲ್ಲವಲ್ಲ. ಇವನ ಸೊರಗಿದ ಮುಖ ನೋಡೇ ಕಿಟ್ಟಿಗೆ ಬೆಳಗ್ಗೆ ತಿಂಡಿಯ ನಂತರ ಏನೂ ತಿಂದವನಲ್ಲ ಇವ ಅಂತ ಗೊತ್ತಾಗಿಹೋಯ್ತು. ಅಲ್ಲೇ ಪಕ್ಕದಲ್ಲಿದ್ದ ಅಂಗಡಿಯಿಂದ ಬ್ರೆಡ್ಡು ಪಾಕೇಟೊಂದ ತಂದು ಕೊಟ್ಟು, ಒಂದ್ಕಾಲು ಘಂಟೆ ಇರು ಏನಾದ್ರೂ ಅಡ್ಗೆ ಮಾಡ್ತೀನಿ ಅಂತ ಏನೋ ಮಾಡೋಕೆ ಶುರು ಮಾಡಿದ್ದ ಕಿಟ್ಟಿ.
ಬರೀ ಬ್ರೆಡ್ಡೊಂದೇ ಕೊಟ್ರೆ ಹೆಂಗೆ ಜೊತೆಗೇನಾದ್ರೂ ಕೊಡ್ಬೇಕಿತ್ತಲ್ವಾ ಅನ್ನೋದು ಮರೆಗುಳಿ ಪ್ರೊಫೆಸರ್ರಾದ ಕಿಟ್ಟಿಗೆ ಹೊಳೆಯೋ ಹೊತ್ತಿಗೆ ಐದು ನಿಮಿಷವೇ ಆಗಿತ್ತು. ಬ್ರೆಡ್ಡೆಂದರೆ ರೋಗಿಗಳ ಆಹಾರವಂತ ಎಂದೂ ತಿಂದವನಲ್ಲ ಕಿಟ್ಟಿ. ಆದ್ರೂ ತಕ್ಷಣಕ್ಕೇನಾದ್ರೂ ತಿನ್ನೋದಕ್ಕೆ ಕೊಡಬೇಕು ಬೆಳಗಿಂದ ಹಸಿದ ಗೆಳೆಯನಿಗೆ ಅನ್ನೋ ತಲೆಯಲ್ಲಿದ್ದವನಿಗೆ ಏನು ಕೊಡೋದು ಅಂತ್ಲೇ ಹೊಳೆದಿರಲಿಲ್ಲ. ಕೊನೆಗೆ ಶ್ಯಾಮನಿಗೆ ಮುಂಚೆಯಿಂದ್ಲೂ ಬ್ರೆಡ್ಡಂದ್ರೆ ಇಷ್ಟ ಅನ್ನೋದು ನೆನ್ಪಾಗಿ ಪಕ್ಕದ ಅಂಗಡಿಯಿಂದ ಬ್ರೆಡ್ ತಂದುಕೊಟ್ಟಿದ್ದ. ಐದು ನಿಮಿಷದ ನಂತರ ನೋಡ್ತಾನೆ ಶ್ಯಾಮನ ಕೈಲಿ ಬರೀ ಬ್ರೆಡ್ಡಿನ ಕವರ್ ಉಳಿದಿತ್ತು.. ಹಸಿವೆಂದರೆ ಹಾಗೇ.. ಚೆನ್ನಾಗಿ ಹಸಿದಾಗ ಬರೀ ಬ್ರೆಡ್ಡೆನು ಬರೀ ಅನ್ನ ಸಿಕ್ಕಿದ್ರೂ ಅದನ್ನು ತಿಂದುಬಿಡುತ್ತಿದ್ದನೇನೋ ಶ್ಯಾಮ. ಮುಂದಿನ ಸಲ ಹೋಗ್ತಾ ಎರಡು ಇಂಟರ್ವ್ಯೂಗೆ ಹೋಗೋ ಬದ್ಲು ಒಂದಕ್ಕೆ ಹೋದ್ರೂ ಸರಿಯೇ ಆದ್ರೆ ಮಧ್ಯಾಹ್ನದ ಊಟಕ್ಕೆಂದೇ ಹೋಗುವಾಗ ಸ್ವಲ್ಪ ಜಾಸ್ತಿ ದುಡ್ಡು ತಗೊಂಡು ಹೋಗಬೇಕೆಂದು ನಿರ್ಧರಿಸಿದ ಶ್ಯಾಮ. ಆದ್ರೆ ಇವನಿಗೆ ಹೋಗಬೇಕೆಂದ ತಕ್ಷಣ ಇಂಟರ್ವ್ಯೂ ಸಿಕ್ಕೀತೆ.. ವಾರಕ್ಕೊಂದೋ , ಎಂಟತ್ತು ದಿನಕ್ಕೊಂದು ಇಂಟರ್ವ್ಯೂ ಎಲ್ಲೋ ಇರುವ ಬಗ್ಗೆ ಇವನ ಅಳಿದುಳಿದ ಗೆಳೆಯರಿಂದ ತಿಳಿಯುತ್ತಿತ್ತು. ಆದ್ರೆ ಎಲ್ಲೆಡೆ ಮೊದಲಿನ ತರದ್ದೇ ಪರಿಸ್ಥಿತಿ. ಒಂದಿಷ್ಟು ಗಂಟಲು ಶೋಷಣೆಯ ನಂತರ ನಿರಾಸೆಯ ಮರಳುವಿಕೆ. ಹಿಂಗೇ ಒಂದು ತಿಂಗಳು ನಿರಾಸೆಯ ದಿನಗಳಲ್ಲಿ ಜತೆಗಿದ್ದ ಕಿಟ್ಟಿಯ ಧೈರ್ಯದ ಮಾತುಗಳೇ ಆಶಾಕಿರಣ. ಹೀಗಿರುವಲ್ಲಿ ಇದ್ದಕ್ಕಿದ್ದಂಗೆ ಆಕೆ ಸಿಕ್ಕಿದ್ಲು. ಕಂಡ ಕುಸುಮವೊಂದು ಹಾಗೇ ಕಮರಿಹೋದಂತೆ ಅವಳೂ ಮಾತಾಡಿ ಮತ್ತೆ ದುಃಖವನ್ನೇ ಇತ್ತು ಮರೆಯಾಗಿದ್ದಳು. ಇದೇ ನೋವಲ್ಲಿದ್ದವನಿಗೆ ಮತ್ತೂ ಒಂದೆರಡು ವಾರಗಳು ಕಳೆಯಿತು. ಅವಳೇನಾದಳೋ , ಮದುವೆಯೇನಾಯಿತೋ ಅನ್ನೋದನ್ನ ತಿಳಿಯೋದಕ್ಕೆ ಇವನ ಕೆಲಸದ ಬೇಟೆಯಲ್ಲಿ ಸಮಯವಿದ್ದರೆ ತಾನೆ. ಹಿಂಗೇ ಕಳೆಯುತ್ತಿದ್ದ ದಿನಗಳಲ್ಲೊಂದು ದಿನ ಕೊನೆಗೂ ಶ್ಯಾಮನ ಭವಿಷ್ಯವನ್ನೇ ಬದಲಾಯಿಸುವ ದಿನವಾಗಿಹೋಯ್ತು.
(ಮುಂದುವರಿಯಲಿದೆ)
good going….:)
ತುಂಬಾ ಚೆನ್ನಾಗಿದೆ.