ಇಲ್ಲಿಯವರೆಗೆ:
ಕಿಟ್ಟಿ-ಶ್ಯಾಮ ಶಾರ್ವರಿ-ಶ್ವೇತರಿಗೆ ಬಾಲ್ಯದಿಂದಲೂ ಸ್ನೇಹ. ಕಿಟ್ಟಿ ಹತ್ತಕ್ಕೆ ಓದು ನಿಲ್ಲಿಸಿ ಗ್ಯಾರೇಜ್ ಸೇರಿದ್ರೆ ಉಳಿದವರೆಲ್ಲಾ ಓದು ಮುಂದುವರೆಸಿ ಬೇರ್ಬೇರೆ ಕೆಲಸ ಹಿಡಿಯುತ್ತಾರೆ. ಕೆಲಸವಿಲ್ಲದ ಶ್ಯಾಮನ ಒದ್ದಾಟದ ದಿನಗಳು ಮುಗಿದು ಕೊನೆಗೂ ಒಂದು ಕೆಲಸವೊಂದು ಸಿಕ್ಕಿದೆ ಅವನಿಗೆ. ಶಾರ್ವರಿಗೆ ಕಾಲೇಜಲ್ಲೇ ಒಂದು ಕಂಪೆನಿಯಲ್ಲಿ ಆಯ್ಕೆಯಾಗಿದ್ದರೆ ಶ್ವೇತ ಬಾನುಲಿ ಉದ್ಘೋಷಕಿಯಾಗುವತ್ತ ಹೆಜ್ಜೆ ಹಾಕುತ್ತಾಳೆ. ಹಿಂಗೆ ಗೆಳೆಯರದ್ದು ಒಂದೊಂದು ದಿಕ್ಕು, ಒಂದೊಂದು ಗುರಿ. ಕಾಲೇಜಲ್ಲಿದ್ದ ಶ್ಯಾಮ-ಶಾರ್ವರಿಯ ನಡುವಿನ ಸಮಾನ ಮನಸ್ಥಿತಿ, ಆಕರ್ಷಣೆಗಳು ಅವರನ್ನು ಬದುಕಿನೋಟದಲ್ಲಿ ಒಂದು ಮಾಡುತ್ತಾ ಅಥವಾ ಬದುಕನ್ನೇ ಛಿದ್ರಗೊಳಿಸುತ್ತಾ ಅನ್ನೋದು ಉರುಳುತ್ತಿರುವ ಕಾಲನಿಗೇ ಗೊತ್ತು.
ಶಾರ್ವರಿಯಿದ್ದ ಹಳೇ ಪ್ರಾಜೆಕ್ಟು ಮುಗಿದು ಹೊಸದು ಶುರುವಾಗಿತ್ತು. ಅದರಲ್ಲಿ ಅವಳಿಗೆ ಅಮೇರಿಕಾ, ಸ್ವೀಡನ್, ಜಪಾನ್ ಹೀಗೆ ಪ್ರಪಂಚದಾದ್ಯಂತ ಇರುವ ಕಕ್ಷಿದಾರರ ಜೊತೆ(client) ಜೊತೆ ಕೆಲಸ ಮಾಡಬೇಕಾಗುತ್ತಿತ್ತು.ಹಂಗಾಗಿ ಶಿಫ್ಟುಗಳು, ತಿಂಗಳಿಗೊಮ್ಮೆಯ ರಾತ್ರಿ ಪಾಳಿ ಕಾಯಮ್ಮಾಗಿ ಬಿಟ್ಟಿತ್ತು. ಈ ರಾತ್ರಿ ಪಾಳಿಯೆಂದರೆ ಹಲವೆಡೆ ಹಲವು ತರ. ಕೆಲವು ಕಡೆ ಸಂಜೆ ಆರರಿಂದ ಮಧ್ಯರಾತ್ರಿ ಮೂರರವರೆಗೆ, ಕೆಲವರದ್ದು ಸಂಜೆ ಎಂಟರಿಂದ ಬೆಳಗಿನ ಏಳರವರೆಗೆ, ಕೆಲವರದ್ದು ರಾತ್ರಿ ಹತ್ತೂವರೆಯಿಂದ ಬೆಳಗಿನ ಆರರವರೆಗೆ.. ಹಿಂಗೆ ಹತ್ತು ಹಲವು ಸಮಯಗಳು. ಶಾರ್ವರಿಗೆ ರಾತ್ರೆ ಹತ್ತೂವರೆಯಿಂದ ಬೆಳಗಿನ ಆರರವರೆಗಿನ ನೈಟ್ ಶಿಫ್ಟು ಅಂತ ಮಾತಾಗಿತ್ತು. ಮೊದಲ ಮೂರು ವಾರಗಳ ನಂತರ ನೈಟ್ ಶಿಫ್ಟು ಶುರುವಾಗಿತ್ತು ಶಾರ್ವರಿಗೆ. ರಾತ್ರಿ ಹೆಂಗಾರೂ ಬರಬಹುದು. ಕೆಲಸವೂ ಹೆಚ್ಚಿರಲ್ಲ, ರಾತ್ರೆಯ ಜಗಮಗ ಬೆಳಕಲ್ಲಿ ಆಫೀಸಿನ ಟೆರೇಸಿಂದ ಸುತ್ತಲಿನ ನಗರವನ್ನು ನೋಡಬಹುದು, ವಿದೇಶಕ್ಕೆ ಹೋಗಿರೋ ತನ್ನ ಗೆಳೆಯರತ್ರ ರಾತ್ರಿ ಮಾತಾಡಬಹುದು ಎಂಬ ಹಲಬಗೆ ಕನಸುಗಳು ಶಾರ್ವರಿಗೆ.ಹಂಗಾಗಿ ಅವಳಿಗೂ ಆ ನೈಟ್ ಶಿಫ್ಟಿನ ಬಗ್ಗೆ ವಿಪರೀತ ಕುತೂಹಲಗಳಿಂದ ಒಪ್ಪಿಕೊಂಡಳು.
ಮೊದಲ ರಾತ್ರಿ ಹೆಚ್ಚಿನ ಕೆಲಸವಿರಲಿಲ್ಲ. ಕೆಲಸವಿಲ್ಲದೇ ಸುಮ್ಮನೇ ಕೂತರೆ ನಿದ್ದೆಯೆಳೆಯುತ್ತೆ. ಆದ್ರೆ ಮೊದಲ ನೈಟ್ ಶಿಫ್ಟಲ್ಲೇ ನಿದ್ರೆ ಮಾಡಿ ಬಿಟ್ರೆ ಹೆಂಗೆ !! ಎಲ್ಲರೆದುರಿಗೂ ನಗೆಪಾಟಲಿಗೀಡಾಗಿಬಿಡ್ತೀನಿ ಅನಿಸಿಬಿಟ್ಟಿತ್ತು. ಹೆಂಗಾದ್ರೂ ನಿದ್ದೆಗೆಡಬೇಕು ಅಂತ ಇಂಟರ್ನೆಟ್ಟಲ್ಲಿ ಸಮಯ ಕೊಲ್ಲೋಕೆ ನೊಡಿದ್ಲು. ಹನ್ನೊಂದಾಯ್ತು. ಹನ್ನೆರಡಾಯ್ತು. ಇದ್ದ ಸಹೋದ್ಯೋಗಿಗಳೆಲ್ಲಾ ಕಿವಿಗೊಂದು ಇಯರ್ ಫೋನ್ ಸಿಕ್ಕಿಸಿ ಕೆಲಸ ಮಾಡೋದ್ರಲ್ಲೋ, ಹಾಡು ಕೇಳೋದ್ರಲ್ಲೋ, ಕೆಲಸವಿಲ್ಲದವರು ಯಾವುದೋ ಚಿತ್ರ ನೋಡೋದ್ರಲ್ಲೋ ಮಗ್ನರಾಗಿದ್ರು. ಮಾತಾದ್ರೂ ಎಷ್ಟೂಂತ ಮಾತಾಡೋದು ? ದಿನಾ ಸಿಕ್ಕೋರೇ ತಾನೇ. ಹನ್ನೆರಡುವರೆಯ ಹೊತ್ತಿಗೆ ಫೇಸ್ಬುಕ್ಕಿನ ಗೆಳೆಯರ ಬಳಗವೆಲ್ಲಾ ಮಲಗೋಕೆ ಹೊರಟಾಗಿತ್ತು. ವಿದೇಶದ ಗೆಳೆಯರೋ.. ಇವಳು ಪಿಂಗ್ ಮಾಡಿದ ತಕ್ಷಣವೇ ಉತ್ರ ಕೊಡೋಕೆ ಅವರಿಗೆ ಬೇರೆ ಕೆಲಸವಿರೋಲ್ವೇ ? ಹಾಯ್ ಹಾಯ್.. ಹೇಗಿದ್ದೀಯ ? ಚೆನ್ನಾಗಿದ್ದೀನಿ, ನೀ ಹೇಗಿದ್ದೀಯ ? ನಾನೂ ಚೆನ್ನಾಗಿದ್ದೀನಿ ಅನ್ನೋ ಪ್ರಶೋತ್ತರಗಳು ನಡೆಯೋ ಹೊತ್ತಿಗೆ ಆ ಕಡೆಯಿಂದ ಉತ್ತರಗಳು ನಿಂತಿರುತ್ತಿದ್ದವು. ಅವರು ಎಲೋ ಹೋಗಿದ್ದಾರೆ (away) ಅಂತಿತ್ತು ಜೀಚಾಟು. ಫೇಸ್ಬುಕ್ಕಿನ ಒಂದು ವಾರದ ಹಳೆಯ ಎಲ್ಲಾ ಪೋಸ್ಟುಗಳಿಗೂ ಲೈಕಿಸಿಯೋ, ಕಮೆಂಟಿಸಿಯೋ ಆಗಿದ್ದರಿಂದ ಅದೂ ಬೇಸರ ಹೊಡೆಸಹತ್ತಿತು. ಫೇಸ್ಬುಕ್ಕಿನ ಇರೋ ಬರೋ ಗ್ರೂಪುಗಳೆಲ್ಲಾ ಥಂಡಾ ಹೊಡೆಯುತ್ತಿದ್ದವು. ಇವಳೊಬ್ಬಳಿಗೇ ಅಲ್ಲಿಲ್ಲಿ ಬರೆಬರೆದು ಬೇಸರವಾಗಿ ಅದನ್ನೂ ಮುಚ್ಚಿದಳು. ಅವರೆಲ್ಲಾ ಯೂಟ್ಯೂಬಲ್ಲಿ ಏನೋ ನೋಡುತ್ತಿದ್ದಾರಲ್ಲ ಅಂತ ಯಾವುದಾದರೂ ಹಾಡು ಕೇಳೋನ ಅಂತ ಪ್ರಯತ್ನಿಸಿದಳು. ಆದರೆ ಎರಡು ಮೂರು ಹಾಡು ಕೇಳುವಷ್ಟರಲ್ಲಿ ಅದೂ ಬೇಸರವಾಯಿತು. ಅಂತರ್ಜಾಲದ ಎಲ್ಲ ಕಿಟಕಿಗಳನ್ನೂ ಮುಚ್ಚಿ ಮತ್ತೆ ಕೆಲಸದತ್ತ ಗಮನಹರಿಸಿದಳು. ಆದರೆ ಸ್ವಲ್ಪ ಹೊತ್ತಿಗೆ ಹೊಟ್ಟೆ ಹಸಿಯಹತ್ತಿತು!. ಆಗ ಪಕ್ಕದಲ್ಲಿ ನೈಟ್ ಶಿಫ್ಟಿಗೆ ಅಂತ ತಂದಿಟ್ಟಿದ್ದ ಕುರ್ಕುರೆ, ಲೇಯ್ಸ್, ಬಿಸ್ಕೇಟುಗಳ ಮೇಲೆ ಕಣ್ಣು ಬಿತ್ತು. ಇವಳೊಂದು ಕುರ್ಕುರೆ ಪ್ಯಾಕೇಟೆತ್ತಿಕೊಂಡಿದ್ದನ್ನು ನೋಡಿ ಹಿರಿಯ ಸಹೋದ್ಯೋಗಿಗಳು ಮುಸಿ ಮುಸಿ ನಕ್ಕರು. ಯಾಕೆ ನಕ್ತಿದೀರ ಅಂತ ಕೇಳಿದ್ದಕ್ಕೆ. ಹಿಂಗೇ ಒಂದು ವಾರ ತಿಂತೀಯ ಅಷ್ಟೆ. ಆಮೇಲೆ ನಿನ್ನೆದುರೇ ಈ ಪ್ಯಾಕೇಟುಗಳ ಗುಡ್ಡೆ ಹಾಕಿದ್ರೂ ನೀನದನ್ನ ತಿನ್ನೋಲ್ಲ ಅಂದ್ರು. ಅವರು ಮಾತು ಕೇಳಿ ಆಶ್ಚರ್ಯವಾದ್ರೂ ಇರ್ಲಿ ನೋಡೋಣ ಅಂತ ಅವಳಿಗಿಷ್ಟವಾಗಿದ್ದ ಲೇಯ್ಸ್ ಪ್ಯಾಕೇಟನ್ನೂ ಎತ್ತಿಕೊಂಡಳು.
ಹೊಟ್ಟೆ ತುಂಬಿತ್ತು. ಆದ್ರೆ ಹೊತ್ತು ಕಳೆಯುತ್ತಿರಲಿಲ್ಲ. ಗಡಿಯಾರ ಎರಡು ತೋರಿಸೋ ಹೊತ್ತಿಗೆ ಕಣ್ಣ ರೆಪ್ಪೆಗಳೆಲ್ಲಾ ಭಾರವಾದ ಅನುಭವ.ಆದ್ರೂ ಮೊದಲ ದಿನದ ಜೋಷಲ್ಲವೇ. ಅದ್ಯಾವುದೋ ಕೆಲಸದಲ್ಲಿ , ಕೆಟ್ಟ ಬೇಜಾರಿನ ಡಾಕ್ಯುಮೆಂಟು ಓದೋದ್ರಲ್ಲಿ ಮಗ್ನಳಾದಳು. ಅದರಲ್ಲೇ ಬೆಳಗಾಗಿ ಹೋಯಿತು. ಆಫೀಸು ಕ್ಯಾಬಲ್ಲಿ ಆರೂವರೆಗೆ ಮನೆಗೆ ಬಂದು ಹಾಸಿಗೆಗೆ ಉರುಳಿದ್ದೊಂದೇ ಗೊತ್ತು. ಆಮೇಲೆ ಲೋಕದ ಪರಿವೆಯಿಲ್ಲದಂತೆ ನಿದ್ರೆ. ಫ್ರೆಂಡ್ಸು ಎಬ್ಬಿಸಲಿಲ್ಲವೋ, ಇವಳಿಗೇ ಎಚ್ಚರವಾಗಲಿಲ್ಲವೋ ಗೊತ್ತಿಲ್ಲ. ಮತ್ತೆ ಎದ್ದಾಗ ಮಧ್ಯಾಹ್ನ ಎರಡೂವರೆ ! ಘಂಟೆಯ ಲೆಕ್ಕ ನೋಡಿದ್ರೆ ಅವಳು ಎಂದಿನಂತೆ ಎಂಟು ಘಂಟೆ ಮಲಗಿದ್ದಳಷ್ಟೆ. ಆದರೆ ಯಾವತ್ತೂ ಬೆಳಗ್ಗಿನ ತಿಂಡಿ ತಪ್ಪಿಸದ ಶಾರ್ವರಿಗೇ ಆಶ್ಚರ್ಯವಾಯ್ತು. ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟಗಳ ಪರಿವೆಯೂ ಇಲ್ಲದಂತೆ ಮಲಗಿಬಿಟ್ಟೆನಾ ನಾನು ಅಂತ.ಆದ್ರೆ ಎದ್ದು ಹಲ್ಲುಜ್ಜುವ ಹೊತ್ತಿಗೆ ಹೊಟ್ಟೆ ವಿಪರೀತ ಹಸಿಯಹತ್ತಿತು. ಎರಡು ಹೊತ್ತಿನ ತುತ್ತು ಕಂಡಿರಲಿಲ್ಲವಲ್ಲಾ… ಆದ್ರೆ ಏನು ಮಾಡೋದು. ರೂಮಲ್ಲೇನೂ ಇಲ್ಲ. ಅವತ್ತೇ ಅಮ್ಮ ಎಲ್ಲೋ ಹೋಗಿರೋದ್ರಿಂದ ಮನೆಯಲ್ಲಿ ನಾನೇ ಏನಾದ್ರೂ ಮಾಡಬೇಕಷ್ಟೇ!. ಆದ್ರೆ ಹೊಸಪಾಕ ಬೇಯಿಸುವಷ್ಟು ತಾಳ್ಮೆಯನ್ನು ಚುರುಗುಟ್ಟುತ್ತಿದ್ದ ಹೊಟ್ಟೆ ಉಳಿಸಿರಲಿಲ್ಲ.ಇಷ್ಟು ದಿನ ಹೊತ್ತು ಹೊತ್ತಿಗೆ ಮೃಷ್ಟಾನ್ನ ಭೋಜನ ಸವಿಯುತ್ತಿದ್ದ ಆಕೆಗೆ ಹಸಿವೆಯ ಬೆಲೆಯೇ ತಿಳಿದಿರಲಿಲ್ಲ, ಈಗ ಮೊದಲ ಬಾರಿಗೆ ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಅನ್ನೋ ದಾಸವಾಣಿ ನೆನಪಾಗತೊಡಗಿತು. ಆದ್ರೆ ಏನು ಮಾಡೋದು ? ಹೊರಗೆ ಹೋಗಿ ಏನಾದ್ರೂ ತಿನ್ನೋಣ ಅಂದುಕೊಂಡ್ಲು. ಆದ್ರೆ ಎದ್ದ ರೀತಿಯಲ್ಲೇ ಹೊರಗೆ ಹೋಗೋಕೆ ಆಗುತ್ತಾ ? ಇಲ್ಲ . ಛಕಛಕನೆ ರೆಡಿಯಾಗಿ ಊಟಕ್ಕೆಂದು ಹೊರಗೆ ಹೊರಟಳು. ಆದ್ರೆ ಸಿಕ್ಕಾಪಟ್ಟೆ ಹಸಿವಾಗಿ ಹೆಚ್ಚು ದೂರ ನಡೆಯಲಾಗುತ್ತಿಲ್ಲ. ಎದುರು ಕಂಡ ಕ್ಯಾಂಟೀನಿಗೇ ಹೊಕ್ಕಳು.ಯಾವತ್ತೂ ಇಲ್ಲಿ ಚೀಪು, ಚೆನ್ನಾಗಿರಲ್ಲ, ತಿಂದ್ರೆ ಕಾಯಿಲೆ ಬರುತ್ತೆ ಅಂತ ಏನೇನೋ ಅಂದುಕೊಂಡಿದ್ದ ಅವಳಿಗೆ ಹೊಟ್ಟೆ ಹಸಿವು ಎಲ್ಲವನ್ನೂ ಮರೆಸಿಬಿಟ್ಟಿತ್ತು. ಆ ಕ್ಯಾಂಟೀನಿನ ಸಾದಾರಣ ರೊಟ್ಟಿಯೂಟವೂ ಮೃಷ್ಟಾನ್ನದಂತೆ ಕಂಡಿತ್ತು.
ಊಟ ಮಾಡಿ ಬಂದವಳಿಗೆ ಮತ್ತೆ ನಿದ್ರೆ ಹತ್ತಿತು. ಹಂಗೂ ಹಿಂಗೂ ಸಂಜೆಯಾಗಿ ರಾತ್ರೆಯಾಯಿತು ಮತ್ತೆ. ಹಿಂದಿನ ದಿನದಂತೆ ಇಂದೂ ಆಫೀಸಿಗರ ಅದೇ ಇಯರ್ ಫೋನಿನ ಲುಕ್ಕುಗಳು ಸ್ವಾಗತಿಸಿದವು ಅವಳನ್ನ. ಇಂದು ಸ್ವಲ್ಪ ಕೆಲ್ಸವಿತ್ತಾದ್ರೂ ಅದರಲ್ಲೇ ಮುಳುಗಿಹೋಗುವಂತದ್ದೇನಿರಲಿಲ್ಲ. ಹಾಗಾಗಿ ಮೊರೆಹೊಕ್ಕ ಫೇಸ್ಬುಕ್ಕು, ವಾಟ್ಸಾಪು, ಜೀಮೆಲುಗಳು ಅರ್ಧ ಘಂಟೆಯಲ್ಲೇ ಬೇಸರ ಮೂಡಿಸಿದವು. ಆದ್ರೆ ಆ ದಿನ ಅವಳ ಬದುಕಿಗೆ, ಹವ್ಯಾಸಗಳಿಗೊಂದು ಹೊಸ ದಿಕ್ಕು ಸಿಕ್ಕಿತು. ಫೇಸ್ಬುಕ್ಕಲ್ಲಿ ಯಾರೋ ಕೊಟ್ಟಿದ್ದ ಲಿಂಕೊಂದು ಅವಳನ್ನೊಂದು ಬ್ಲಾಗಿಗೆ ಕರೆದೊಯ್ದಿತ್ತು. ಬ್ಲಾಗೆಂದರೆ ಅದೊಂದು ಅಂತರ್ಜಾಲದ ಡೈರಿ. ತಮಗನಿಸಿದ್ದನ್ನೆಲ್ಲಾ ಅಂತರ್ಜಾಲದಲ್ಲಿ ಬರೆದುಕೊಳ್ಳೋ ಹವ್ಯಾಸೀ ಬರಹಗಾರರೆಲ್ಲಾ ಈ ತರದ ಒಂದೊಂದು ಬ್ಲಾಗು ಹೊಂದುತ್ತಾರೆ ಅಂತ ಎಲ್ಲೋ ಓದಿದ್ದಳಾದರೂ ಈ ಬ್ಲಾಗಿನ ಬಗ್ಗೆ ಹೆಚ್ಚು ಗಮನಹರಿಸಿರಲಿಲ್ಲ ಶಾರ್ವರಿ. ಕೆಲಸದ ಮಧ್ಯೆ ಆ ಬ್ಲಾಗಿನ ಒಂದೊಂದೇ ಲೇಖನ ಓದುತ್ತಾ ಹೋದಳು. ಓದುತ್ತೋದುತ್ತಾ ತಾನೂ ಯಾಕೆ ಹೀಗೊಂದು ಬ್ಲಾಗ್ ಪ್ರಾರಂಭಿಸಬಾರದು ಅನ್ನೋ ಆಲೋಚನೆ ಬಂತು. ತಾನು ಕಾಲೇಜಿನ ಪತ್ರಿಕೆಗೆ ಬರೆಯುತ್ತಿದ್ದ ದಿನಗಳು ನೆನಪಾಗಿ ಶಾರ್ವರಿಯೊಳಗಿನ ಬರಹಗಾರ್ತಿ, ಕವಯಿತ್ರಿ ಎಚ್ಚೆತ್ತಳು. ಶಾರ್ವರಿಯಲ್ಲಿನ ಬರಹವೆಂಬುದು ಕೆಲಸವೆಂಬ ಮಾಯಾ ಜಿಂಕೆಯ ಬೆನ್ನ ಹತ್ತಿದಿಂದಲಿಂದೇ ಒಂತರ ಸತ್ತೇ ಹೋಗಿತ್ತೇನೋ. ಅದಕ್ಕೊಂದು ಪುನರ್ಜನ್ಮ ಕೊಟ್ಟಿದ್ದು ಈ ನೈಟ್ ಶಿಫ್ಟು.
ಬರಹಗಳ ಓದುತ್ತೋದುತ್ತಾ ನಾಳೆಯಿಂದ ತಾನೂ ಬರೆಯಬೇಕೆಂದು ನಿರ್ಧರಿಸಿದ್ಲು ಶಾರು. ಆ ನಿರ್ಧಾರವನ್ನ ನೆನೆ ನೆನೆದೇ ಖುಷಿಯಾದ್ಲು ಅವಳು. ಆ ದಿನ ಮ್ಯಾಗಿ ಮತ್ತೆ ಹಣ್ಣಿನ ಜ್ಯಾಸ್ ಕೊಟ್ಟಿದ್ರು ರಾತ್ರಿ ಪಾಳಿಯವರ ಅನುಕೂಲಕ್ಕೆಂದು. ಅದಕ್ಕಿಂತ , ಆ ದಿನ ಸ್ನೇಹಿತರ ಜೊತೆಗೆ ಟೀ ಕುಡಿಯುತ್ತಾ ಕಂಡ ನಗರದ ಸೌಂದರ್ಯವನ್ನು, ಮಧ್ಯರಾತ್ರಿಯ ಸೊಬಗನ್ನು ಬರಹಕ್ಕಿಳಿಸಬೇಕೆಂಬ ತುಡಿತ ಕಾಡತೊಡಗಿತು. ಆದ್ರೆ ಅಷ್ಟರಲ್ಲಿ ಮತ್ತೆ ಬೆಳಗಾಯಿತು. ಮನೆಗೆ ಬಂದವಳಿಗೆ ಹಿಂದಿನ ದಿನ ಅಮ್ಮ ಹೇಳಿದ ಮಾತು ನೆನಪಾಯ್ತು. ತಿಂಡಿ ತಿನ್ನದೇ ಮಲಗಬೇಡ. ರಾತ್ರಿ ಊಟ ಆಗಿ ಹತ್ತು ಘಂಟೆಯ ಮೇಲಾಗಿರತ್ತೆ. ಹಾಗಾಗಿ ಬೆಳಗಿನ ತಿಂಡಿ ತುಂಬಾ ಮುಖ್ಯ, ಅದನ್ನು ತಪ್ಪಿಸೋದು ದೇಹಕ್ಕೆ ಒಳ್ಳೆಯದಲ್ಲ ಅಂತ. ಆದ್ರೆ ತಿಂಡಿಗೆ ಅಂದ್ರೆ ಏಳೂವರೆವರಿಗೆ ಕಾಯಬೇಕು. ಅದು ಸಾಧ್ಯವೇ ಅನಿಸಿತು. ಯಾಕಾಗಲ್ಲ ಅಂತ ಅಂದುಕೊಂಡು ರೂಮಿಗೆ ಬಂದವಳಿಗೆ ರೂಮೊಳಗೆ ಕಾಲಿಟ್ಟಿದ್ದೊಂದೇ ನೆನಪು. ಅಷ್ಟರಲ್ಲಿ ಕಣ್ಣ ರೆಪ್ಪೆಗಳಿಗೆ ಇಕ್ಕಳ ಹಾಕಿ ಜಗ್ಗಿದಂತಾಗಿ ಹಾಸಿಗೆ ಮೇಲೆ ಹೋಗಿ ಬಿದ್ದೇ ಬಿಟ್ಟಳು. ಒಂಭತ್ತಕ್ಕೋ ಹತ್ತಕ್ಕೋ ಎದ್ದು ತಿಂಡಿ ತಿನ್ನೋಳವೆಂದು ಮಲಗಿದವಳಿಗೆ ಮಧ್ಯಾಹ್ನ ಒಂದಾದಾಗಲೇ ಎಚ್ಚರ. ಇವಳನ್ನು ತಿಂಡಿಗೆ ಎಬ್ಬಿಸೋಣ ಅಂತ ಇವರಮ್ಮ ಎರಡು ಮೂರು ಸಲ ಪ್ರಯತ್ನ ಮಾಡಿ ಸೋತು ಬಿಟ್ಟಿದ್ರು. ನಿದ್ರೆಯೇ ಕಾಣದಂತೆ ಮಲಗಿ ಬಿಟ್ಟಿದ್ದ ಮಗಳನ್ನು ನೋಡಿ ಅವರಿಗೇ ಪಾಪ ಎನಿಸಿ ಸುಮ್ಮನಾಗಿ ಬಿಟ್ಟಿದ್ರು. ಒಂದಕ್ಕೆ ಎದ್ದು ಹಲ್ಲುಜ್ಜೋಕೆ ಬಂದ ಮಗಳನ್ನು ನೋಡಿ ಅಮ್ಮಾ, ಈಗ ಎದ್ಯೇನೇ ? ಊಟ ಮಾಡ್ತೀಯಾ ? ಎಲ್ಲಾ ರೆಡಿಯಾಗಿದೆ ಅಂದ್ರು ಅಮ್ಮ. ಇನ್ನು ಹಲ್ಲೂ ಉಜ್ಜಿಲ್ಲ. ಸ್ನಾನವಾಗದೇ ತಿಂಡಿನೂ ಕೊಡದಿದ್ದ ನೀನಾ ಇವತ್ತು ಹಲ್ಲುಜ್ಜೋ ಮೊದಲೇ ಊಟ ಮಾಡು ಅಂತಿರೋದು ಅಂದ್ಲು ಆಶ್ಚರ್ಯದಿಂದ ಶಾರು. ಏ, ಹುಲಿ ಸಿಂಹಗಳೆಲ್ಲಾ ಹಲ್ಲುಜ್ಜುತ್ತಾ ? ತಗೋ ನಿನ್ನಿಷ್ಟದ ರಾಗಿ ಅಮಲಿ ಮಾಡಿದೀನಿ. ಅದ್ನ ಕುಡಿ . ಆಮೇಲೆ ನಿಧಾನವಾಗಿ ಹಲ್ಲುಜ್ಜಿ, ಸ್ನಾನ ಮಾಡಿ ಬರುವೆಯಂತೆ ಅಂದ್ರು ಅವರಮ್ಮ. ಲವ್ ಯೂ ಮಾಮ್.. ನೀನೇ ಪ್ರಪಂಚದ ಬೆಸ್ಟ್ ಅಮ್ಮ ಅಂತ ಅಮ್ಮನನ್ನಪ್ಪಿಕೊಂಡ್ಲು ಶಾರು.
ಊಟ ಮಾಡುವಾಗ ಶಾರು ನೈಟ್ ಶಿಫ್ಟಿನ ಕತೆಯನ್ನ ಉತ್ಸಾಹದಿಂದ ಹೇಳ್ತಾ ಇದ್ರೆ ಅವರಮ್ಮ ಬಾಯಿ ಕಳ್ಕೊಂಡು ಕೇಳ್ತಾ ಕೂತಿದ್ರು. ಮುಂಚೆಯೆಲ್ಲಾ ಬೆಳಗ್ಗೆ ಎದ್ದೊಡನೆಯೇ ಗಡಿಬಿಡಿಯಿಂದ ಅರ್ಧಂಬರ್ಧ ತಿಂಡಿ ತಿಂದು ಓಡುತ್ತಿದ್ದ ಶಾರು ಮತ್ತೆ ಮನೆಗೆ ಬರುತ್ತಿದ್ದುದೇ ರಾತ್ರಿ. ಸದಾ ಒಂದಿಲ್ಲೊಂದು ಟೆನ್ಷನ್ನಿನಲ್ಲೇ ಇರುತ್ತಿದ್ದ ಮಗಳನ್ನು ಮಾತಾಡಿಸಿದ್ರೆ ಎಲ್ಲಿ ಬಯ್ದು ಬಿಡ್ತಾಳೋ ಅಂತ ಅವರಮ್ಮನೇ ಹೆದರುತ್ತಿದ್ರು. ಹಂಗಾಗಿ ಮಗಳು ಈ ತರ ಮನಬಿಚ್ಚಿ ಮಾತಾಡದೇ ಯಾವುದೋ ಕಾಲವಾಗಿದ್ರಿಂದ ಅಮ್ಮ ಸಖತ್ತಾಗೇ ಖುಷಿಯಾಗಿದ್ರು. ಹಿಂಗೆಲ್ಲಾ ಇರುತ್ತಾ ಅಂತ ಅವರಮ್ಮ ಆಶ್ಚರ್ಯ ಪಟ್ರು ನೈಟ್ ಶಿಫ್ಟಿನ ಕತೆ ಕೇಳಿ. ಇನ್ನು ಮುಂದೆ ನೀನು ಬರೋ ಮೊದಲೇ ಏನಾದ್ರೂ ತಿನ್ನೋಕೆ ಮಾಡಿಟ್ಟಿರ್ತೇನೆ. ನೀನದ್ನ ತಿಂದೇ ಮಲಗಬೇಕು ಓಕೇನಾ ಅಂತ ಹೇಳೋಷ್ಟರಲ್ಲಿ ಅಮ್ಮನ ಕಣ್ಣಂಚಲ್ಲಿ ನೀರು ಮೂಡಿತ್ತು. ಯಾಕಮ್ಮಾ ಅಳ್ತಿದೀಯ ಅಂದ್ರೆ ಎಲ್ಲ ಮಾಡೋದೇ ಹೊಟ್ಟೆಗಾಗಿ ಅಲ್ವೇನೇ ? ನೀನು ಎಲ್ಲಾ ಇದ್ದೂ ಹಿಂಗೆ ಹೊಟ್ಟೆಗಿಲ್ಲದಂಗೆ ಮಲಗಿದ್ರೆ ನನ್ನ ಕರುಳು ಸುಡಲ್ವೇನೆ ಅಂದ್ಲು ಅಮ್ಮ ಕಣ್ಣೊರೆಸುತ್ತಾ . ಸರಿ ಅಮ್ಮಾ, ನೀನು ಅಳ್ಬೇಡ. ನಾನು ಏನಾರೂ ತಿಂದೇ ಮಲಗ್ತೀನಿ .. ಪ್ರಪಂಚ ಹೇಗಿದೆ ಅಂತ ತಿಳಿಬೇಕಿದ್ರೆ , ನಿನ್ನೀ ಪುಟ್ಟ ಪಾಪು ಮಗಳು ದೊಡ್ಡ ಆಗ್ಬೇಕಂದ್ರೆ ಎಲ್ಲಾ ಅನುಭವಗಳು ಆಗ್ಲೇ ಬೇಕಲ್ವಾ ಅಮ್ಮಾ ಅಂದ್ಲು ಶಾರು.. ಪಾಪುವಂತೆ ಪಾಪು. ನಿಂಗೆ ಮದುವೆಯಾಗಿದ್ರೆ ಇಷ್ಟೊತ್ತಿಗೆ ನಿನ್ನ ಕೈಯಲ್ಲೊಂದು ಪಾಪು ಇರ್ತಿತ್ತು ಅಂತ ತಂಗೇ ಛೇಡಿಸೋಕೆ ಬಂದ ಮಗಳನ್ನ ಛೇಡಿಸಿ ಒಳಗೆ ಹೋದ್ರು ಶಾರುವಿನ ಅಮ್ಮ. ಶಾರುವಿನ ಮುಖ ನಾಚಿಕೆಯಿಂದ ಕೆಂಪಾಗಿತ್ತು.
ಅವತ್ತಿನ ಸಂಜೆ ಶಾರುವಿನದೊಂದು ಬ್ಲಾಗ್ ಹುಟ್ಟಿತು. ತನಗಾದರೂ ಅಮ್ಮನಿದ್ದಾಳೆ. ಬೆಳಬೆಳಗ್ಗೆಯೇ ಎದ್ದು ತಿಂಡಿ ಮಾಡಿ ಕೊಡ್ತಾಳೆ. ಆದ್ರೆ ಕೆಲಸದ ಬೆನ್ನ ಹತ್ತಿ ಪೀಜಿಯೋ, ರೂಮೋ ಮಾಡ್ಕೊಂಡಿರೋ ಈ ರಾತ್ರಿ ಪಾಳಿಗರ ಕತೆ ಏನಪ್ಪಾ ಅಂದ್ಕೊಂಡ್ಲು ಶಾರು. ಪ್ರತಿ ದಿನವೂ ತನ್ನ ಮೊದಲ ದಿನದಂತೆ ಹೊಟ್ಟೆಗಿಲ್ಲದೇ ಮಲಗೋ ಸ್ಥಿತಿ ನೆನೆಸಿಕೊಂಡು ಅವಳ ಕರುಳೂ ಚುರ್ರೆಂದಿತು. ಅದೇ ಅವಳ ಬ್ಲಾಗಿನ ಮೊದಲ ಲೇಖನವಾಗಿ ರೂಪುಗೊಂಡಿತು.ನೈಟ್ ಶಿಫ್ಟಲ್ಲಿ ಎರಡು ದಿನ ಕೆಲಸ ಮಾಡೋ ಹೊತ್ತಿಗೆ ದೇಹದ ನೈಸರ್ಗಿಕ ಗಡಿಯಾರದಲ್ಲಿ ಏರುಪೇರಾಗಿ ಮೊಡವೆಗಳೇಳತೊಡಗಿದ್ದವು. ದೇಹವೆಲ್ಲಾ ಹೀಟಾದಂತಹ ಅನುಭವ. ನೈಟ್ ಶಿಫ್ಟೇ ಬೇಕು, ಅದರಲ್ಲಿ ಹೆಚ್ಚು ಸಂಬಳ ಅಂತ ನೈಟ್ ಶಿಫ್ಟ್ ಕೇಳುತ್ತಿದ್ದ ಸ್ನೇಹಿತರ ನೋಡಿ, ರಾತ್ರಿ ಪಾಳಿಯ ಕಾಲ್ ಸೆಂಟರ್ಗಳವರನ್ನು ನೋಡಿ ಏನು ಧನದಾಹಿಗಳಪ್ಪ ಇವರು ಅಂದುಕೊಳ್ಳುತ್ತಿದ್ದಳು ಮುಂಚೆ. ಆದ್ರೆ ನಾನು ಎರಡು ದಿನಕ್ಕೇ ಇಷ್ಟು ಕಷ್ಟಪಡ್ತಿರಬೇಕಾದ್ರೆ ಬರೀ ದುಡ್ಡಿನ ಮುಖ ನೋಡಿ ಯಾವಾಗ್ಲೂ ಅಷ್ಟು ಕಷ್ಟ ಪಡ್ತಿರೋ ಅವರಿಗೆ ದುಡ್ಡಿನ ಅನಿವಾರ್ಯತೆ ಎಷ್ಟಿರಬಹುದು ಅನಿಸಿ ಅಯ್ಯೋ ಪಾಪ ಅನಿಸಿತು. ಇನ್ನು ಮೇಲೆ ಯಾರನ್ನೂ ತುಚ್ಛೀಕರಿಸಲಾರೆ, ಕೇವಲವಾಗಿ ಕಾಣಲಾರೆ ಅಂದುಕೊಂಡಳು ಶಾರು.. ಈ ಭಾವಗಳೇ ಅವಳ ಮೊದಲ ಬರಹದ ಹನಿ ಹನಿಗಳಾಗಿ ಗಟ್ಟಿಯಾಗುತ್ತಿತ್ತು.
*****