ಹೆಸರಿಡದ ಕತೆಯೊಂದು (ಭಾಗ 4): ಪ್ರಶಸ್ತಿ ಪಿ.

ಇಲ್ಲಿಯವರೆಗೆ

ಧನಸಂಪಾದನೆಯಲ್ಲಿ ಮಧ್ಯಮ ವರ್ಗವೂ, ಧಾರಾಣತನದಲ್ಲಿ ಕಡುಬಡವರೂ ಆಗಿದ್ದ ಕುಟುಂಬವೊಂದರಲ್ಲಿ ಹುಟ್ಟಿದ ಮೇಧಾವಿ ಶ್ಯಾಮ. ಧನಸಂಪಾದನೆಯಲ್ಲಿ ಬಡವರಾಗಿದ್ದರೂ ಹೃದಯ ವೈಶಾಲ್ಯತೆಯಲ್ಲಿ ಶ್ರೀಮಂತರಾಗಿದ್ದ ಕುಟುಂಬದಲ್ಲಿ ಹುಟ್ಟಿದವ ಶ್ಯಾಮನ ಚಡ್ಡೀ ದೋಸ್ತ ಕಿಟ್ಟಿ. ಕಿಟ್ಟಿ ಹೈಸ್ಕೂಲಿಗೇ ವಿದ್ಯೆಗೆ ಶರಣು ಹೊಡೆದು ಪೇಟೆಯ ಗ್ಯಾರೇಜು ಸೇರಿದ್ರೆ ಶಾಲೆಯ ಟಾಪರ್ರಾಗಿದ್ದ ಶ್ಯಾಮ ಮುಂದೆ ಓದೋ ಛಲದಿಂದ ಡಿಗ್ರಿವರೆಗೂ ಮುಟ್ಟಿದ್ದ. ಡಿಗ್ರಿಯಲ್ಲಿ ಶ್ಯಾಮನ ಕಣ್ಣಿಗೆ ಬಿದ್ದ ಹುಡುಗಿ ಶಾರ್ವರಿ. ಇಬ್ಬರ ಹಲವು ವಿಚಾರಧಾರೆಗಳು ಹೊಂದುತ್ತಿದ್ದರಿಂದ್ಲೋ ಏನೋ ಇಬ್ಬರಲ್ಲೂ ಏನೋ ಆಕರ್ಷಣೆ.. ಅದು ಪ್ರೀತಿಯೆಂದಲ್ಲ. ಏನೋ ಒಂದು ರೀತಿ. ಶಾರ್ವರಿಯ ಪ್ರತೀ ಹೆಜ್ಜೆಯನ್ನೂ ಅರಿತಿದ್ದವಳು ಅವಳ ಹೃದಯದ ಗೆಳತಿ ಶ್ವೇತ. ಕಾಲೇಜು ಮುಗಿದು ಶ್ವೇತಳಿಗೆ ಬಾನುಲಿ ಕೇಂದ್ರವೊಂದರಲ್ಲೂ ಶಾರ್ವರಿಗೆ ಐಟಿ ಕಂಪೆನಿಯೊಂದರಲ್ಲೂ ಕೆಲಸ ಸಿಕ್ಕಿತ್ತು. ಆದರೆ ಶ್ಯಾಮ ಸದ್ಯಕ್ಕಂತೂ ನಿರುದ್ಯೋಗಿ. ಕಾಲೇಜು ಮುಗಿಸಿ ಊರಿಗೆ ಹೋದರೆ ಅಲ್ಲಿನ ನಿತ್ಯದ ಹೀಯಾಳಿಕೆಗಳಿಂದ ಬೇಸತ್ತು ಕೆಲಸವರೆಸಿ ಪೇಟೆ ಸೇರಿದ್ದ. ಅಲ್ಲಿ ತನ್ನ ರೂಮಿಗೇ ಕರೆದು ಆಸರೆಯಾದವನು ಬಾಲ್ಯದ ಗೆಳೆಯ ಕಿಟ್ಟಿ. ದಿನಗಳುರುಳುತ್ತಿತ್ತು. ಶ್ಯಾಮನ ಕೆಲಸದ ಬೇಟೆ ಸಾಗಿತ್ತು .ಹಿಂಗೇ ಒಂದಿನ ಶ್ಯಾಮನಿಗೊಂದು ಸಂದರ್ಶನದ ಕರೆ ಬಂದಿತ್ತು.. ಅಂದೇನಾಯ್ತೆಂದು ಮುಂದೆ ಓದಿ..

ಯಾವುದೋ ಒಂದು ಸಣ್ಣ ಕಂಪನಿ. ಕಂಪೆನಿಯಂದ್ರೆ ಅಂತಸ್ತುಗಳ ಮೇಲಂತಸ್ತಿರತ್ತೆ. ನೂರಿನ್ನೂರು ಜನರಾದ್ರೂ ಇದ್ದೇ ಇರುತ್ತಾರೆ ಅನ್ನೋ ಕಲ್ಪನೆಯಲ್ಲಿದ್ದ ಶ್ಯಾಮನಿಗೆ ಸಂದರ್ಶನಕ್ಕೆ ಹೋದಾಗೊಂದು ಅಚ್ಚರಿ. ಒಂದು ಯಾವುದೋ ಕಂಪ್ಯೂಟರ್ ಕ್ಲಾಸಿಗೆ ಹೋದಂಗೆ ಅನಿಸ್ತಿತ್ತು . ಅಲ್ಲೊಂದು ಐದಾರು ಜನ. ಎಲ್ಲರಿಗೊಂದು ಕಂಪ್ಯೂಟರು. ಅಪ್ಪಿ ತಪ್ಪಿ ಎಲ್ಲಾದ್ರೂ ಬಂದು ಬಿಟ್ನಾ ಅಂತೊಮ್ಮೆ ಗಾಬರಿಗೊಳಗಾಗಿದ್ದ. ಕೇಳಿ ನೋಡಿದ್ರೆ ಅದು ಸರಿಯಾದ ವಿಳಾಸವೇ. ಇವನು ಅಡ್ರೆಸ್ ಸರಿಯಾ ಎಂದು ಕೇಳಿದ ವ್ಯಕ್ತಿಯೇ ಮುಂದೆ ಬಂದು ಇವನ ಸಂದರ್ಶನ ತಗೋಬೇಕೇ ? ಶ್ಯಾಮನಿಗೆ ಆ ಕ್ಷಣಕ್ಕಾದ ಅವಸ್ಥೆ ಹೇಳಲಾಗದು. ಮೊದ್ಲೇ ಜನ ಇಲ್ಲ ಇಲ್ಲಿ. ಇನ್ನು ನನಗೆ ಕೆಲ್ಸ ಬೇರೆ ಕೊಡ್ತಾರಾ ಇವ್ರು ? ಸುಮ್ನೇ ಸಂದರ್ಶನ ಕರ್ಯೋದೊಂದು ಫ್ಯಾಷನ್ ಆಗ್ಬುಟ್ಟಿದೆ ಇಲ್ಲಿ ಅಂತ ಅಂದ್ಕೊಂಡಿದ್ದ ಶ್ಯಾಮನ ಅಭಿಪ್ರಾಯ ಪ್ರತೀ ಪ್ರಶ್ನೆಯೊಂದಿಗೂ ಬದಲಾಗ್ತಾ ಹೋಯ್ತು. ಮೊದಮೊದಲು ಎಲ್ಲೋ ಕಳೆದುಹೋದಂತೆ ಉತ್ತರಿಸುತ್ತಿದ್ದ ಶ್ಯಾಮನನ್ನು ಸಂದರ್ಶಕನೇ ತನ್ನ ಹೊಸ ವರಸೆ ಪ್ರಶ್ನೆಗಳ ಮೂಲಕ ಮತ್ತೆ ವಾಸ್ತವಕ್ಕೆ ಕರೆತರುತ್ತಿದ್ದ. ಸರಿ. ಸಂದರ್ಶನ ಮುಗೀತು. ಎಷ್ಟು ಸಂಬಳದ ನಿರೀಕ್ಷೆಯಲ್ಲಿದ್ದೀರಿ ಎಂದು ಕೇಳಿದ್ದ ಬಾಸು. ಶ್ಯಾಮ ತೋಚಿದ್ದೊಂದು ಹೇಳಿದ್ದ. ಅದು ತನ್ನ ಸ್ನೇಹಿತರಿಗೆ ಹೋಲಿಸಿದ್ರೆ ಏನೇನೂ ಅಲ್ಲವೆಂದು ಅನಿಸಿದ್ರೂ ಈಗ ಸಿಗಬಹುದಾದ ಕೆಲ್ಸವನ್ನೂ ಕಳಕೊಳ್ಳಲು ಇಷ್ಟವಿರಲಿಲ್ಲ ಶ್ಯಾಮಂಗೆ. ಶ್ಯಾಮನ ಪರಿಚಯವನ್ನೆಲ್ಲಾ ಕೇಳಿದದ್ ಬಾಸು ನಸುನಕ್ಕು ಸರಿ ನಾಳೆ ಒಂಭತ್ತು ಗಂಟೆಗೆ ಬಂದುಬಿಡಿ ಅಂದ. ಶ್ಯಾಮಂಗೆ ಮೊದ್ಲು ಬಾಸು ಏನು ಹೇಳ್ತಿದಾರಂತ ಅರ್ಥ ಆಗ್ಲಿಲ್ಲ. ಏನಂದ್ರಿ ಸಾರ್ ಅಂದ. ಅದೇ ಕಣ್ರಿ. ನಾಳೆಯಿಂದ ಕೆಲ್ಸಕ್ಕೆ ಜಾಯಿನ್ ಆಗ್ಬುಡಿ ಅಂದ. ಮತ್ತೆ ಸಂಬಳ ಅಂದ ತನಗೇ ಕೇಳಿತೋ ಇಲ್ಲವೋ ಅನ್ನುವಂತೆ ಶ್ಯಾಮ. ನೀವಂದುಕೊಂಡಿದ್ದಂತೂ ಸಿಕ್ಕೇ ಸಿಗತ್ತೆ. ಆದ್ರೆ ಎಷ್ಟು ಹೆಚ್ಚು ಅನ್ನೋದ್ನ ತಿಂಗಳಾಂತ್ಯದಲ್ಲಿ ನೋಡಿ. ಇನ್ನು ಆರು ತಿಂಗಳಿಗೆ ನಿಮ್ಮ ಕೆಲಸ ನೊಡಿ ಹೆಚ್ಚಳ ಸಿಗುತ್ತೆ ಅಂದ್ರು ಬಾಸು. ಹೂಂ ಅನ್ನೋಕೂ ಆಗದಷ್ಟು ಖುಷಿಯಲ್ಲಿ ಶ್ಯಾಮನ ಬಾಯಿ ಕಟ್ಟಿ ಹೋಗಿತ್ತು.  ತಲೆಯಲ್ಲಾಡಿಸಿದನಷ್ಟೇ. ಮತ್ತೇನಾದ್ರೂ ಡೌಟುಗಳಿದ್ಯ ನನ್ನಿಂದ ಅಂದ್ರು ಬಾಸು. ಇಲ್ಲಾ ಸಾರ್ ಅಂದ ಶ್ಯಾಮನನ್ನು ಬಾಗಿಲವರಿಗೂ ಬೀಳ್ಕೊಟ್ರು ಬಾಸು.

ಮಾರನೇ ದಿನ ಅಂದ್ರೆ ಶ್ಯಾಮನಿಗೆ ಐಟಿ ದುನಿಯಾದಲ್ಲಿ ಮೊದಲ ದಿನ.. ಹಿಂದಿನ ದಿನ ರಾತ್ರಿಯೆಲ್ಲಾ ಮಾರನೇ ದಿನ ಹೇಗಿರತ್ತೋ ಎಂಬ ದುಗುಡದಲ್ಲಿ ಸರಿ ನಿದ್ರೆ ಬರುತ್ತಿರಲಿಲ್ಲ. ಕಣ್ಣು ಮುಚ್ಚಿದಾಗೆಲ್ಲಾ ಬರೀ ಆಫೀಸಿನದೇ ಕನಸುಗಳು. ತಾನು ಸಿಕ್ಕಾಪಟ್ಟೆ ಕೆಲಸ ಮಾಡಿದಂತೆ. ಜನರೆಲ್ಲಾ ತನಗೆ ಭೇಷ್ ಅಂದಂತೆ, ಪರ್ವಾಗಿಲ್ಲ ಹುಡ್ಗ ಚುರುಕಾಗಿ ಕೆಲ್ಸ ಕಲೀತಾನೆ ಅಂತ ಸೀನಿಯರ್ಗಳೆಲ್ಲಾ ಮೆಚ್ಚಿಕೊಂಡಂತೆ ಕನಸುಗಳು. ಎಚ್ಚರಾದಾಗಲೆಲ್ಲಾ ಪಕ್ಕದಲ್ಲಿದ್ದ ಗಡಿಯಾರ ನೋಡುತ್ತಿದ್ದ. ಬೆಳಗಾಗಿ ಹೋಯ್ತಾ ಏನೋ ಅನ್ನೋ ಆತುರ.  ಅಲರಾಂ ಇಟ್ಟಿದ್ರೂ ಅದು ಹೊಡಿದೇ ಇದ್ರೆ ಅನ್ನೋ ಅನುಮಾನ! ಹಂಗಾಗಿ ಕಿಟ್ಟಿಗೂ ಹೇಳಿದ್ದ. ಬೆಳಗ್ಗೆ ಬೇಗ ಎಬ್ಬಿಸೋ ನನ್ನ ಅಂತ. ಯಾವತ್ತೂ ಬೇಗನೇ ಏಳ್ತಿದ್ದ ಕಿಟ್ಟಿ ಏನಾದ್ರೂ ಲೇಟಾಗೆದ್ದು ನನ್ನ ಎಬ್ಬಿಸದೇ ಇದ್ರೆ ಅಂತ ಮತ್ತೊಂದು ಅನುಮಾನ ! ಹಂಗಾಗಿ ಎಚ್ಚರಾದಾಗಲೆಲ್ಲಾ ಗಡಿಯಾರ ನೋಡಿ ಇನ್ನೂ ಬೆಳಗಾಗಿಲ್ಲವೆಂಬ ಸಮಾಧಾನದಿಂದ ಮಲಗುತ್ತಿದ್ದ ಶ್ಯಾಮ. ಅದ್ಯಾವ ಮಾಯಯೆಲ್ಲಿ ಗಾಢ ನಿದ್ದೆ ಹತ್ತಿತ್ತೋ ಗೊತ್ತಿಲ್ಲ. ಕಿಟ್ಟಿ ತಟ್ಟಿ ತಟ್ಟಿ ಎಬ್ಬಿಸಿದಾಗಲೇ ಎಚ್ಚರವಾಗಿದ್ದು. . ಶ್ಯಾಮ ತಡಬಡಾಯಿಸಿ ಎದ್ದು ಗಡಿಯಾರ ನೋಡಿದ್ರೆ ಎಂಟು ತೋರಿಸ್ತಾ ಇದ್ದು. ಅದೆಷ್ಟು ಕನಸು ಕಾಣ್ತೀಯೋ ರಾಜಕುಮಾರ. ರಾತ್ರಿಯೆಲ್ಲಾ ಆಫೀಸು, ಬಾಸು, ಫೈಲು ಅಂತೇನೇನೋ ತಡವರಿಸ್ತಿದ್ದೆ. ಅದೆಷ್ಟೊತ್ತಿಗೆ ಮಲಗಿದ್ದೆಯೋ ದೇವ್ರಿಗೇ ಗೊತ್ತು. ಗಾಢ ನಿದ್ರೇಲಿ ಮಲಗಿದ್ದ ನಿನ್ನ ಎಬ್ಸೋ ಹೊತ್ತಿಗೆ ನಂಗೇ ಪಾಪ ಅನ್ಸಿ ಬಿಟ್ತು.. ಇನ್ನೂ ತೀರಾ ಲೇಟೇನು ಆಗಿಲ್ಲ. ಬೇಗ ರೆಡಿಯಾಗು ಅಂತೇನೋ ಕಿಟ್ಟಿ ಹೇಳುವಷ್ಟರಲ್ಲೇ ಶ್ಯಾಮ ಗಡಿಬಿಡಿಯಿಂದ ಬಚ್ಚಲು ಸೇರಿಯಾಗಿತ್ತು. ಗಡಿಬಿಡಿಯಲ್ಲಿ ಏನೋ ತಿಂದ ಶಾಸ್ತ್ರ ಮುಗಿಸಿ ಮನೆಯಿಂದ ಹೊರಗೋಡಿದ್ದ ಶ್ಯಾಮನಿಗೆ ಕಿಟ್ಟಿ ಅಂದಂತೆ ತೀರಾ ಲೇಟೇನೂ ಆಗಿರ್ಲಿಲ್ಲ. ಆದ್ರೂ ಮೊದಲ ದಿನ ಲೇಟಾಗಿ ಹೋದ್ರೆ ಎಲ್ಲಾ ಏನಂದು ಬಿಟ್ತಾರೋ ಅನ್ನೋ ಆತಂಕ. ಕೆಲಸದ ಮೊದಲ ದಿನ ದೇವಸ್ಥಾನಕ್ಕೆ ಹೋಗಿ ನಮಸ್ಕಾರ ಮಾಡಿ ಹೋಗು ಅಂತ ಶ್ಯಾಮನ ತಾಯಿದ್ರೆ ಹೇಳ್ತಿದ್ರೋ ಏನೋ. ಆದರೆ ಅವರಿಲ್ಲ. ಆದ್ರೆ ಕಿಟ್ಟಿ ಆ ಮಾತು ಹೇಳಿದ್ರೂ ಶ್ಯಾಮನಿಗೆ ಆಫೀಸಿಗೆ ಲೇಟಾಗಬಾರದೆಂಬ ಧಾವಂತದಲ್ಲಿ ಅದೆಲ್ಲಾ ಮರೆತುಹೋಗಿತ್ತು. ಈಗ ತನಗೆ ಕೆಲ್ಸ ಸಿಕ್ಕಿರೋದನ್ನ ನೋಡೋಕೆ ತನ್ನ ತಾಯಿಯಿದ್ರೆ ಎಷ್ಟು ಖುಷಿ ಪಟ್ತಿದ್ರೋ ಅಂತ ನೆನೆಸಿಕೊಂಡು ಶ್ಯಾಮನ ಕಣ್ಣಂಚಲ್ಲಿ ನೀರು ಜಿನುಗಿತು. ಆದ್ರೆ ಬಸ್ಸಲ್ಲಿರೋರು ಏನಂದ್ಕೋತಾರೋ ಅಂತ ಹಾಗೇ ಕಣ್ಣೊರಿಸಿಕೊಂಡ ಶ್ಯಾಮ. ಆ ರಷ್ಷ ಬಸ್ಸಿನಲ್ಲಿ, ಬೇಸರ ಹುಟ್ಟಿಸುತ್ತಿದ್ದ ಟ್ರಾಫಿಕ್ಕಿನಲ್ಲಿ ಎಲ್ಲಾ ತಮ್ಮದೇ ಲೋಕದಲ್ಲಿ ಮಗ್ನರಾಗಿ ನಿಧಾನಕ್ಕೆ ಗಾಡಿ ಓಡುಸ್ತಿರೋ ಡ್ರೈವರಿಗೋ, ಫ್ಲೈ ಓವರ್ ಮಾಡದೇ ಈ ರೀತಿ ಟ್ರಾಫಿಕ್ಕಿಗೆ ಕಾರಣವಾಗಿರೋ ಸರ್ಕಾರಕ್ಕೋ , ಸಿಕ್ಕಾಪಟ್ಟೆ ಕೆಲಸ ಹಚ್ಚೋ ಬಾಸಿಗೆ ಬಯ್ಯೋದ್ರಲ್ಲಿ ಬಿಸಿಯಾಗಿದ್ರೆ ಹೊರತು ಇವನ ಕಣ್ಣೀರನ್ನು ಗಮನಿಸಿ ಕಾರಣ ವಿಚಾರಿಸೋ ವ್ಯವಧಾನದಿಂದಿರಲಿಲ್ಲ. ಆದ್ರೂ ಗಮನಿಸಿ ಏನಪ್ಪಾ ಅಳ್ತಿದ್ದೀಯ ಅಂದ್ರೊಬ್ರು ಹಿರೀರು. ಇಲ್ಲಾ ಸಾರ್. ಕಣ್ಣಿಗೇನೋ ಕಸ ಬಿತ್ತು. ಅದಕ್ಕೆ ನೀರ್ಬರ್ತಾ ಇದೆ. ಕೆಳಗಿಳಿದಾಗ ನೀರಲ್ಲಿ ತೊಳ್ಕೋತೀನಿ ಬಿಡಿ ಅಂದ. ಓ ಹೌದಾ ಸರಿ ಸರಿ. ಹುಷಾರಪ್ಪ ಅಂದ್ರು ಅವ್ರು. ಅಪರಿಚಿತನೊಬ್ಬನನ್ನು ಮಾತಾಡಿಸೋ ಔದಾರ್ಯ ತೋರಿದ ಅವರನ್ನು ನೋಡಿ ಹೃದಯ ತುಂಬಿ ಬಂದ ಶ್ಯಾಮನೂ ಥ್ಯಾಂಕ್ಸ್ ಅಂಕಲ್ ಅಂದಿದ್ದ. ದರಿದ್ರ ಬಸ್ಸು, ತೊಳಿದೇ ಎಷ್ಟು ದಿನ ಆಯ್ತೋ, ಎಂತಾ ರೋಡು ಎಷ್ಟೆಲ್ಲಾ ಧೂಳು.. ಈ ಸರ್ಕಾರದವ್ರು ಏನ್ಮಾಡ್ತಾ ಇರ್ತಾರೇನೋ ಅಂತ ಮತ್ತೊಬ್ಬ ಶ್ಯಾಮನ ಕಣ್ಣಲ್ಲಿ ಧೂಳು ಬಿದ್ದಿದ್ದಕ್ಕೂ ಸರ್ಕಾರವನ್ನು ದೂಷಿಸೋಕೆ ಶುರು ಮಾಡಿದ್ದ!

ಮೊದಲ ದಿನ ಶ್ಯಾಮನಿಗೆ ಓರಿಯೆಂಟೇಷನ್ ಅಂತೆ. ಅಂದ್ರೆ ಕಂಪೆನಿಯ ಸಿದ್ದಾಂತಗಳೇನು ?   ಉದ್ಯೋಗಿಗಳಿಗೆ ಕಂಪೆನಿಯಿಂದ ದೊರೆಯೋ ಸೌಲಭ್ಯಗಳೇನು ? ಇವರು ಪಾಲಿಸಬೇಕಾದ ನಿಯಮಗಳೇನು ? ಆಫೀಸಿಗೆ ಎಷ್ಟೊತ್ತಿಗೆ ಬರ್ಬೇಕು ಎಷ್ಟೊತ್ತಿಗೆ ಹೋಗ್ಬಹುದು ಅಂತೆಲ್ಲಾ ಹಿರಿಯರೊಬ್ಬರು ಹೇಳಿದ್ರು. ಮೊದಲ ದಿನ ಏನಕ್ಕೂ ಇರ್ಲಿ ಅಂತ ಫಾರ್ಮಲ್ಲಲ್ಲಿ ಬಂದಿದ್ದ ಶ್ಯಾಮನಿಗೆ ಇಲ್ಲಿ ಫಾರ್ಮಲ್ಲಲ್ಲೇ ಬರಬೇಕೆಂಬ ನಿಯಮಗಳೇನೂ ಇಲ್ಲ. ಬೇಕಾದಂಗೆ ಬರಬಹುದು ಅನ್ನೋದ್ನ ಟೀ ಶರ್ಟು, ಜೀನ್ಸಲ್ಲಿ ಬಂದಿದ್ದ ಉಳಿದವ್ರನ್ನ ನೋಡೇ ಗೊತ್ತಾಗಿತ್ತು. ಹಿಂದಿನ ದಿನವೇ ಇದನ್ನ ಗಮನಿಸಿದ್ರೂ ಬೆಳಗ್ಗೆ ಗಡಿಬಿಡೀಲಿ ಅವೆಲ್ಲಾ ಹೊಳೆದಿರಲಿಲ್ಲ. ಸಂದರ್ಶನಕ್ಕೆ ಹೋಗುವಂತೆ ಅವತ್ತೂ ಫಾರ್ಮಲ್ಲಲ್ಲೇ ಬಂದು ಬಿಟ್ಟಿದ್ದ ಆಫೀಸಿಗೆ. ಈ ವಾರ ಇವ್ರು ನಿನಗೆ ಕೆಲ್ಸ ಏನೇನು ಅಂತ ಪರಿಚಯ ಮಾಡ್ಕೊಡ್ತಾರೆ ಅಂತ ಮತ್ತೊಬ್ಬ ಸಹೋದ್ಯೋಗಿ ಸತೀಶನನ್ನು  ಪರಿಚಯಿಸಿದ್ದರು ಅವರು. ಸರಿ ಒಂದು ವಾರ ಪೂರ್ತಿ ಕುತೂಹಲದಿಂದ ಸತೀಶ್ ಹೇಳಿದ್ದನ್ನೆಲ್ಲಾ ಕೇಳುತ್ತಾ ಕುಳಿತಿರುತ್ತಿದ್ದ ಶ್ಯಾಮ. ಒಂದು ವಾರದ ನಂತರ ಶ್ಯಾಮನಿಗೂ ಒಂದು ಕಂಪ್ಯೂಟರ್ ಕೊಟ್ಟು ಕೆಲಸಕ್ಕೆ ಹಚ್ಚಿದರು. ಇನ್ನೂ ಹೊಸಬ ಅಂತ ಬೇರೆಯವ್ರು ಬರೆದ ತಂತ್ರಾಂಶವನ್ನು ಓದಿ ಅರ್ಥ ಮಾಡ್ಕೋಳ್ಳಕ್ಕೆ, ಒಂದಿಷ್ಟು ಪಿ.ಡಿ.ಎಫ್ಗಳನ್ನ ಓದೋಕೆ, ಯಾವುದೋ ಎಕ್ಸೆಲ್ಲಲ್ಲಿ ಏನೇನೋ ತುಂಬೋಕೆ ಹೇಳಿದ್ರು ಶ್ಯಾಮನಿಗೆ. ನಾನು ಪದವಿಯಲ್ಲಿ ಓದಿದ್ದೇನು. ಇಲ್ಲಿ ಮಾಡ್ತಿರೋದೇನು. ಒಂದಕ್ಕೊಂದು ಸಂಬಂಧವೇ ಇಲ್ಲವಲ್ಲ ಅಂತ ಅದೆಷ್ಟೋ ಸಲ ಅಂದ್ಕೋತಿದ್ದ ಶ್ಯಾಮ. ಆದ್ರೂ ಕೆಲ್ಸವೇ ಇಲ್ಲದೇ ಅಲೀತಿದ್ದ ನನಗೊಂದು ಕೆಲ್ಸ ಕೊಟ್ಟು ನೆಲೆ ಕಲ್ಪಿಸಿರೋ ಇವರಿಗೆ ನಾನೆಷ್ಟು ಕೃತಜ್ನತೆ ಹೇಳಿದ್ರೂ ಕಮ್ಮಿಯೇ ಎಂದು ಸಮಾಧಾನ ಮಾಡ್ಕೋತಿದ್ದ. 

ಹಿಂಗೇ ಒಂದು ಹದಿನೈದು ದಿನವಾದ ಮೇಲೆ ಬಾಸ್ ಒಂದಿನ ಶ್ಯಾಮನನ್ನು ತಮ್ಮ ಛೇಂಬರಿಗೆ ಕರೆದ್ರು. ಅವನು ಇಲ್ಲಿಯವರೆಗೆ ಓದಿದ ಕೋಡುಗಳ ಬಗ್ಗೆ, ಪಿ.ಡಿ.ಎಫ್ಗಳ ಬಗ್ಗೆ ಒಂದಿಷ್ಟು ಪ್ರಶ್ನಾವಳಿ. ಶ್ಯಾಮನ ಉತ್ತರಗಳ ನಂತರ ಬಾಸಿನ ಉಪದೇಶದ ಸರದಿ. ಏನೋ ಒಂದು ಕಲೀತಾ ಇದೀಯ. ನಿನ್ನ ಏಕಾಗ್ರತೆ, ಕೆಲಸದ ಬಗೆಗಿನ ಆಸಕ್ತಿ ನನಗಿಷ್ಟ ಆಯ್ತು. ಆದ್ರೆ ನಿನ್ನ ಕೆಲ್ಸವಿನ್ನೂ ಶುರುವಾಗಿಲ್ಲ. ಇಲ್ಲಿಯವರೆಗೆ ಓದಿದ್ದು ಪೀಠಿಕೆಯಷ್ಟೇ. ನಿನ್ನನ್ನ ಒಂದು ಟೀಮಿಗೆ ಹಾಕ್ತೀದೀನಿ. ನಾಳೆಯಿಂದ ನಿನ್ನ ಕೆಲ್ಸ ಶುರು ಆಗತ್ತೆ.ಅಲ್ಲಿ ಈಗಿನ ಜನರಲ್ ಶಿಫ್ಟಿನ ಬದಲು ಬೆಳಗಿನ, ಮಧ್ಯಾಹ್ನದ ಅಥವಾ ರಾತ್ರಿಯ ಶಿಫ್ಟಿನಲ್ಲೂ ಬರಬೇಕಾಗಬಹುದು ಅಂದರು ಬಾಸು. ಜನರಲ್ ಅಂದ್ರೆ ಬೆಳಗೆ ಎಂಟರಿಂದ ಹತ್ತರವರೆಗೆ ಯಾವಾಗ ಬೇಕಾದ್ರೂ ಬರಬಹುದು. ಬಂದಾಗಿನಿಂದ ಒಂಭತ್ತು ತಾಸು ಕೆಲ್ಸ ಅನ್ನೋದು ಗೊತ್ತಾಗಿತ್ತು ಶ್ಯಾಮನಿಗೆ. ಆದ್ರೆ ಈ ಬೆಳಗಿನ , ಮಧ್ಯಾಹ್ನದ ಶಿಫ್ಟುಗಳೇನು ಅಂತ ಅರ್ಥ ಆಗಿರ್ಲಿಲ್ಲ. ಬೆಳಗ್ಗೆ ಅಂದ್ರೆ ಆರರಿಂದ ಮೂರು. ಮಧ್ಯಾಹ್ನ ಅಂದ್ರೆ ಒಂದರಿಂದ ಹತ್ತು. ರಾತ್ರೆ ಅಂದ್ರೆ ಹತ್ತರಿಂದ ಬೆಳಗ್ಗೆ ಆರು. ಅರ್ಥ ಆಯ್ತಲ್ವಾ ಅಂದ್ರು ಬಾಸು. ಈ ರಾತ್ರೆ ಪಾಳಿ ದಿನಾ ಇರತ್ತಾ ಅಂದ ಗಾಬರಿಯಲ್ಲಿ ಶ್ಯಾಮ. ಕೆಲಸಕ್ಕೆ ಸೇರುವಾಗ ಎಲ್ಲಾ ಓಕೆಯಂದಿದ್ಯಲ್ಲಪ್ಪ ಈಗೇನಾಯ್ತು ಅಂತ ನಕ್ರು ಬಾಸು. ಏನಿಲ್ಲ ಸಾರ್. ರಾತ್ರೆ ಬರೋಕೆ ಹೋಗೋಕೆ ಅಂತ ತಡವರಿಸಿದ ಶ್ಯಾಮ. ಓಹ್.. ಅದಾ ? ರಾತ್ರೆ ಪಾಳಿ ಇದ್ದಾಗ ಕರ್ಕೊಂಡೋಗೋಕೆ, ಮನೆಗೆ ತಂದು ಬಿಡೋಕೆ ಕ್ಯಾಬಿರತ್ತೆ. ರಾತ್ರಿ ಪಾಳಿಯಿದ್ದಾಗ ಹೆಚ್ಚಿನ ಸಂಬಳವೂ ಇರತ್ತೆ.  ಅತ್ತೆ ಈ ರಾತ್ರಿ ಪಾಳಿ ಅನ್ನೋದು ದಿನಾ ಇರಲ್ಲ. ತಿಂಗಳಿಗೆ ಒಂದು ವಾರ ಮಾತ್ರ, ಅದೂ ಅಮೆರಿಕನ್ ಕ್ಲೈಂಟುಗಳಿಗೆ ಸಂಬಂಧ ಪಟ್ಟ ಪ್ರಾಜೆಕ್ಟುಗಳೇನಾದ್ರೂ ಇದ್ರೆ ಮಾತ್ರ  ಇರುತ್ತೆ . ಓಕೇನ  ಅಂದು ಬಾಸು. ಓಕೆ ಓಕೆ ಸಾರ್ ಅಂದ ಶ್ಯಾಮ. ಅದು ಬಂದಾಗ ನೊಡ್ಕೊಂಡ್ರಾಯ್ತು ಅನ್ನೋ ವಿಶ್ವಾಸದಲ್ಲಿ.  

ಇವರೇ ನೋಡಪ್ಪ ನಿನ್ನ ಟೀಂ ಲೀಡ್ ಅಂತ ಶ್ಯಾಮನಿಗೆ ಸತೀಶನ್ನ ಪರಿಚಯಿಸಬೇಕೇ ? ಶ್ಯಾಮನಿಗೆ ಒಂದ್ಕಡೆ ಸಂತೋಷ. ಮತ್ತೊಂದ್ಕಡೆ ಭಯ. ಇವರೇ ಮುಂದಿನ ಟೀಂ ಲೀಡು ಅಂತ ಮುಂಚೆಯೇ ಹೇಳ್ಬಾರ್ದಿತ್ತಾ ಛೇ. ಅಂದ್ಕೊಂಡ ಶ್ಯಾಮ. ಸತೀಶ್ ನಗುನಗುತ್ತಲೇ ತಮ್ಮ ಟೀಮಿನ ಉಳಿದವರನ್ನು ಪರಿಚಯಿಸಿದ್ರು. ಟೀಂ ಅಂದ್ರೆ ಮೂರೇ ಜನ. ಈಗ ಶ್ಯಾಮನನ್ನೂ ಸೇರಿ ನಾಲ್ಕಷ್ಟೇ !. ನಾಳೆ ಯಾವ ಶಿಫ್ಟು ಸಾರ್ ಅಂದ ಶ್ಯಾಮ. ಏ.. ಸಾರ್ ಗೀರ್ ಅಂತೆಲ್ಲಾ ಕರಿಬೇಡಪ್ಪ ನೀನು. ಇಲ್ಲಿ ನೋಡಿದೋರು ನಗ್ತಾರೆ. ನಾನು, ನೀನು  ಎಲ್ಲಾ ಒಂದೇ ಇಲ್ಲಿ. ಸತೀಶ್ ಅಂತ ಕರಿ ಓಕೆನಾ ಅಂದ ಶ್ಯಾಮ. ಅದು ಅದು.. ಬಾಸು ಈ ಟೀಮಲ್ಲಿ ಬೇರೆ ಬೇರೆ ಶಿಫ್ಟಲ್ಲಿ ಬರ್ಬೇಕಾಗತ್ತೆ ಅಂತಿದ್ರು. ಹಾಗಾಗಿ ನಾಳೆ ಯಾವ ಶಿಫ್ಟು ಅಂತ ಕೇಳಿದೆ ಅಂದ ಶ್ಯಾಮ ಇನ್ನೂ ಗೊಂದಲದಲ್ಲೇ. ಓ ಅದಾ ಅಂತ ನಕ್ರು ಸತೀಶ್. ಸದ್ಯ ಸತೀಶ್ ಟೀಮು ಜನರಲ್ ಶಿಫ್ಟಲ್ಲೇ ಕೆಲ್ಸ ಮಾಡ್ತಿದ್ರೂ  ಶ್ಯಾಮ ಏನಂತಾನೆ ನೋಡೋಣ ಅಂತ ಸುಮ್ನೇ ಕೇಳಿದ್ರಷ್ಟೆ ಬಾಸು . ಅದನ್ನೇ ಶ್ಯಾಮನಿಗೆ ವಿವರಿಸಿದ ಮೇಲೆ ಶ್ಯಾಮನ ಮುಖ ತಿಳಿಯಾಯ್ತು. ನಾಳೆಯಿಂದ ಹೊಸ ಟೀಮಿನಲ್ಲಿ ಕೆಲಸ ಮಾಡೋ ಖುಷಿಯಿಂದ ಶ್ಯಾಮ ನ ಕಾಲುಗಳು ಭೂಮಿ ಮೇಲಿದ್ರೂ ಅವ ಆಕಾಶದಲ್ಲೇ ತೇಲುತ್ತಿದ್ದ.

******

(ಮುಂದುವರೆಯಲಿದೆ)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x