ಹೆಬ್ಬಲಸು : ಅಪರೂಪದ ಕಾಡುಹಣ್ಣು
Artocarpus hirsutus Lam.
ಕುಟುಂಬ: ಮೊರೇಸಿ
ವಿತರಣೆ: ಭಾರತೀಯ ಮೂಲದ ಬೃಹದ್ಧಾಕಾರದ ವೃಕ್ಷ ಪಶ್ಚಿಮ ಘಟ್ಟದ ನಿತ್ಯಹರಿಧ್ವರ್ಣ ಮತ್ತು ಅರೆ-ನಿತ್ಯಹರಿಧ್ವರ್ಣ ಕಾಡುಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.
ಪರಿಚಯ: ನೇರವಾಗಿ ಬೆಳೆಯುವ ಎತ್ತರದ ಮರ. ಕಂದು ಬಣ್ಣದ ತೊಗಟೆ. ತೊಗಟೆಯ ಮೇಲೆ ಸಣ್ಣ ವಾತರಂದ್ರಗಳು. ಗಾಯವಾದ ತೊಗಟೆಯಿಂದ ಹೊರಸೂಸುವ ಹಾಲಿನಂತ ಅಂಟು ಸೊನೆ. ಅಗಲವಾದ ಹುರುಬುರುಕಿನ ಎಲೆಗಳು ಕಡು ಹಸಿರಿನಿಂದ ಕೂಡಿವೆ. ಎಲೆಗಳ ಮೇಲೆ ಅಚ್ಚಾಗಿ ಮೂಡಿರುವ ನರಗಳಿವೆ. ಗಂಡು ಮತ್ತು ಹೆಣ್ಣು ಹೂವುಗಳು ಬೇರೆ ಬೇರೆಯಾಗಿರುತ್ತವೆ. ಪರಾಗಸ್ಪರ್ಶವಾದ ನಂತರ ಗಂಡು ಹೂಗಳು ಉದುರಿ ಹೋಗುತ್ತವೆ. ಬೇರು ಹಲಸಿನ ಗಾತ್ರದ ಕಾಯಿಗಳು ರೆಂಬೆಗಳ ತುದಿಯಲ್ಲಿ ರಾಶಿ ರಾಶಿಯಾಗಿ ಜೋತು ಬಿದ್ದಿರುತ್ತವೆ. ಹಳದಿ ಮಿಶ್ರಿತ ಕೆಂಪು ಹಣ್ಣುಗಳ ಮೈಮೇಲೆ ಮುಳ್ಳುಗಳಿರುತ್ತವೆ. ಸಣ್ಣ ಸಣ್ಣ ಬೀಜಗಳ ಸುತ್ತಲೂ ಹಳದಿ ಸೊಳೆಗಳು ಆವೃತ್ತವಾಗಿದೆ.


ಹೂ ಬಿಡುವ ಕಾಲ: ಡಿಸೆಂಬರ್ – ಮಾರ್ಚ್
ಹಣ್ಣಾಗುವ ಕಾಲ: ಮೇ – ಜೂನ್
ಉಪಯೋಗ: ಎಳೆಯ ಕಾಯಿಯನ್ನು ಹಲಸಿನ ಕಾಯಿಯ ಹಾಗೆ ತರಕಾರಿಯಂತೆ ಬಳಸುತ್ತಾರೆ. ಹಣ್ಣು ಸ್ವಲ್ಪ ಸಿಹಿಮಿಶ್ರಿತ ಹುಳಿಯಾದರೂ ತಿನ್ನಲು ಬಲು ರುಚಿ. ಬೀಜವನ್ನು ಉಪ್ಪಿನೊಂದಿಗೆ ಹುರಿದು ಚಹಾದೊಂದಿಗೆ ತಿನ್ನಲು ಬಲು ಮಜವಾಗಿರುತ್ತದೆ.
ವಿಶೇಷತೆ: ಹಣ್ಣಿನಲ್ಲಿ ಶರ್ಕರಪಿಷ್ಠ, ಸಾರಜನಕ, ಖನಿಜಾಂಶಗಳು ಹೇರಳವಾಗಿವೆ. ತೊಗಟೆಯನ್ನು ಮೊಡವೆ, ಮುಖದ ಬಿರುಕು, ಚರ್ಮರೋಗ ಗುಣಪಡಿಸಲು ಬಳಸುತ್ತಾರೆ. ಮರದ ಚೌಬಿನೆ ಬಹಳ ಉತ್ಕøಷ್ಠವಾದದ್ದು. ಮನೆ ಕಟ್ಟಲು, ಪೀಠೋಪಕರಣಗಳ ತಯಾರಿಕೆಗೂ ಇದರ ಬಳಕೆಯಾಗುತ್ತದೆ ಹಾಗೂ ಬಹಳ ಬೇಡಿಕೆಯಿರುವ ಚೌಬೀನೆ ಕೂಡ. ಮುಸುವ, ಕೆಂಪು ಮೂತಿಯ ಮಂಗ, ಸಿಂಗಳೀಕ, ಕೆಂಜಳಿಲುಗಳಿಗೆ ಅತಿ ಪ್ರಿಯವಾದ ಹಣ್ಣು. ಮಲೆನಾಡು ಮತ್ತು ಕೇರಳದ ಅನೇಕ ಭಾಗಗಳಲ್ಲಿ ಈ ಮರದ ನಾಟವನ್ನು ದೇವರ ಮೂರ್ತಿ ಕೆತ್ತಲು, ಗರ್ಭಗುಡಿಯ ಬಾಗಿಲನ್ನು ನಿರ್ಮಿಸಲು ಬಳಸುತ್ತಾರೆ. ಆದ್ದರಿಂದ ಇದು ಪೂಜನೀಯ ವೃಕ್ಷಗಳ ಸ್ಥಾನವನ್ನು ಅಲಂಕರಿಸಿದೆ. ಮರವು ನೇರವಾಗಿ, ದೊಡ್ಡ ಗಾತ್ರದ ಕಾಂಡವನ್ನು ಹೊಂದಿರುವುದರಿಂದ, ಡೊಳ್ಳುಗಳನ್ನು ತಯಾರಿಸಲು ಬಳಕೆ ಮಾಡುತ್ತಾರೆ. ಕಾಡಿನಲ್ಲಿ ಎಲ್ಲಿ ಹೆಬ್ಬಲಸು ಚೆನ್ನಾಗಿ ಬೆಳೆದಿರುತ್ತದಯೋ ಅಲ್ಲಿ ನಿತ್ಯಹರಿಧ್ವರ್ಣ ಕಾಡು ಸೊಂಪಾಗಿರುವುದನ್ನು ಸೂಚಿಸುತ್ತದೆ. ಈ ಪ್ರಬೇಧವನ್ನು ಕೃಷಿ-ಅರಣ್ಯದಲ್ಲಿ ಬದುಗಳಲ್ಲಿ ಬೆಳೆಯಬಹುದು.
ಸ್ಥಿತಿಗತಿ: ಇದರ ಚೌಬಿನೆಗೆ ಅತಿಯಾದ ಬೇಡಿಕೆಯಿರುವುದರಿಂದ ಮರದ ಕಟಾವು ಅವ್ಯಾಹತವಾಗಿ ನಡೆಯುತ್ತಿರುವುದರಿಂದ ಈ ಪ್ರಭೇದವನ್ನು ಅಪಾಯದಲ್ಲಿರುವ ಸಸ್ಯವೆಂದು ಗುರುತಿಸಲಾಗಿದೆ.
–ಚರಣಕುಮಾರ್ ಮತ್ತು ಡಾ. ಶ್ರೀಕಾಂತ್ ಗುಣಗಾ