ಹೆತ್ತ ಕರುಳು-ತಾಯ್ತನ-ಮಮತೆ: ಕೃಷ್ಣವೇಣಿ ಕಿದೂರು


ಸುಬ್ಬಕ್ಕ ಮಿಲಿಟರಿಯಲ್ಲಿದ್ದ ಮಗನಿಗೆ ಮದುವೆ ಮಾಡಿದರೂ ಸೊಸೆಯನ್ನು ಮಗನೊಂದಿಗೆ ಕಳಿಸಲೇ ಇಲ್ಲ. ವರ್ಷಕ್ಕೊಮ್ಮೆ ಎರಡು ತಿಂಗಳ ರಜಾದಲ್ಲಿ ಆತ ಬಂದಾಗ ಅವಳಿಗೆ ಗಂಡನ ದರ್ಶನ. ಅವನಿಗೂ ಅಮ್ಮ ಹೇಳುವುದರಲ್ಲಿ ತಪ್ಪೇನಿಲ್ಲವೆನಿಸುತ್ತಿತ್ತು. ಮುದುಕರು, ಇಬ್ಬರೇ ಇದ್ದಾರೆ; ಕೂಗಿ ಕರೆದರೆ ಓಗೊಡಲು ಸೊಸೆ ಇರಲಿ ಎಂದರೆ ತಪ್ಪೇನು? ರಜಾದಲ್ಲಿ ಮಗ ಬಂದರೂ ಸುಬ್ಬಕ್ಕನ ಒಂದು ಕಿವಿ ಇವರತ್ತಲೇ ಇರುತ್ತಿತ್ತು. ಸೊಸೆ ಮಗನ ಕಿವಿ ಊದಿ ಕರೆದುಕೊಂಡು ಹೋಗಲು ಹಟ ಹಿಡಿದರೆ ಎಂಬ ಭೀತಿ,  ಅವರಿಬ್ಬರನ್ನು ಹತ್ತಿರವಾಗಲು ಬಿಡದಂತೆ ಕಾಯುವಂತೆ ಮಾಡಿತ್ತು. ಇದ್ದಕ್ಕಿದ್ದಂತೆ ಮಗ ಸತ್ತ ವಾರ್ತೆ ಮೊದಲು,  ಅದರ ಹಿಂದಿಂದ ಅವನ  ಕಳೇಬರ  ಬಂದಿತ್ತು. ತಂದೆ,  ತಾಯಿ ಅತ್ತತ್ತು,  ಸೊಸೆಗೆ ಶಾಪ ಹಾಕಿ ಗೋಳಾಡಿದರು. ಸರಕಾರದ ವತಿಯಿಂದ  ಸ್ವಲ್ಪ ದುಡ್ಡೂ ಬಂತು. ವ್ಯವಹಾರ ಚತುರೆ ಅತ್ತೆ ಅದು ಎಲ್ಲವನ್ನೂ ಭದ್ರವಾಗಿ ಇಟ್ಟುಕೊಂಡರು.  ಮಗಳನ್ನು ತವರಿಗೆ ಕರೆದೊಯ್ಯುವ ಪ್ರಸ್ತಾಪ ಮಾಡಿದ ಅವಳ ತಾಯ್ತಂದೆಗೆ ನಿರಾಕರಿಸಿದ್ದೂ ಆಯ್ತು.   "ನಮ್ಮ ಮಗನಿಗೆ  ಆಯುಸ್ಸು ಇರಲಿಲ್ಲ. ಅವನಿಲ್ಲದ ಸಂಕಟ ಸುಡುತ್ತಿರುವಾಗ ಬದುಕುವುದು ಹೇಗೆ ನಾವು ಹೇಳಿ? ಸೊಸೆಯಲ್ಲೇ ಮಗನನ್ನು ಕಾಣುತ್ತ ದಿನ ದೂಡುತ್ತೇವೆ.   ನಮ್ಮಿಂದ  ಅವಳನ್ನು   ದೂರ ಮಾಡಬೇಡಿ".  ಬಡ ತಾಯ್ತಂದೆ  ಅಲ್ಲಿಗೆ ಸುಮ್ಮನಾದರು. 

"ನೋಡಮ್ಮ ರಂಜಿನಿ, ದಿನಾ ಒಪ್ಪೊತ್ತು ಊಟ ಮಾಡಿದರೆ   ಮುಂದಿನ ಜನ್ಮದಲ್ಲಿ ಸುಮಂಗಲೆಯಾಗುವ ಯೋಗ  ಉಂಟು ಮಗಳೇ. ಮನಸ್ಸು ಮಾಡಿದರೆ ಅದೇನೂ ಅಸಾಧ್ಯವಲ್ಲ. ನನಗೆ ಹಾಗೆ ಹೇಳಲೂ ಬಾಯಿ ಬರುತ್ತಿಲ್ಲ. ನಿನಗೆ ತೋಚಿದ ಹಾಗೆ ಮಾಡು. "

ಅರ್ಥವಾಯಿತು ಅವಳಿಗೆ. ತುಂಬು ಯೌವನದ ತರುಣಿಗೆ   ಸಂಜೆ ಆಗಬೇಕಾದರೆ ಹೊಟ್ಟೆ ಹಸಿಯುತ್ತಿತ್ತು. ಅತ್ತೆ,  ಮಾವನಿಗೆ ಸಂಜೆಗೆ ಫಲಾಹಾರವೆಂದು  ನೀರುದೋಸೆ,  ಮೆಂತ್ಯದ   ದೋಸೆ  ಬಾಳೆಹಣ್ಣು ದೋಸೆ ಎಂದು ಮಾಡಿಕೊಡುವಾಗ ನಾಲಿಗೆ ಅದರ ಘಮಕ್ಕೆ ನೀರೂರುತ್ತಿತ್ತು. ಅದರ ಸುಳಿವರಿತ ಸುಬ್ಬಕ್ಕ "ದೋಸೆಗೆ ಅರೆದು ಸುಸ್ತಾಯ್ತೇನೇ? ಇನ್ನೆಲ್ಲ ನಾನು ಮಾಡಿಕೊಳ್ತೇನೆ.  ನೀನು ಹಾಗೆ ಅಂಗಳದಲ್ಲಿರು" ಎಂದರು. 

ಅಂಗಳದಲ್ಲಿದ್ದರೆ ದೋಸೆ ಪರಿಮಳ ಬಾರದೆ ಇದ್ದೀತೇ? ಅದಲ್ಲದೆ ಮುದಿ   ಮಾವನಿಗೆ ರಾತ್ರಿಗೆ ಬೇರೆ ಅಡಿಗೆ ಬೇಕು. ಗೊಜ್ಜು,   ಪಲ್ಯ,   ಚಟ್ನಿ ಅನ್ನ ರಂಜಿನಿ ಮಾಡಿಟ್ಟು ಅವರು ಉಣ್ಣುವಾಗ ಅಲ್ಲಿ ಸುಳಿಯಬಾರದು. 
ನಾಲ್ಕು ಲೋಟ ನೀರು ಕುಡಿದು   ಮಲಗಿದರೆ ನಿದ್ದೆ ಎಲ್ಲಿ ಬರಬೇಕು? ಕಾಡುವ ಬಯಕೆ,  ಇನ್ನೂ ಇಪ್ಪತ್ತರ ವಯಸ್ಸಿನಲ್ಲಿ ವಿಧವೆಯಾದ  ಯಾತನೆ  ಹಿಂಡುತ್ತಿತ್ತು ಮನಸ್ಸನೂ ದೇಹವನ್ನೂ.  ಎಪ್ಪತ್ತರ ಅತ್ತೆಯ ಮುಡಿಯಲ್ಲಿ ಮಲ್ಲಿಗೆ ಘಮಕ್ಕೆ ತಡೆಯದೆ ಮೂಸಿದ್ದಕ್ಕೆ  ಹೇಳಿದ್ದರಾಕೆ. 

"ಬೇಡಮ್ಮ.  ಗಂಡನಿಲ್ಲದ ಹೆಣ್ಣುಮಕ್ಕಳು ಹೂವು ಹಾಗೆ ಆಸೆ ಪಡಕೂಡದು. ದೇವರು ನನಗೆ ಹೂ ಮುಡಿಯುವ ಭಾಗ್ಯ ಕೊಡಲಿಲ್ಲ ಅಂತ ಸುಮ್ಮನಿರಬೇಕು. " ತುಂಬು ಯೌವನದ ರಂಜಿನಿ  ವ್ಯಥೆ,  ನೋವು,    . ಹಸಿವೆ   ತಾಳಲಾಗದೆ  ಸೊರಗಿ  ಸೊಪ್ಪಾದಳು. 

***

ಸುಬ್ಬಕ್ಕ ಎದೆ ಎದೆ ಬಡಿದು ಅತ್ತತ್ತು  ಅಡ್ಡಮಲಗಿದ್ದು ಮುದ್ದಿನ ಮಗಳು   ಭುವನಾಳ ಪತಿ,   ತಮ್ಮ ಅಳಿಯ   ಆಟಿಯ ಮಳೆಗೆ   ತೋಡು ದಾಟುವಾಗ   ಅಡ್ಡಲಾಗಿ ಹಾಕಿದ್ದ ಅಡಿಕೆಮರದ   ಸಂಕ  ಜಾರಿ ಪ್ರವಾಹದ  ಕೆಂಪು ನೀರಿಗೆ ಬಿದ್ದು ಕೊಚ್ಚಿ ಹೋದಾಗ.  ಪುತ್ತೂರು ಪೇಟೆಗೆ ಹೋದವ  ಮರಳಿ   ಬರುವಾಗ ರಾತ್ರೆ. 
ಕಾಲುಸಂಕ  ದಾಟುವಾಗ   ಹಾವಸೆ ಹಿಡಿದ ಕಡೆ ಕಾಲಿಟ್ಟ. ಸರಕ್ಕನೆ ಜಾರಿತ್ತು. ಉಕ್ಕಿಉಕ್ಕಿ  ಬರುವ ಪ್ರವಾಹ ಅವನನ್ನೂ ಸೆಳೆದು ಒಯ್ದಿತ್ತು. ಅವತ್ತು ಬರಲಿಕ್ಕಿಲ್ಲವೆಂದು ಮನೆಯವರೂ ಹುಡುಕಲಿಲ್ಲ. ಮರುದಿನ ಬಿದಿರ ಹಿಂಡಲಿಗೆ ಸಿಕ್ಕಿದ ಶರೀರ ಅವರಿವರಿಗೆ ಕಂಡು  ಊರವರೆಲ್ಲ  ಧಾವಿಸಿ ಬಂದಾಗಲೇ ಇವರಿಗೆ ಸುದ್ದಿ ಸಿಕ್ಕಿದ್ದು. ನಾರಾಯಣಯ್ಯ ಸುಬ್ಬಕ್ಕ ನಿಂತ ಮೆಟ್ಟಿಗೆ  ಧಾವಿಸಿದ್ದರು. ಅಳು,  ರೋದನ,   ಕೂಗಾಟ,  ಕಿರುಚಾಟದ ಮಧ್ಯೆ ಆಗಬೇಕಾದ ಕಾರ್ಯ ನಡೆದುಹೋಯಿತು. ಐದು ವಯಸ್ಸಿನ ಮಗಳನ್ನು ಅಪ್ಪಿಹಿಡಿದು ಗೋಳಾಡುವ ಮಗಳನ್ನು ಕಂಡು ಅಪ್ಪ,  ಅಮ್ಮನ ಕಣ್ಣಲ್ಲೂ ನೀರ ಧಾರೆ.                                                        
ಉತ್ತರಕ್ರಿಯೆ ಮುಗಿದ   ದಿನವೇ  ಮಗಳು,  ಮೊಮ್ಮಗಳನ್ನು ಹೊರಡಿಸಿಕೊಂಡು ಹೊರಟವರನ್ನು ಅವಳ ಅತ್ತೆ ತಡೆದರು. ಸುಬ್ಬಕ್ಕ ಕೇಳಲಿಲ್ಲ. ನಾರಾಯಣಯ್ಯ ಮಾತೇ ಆಡಲಿಲ್ಲ. ಅತ್ತ ಮಗನೂ ಇಲ್ಲ; ಇತ್ತ ಅಳಿಯನೂ ಹೋದ. ಯಾರಿಗಾಗಿ ತಾವಿನ್ನು ಬದುಕಬೇಕು ? ಹಗಲಿರುಳು ಅತ್ತುಕರೆಯುವ ಮಗಳನ್ನು ಸಾಂತ್ವನಿಸುವುದೇ ದೊಡ್ಡ ಕೆಲಸ. ಹಾಗೂ ಹೀಗೂ ಒಂದು ತಿಂಗಳು ಉರುಳಿತ್ತು. ಭುವನಾ  ಬರಿ ಹಣೆ,  ಬೋಳು ಕೈಗಳಲ್ಲಿ ,  ಶೋಕದೇವತೆಯಂತೆ  ಆಹಾರವನ್ನೂ ಬಿಟ್ಟಾಗ ಹೆತ್ತ ಕರುಳು ವಿಲಿವಿಲಿ ಒದ್ದಾಡಿತು. 

''ಮಗೂ,  ಭುವನಾ,   ಸಾಕು ಸಾಕಿನ್ನು ಅತ್ತದ್ದು,  ಕರೆದಿದ್ದು. ಅದರಿಂದ ಅಳಿಯ ಪುನ ಬರ್ತಾನಾ? ಹಾಗಿದ್ರೆ ಹೇಳು ನಿನಗಿಂತ ಜೋರಾಗಿ ನಾವೂ ಅಳ್ತೇವೆ.  ಬುದ್ಧಿ ಇಲ್ಲ ನಿನಗೆ. ಯಾಕೇ ತಾಯಿ ಆಹಾರ  ಮುಟ್ಟುವುದಿಲ್ಲ? ಸತ್ತಿದ್ದು ಅಳಿಯನೇ ಹೊರತು ನೀನಲ್ಲ. ಹೆತ್ತವರಾಗಿ ನಾವಿಲ್ಲಿರುವಾಗ  ನೀನು ದುಖಿಸಕೂಡದು.  ಬಾಯಿಗೆ ಬೇಕಾದುದು ಮಾಡಿಸಿ ಉಣ್ಣು,   ತಿನ್ನು.  ಯಾರು ಹೇಳಿದ್ದು  ಹೀಗೆಲ್ಲಾ ವೇಷ ಕಟ್ಟಲು? ಬರಿಹಣೆ ಯಾವ    
ಪುಣ್ಯಕ್ಕೆ?ಚೆಂದಕ್ಕೆ ಕುಂಕುಮ ಹಚ್ಚಿಕೋ. ಬಣ್ಣಬಣ್ಣದ ಸೀರೆ  ಉಟ್ಟುಕೋ. ಅಲ್ಲಿ ಗಂಡನ ಮನೆಯಲ್ಲಿ ಹೊಟ್ಟೆಗೆ ಸರಿಯಾಗಿ ನಿನ್ನತ್ತೆ ಹಾಕಿದ್ದಾಳೋ ಇಲ್ಲವೋ? ನಾನಿದ್ದೇನೆ. ಯಾವ ಊಟ,  ತಿಂಡಿ ಬೇಕು ಹೇಳಿದ್ರೆ ರಂಜಿನಿ ಇದ್ದಾಳೆ.  ಮಾಡಿ ಬಡಿಸ್ತಾಳೆ. ಮಗು ಭಾನುಗೆ ಈಗಿನ್ನೂ ಐದು ವಯಸ್ಸು. ಅವಳಿಗೆ ನೋವು ಕೊಡಬೇಡ . ಅಂಗಳದಲ್ಲಿ ರಾಶಿ ರಾಶಿ ಹೂವು ಬಿಡುತ್ತದೆ. ಕಟ್ಟಿ ಮುಡಿದುಕೋ ತಾಯಿ. ಕೊರಗಿ ಕೊರಗಿ ಕಡ್ಡಿಯ ಹಾಗಾಗಿದ್ದಿಯಲ್ಲೇ? ಇಂದಿನಿಂದಲೇ   ತುಪ್ಪ ಹಾಲು, ಮೊಸರು ಹಾಕಿ ಆರೈಕೆ ಮಾಡ್ತೇನೆ. 

" ನನಗೇನು ಗತಿ; ನನಗೆ ಯಾರಿದ್ದಾರೆ ಅಂತ ನಮ್ಮ ಮಗಳಾಗಿ ಅಳಬಾರದು. ನಾವಿಲ್ವಾ?  ನಿನ್ನ ಹೀಗೆ ಬಿಡುವುದಿಲ್ಲ. ಮಗ ತೀರಿಕೊಂಡಾಗ ಸ್ವಲ್ಪ ಹಣ ಬಂದಿದ್ದು ನಮ್ಮ ಕೈಲೇ ಇದೆ. ಅಳಿಯ ತೀರಿಕೊಂಡು ವರ್ಷ ಕಳೆಯಲಿ.  ಪಾಪದ ಬಡ ಹುಡುಗನೊಬ್ಬನನ್ನು ಹಿಡಿದು ಮದುವೆ ಮಾಡಿಸಿಬಿಡ್ತೇವೆ. ಅಪ್ಪನೂ ಹಾಗೆ ಹೇಳಿದ್ದಾರೆ.  ಈ ಮನೆಯಲ್ಲಿ ಅವಳ ಕಣ್ಣೆದುರಿಗೆ ಗಂಡ ಹೆಂಡ್ತಿ  ನಗ್ತಾ ನಗ್ತಾ ಇದ್ರೆ ಹೊಟ್ಟೆ ಉರಿದು ಹೋದೀತು ಅದಕ್ಕೆ. ದುಡ್ಡು ಪೂರಾ ಖರ್ಚಾದರೂ ಬೇಜಾರಿಲ್ಲ.  ಸುಖವಾಗಿ ಬದುಕಲು ಆಗಬೇಕಾದ್ದು ನಾವು ವ್ಯವಸ್ತೆ ಮಾಡುವ.  ಜವಾಬುದಾರಿ ನಮಗೆ ಬಿಡು. ಏಳು,  ಮುಖ ತೊಳೆದು ಒಳ್ಳೆ ಸೀರೆ ಉಟ್ಕೋ ನೋಡೋಣ. ''

'ಅಮ್ಮ,   ಅದು,    ಅದು ರಂಜಿನಿಯ ಹಣ. ಅವಳು ಒಪ್ತಾಳಾ?ಮತ್ತೆ ಮತ್ತೆ ಒಂದು ಮಗು ಇರುವವಳನ್ನು ಯಾರಮ್ಮಾ ಮದುವೆಗೆ ಒಪ್ತಾರೆ?''

''ಅವಳಿಗೆ ಹಣ ಯಾತಕ್ಕೆ ಬೇಕೇ?ಮೂರು ಹೊತ್ತೂ ಊಟ ತಿಂಡಿ ಇಲ್ಲೇ ಆಗ್ತದೆ.  ಬೇರೆ ಇನ್ನೆಂಥ ಖರ್ಚಿದೆ? ಅದರ ಮೇಲೆ ಅದು ನಮ್ಮ ಮಗನ ಹಣ. ಅಕ್ಕನ ಮದುವೆಗೆ ಬೇಕಪ್ಪಾ ಅಂದರೆ ಅವ ಯಾಕೆ ಬೇಡಾ ಅಂತಾನೆ? ಅವ ಸತ್ತರೂ ಅವನ ದುಡ್ಡು ನಿನ್ನ ಮದುವೆಯಂಥ ಒಳ್ಳೆಯ ಕೆಲಸಕ್ಕೆ ಉಪಯೋಗವಾಗ್ತದೆ ಅಂದರೆ ಅವನ ಆತ್ಮಕ್ಕೆ ತೃಪ್ತಿ ಸಿಗುತ್ತದೆ. ಮಗುವಿನ ಚಿಂತೆ ನಿನಗೆ ಬೇಡ. ಅದು ಇಲ್ಲಿರಲಿ. ನಿನ್ನಿಂದ ಚಂದಕ್ಕೆ ನಮ್ಮ ರಂಜಿನಿ ಅದನ್ನು ನೋಡಿಕೊಳ್ತಾಳೆ. ಅವಳಿಗೆ ಮದುವೆ,  ಸಂಸಾರ,  ಮಕ್ಕಳ ಯೋಗ ದೇವರು ಕೊಡಲಿಲ್ಲ. ಇವಳೇ ಮಗಳು ಅಂದುಕೊಂಡರಾಯ್ತು.   ತೆಪ್ಪಗೆ ಇರು. ಅವಳೆದುರಿಗೆ ಬಾಯಿ ಬಿಡುವ ಅಗತ್ಯ ಇಲ್ಲ. ಚೆನ್ನಾಗಿ ಆರೈಕೆ ಮಾಡ್ತೇನೆ. ಏಳಮ್ಮ ತಾಯಿ. ಅಳಬೇಡ''

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
sangeetha raviraj
sangeetha raviraj
9 years ago

Chennagide mam

udaya narampady
udaya narampady
7 years ago

venikka  nimma kathegalu  tumba chennagive, nivu ninne agalpadige bandaga tumba mathanadalu agalilla. 

 udayagalpady

2
0
Would love your thoughts, please comment.x
()
x