ಹೆಣ-ಹೆಣ್ಣು:ನಳಿನ ಡಿ.


 

ಭಾನುವಾರದ ಒಂದು ನಡುಮಧ್ಯಾಹ್ನ ಐದು ಹೆಣ್ತಲೆಗಳು ಲಕ್ಕಮ್ಮ ಕಾಲೇಜಿನ ಅರ್ಧ ಕಟ್ಟಿದ್ದ ಗಿಲಾವು ಮಾತ್ರ ಕಂಡ ಸಿಮೆಂಟ್ ಕಟ್ಟಡದೊಳಗೆ ರಿಂಗಣಿಸದೆ ಸುಮ್ಮನಿದ್ದ ದೂರವಾಣಿಯ ಸುತ್ತಾ ಸಂಭಾಷಿಸುತ್ತಿದ್ದವು. ಹೋದವಾರ ಅದೇ ಜಾಗದಲ್ಲಿ ನಡೆದಿದ್ದ ಅಲ್ಲಿನ ಅಟೆಂಡರನ ನಂಟಸ್ಥಿಕೆಯ ಓಸಿ ವಿವಾಹದ ಗಬ್ಬೆಲ್ಲಾ ಮೂಟೆಯಾಗಿ ಕಾಲೇಜಿನ ಮುಂದೆ ಬಿದ್ದಿದ್ದು, ಕೊಳೆತು ಬರುತ್ತಿದ್ದ ವಾಸನೆಗೆ ಮೂಗು ಮುಚ್ಚಿಕೊಂಡೇ ಅನಿವಾರ್ಯವಾಗಿ ಅಲ್ಲಿ ನೆರೆದಿದ್ದರವರು. ಗುಲ್ಬರ್ಗಾದಿಂದ ತರಭೇತಿಗಾಗಿ ಬಂದು ಅನ್-ಏಡೆಡ್ ಆಗಿದ್ದ ಕಾಲೇಜಿಗೆ ಸೇರಿಕೊಂಡು ಸೈ ಅನ್ನಿಸಿಕೊಳ್ಳಲು ಎಣಗುತ್ತಿದ್ದ ಅರಕೇರಿ, ಮಂಗಳೂರಿನ ಬಳಿ ಕೊಣಜೆಯಿಂದ ಬಂದಿದ್ದ ಶೈಣೈಗೂ ಸೇರಿದಂತೆ ಅನಾಮತ್ತಾಗಿ ಸಿಕ್ಕಿದ್ದ ಕೌನ್ಸಲಿಂಗ್ ಸೀಟ್ ಇಲ್ಲೇ ದಕ್ಕಿದ್ದರಿಂದ ‘ಆತು ಬಿಡು ಇಲ್ಲೇ ಇರುಮಾ’ ಅಂತ ಮಂಡ್ಯದ ನೆಂಟರು ಹೇಳಿದಂತೆ ಹಲವರು ಇಲ್ಲೇ ಬಿಟ್ಟಿದ್ದರು . ಭಾನುವಾರ ಅಂದರೆ ಕಾಲೇಜಿನ ಯಾವುದೇ ಮೂಲೆಗಳಲ್ಲಿ ಮಾಸ್ತರು -ತರಗತಿ ಇಲ್ಲದ್ದ ಕಾರಣ ಸೋಮಕ್ಕ ಹಾಂಗೆಯೇ ಕೋಣೆಯ ಮೂಲೆಯಲ್ಲಿದ್ದ ಬೆಂಚಿನ ಮೇಲೆ ಕಣ್ಮುಚ್ಚಿ ಮಂಗಿಬಿಟ್ಟಿದ್ದಳು. ಉಳಿದಂತೆ ದಿವ್ಯಕ್ಕ (ಆಕಾರದಲ್ಲಿ ಕುಳ್ಳಗಿದ್ದರೂ ತನಗೆ ಪೋನ್ ಬಂದಾಗ ದೊಡ್ಡ ರಾಗದಲ್ಲಿ ಕೊಂಕಣಿ ಮಾತಾಡುತ್ತಾಳೆಂತ ಎಲ್ಲರಿಗೂ ದೊಡ್ಡಕ್ಕ ಆಗಿದ್ದವಳು) ಲೆಕ್ಕಾಚಾರದಂತೆ ಅಕ್ಕ ಪೋನ್ ಮಾಡಬೇಕಿತ್ತು, ತಿಂಗಳಿಗೆ ಎರಡು ಕಾಲ್, ಒಂದು ವಾರ ಅಪ್ಪನದು, ಮತ್ತೊಂದು ವಾರ ಭಾವನ ಮನೆಯಿಂದ ಅಕ್ಕ ಕರೆ ಮಾಡುವುದು ಎಂದು, ಈಗ ಅಪ್ಪನದ್ದೇ ಬರಬೇಕಿತ್ತಲ್ಲಾ ಎಂದು ಮರಳಿ ಯೋಚಿಸುತ್ತಾ ಲೆಕ್ಚರರ್ ಹೇಳಿಕೊಡುವ ಆತುರದ ಸೊಶಿಯಲ್ ಮೆಥೆಡ್ ಅರ್ಥವಾಗೋದಿಲ್ಲ, ಇಂಟರ್ನಲ್ಸ್ ತೆಗೆದುಹಾಕೋಕೆ ಯಾವ ಮಸೂದೆನೂ ಮಂಡನೆ ಯಾಗಿಲ್ಲ ಎಂದು ದೋಷಿಸುತ್ತಿದ್ದಳು. ಅರಕೇರಿ ಬೆಳಗ್ಗೆ ತನ್ನ ತಲೆಗೆ ಎಣ್ಣೆ ಎರೆದುಕೊಳ್ಳುತ್ತಿದ್ದಾಗ ಮಂಡ್ಯದ ಭಲ್ಲೇನಹಳ್ಳಿಯ ರೇಖಾ ತಮಾಶೆ ಮಾಡಿ ನಕ್ಕಿದ್ದಕ್ಕೆ ರೇಗಿ ಹೋಗಿ ದೊಡ್ಡ ರಂಪಾಟ ಮಾಡಿ ಮುನಿಸಿಕೊಂಡಿದ್ದಳು. ಇವರಿಬ್ಬರ ಒಣ ಕೋಪಕ್ಕೆ ಐದು ಮಂದಿಯಲ್ಲಿ ಮೀನಮೇಶದ ನಗು ಇದ್ದೇಇತ್ತು. ಅವಳೆಡೆಗೆ ಅವಳಂತೆ, ಇವಳೆಡೆ ಇವಳಂತೆ ಮಾತಾಡೋದು ಟಿಸಿಹೆಚ್ ಗೆ ಬಂದು ಅಭ್ಯಾಸ ಮಾಡಿಕೊಂಡ ಮೇಲೆ ಎಲ್ಲವನ್ನು ಒಳಮನಸ್ಸಿಗಿಂತ ತುಂಬಾ ದೂರದಲ್ಲಿ ಅಳೆಯುವುದು, ಹೆಚ್ಚೆಂದರೆ ಮಾತಾಡದೆ ಇರೋದು ರೂಡಿ ಮಾಡಿಕೊಂಡಿದ್ದರು. ಒಂದಿಲ್ಲೊಂದು ಕಾರಣಕ್ಕೆ ಇವರೆಲ್ಲರ ನಡುವೆ ಸ್ಪರ್ಧೆ ಏರ್ಪಟ್ಟಿದ್ದರೂ ದಿನಾ ಬೆಳಿಗ್ಗೆ ಸಂಜೆ ಮೂರು ಕಿ.ಮೀ ದೂರದ ಶೆಡ್ ನಲ್ಲಿ ಕಾಲೇಜು ಮಂಡಳಿ ಹಾಸ್ಟೆಲ್ ಅಂತ ಹೇಳಿ, ದುಬಾರಿ ದುಡ್ಡಿಗೆ ಕೊಟ್ಟಿದ್ದ ಶೀಟು ಕಟ್ಟಡದಲ್ಲಿ ಹೊರಗಿನ ಶೌಚವಿದ್ದರೂ ಒಪ್ಪಿಕೊಂಡು ಇರಬೇಕಾಯಿತು. ಹಾಗೆ ಮಾಡಲು ಇನ್ನೊಂದು ಕಾರಣ ಕೌನ್ಸಿಲಿಂಗ್ ಮುಗಿಯುವ ಹಂತದಲ್ಲಿ ಸೀಟು ಸಿಕ್ಕಿತ್ತು, ಕಾಲೇಜು ದರ್ಶನ ಮಾಡಲು ಬೆಂಗಳೂರಿನ ಮೆಜೆಸ್ಟಿಕ್ ನಿಂದ ನೇರವಾಗಿ ಚನ್ನಪಟ್ಣಕ್ಕೆ ಬಂದಿಳಿದ ಕೂಡಲೆ ಕಾಸು-ಕಾಸು-ಕಾಸು ಅಂತ ಶುಲ್ಕದ ಲೆಕ್ಕದಲ್ಲಿ ಎಲ್ಲಾ ಕಿತ್ಕಂಡು ಊರಿಗೆ ಹೋಗಲು ಮಾತ್ರ ಐನೂರು ರೂ. ಉಳಿಸಿದ ಮೇಲೆ ಜೊತೆಗೆ ಬಂದ ಅಪ್ಪಂದಿರು ಮುಖ ಸಣ್ಣಾಗಬಾರದೆಂದು ಹೆಣ್ಣುಮಕ್ಕಳು ಧೈರ್ಯದಿಂದ, ‘ದುಡ್ಡು ತಾನೆ ಕಿತ್ಕೋತಾರೆ, ಬಿಡಪ್ಪಾ, ಮಾರ್ಕ್ಸ್ ನಾನೇ ಪಡಕೊಂಡು ಇಲ್ಲೇ ಟ್ರೇನಿಂಗ್ ಮಾಡ್ತೀನಿ’ ಅಂತ ಸವಾಲಿನಂತೆ ಹೇಳಿಕಳಿಸಿದ್ವು.

 

ಹಾಸ್ಟೆಲ್ ಗಂಡುಮಕ್ಕಳು ಬೆಳಿಗ್ಗೆ ಎಣ್ಣೆ ಮೆತ್ತಿದ ಉಪ್ಪಿಟ್ಟು ತಿಂದ ಕಾರಣದಿಂದ ಗ್ಯಾಸ್ಟ್ರಿಕ್ ಸಮಸ್ಯೆ ಅಂತ ಭಟ್ಟ ಮಾದೇವನ ಮೇಲೆ ಕೋಪ ಮಾಡಿದ ಪರಿಣಾಮವಾಗಿ ಮಧ್ಯಾಹ್ನಕ್ಕೆ ಉಪ್ಪುಸಾರು ಮುದ್ದೆ ಮಾಡೋದಾಗಿ ಆದೇಶ ಹೊರಬಿದ್ದಿತ್ತು. ಆ ಆದೇಶವನ್ನು ಖುದ್ದು ಕಾಲೇಜಿನ ಕದ್ದು ಸಹಿ ಮಾಡಿಕೊಂಡು ಪಡಕೊಂಡಿದ್ದ ಮಂಗೇಶನೇ ಊದಿಹೋಗಿದ್ದದ್ದನ್ನು ಈ ಹುಡುಗಿಯರು ಬಿಟ್ಟಕಣ್ಣುಬಿಟ್ಟಂತೆ ನೋಡಿದರು. ಯಾವುದೋ ಒಂದು ಊಟ ಅಂತ ಗುಲ್ಬರ್ಗಾದವಳು ರೊಟ್ಟಿ ನೆನೆಸಿಕೊಂಡು ಹೇಳಿದರೆ, ಮಂಡ್ಯದ ಸೋಮಕ್ಕ ‘ವ್ಹಾವ್ ಮುದ್ದೆ-ಉಪ್ಪುಸಾರು ಇವತ್ತೇ ಸಿಕ್ಕುತ್ತಲ್ಲಾ ಅಷ್ಟೇ ಸಾಕು, ಪೋನ್ ಬರದಿದ್ದರೂ ಪರವಾಗಿಲ್ಲ’ ಅಂತ ಬಾಯ್ನೀರು ನುಂಗಿಕೊಂಡಳು, ನಡುವೆಯೇ ನಾಳಿನ ಕಿರುಪರೀಕ್ಷೆ ಅವಳ ರಸಸ್ವಾದಕ್ಕೆ ಅಡ್ಡಿಯಾಯಿತು. ‘ಒಂದು ಹಿಡಿ ಮೀನು ತಾಯಾರು ಮಾಡುವ ಜನ ಒಬ್ಬರಿಲ್ಲ ಇಲ್ಲಿ, ಎಂಥಾ ಅಡುಗೆ ಇದು ಮಾರಾಯ್ತಿ’ ಅಂತ ಶೆಣೈ ಬೇಸರಗೊಂಡಳು.

 

ಆತ ಬೆಳಗ್ಗೆ ತಣ್ಣೀರು ಸ್ನಾನವಾದ ನಂತರ ಲಿಂಗಾಯತನಾಗಿದ್ದರೂ, ಬರೇ ಒಂದೇ ಒಂದು ಊದುಗಡ್ಡಿ ಆಕಾಶಕ್ಕೆ ಬೆಳಗಿ ಮತ್ತೆ ನಾಳೆಗೆ ಎತ್ತಿಡುತ್ತಿದ್ದವನು, ಅದಕ್ಕೆ ಪೂಜಾರಿ ಅಂತ ನಾಮಕರಣವಾದ ಜಗ್ಗೇಶ್ ಪೂಜಾರಿ ಅನತಿ ದೂರದಲ್ಲಿ ಹೋಗುತ್ತಿದ್ದವ, ಸಂಜ್ನೆಯಿಂದ ಕುಸುಮಿಯನ್ನು ಕರೆದು ಏನೋ ಚೀಟಿ ಕೈಗಿತ್ತು ಹೋದ. ಕುಸುಮಿ ವಾಲ್ಮೀಕಿ ಜಾತಿಯವಳು ಇಬ್ಬರಿಗೂ ಪ್ರೀತಿ ಶುರುವಾಗಿದ್ದು ಈ ಹುಡುಗಿಯರಿಗೆ ಗೊತ್ತಿದ್ದರಿಂದ ಸುಮ್ಮನೆ ಪುಸ್ತಕದೊಳಗೆ ಮತ್ತೆ ತಲೆ ಹುದುಗಿಸಿಕೊಂಡರು. ಮಲಗಿದ್ದ ರೇಖಿಯನ್ನು ದಡಾರನೆ ಎಬ್ಬಿಸಿ, ಮನಮಿತ್ರ ಪ್ರೇಮದ ಗುರುತಾಗಿ ಕೊಟ್ಟು ಹೋದ ಪ್ರಶ್ನೆ ಪತ್ರಿಕೆಯನ್ನ ಉಳಿದ ನಾಲ್ವರಿಗೂ ಸೇರಿಸಿಕೊಂಡು ತೆರೆದಳು. ಐದು ತಲೆಗಳನ್ನೆಲ್ಲಾ ಬಗ್ಗಿಸಿಕೊಂಡು ಅವರು ಒಟ್ಟಿಗೆ ನೋಡಿದಾಗ ಅದು ನಾಳೆ ಬರೆಯಬೇಕಾದ ಕಿರುಪರೀಕ್ಷೆ ಹತ್ತು ಅಂಕಗಳ ಪ್ರಶ್ನೆ ಪತ್ರಿಕೆ ಆಗಿದೆ ಅಂತ ಗೊತ್ತಾಗಿದ್ದು. ಬ್ಯಾರೆ ಎಲ್ಲಾ ಮರೆತು ಬರೀ ಅವೇ ಪ್ರಶ್ನೆಗಳನ್ನ ಓದಕ್ಕೆ ಶುರು ಹಚ್ಕಂಡ್ರು. ಎಲ್ಲರಿಗೂ ಪೋನ್ ಬರುತ್ತದೆಂಬ ಕಾತರದ ನೆನಪು ಹಾರಿ ಹೋಯ್ತು.

 

ಅರ್ಧ ಅಂಕಗಳ ಐದು ಪ್ರಶ್ನೆಗಳು ಹೊಂದಿಸಿಬರೆಯಿರಿ, ಭರ್ತಿಮಾಡಿ, ಒಂದು ಅಂಕಗಳ ಐದು ಪ್ರಶ್ನೆಗಳು, ಖಚಿತವಾದ ಪತ್ರಿಕೆ ಆಗಿದ್ದುದರಿಂದ ಇಷ್ಟೇನಾ…. ಉಧ್ಗಾರ ಹೊರಬಿತ್ತು. ಸಮಯ ಮೂರು ಗಂಟೆಯ ಹೊತ್ತಿಗೆ ಜಾರಿತ್ತು. ಊಟದ ನಂತರ ಬಿಸಿಲಿಗೆ ತಲೆ ಮೇಲೆ ದುಪ್ಪಟ್ಟಾ ಹೊದ್ದುಕೊಂಡು ಪುಸ್ತಕಗಳನ್ನು ಕೈಗೆತ್ತಿಕೊಂಡು ಮರಳಿ ಹಾಸ್ಟೆಲ್ ಜಾಡು ಹಿಡಿದರು. ಎಲ್ಲ ಮೊಗದಲ್ಲೂ ನಾಳೆ ಫುಲ್ ಮಾರ್ಕ್ಸ್ ಸೊಶಿಯಲ್ ಮೆಥೆಡ್ ನಲ್ಲಿ ಎಂಬ ಉತ್ಸಾಹ ಚಿಮ್ಮುತ್ತಿತ್ತು. ಹೆಚ್ಚಾಗಿ ಹಾದು ಹೋಗುವ ಹಲಗೂರು ಬಸ್ ಧೂಳೆಬ್ಬಿಸಿ ದಾಟಿ ಹೋಯಿತು, ಬಿಸಿಲಿಗೆ ಬಿಂಜೆನ್ನಿಸುವ ಬಯಲು ಸೀಮೆಯ ರಸ್ತೆ, ಪಕ್ಕದ ಖಾಲಿ ಗೋಡೆಯ ಮೇಲೆ ಪಾಪಿಗಳ ಲೋಕದಲ್ಲಿ ಸಿನೆಮಾದ ವಿಚಿತ್ರ ಭಂಗಿಗಳ ಪೋಸ್ಟರ್ ಗಳು. ಸಮರ್ಪಕ ವ್ಯವಸ್ಥೆಗಳಿಲ್ಲದ ಟಿಸಿಹೆಚ್ ಕಾಲೇಜ್ ಒಂಥರಾ ಪಾಪಿಗಳ ಲೋಕವೇ ಅಂದುಕೊಂಡು ಬಿಸಿಲಿಗೆ ತಲೆತಗ್ಗಿಸಿ ನಡೆಯಹತ್ತಿದರು. ರಸ್ತೆಯ ಇಕ್ಕೆಲ್ಲಗಳಲ್ಲಿ ಕೇಬಲ್ ಸಂಪರ್ಕಕ್ಕೆಂದು ಅಗೆಯುತ್ತಿದ್ದವರು ಅಂದು ಕಾಣದಾಗಿದ್ದರು. ರಸ್ತೆಬದಿಯ ಮರದ ಕೊಂಬೆಗೆ ಮಗು ಹಾಕಿ ತೂಗಲೂ ಪುರುಸೊತ್ತಿಲ್ಲದೆ, ಪುರುಷರಂತೆಯೇ ನೆಲ ಅಗೆಯುವ, ಚರಂಡಿಯ ಎರಡೂ ಬದಿಗೆ ಕಾಲಿಟ್ಟು ಗುದ್ದಲಿ ಹಿಡಿದು ಬಗ್ಗಿ ಮಣ್ಣೆತ್ತಿ ಮೇಲೆ ಹಾಕುವ ಕೆಲಸಗಳನ್ನು ಮುಖದ ಮೇಲೆ ಶ್ರಮ ಕಾಣಿಸದಂತೆ ನಿರ್ವಹಿಸುತ್ತಿದ್ದ ಗಂಡೆಂಗಸರು ಆಗ ಅಲ್ಲಿರಲಿಲ್ಲ, ಬಹುಶಃ ಅವರ ಕೆಲಸ ಮುಗಿದು ಇನ್ನೊಂದೆಡೆ ಗೂಳೆ ಹೋಗಿರಬಹುದು. ಅದೇ ಮರದ ಕೆಳಗೆ ಹಾದುಹೋಗುವಾಗ ಅರಕೇರಿಗೆ ಇದೆಲ್ಲಾ ನೆನಪಾಗಿ ಏನನ್ನಾದರೂ ಬಿಟ್ಟು ಹೋಗಿದ್ದಾರಾ ಅಂತ ಹುಡುಕುತ್ತಿದ್ದಳು. ಶೈಣೈ ಎಲ್ಲರಿಗಿಂತ ಮುಂದೆ ಹೋಗುತ್ತಿದ್ದುದರಿಂದಲೋ ಏನೋ ತಟ್ಟನೆ ಅದೇ ಚರಂಡಿಯ ಮೇಲಿನ ಮಣ್ಣ ನೆಲದಲ್ಲಿ ಯಾವುದೋ ಕಪ್ಪಾದ ಆಕೃತಿ ಮಲಗಿರುವುದು ಸ್ಪಷ್ಟವಾಗಿ ಕಂಡಿತು. ಒಮ್ಮೆ ಹೆದರಿ ಒಂದು ಹೆಜ್ಜೆ ಹಿಂದಕ್ಕೆ ಹೋದವಳು, ಐದು ಜನಾ ಇದ್ದೇವಲ್ಲಾ ಎಂಬ ಧೈರ್ಯದಿಂದ ಎಲ್ಲರಿಗೂ ತೋರಿಸಿದಳು. ಹೌದು ಅಲ್ಲಿ ಅಷ್ಟು ದಿನ ಕೆಲಸ ಮಾಡುತ್ತಿದ್ದ ಮಣ್ಣು ಬಗೆಯುತ್ತಿದವರನ್ನೇ ಬಣ್ಣದಲ್ಲಿಯೂ, ಕೈ-ಕಾಲಿನ ಮೇಲೆ ಮೆತ್ತಿದ್ದ ಮಣ್ಣಿನಿಂದಲೂ ಹೋಲಿಸುವ ಆ ವೃದ್ಧನ ಹೆಣ ಅಕ್ಷರಶಃ ಅನಾಥವಾಗಿ ಮಲಗಿತ್ತು, ಮಲಗಿದ್ದ ಹಂತದಲ್ಲಿ ಪ್ರಾಣ ಹೋಯಿತ್ತಾ? ಅಥವಾ ಸತ್ತಮೇಲೆ, ಹೆಣವನ್ನು ತಂದು ಹೀಗೇ ಅಂಗಾತವಾಗಿ ಮಲಗಿಸಿ ಹೋಗಿದ್ದಾರಾ? ಮೈಮೇಲೆ ಹೊಡೆತ, ರಕ್ತ ಯಾವುದರ ಸ್ಪಷ್ಟ ಗುರುತುಗಳೇನೂ ಇರಲಿಲ್ಲವಲ್ಲಾ ಹೇಗೆ ಹೇಳೋದು? ಆತನ ಮೈ ಬಿಸಿಲಿನ ಬೇಗೆಗೆ ಸುಟ್ಟುಹೋಗುತ್ತಿಲ್ಲವೇ, ಬರೀ ನಿದ್ದೆಯಲ್ಲಿದ್ದಿದ್ದರೆ ತನ್ನನ್ನು ಬಿಸಿಲಿನಿಂದ ದೂರ್ಪಡಿಸಿಕೊಳ್ಳಲಾದರೂ ಆತ ಎದ್ದು ನೆರಳಿಗೆ ಹೋಗಬೇಕಾಗಿತ್ತಲ್ಲವಾ? ಏನಾಗಿದೆ ಅಜ್ಜನಿಗೆ, ಆತನ ಮುಖದಲ್ಲಿ ಏನೋ ಒಂದು ರೀತಿಯ ಶಾಂತತೆ ಇದೆ. ಆತ ರಾತ್ರಿಯೇ ಮಲಗಿರಬಹುದೇ? ಮೈಯಲ್ಲಿ ಒಂದಿಂಚೂ ಕೊಬ್ಬಿಲ್ಲದ ಅಜ್ಜ, ಮಾಮೂಲಿಯಂತೆ ಬರೀ ಮಣ್ಣಡರಿದ ಕಚ್ಚೆಯುಟ್ಟು ಬಿದ್ದುಕೊಂಡಿದ್ದಾನೆ, ಓಹ್, ನಿಂತುಕೊಳ್ರೇ ಯಾಕಷ್ಟು ಬೇಗ ಹೋಗಿಬಿಟ್ರಿ? ನಾಕು ಹೆಜ್ಜೆ ಹಿಂದಿಟ್ಟು ಕಲ್ಪನಾಲೋಕದಲ್ಲಿ ಮುಂದಿದ್ದ ತನ್ನನ್ನು ಬಿಸಿಲೂರಿನ ಬಿಸಿಲಿನಲ್ಲಿ ಮರಳಿ ಮೈ ಚಿಗುಟಿಕೊಂಡು ಮುಂದೆ ಓಡಿ ಹೋಗಿದ್ದ ಹುಡುಗಿಯರನ್ನು ಕೂಗುತ್ತಾಳೆ ಅರಕೇರಿ. ‘ಇನ್ನು ನಿಂತರೆ ನಾಡಿದ್ದಿನ ಕಿರುಪರೀಕ್ಷೆಗೆ ಯಾರು ಓದುತ್ತಾರೆ? ನಾವು ಹಾಸ್ಟೆಲ್- ನಲ್ಲಿರೋರು, ಇಲ್ಲೆಲ್ಲಾ ಗೌಡ್ರದ್ದೇ ಜಾಸ್ತಿ ಇದ್ರೂ, ಹಾಸ್ಟೆಲ್ಲ್ ಹೆಸರಿನಲ್ಲಿ ಲೂಟಿಗೆ ಒಳಗಾಗಿರೋರು ನಾವು, ನಾವು ಕಕ್ಕುತ್ತಿರುವ ದುಡ್ಡಿಗಾದರೂ ಸರಿಯಾದ ಮಾರ್ಕ್ಸ್ ತೆಗೆದುಕೊಂಡು ಹೋಗಬೇಕು, ಇಲ್ಲದಿದ್ದರೆ ಮನೆಯಲ್ಲಿ ಮರ್ವಾದೆ ಇರಲ್ಲಾ, ನಾವು ನಿಲ್ಲಲಿಕ್ಕಾಗೋದಿಲ್ಲ ತಾಯೇ. . ಬಾ.. ಬೇಗ. ರೇಖಾ ದನಿ ಏರಿಸಿ ಹೇಳಿದಳು.

 

ಅಲ್ಲಾ ನಿಂತು ನೋಡಿ ಏನಾದರೂ ಸಹಾಯ ಮಾಡಬೇಕಾಗಿತ್ತಲ್ವಾ?’ ಓಡುತ್ತಿದ್ದಂತೆ ನಡೆಯುತ್ತಿದ್ದವರ ಸಾಲಿಗೆ ಏರುಸಿರು ಬಿಡುತ್ತಾ ಬರುವ ಅರಕೇರಿಗೆ ಮನಸ್ಸು ನೋಯುತ್ತಿತ್ತು. ‘ಯಾರು ಸಹಾಯ ಮಾಡಲು ಸಾಧ್ಯ ಮಾರಾಯ್ತಿ’, ಶೈಣೈ ಉಪಚಾರದ ಮಾತುಗಳು ಆರಂಭವಾದವು.. ‘ಇಲ್ಲಿ ನಾವಿರೋದೆ ನಮ್ಮ ಟಿಸಿಹೆಚ್ ಮುಗಿಸೋಕೆ ಅಂತ, ಬೇರೆ ಕಡೆ ಓಡಾಡಿ ಸೀಟು ಮ್ಯೂಚುಯಲ್ ಅಂತ ಅಲೆಯಲು ಯಾರೂ ಸಹಾಯ ಮಾಡುವವರಿಲ್ಲ, ಖಾಸಗಿ ಕಾಲೇಜ್ ಇದು, ಇಲ್ಲಿ ದುಡ್ಡು ಕೊಟ್ಟವರಿಗೆ ಅಂಕಗಳು, ಅದ್ರಲ್ಲಿ ಬೇರೆ ಹೊಸ ಜಾಗ, ಮಂಗೇಶನ ಬಗ್ಗೆ ನೂರಾರು ಹೆಣ್ಣುಗಳನ್ನು ಸತಾಯಿಸಿ ಮಾರ್ಕ್ಸ್ ನೀಡದೆ ಖಾಲಿ ಅಂಕಪಟ್ಟಿಯಲ್ಲಿ ಕಳಿಸಿರುವ ಕತೆಗಳು ಕೇಳಿಬರುತ್ತಿದೆ. ನಾವು ಮೈಯೆಲ್ಲಾ ಎಚ್ಚರಾಗಿರಬೇಕು, ಇದು ಅವನದೇ ಅಡ್ಡಾ, ಪ್ರತಿಯೊಬ್ಬ ಅಧ್ಯಾಪಕರೂ ಅವನ ಸಂಬಳಕ್ಕಾಗಿ ಹಲ್ಗಿಂಜುತ್ತಾರೆ. ಪ್ರಿನ್ಸಿಪಾಲರೋ, ಆತ ಕೊಡುವ ಒಂದು ಫುಲ್ ಬಾಟಲ್ ಗೆ ಮರುಳಾಗಿ ಕಾಲೇಜ್ ಸ್ಥಳಕ್ಕೂ ಬಂದಿರುತ್ತಾರೆ. ಸಂಬಳದ ದಿನ ಹಾಜರಾಗುವ ಪಠ್ಯೇತರ ಚಟುವಟಿಕೆಗಳ ಶಿಕ್ಷಕರಿಗಂತೂ ನಮಗೆ ತರಭೇತಿ ಕೊಡುವ ಉತ್ಸಾಹ ಬರೀ ನಿಯೋಜಿತ ಕಾರ್ಯ ಬರೆಸುವವರೆಗೆ ಮಾತ್ರ ಇರುತ್ತದೆ. ಹಣಕಾಸಿನ ಸಮಸ್ಯೆಯಿಂದ ಸಾಲ ಮಾಡಿ ಕಳಿಸಿದ್ದಾರೆ ಕಣೆ, ಇಲ್ಲಿ ಕಾಗೆ ಕಂಡರೂ ಕೋಗಿಲೆ ಕಂಡೆವು ಅಂತ ಹೇಳಿಕೋತಾ ಹೋಬೇಕು. ಇಲ್ಲದೇ ಹೋದ್ರೆ ನಾವೇ ಅಪರಾದಿಗಳನ್ನಾಗಿಸುತ್ತಾರೆ. ಹೋದ ವರ್ಷ ಟಿ.ನರಸಿಪುರದ ಮಂಜುಳಿಗೆ ಪ್ರೇಯರ್ ಹಾಲ್ ನಲ್ಲಿಯೇ ‘ನಿಮ್ಮಪ್ಪ ಕುಡುಕ ಫೋನ್ ಮಾಡಿದ್ದ, ಏನೇನ್ ಹೇಳ್ದ ಗೊತ್ತಾ’ ಅಂತ ಅವ್ಮಾನ ಮಾಡಿದ್ದರಂತೆ, ಆಕೆ ಮತ್ತೆಂದೂ ಗೌರ್ಮೆಂಟ್ ಸೀಟ್ ಆದ್ರೂನೂ ತಿರುಗಿ ತರಭೇತಿಗೆ ಬರಲೇ ಇಲ್ಲ. ಅವಳಮ್ಮ ಬೆಂಗಳೂರಿನಲ್ಲಿ ಮನೆಗೆಲಸ ಮಾಡಿಕೊಂಡು ಇವಳನ್ನ ಸಾಕಿದ್ದಳು. ಅಪ್ಪ ಬಿಎಂಟಿಸಿ ಕಂಡಕ್ಟರ್, ದೊಡ್ಡ ಕುಡುಕ, ಅವಳ ಭವಿಷ್ಯ ಇಲ್ಲಿನ ಪ್ರಜ್ನಾವಂತ ಶಿಕ್ಷಕರೆದುರೇ ಕತ್ತಲಾಯಿತು. ಹೋದ ವರ್ಷ ಡೊನೇಶನ್ ಬಾಕಿ ಇದೆ ಅಂತ ಮಂಗೇಶ ಕೊಟ್ಟ ಟಾರ್ಚರ್ ಗೆ ಮಾಂಗಲ್ಯ ಅಡಮಾನ ಇಟ್ಟು ಸೀನಿಯರ್ ಸ್ಟೂಡೆಂಟ್ ದುಡ್ದು ಕೊಟ್ಟ ಮೇಲೆ ಹಾಲ್ಟಿಕೇಟ್ ಕೊಟ್ರಂತೆ. ನ್ಯಾಯ ನೀತಿ ಅಂತ ನಾವು ಅಪ್ಪನ ಮನೆಯಲ್ಲಿ ಕಂಡಿದ್ದನ್ನೆಲ್ಲಾ ಇಲ್ಲಿ ಉರು ಹೊಡೆದುಕೊಂಡು ಒಪ್ಪಿಸಲಾಗುವುದಿಲ್ಲ. ನೀನು ಭಾವನಾತ್ಮಕವಾಗಿ ಆಲೋಚಿಸಬೇಡ, ಈ ರಸ್ತೆಯಲ್ಲಿ ನೂರಾರು ಜನ ಸ್ಥಳೀಯರೇ ಓಡಾಡುತ್ತಾರೆ, ನಿನಗ್ಯಾಕೆ ಬೇಕು ತಲೆ ಶೂಲೆ?, ಮೊದಲೇ ಎಲ್ಲರಿಗಿಂತ ಸುಂದರವಾಗಿದ್ದೀಯಾ, ನಿನ್ನ ಮೇಲೆ ಮಂಗೇಶನ ಕಣ್ಣು ಬಿದ್ದಿರುತ್ತೆ, ಹುಷಾರು’ ಒಬ್ಬೊಬ್ಬರು ಒಂದೊಂದು ಕತೆಯನ್ನು ಉಸುರಿದರು.

 

ಗೆಳತಿಯರು ಎಚ್ಚರಿಕೆ ಹೇಳಿದ್ದು ಸರಿ ಕಂಡರೂ, ಆತ್ಮವಂಚನೆಯ ನೂರಾರು ಹಾದಿಗಳಲ್ಲಿ ಒಂದನ್ನು ಇಂದೇ ಮೆಟ್ಟಿದ್ದೇನೆಂದು ಅನಿಸಿ, ಮುಂದಿರುವ ಎರಡು ವರ್ಷಗಳನ್ನು ನೆನೆದು ಜ್ವರ ಬಂದಿತ್ತು. ಅಪ್ಪ ಬಿಟ್ಟು ಹೋದ ರಾತ್ರಿ ಪಕ್ಕದಲ್ಲಿರುವ ಮರಿವೆಂಕಣಯ್ಯ ಮಾಸ್ತರ ಕಿರಿಯ ವಯಸ್ಸಿನ ಸುಂದ್ರಿ ಹೆಂಡ್ತಿ ಐವರನ್ನೂ ಕರೆದು ‘ನೀವು ಇಲ್ಲೇ ಇರೋದು ವಾಸಿ, ಇಲ್ಲಿಂದ ಬೇರೆ ಕಡೆ ಹೋದರೆ ಎಷ್ಟು ಜನ ಬಸಿರಾಗುತ್ತಾರೋ? ಇನ್ನೆಷ್ಟು ಹುಡುಗಿಯರು ಬಾಣಂತಿಯರಾಗುತ್ತಾರೋ?’ ಅಂತ ಗೇಲಿ ಸ್ವರ ತೆಗೆದಿದ್ದಳು. ಎಸ್ ಟಿಡಿ ಕರೆ ಮಾಡಲು ಅಂಗಡಿಗೆ ಹೋದಾಗ ಆತ, ಎಷ್ಟು ಜನರ ಹುಡ್ಗೀರ್ ಈ ವರ್ಷ ಬಂದಿದ್ದೀರಿ, ಸುಂದರವಾಗಿರೋರ್ ಈ ಕಾಲೇಜ್ ನಲ್ಲಿ ಬೇಕಾದಷ್ಟು ಅನುಭವಿಸಿ ಹೋಗಿದ್ದಾರೆ, ಮ್ಯೂಚುಯಲ್ ಸಿಕ್ರೆ ನೋಡ್ಕಳ್ರಿ’ ಅಂದಿದ್ದ. ಹೋದ ವರ್ಷದ ವಿದ್ಯಾರ್ಥಿಯೊಬ್ಬ ‘ಇಲ್ಲಿ ಯಾರೂ ಸರಿಕಿಲ್ಲ, ಬರೀ ಬಕೇಟ್ ಹಿಡಿಯೋರ್ ಜಾಸ್ತಿ, ಯಾರ ಹತ್ತಿರ ಏನೂ ಮಾತಾಡಿ ಸಿಕ್ಕಿಹಾಕ್ಕೋಬೇಡಿ’ ಅಂದು ಅನುಭವ ಹೇಳಿಹೋಗಿದ್ದ. ನಿದ್ರೆಯೆಂಬಂತೆ ಜಾರಿದಾಗಲೂ ಮಂಗೇಶ ಅಟ್ಟಿಸಿಕೊಂಡು ಬಂದಂತೆ, ಬಚಾವಾಗಲೂ ಐವರು ಹುಡುಗಿಯರೂ ಚಲ್ಲಾಪಿಲ್ಲಿಯಾಗಿ ಓಡಿ ಹೋಗಿ, ಮರಿವೆಂಕಯ್ಯನ ಹೆಂಡತಿಯ ಪಾದದಲ್ಲಿ ಬಿದ್ದಂಗೆ’ ಕನಸಾಗುತ್ತಿತ್ತು ಇವಳಿಗೆ.

 

ಜ್ವರದ ನೆಪವೊಡ್ಡಿ ಮೂರು ದಿನಗಳು ಒಬ್ಬಳೇ ಹಾಸ್ಟೆಲ್ ಎಂದು ಕರೆಯಲ್ಪಡುತ್ತಿದ್ದ ಒಂದೇ ಕೋಣೆಯಲ್ಲಿ ಶೀಟ್ ನೋಡುತ್ತಾ ಅಜ್ಜನಂತೆಯೇ ಮಲಗಿದ್ದ ಅರಕೇರಿ. ‘ಎಲ್ಲಿ ಹೋದಳು ಹೆಣ್ಣನ್ನು ಮಾನಹರಣಕ್ಕಾಗಿಯೇ ಹುಟ್ಟಿಕೊಂಡವಳಂತೆ ನೋಡುವವರೇ ಹೆಚ್ಚು. ಇಲ್ಲಿಗೆ ಬಂದಾಗ ಪರಿಶುದ್ಧ ಗಂಗೆಯಂತೆಯೇ ಬಂದೆ, ಎರಡುವರ್ಷದ ನಂತರವೂ ಹಾಗೆಯೇ ನಿರ್ಗಮಿಸುತ್ತೇನೆ’ ಸ್ವಯಂ ಪ್ರತಿಜ್ನೆ ಮಾಡಿಕೊಂಡವಳಂತೆ ಮೈಕೊಡವಿ ಎದ್ದಳು ಅರಕೇರಿ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x