ಹೆಣ್ಣೆಂದರೆ ಶಕ್ತಿ..: ಪೂಜಾ ಗುಜರನ್ ಮಂಗಳೂರು

ಪ್ರತಿ ವರ್ಷವೂ ಹೆಣ್ಣಿನ ಬಗ್ಗೆ ಅವಳ ನೋವು ಸಾಧನೆಯ ಬಗ್ಗೆ ಬರೆಯುವಾಗಲೆಲ್ಲ ಏನೋ ಕಸಿವಿಸಿ. ಯಾರು ಎಷ್ಟೆ ಬರೆದರೂ ಏನೇ ಹೇಳಿದರೂ ಅವಳ ಅಂತರಂಗವನ್ನು ಮುಟ್ಟಲು ಯಾರಿಂದಲೂ ಆಗುವುದಿಲ್ಲ. ಅವಳ ಒಳಗಿರುವ ನೋವು ಅಸಹಾಯಕತೆ ಯಾರ ಕಣ್ಣಿಗೂ ಗೋಚರವಾಗುವುದಿಲ್ಲ. ಯಾಕೆಂದರೆ ಅವಳು ಹೆಣ್ಣು. ಕಲ್ಪನೆಗೂ ಮೀರಿದ ವ್ಯಕ್ತಿತ್ವದವಳು. ಬರೆದರೂ ಮುಗಿಯದಷ್ಟಿದೆ ಹೇಳಿದರೂ ಹೇಳದಷ್ಟು ಬಾಕಿ ಉಳಿಯುತ್ತದೆ. ಹೊಗಳಿಕೆ ತೆಗಳಿಕೆಗಳು ಅವಳಿಗೆ ಸರ್ವೇಸಾಮಾನ್ಯ. ಆದರೂ ಅವಳನ್ನು ವರುಷಕ್ಕೊಮ್ಮೆ ಗುಣಗಾನ ಮಾಡಿ ತೋಚಿದನ್ನು ಗೀಚಿದಾಗ ಒಂದು ದಿನದ ಮಟ್ಟಿಗೆ ಅವಳು ಉತ್ತಮ ಮಹಿಳೆ. ವಿಶ್ವ ಮಹಿಳೆಯಾಗಿ ಮಾರ್ಪಾಡಗಿರುತ್ತಾಳೆ. ಅವಳನ್ನು ಗುಣಗಾನ ಮಾಡಲು ಹ್ಯಾಪಿ ವುಮೆನ್ಸ್ ಡೇ ಮಾತ್ರ ಅವಳ ಪಾಲಿಗೆ ದೊರೆಯುವ ಏಕೈಕ ದಿನ.

ಅಲ್ಲಿವರೆಗೂ ಜರಿದು ಹರಿದು ದೂಷಿಸಿ ಅಳಿಸಿ ಅವಳ ಅಸ್ತಿತ್ವವನ್ನು ಮೂಲೆಗೆಸೆಯುವ ಜನರಿಂದ ಅವಳಿಗೆ ಮುಕ್ತಿ ಸಿಕ್ಕಿರುವುದಿಲ್ಲ. ಹೆಣ್ಣು ಅಂದ್ರೆ ಅವಳು ಯಾವತ್ತೂ ತನಗಿಂತ ಎತ್ತರಕ್ಕೆ ಏರಬಾರದು ಅನ್ನುವ ಜನರು ಅವಳನ್ನು ಅವಳ ಸಾಧನೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ತನ್ನ ಮನೆ ತನ್ನವರು ಅನ್ನುವ ನಿಸ್ವಾರ್ಥ ಪ್ರೀತಿಯನ್ನು ಹಂಚುವ ಹೆಣ್ಣಿಗೆ ಈ ಗಂಡು ಸಮಾಜದಲ್ಲಿ ಬರಿ ನೋವುಗಳು ಮಾತ್ರ ಸಿಗುತ್ತದೆ. ಹೆಣ್ಣಿನ ಮನಸ್ಸು ನಿರ್ಮಲವಾದ ಹಚ್ಚ ಹಸಿರಿನ ಪ್ರಕೃತಿಯಂತೆ. ಸದಾ ತಂಪು. ಅದೇ ಪ್ರಕೃತಿ ತಿರುಗಿ ಬಿದ್ದರೆ ಎಲ್ಲವೂ ಅಳಿದಂತೆ. ಹೆಣ್ಣಿಗೆ ಉಳಿಸಲೂ ಗೊತ್ತು ಉರುಳಿಸಲೂ ಗೊತ್ತು. ಆದರೂ ಅವಳು ಕಷ್ಟಗಳನ್ನು ಸಹಿಸುವ ಮನಸ್ಸಿನವಳು. ಸಹನೆಯ ಕಟ್ಟೆಯನ್ನು ಎಂದಿಗೂ ಒಡೆಯಲು ಬಿಡಳು. ನಾವು ಕೇಳಿರುವ ರಾಮಾಯಣ ಮಹಾಭಾರತಕ್ಕೂ ಹೆಣ್ಣು ಕಾರಣೀಭೂತಳು. ಇದರರ್ಥ ಹೆಣ್ಣೆಂದರೆ ಒಂದು ಇತಿಹಾಸವನ್ನು ಸೃಷ್ಟಿಸಬಲ್ಲಳು. ಒಳ್ಳೆಯದಕ್ಕೂ ಕೆಟ್ಟದಕ್ಕೂ ಹೆಣ್ಣು ಉದಾಹರಣೆಯಾಗುತ್ತಾಳೆ. ಆದರೂ ಅವಳು ಅಸಹಾಯಕತೆಯ ಕೂಪದಲ್ಲಿ ನರಳುತ್ತಾಳೆ. ತನ್ನ ಮೇಲಾಗುತ್ತಿರುವ ಅನ್ಯಾಯ ಅತ್ಯಾಚಾರವನ್ನು ತಡೆಯುವಲ್ಲಿ ವಿಫಲಾಗುತ್ತಿದ್ದಾಳೆ. ಶೋಷಣೆಗೆ ಒಳಗಾದ ಹೆಣ್ಣನ್ನು ಈ ಸಮಾಜ ಕಳಂಕಿತಳಂತೆ ನೋಡುತ್ತದೆ.

ಒಂದು ಕಾಲದಲ್ಲಿ ಹೆಣ್ಣು ಎಲ್ಲದರಲ್ಲೂ ವಂಚಿತಳಾಗಿದ್ದಳು. ಅದರಲ್ಲೂ ಶಿಕ್ಷಣವಂತೂ ಅವಳ ಪಾಲಿಗೆ ಮರಿಚೀಕೆಯಾಗಿತ್ತು. ಬರಿ ಗುಲಾಮಳಂತೆ ನಡೆಸಿಕೊಳ್ಳುವ ಪರಿಪಾಠವಿದ್ದ ಕಾಲವದು. ಎಲ್ಲಿ ಹೆಣ್ಣಿಗೆ ಮಹತ್ತರವಾದ ಸ್ಥಾನ ಸಿಕ್ಕಿದರೆ ಪುರುಷ ಸಮಾಜವನ್ನು ಎದುರಿಸಿ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಬಲಾಗುತ್ತಾಳೊ ಅನ್ನುವ ಭಯ. ಅದಕ್ಕೆ ಅವಳು ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದೆ ಹೆಚ್ಚು. ಇವತ್ತು ಕೂಡ ಕೆಲವು ಕಡೆ ಇಂತಹದ್ದೆ ಸ್ಥಿತಿಗಳು ನಡೆಯುತ್ತಿದ್ದೆ. ಅವಳ ಮಧ್ಯೆ ಕೆಲವೊಂದು ಕಂದಕಗಳನ್ನು ಸೃಷ್ಟಿಸಿ ಮೂಲೆ ಗುಂಪಾಗಿಸುತ್ತಾರೆ. ಹೆಣ್ಣು ಧ್ವನಿ ಎತ್ತಿದರೆ ಎಲ್ಲಿ ತಮ್ಮ ಧ್ವನಿಗೆ ಬೆಲೆ ಇರುವುದಿಲ್ಲವೋ ಅನ್ನುವ ಆತಂಕ. ಆದರೆ ಹೆಣ್ಣು ಒಮ್ಮೆ ಧ್ವನಿ ಎತ್ತಿದರೆ ಅದಕ್ಕೆ ಸರಿ ಸಮಾವಾಗುವ ಸ್ವರ ಮತ್ತೊಂದಿಲ್ಲ. ಅವಳದು ಹೋರಾಟದ ಮನೋಭಾವ ಅತ್ಮವಿಶ್ವಾಸದ ಪ್ರತಿರೂಪ. ಇವತ್ತು ಅವಳನ್ನು ನೋಡುವ ದೃಷ್ಟಿ ಬದಲಾಗಿದೆ. ಹೆಣ್ಣು ಎಂದಿಗೂ ಶಕ್ತಿಯಾಗಿ ಪರಿವರ್ತನೆಯಾಗುವವಳು. ಅವಳಿಗೆ ಎಲ್ಲವನ್ನೂ ನಿಭಾಯಿಸುವ ಸಾಮರ್ಥ್ಯವಿದೆ ಅನ್ನುವ ಅರಿವು ಎಲ್ಲರಿಗೂ ಇದೆ. ಹೆಣ್ಣು ಗಂಡಿಗೆ ಎದುರಾಗಿ ನಿಂತು ಎಲ್ಲವನ್ನು ನಿಭಾಯಿಸಬಲ್ಲಳು. ತನ್ನಿಂದಾಗದು ಅನ್ನುವುದನ್ನು ಎಂದಿಗೂ ಅವಳು ಒಪ್ಪಿಕೊಳ್ಳಲಾರಳು.

ಅವಳೆಲ್ಲಿದ್ದರೂ ಏನಾಗಿದ್ದರೂ ತನ್ನವರಿಗಾಗಿ ಮಿಡಿಯುತ್ತಾಳೆ. ಅವರ ಭಾವನೆಗಳಿಗೆ ಸ್ಪಂದಿಸುತ್ತಾಳೆ. ಅಮ್ಮನಾಗುತ್ತಾಳೆ ಅಕ್ಕನಾಗುತ್ತಾಳೆ ಮಡದಿಯಾಗುತ್ತಾಳೆ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಶಕ್ತಿಯಾಗಿ ನಿಲ್ಲುತ್ತಾಳೆ.ವಾತ್ಸಲ್ಯದ ಗಣಿ ಇವಳು. ಮುಟ್ಟಿನ ನೋವಾಗಲಿ ಪ್ರಸವದ ವೇದನೆಯಾಗಲಿ ಎಲ್ಲ ನೋವನ್ನು ಸೈರಿಸಿಕೊಂಡು ನಗುತ್ತಾ ಬದುಕುತ್ತಾಳೆ. ಅದಕ್ಕೆ ಅವಳು ಕುಟುಂಬದ ರಾಯಾಭಾರಿಯಾಗಿ ನಿಲ್ಲುವ ತ್ಯಾಗಮಯಿ ಹೆಣ್ಣಾಗುತ್ತಾಳೆ. ಇನ್ನು ಅಧುನಿಕತೆಯ ಬೆನ್ನು ಹತ್ತಿ ಹೋಗುವ ಹೆಣ್ಣುಮಕ್ಕಳು ಮಾಡಬಾರದ್ದನ್ನು ಮಾಡುತ್ತ ತಮ್ಮ ಹೆಸರಿಗೆ ತಾವೇ ಕಳಂಕಿತರಾಗುತ್ತಿದ್ದಾರೆ. ಯಾವುದು ಸರಿ ಯಾವುದು ತಪ್ಪು ಅನ್ನುವ ವಿವೇಕವನ್ನು ಕಳೆದುಕೊಂಡು ವರ್ತಿಸುವಾಗ ಆತಂಕವಾಗುತ್ತದೆ. ಇದಕ್ಕೆಲ್ಲ ಕಾರಣವೇನೂ? ದುಡ್ಡಿಗಾಗಿ ಪ್ರಚಾರಕ್ಕಾಗಿ ಸುಮ್ಮನೆ ಸಿಗುವ ಹೆಸರಿಗಾಗಿ ತನ್ನತನವನ್ನು ವ್ಯಾಪಾರವಾಗಿಸುವಷ್ಟು ನೀಚತನ ಇವರೊಳಗೆ ಬೆಳೆಯಲು ಹೇಗೆ ಸಾಧ್ಯ? ಅತಿಯಾದ ಸಂಪ್ರದಾಯ ಬೇಡ ನಿಜ. ಹಾಗಂತ ಮಿತಿ ಮೀರಿದ ಆಧುನಿಕತೆಯಿಂದ ಆಗುವ ದುಶ್ಚಟಗಳಿಗೆ ಯಾರು ಹೊಣೆ? ಅತಿಯಾದರೆ ಎಲ್ಲವೂ ನಿರ್ನಾಮವೇ ತಾನೇ?

ಇನ್ನು ದಿನ ದುಡಿದು ತಿನ್ನುವ ಮಹಿಳೆಯರದು ಇನ್ನೊಂದು ಪಾಡು. ತನ್ನತನವನ್ನು ಮರೆತು ತನ್ನವರಿಗಾಗಿ ಜೀವನವನ್ನು ಮೀಸಲಿಡುವ ಹೆಣ್ಣು ತನಗಾಗಿ ಏನನ್ನೂ ಚಿಂತಿಸಲಾರದಷ್ಟು ತನ್ನ ಕುಟುಂಬವನ್ನು ನಿಭಾಯಿಸುವುದರಲ್ಲಿ ಮಗ್ನವಾಗಿರುತ್ತಾಳೆ. ಇನ್ನು ಕೆಲವರ ಜೀವನ ರೀತಿ ಬೇರೆಯದ್ದಾಗಿರುತ್ತದೆ. ಅವರದು ಸಾಧಿಸುವ ಕನಸು. ಸಾಧನೆಯ ಹಾದಿಯಲ್ಲಿ ಸಾಗುವ ಮಹಿಳೆಯರಿಗೆ ಹೆಸರು ಕೀರ್ತಿಯ ಕನಸಿರುತ್ತದೆ. ನಾನು ಏನೊ ಸಾಧಿಸಬೇಕು. ತನ್ನನ್ನು ಎಲ್ಲರಿಗೂ ಗುರುತಿಸಬೇಕು ಅನ್ನುವ ಧಾವಂತದಲ್ಲಿ ಬದುಕನ್ನು ಇನ್ನಷ್ಟು ಭಿನ್ನವಾಗಿ ಬದುಕಲು ಪ್ರಯತ್ನಿಸುತ್ತಿರುತ್ತಾರೆ. ಹೀಗೆ ಇರುವ ಹೆಣ್ಣುಮಕ್ಕಳಿಗೆ ತಮಗೇನು ಬೇಕು ಏನೂ ಬೇಡ ಅನ್ನುವ ಗೊಂದಲಗಳು ತುಂಬಾ ಇರುತ್ತವೆ. ವಾಸ್ತವವಾಗಿ ತನಗೇನು ಆಗುತ್ತಿದೆ ಅನ್ನುವ ಅರಿವು ಅವರಿಗಿರುವುದಿಲ್ಲ. ಈ ಜಂಜಾಟದಲ್ಲಿ ಮರೆವು, ಒತ್ತಡಕ್ಕೆ ಸಿಲುಕಿದ ಮನಸ್ಸು ನಿಯಂತ್ರಣ ಕಳೆದುಕೊಂಡಾಗ ಸಿಡಿಯುತ್ತದೆ. ಆಗ ಕೋಪ, ಹಟ, ಅಳು, ಎಲ್ಲವೂ ಬರುತ್ತದೆ. ಮಿತಿ ಮೀರಿದ ಕೆಲಸದಲ್ಲಿ ತೊಡಗಿರುವ ಮಹಿಳೆಯರು ಆರೋಗ್ಯದ ಕಡೆ ಗಮನ ಹರಿಸುವುದು ತುಂಬಾ ಕಮ್ಮಿ.

ತನಗಾಗಿ ತನ್ನ ಆರೋಗ್ಯಕ್ಕಾಗಿ ಕೆಲವೊಮ್ಮೆ ಸ್ವಯಂ ಶಿಸ್ತಿನ ಅನಿವಾರ್ಯತೆ ಅತ್ಯಗತ್ಯವಾಗಿ ಮಾಡಬೇಕಿದೆ. ಧಾವಂತದ ಯುಗದಲ್ಲಿ ಓಡುವ ನಮಗೆ ನಮ್ಮ ಆರೋಗ್ಯದ ಬಗ್ಗೆ ತಿಳಿಯುವುದೇ ಇಲ್ಲ. ಅತಿಯಾದ ಆತ್ಮವಿಶ್ವಾಸವೂ ಒಳ್ಳೆಯದಲ್ಲ. ತನ್ನನ್ನು ತಾನು ಮೆಚ್ಚಿಸಿಕೊಳ್ಳಲು ಸೂಪರ್ ವುಮೆನ್ ಆಗಬೇಕು. ತನ್ನ ಹೆಸರು ಎಲ್ಲ ಕಡೆ ಕಾಣಿಸಬೇಕು ಅನ್ನುವ ಭರದಲ್ಲಿ ಸಾಗುವ ಪ್ರತಿ ಮಹಿಳೆಯರು ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗುತ್ತಾರೆ. ತನ್ನ ಕುಟುಂಬದ ಜವಾಬ್ದಾರಿ, ಹೊರಗಿನ ಕಚೇರಿಯ ಕೆಲಸ, ಎಂದು ಬಿಡುವಿಲ್ಲದೆ ಓಡಾಡುವ ಮಹಿಳೆಯರು ಬಲು ಬೇಗನೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಅತಿಯಾದ ಒತ್ತಡವೂ ಬೇಗನೇ ಮಾನಸಿಕ ನೆಮ್ಮದಿಗೆ ಮಾರಕವಾಗುತ್ತದೆ. ಮೂವತ್ತರ ನಂತರ ಪ್ರತಿಯೊಬ್ಬ ಮಹಿಳೆಯ ದೇಹ ಸ್ಥಿತಿ ಬದಲಾಗುತ್ತ ಹೋಗುತ್ತದೆ. ಆಗ ದೇಹಕ್ಕೆ ಉತ್ತಮ ಆಹಾರ ದೈನಂದಿನ ವ್ಯಾಯಮಗಳು ಅತ್ಯಗತ್ಯವಾಗಿ ಮಾಡಬೇಕು. ಇದರಿಂದ ಅದೆಷ್ಟೋ ಒತ್ತಡಗಳು ಕಡಿಮೆಯಾಗಿ ಮಾನಸಿಕ ನೆಮ್ಮದಿಯು ಸಿಗುತ್ತದೆ. ಹೆಣ್ಣು ಸಂಸಾರದ ಕಣ್ಣು. ಅವಳ ಮೌಲ್ಯವನ್ನು ತಿಳಿಯಲು ಒಂದು ದಿನ ಸಾಲದು. ವಿಶ್ವ ಮಹಿಳಾ ದಿನಾಚರಣೆಯ ಮಹತ್ವ ಒಂದು ದಿನಕ್ಕೆ ಮುಗಿಯದಿರಲಿ. ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರ ದೌರ್ಜನ್ಯಗಳು ಕೊನೆಯಾಗಲಿ. ನೊಂದಿರುವ ಪ್ರತಿಯೊಂದು ಹೆಣ್ಣಿಗೂ ನ್ಯಾಯದ ತಕ್ಕಡಿಯಲ್ಲಿ ಅನ್ಯಾಯವಾಗದಿರಲಿ.

-ಪೂಜಾ ಗುಜರನ್ ಮಂಗಳೂರು.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x