ಅಮ್ಮ, ಮಗಳು, ಹೆಂಡತಿ ಮತ್ತು ಅತ್ತೆ ಈ ನಾಲ್ಕು ಒಂದು ಹೆಣ್ಣಿನ ಬಾಳಲ್ಲಿ ಸಹಜವಾಗಿಯೇ ನಡೆಯುವ ಕ್ರಿಯೆ. ಅದರೆ ವ್ಯತ್ಯಾಸ ಮಾತ್ರ ಬೆಟ್ಟದಷ್ಟು. ಅಮ್ಮ ಅಂದರೆ ಕರುಣಾಮಯಿ. ತನ್ನ ಮಕ್ಕಳ ಒಳತಿಗಾಗಿ ಮತ್ತು ಸಂಸಾರದ ಸುಖಕ್ಕಾಗಿ ಜೀವನದ ಜೊತೆ ಹಗಲು ಇರುಳು ಎನ್ನದೆ ದುಡಿದು ತನ್ನ ಕಷ್ಟಗಳು ಬೆಟ್ಟದಷ್ಟು ಇದ್ದರು ತೋರಿಸಿ ಕೊಳ್ಳದೆ ದುಡಿಯುವ ಮಹಾತಾಯಿ. ಮಕ್ಕಳೊಂದಿಗೆ ಮಕ್ಕಳಾಗಿ ಅವರ ಮನಸ್ಸುಗಳನ್ನು ಅರಿತು ಅವರ ಸುಖದುಃಖಗಳಲ್ಲಿ ಬಾಗಿಯಾಗಿ ತನ್ನ ಕಷ್ಟಗಳನ್ನು ಮನಸ್ಸಿನಲ್ಲಿ ನುಂಗಿ ಪ್ರೀತಿಯಿಂದ ಮಕ್ಕಳಿಗೆ ಸ್ಫಂದಿಸುವ ಮಹಾಶಕ್ತಿವಂತೆ ಎಂದರೆ ತಪ್ಪಾಗಲಾರದು.
ಮಗಳು ಮನೆಯ ಐಶ್ವರ್ಯ ಲಕ್ಷೀ ಎಂದರೆ ತಪ್ಪಾಗಲಾರದು. ತಂದೆತಾಯಿಗಳ ಮುದ್ದಿನ ಮಗಳಾಗಿ, ಅಣ್ಣತಮ್ಮರ ನಲ್ಮೆಯ ಗೆಳತಿಯಾಗಿ ಮನೆ ಮನಸ್ಸನ್ನು ಬೆಳಗುತ್ತಾಳೆ. ಮಗಳಿಗೆ ಯಾವುದು ಕೇಳಿದರು ಇಲ್ಲ ಅನ್ನದ ತಂದೆ, ಕೆಲಸ ಕಾರ್ಯಗಳನ್ನು ಕಲಿಸುವಾಗ ಗಧರುವ ತಾಯಿ, ಅಣ್ಣತಮ್ಮರೊಂದಿಗೆ ಮಾತಿಗೆ ಮಾತು ಕೊಟ್ಟು ಜಗಳವಾಡಿ ಮನೆ ರಂಪಾಟ ಮಾಡಿ ತಾನೇ ಎಲ್ಲಾ ವಿಷಯಗಳಲ್ಲಿ ಮುಂದಾಗಿರುವುದು ಅವಳ ಜಾಣತನ. ಒಂದು ಹೆಣ್ಣು ಮಗು ಮನೆಗೆ ಕಲಶ ಇದ್ದಂತೆ.
ಮಗಳು ಮುಂದೆ ಬೇರೊಂದು ಮನೆಯ ಸೊಸೆ ಮತ್ತು ಗಂಡನಿಗೆ ಹೆಂಡತಿಯಾಗಿ ಬಾಳುವುದು ಸಹಜ. ಮಗಳಾಗಿದ್ದಾಗ ಮುದ್ದಾಗಿ ಬೆಳೆದು ಕಷ್ಟಸುಖ ಅರಿವಿಲ್ಲದ ಗಂಡನಿಗೆ ಹೆಂಡತಿಯಾಗಿ, ಅತ್ತೆಗೆ ಸೊಸೆಯಾಗಿ ಹೊಂದಿ ಬಾಳಲು ಸ್ವಲ್ಪ ಕಾಲವೇ ಬೇಕು. ಗಂಡನ ಪ್ರೀತಿ ಇದ್ದರೆ ಪ್ರಪಂಚವನ್ನೇ ಗೆಲ್ಲಬಹುದು ಎನ್ನುವ ತವಕ. ತನ್ನದಲ್ಲದ ಮನೆಯಲ್ಲಿ ತನ್ನದು ತನ್ನವರು ಎಂದುಕೊಂಡು ಸುಖ ಸಂಸಾರದಲ್ಲಿ ತೇಲುವ ಹಂಬಲ. ಹೆತ್ತ ಮನೆಯಲ್ಲಿ ಇದ್ದ ಮುದ್ದಾದ ಜೀವನ ಗಂಡನ ಮನೆಯಲ್ಲಿ ಹೆಂಡತಿ ಪಟ್ಟ ಬಂದಾಗ ತನ್ನ ಪ್ರೌಢತೆಯನ್ನೂ ಪ್ರದರ್ಶಿಸಬೇಕಾಗುತ್ತದೆ. ಎಲ್ಲರೊಂದಿಗೆ ಹೊಂದಾಣಿಕೆ ಅಗತ್ಯ.
ಹೆಣ್ಣನ್ನು ಹೂವಿಗೆ ಹೋಲಿಸುತ್ತಾರೆ. ಗಿಡವನ್ನು ತಂದು ಅದಕ್ಕೆ ಗೊಬ್ಬರ, ನೀರು ಹಾಕಿ ಆರೈಕೆ ಮಾಡಿ ಬೆಳೆಸುವುದು ಸುಲಭವಾದ ಕೆಲಸವಲ್ಲ. ಆ ಗಿಡವೂ ಸಹ ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಲು ಸಮಯ ಹಿಡಿಯುತ್ತದೆ. ಅದಕ್ಕೆ ತಾಳ್ಮೆ ಜೊತೆಗೆ ಸಹನೆ ಕೂಡ ಮುಖ್ಯವಾಗುತ್ತದೆ. ಹಾಗೆಯೇ ಹೆಣ್ಣು ಕೂಡ. ತಾಯಿಯ ಮನೆಯಲ್ಲಿ ಮುದ್ದಾಗಿ ಬೆಳೆದು, ತನ್ನ ಗಂಡನ ಮನೆಗೆ ಬಂದಾಗ, ಅಲ್ಲಿ ಅವಳಿಗೆ ಆತ್ಮೀಯರಾಗಿ ಗಂಡನ ಮನೆಯವರು ನೋಡಿಕೊಳ್ಳಬೇಕು. ಇಲ್ಲವಾದರೆ ಮುದುಡಿದ ಹೂವಿನ ಹಾಗೆ ಅವಳ ಬಾಳಾಗುತ್ತದೆ. ಯಾರೊಬ್ಬರೂ ಹೇಗೆ ಎಂಬುದು ಗೊತ್ತಿರದ ಪರಿಸರದಲ್ಲಿ, ಗಂಡನ ಮನೆಯವರ ಪ್ರೀತಿಯ ನುಡಿಗಾಗಿ ಹಾತೊರೆಯುತ್ತಿರುತ್ತದೆ. ಹೊಸದಾಗಿ ಎಲ್ಲಾ ಜವಾಬ್ದಾರಿ ತಲೆಮೇಲೆ ಇರುತ್ತದೆ. ತಾಯಿಗೆ ಮನೆಯಲ್ಲಿ ಮುದ್ದಿನ ಮಗಳಾಗಿದ್ದವಳು ಗಂಡನ ಮನೆಯ ಜವಾಬ್ದಾರಿ ಸೊಸೆಯಾಗುತ್ತಾಳೆ. ಸೊಸೆ ಮತ್ತು ಮಗಳು ಒಬ್ಬಳೇ ಅದರೂ ನೋಡುಗರ ದೃಷ್ಟಿ ಬೇರೆಯಿರುತ್ತದೆ.
ಗಂಡನ ಕುಟುಂಬದಲ್ಲಿ ಸಿಗಬೇಕಾದ ಸ್ಥಾನ ಮಾನ ಸಿಕ್ಕರೆ ಯಾವುದೇ ಹೆಣ್ಣಿಗೂ ಹೊಂದಿ ಕೊಂಡು ಹೋಗುವುದು ಕಷ್ಟವೇನಲ್ಲ. ಹೊಸದಾಗಿ ಬಂದಾಗ ತನ್ನವರೆಂದು ಹೇಳಲು ಗಂಡನನ್ನು ಬಿಟ್ಟು ಬೇರೆಯವರು ಇರುವುದಿಲ್ಲ. ಗಂಡನೇ ಅವಳಿಗೆ ಸರ್ವಸ್ವ. ಗಂಡನ ಪ್ರೀತಿ ಹೆಂಡತಿಯ ಕಷ್ಟವನ್ನು ಮರೆಯುವಂತೆ ಮಾಡುತ್ತದೆ. ಇಲ್ಲಿ ಗಂಡನ ಜವಾಬ್ದಾರಿ ಸಹ ಆತಿ ಮುಖ್ಯ. ತನ್ನ ಕುಟುಂಬದ ಜನರೊಂದಿಗೆ ಹೆಂಡತಿಯನ್ನು ಸಹ ಒಂದೇ ತಕ್ಕಡಿಯಲ್ಲಿ ತೂಗಿಸ ಬೇಕಾಗುತ್ತದೆ. ಎಲ್ಲಿಯಾದರೂ ಒಂದು ತಕ್ಕಡಿಯು ವ್ಯತ್ಯಾಸವಾದರೆ ಮನೆಯಲ್ಲಿ ಬಿರುಕು ಪ್ರಾರಂಭವಾಗುವುದರಲ್ಲಿ ಸಂಶಯವಿಲ್ಲ. ಹೆಂಡತಿಯ ತಪ್ಪುಗಳನ್ನು ಕುಟುಂಬದ ಸದಸ್ಯರ ಮುಂದೆ ಎತ್ತಿಯಾಡುವುದು, ಹೆಂಡತಿಯನ್ನು ಜರಿದು ಮಾತನಾಡುವುದು ಅಪ್ಪಿ ತಪ್ಪಿ ಮಾಡಿದರೆ ಸಂಸಾರದ ನೌಕೆ ಅಲ್ಲಾಡಲು ಪ್ರಾರಂಭವಾಗುತ್ತದೆ. ಹೆಣ್ಣು ಬೇರೊಂದು ಮನೆಯಲ್ಲಿ ಹೊಂದಿಕೊಂಡು ಹೋಗಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಕುಟುಂಬದ ಹಿರಿಯರು ತಮ್ಮ ಸೊಸೆಯನ್ನು ಮಗಳೆಂದು ಭಾವಿಸಿದರೆ ಯಾವ ಹೆಣ್ಣಿಗೂ ಹೊಸ ವಾತಾವರಣದಲ್ಲಿ ಹೊಂದಿಕೊಳ್ಳಲು ಕಷ್ಟವಾಗುವುದಿಲ್ಲ. ಹೊಸ ಸಂಪ್ರದಾಯ, ಹೊಸ ಕುಟುಂಬದ ಜನರಿಗೆ ಹೊಂದಿಕೊಂಡು ಹೋಗಬೇಕಾಗುತ್ತದೆ. ತಾಯಿಯ ಮನೆಗೂ ಅತ್ತೆಯ ಮನೆಗೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಒಂದೇ ದಿನದಲ್ಲಿ ಯಾವುದನ್ನು ಕಲಿಯಲು ಸಾಧ್ಯವಿಲ್ಲ. ಹಂತ ಹಂತವಾಗಿ ಹೊಸ ಕುಟುಂಬದ ಸಂಪ್ರದಾಯ, ಅಚಾರ ವಿಚಾರಗಳನ್ನು ಕಲಿಯ ಬೇಕಾಗುತ್ತದೆ. ಚಿಕ್ಕ ತಪ್ಪುಗಳನ್ನು ದೊಡ್ಡದಾಗಿ ಮಾಡದೇ ಅದನ್ನು ನಿಧಾನವಾಗಿ ಸರಿಪಡಿಸಿ ಮುನ್ನೆಡೆದರೆ ಸೊಸೆಯಾಗಿ ಬಂದ ಹೆಣ್ಣಿಗೂ ಇದು ನನ್ನ ಮನೆ, ಇವರು ನನ್ನವರು, ನಾನು ಇವರ ಸಂಪ್ರದಾಯ, ಅಚಾರ ವಿಚಾರಗಳನ್ನು ಗೌರವದಿಂದ ಕಾಣಬೇಕು ಎಂಬುದು ಅವಳ ಮನಸ್ಸಿಗೆ ಬರುತ್ತದೆ.
ಚಿಕ್ಕ ಪುಟ್ಟ ವಿಷಯವನ್ನು ಸೊಸೆಯಾಗಿ ಬಂದ ಹೆಣ್ಣು ಸಹ ಅರ್ಥ ಮಾಡಿಕೊಂಡು ಆ ಕುಟುಂಬದ ಮರ್ಯಾದೆಗೆ ಧಕ್ಕೆ ಬರದಂತೆ ನೆಡೆದು ಕೊಂಡು ಹೋಗಬೇಕಾದದ್ದು ಅವಳ ಕರ್ತವ್ಯ. ಅದೇ ಕುಟುಂಬದ ಹೆಣ್ಣು ಮಕ್ಕಳು ಸಹ ಅತ್ತಿಗೆ ಅಥವಾ ನಾದಿನಿ ಯಾಗಿ ಬಂದಿರುವ ಅಣ್ಣ ಅಥವಾ ತಮ್ಮನ ಹೆಂಡತಿಯನ್ನು ಒಡಹುಟ್ಟಿದವಳಂತೆ ಕಂಡರೆ ಯಾವ ಬಗ್ಗೆಯೂ ನಂತರ ದಿನಗಳಲ್ಲಿ ಬರಬಹುದಾದ ಚಿಕ್ಕ ಪುಟ್ಟ ವಿಷಯಗಳಲ್ಲಿ ಮನಸ್ತಾಪ ಉಂಟಾಗುವ ಸಾಧ್ಯತೆಯಿರುದಿಲ್ಲ.
ಒಂದು ಹೆಣ್ಣು ತಾಯಿಯಿಂದ ಹಿಡಿದು ಸೊಸೆಯಾಗುವರೆಗೆ ಹೊಸ ಪ್ರಪಂಚದಲ್ಲಿ ಬಾಳಬೇಕಾಗುತ್ತದೆ. ಅದು ಅವಳಿಗೆ ದೈವದತ್ತವಾದ ಕೊಡುಗೆ ಎಂದರೆ ತಪ್ಪಾಗಲಾರದು. ಹೆಣ್ಣು ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಬೇರೊಂದು ಕುಟುಂಬದ ಜವಾಬ್ದಾರಿ ಹೊತ್ತು, ತನ್ನ ಇಷ್ಟದ ಜೊತೆಗೆ ಎಲ್ಲರ ಆಗುಹೋಗುಗಳ ಕುರಿತು ಯೋಚಿಸಿ ಜೀವನ ಸಾಗಿಸುತ್ತಿರುತ್ತಾಳೆ.
ಮನೆಯಲ್ಲಿ ಅತ್ತೆ ತನ್ನ ದಬ್ಬಾಳಿಕೆ ಬಿಟ್ಟು ನಾನು ಸಹ ಸೊಸೆಯಾಗಿ ಮನೆಗೆ ಬಂದವಳು ಎಂದು ಅರಿತು ಕೊಂಡು ಹೋದರೆ ಕುಟುಂಬದ ಸದಸ್ಯರು ಸಹ ನೆಮ್ಮದಿಯಿಂದ ಇರಬಹುದು. ಅತ್ತೆಯ ಪದವಿಯನ್ನು ಒಳ್ಳೆಯ ಮಾರ್ಗದಲ್ಲಿ ರೂಡಿಸಿ ಕೊಂಡು ಹೋದರೆ, ಬಂದ ಸೊಸೆಯು ಅತ್ತೆಯನ್ನು ಗೌರವದಿಂದ ನೋಡಿ ಕೊಳ್ಳುವುದರಲ್ಲಿ ಸಂಶಯವಿಲ್ಲ. ಅತ್ತೆ ತನ್ನ ಮಗಳ ಸ್ಥಾನವನ್ನು ಸೊಸೆಗೆ ಕೊಟ್ಟರೆ ಆ ಮನೆಯಲ್ಲಿ ಅತ್ತೆ ಸೊಸೆಯ ಸಂಬಂಧಕ್ಕಿಂತ ತಾಯಿ ಮಗಳ ಸಂಬಂಧದಲ್ಲಿ ಇನ್ನೂ ಹತ್ತಿರದ ಬಾಂಧವ್ಯ ತರುತ್ತದೆ. ಯಾವುದೇ ಸಂಬಂಧ ಗಟ್ಟಿಯಾಗಿ ನಿಲ್ಲ ಬೇಕೆಂದರೆ ಹೊಂದಾಣಿಕೆ ಬಹಳ ಮುಖ್ಯ. ಹೊಂದಾಣಿಕೆ ಒಬ್ಬರಲ್ಲಿದ್ದರೆ ಸಾಲದು. ಇಡೀ ಕುಟುಂಬದ ಸಹಕಾರ ಅಗತ್ಯ. ಕುಟುಂಬದಲ್ಲಿ ಯಾರು ಹೆಚ್ಚು ಕಡಿಮೆಯಲ್ಲ. ಎಲ್ಲರೂ ಒಗ್ಗಟ್ಟಾಗಿದ್ದರೆ ಸಮಾಜದಲ್ಲಿ ಸುಂದರವಾದ ಕುಟುಂಬ ನಿರ್ಮಾಣ ಮಾಡಲು ಸಾಧ್ಯ. ಯಾವುದೇ ಕುಟುಂಬದಲ್ಲಿ ಹೆಣ್ಣು ಹೊಂದಾಣಿಕೆ ಮಾಡಿ ಕೊಂಡು ಸಂತೋಷವಾಗಿರುತ್ತಾಳೋ ಅಲ್ಲಿ ಸುಂದರವಾದ ಕುಟುಂಬ ನಿರ್ಮಾಣವಾಗಲು ಸಾಧ್ಯ. ಗಂಡು ಸಹ ಹೆಣ್ಣಿನ ಮನಸ್ಸನ್ನು ಅರಿತು ನೆಡೆದರೆ ಸಮಾಜದಲ್ಲಿ ಸಾಮಾನ್ಯವಾಗಿ ನೆಡೆಯುತ್ತಿರು ಕುಟುಂಬ ವಿಭಜನೆ ಮತ್ತು ವಿಚ್ಚೇದನವನ್ನು ತಪ್ಪಿಸಲು ಸಾಧ್ಯ. ಒಂದು ಕುಟುಂಬ ಎಂದರೆ ಅಲ್ಲಿ ಎಲ್ಲಾ ಸದಸ್ಯರ ವಿಶ್ವಾಸ ಅತಿ ಮುಖ್ಯ. ಇಲ್ಲಿ ಯಾರೂ ಹೆಚ್ಚು ಯಾರೂ ಕಡಿಮೆಯಲ್ಲ. ಎಲ್ಲರೂ ಬೆರೆತು ಬಾಳಿದರೆ ಸ್ವರ್ಗ ಸುಖ.
ಹೆಣ್ಣು ಎಷ್ಟು ಕೋಮಲಳು ಅಷ್ಟೇ ಕಠೋರ ವ್ಯಕ್ತಿತ್ವ ಎನ್ನಬಹುದು. ಹೆಣ್ಣು ಮನಸ್ಸು ಮಾಡಿದರೆ ಎಂಥಾ ಕಷ್ಟಕರವಾದ ವಿಷಯವನ್ನು ಸಮರ್ಥವಾಗಿ ನಿಭಾಯಿಸ ಬಲ್ಲಳು. ಸಹನೆ, ಕರುಣೆ, ತಾಳ್ಮೆಯೆಲ್ಲಾ ಹುಟ್ಟಿದಾಗಿನಿಂದ ಬಂದ ವರ ಎನ್ನಬಹುದು. ಅದ್ದರಿಂದ ಹೆಣ್ಣು ಕೇವಲವಲ್ಲ. ಮನಸ್ಸು ಮಾಡಿದರೆ ಛಲದಿಂದ ಯಾವ ಸಾಧನೆ ಮಾಡಲು ಸೈ. ಹೆಣ್ಣನ್ನು ಪ್ರತಿಯೊಂದು ಮನೆಯಲ್ಲಿ ಗೌರವ ಆಧಾರಗಳಿಂದ ನೋಡಿದರೆ ಅವಳ ಜೀವನವೂ ಸುಖಮಯವಾಗಿರುದರಲ್ಲಿ ಸಂಶಯವಿಲ್ಲ. ಹೆಣ್ಣಿನ ಜೀವನವೇ ಬೇರೆಯವರಿಗೆ ಮುಡಿಪಾಗಿರುವಾಗ ಅವಳನ್ನು ದೈವೀ ಸ್ವರೂಪದಲ್ಲಿ ನೋಡುವುದು ತಪ್ಪಿಲ್ಲ.
ಹಾಗೇಯೇ ಪ್ರತಿಯೊಬ್ಬರಲ್ಲೂ ನಂಬಿಕೆ ಸಹ ಮುಖ್ಯವಾಗುತ್ತದೆ. ಒಬ್ಬರನ್ನೊಬ್ಬರು ನಂಬಿ ನಡೆದರೆ ಬರಬಹುದಾದ ಭಿನ್ನಾಭಿಪ್ರಾಯಗಳು ದೂರವಾಗುವುದರಲ್ಲಿ ಸಂಶಯವಿಲ್ಲ. ನಂಬಿಕೆ ಇದ್ದರೆ ಹೊಂದಾಣಿಕೆ ತಾನಾಗಿಯೇ ಬರುತ್ತದೆ. ಸಂಸಾರ ಸಾಗರವನ್ನು ಮುನ್ನೆಡೆಸಿ ಕೊಂಡು ಹೋಗಲು ನಂಬಿಕೆ ಸಹ ಮುಖ್ಯ ಎನ್ನುವುದು ನಂಬಲೇಬೇಕು.
ಹೆಣ್ಣು ಈ ದಿನ ತನ್ನ ತಂದೆ ತಾಯಿಗೆ ಮಗಳಾಗಿದ್ದರೂ ಮುಂದೆ ಅವಳು ಬೇರೊಂದು ಮನೆಯ ಸೊಸೆಯಾಗಿ, ನಂತರ ತನ್ನ ಮಕ್ಕಳಿಗೆ ತಾಯಿಯಾಗಿ, ಹಾಗೇಯೇ ಅತ್ತೆಯ ಸ್ಥಾನವನ್ನು ತುಂಬುವ ಜವಾಬ್ದಾರಿ ಹುದ್ದೆ ಎಂದರೆ ತಪ್ಪಾಗಲಾರದು.
-ವೇದಾವತಿ ಹೆಚ್. ಎಸ್.
Very well written ms. Veda.! Really understanding is the core of all relations. A bit of adjustment, co operation will lead to harmonious relations in any family.