ಸಹನಾ ಪ್ರಸಾದ್ ಅಂಕಣ

ಹೆಣ್ಣು ಮತ್ತು ಭಯ: ಸಹನಾ ಪ್ರಸಾದ್

ನಮ್ಮ ಜಮಾನಾದಲ್ಲಿ…ತಡೆಯಿರಿ, ನಾನು ಇನ್ನು ಬದುಕಿರುವುದರಿಂದ, ಇದೂ ನನ್ನ ಜಮಾನ! ಆಯ್ತು, ನಾ ೨೦ರ ಹೊಸಿಲಲ್ಲಿ ಇರುವಾಗ ಅಂದರೆ ೧೯೮೦ ರಲ್ಲಿ. ದೆಹಲಿಯಲ್ಲಿ ಅಪ್ಪನ ಕೆಲಸದ ನಿಮಿತ್ತ ವಾಸ. ಹೇಳಿ ಕೇಳಿ ನಾನು ಚಿಕ್ಕ, ತೀರ ಆಧುನಿಕವೂ ಅಲ್ಲದೆ, ತೀರ ಸಾಂಪ್ರದಾಯಿಕವೂ ಅಲ್ಲದ ಸಂಸಾರಕ್ಕೆ ಸೇರಿದವಳು. ದೆಹಲಿಯ ವಾತಾವರಣ, ಜನ, ಭಾಷೆ ನೋಡಿ ನಡುಗಿ ಹೋಗಿದ್ದಂತೂ ನಿಜ. ಎಲ್ಲದಕ್ಕಿಂತ ಆಘಾತ ಆಗಿದ್ದು ದೆಹಲಿಯ ಜನ. ಉತ್ತರದ ಅನೇಕ ರಾಜ್ಯಗಳಿಂದ ವಲಸೆ ಬಂದವರು ಇಲ್ಲಿ ಜಾಸ್ತಿ ಸಂಖ್ಯೆಯಲ್ಲಿ ಇದ್ದಿದ್ದರಿಂದ ಅಸಲು ದೆಹಲಿಯವರು ಯಾರು ಎಂಬುದು ಪ್ರಶ್ನೆ. ಅದು ಇದುವರೆಗೂ ಪ್ರಶ್ನೆಯಾಗಿಯೇ ಉಳಿದಿದೆ. ಅದರ ಬಗ್ಗೆ ಮತ್ತೊಮ್ಮೆ ಬರೆಯುವೆ.

೧೩ ವರುಷದ ಹುಡುಗಿಗೆ ದೆಹಲಿಯ ಜನರಲ್ಲಿ ಬಹಳ ವಿಕಾರವಾಗಿ ಕಂಡದ್ದು ಅವರುಗಳು ಹೆಂಗಸರನ್ನು ನೋಡುವ ರೀತಿ. ಬೇರೆಯವರ ಮನೆ ಹೆಂಗಸರು ಬಿಡಿ, ಅವರ ಮನೆಯವರಿಗೇ ಬೆಲೆ ಕೊಡುತ್ತಿರಲಿಲ್ಲ. ಇನ್ನು ರಸ್ತೆಯಲ್ಲಿ ಓಡಾಡುವುದು, ಬಸ್ ಹತ್ತುವುದು ಬಹಳ ಕಷ್ಟಕರವಾದ ವಿಷಯ. ನಾ ದೆಹಲಿ ಬಿಟ್ಟ ಸುಮಾರು ೧೫ ವರುಷದ ನಂತರ ಒಂದು ಸಂಸಾರ ಅಂಡಮಾನ್ ಗೆ ಹೋದಾಗ ಸಿಕ್ಕಿತು. ಆಕೆಯನ್ನು ವಿಚಾರಿಸಿದೆ, ಈಗ ಹೇಗಿದೆ ಅಲ್ಲಿ ಎಂದು. ಅಯ್ಯೋ, ಇನ್ನು ಹೊಲಸಾಗಿದೆ ಎಂದು ಅಲವತ್ತುಕೊಂಡರು.

ನಮ್ಮ ಮನೆ ಮುಂದಿನ ಮನೆಯವರ ಸೊಸೆ ವಾಸ್ತುಶಿಲ್ಪಿ. ಸರಕಾರಿ ನೌಕರಿ ಮಾಡುತ್ತಿದ್ದಳು. ಮನೆಯಲ್ಲಿ ಮದುವೆಯಾಗದ ೨ಹೆಣ್ಣುಮಕ್ಕಳು. ಮದುವೆಯಾಗದ ತಂಗಿಯರಿದ್ದೂ ಸಹ ಆತ ಏಕೆ ವಿವಾಹವಾದನೋ ಗೊತ್ತಿಲ್ಲ. ಬಹುಶಃ ವರದಕ್ಷಿಣೆ ಹಣದಿಂದ ಅವರಿಬ್ಬರ ಮದುವೆ ಮಾಡುವ ಯೋಚನೆಯಿತ್ತೋ ಏನೋ. ಮದುವೆಯಾದ ವರುಷದೊಳಗೆ ಒಂದು ಹೆಣ್ಣು ಮಗು. ಅಲ್ಲಿ ಬಾಣಂತನಗಳು ಗಂಡನ ಮನೆಯಲ್ಲಿ ನಡೆಯುತ್ತಾದ್ದರಿಂದ ಅವಳು ಅಲ್ಲೇ ಎದುರು ಮನೆಯಲ್ಲಿ ಅಂದರೆ ಅತ್ತೆ ಮನೆಯಲ್ಲೇ ಇದ್ದಳು. ಮಗು ಹುಟ್ಟಿದ್ದೂ ಸಹ ಹೊರಗಿನವರಿಗೆ ಗೊತ್ತಾಗಲಿಲ್ಲ.
ಆ ಸೊಸೆಯನ್ನು ಮನೆಯವರೆಲ್ಲ ಹೇಗೆ ಕಾಣುತ್ತಿದ್ದರೋ ಗೊತ್ತಿಲ್ಲ. ಅದನ್ನರಿಯುವ ವಯಸ್ಸು ನನ್ನದಾಗಿರಲಿಲ್ಲ. ಆದರೆ ಹೆಣ್ಣು ಮಗು ಹುಟ್ಟಿದ್ದಕ್ಕೆ ಸಿಹಿ ಹಂಚುವುದಿರಲಿ, ಮನೆ ಮಂದಿಯೆಲ್ಲ ಸಪ್ಪೆ ಮುಖ ಮಾಡಿಕೊಂಡಿದ್ದು ಅರಿವಾಗಿತ್ತು. ಇದಾದ ಒಂದು ವರುಷದ ಒಳಗೆ ಆಕೆಗೆ ಮತ್ತೊಂದು ಮಗು. ಈ ಸಲ ಗಂಡು. ಮನೆಯ ಮುಂದೆ ದೊಡ್ಡ ಶಾಮಿಯಾನ, ಸಿಹಿ ಊಟ, ಸಂಭ್ರಮ.

ಇದೆಲ್ಲ ನನ್ನ ಮನಸ್ಸಿನ ಮೇಲೆ ಬಹಳ ಪರಿಣಾಮ ಬೀರಿತು. ಜತೆಗೆ ಆಗಷ್ಟೇ ಪತ್ರಿಕೆಗಳಲ್ಲಿ ಹೆಣ್ಣುಮಕ್ಕಳ ದುಪಟ್ಟ ಎಳೆಯುವುದು, ಛೇಡಿಸುವುದು ಇತ್ಯಾದಿ ಸುದ್ದಿಗಳು ಪ್ರಕಟವಾಗಳು ಶುರುವಾಗಿತ್ತು. ಸುಮಾರು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರಲಿಲ್ಲ.
ಸಂಜಯ್, ಗೀತ ಚೋಪ್ರಾ ಪ್ರಕರಣವು ಬಹಳಷ್ಟು ದಿಗಿಲು ಮೂಡಿಸಿತ್ತು, ಹೆಂಗೆಳೆಯರ ಹಾಗೂ ಅವರ ಹೆತ್ತವರ ಮನಸ್ಸಿನಲ್ಲಿ. ಅದಕ್ಕೆ ಹೆಣ್ಣು ಮಕ್ಕಳನ್ನು ಆದಷ್ಟು ಮಟ್ಟಿಗೆ ಒಬ್ಬರನ್ನೇ ಎಲ್ಲೂ ಕಳಿಸುತ್ತಿರಲಿಲ್ಲ. ನಾನು ಅಮ್ಮನೊಡನೆ ಜಗಳವಾಡುತ್ತಿದ್ದೆ. ಎಲ್ಲಿ ಹೋದರೂ ನೀನೂ ಜತೆಗೆ ಬರುತ್ತೀಯ ಎಂದು. ಅವರು ನಕ್ಕು ಹೇಳುತ್ತಿದ್ದರು “ ಇನ್ನು ಸ್ವಲ್ಪ ವರುಷ ಅಷ್ಟೇ, ಯಾವಾಗಲೂ ನಾ ಬರೋದಕ್ಕೆ ಸಾಧ್ಯವಾಗುತ್ತದೆಯೇ?”

ಹೀಗೆ ಹುಟ್ಟಿದ ಭಯ ಹೆಚ್ಚಾಗುತ್ತಲೇ ಹೋಯಿತು. ಭಯ ಅಲ್ಲದಿದ್ರೂ ಒಂದು ಬಗೆಯ ಆತಂಕ ಎನ್ನಬಹುದು. ರಜೆಗೆ ಬೆಂಗಳೂರಿಗೆ ಬಂದಾಗ ಸ್ವಲ್ಪ ವಾಸಿ ಅನಿಸಿದರೂ ಇಲ್ಲೂ ಕೆಲವು ಪ್ರಕರಣಗಳ ಬಗ್ಗೆ ಕೇಳಿ ದುಗುಡವಾಗುತ್ತಿತ್ತು. ಒಬ್ಬಳೆ ಹೋಗುವುದು ತಪ್ಪು, ಎಲ್ಲಿ ಹೋದರೂ ಯಾರಾದರೂ ಜತೆಗಿರಬೇಕು ಅನ್ನುವ ಮನಸ್ಥಿತಿ ಉಂಟಾಯ್ತು. ಮದುವೆಯಾದ ಮೇಲೆ ಆತಂಕ ಕಡಿಮೆಯಾದರೂ ಪೂರ್ತಿ ಹೋಗಲಿಲ್ಲ. ದೊಡ್ಡವರು ದೀಪ ಹಚ್ಚುವ ಮುಂಚೆ ಮನೆ ಸೇರಿಕೋ ಎಂದು ಹೇಳುವುದು ನಿಲ್ಲಿಸಲಿಲ್ಲ.

ಗಂಡನಿಗೂ ಯಾವಾಗಲೂ ಜತೆಯಲ್ಲಿ ಬರಲು ಆಗುವುದಿಲ್ಲ. ಮಕ್ಕಳಿಗೆ ಅವರವರ ಜವಾಬ್ದಾರಿಗಳಿವೆ. ಸ್ನೇಹಿತರಿಗೆ ನಮ್ಮ ಅನುಕೂಲಕ್ಕೆ ತಕ್ಕ ಹಾಗೆ ಬಿಡುವಿರಲ್ಲ. ಹೀಗಾಗಿ ಒಬ್ಬೊಬ್ಬಳೇ ಓಡಾಡುವುದು, ಕೆಲಸ ಮಾಡುವುದು ಅನಿವಾರ್ಯವಾಯಿತು.

ಇತ್ತೀಚಿಗೆ ನಡೆದ ಘಟನೆಗಳು ಬೆಚ್ಚಿ ಬೀಳುವಂತೆ ಮಾಡಿವೆ. ಹೆಣ್ಣು ಮಕ್ಕಳಿರಲಿ, ನಾವೇ ಹೊರಹೋಗುವ ಮುನ್ನ ಯೋಚಿಸುವಂತೆ ಮಾಡಿವೆ. ಮಧ್ಯೆ ರಾತ್ರಿ ರಸ್ತೆಯಲ್ಲಿ ನಡೆಯುವ ಸ್ವಾತಂತ್ರ ಹಾಗಿರಲಿ, ಹಾಡಹಗಲೇ ದಿಗಿಲು ಆಗುತ್ತಿದೆ. ನಮ್ಮ ವಿಶ್ವವಿದ್ಯಾಲಯಕ್ಕೆ ಮಕ್ಕಳನ್ನು ಸೇರಿಸಲು ಬರುವ ಪೋಷಕರ ಮನಸ್ಸಿನಲ್ಲಿ ಇರುವ ಆತಂಕ ಒಂದೇ- ನಮ್ಮ ಮಕ್ಕಳು ಸುರಕ್ಷಿತವೇ ಎಂದು. ಅದಾದ ನಂತರ ಓದು, ಮಿಕ್ಕ ವಿಚಾರಗಳು. ನಾಯಿಕೊಡೆಯಂತೆ ಹುಟ್ಟಿಕೊಂಡಿರುವ ಪೀಜೀಗಳು, ಹಾಸ್ಟೆಲ್ಗಳು ಸರಕ್ಷಿತವೇ ಎನ್ನುವುದು ಅವರ ಮನಸ್ಸನ್ನು ಕೊರೆಯುತ್ತಿರುವ ಪ್ರಶ್ನೆ. ಇದೆಲ್ಲ ನೋಡಿ ಮಕ್ಕಳ ಮನಸ್ಸಿನಲ್ಲೂ ಏನೋ ಹಿಂಸೆ. ಭಯ. ಯಾರನ್ನು ನಂಬಲೂ ಕಷ್ಟ. ಯಾವ ಹುತ್ತದಲ್ಲಿ ಯಾವ ಹಾವೋ, ಯಾವ ಹಸುವಿನ ರೂಪದಲ್ಲಿ ಯಾವ ವ್ಯಾಘ್ರವೋ…ಎಂಬ ತಲ್ಲಣ. ಯಾರನ್ನು ನಂಬಬೇಕು, ಬಿಡಬೇಕು ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.

ಹಾಗಂತ, ಎಲ್ಲರೂ ಕೆಟ್ಟವರು, ಎಲ್ಲ ಪ್ರದೇಶದಲ್ಲೂ ಈ ರೀತಿ ನಡೆಯುತ್ತೆ ಎಂದು ಅಲ್ಲ. ಹೆಣ್ಣು ಮಕ್ಕಳನ್ನು ಓದಿಸಿದರೆ ಅವರು ಕೆಲಸಕ್ಕೆ ಸೇರಲು ಬಯಸುತ್ತಾರೆ, ಅದರಿಂದ ವಿವಿಧ ತೊಂದರೆಗಳು ಉಂಟಾಗುತ್ತೆ ಅನ್ನುವವರೆಗೆ ಜನರ ಮನಸ್ಸು ಅಲ್ಲೋಲಕಲ್ಲೋಲ ಆಗಿರುವುದಂತೂ ಸತ್ಯ. ನಮಗರಿವಿಲ್ಲದಂತೆ ಹೆಣ್ಣು ಮಕ್ಕಳ ಮನದಲ್ಲಿ ಭಯ ಬಿತ್ತುತ್ತಿದ್ದೇವೆಯೇ? ಅಥವಾ ಈ ರೀತಿ ಭಯ ಇರುವುದು ಸ್ವಲ್ಪ ಮಟ್ಟಿಗೆ ಸರಿಯೇ?

-ಸಹನಾ ಪ್ರಸಾದ್


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *