‘ಸ್ತ್ರೀ’ ಎಂದರೆ ಅಷ್ಟೇ ಸಾಕೆ? ಎಂಬ ಕವಿವಾಕ್ಯವನ್ನು ಓದುವಾಗ ಈ ಪದ ಎಲ್ಲಿಂದ ಶುರುವಾಗಿರಬಹುದು ಎಂಬ ಯೋಚನೆ ಬಂತು. ಬಹುಶಃ ಭೂಮಿಯ ಜನನದಿಂದಲೇ ಪ್ರಾರಂಭವಾಯ್ತೇನೋ!! ಅದಕ್ಕೇ ಭೂಮಿಯನ್ನು ತಾಯಿ ಅಂತ ಕರೆದದ್ದಿರಬಹುದು. ಭೂಮಿಯನ್ನು ಸ್ತ್ರೀಯಾಗಿಸಿದ್ದು ಅಥವಾ ಸ್ತ್ರೀಯನ್ನು ಭೂಮಿಗೆ ಹೋಲಿಸಿದ್ದು ಅವರ ಕ್ಷಮಾಗುಣ ಮತ್ತು ಸಹನೆಯ ಕಾರಣದಿಂದಲೇ.. ಎಲ್ಲವನ್ನೂ ಸಹಿಸುವ ಮತ್ತು ಕ್ಷಮಿಸುವ ಗುಣ ಹೆಣ್ಣಿಂದಲ್ಲದೇ ಬೇರೆಯವರಿಂದ ಸಾಧ್ಯವೇ!? ಸಹನೆಯನ್ನು ದೌರ್ಬಲ್ಯವೆಂದು ತುಳಿದು ಮಿತಿ ಮೀರಿದರೆ ಒಂದು ಕಂಪನ ಸಾಕು ಅವಳ ಶಕ್ತಿ ಅರಿವಾಗಲು ಇಂಥ ‘ಹೆಣ್ಣು’ ನಡೆದುಬಂದ ಹಾದಿಯನ್ನು ಒಮ್ಮೆ ಹಾಗೇ ಸುಮ್ಮನೆ ಅವಲೋಕಿಸುವ ಮನಸಾಗಿದೆ.
ಕಾಲಚಕ್ರವನ್ನು ಹಾಗೆ ಒಮ್ಮೆ ಹಿಂದೆ ತಿರುಗಿಸಿ ನೋಡಿದರೆ, ಒಂದು ಕಾಲದಲ್ಲಿ ‘ಸ್ತ್ರೀ’ ಗೆ ಅತ್ಯಂತ ಉನ್ನತ ಸ್ಥಾನವಿತ್ತು ನಾರಿಗೆ ಗೌರವ ಸಲ್ಲುವ ಕಡೆ ದೇವತೆಗಳು ವಾಸಿಸುತ್ತಾರೆ ಎಂಬ ಭಾವವಿತ್ತು. ಅದೇ ಕಾಲದಲ್ಲಿ ಸ್ತ್ರೀ ಸ್ವತಂತ್ರವಾಗಿರಲು ಅರ್ಹಳಲ್ಲ ಎಂಬ ಮಾತನ್ನೂ ಹೇಳಲಾಯಿತು. ಹೆಣ್ಣಿನ ಸುರಕ್ಷತೆಯ ದೃಷ್ಠಿಯಿಂದ ಆಡಿದ ಮಾತದು. ದೈಹಿಕವಾಗಿ ಪುರುಷ ಸ್ತ್ರೀಗಿಂತ ಬಲಶಾಲಿಯಾದ ಕಾರಣ ಅವಳ ಆತ್ಮ ಮತ್ತು ಮಾನ ರಕ್ಷಣೆಯ ಜವಾಬ್ದಾರಿ ಪುರುಷನದು ಎಂಬುದನ್ನು ಹೇಳಲು ಆ ಮಾತನ್ನು ಉಪಯೋಗಿಸಲಾಗಿದೆ. ಬಾಲ್ಯದಲ್ಲಿ ತಂದೆ, ತಾಯಿ, ಯೌವನದಲ್ಲಿ ಪತಿ, ವೃದ್ಧಾಪ್ಯದಲ್ಲಿ ಮಕ್ಕಳು ಅವಳ ರಕ್ಷಣೆಯ ಹೊಣೆ ಹೊರಬೇಕೆಂದು ರೂಢಿಯಲ್ಲಿತ್ತು.
ಇತಿಹಾಸವನ್ನು ಕೆದಕಿ ನೋಡಿದಾಗ ಎಲ್ಲೋ ಬೆರಳೆಣಿಕೆಯ ವೀರ ವನಿತೆಯನ್ನು ಬಿಟ್ಟರೆ ಹೆಣ್ಣು ಸಮಾಜಕ್ಕೆ ತೆರೆದುಕೊಂಡ ದಾಖಲೆಗಳು ಸಿಗುವುದು ತುಂಬಾ ಕಡಿಮೆಯೇ, ಮನೆಯೇ ಆಕೆಯ ಪಾಲಿನ ಜಗತ್ತು ಪತಿಯೇ ದೇವರು ಅವನಿಗೆ ಎದುರಾಡುವಂತಿಲ್ಲ. ಅವನ ಆಣತಿಯಂತೆ ನಡೆಯುವ ಹೆರುವ, ದುಡಿಯುವ ಯಂತ್ರದಂತಿತ್ತು ಅವಳ ಸ್ಥಿತಿ ಅವಳ ಆಸೆ, ಕನಸು, ಭಾವನೆಗಳಿಗೆ ಬೆಲೆ ದೊರೆತದ್ದು ತೀರಾ ಕಡಿಮೆಯೇ! ವಿಪರ್ಯಾಸವೆಂದರೆ ತಾನು ಹೀಗೆ ಶೋಷಣೆಗೊಳಗಾಗುತ್ತಿರುವೆನೆಂಬ ಕಲ್ಪನೆಯೂ ಆಕೆಗಿರಲಿಲ್ಲ. ಸತೀ ಸಹಗಮನ ಕಟ್ಟುನಿಟ್ಟಾದ ವೈಧವ್ಯದ ಆಚರಣೆ ಎಲ್ಲವನ್ನೂ ಸಹಜವೆಂಬಂತೆ ಬದುಕಿದಳು ಅದಕ್ಕೇ ಸ್ತ್ರೀಶಿಕ್ಷಣದಿಂದ ವಂಚಿತಳಾದದ್ದು ಕಾರಣವಿರಬಹುದೇನೋ ? ಅಂದಿನ ಯುದ್ದ, ಪರಕೀಯರ ಆಡಳಿತ, ಅವರು ಹೆಣ್ಣನ್ನು ನಡೆಸಿಕೊಳ್ಳುತ್ತಿದ್ದ ರೀತಿ ಇವೆಲ್ಲಾ ಮಹಿಳೆ ಹೊರ ಹೋಗುವುದಕ್ಕೆ ಅಡ್ಡಿಯಾಗಿರಬೇಕು. ಬಾಲ್ಯ ವಿವಾಹಕ್ಕೂ ಇದೇ ಕಾರಣವಾಯಿತು. ಎಲ್ಲವನ್ನೂ ತನ್ನ ಹಣೆಬರಹ ಅಂದುಕೊಂಡು ಸಹಿಸಿದಳು.
ಶತಮಾನಗಳಿಂದೀಚೆ ಮಹಿಳೆ ಸುಶಿಕ್ಷಿತಳಾದಂತೆ, ಸಮಾಜಮುಖಿಯಾದಳು, ಶೋಷಣೆಯವಿರುಧ್ಧ ದನಿ ಎತ್ತಿದಳು. ವೈಚಾರಿಕವಾಗಿ ಬೆಳೆದಳು, ಹಿಂದೆಂದಿಗಿಂತಲೂ ಹೆಚ್ಚು ಸ್ವಾವಲಂಭಿಯಾಗಿ, ಸ್ವತಂತ್ರಳಾಗಿ, ಯಾವ ಕ್ಷೇತ್ರದಲ್ಲೂ ಕಡಿಮೆಯಿಲ್ಲದಂತೆ ಪುರುಷನಿಗೆ ಸರಿಸಮಾನಳಾಗಿ ದುಡಿಯಲು ಆರಂಭಿಸಿದಳು ಸಹಿಸುವಿಕೆ ಮುಗಿದು ಸಿಡಿದೆದ್ದು, ಪ್ರವಾಹದೋಪಾದಿಯಲ್ಲಿ ಬೆಳೆದಳು. ಅದರಿಂದ ಸಮಾಜದ ದೃಷ್ಟಿಕೋನ ಸ್ವಲ್ಪ ಬದಲಾಯಿಸಿತಾದರೂ ಹೆಣ್ಣಿಗೆ ದಕ್ಕಿದ್ದು ದ್ವಿಗುಣ ಶ್ರಮ! ಕುಟುಂಬ ನಿರ್ವಹಣೆ ಮಕ್ಕಳ ಪಾಲನೆಯ ಜೊತೆ ಹೊರಹೋಗಿ ದುಡಿಯುವ ಅನಿವಾರ್ಯತೆ! ಸ್ವಾತಂತ್ರ್ಯ ಅದರಲ್ಲೂ ಆರ್ಥಿಕ ಸ್ವಾವಲಂಬನೆ ಕೆಲಮಟ್ಟಿಗೆ ಅಹಂಕಾರ ಹಾಗೂ ಸ್ವೇಚ್ಛೆಗೆ ಕಾರಣವಾದ್ದು ವಿಮರ್ಶೇಗೊಳಪಡಿಸಬೇಕಾದ ಸತ್ಯ!
ಯಾವಾಗ ಹಣಕ್ಕೆ ಪ್ರಾಮುಖ್ಯತೆ ಬಂದು, ಉಳಿದ ಮೌಲ್ಯಗಳು ತಮ್ಮ ಮೌಲ್ಯ ಕಳೆದುಕೊಂಡವೋ ಅಂದಿನಿಂದಲೇ ಸ್ತ್ರೀ ಪುರುಷ ಸಮಾನತೆಯ ದನಿ ಎದ್ದಿತೇನೋ! ಹೆಣ್ಣಿನ ಮನೆ ಕೆಲಸ ಆದಾಯ ರಹಿತ ಕನಿಷ್ಠ ಹಣಗಳಿಸುವ ಪುರುಷನ ಕೆಲಸ ಶ್ರೇಷ್ಠ – ಮನೆ ನಡೆಯುವುದೇ ತಾನು ತರುವ ಹಣದಿಂದ ಎಂಬ ಪುರುಷನ ಧೋರಣೆ ಎಂಬ ಭಾವ ಹೆಣ್ಣಿಗೆ ತನ್ನ ಇರುವನ್ನು ಅಸ್ತಿತ್ವವನ್ನು ಉಳಿಸಿಕೊಳ್ಳುವ ಅನಿವಾರ್ಯತೆಯನ್ನು ಸೃಷ್ಠಿಸಿತ್ತು.
ಯೋಚಿಸಿದಷ್ಟೂ ತೆರೆದುಕೊಳ್ಳುವ ವಿಶಾಲ ಹರವನ್ನು ಹೊಂದಿದೆ ಈ ಹೆಣ್ಣು ನಡೆದುಬಂದ ಹಾದಿ. ಇಂದಿನ ಹೆಣ್ಣಿನ ಎಲ್ಲ ಸಾಧನೆ ಪಡೆದುಕೊಂಡ ತನ್ನದೇ ಹಕ್ಕುಗಳಿಗೆ ಕಾರಣ ವಿದ್ಯೆ. ಆದರೂ ಬಹುತೇಕ ಮಹಿಳೆಯದು ಸಮಾಜಿಕವಾಗಿ ಬೆರೆಯುವಲ್ಲಿ ಮುದುಡಿದ ಮನಸ್ಥಿತಿಯೇ! ಆಧುನಿಕತೆ ಹೆಚ್ಚಿದಂತೆಲ್ಲ ಮಹಿಳೆ ತೀರ ಅಸುರಕ್ಷಿತಳಾಗುತ್ತಿದ್ದಾಳೆ ಅನಿಸುತ್ತಿದೆ. ಮಾತೆ, ದೇವತೆ, ಪರಸ್ತ್ರೀ ಎಂಬೆಲ್ಲಾ ಭಾವಗಳು ಗಾಳಿಗೆ ತೂರಲ್ಪಟ್ಟು ಕಾಮದ, ಭೋಗದ ವಸ್ತುವಾಗಿ ಕಾಣಲಾಗುತ್ತಿದೆ. ಸಮಾಜದಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳುವ ಭರದಲ್ಲಿ ತಾನು ಉಪಯೋಗಿಸಲ್ಪಡುತ್ತಿದ್ದೇನೆ ಎಂಬ ಅರಿವಿಲ್ಲದೇ ಅನೇಕ ಅವಾಂತರಗಳಿಗೆ ಬದಲಾದ ದೃಷ್ಠಿಕೋನಗಳಿಗೆ ಹೆಣ್ಣೇ ಕಾರಣಳಾದ ಸಂದರ್ಭಗಳಿವೆ, ಅಪಾಯಗಳಿವೇ ಸಾಮಾಜಿಕ ನ್ಯಾಯ ಸಿಗಲಾರದೆಂಬ ಕಾರಣಕ್ಕೆ ಇಂದಿಗೂ ಅದೆಷ್ಟೋ ಹಿಂಸೆಗಳನ್ನು ಸ್ತ್ರೀ ಸಹಿಸುತ್ತಲೇ ಇದ್ದಾಳೆ ಸಮಾಜದಲ್ಲಿ ತನ್ನ ಸ್ಥಾನ ಭವಿಷ್ಯವನ್ನು ನೆನೆ ನೆನೆದು ದೌರ್ಜನ್ಯಗಳಿಗೆ ಮೂಕ ಸಾಕ್ಷಿಯಾಗಿರುವ ದೌರ್ಭಾಗ್ಯ ಹೆಣ್ಣಿನದು. ವರದಕ್ಷಿಣೆ ಸಾವಿನಂಥ ಕ್ರೌರ್ಯಗಳಲ್ಲಿ ಹೆಣ್ಣು, ಹೆಣ್ಣಿನಿಂದಲೇ ಶೋಷಿತಳಾದದ್ದು ವಿಷಾದನೀಯ!
ಮಹಿಳೆಯ ಎಲ್ಲ ಸ್ಥಿತಿಗಳಿಗಿಗೂ ಅವಳು ಬೆಳೆದು ಬಂದ ವಾತಾವರಣ ಮನಸ್ಥಿತಿಯೇ ಕಾರಣವೇನೋ! ಮಧ್ಯರಾತ್ರಿ ಮಹಿಳೆಯೊಬ್ಬಳು ನಿರ್ಭೀತಿಯಿಂದ ಓಡಾಡುವಂತ ಕನಸು ಕಂಡೆವೇ ವಿನಃ ಅದಕ್ಕೆ ಪೂರಕ ವಾತಾವರಣ ನಿರ್ಮಿಸುವಲ್ಲಿ ಮೌಲ್ಯಗಳನ್ನು ರೋಢಿಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಭೂಮಿಗೆ ಹೋಲಿಸಿ, ಕ್ಷಮಯಾಧರಿತ್ರಿ ಎಂದು ಕರೆದು ಭೂಮಿಯನ್ನು ಅಗೆದಂತೆ ಹೆಣ್ಣೊಡಲನ್ನು ಬಗೆಯುತ್ತಲೇ ಇದ್ದೇವೆ. ಹೆಣ್ಣು ಭೂಮಿಯಂತೆ ಸಹಿಸುತ್ತಲೇ ಇದ್ದಾಳೆ. ಹೆಣ್ಣು ದೈಹಿಕವಾಗಿ ಅಬಲೆಯಾದರೂ ಸಮಾಜಿಕವಾಗಿ ಆರ್ಥಿಕವಾಗಿ ಸರಿಸಮಾನಳು ಪ್ರೀತಿ ಕರುಣೆ ಸಹನೆ, ಕಾಳಜಿ, ಸ್ಪಂದನ ಕಾರ್ಯಕುಶಲತೆ ಮುಂತಾದ ನಿಜಮೌಲ್ಯಗಳಲ್ಲಿ ಎಂದಿಗೂ ಅವನಿಗಿಂತ ತುಂಬಾ ಎತ್ತರದ ಸ್ಥಾನ ಆಕೆಯದು.
🙂
ಚೆನ್ನಾಗಿದೆ…
thnk u siddaram&sachin..:)
Chenagidhe ennu bareyabahudithu adaru chikadadaru mana mutuvanthidhe
Shubhavagali
ಲೇಖನ ತುಂಬಾ ಚೆನ್ನಾಗಿದೆ. Keep it up ಗಾಯತ್ರಿಯವರೆ
ಧನ್ಯವಾದ ುತ್ತಮ್ ಅವರೆ, ವಿಶ್ವನಾಥ ಸುಂಕಸಾಳ ಅವರೆ..:)