ಹೆಣ್ಣು ಕೇವಲ ಹೆರುವ ಯಂತ್ರವಲ್ಲ: ಗಾಯತ್ರಿ ನಾರಾಯಣ ಅಡಿಗ

” ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ” ಪ್ರತಿ ಹೆಣ್ಣು ಸುಶಿಕ್ಷಿತಳಾಗಿ ತನ್ನ ಕುಟುಂಬ ಮತ್ತು ಇಡೀ ಸಮಾಜವನ್ನು ಸಂಸ್ಕಾರಯುತವನ್ನಾಗಿ ರೂಪಿಸುತ್ತಾಳೆ. ಮುಂದುವರೆದು, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಹಿಳೆಯು ಪುರುಷನಿಗೆ ಸಮಾನಳು. ನಮ್ಮ ದೇಶದಲ್ಲಿ ಅನಾದಿ ಕಾಲದಿಂದಲೂ ಮಹಿಳೆಯು ಮನೆ, ಮಕ್ಕಳು, ಕುಟುಂಬ ನಿರ್ವಹಣೆ, ಹಬ್ಬ ಹರಿದಿನಗಳು, ಸಂಪ್ರದಾಯಗಳು, ಕಟ್ಟುಪಾಡುಗಳು, ಪರಂಪರೆಗಳು, ಅರೋಗ್ಯ, ಶಿಕ್ಷಣ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತನ್ನ ಶಕ್ತಿ ಮೀರಿ ಪ್ರಯತ್ನಿಸಿ ಸಫಲತೆಯನ್ನು ಕಂಡಿದ್ದಾಳೆ. ಇತ್ತೀಚಿನ ದಿನಗಳಲ್ಲಿ ಸ್ತ್ರೀ ತನ್ನ ಮನೆಯ ಪರಿಸ್ಥಿತಿಯನ್ನು ನಾಜೂಕಾಗಿ ನಿಭಾಯಿಸಿಕೊಂಡು, ಅಲ್ಲಿ ಹಾಕಿರುವ ಚೌಕಟ್ಟಿನಿಂದ ಹೊರಬಂದು ಸಾಮಾಜಿಕ, ಆರ್ಥಿಕ, ರಾಜಕೀಯ ಇನ್ನೂ ಹಲವು ಕ್ಷೇತ್ರಗಳಲ್ಲಿ ಒಳಹೊಕ್ಕು ಸಾಧಿಸಿ ಮೆರೆದಿದ್ದಾಳೆ. ಮಹಿಳೆಯರ ಈ ಎಲ್ಲಾ ಯಶಸ್ಸನ್ನು ಮನಗಂಡು ಪ್ರತಿವರ್ಷ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಿ ಆ ದಿವಸವನ್ನು ಅವರಿಗೆ ಅರ್ಪಿಸಲಾಗುತ್ತಿದೆ. 

 ಹೆಣ್ಣು ಹೆರುವ ಯಂತ್ರವಲ್ಲ. ಒಂದು ಜೀವಕ್ಕೆ ಉಸಿರು ನೀಡುವ ಅದ್ಭುತ ಶಕ್ತಿ,ಜನನಿ. ಅವಳ ಮೇರು ಶಕ್ತಿಗೆ ಪ್ರತಿಯೊಬ್ಬರೂ ಇಂದು ಅವಳನ್ನು ಗೌರವಿಸಬೇಕಾದ್ದು ಅತ್ಯವಶ್ಯ. ಪ್ರೀತಿ, ವಾತ್ಸಲ್ಯ, ಸಹನೆ, ಮಾತೃಗುಣ, ಕರುಣೆ, ಸತ್ಕಾರ, ಆರೈಕೆ ಇತ್ಯಾದಿ ಚಿನ್ನದಂತಹ ಗುಣಗಳು ಆಕೆಗೆ ಹುಟ್ಟಿನಿಂದಲೇ ಬಳುವಳಿಯಾಗಿ ಬಂದಿರುತ್ತದೆ. ಇವುಗಳನ್ನು ಧರಿಸಿರುವುದರಿಂದಲೇ ಆಕೆ ಸದಾ ತನ್ನ ಅನಂತ ಶಕ್ತಿಯಿಂದ ಹೊಳೆಯುತ್ತಿರುತ್ತಾಳೆ. 

ಪ್ರೀತಿಯ ಅಂತಃಕರಣ, ಅದ್ಭುತ ಶಕ್ತಿಯ ಸಮಾಗಮವಾಗಿರುವ ಹೆಣ್ಣು ಪುರುಷ ಪ್ರಧಾನ ಸಮಾಜದಲ್ಲಿ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸುತ್ತಿರುವುದು ಹೆಮ್ಮೆಯ ವಿಷಯ. 

ಪ್ರಸ್ತುತದಲ್ಲಿ ಮಹಿಳೆಯರು ”ಪಾಕಶಾಲೆಯಿಂದ ಕಚೇರಿಯತ್ತ” ಎಂಬ ಘೋಷಣೆಯೊಂದಿಗೆ ಬದುಕುತ್ತಿದ್ದಾಳೆ. ಗಂಡ, ಮನೆ, ಮಕ್ಕಳು, ಕುಟುಂಬವನ್ನು ಅರ್ಥವ್ಯವಸ್ಥೆಯ ಸಹಿತವಾಗಿ ಯಾವುದೇ ಕೊರತೆಯಿಲ್ಲದೆ ಸಂಸಾರ ನಡೆಸುತ್ತಿರುವುದು ಅವಳ ಮೇರು ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ. 

ಪುರಾತನದಿಂದ ಇಲ್ಲಿಯವರೆಗೂ ಸಮಾಜ ಮಹಿಳೆಯ ಅಸಹಾಯಕತೆಯನ್ನು ವಿಡಂಬಿಸುತ್ತಿದೆ. ತನ್ಮೂಲಕ ಅವಳನ್ನು ಭಯಭೀತನ್ನಾಗಿಸುತ್ತಿದೆ.ಅವಳ ಚಾರಿತ್ರ್ಯಕ್ಕೆ ಮಸಿ ಬಳಿಯುವವರೇ ಹೆಚ್ಚು. ಮಹಿಳೆಯರ ತಿಂಗಳಿನ ದೈಹಿಕ ಬದಲಾವಣೆಯನ್ನು ಅಸ್ಪೃಶ್ಯರಂತೆ ಕಾಣುವುದು, ಅವಳ ಕರಗಳನ್ನು ಪಾತ್ರೆ ತೊಳೆಯಲು, ಕಸ ಗುಡಿಸಲು ಇತ್ಯಾದಿ ಕೆಲಸಗಳಿಗಂತಲೇ ಮೀಸಲಿಡುವುದು ಇತ್ಯಾದಿ. “ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ” ಎಂಬ ಮಾತು ಮಾತ್ರ ಕೇವಲ ಹೊತ್ತಗೆಯಲ್ಲಿದೆ. ಆದಾಗ್ಯೂ ಅತ್ತ ತವರು ಮನೆ ಇತ್ತ ಗಂಡನ ಮನೆ ಎರಡರಲ್ಲೂ ಸಮಾನತೆಯನ್ನು ಕಾಯ್ದುಕೊಳ್ಳುವುದು ಅವಳ ಚಮತ್ಕಾರವೇ ಸರಿ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಸ್ತ್ರೀ ಇರುತ್ತಾಳೆ ಎಂದರೆ ಅವಳ ಅಸ್ತಿತ್ವಕ್ಕೆ ಎಣೆಯೇ ಇಲ್ಲ. 

ಮುಂದುವರೆದ ಈ ಜಗತ್ತಿನಲ್ಲಿ ಮಹಿಳೆಯು ಬಾಲ್ಯವಿವಾಹ, ಲೈಂಗಿಕ ಕಿರುಕುಳ, ಲಿಂಗ ಅಸಮಾನತೆ, ಶಿಕ್ಷಣದಲ್ಲಿ ವಂಚಿತರಾಗುವುದು ಮುಂತಾದ ಸವಾಲಿಗೆ ಜವಾಬಿನೊಂದಿಗೆ ಜೀವನ ಸಾಗಿಸುತ್ತಿದ್ದಾಳೆ. ಸಿಗದ ನ್ಯಾಯಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಅವಿರತ ಪ್ರಯತ್ನಿಸುತ್ತಿದ್ದಾಳೆ. ದಾಸ್ಯಸಂಕೋಲೆಯಿಂದ ಬಿಡಿಸಿಕೊಂಡು ಸ್ವಚ್ಛಂದವಾಗಿ ಹಾರಾಡುವ ಹಕ್ಕಿಯಾಗಲು ಬಯಸುತ್ತಿದ್ದಾಳೆ.

 ಆದರೆ ಪಾಶ್ಚಾತ್ಯ ದೇಶಗಳಲ್ಲಿ ಪರಿಸ್ಠಿತಿಯೇ ಬೇರೆ. ಮಹಿಳೆಯು ಪುರುಷನಿಗೆ ಸರಿಸಮನಾಗುವ ಹವಣಿಕೆಯಲ್ಲಿ ತನಗೆ ಸಿಕ್ಕಿರುವ ಸ್ವತಂತ್ರವನ್ನು ಸ್ವೇಚ್ಛೆಯಾಗಿ ಬಳಸಿಕೊಂಡಿದ್ದಾಳೆ. ಸ್ತ್ರೀಯು ರಾಜಕೀಯ, ಆರ್ಥಿಕ, ಸಾಮಾಜಿಕ ರಂಗಗಳಲ್ಲಿ ದುಡಿದರೂ ಆಕೆಗೆ ತೃಪ್ತಿ ಎಂಬುದಿಲ್ಲ. ಸಂಬಂಧಗಳ ನಡುವೆ ಬಂಧವಿರುವುದಿಲ್ಲ. ಗಂಡಿನೊಂದಿಗೆ ಪೈಪೋಟಿ ನಡೆಸುವಲ್ಲಿ ಆಡಂಬರದ ಹೆಂಡತಿಯಾಗುತ್ತಿದ್ದಾಳೆ. ಇವಳು ಮಕ್ಕಳನ್ನು ಹೆರಲಾರಳು. ಹೆತ್ತರೂ ಕೂಡ ಆ ಮಗು ದಾದಿಯರು, ಶಿಶು ಸಂರಕ್ಷಣಾ ಸಂಸ್ಥೆಗಳಲ್ಲಿ ಬೆಳೆಯಬೇಕಾಗುತ್ತದೆ. ಇದರಿಂದ ಮುಂದೆ ಬೆಳೆಯುವ ಮಕ್ಕಳು ಪ್ರೀತಿ, ವಾತ್ಸಲ್ಯ ಮುಂತಾದ ಹೃದಯ ಬೆಸೆಯುವ ಗುಣಗಳಿಂದ ವಂಚಿತರಾಗಿ ಕೆಲವೊಮ್ಮೆ ಕ್ರೂರವಾಗಿ ವರ್ತಿಸುತ್ತಾರೆ. 

 ಇಂದು ನಮ್ಮ ದೇಶದಲ್ಲಿ ಪರಿಸ್ಥಿತಿ ಹೇಗಿದೆ ಎಂದರೆ ಆಧುನಿಕತೆ ಎಂಬ ಹೆಸರಿನಲ್ಲಿ ನಾಗರಿಕತೆಯನ್ನೇ ಮರೆತು ತಮ್ಮ ಅಸ್ಥಿತ್ವವನ್ನು ಕಳೆದುಕೊಳ್ಳತ್ತಿದೆ. ಪಾಶ್ಚಾತ್ಯ ಸಂಸ್ಕೃತಿಗಳಿಗೆ ಮಾರು ಹೋಗಿ ತಮ್ಮ ಬದುಕನ್ನು ನರಕ ಸದೃಶವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಶಿಷ್ಟಾಚಾರಗಳನ್ನು ಮರೆತಂತಿದೆ. ಇದರಿಂದ ಮುಂದೆ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವಿಲ್ಲ. ದುಡಿತದ ತುಡಿತಕ್ಕೆ ಒಳಗಾಗಿ ಸ್ವಂತ ಮಕ್ಕಳನ್ನು ನೋಡಿಕೊಳ್ಳುವುದಕ್ಕೂ ಸಮಯವಿಲ್ಲ. ಪ್ರೀತಿ, ಮಮತೆಯಿಂದ ವಂಚಿತರಾದ ಮಕ್ಕಳು ಮುಂದೆ ಸಮಾಜಕಂಟಕರಾಗಬಹುದು. ಸರಿಯಾದ ಸಮಯದಲ್ಲಿ ನಾವು ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಹೊಂಡವನ್ನು ನಾವೇ ತೋಡಿಕೊಂಡಂತಾಗುತ್ತದೆ. ಕೊನೆಗೆ ಪಶ್ಚಾತ್ತಾಪ ಪಟ್ಟರೆ ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂಬಂತಾಗುವುದು. 

 ಮುಖ್ಯವಾಗಿ ಪ್ರಕೃತಿಯ ಸೃಷ್ಠಿಗಳಾದ ಗಂಡು ಮತ್ತು ಹೆಣ್ಣು ಪರಸ್ಪರ ಸಹಬಾಳ್ವೆ, ಸಹಕಾರ, ಸಹೋದರತ್ವ ಇವೇ ಮುಂತಾದ ತತ್ವಗಳೊಂದಿಗೆ ಜೀವನ ಮುನ್ನಡೆಸಿಕೊಂಡು ಹೋಗುವುದು ಅನಿವಾರ್ಯ. ಹೆಣ್ಣನ್ನು ಪೂಜನೀಯವಾಗಿ ಕಾಣುತ್ತಾರೆ ನಿಜ. ಆದರೆ ಹೆಣ್ಣನ್ನು ಹೆಣ್ಣಾಗಿ ಕಾಣುವುದಿಲ್ಲ. ಅವಳಿಗೂ ಆಸೆ ಆಕಾಂಕ್ಷೆಗಳಿವೆ ಎಂಬುದನ್ನು ಎಷ್ಟೋ ಜನ ತಿಳಿದಿರುವುದಿಲ್ಲ. 

 ಸ್ನೇಹಿತರೇ, ಗಾಂಧೀಜಿಯವರು ಹೇಳಿದಂತೆ ಮಧ್ಯರಾತ್ರಿ ಸ್ತ್ರೀ ಒಬ್ಬಳೇ ದಾರಿಯಲ್ಲಿ ಯಾವಾಗ ಧೈರ್ಯದಿಂದ ನಡೆದು ಹೋಗುತ್ತಾಳೋ ಆಗ ಮಾತ್ರ ನಿಜವಾದ ಸ್ವಾತಂತ್ರ್ಯ ಸಿಕ್ಕಿದಂತಾಗುತ್ತದೆ. ಅವರ ರಾಮರಾಜ್ಯದ ಕನಸು ನನಸಾಗುತ್ತದೆ. ಅವರ ಕನಸು ಸಾಕಾರಗೊಳ್ಳಬೇಕಾದರೆ ಪ್ರತಿಯೊಬ್ಬರೂ ಸಹಕಾರದ ಜೊತೆಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ಅತ್ಯವಶ್ಯ. ಹಾಗೆಯೇ ಎಲ್ಲರೂ ಕೂಡ ತನ್ನ ಸಂಸ್ಕೃತಿಯನ್ನು ಪೂಜಿಸಬೇಕು. ಅನ್ಯ ಸಂಸ್ಕೃತಿಯನ್ನು ಗೌರವಿಸುವ ಭಾವನೆಯುಳ್ಳವರಾಗಿರಬೇಕು.ಮಹಿಳೆ ಇವತ್ತು ಸಬಲೆಯಾಗುವುದಕ್ಕೆ ಬೇಕಾದಷ್ಟು ಅವಕಾಶಗಳಿವೆ. ಅವುಗಳನ್ನು ಅರ್ಥಪೂರ್ಣವಾಗಿ ಅನುಸರಿಸಿಕೊಂಡು ಉತ್ತಮ ಶ್ರೇಯಸ್ಸು, ಅಭಿವೃದ್ಧಿ ಹೊಂದಲು ಆಕೆಗೆ ಶಕ್ತಿ ಬರಲಿ ಎಂದು ಹಾರೈಸೋಣ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭ ಹಾರೈಕೆಗಳೊಂದಿಗೆ ಆಕೆಯ ಭವಿಷ್ಯ ಉಜ್ವಲವಾಗಲಿ ಎಂಬ ಮಹತ್ತರವಾದ ಆಶಯದೊಂದಿಗೆ,,, 

ಗಾಯತ್ರಿ ನಾರಾಯಣ ಅಡಿಗ 


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x