ಹೆಣ್ಣುಮಕ್ಕಳು ನಿರ್ಭಯರಾಗಿ ಓಡಾಡುವ ಕಾಲ ಮುಗಿದೇ ಹೋಯಿತೇ?: ಕೆ. ಉಷಾ ಪಿ. ರೈ


ನಿರ್ಭಯಳ ಭೀಕರ ಬಲತ್ಕಾರ ನಡೆದ ನಂತರ ’ಬಲಾತ್ಕಾರ’ ಎನ್ನುವ ಪದ ಅಂಕೆ ಸಂಖ್ಯೆಗಳ ಮಿತಿಯನ್ನೂ ಮೀರಿ ಯಾವುದೇ ಸಂಕೋಚವಿಲ್ಲದೆ ಅದೂ ಒಂದು ದಿನ ನಿತ್ಯದ ಬಳಕೆಯ ಶಬ್ಧದಂತೆ ಕಿವಿಗೆ ಬೀಳುತ್ತಲೇ ಇರುತ್ತದೆ. ಇದೇನೂ ಚರಿತ್ರೆಯಲ್ಲೇ ಮೊದಲ ’ಬಲತ್ಕಾರ’ದ ಕೇಸ್ ಅಲ್ಲ. ಆದರೆ ಇಡೀ ದೇಶದ ಜನರು ಒಗ್ಗಟ್ಟಾಗಿ ಪ್ರತಿಭಟಿಸಿದ್ದು ಈ ಘಟನೆಯನ್ನು. ಹಾಗಾಗಿ ಈ ಕೇಸಿಗೆ ಬಲ ಬಂದಿತ್ತು. ಇಡೀ ದೇಶದ ಜನರ ಪ್ರತಿಭಟನೆಯ ನಂತರವೂ ಬಲತ್ಕಾರಗಳು ನಿಲ್ಲಲಿಲ್ಲ. ಅದರ ನಂತರ ಮುಂಬಯಿಯಲ್ಲಿ ನಡೆದ ಶಕ್ತಿಮಿಲ್ ಬಲಾತ್ಕಾರದ ಕೇಸು ಕೂಡ ಅಷ್ಟೇ ಬೀಭತ್ಸವಾದದ್ದು. ಈ ಕೇಸುಗಳ ವಿಚಾರಣೆ  ನಡೆಯುತ್ತಿರುವಾಗಲೂ ಸಾವಿರಾರು ಬಲಾತ್ಕಾರಗಳು ನಡೆದಿವೆ, ಲೆಕ್ಕಕ್ಕೆ ಸಿಗದಷ್ಟು ನಡೆಯುತ್ತಲೂ ಇವೆ. 

ಈಗ ಕರ್ನಾಟಕದ ಸರದಿ. ಎಲ್ಲೆಲ್ಲೂ ಹಬ್ಬಿದ್ದಾರೆ ಕೀಚಕರು. ಎರಡು ವರ್ಷದ ಮಗುವನ್ನೂ ಬಿಡದ ಕಾಮಾಂಧರು. ಸನ್ಯಾಸಿಯಾಗಲು ಹೊರಟ ಹುಡುಗಿಯನ್ನೂ ಬಿಡಲಿಲ್ಲ. ಮನೆಯೊಳಗಿದ್ದ ಮಹಿಳೆಯನ್ನೂ ಬಿಡಲಿಲ್ಲ. ಹೊರಗೆ ಹೋದ ಹೆಣ್ಣುಮಕ್ಕಳನ್ನೂ ಬಿಡಲಿಲ್ಲ. ಮಕ್ಕಳನ್ನು ಶಾಲೆಗೆ ಕಳುಹಿಸಿದ ಮೇಲೂ ನಿರ್ಭಯರಾಗಿ ಇರಲು ಬಿಡದೆ ಕಾಡಿಸುತ್ತಿದೆ ವಿಬ್ಜಿಯೋರ್ ಶಾಲೆಯಲ್ಲಿ ನಡೆದ ಅತ್ಯಾಚಾರದ ಕೇಸು. ಅದೂ ಆರು ವರ್ಷದ ಹಸುಳೆಯ ಮೇಲೆ. ಅದಕ್ಕೆ ಮುಖ್ಯ ಕಾರಣ ಶಿಕ್ಷಿಸಲೆಂದು ಆ ಮಗುವನ್ನು ಕತ್ತಲೆ ಕೋಣೆಯಲ್ಲಿ ಕೂಡಿಹಾಕಿದ್ದು, ಹುಲಿಯ ಬೋನಿಗೆ ಕರುಮರಿಯನ್ನು ತಳ್ಳಿದಂತೆ. ಆ ಮಗುವಿಗೆ ಯಾರು ಮಾಡಿದೆಂದು ಗುರುತಿಸಲೂ ಸಾಧ್ಯವಿಲ್ಲ. ಆ ಶಾಲೆಯಲ್ಲಿ ಏನಾದರೂ ತಪ್ಪು ಮಾಡಿದ ಮಕ್ಕಳನ್ನು ಶಿಕ್ಷಿಸುವುದು ಹೀಗೇ ಆಂತೆ. ಕತ್ತಲೆ ಕೋಣೆಗೆ ತಳ್ಳುವುದು. ಇಂತಹ ಶಿಕ್ಷೆಗಳು ಕಾನೂನುಬಾಹಿರ ಅಲ್ಲವೇ? ಈ ಶಿಕ್ಷೆ ವಿಧಿಸಿದ ಟೀಚರನ್ನು ಯಾಕೆ ಸುಮ್ಮನೆ ಬಿಟ್ಟದ್ದು? ಯಾಕೆ ಇಂತಹ ಶಿಕ್ಷೆಯನ್ನು ಯಾರೂ ಪ್ರತಿಭಟಿಸಿಲ್ಲ? ಶಾಲಾ ಮೇನೇಜ್ ಮೆಂಟಿನವರಿಗೆ ಇದು ಗೊತ್ತಿಲ್ಲವೇ? ನಡೆದ ಘಟನೆಯನ್ನು ಮುಚ್ಚಲು ಹವಣಿಸುತ್ತಿರುವ ಈ ಶಾಲೆಯ ಪರವಾನಿಗಿ ರದ್ದುಮಾಡಬೇಕು ಎನ್ನುವ ವಾದ ಸರಿಯಾಗಿದೆಯಾದರೂ ಹಾಗೆ ಮಾಡಿದರೆ ಉಳಿದ ಸಾವಿರಾರು ಮಕ್ಕಳ ಗತಿಯೇನು ಎನ್ನುವ ಪ್ರಶ್ನೆ ಇದ್ದರೂ ಶಾಲಾ ಆಡಳಿತ ತಪ್ಪಿತಸ್ಥರನ್ನು ಹಿಡಿದುಕೊಡುವ ತನಕವಾದರೂ ಆ ಶಾಲೆಯನ್ನು ಮುಚ್ಚಲೇಬೇಕು. ಮಕ್ಕಳಿಗೆ ಸುರಕ್ಷಿತವಲ್ಲದ ಇಂತಹ ಶಾಲೆಗಳು ನಮಗೆ ಬೇಕೇ?

ಇಷ್ಟೆಲ್ಲಾ ಪ್ರತಿಭಟನೆಗಳು, ಗಲಾಟೆಗಳು ನಡೆಯುತ್ತಿರುವಾಗಲೂ ಬಲಾತ್ಕಾರಗಳು ನಡೆಯುತ್ತಲೇ ಇವೆ ಎನ್ನುವ ಸುದ್ದಿಗಳನ್ನು ಓದುವಾಗ ಎದೆ ನಡುಗುತ್ತದೆ. ಭಯಮುತ್ತಿಕೊಳ್ಳುತ್ತದೆ. ಹೀಗೇ ಆಗುತ್ತಿದ್ದರೆ ಹೆಣ್ಣು ಮಕ್ಕಳ ಗತಿಯೇನು? ಅವರಿಗೆ ನಮ್ಮ ಪ್ರಜಾಪ್ರಭುತ್ವದಲ್ಲಿ ಬದುಕುವ ಹಕ್ಕಿಲ್ಲವೇ? ರಕ್ಷಣೆ ಇಲ್ಲವೇ?   

ಯಾಕೆ ಹೀಗೆ? ಹೆಣ್ಣು ಅಂದ ಕೂಡಲೇ ಎಳೆ ಮಕ್ಕಳನ್ನೂ ಬಿಡದೆ ಅವರ ಮೇಲೇರುತ್ತಾರಲ್ಲ ಯಾಕೆ? ಅದೂ ಮನೆಯವರಿಂದಲೇ ನಡೆಯುತ್ತಿರುವ ಅತ್ಯಾಚಾರಗಳನ್ನು ಯಾವ ಕಾನೂನು ತಡೆದೀತು? ಇಂತಹ ಕಾಮಾಂಧ ಕೀಚಕರು ಅವರ ಒಳಗಿನಿಂದ ಬದಲಾಗದೆ ಯಾವ ಕಾನೂನು ಬಂದರೂ ಪ್ರಯೋಜನವಿಲ್ಲ. ಇಂಥಾ ಮೃಗಗಳನ್ನು ಪುನಹ ಮನುಷ್ಯರನ್ನಾಗಿಸುವುದು ಹೇಗೆ? ಕೊಳೆತ ಮನಸುಗಳನ್ನು ಯಾವ ಶಸ್ತಕ್ರಿಯೆಯಿಂದ ಸರಿಪಡಿಸಬಹುದು? ಅಥವಾ ಅವರನ್ನೆಲ್ಲಾ ನಡುರಸ್ತೆಯಲ್ಲಿ ನಿಲ್ಲಿಸಿ ಗುಂಡಿಟ್ಟು ಕೊಲ್ಲವುದೊಂದೇ ಪರಿಹಾರವೇ?

’ಬಲಾತ್ಕಾರ’ ಗಂಡಸರ ಜನ್ಮ ಸಿದ್ಧ ಹಕ್ಕು ಎನ್ನುವ ಅಹಂಕಾರ ಸುರುವಾದದ್ದು ಮಹಾಭಾರತದ ಕಾಲದಿಂದಲೇ ಇರಬಹುದು. ಬೆಂಕಿಯ ಮಗಳಿಗೂ ರಕ್ಷಣೆ ಇರಲಿಲ್ಲ. ದ್ರೌಪದಿಯನ್ನು ರಾಜಸಭೆಗೆ ಎಳೆದು ತಂದು ಇಡೀ ಸಭೆಯ ಮುಂದೆ ಮಾತುಗಳಲ್ಲೇ ಅವಳನ್ನು ಬೆತ್ತಲೆಯಾಗಿಸಿ ಅವಳ ಸೀರೆ ಎಳೆದದ್ದು ಯಾವ ಬಲಾತ್ಕಾರಕ್ಕೆ ಕಮ್ಮಿಯಿತ್ತು? ದ್ರೌಪದಿಯನ್ನು ಕದ್ದೊಯ್ದ ಜಯದ್ರಥ, ಬಲಾತ್ಕಾರಿಸಲೆತ್ನಿಸಿದ ಕೀಚಕ, ಅವಮಾನಿಸಿ ಸೀರೆ ಹಿಡಿದೆಳೆದ ದುರ್ಯೋದನ, ದುಶ್ಯಾಸನ, ಅದನ್ನು ನೋಡಿ ಪೈಶಾಚಿಕ ಸಂತಸ ಅನುಭವಿಸಿದ ದೃತರಾಷ್ಟ್ರನ ವಂಶಸ್ಥರೇ ಈ ಬಲಾತ್ಕಾರದಲ್ಲಿ ಸಂತಸ ಕಾಣುವ ಗಂಡಸರಾಗಿರಬಹುದು. ರಕ್ತ ಬೀಜಾಸುರನಂತೆ ಅವರ ವಂಶ ಬೆಳೆಯುತ್ತಲೇ ಇದೆ. ಹೆಣ್ಣಿನ ಮೇಲೆ ತನ್ನ ಗಂಡಸುತನವನ್ನು ಪ್ರತಿಷ್ಟಾಪಿಸುವ ಅಹಂಕಾರ ವಿಜೃಂಭಿಸುತ್ತಲೇ ಬಂದಿದೆ. ಹಿಂದೆಯೆಲ್ಲ ಈ ಬೀಭತ್ಸ ಕೆಲಸ ಹೊರಗೆ ಬರುತ್ತಿರಲಿಲ್ಲ. ಹೆಣ್ಣುಮಕ್ಕಳು ಮತ್ತವರ ಹೆತ್ತವರು ಬಾಯಿಮುಚ್ಚಿ ಸಹಿಸಿಕೊಳ್ಳುತ್ತಿದ್ದರು. ಅಥವಾ ಬಲಾತ್ಕಾರಕ್ಕೆ ಒಳಗಾದ ಹೆಣ್ಣು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಳು. ಯಾರೂ ಬಾಯಿ ಬಿಡುತ್ತಿರಲಿಲ್ಲ. ಹೆದರಿಕೆ ಹೆದರಿಕೆ ಹೆದರಿಕೆ. ಈಗ ಎಲ್ಲವೂ ಹೊರ ಬರುತ್ತಿದೆ. ಹಾಗಾಗಿ ಮಿನಿಟಿಗೆ ಇಷ್ಟು ಬಲಾತ್ಕಾರ ನಡೆಯುತ್ತಿದೆ ಎಂದು ಲೆಕ್ಕ ಹಾಕಬಹುದು. ಲೆಕ್ಕಕ್ಕೆ ಸಿಗದ ಕೇಸುಗಳು ಇನ್ನೂ ಎಷ್ಟೋ ಇವೆ ಎನ್ನುವುದೂ ಸತ್ಯ.     

ಬಲತ್ಕಾರ ಮಾಡಿದವರಿಗೆ ಆದಷ್ಟು ಬೇಗ ಹೆಚ್ಚೆಂದರೆ ಆರು ತಿಂಗಳ ಒಳಗೆ ಶಿಕ್ಷೆಯಾಗಬೇಕು, ಅಲ್ಲಲ್ಲಿ ಸ್ಪೆಷಲ್ ಕೋರ್ಟುಗಳ ನಿರ್ಮಾಣವಾಗಬೇಕು, ಮುಚ್ಚಿದ ಕೋರ್ಟುಗಳಲ್ಲಿ ವಿಚಾರಣೆಯಾಗಬೇಕು ಎನ್ನುವ ಹೋರಾಟ ಕಳೆದ ಹದಿನೈದು ವರ್ಷಗಳಿಂದಲೂ ನಡೆಯುತ್ತಿದೆ. ಹಲವಾರು ಮಹಿಳಾ ಸಂಘಟನೆಗಳು ಇದಕ್ಕಾಗಿ ಹೋರಾಡಿವೆ. ಆದರೆ ಸರಕಾರದ ಕಿವಿ ಯಾವಾಗಲೂ ಕಿವುಡೇ. ಕಣ್ಣು ಕುರುಡೇ. ಸರಕಾರದಲ್ಲಿ ಬದಲಾವಣೆಗಳು ಆದಂತೆ ಹಳೆ ಖಡತಗಳು ಮುಚ್ಚುತ್ತವೆ. ಹೊಸ ಖಡತಗಳು ತೆರೆಯಬೇಕಾದರೆ ಹೊಸ ಹೋರಾಟಗಳು ಸುರುವಾಗಬೇಕು. ನಿರ್ಭಯಳ ಕೇಸಿನ ನಂತರ ಈ ಹೋರಾಟಕ್ಕೆ ದೊರೆತ ತೀವ್ರತೆ ಕಾನೂನಿನ ತಕ್ಷಣ ತಿದ್ದುಪಡಿಗೆ ಒತ್ತಾಸೆಯಾದರೂ ಅದನ್ನು ಜಾರಿಗೆ ತರುವುದರಲ್ಲಿ ಇನ್ನೂ ಸಫಲವಾಗಿಲ್ಲ. ಅದರ ನಂತರ ಬಲಾತ್ಕಾರಗಳು ಕಡಿಮೆಯೂ ಆಗಿಲ್ಲ. ತಪ್ಪಿತಸ್ಥರನ್ನು ರಕ್ಷಿಸಲು ಮುಂದಾಗುವ ಅಧಮರೂ ಹೆಚ್ಚುತ್ತಲೇ ಇದ್ದಾರೆ. ಅವರೂ ಅಷ್ಟೇ ತಪ್ಪಿತಸ್ಥರು. ಶಿಕ್ಷೆ ಅವರಿಗೂ ಆಗಬೇಕು. ಎಳೆಮಕ್ಕಳನ್ನು, ಚಿಕ್ಕಚಿಕ್ಕ ಹುಡುಗಿಯರನ್ನು ಯಾಕೆ ಮುದುಕಿಯರನ್ನೂ ಬಿಡದೆ ಬಲಾತ್ಕಾರಗಳು ನಡೆಯುತ್ತಲೇ ಇವೆ. ಇಂತಹ ಪಾಶವೀ ಕೃತ್ಯ ನಡೆಯಲು ಪ್ರೇರಣೆಗಳಾದರೂ ಏನು? ಇದನ್ನು ತಡೆಯುವುದು ಹೇಗೆ? 

ಉತ್ತರ ಹುಡುಕಲಾಗದ ಪ್ರಶ್ನೆಗಳು. 
ವಿಚಿತ್ರವೆಂದರೆ ಎಲ್ಲದಕ್ಕೂ ಹುಡುಗಿಯರನ್ನೇ ದೋಷಿಯಾಗಿಸುವುದು ನಡೆಯುತ್ತಲೇ ಇದೆ. ಹುಡುಗರನ್ನು ಪ್ರಚೋದಿಸುವ ಹಾಗೆ ಡ್ರೆಸ್‌ಮಾಡ್ತಾರೆ, ಹುಡುಗರೊಡನೆ ಬೇಕಾದುದಕ್ಕಿಂತಲೂ ಹೆಚ್ಚು ಸಲುಗೆಯಿಂದ ವರ್ತಿಸುತ್ತಾರೆ, ರಾತ್ರಿಯೂ ಹೊರಗೆ ಹೋಗುತ್ತಾರೆ. ಪಾರ್ಟಿಗಳಿಗೆ ಹೋಗುತ್ತಾರೆ ಇತ್ಯಾದಿ ಇತ್ಯಾದಿ. ಇದು ಎಷ್ಟು ಸರಿ? ಎಳೆ ಮಕ್ಕಳ ಮೇಲೆ ಧಾಳಿ ಮಾಡುತ್ತಾರಲ್ಲ ಅವರನ್ನು ಆ ಎಳೆ ಮಗು ಹೇಗೆ ಪ್ರಚೋದಿಸುವುದು ಸಾಧ್ಯ?  ಮೈತುಂಬಾ ಬಟ್ಟೆ ತೊಟ್ಟ ಮಹಿಳೆಯರ ಬಲಾತ್ಕಾರ ಆಗುವುದಿಲ್ಲವೇ? ಬರೇ ತುಂಡು ಬಟ್ಟೆಯೇ ಬಲಾತ್ಕಾರಕ್ಕೆ ಕಾರಣವೇ? ತಂದೆ ಮಗಳನ್ನು, ಅಜ್ಜ ಮೊಮ್ಮಗಳನ್ನು, ಚಿಕ್ಕಪ್ಪ, ಮಾವ, ಕುಟುಂಬದ ಸದಸ್ಯ ಮನೆಯ ಹೆಣ್ಣುಮಕ್ಕಳನ್ನು ಬಲಾತ್ಕಾರ ಮಾಡುವುದು ಯಾವ ಪ್ರಚೋದನೆಯಿಂದ? ನಿಜಕ್ಕೂ ಅರ್ಥವಾಗದು. 

ಬಲಾತ್ಕಾರ ಮಾಡುವವರು ಮನುಷ್ಯರಲ್ಲ. ತಲೆಕೆಟ್ಟ ಹುಚ್ಚರು. ಮಾನಸಿಕ ರೋಗಿಗಳು. ಮಾನವೀಯತೆಯನ್ನೇ ಮರೆತ ರಾಕ್ಷಸರು. ಇಲ್ಲಿ ರಾಕ್ಶಸರು ಎನ್ನುವುದೂ ತಪ್ಪಾಗುತ್ತದೆ. ರಾವಣ ಸೀತೆಯನ್ನು ಮೋಹಿಸಿ ಕರೆದೊಯ್ದು ಅಶೋಕವನದಲ್ಲಿ ಇರಿಸಿದ್ದರೂ ಅವಳ ಮೈಮುಟ್ಟಲಿಲ್ಲ. ಮರ್ಯಾದೆಯ ಎಲ್ಲೆಯನ್ನು ಮೀರಿರಲಿಲ್ಲ. ಹಾಗಿರುವಾಗ ರಾಕ್ಷಸರಿಗೆ ಹೋಲಿಸುವುದೂ ಸರಿಯಲ್ಲ. ಬಲಾತ್ಕಾರ ಮಾಡುವವರ ಕೆಟಗರಿಯೇ ಬೇರೆ. ತಲೆಕೆಟ್ಟ ಮತಿಗೆಟ್ಟ ಕಾಮುಕರು. 

ಇತ್ತೀಚೆಗೆ ಬರಹದಲ್ಲಿ, ಸ್ಟೇಜಿನ ಮೇಲೆ, ಸಿನಿಮಾದಲ್ಲಿ ಬಲಾತ್ಕಾರದ ಬಗ್ಗೆ ಯಾವ ಸಂಕೋಚವೂ ಇಲ್ಲದೆ ಅಭಿವ್ಯಕ್ತಿಸುತ್ತಾರೆ. ಆದರೆ ಇದರಿಂದ ಎಷ್ಟು ಪರಿಣಾಮವಾಗಬಹುದು? . 
ಒಂದೆರಡು ತಿಂಗಳ ಹಿಂದೆ ಒಂದು ದೈನಿಕದಲ್ಲಿ ಒಂದು ಲೇಖನವಿತ್ತು. ಮರಾಟಿ ನಾಟಕಗಳಲ್ಲಿ ಬಲಾತ್ಕಾರದ ಮುಕ್ತ ಅಭಿವ್ಯಕ್ತಿಯ ಬಗ್ಗೆ ಅಲ್ಲಿ ಬರೆದಿತ್ತು. ಒಂದು ನಾಟಕದಲ್ಲಿ ಒಬ್ಬ ನಟಿ ರಂಗದ ಮೇಲೆ ಬರೇ ಒಳ ಉಡುಪಿನಲ್ಲಿ ಬಂದು ನಿಂತು ತಾನು ಯಾವ ರೀತಿಯಲ್ಲಿ ಉಡುಗೆ ತೊಟ್ಟರೆ ಸರಿ ಎನ್ನುವ ಬಗ್ಗೆ ಜಿಜ್ಞಾಸೆ ನಡೆಸುವುದು ಮತ್ತು ಒಂದೊಂದೇ ಬಟ್ಟೆ ತೊಟ್ಟುಕೊಳ್ಳುವುದು ಮೈತುಂಬಾ ಬಟ್ಟೆ ತೊಟ್ಟ ಮೇಲೆ ತಲೆಗೆ ಹೆಲ್ಮೆಟ್ ಹಾಕಿಕೊಳ್ಳುವುದು ನಾನು ಹೀಗಿದ್ದರೆ ಸರಿಯಾ ಎನ್ನುವಲ್ಲಿಗೆ ಪರದೆ ಬೀಳುವುದು ಒಂದು ನಾಟಕದ ವಸ್ತು. ಒಬ್ಬ ನಟಿಯನ್ನು ಹೀಗೆ ರಂಗದ ಮೇಲೆ ನಿಲ್ಲಿಸುವಾಗ ಅವಳ ಮನಸ್ಥಿತಿ ಹಾಗೂ ನೋಡುವವರ ಮನಸ್ಥಿತಿ ಹೇಗಿರಬಹುದು? ಹೀಗೆ ತೋರಿಸಿ ಬಲಾತ್ಕಾರವನ್ನು ತಡೆಗಟ್ಟುವುದು ಸಾಧ್ಯವೇ? ಇಂತಹ ಕೆಲವು ನಾಟಕಗಳ ಉದಾಹರಣೆ ಆ ಬರಹದಲ್ಲಿತ್ತು. ಒಂದು ನಾಟಕದಲ್ಲಂತೂ ಹೆಣ್ಣು ಎರಡೂ ಕಾಲನ್ನು ಮೇಲಕ್ಕೆತ್ತಿ ಮಲಗುವಲ್ಲಿ ಫ್ರೀಜ಼್ ಮಾಡುವುದಂತೆ. ಇಂತಹ ನಾಟಕಗಳನ್ನು ರಂಗದ ಮೇಲೆ ಪ್ರಯೋಗಿಸುವುದರಿಂದ ಎಲ್ಲರೂ ಮುಚ್ಚು ಮರೆಯಿಲ್ಲದೆ ಈ ಬಗ್ಗೆ ಚರ್ಚಿಸುತ್ತಿದ್ದಾರೆ ಎನ್ನುವ ಸಮರ್ಥನೆ ಬಿಟ್ಟರೆ ಮತ್ಯಾವ ಪ್ರಯೋಜನವಿದೆ? ಒಂದು ವರ್ಗದ ಜನ ಇದನ್ನು ನೋಡುವಾಗ ದೊರೆಯುವ ತ್ರಿಲ್ಲ್ ಗಾಗಿಯೇ ನಾಟಕ ನೋಡಲು ಬರುವುದಲ್ಲದೇ ಅದರ ಹಿಂದಿರುವ ನೋವನ್ನು ಅನುಭವಿಸುವರೇ? ಬಲಾತ್ಕಾರದ ವಿರುದ್ಧ ಕೈಯೆತ್ತಲು ಇಂತಹ ನಾಟಕಗಳು ಎಷ್ಟು ಉಪಕಾರಿ?

ಇತ್ತೀಚೆಗೆ ’ಆಟಿಕೆ’ ಎನ್ನುವ ಒಂದು ಚಿಕ್ಕ ಕಥೆ ಓದಿದ್ದೆ. ಒಬ್ಬ ಮಳೆಯಾಳಿ ಲೇಖಕಿ ಬರೆದ ಸಣ್ಣ ಕಥೆಯನ್ನು ಕನ್ನಡಕ್ಕೆ ಅನುವಾದಿಸಿದ್ದು. ಅದನ್ನು ಓದಿ ಕಣ್ಣಲ್ಲಿ ನೀರು ಬಂದಿತ್ತು. ರೈಲಿನಲ್ಲಿ ಗ್ಯಾಂಗ್ ರೇಪಿಗೆ ಒಳಗಾಗಿ ಜೀವ ಕಳಕೊಂಡ ಮಗಳ ತಂದೆ ಬಲಾತ್ಕಾರವನ್ನು ನಿಲ್ಲಿಸಿ ಎಂದು ಜನರನ್ನು ಕೇಳಿಕೊಳ್ಳಲು ಕಂಡುಕೊಂಡ ದಾರಿ ಈ ಚಿಕ್ಕ ಕಥೆಯ ಕಥಾವಸ್ತು. ಅವನು ಗಂಡಸರಿದ್ದಲ್ಲಿ ಹೋಗಿ ಮಾರುತ್ತಿದ್ದುದು ಸೆಕ್ಸ್ ಟಾಯ್ಸ್. ನೀವು ಇದನ್ನು ಉಪಯೋಗಿಸಿ ಹೆಣ್ಣು ಮಕ್ಕಳ ಮೇಲೆ ಧಾಳಿಮಾಡಬೇಡಿ ಅವರನ್ನು ಕೊಲ್ಲಬೇಡಿ ಎಂದು ಆ ಆಟಿಕೆಗಳನ್ನು ತೋರಿಸಿ ಮಾರುತ್ತಿದ್ದ ರೀತಿಯನ್ನು ಆ ಕಥೆಯಲ್ಲಿ ಕೆಲವೇ ಮಾತುಗಳಲ್ಲಿ ಹೇಳಿದ್ದರೂ ಅದು ಮಾಡುವ ಪರಿಣಾಮ ವಿವರಿಸಲಾಗದ್ದು. ಈಗಲೂ ಎಣಿಸಿದರೆ ಮನಸಿಗೆ ಬಹಳ ನೋವಾಗುತ್ತದೆ. ಮೇಲೆ ಹೇಳಿದ ನಾಟಕಗಳು ಹೇಳುವುದಕ್ಕಿಂತಲೂ ಪರಿಣಾಮಕಾರಿಯಾಗಿ ಬಲಾತ್ಕಾರದ ನೋವನ್ನು ಆ ಕಥೆ ಬಿಂಬಿಸಿತ್ತು. ಇದು ಬಲತ್ಕಾರದ ವಿರುದ್ಧ ಒಬ್ಬ ತಂದೆ ಒಂಟಿಯಾಗಿ ನಡೆಸಿದ ಹೋರಾಟ.

ಇತ್ತೀಚೆಗೆ ಒಂದು ಮಲೆಯಾಳಿ ಸಿನಿಮಾ ನೋಡಿದ್ದೆ. ’೨೨ ಕೊಟ್ಟಾಯಮ್ ಫಿಮೇಲ್’ ಅಂತ. ಅದರಲ್ಲಿ ಬಲಾತ್ಕಾರಕ್ಕೊಳಗಾದ ಹುಡುಗಿ ಬಲಾತ್ಕಾರ ಮಾಡಿದವರಿಗೆ ಕೊಡುವ ಶಿಕ್ಷೆ ಸರಿಯಾದುದು ಎಂದು ಅನಿಸುತ್ತೆ. ಅವರ ಆ ಅಂಗವನ್ನೇ ಕಿತ್ತು ಹಾಕುವುದು. ಅವಳು ನರ್ಸ್ ಆದುದರಿಂದ ಅವಳೇ ಆ ಕೆಲಸ ಮಾಡುವುದು ಸಾಧ್ಯವಾಗಿತ್ತು. ಅದೇ ರೀತಿಯ ಶಿಕ್ಷೆಯನ್ನು ಲೀಗಲೈಸ್ ಮಾಡ ಬಾರದೇಕೆ? ಜೀವಾವದಿ ಶಿಕ್ಷೆಯಾಗಲೀ ಪಾಶಿಯಾಗಲೀ ಕೊಡುವುದಕ್ಕಿಂತ ಭಯಾನಕ ಈ ಶಿಕ್ಷೆ. ಜನರಲ್ಲಿ ಸ್ವಲ್ಪವಾದರೂ ಹೆದರಿಕೆ ಹುಟ್ಟಿಸಬಹುದೇನೋ? ಸುಮಾರು ಐವತ್ತು ಐವತ್ತೈದು ವರ್ಷಗಳ ಹಿಂದೆ ಕೇಳಿದ ಒಂದು ಘಟನೆ. ಒಬ್ಬ ಹಳ್ಳಿಯ ಹೆಂಗಸು ತನ್ನ ಮೇಲೆ ಅತ್ಯಾಚಾರ ನಡೆಸಿದವನಿಗೆ ಕೊಟ್ಟ ಶಿಕ್ಷೆ ಚಾಕುವಿನಿಂದ ಅವನ ಅಂಗವನ್ನು ಕತ್ತರಿಸಿದ್ದು. ಅವನು ರಕ್ತ ಸುರಿಸುತ್ತಾ ಬೀದಿಯಲ್ಲಿ ಓಡಿದ್ದು. ಆಗ ಕೇಳಿ ಮರೆತು ಹೋಗಿತ್ತಾದರೂ ಈಗೀಗಂತೂ ಈ ಘಟನೆ ಪ್ರತೀ ಅತ್ಯಾಚಾರದ ಬಗ್ಗೆ ಓದುವಾಗಲೂ ನೆನಪಿಗೆ ಬರುತ್ತಿದೆ. 

ಬಲಾತ್ಕಾರ ಸಮಾಜದ ಸ್ವಾಸ್ಥ್ಯವನ್ನು ಕಬಳಿಸುತ್ತಿರುವ ಒಂದು ದೊಡ್ಡ ಅರ್ಬುದ ರೋಗ. ಅದನ್ನು ತಡೆಯುವುದು ಸಾಧ್ಯವಿಲ್ಲದಿದ್ದರೆ ರೋಗಿಗಳಿಗೆ ಸರಿಯಾದ ಟ್ರೀಟ್‌ಮೆಂಟ್ ಕೊಡುವ ಕೆಲಸವಾಗಬೇಕು. ಸರಿಯಾದ ಕಾನೂನುಗಳು ಜಾರಿಗೆ ಬಂದು ತೀರ್ಪುಗಳು ಅತಿ ಶೀಘ್ರದಲ್ಲಿ ಆಗಬೇಕು. ಎಲ್ಲರ ಮುಂದೆ ಹೆಣ್ಣನ್ನು ಅವಮಾನಿಸಿ ಇನ್ನೊಮ್ಮೆ ಬಲಾತ್ಕಾರ ನಡೆದಷ್ಟೇ ನೋವು ಕೊಡುವ ರೀತಿಯಲ್ಲಿ ನ್ಯಾಯಾಲಯ ನಡೆದು ಕೊಂಡರೆ ಅದರಕ್ಕಿಂತ ಹೆಚ್ಚಿನ ಅಮಾನವೀಯತೆ ಬೇರಿಲ್ಲ. ನ್ಯಾಯಾಂಗ ಇಂತಹ ಕಾಮುಕರನ್ನು ರಕ್ಷಿಸುವ ಕೆಲಸಮಾಡದೆ ಅವರಿಗೆ ಸರಿಯಾದ ಶಿಕ್ಷೆ ದೊರಕುವಂತೆ ಮಾಡಬೇಕು. ಬಲಾತ್ಕಾರ ಮಾಡಿದವರಿಗೆ ಕೊಡುವ ಶಿಕ್ಷೆ ಜನರಲ್ಲಿ ಹೆದರಿಕೆ ಹುಟ್ಟಿಸುವಂತಿರಬೇಕು. ಇಲ್ಲದಿದ್ದರೆ ನಾಟಕಗಳನ್ನು ನೋಡಿ ಕತೆಗಳನ್ನು ಓದಿ ಸಿನಿಮಾ ನೋಡಿ ಮರೆತಂತೆ ಬಲಾತ್ಕಾರಗಳನ್ನೂ ಜನ ಮರೆಯುತ್ತಾರೆ. ಇಷ್ಟರವರೆಗೆ ನಡೆದುಕೊಂಡು ಬಂದದ್ದು ಹಾಗೇ. 

ಇಂತಹ ಅಮಾನುಷ ಕೃತ್ಯಗಳು ನಡೆದಾಗ ಜನರೇ ಅವರನ್ನು ಹಿಡಿದು ಪೋಲೀಸರಿಗೆ ಒಪ್ಪಿಸಬೇಕು. ಅದರ ಮೊದಲು ಸಾಯುವಷ್ಟು ಹೊಡೆಯದಿದ್ದರೂ ಸಾವಿನ ರುಚಿ ತೋರಿಸುವಷ್ಟಾದರೂ ಹಿಡಿದು ಚಚ್ಚಬೇಕು. ಇನ್ನೊಮ್ಮೆ ಆ ಕೃತ್ಯವೆಸಗಲು ಸಾಧ್ಯವಾಗದಂತೆ ಚಚ್ಚಬೇಕು. 

ಬಲಾತ್ಕಾರದ ವಿರುದ್ಧದ ಹೋರಾಟ ಅಲ್ಪಕಾಲದ್ದಲ್ಲ. ನಿರಂತರವಾಗಿ ನಡೆಯ ಬೇಕಾದದ್ದು. ಜನರು ಸದಾ ಜಾಗೃತರಾಗಿರಬೆಕಾಗುತ್ತದೆ. ಜನಶಕ್ತಿಯ ಎದುರು ಯಾವ ಶಕ್ತಿಯೂ ನಿಲ್ಲದು. ಸ್ವಲ್ಪ ದಿನ ಮುಷ್ಕರ ನಡೆಸಿ, ಕ್ಯಾಂಡಲ್ ಹಿಡಿದು ನಡೆದರೆ ಸಾಕಾಗದು. ಪರಿಹಾರ ಸಿಗುವ ತನಕ ಜಿಗಣೆಗಳಂತೆ ಸರಕಾರವನ್ನು ಕಾಡಬೇಕು. ರಾಜಕಾರಣಿಗಳು, ಪೋಲೀಸು ಇಲಾಖೆ, ನ್ಯಾಯಾಂಗ ಎಚ್ಚರವಾಗದಿದ್ದರೆ ಈ ಕೆಲವು ದಿನಗಳ ಅಬ್ಬರದ ಮುಷ್ಕರದಿಂದ, ಫೇಸ್‌ಬುಕ್‌ನಲ್ಲಿ ಮಾಡುವ ಸಿಗ್ನೇಚರ್ ಕೆಂಪೇನ್‌ನಿಂದ ಏನಾದೀತು? ಈ ಹೋರಾಟ ನಿರಂತರವಾಗಿ ನಡೆಯುತ್ತಿರಬೇಕು. ಸಾಧ್ಯವಾದಷ್ಟು ಜನರು ಇದರಲ್ಲಿ ಭಾಗಿಯಾಗಬೇಕು. ಹೋರಾಟ ನಿಲ್ಲಬಾರದು. ಸರಿಯಾದ ಕಾನೂನು, ಸರಿಯಾದ ಮುಂಜಾಗ್ರತಾಕ್ರಮಗಳು ಜಾರಿಯಾಗುವ ವರೆಗೂ ಸರಕಾರವನ್ನು ಚುಚ್ಚುತ್ತಲೇ ಇರಬೇಕು. ನಿದ್ರಿಸಲು ಬಿಡಬಾರದು. 

ಬಲಾತ್ಕಾರಕ್ಕೆ ಒಳಗಾದ ಹೆಣ್ಣು ಮಕ್ಕಳು ಅಸ್ಪ್ರಶ್ಯರಲ್ಲ. ಅವಮಾನದಿಂದ, ನೋವಿನಿಂದ ಜರ್ಜರಿತರಾದವರು. ಅವರನ್ನು ಎತ್ತಿನಿಲ್ಲಿಸುವ ಕೆಲಸವಾಗಬೇಕು. ಅವರಲ್ಲಿ ಬಲಾತ್ಕಾರದ ವಿರುದ್ಧ ಹೋರಾಡುವ ಛಲ ಹುಟ್ಟಿಸಬೇಕು. ಮುಖ್ಯವಾಗಿ ಪ್ರತಿಹೆಜ್ಜೆಯಲ್ಲೂ ಹೆಣ್ಣುಮಕ್ಕಳು ಜಾಗೃತರಾಗಿರಬೇಕು. ತಮ್ಮನ್ನು ರಕ್ಷಿಸಿಕೊಳ್ಳುವ ಧೈರ್ಯವನ್ನು ಬೆಳೆಸಿಕೊಳ್ಳಬೇಕು. ಉಪಾಯಗಳನ್ನು ತಿಳಿದುಕೊಂಡಿರಬೇಕು. ತಮ್ಮ ಸುತ್ತ ತಮ್ಮ ರಕ್ಷಣೆಯ ಕೋಟೆಯನ್ನು ಅವರೇ ಕಟ್ಟಿಕೊಳ್ಳಬೇಕು. ಮುಖ್ಯವಾಗಿ ಚಿಕ್ಕಚಿಕ್ಕ ಹೆಣ್ಣು ಮಕ್ಕಳ ಹೆತ್ತವರು ಹೆಚ್ಚು ಜಾಗೃತರಾಗಬೇಕು. ಅವರ ನಡತೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಕಾರಣ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಯಾವುದು ಕೆಟ್ಟ ಸ್ಪರ್ಶ ಎನ್ನುವುದನ್ನು ಮಕ್ಕಳಿಗೆ ಚಿಕ್ಕಂದಿನಲ್ಲೇ ತಿಳಿಸಿಕೊಡಬೇಕು. ಹೆಣ್ಣುಮಕ್ಕಳು ಎಷ್ಟೇ ಬೆಳೆದರೂ ಏನೇ ಸಾಧಿಸಿದರೂ ಇವತ್ತಿನ ಸಮಾಜ ಎಷ್ಟು ಕೆಟ್ಟು ಹೋಗಿದೆ ಎನ್ನುವುದರ ಅರಿವು ಅವರಿಗಿರುವುದು  ಬಹಳ ಅಗತ್ಯ. 

ಕೆ. ಉಷಾ ಪಿ. ರೈ

*****

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ಅನಿತಾ ನರೇಶ್ ಮಂಚಿ
ಅನಿತಾ ನರೇಶ್ ಮಂಚಿ
10 years ago

ಆಟಿಕೆ ಕಥೆಯನ್ನು ನಾನೂ ಓದಿದ್ದೆ.. ಅದೊಂದು ಹೃದಯ ದ್ರವಿಸುವ ಕಥೆ… ಲೇಖನದ ಆಶಯ ಚೆನ್ನಾಗಿದೆ ಉಷಕ್ಕ.. 

umesh desai
10 years ago

ಎಲ್ಲಕಿಂತ ಮುಖ್ಯವಾಗಿ ಗಂಡಸಿನ ಮನಸ್ಥಿತಿ ಬದಲಾಗಬೇಕು

ಅವಳಿರೋದೆ ನಾ ಭೋಗಿಸಲು ಎಂಬ ಧೋರಣೆ ಬದಲಾದರೆ ಮಾತ್ರ ಇದು ನಿಲ್ಲಲು ಸಾಧ್ಯ..

2
0
Would love your thoughts, please comment.x
()
x