ಹೆಣ್ಣು:ಎರಡು ಚಿತ್ರಗಳು-ರೇಷ್ಮಾ ಎ.ಎಸ್.


ಗೆಳತಿಯ ತಂಗಿ ಅಂಜಲಿಗೆ ಮಗುವಾಗಿದೆ, ಮೂರನೆಯದು. ನರ್ಸಿಂಗ್ ಹೋಂಗೆ ಮಗು-ಬಾಣಂತಿಯನ್ನು ನೋಡಲು ಹೋಗಿದ್ದೆ. ಮುದ್ದಾದ ಹೆಣ್ಣು ಮಗು ತೊಟ್ಟಿಲಲ್ಲಿ  ಮಲಗಿತ್ತು. ಗುಲಾಬಿ ಬಣ್ಣ, ಕಪ್ಪು ಗುಂಗುರು ಕೂದಲು, ಸುಂದರ ಮಗು. ಆದರೆ ಮಗುವಿನ ತಾಯಿಯ ಕಣ್ಣುಗಳು ಕೆಂಪಡರಿ ಊದಿಕೊಂಡಿದ್ದವು, ತುಂಬಾ ಅತ್ತ ಹಾಗೆ. ಗೆಳತಿ ಮತ್ತು ಅವಳ ತಾಯಿಯ ಮುಖ ಒಣಗಿ ಕಳಾಹೀನವಾಗಿತ್ತು. ಆಶ್ಚರ್ಯದಿಂದ ಕಾರಣ ಕೇಳಿದಾಗ ಬಾಣಂತಿ ಬಿಕ್ಕಳಿಸಿ ಅಳತೊಡಗಿದಳು. ಗೆಳತಿ ಸಪ್ಪೆ ಮುಖದಿಂದಲೇ ಬಾಯಿಬಿಟ್ಟಳು. "ಈ ಸಾರಿ ಗಂಡು ಮಗೂನೇ ಆಗುತ್ತೇಂತ ಎಲ್ರೂ ತುಂಬಾ ಆಸೆ ಇಟ್ಕೊಂಡಿದ್ವಿ. ಇವಳಂತೂ ಎಷ್ಟೊಂದು ಹರಕೆ ಹೊತ್ತಿದ್ಲು ಗಂಡಾಗ್ಲಿ ಅಂತ. ಆದರೇನು ನಮ್ಮ ದುರಾದೃಷ್ಟ, ಮೂರನೇದೂ ಹೆಣ್ಣಾಯ್ತು. ಅಂಜಲಿಯಂತೂ ಮಗೂಗೆ ಹಾಲು ಕುಡಿಸಲು ಕೇಳದೇ ನಿನ್ನೆಯಿಂದಾ ಅಳ್ತಾನೇ ಇದ್ದಾಳೆ". ಅಂಜಲಿಯ ಗಂಡ ಸಹ ಹೆಣ್ಣು ಮಗು ಎಂದು ತಿಳಿದು ನೋಡಲೂ ಬರ್ಲಿಲ್ವಂತೆ. ನನಗೆ ಈ ಮಾತು ಕೇಳಿ ವಿಷಾದವೆನ್ನಿಸಿತು. ಪದವೀಧರೆಯಾದ, ಕೆಲವರ್ಷ ಶಿಕ್ಷಕಿಯೂ ಆಗಿ ಕೆಲಸ ಮಾಡಿದ್ದ ಅಂಜಲಿಗೆ ಕೆಲವು ಸಮಾಧಾನದ ಮಾತುಗಳನ್ನಾಡಿ, ಇದಾವುದನ್ನೂ ಅರಿಯದೇ ಪ್ರಶಾಂತವಾಗಿ ಮುಗುಳ್ನಗುತ್ತಾ ನಿದ್ರಿಸುತ್ತಿದ್ದ ಮಗುವಿನ ಕೆನ್ನೆ ಸವರಿ ಹೊರಬಂದೆ. ಸ್ತ್ರೀ ಸಮಾನತೆಯ ಘೋಷಣೆ ಮೊಳಗುತ್ತಿರುವ ಈ ಶತಮಾನದಲ್ಲಿ ಇಂದೂ ಹೆಣ್ಣಿನ ಹುಟ್ಟಿಗೆ ಈ ಪರಿಯ ಸ್ವಾಗತ.

#  #  #

ಮನೆಗೆಲಸ ತಮಿಳು ಹೆಂಗಸು ಅಂಗಮ್ಮ ಅಂದು ಕೆಲಸಕ್ಕೆ ಬೆಳಿಗ್ಗೆ ಬರಲಿಲ್ಲ. ಮಧ್ಯಾಹ್ನ ಬಂದಳು. ಅವಳ ಕೈಯಲ್ಲೊಂದು ಪುಟ್ಟ ಗಂಟು. ಅಂಗಮ್ಮ ಬಟ್ಟೆ ಗಂಟು ಅಗಲಿಸಿ ನನಗೆ ತೋರಿಸಿದಳು. ಅದರಲ್ಲಿ ಜನಿಸಿ ಒಂದು ವಾರವೂ ಆಗಿರದ ಒಂದು ಹೆಣ್ಣು ಮಗು. ಕಪ್ಪಗಿದೆ. ಕುತ್ತಿಗೆ ಬೇರೆ ಪಕ್ಕಕ್ಕೆ ವಾಲಿ ಸೊಟ್ಟಗಾಗಿದೆ. ನನ್ನ ಪ್ರಶ್ನಾರ್ಥಕ ದೃಷ್ಟಿಗೆ ಅಂಗಮ್ಮ ಉತ್ತರಿಸಿದಳು.

"ಬೆಳಿಗ್ಗೆ ತಲೆ ಸುತ್ತಂಗಾಗುತ್ತೆ ಅಂತ ಗೌರ್ನಮೆಂಟ್ ಆಸಪತ್ರೇಗೆ ಓಗಿದ್ದೆ. ಯಾವೋಳೋ ಚಿನಾಲಿ ಹೆತ್ತು ಈ ಮಗೀನ ಬಿಟ್ಟು ಓಗ್ಬಿಟ್ಟಿದಾಳೆ. ಎಣ್ಣು ಮಗಾ, ಕುತ್ಗೆ ಬೇರೆ ಸೊಟ್ಗೆ. ಅದ್ಕೆ ಯಾರೂ ತಗೊಂಡು ಹೋಗಲಿಲ್ಲವಂತೆ. ನಂಗೆ ಅಯ್ಯೋ ಅನಿಸ್ತು, ತಂದುಬಿಟ್ಟೆ". 

ಈ ಅಂಗಮ್ಮನಿಗೆ ಮಕ್ಕಳಿರಲಿಲ್ಲವೇನೋ, ಸಿಕ್ಕಿದ ಮಗೂನ ತಂದಳು ಅನ್ಕೋಬೇಡಿ. ಅವಳಿಗೆ ಪೋಲಿಯೋದಿಂದ ಅಂಗವಿಕಲೆಯಾದ ಒಬ್ಬ ಮಗಳೂ ಸೇರಿದಂತೆ ನಾಲ್ವರು ಹೆಣ್ಣು ಮಕ್ಕಳು, ಎರಡು ಗಂಡು ಮಕ್ಕಳಿವೆ. ಗಂಡ ಬಿಟ್ಟು ಹೋಗಿದ್ದಾನೆ. ಇವಳು ಮತ್ತು ಇಬ್ಬರು ಹಿರಿಯ ಮಕ್ಕಳು ಅಲ್ಲಲ್ಲಿ ದುಡಿದರೆ ಹೊಟ್ಟೆಗೆ ಅನ್ನ; ಇಲ್ಲವಾದರೆ ಉಪವಾಸವೇ ಗತಿ. ಇದು ಹೆಣ್ಣು ಮಗು- ಅದರಲ್ಲೂ ಕತ್ತು ಸೊಟ್ಟಗಾಗಿದ್ದು. 

"ನಿನ್ನ ಬಡತನ, ನಿನ್ನ ದೊಡ್ಡ ಸಂಸಾರಕ್ಕೆ ಇದ್ಯಾಕೆ ಬೇಕಿತ್ತು! ಹೇಗೆ ಸಾಕ್ತಿ?" ಎಂದಾಗ "ಆ ಮುರುಘ ಹೇಗೋ ಕೃಪೆ ಮಾಡದೇ ಇರ್ತಾನಾ? ಅಷ್ಟು ಜನಕ್ಕೆ ಅನ್ನ ಕಾಣಿಸೋ ಅವನು ಇದಕ್ಕೊಂದು ತುತ್ತು ಅನ್ನ ನೀಡಲಾರನಾ? ಬಿಡಿ ಅಮ್ಮಾ, ನಮ್ಮ ತಟ್ಟೇಲಿ ಒಂದೊಂದು ತುತ್ತು ಎತ್ತಿಹಾಕಿ ತಿನ್ನಿಸಿ ಇದನ್ನು ಸಾಕಿಯೇನು" ಎನ್ನುತ್ತಾ ಅದೊಂದು ಹೂವಿನ ದಂಡೆಯೇನೋ ಎಂಬಂತೆ ಮಗುವನ್ನು ಮೃದುವಾಗಿ ಹಗುರವಾಗಿ ಎದೆಗೆ-ಕೆನ್ನೆಗೆ ಒತ್ತಿಕೊಂಡಳು. ನನ್ನ ಮನಸ್ಸು ಅಂಗಮ್ಮಳನ್ನು ಅಂಜಲಿಯೊಡನೆ ತೂಗಿ ನೋಡತೊಡಗಿತು.


ರೇಖಾಚಿತ್ರಗಳು:ಉಪೇಂದ್ರ ಪ್ರಭು


('ಪಂಜು' ಓದುಗರಿಗಾಗಿ ಈ ವಾರದಿಂದ ರೇಷ್ಮಾ ಎ.ಎಸ್.,ಬಾಳೆಹೊನ್ನೂರು ಅವರ 'ಬದುಕಿನ ಬಣ್ಣಗಳು' ಕೃತಿಯಿಂದ ಆಯ್ದ ಬರಹಗಳನ್ನು ಅಂಕಣ ರೂಪದಲ್ಲಿ ನೀಡುತ್ತಿದ್ದೇವೆ. ಪ್ರಸ್ತುತ ಕೊಪ್ಪದ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿರುವ ಇವರು ಹದಿಮೂರು ಪುಸ್ತಕಗಳ ಲೇಖಕಿ. ಶಿಶು ಸಾಹಿತ್ಯ, ಅಂಕಣ ಬರಹ, ನುಡಿಚಿತ್ರ ಇತ್ಯಾದಿ ವೈವಿಧ್ಯಮಯ ಬರಹಗಳಿಂದ ಸಾಹಿತ್ಯಲೋಕಕ್ಕೆ ಪರಿಚಿತರು. ಇವೆಲ್ಲಕ್ಕಿಂತ ಹೆಚ್ಚಾಗಿ ಸಾವಿರಾರು ವಿದ್ಯಾರ್ಥಿಗಳಲ್ಲಿ ಅಕ್ಷರ ಪ್ರೀತಿ ತುಂಬಿದವರು. ಹದಿನೈದು ವರ್ಷಗಳ ಹಿಂದೆ ಪ್ರಕಟವಾಗಿದ್ದ, ಪುಟ್ಟ ಪುಟ್ಟ ಆದರೆ ಕಾಡುವ ಬರಹಗಳ ಸಂಕಲನ 'ಬದುಕಿನ ಬಣ್ಣಗಳು' ಈ ವಾರದಿಂದ ನಿಮ್ಮ ಓದಿಗೆ. ಸಂ.)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
sharada.m
sharada.m
10 years ago

nice

suman desai
suman desai
10 years ago

mana karaguva hangada nimma lekhana…. bhal ishta aatu.

ಜೆ.ವಿ.ಕಾರ್ಲೊ, ಹಾಸನ
ಜೆ.ವಿ.ಕಾರ್ಲೊ, ಹಾಸನ
10 years ago

ತಮಗೆ ಮೂರೊತ್ತು  ತಿನ್ನಲು ಗತಿಯಿಲ್ಲದಿದ್ದರೂ ಅಂತಃಕರಣದಲ್ಲಿ 
ಶ್ರೀಮಂತರಾದ ಇಂತ ಬಹಳಷ್ಟು ಹೆಂಗಸರನ್ನು ಗಾರೆ ಕಂಟ್ರ್ಯಾಕ್ಟರ್ ಆದ ನಾನು ನೋಡಿದ್ದೇನೆ.

Ratna G.
Ratna G.
10 years ago

ಅಂಗಮ್ಮಳಲ್ಲಿದ್ದ ಮಾನವೀಯತೆ ಮತ್ತು ತಾಯಿಯ ಮಮತೆ ನಿಜಕ್ಕೂ ಮನಮುಟ್ಟುವಂತಿದೆ.

Manjula
Manjula
22 days ago

Nice thank you

5
0
Would love your thoughts, please comment.x
()
x