ಲೇ ಊಂಟಗೇಡಿ “ನೀನು ಹೆಣ್ಣಾಗಿ ಹುಟ್ಟ ಬಾರದಿತ್ತಾ.. ನೀ ಹೆಣ್ಣಾಗಿ ಹುಟ್ಟಿದ್ರ ನಾಳೆ ಮದ್ವಿ ಆದ್ ಮ್ಯಾಗ ಒಂದೆರಡ ಮಕ್ಳನ್ನ ಹಡ್ದು ಅವ್ನ ಬಾಳ್ ಚೆಲೋತಂಗೆ ಸಾಕ್ತಿದ್ದಿ. ಆ ದೇವ್ರ್ ನಿನ್ನ ಯಾಕರ ಗಂಡಾಗಿ ಹುಟ್ಸಿದಾ ಅನ್ಸಾಕತ್ತೈತಿ ನಂಗ” ಖರೇನ್ ಹೇಳ್ ತೀನಿ, ನೀ ಏನರಾ ಹೆಣ್ಣಾಗಿ ಹುಟ್ಟಿದ್ದಿ ಅಂದ್ರ, ನನ್ನ ಮಮ್ಮಗಗ ತಗೋಂಡು ಮನಿ ಸ್ವಸಿ ಮಾಡ್ಕೊಂಡ್ ಬಿಡ್ತಿದ್ನಿ.! ದೇವ್ರು ಮೋಸ ಮಾಡ್ದಾ. ತಪ್ಪಾಗಿ ನಿನ್ನ ಗಂಡ್ಸಾಗಿ ಹುಟ್ಸಿದಾ..!! ನಮ್ಮ “ಬಸವ್ವ” ಆಯಿ ಹಿಂಗಂತ ನಂಗ ನಾನ್ ಸಣ್ಣಾಂವ ಇದ್ದಾಗ್ ಒಳ್ಳಿ ಒಳ್ಳಿ ಅಂತಿತ್ರಿ. ನಂಗ ಆವಾಗ ಇನ್ನು ಈ ಗಂಡಸ್ರು, ಹೆಂಗಸ್ರು. ಅವರೊಳಗ ಇರುವಂಥ ಗುಣ- ನಡ್ತಿ ಯಾವದು ತಿಳ್ಕೊಳ್ಳಾಕ ಆಕ್ಕಿರತಿರಲಿಲ್ಲರಿ. ಆಮ್ಯಾಗ್ ಒಂದ್ ದಿನ ಆಯಿ ತೊಡಿ ಮ್ಯಾಗ್ ತಲಿ ಇಟ್ಟ ಮಕ್ಕೊಂಡು ಕೇಳಿದ್ನಿ. “ಯಾಕ್ ಆಯಿ ನಂಗ್ ಹಾಂಗ್ ಅಂತಿ? ನಾನು ಹುಡುಗ ಆಗಿ ಹುಟ್ಟಿನೀ. ಈಗ ನೀ ನೋಡಿದ್ರ ನಂಗ ಹುಡುಗಿ ಆಗ್ಬಾರದಿತ್ತ ಅಂತ ಮರಗ್ತಿ ಯ್ಯಾಕ? ಅಂತ. ಆಮ್ಯಾಗ್ ನಮ್ಮ ಆಯಿ ಹೇಳ್ತು. “ನೀನು ನೋಡಾಕ್ ಅಷ್ಟ ಗಂಡ ಹುಡುಗ. ಆದ್ರ ನಿನ್ನೊಳಗ ಇರುವಂಥ ಗುಣ ಎಲ್ಲ ಹೆಣ್ಣಿಗೆ ಇರುವಂಥ ಗುಣ ಅದಾವ್. ಯಾರದ್ರು ತೊಂದ್ರಿ ಒಳಗ ಅದಾರಂದ್ರ ಬಂದ ಹೇಳ್ತಿ. ಹೆಂಗ್ಸರು ಮರುಗು ಹಾಂಗ ಮರಗ್ತಿ. ಹರ್ಯಾಗ ಎಂದವ್ನ ಅಡಿಗಿ ಮನಿ ಕಸ ಹೊಡ್ದು, ಮುಚ್ಚಿ ಬಾಕಲಾ ತೊಳ್ದ ಪೂಜೆ ಮಾಡ್ತಿ.!! ತಡಿ..ತಡಿ ನಿನ್ಗ ನಾಳೆ ಬರು ರಾಮಲಿಂಗಪ್ಪನ ಜಾತ್ರ್ಯಾಗ ಒಂದ ಢಝನ್ ಬಳಿ ತಂದು ಮುಂಗೈಗೆ ಹಾಕ್ತುನು. ಹಂಗ್ ಒಂದ್ ಜತಿ “ಲಂಗಾ ಬ್ಲೌಸ್” ಹೊಲಿಸಿ ಹಾಕ್ತನು. ದ್ಯಾವ್ರ ನಿನ್ನ ಹೆಣ್ಣಾಗಿ ಮಾಡ್ಲಿಲ್ಲ ಅಂದ್ರ ಏನಂತ? ನಾ ನಿನ್ನ ಹೆಣ್ಣ ಹುಡುಗಿ ಮಾಡ್ತನು…ಅಂತಿತ್ತು ನಮ್ಮ ಬಸಮ್ಮಜ್ಜಿ. ಆಮ್ಯಾಗ್ ನಾನು ಈ ಹೆಂಗ್ಸರಲ್ಲಿರುವಂತ ಗುಣ- ನಡ್ತಿ ಹೆಂಗಿರ್ತಾವು ಅಂತ ನೋಡಾಕ ಸುರುಮಾಡ್ದೆ. ಆಯಿ ಹೆಳ್ತಿತ್ತು “ಹೆಂಗ್ಸಿಲ್ಲದ ಮನೀ ಮನಿಯಲ್ಲ ಗಂಡ್ಸ ಇಲ್ದ ಹೊಲ, ಹೊಲ ಅಲ್ಲ”. ಅಂತ. ಹೌದ ನೋಡ್ರೀ… ನಂಗು ಖರೇ ಅನ್ಸತು ನಮ್ಮ ಆಯಿ ಮಾತು. ಮನೀ, ಮನಿ ಯಾಗಿರಬೇಕಂದ್ರ ಮನೀ ಒಳ್ಗ ಒಂದ ಹೆಣ್ಣ ಜೀಂವ ಅಂತ ಇರ್ಬೇಕು , ಹೆಣ್ಣಿನ ಬಳಿ ಸಪ್ಪಳ ಆಕ್ಕಿರಬೇಕು. ಅಂದಾಂಗ ಬಳಿ ಸಪ್ಪಳ ಇಲ್ದ ಮನಿ ಸುಡಗಾಡ ಇದ್ದಂಗ ಇರ್ತೈತಿ ಅಂತಾನೂ ಅಂತಿತ್ತರಿ ನಮ್ಮ ಆಯಿ.
ಹರ್ಯಾಗ ಎದ್ದರ ಸಾಕ್ ನೋಡ್ರಿ, ಮಕಾ ತೊಳಕೊಂಡ ಸಂಡಾಸಕ್ಕ ಹೋಗಿ ಬಂದ, ಒಂದ ಬಟ್ಟಲಾ ಚಾ ಕುಡ್ದ, ಪ್ಯಾರಲೈಸಿಸ್ ಕಾಲ್ನ ಎಳಕೊಂತ ಹೊರ್ಗಿನ ಮನಿ ಕಟ್ಟಿ ಮ್ಯಾಲ್ ಬಂದ ಕುಂಡ್ರತಿತ್ತು. ಆಮ್ಯಾಗ ಎಲಿ-ಅಡಿಕಿ ಚೀಲ್ ದಿಂದ ತಾಂಬೂಲಾ ತಗದು ಬಾಯ್ತುಂಬ ತುಂಬಕೊಂಡ, ಪಿಚಕ್- ಪಿಚಕ್ ಕಂತ ಉಗಳ್ಕೊಂತ ಮುಂಜಾನೆ ಕಸ- ಕಡ್ಡಿ , ದನದ ಹೆಂಡಿ ಸಿಂದಿ ಹೆಡಿಗಿ ಒಳ್ಗ ತುಂಬಕೊಂಡ ತಲೀ ಮ್ಯಾಲ್ ಇಟ್ಟಕೊಂಡ ತಿಪ್ಪಿಗೆ ಒಗಿಲಿಕ್ಕ ಹೋಗವರ್ನ್, ಕೈಯಾಗ ಚರಿಗಿ ಹಿಡ್ಕೊಂಡು ಸಂಡಾಸ್ ಕ್ಕ ಹೋಗವರ್ನ್ ಯಪ್ಪ ತಮ್ಮಾ, ಯಪ್ಪ ತಂಗಿ ಈಗ ಎದ್ರ್ಯಾ? ಅಂತ ಕೇಳ್ತಿತ್ತರೀ ನಮ್ಮ ಆಯಿ. ಯಾರಾದ್ರು ಹೆಂಗ್ಸರು ತಲೀ ಮ್ಯಾಲಿನ ಸೆರಗ್ನ ಹೆಗಲಮ್ಯಾಲ್ ಬಿಟ್ಟಕ್ಕೊಂಡ ಹೊಂಟಿದ್ದರಂದ್ರ ಆಯಿ ಕೇಳ್ತಿತ್ತರೀ. ಯಾಕವಾ ತಂಗಿ,? ತಲೀ ಮ್ಯಾಗಿನ್ ಸೆರಗಾ ಹೆಗಲಮ್ಯಾಗ್ ಬಂದೈತಿ, ಯಾಕ? ಅತ್ತಿ ಊರಾಗ ಇಲ್ಲೇನ್ ? ಅಂತ. ಮನೀ ಒಳಗೂ ಬರೀ ಇದ ಕಿತಾಪತಿನ್ ಮಾಡತಿತ್ತರೀ ಆ ನಮ್ಮಜ್ಜಿ. ಹರ್ಯಾಗಿಂದ ಸಂಜಿ ವರ್ಗೂ ಬರೀ. ಹೆಂಗ್ಸರು ಹಾಂಗ್ ಇರಬೇಕು, ಹಿಂಗ್ ಇರ್ಬೇಕು ಅಂತ ಪುರಾಣ ಹೇಳ್ತ ಕುಳತ ಬಿಟ್ತಿತ್ತು.
ಮತ್ತ ಮನಿಯೊಳಗ ಬೀಸೂಕಲ್ಲ ಹಾಡಾ- ಒಳಕಲ್ಲ ಹಾಡಾ ಹಾಡಕೊಂತ ಬೀಸಾನಾ-ಕುಟ್ಟಾನಾ ಮಾಡ್ತಿತ್ತು ನಮ್ಮಜ್ಜಿ. ಹೆಣ್ಣಿನ ಆದರ್ಶವನ್ನ ಹಾಡ್ನಲ್ಲಿ ಹಾಡಿ ಕೊಂಡಾಡದಿತ್ತು. ಈ ಒಂದ ಹಾಡ ಮಾತ್ರ ಬಾಳ್ ಹಾಡತಿತ್ತು ನಮ್ಮ ಬಸಮ್ಮಜ್ಜಿ.
ಹೆಣ್ಣಿನ ಬಾಳು ಗೋಳಿನ ಜೋಕಾಲೀ
ಹೆಣ್ಣ ನೀ ಬದುಕನ್ಯಾಗ ಹಣ್ಣಾಗಿ ಬಾಳ್ಬೇಕ
ಗಂಡ ಮಕ್ಕಳ್ನ ಸಲುಬೇಕ ನೀ…. ಜ್ವಾಕಿ ಇರಬೇಕ.
ಸಲುಗೀಗಿ ಬಿದ್ದ ಜಾರಬ್ಯಾಡ್ ಹುಡುಗಿ
ಪಾವಿತ್ರ್ಯ ನೀ… ಪತಿವ್ರತೆಯು ನೀ …
ಗಂಡೀನ ಬಾಳ್ ತೀಡೋ ಗುರುಕಾರ ನೀ.
ಗುರಿ ತೋರಿಸೋ ಗುರಿಕಾರ ನೀ…
ಹೆಮ್ಮೆ ಇರ್ಲಿ ನಿಂಗ ನೀ ಒಂದು ಹೆಣ್ಣ…
ನೀ ಒಂದು ಕಣ್ಣ .. ನೀ ಒಂದು ಬಣ್ಣ ಗಂಡೀನ ಬಾಳ್ಗೆ…
ಮುನಿ ಬ್ಯಾಡ್ ನೀ… ಜರೀ ಬ್ಯಾಡ್ ಅಂವನ..
ಸಕ್ಕರೆಯ ಸಿಹಿ ಪಿರುತಿ ಪ್ರೇಮ- ಮಮ್ತೆಯ ಹಂಚಿ
ಹದ್ದಿನಲಿ ಇಟ್ಕೋ ಅಂವ್ನ ಹದ್ಮೀರಿ ಹೋಗದಂಗ್…
ಹೆಣ್ಣ ನೀ ಇಲ್ದ ಮನೀ, ಮನಿ ಅಲ್ಲ…..
ಹಣ್ಣಿಲ್ದ ಬಾಳು ಬಾಳಲ್ಲ….
ಹೆಣ್ಣಿಲ್ದ ಸ್ವರ್ಗ ಸ್ವರ್ಗಲ್ಲ….
ಇದು ಬರೀ ನನ್ನ ಮಾತಲ್ಲ
ಗ್ವಾಡಿ ಮ್ಯಾಲಿನ ಅಲ್ಲಿ ನುಡಿತೈತೆ
ಗಿಡದ ಮ್ಯಾಲಿನ ಕೋಗಿಲೆ ಹಾಡತೈತೆ
ಹೆಣ್ಣೇ ನೀ ಬದುಕಿನ ಬೆಳಕಂತ ..ಹೆಣ್ಣೇ ನೀ ಬಾಳಿನ ಕಣ್ಣಂತ…!!
ಹಿಂಗ, ಬೀಸೂ ಕಲ್ಲನ್ಯಾಗ ಜ್ವಾಳ ಬೀಸ್ಕೋಂತ ಓಣಿ ಮಂದಿಗೆಲ್ಲ ಕೇಳುವಂಗ ಈ ಹಾಡ ಹೇಳ್ಕೊಂತ ಜ್ವಾಳ ಬೀಸತಿತ್ತರೀ ನಮ್ಮ ಅಜ್ಜಿ. ಹೆಜ್ಜಿ-ಹೆಜ್ಜಿಗೂ ಹೆಣ್ಣಿನ ಬಾಳಿನ-ಗೋಳಿಗೆ ಅಲ್ಲಾಡೋ ಕುತ್ತಿಗೆ ಜೀಕಾಡಿಸುತ್ತ ಜಗಜ್ಜಾಹಿರಾತು ಮಾಡ್ತಿತ್ತು, ಓಣಿ ಹೆಣ್ಮಕ್ಕಳಿಗೆ ಪಾಠ ಕಲಿಸ್ತಿತ್ತು. ಇವತ್ತೋನೋ ವಿಶ್ವ ಮಹಿಳೆ ದಿನ ಐತೆಂತ. ನಮ್ಮ, ಆಯಿಗೋಗಿ ಹಿಂಗಂತ ಹೇಳಿದ್ರ ಓಣಿ ಹೆಣ್ಮಕ್ಕಳನ್ನ ಕರದು ಮತ್ತೇನಾದ್ರು ಹೇಳ್ತಿತ್ತೋ ಯ್ಯಾಂಬಲ್ರೀ. ಆದರ ಏನ್ ಮಾಡೋದು ಅಂತೀರಿ ?ಮೊನ್ನೆ ನಾಲ್ಕು ತಿಂಗಳ ಹಿಂದ -ನಮ್ಮ ಆಯಿ ಸತ್ತು ಶಿವನ್ ಪಾದ ಸೇರ್ತು. ನಮ್ಮ ಆಯಿ ಸತ್ತದ್ದು ಖರೆ. ಆದರ, ಅಜ್ಜಿ ಇನ್ನು ಜೀವಂತ ಐತಿ ಬಿಡ್ರೀ. ಆಕಿ ಹೆಣ್ಣ ತೀಡಿದ ರೂಪದಾಗ. ಗಂಡ್ನಲ್ಲಿ ಹೆಣ್ಣಿನ ಚೆಂದದ ಗುಣ ಪತ್ತೆ ಮಾಡ್ತಿದ್ದ ನೆನಪಿನ್ಯಾಗ್. ಹೆಣ್ಣಲ್ಲಿ ಪ್ರೀತಿ,ಮಮತೆ, ವಾತ್ಸಲ್ಯ, ಕರುಣೆ, ವಿನಯ, ರೀತಿ-ನೀತಿ ಇನ್ನು ಏನೇನೋ ಕಲಿಸಿದ ಗುಂಗನ್ಯಾಗ್. ಹೆಣ್ಣಿಲ್ಲದ ಮನೀ ಮನಿಯಲ್ಲ ಎಂದ ವಾಖ್ಯದಾಗ.
-ಸಿ ಎಸ್ ಮಠಪತಿ
ಗ್ರಾಮ್ಯ ಭಾಷೆಯಲ್ಲಿ ಬರೆದ ಲೇಖನ ಚೆನ್ನಾಗಿದೆ. ನಿಮ್ಮ ಭಾಷೆಯ ಪರಿಚಯ ಇಲ್ಲದ ನನ್ನಮ್ತವರು ಸ್ವಲ್ಪ ನಿಧಾನವಾಗಿ ಓದ ಬೇಕಾಗುತ್ತದೆ. ಒಪ್ಪುತ್ತೇನೆ ಹೆಣ್ಣು ಬದುಕಿನ ಬೆಳಕೆಂದು
ಧನ್ಯವಾದಗಳು ಸರ್….. ನಮ್ಮ ಮಹಿಳಾ ಸಮುದಾಯ ಯಾವಾಗ್ಲೂ ಸಂತೋಷದಿಂದ ಇರಲಿ. ನಮ್ಮ ಪುರುಷ ಸಮುದಾಯಕ್ಕೆ ಬೆಳಕಾಗಿರಲಿ….
ಸುಂದರವಾಗಿದೆ. ಬಯಲುಸೀಮೆ ಭಾಷೆಯ ಕಂಪು ಚೆನ್ನಾಗಿ ಮೂಡಿ ಬಂದಿದೆ.
ನಿಮ್ಮ ಅಭಿಪ್ರಾಯಕ್ಕ ನಮಸ್ಕಾರೀ ಸರ್ರಾ……………..
ಚೆಂದ ಬರ್ದಿದಿಯೊ ತಮ್ಮಾ.ಲಗೊಲಗೂನ ಓದಿಸ್ಕೊಂಡೋತು, ಹಿಂಗಾ ಬರಿತಿರೋ ಯಪ್ಪಾ. ನಿನ್ನ ಬಾಳ ಬಂಗಾರವ್ವಾಗ..ಚೆಂದ ಬರ್ದಿದಿಯೊ ತಮ್ಮಾ.ಲಗೊಲಗೂನ ಓದಿಸ್ಕೊಂಡೋತು, ಹಿಂಗಾ ಬರಿತಿರೋ ಯಪ್ಪಾ. ನಿನ್ನ ಬಾಳ ಬಂಗಾರವ್ವಾಗ..
ಸರ್ರಾ…ನಿಮ್ದು ದೊಡ್ಡ ಮಾತು ಅಂತೀನಿ ನೋಡ್ರಿ ನಾ… ನಿಮ್ಮ ಪ್ರೋತ್ಸಾಹ ಹಿಂಗ ಇರ್ಲೀ ರೀ ಸರ್.. ಮತ್ತೊಮ್ಮೆ ನಮ್ಮ ತಾಯಂದಿರ್ಗ ಅಕ್ಕ ತಂಗ್ಯಾರ್ಗ ಹಂಗ ಎಲ್ಲ ದೊಡ್ದ- ಸಣ್ಣ ಮಹಿಳೆರ್ಗೆ ನನ್ನ ಮಹಿಳಾ ದಿನಾಚರಣಿ ಶುಭಾಷಯ ರೀ ಪಾ ಸರ್ರಾ………………….ಸಮಸ್ಕಾರಿ….
ಓದುತ್ತಿದ್ದಂತೆ ಕಣ್ಣಲ್ಲಿ ನೀರು ತುಂಬಿತು… ತಿಳಿಯೊಲ್ದು ಯಾಕೆಂತ…
ಒಂದೊಳ್ಳೆ ಬರಹಕ್ಕೆ ಧನ್ಯವಾದಗಳು…
ಧನ್ಯವಾದಗಳು ದಿಲೀಪ್…………..
nam ornag namm manaeyag koda ond aayi edae sir.. aavaru koda engae bhai matra sumkae erokae bidvald aayi… naa yech otth malgidra… bhai tumbha bhaitirtala… nimma lekhana odi nanna aayi nenapaythu.. chanda edae… nimma bharahada kannada shayli..
ಧನ್ಯವಾದಗಳು ಪೂರ್ಣಿಮಾ. ದಯವಿಟ್ಟು ಆ ಹಿರಿ ಜೀವದ ಮಾತನ್ನು ಕೇಳಿ. ಆಳವಾದ ಜೀವನಾನುಭವದಿಂದ ಅವರು ಯಾವಾಗಲು ಒಳ್ಳೆಯದನ್ನೇ ಹೇಳುತ್ತಾರೆ .
Good!!
ಥ್ಯಾಂಕ್ಯೂ ಸಂತು…………….
ಬಯಲುಸೀಮೆ ಭಾಷೆಯ ಸೊಗಸೇ ಬೇರೆ… ಚೆನ್ನಾಗಿದೆ ಚಿನ್ಮಯ್…
ಸುಂದರವಾದ ಬರಹ
namma halli nenapaayithu sir… chenngaide aayi mathu keli nage bartide.. 🙂
ನಿಮ್ಮ ಆಯಿ ಬಗ್ಗೆ ಓದಿ ಬಹಳ ಖುಶಿ ಅನ್ನಸ್ತು , ಆ ಕಾಲದಂಗ ಇಗಿಲ್ಲಾ ಬಿಡ್ರಿ ಆಗಿನ ಮಂದಿನ ಬೇರೆ ಆಗಿನ ಹೆಣ್ಣಮಕ್ಕ್ಳ ಬ್ಯಾರೆ. ನಮ್ಮ ಊರ ಸೊಗಡು ಹಾಗು ಭಾಷೆ ಬಹಳ ಚೊಲೊ ಅನ್ನಸ್ತು ಪಾ. ಹಿಂಗ ಬರ್ಕೋತ ಇರು. 🙂