ಅನಿ ಹನಿ

ಹೆಣ್ಣಲ್ಲವೇ ನಮ್ಮನ್ನೆಲ್ಲ ಪೊರೆವವಳೂ: ಅನಿತಾ ನರೇಶ್ ಮಂಚಿ


ಹೆಸರು ಕೇಳಿ ಮಾರ್ಚ್ ಎಂಟು ಬಂದೇ ಬಿಡ್ತಲ್ಲಾ ಅಂದುಕೊಳ್ಳಬೇಡಿ. ನಾನಂತೂ ಮಹಿಳೆಯರ ದಿನಾಚರಣೆಯನ್ನು ಒಂದು ದಿನಕ್ಕೆ ಆಚರಿಸುವವಳಲ್ಲ. ಎಲ್ಲಾ ದಿನವೂ ನಮ್ಮದೇ ಅಂದ ಮೇಲೆ ಆಚರಣೆಯ ಮಾತೇಕೆ?  ಸಮಯವೇ ಇಲ್ಲದಷ್ಟು ಗಡಿಬಿಡಿಯಲ್ಲಿರುವಾಗ  ಪ್ರೀತಿ ತುಂಬಿದ ಮಾತುಗಳನ್ನು ಕೇಳಿ ಯಾವಾಗೆಲ್ಲ ಮನಸ್ಸು ಉಲ್ಲಾಸವಾಗುತ್ತೋ ಆ ಎಲ್ಲಾ ದಿನಗಳು ನನ್ನವೇ ಅಂದುಕೊಂಡಿದ್ದೇನೆ. ಈಗ ಮೈನ್ ಮುದ್ದಾ ಕ್ಕೆ ಬರೋಣ. ಸುಮ್ಮನೆ ಅಲ್ಲಿಲ್ಲಿ ಅಲೆಯುವಾಟ ಯಾಕೆ ಬೇಕು? 

ತಿಂಡಿಗೆ ಏನು ಮಾಡೋದು?  ಇದೊಂದು ಎಲ್ಲಾ ಮನೆಯ ಗೃಹಿಣಿಯರಿಗೆ ಕಾಡುವ ಮಿಲಿಯನ್ ಡಾಲರ್ ಪ್ರಶ್ನೆ. ವಿಕ್ರಮಾದಿತ್ಯನನ್ನು ಸೋಲಿಸಬೇಕಾದರೆ ಬೇತಾಳ ಕಥೆ ಹೇಳಿ ಯಾವ್ಯಾವುದೋ ಪ್ರಶ್ನೆ ಕೇಳೋ ಬದಲು ’ನಿಮ್ಮ ಮನೇಲಿ ನಾಳೆ ಬೆಳಗ್ಗಿನ ತಿಂಡಿ ಏನು ಮಾಡ್ತಾರೆ ಹೇಳು’ ಅಂತ ಕೇಳಿದ್ದರೆ ಆಗ್ತಿತ್ತು. ಯಾಕೆಂದರೆ  ಸಂಜೆಯೇ ಮರುದಿನದ ತಿಂಡಿ ಇಂತದ್ದು ಅಂತ ನಿಶ್ಚಯಿಸಲ್ಪಟ್ಟಿದ್ದರೂ ಅದು ರಾತ್ರೆ ಬೆಳಗಾಗುವುದರ ಒಳಗೆ ಹಲವು ಬದಲಾವಣೆಗಳಿಗೆ ಸಿಕ್ಕು ತಟ್ಟೆ ಏರುವ ಹೊತ್ತಿನಲ್ಲಿ ಉಪ್ಪಿಟ್ಟು ಎಂದಿದ್ದದ್ದು ಇಡ್ಲಿಯಾಗಿಯೋ ದೋಸೆ ಎಂದಿದ್ದದ್ದು ಚಪಾತಿಯಾಗಿಯೋ ಕಾಣಿಸಿಕೊಳ್ಳುವುದುಂಟು. ಇದೆಲ್ಲಾ ಮನೆಯೊಡತಿಯ ಜಾಣ್ಮೆಯ ಕರಾಮತ್ತು ಎಂದರೆ ತಪ್ಪೇನಲ್ಲ. 

ಯಾರ್ಯಾರದೋ ಕಥೆ ಯಾಕೆ? ನನ್ನ ಕಥೆಯನ್ನೇ ಕೇಳುವಿರಂತೆ.
ಮೊನ್ನೆ ಮನೆಯಲ್ಲೊಂದು ಪುಟ್ಟ ಸಮಾರಂಭವಿತ್ತು. ಸಮಾರಂಭ ಅಂದ ಮೇಲೆ ಊಟೋಪಚಾರಗಳಿದ್ದೇ ಇರುತ್ತದಲ್ಲಾ. ಊಟ ಅಂದ ಮೇಲೆ ಒಂದಿಷ್ಟು ಅನ್ನ ಸಾರು ಸಾಂಬಾರು  ಮಜ್ಜಿಗೆ ಹುಳಿ ಪಲ್ಯ ಚಟ್ನಿ ಕೋಸಂಬರಿ ಚಿತ್ರಾನ್ನ ಪಾಯಸ ಹೋಳಿಗೆಯಾದಿಗಳೂ ಇರಲೇಬೇಕಾದುದು ನಿಯಮವಲ್ಲವೇ! ಅಂತೆಯೇ ಅದೆಲ್ಲವೂ ಇತ್ತು. ಅಷ್ಟೆಲ್ಲಾ ಇದ್ದ ಮೇಲೆ ಒಂದು ಸ್ವಲ್ಪವಾದರೂ ಅಡುಗೆ ಮಿಗುವುದೂ ಅಷ್ಟೇ ಸಹಜವಲ್ಲವೇ? ಹೀಗೆ ಉಳುಗಡೆ ಸಾಮಗ್ರಿಗಳು ಯಾವಾಗಲೂ ನನ್ನ ಪ್ರಯೋಗಕ್ಕೊಳಪಟ್ಟು ಹತ್ತು ಹಲವು ಅವತಾರಗಳೆತ್ತಿ ಕೆಲವೊಮ್ಮೆ ಡಸ್ಟ್ ಬಿನ್ನಿಗೆಸೆದರೆ ಯಾರಿಗಾದರೂ ಕಂಡೀತೆಂಬ ಭಯದಲ್ಲಿ  ಡ್ರೈರೆಕ್ಟ್ ಆಗಿ ತೋಟಕ್ಕೆ ರವಾನೆಯಾಗುವುದೋ, ಇನ್ನು ಕೆಲವು ಬಾರಿ ತಟ್ಟೆಯನ್ನೇರಿ ಸಕಲ ಹೊಗಳಿಕೆಗೆ ಪಾತ್ರವಾಗಿ ಪಾತ್ರೆ ಖಾಲಿಯಾಗುವುದೂ ಇದ್ದಿತು. 

ನಿನ್ನೆಯ ಕಹಾನಿಯೂ ಹಾಗೇ ಟೇಸ್ಟಿನ ಬದಲು  ಒಂದಿಷ್ಟು ಟ್ವಿಸ್ಟ್ ತೆಗೆದುಕೊಂಡಿತ್ತು. 
ಅನ್ನ ಮಿಕ್ಕಿತ್ತು. ಅಯ್ಯೋ ಅಷ್ಟೆಲ್ಲಾ ದುಡ್ಡು  ಸುರಿದು ತಂದ  ಅಕ್ಕಿಯನ್ನು ಅನ್ನ ಮಾಡಿ ಅದನ್ನು  ಬಿಸಾಡುವುದುಂಟೇ.. ಶಾಂತಂ ಪಾಪಂ.. 

 ಉಳುಗಡೆ ಅನ್ನ ಹಾಕಿ ಒತ್ತು ಶ್ಯಾವಿಗೆ ಮಾಡುವುದೆಂದು ನಾನೊಬ್ಬಳೇ ಸರ್ವಾನುತದಿಂದ ನಿಶ್ಚಯಿಸಿದೆ.ಇದರಿಂದ ಮೊದಲು ಇದೇ ಪ್ರಯೋಗ ಮಾಡಿ ಯಶಸ್ವಿಯಾಗಿ ಸರ್ವರಿಂದಲೂ ಹೊಗಳಿಸಿಕೊಂಡು ಬಂದ ಕೋಡಿನ್ನೂ ನನ್ನ ತಲೆಯ ಮೇಲೇ ಇತ್ತು.  

ಇದೆಲ್ಲಾ ಕೊಂಚ ಅಧಿಕ ಸಮಯವನ್ನೂ, ತಾಳ್ಮೆಯನ್ನೂ ಬೇಡುವ ತಿಂಡಿಗಳಾದ ಕಾರಣ ನನ್ನ ತಾಳ್ಮೆ ಪರೀಕ್ಷೆ ಮಾಡುವ ಮನೆಯ ಸದಸ್ಯರು ಕಣ್ಣು ಬಿಡುವ ಮೊದಲೇ ಏಳ ಹೊರಟೆ. ನಿದ್ದೆ ಬಿಟ್ಟು ಬರಲು ಮನಸ್ಸಿಲ್ಲದ ಶರೀರ ಕಣ್ಣು ಬಿಡಲೇ ಕಷ್ಟ ಎಂಬಂತೆ ನಾಟಕ ಮಾಡುತ್ತಿತ್ತು. ಅದರ ನಕರಾಗಳಿಗೆ ಕ್ಯಾರೇ ಮಾಡದೇ ಎದ್ದು ಬಂದಿದ್ದೆ. 

ಮೊದಲಿಗೆ ಫ಼್ರಿಡ್ಜಿನಲ್ಲಿ ತಣ್ಣಗೆ ಮಲಗಿದ್ದ  ಅನ್ನ ತೆಗೆದು ರೂಮಿನ ಉಷ್ಣತೆ ಪಡೆದುಕೊಳ್ಳಲು ಬಿಟ್ಟೆ. ಶ್ಯಾವಿಗೆ ಅಂದ ಮೇಲೆ ಅದಕ್ಕೆ ಜೊತೆಗಾರರು ಬೇಡವೇ? ಮಿಶ್ರ ತರಕಾರಿಯ ತಿಳಿ ಸಾಂಬಾರು, ಮತ್ತು ಸಿಹಿ ಕಾಯಿ ಹಾಲು ಅದಕ್ಕೆ ಜನ್ಮ ಜನ್ಮಾಂತರದ ಒಡನಾಡಿಗಳು ಅಂದ ಮೇಲೆ ಅವರನ್ನು ಬಿಡುವಂತೆಯೇ ಇರಲಿಲ್ಲ. 

ಗಸಗಸನೆ ಒಂದಿಷ್ಟು ಕಾಯಿ ತುರಿದು, ಮೊದಲಿಗೆ ಕಾಯಿ ಹಾಲಿಗೆ ತಿರುವಿ ತೆಗೆದು ಹಾಳು ಹಿಂಡಿ ಇಟ್ಟೆ. ಅದಕ್ಕೊಂದಿಷ್ಟು ಬೆಲ್ಲ ಸೇರಿಸಿ ಪಕ್ಕಕ್ಕಿಟ್ಟು ಅದರ ಚ್ಯಾಪ್ಟರ್ ಕ್ಲೋಸ್ ಮಾಡಿ ಆಯ್ತು. ಮಸಾಲೆ ಹುರಿದು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಂಡಾಯಿತು. ತರಕಾರಿ ಕತ್ತರಿಸಿ ಬೇಯಲಿಟ್ಟು ಆಯ್ತು. ಉಗಿಯಲ್ಲಿ ಬೇಯಿಸಲೆಂದು ದೊಡ್ಡದೊಂದು ಪಾತ್ರೆಗೆ ತಳಭಾಗದಲ್ಲಿ ನೀರು ಹಾಕಿ ಕುದಿಯಲಿಟ್ಟಾಯ್ತು. ದೊಡ್ಡದೊಂದು ಬಾಣಲೆಯಲ್ಲಿ ನೀರು ಕುದಿಸಿ ಅದಕ್ಕೆ  ಅಕ್ಕಿ ಹಿಟ್ಟು, ಅನ್ನ, ಉಪ್ಪು ಒಂದೆರಡು ಚಮಚ ತೆಂಗಿನೆಣ್ಣೆ ಹಾಕಿ ಗೊಟಕಾಯಿಸಿ ಉಂಡೆಗೆ ಬರುವಷ್ಟು ಮಾಡಿ ಇಳಿಸಿದೆ. ಅದರಲ್ಲಿ ಬಿಸಿ ಬಿಸಿ ಹಿಟ್ಟನ್ನು ಉಫ್..ಉಫ್.. ಎನ್ನುತ್ತಾ  ದೊಡ್ಡ ದೊಡ್ಡ ಉಂಡೆ ಮಾಡಿ ಬಾಳೆ ಎಲೆಯ ಮೇಲಿಟ್ಟು ಉಗಿ ಪಾತ್ರೆಗೆ ವರ್ಗಾಯಿಸಿ ಮುಚ್ಚಳ ಹಾಕಿದೆ. 

ಎಲ್ಲವೂ ಜಟಾಪಟ್ .. ಅಷ್ಟೇ ಪರ್ಫೆಕ್ಟು. ನನ್ನ ಬೆನ್ನು ನಾನೇ ತಟ್ಟಿಕೊಳ್ಳಲು ಸಿಗದ ಕಾರಣ ಶಹಬಾಶ್ ಗಿರಿ ಮಿಸ್ ಆಯ್ತು.
ಅಷ್ಟಾಗುವಾಗ ಬೆಂದ ತರಕಾರಿಗೆ ಉಪ್ಪು ಹುಳಿ ಬೆಲ್ಲ ಸೇರಿಸಿ ಕಡೆದಿಟ್ಟ ಮಸಾಲೆ ಹಾಕಿ ಕುದಿಸಿ ಕೊತ್ತಂಬರಿ ಸೊಪ್ಪು ಬೆರೆಸಿ ಚೊಂಯ್ ಎಂದು ಒಗ್ಗರಣೆ ಹಾಕಿ ಇಳಿಸಿಯೂ ಆಯ್ತು. 
ಇನ್ನು ಬೆಂದ ಶ್ಯಾವಿಗೆ ಉಂಡೆಯನ್ನು ಒತ್ತಿದರೆ ಬೆಳಗಿನ ರುಚಿ ರುಚಿ ತಿಂಡಿ ಸಿದ್ದವಾಗುತ್ತಿತ್ತು. ಗಡಿಯಾರ ನೋಡಿದರೆ ಅದಾಗಲೇ ಬೇಯುವ ಹೊತ್ತಾಗಿತ್ತು. ಸ್ಟವ್ ಆಫ್ ಮಾಡಿ ಮೆಲ್ಲನೆ ಉಗಿ ಪಾತ್ರೆಯ ಮುಚ್ಚಳ ತೆರೆದೆ. 

ಎದೆ ಧಸಕ್ಕೆಂದಿತು. ಆಷ್ಟು ಕಷ್ಟಪಟ್ಟು ಮಾಡಿದ್ದ ಉಂಡೆಗಳೆಲ್ಲಾ ಸಪಾಟಾಗಿ ಮಲಗಿ ಹಿಟ್ಟೆಲ್ಲಾ ಪಿತ ಪಿತ ಎನ್ನುತ್ತಾ  ಒಂದು ದೊಡ್ಡ ದೋಸೆಯ ಆಕಾರ ಪಡೆದುಕೊಂಡಿತ್ತು. 
ಇದಂತೂ ಶ್ಯಾವಿಗೆ ಒತ್ತಲು ಸಾಧ್ಯವೇ ಇಲ್ಲದ ಸ್ಥಿತಿಯ ಹಿಟ್ಟು. ನನ್ನ ಶ್ಯಾವಿಗೆಯ ಪ್ಲಾನನ್ನೇ ತಲೆಕೆಳಗೆ ಮಾಡಿತ್ತು. 
ಹಾಗೆಂದು  ಅಡುಗೆಯ ರಣಾಂಗಣಕ್ಕೆ ಕಾಲಿಟ್ಟ ವೀರಮಹಿಳೆಯಾದ ನಾನು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಸೋತು ಬೆನ್ನು ಹಾಕಿ ಹೋಗುವುದುಂಟೇ.. 

ತಲೆಯೊಳಗೆ ಹೆಚ್ಚಾಗಿ ಕುಳಿತುಕೊಳ್ಳಲು ಜಾಗವಿಲ್ಲದೆ ಹೊರಗಿಣುಕುತ್ತಿದ್ದ ಬುದ್ಧಿವಂತಿಕೆಯನ್ನು ಕೊಂಚ ಖರ್ಚು ಮಾಡುವ ನಿರ್ಧಾರ ತೆಗೆದುಕೊಂಡೆ. 
ಹಿಟ್ಟಿನ ಕಾಲು ಭಾಗಕ್ಕೆ ಇನ್ನಷ್ಟು ಅಕ್ಕಿ ಹುಡಿ ಸೇರಿಸಿ ಉಂಡೆ ಮಾಡಿ ಅದರಲ್ಲಿ ರೊಟ್ಟಿ ಮಾಡಿದೆ. ಅದು ರೊಟ್ಟಿಯ ಶೇಪ್ ಪಡೆದಿತ್ತೆನ್ನುವ ಸಮಾಧಾನದ ಜೊತೆಗೆ ತಿನ್ನಬಹುದಾದ ರುಚಿಯನ್ನು ಹೊಂದಿತ್ತೆನ್ನುವುದು ಬಹು ಮುಖ್ಯ ಸಂಗತಿ. 

ತಿಂಡಿಯೇನೋ ಸಿದ್ಧವಾಯಿತು.ಆದರೆ ಅದಕ್ಕೆ ನಾನು ಮಾಡಿದ ಸಾಂಬಾರ್ ಆಗಲೀ, ಕಾಯಿಹಾಲಾಗಲಿ ಕಂಪೆನಿ ಕೊಡುವಂತೆಯೇ ಇರಲಿಲ್ಲ. ಇನ್ನು ಪಲ್ಯವೋ ಗಸಿಯೋ ಮಾಡುವ ಸಮಯವಿರಲಿಲ್ಲ. ಸಾಂಬಾರಿಗೆ ಸ್ವಲ್ಪ ಅಕ್ಕಿ ಗೇರುಬೀಜದ ಪೇಸ್ಟ್ ತಯಾರಿಸಿ ಬೆರೆಸಿ ಮತ್ತೊಮ್ಮೆ ಕುದಿಸಿದೆ. ಸ್ವಲ್ಪ ಮಂದವಾದ ಸಾಂಬಾರಲ್ಲ ಎಂದು ಹೇಳಲ್ಪಡುವಂತೆ ತೋರುವ ವಿಚಿತ್ರ ಪದಾರ್ಥವೊಂದು ತಯಾರಾಯಿತು.  ಸಾವಿರ ಸುಳ್ಳು ಹೇಳಿ ಮದುವೆಗೆ ಹೊಂದಿಸಿದ ವಧೂವರರಂತೆ ತೋರುವ  ಅವೆರಡನ್ನೂ ಡೈನಿಂಗ್ ಟೇಬಲ್ಲಿನ ಮೇಲಿರಿಸಿದೆ. 

 ಸ್ವಲ್ಪ ಸಂಶಯದಿಂದ ನನ್ನನ್ನು ನೋಡುತ್ತಾ, ಒಂದೆರಡು ಕಮೆಂಟ್ ಪಾಸ್ ಮಾಡುತ್ತಾ,ಎರಡು ರೊಟ್ಟಿ ತಿನ್ನುವವನು ಒಂದು ರೊಟ್ಟಿಯನ್ನು, ಒಂದು ತಿನ್ನುವವನು ಕೇವಲ ಒಂದು ತುಂಡು ಮಾತ್ರವನ್ನು ತಿಂದು ಎದ್ದರು ಎಂದರೆ ಅದರ ರುಚಿಯ ಬಗ್ಗೆ ನಿಮಗೆ ಪ್ರತ್ಯೇಕ ಮಾಹಿತಿ ಬೇಡ ಅನ್ನಿಸುವುದಿಲ್ಲವೇ? ಎಲ್ಲರದ್ದಾದ ಮೇಲೆ ನಾನು ತಿಂದೆ. ಆಗಲೇ ಗೊತ್ತಾಗಿದ್ದು ಸತ್ಯ ಸಂಗತಿ. ನಾನು ಅಕ್ಕಿ ಹಿಟ್ಟು ಎಂದು ಗೋಧಿ ಹಿಟ್ಟನ್ನು ಸುರುವಿ ಗೊಟಾಯಿಸಿದ್ದೆ. ಅದೂ ಜೀರಾ ಪೂರಿ ಮಾಡಲೆಂದು ಮೈದಾ ಬೆರೆಸಿ ಇಟ್ಟಿದ್ದ ಗೋಧಿ ಹಿಟ್ಟು. ರೊಟ್ಟಿ ಎನ್ನುವುದು ನಿಮ್ಮ ಹಲ್ಲಿನ ವ್ಯಾಯಾಮಕ್ಕೆ ಎಂದು ಜಾಹೀರಾತು ನೀಡುವಂತಿತ್ತು. 
 ಅದೇನೇ ಆಗಲಿ ಹೇಗೂ ತಿಂಡಿ ತಿನ್ನುವ ಶಾಸ್ತ್ರ ಮುಗಿದಾಗಿತ್ತಲ್ಲ..ಹಾಗಾಗಿ ಅದರ ವಿಷಯ ತಲೆ ತಿನ್ನುವಂತಾದ್ದಾಗಿರಲಿಲ್ಲ. ಆದರೆ ಅಡುಗೆ ಮನೆಯ ಒಳಗೆ ಇನ್ನೂ ಉಗಿ ಪಾತ್ರೆಯಲ್ಲೇ ಬೆಟ್ಟದೆತ್ತರಕ್ಕೆ ಕಾದು ಕುಳಿತ ಹಿಟ್ಟಿನ ರಾಶಿ ನನ್ನನ್ನೇ ಕಾಯುತ್ತಾ ಇತ್ತು. ಈಗ ಅದನ್ನು ಬಿಸಾಡಿದರೆ ಅನ್ನದ ಜೊತೆ ಜೊತೆಗೆ ಅಷ್ಟು ಹೊತ್ತಿನ ಗ್ಯಾಸ್ ಕೂಡಾ ದಂಡವಾಗುವುದಿಲ್ಲವೇ?  ಅದನ್ನು ಹೇಗೆ ಕರಗಿಸುವುದು ಎಂಬ ಚಿಂತೆಗೆ ಹೊಸ ರೀತಿಯ ಪರಿಹಾರವೂ ಸಿಕ್ಕಿತು.

ಅದಕ್ಕೆ ಒಂದಿಷ್ಟು ಮೆಣಸಿನ ಹುಡಿ , ಎಳ್ಳು, ಉಪ್ಪು ಸೇರಿಸಿ ಮತ್ತೊಮ್ಮೆ ನೀರು ಹಾಕಿ ಚಮಚದಿಂದ ಬೀಳುವ ಹದಕ್ಕೆ ಕಾಯಿಸಿದೆ. ಪ್ಲಾಸ್ಟಿಕ್ಕಿಗೆ ಒಂದೊಂದು  ಚಮಚ ಹಾಕಿ ಸಂಡಿಗೆ ಮಾಡಿ ಬಿಸಿಲಿಗಿಟ್ಟಾಯಿತು. ಕರುಂ ಕುರುಂ ಸಂಡಿಗೆಯ ಕನಸು ಮನದೊಳಗೆ..

ಇನ್ನುಳಿದದ್ದು ಸಿಹಿಯಾದ ಕಾಯಿ ಹಾಲು.. ಇದಕ್ಕೇನು ಪರಿಹಾರ ಎಂದು ತಲೆ ಬಿಸಿ ಮಾಡಿ ಬೆವರಿಸಿಳಿಕೊಂಡಾಗ ಸುಲಭ ಉಪಾಯ ದೊರೆಯಿತು. ಐಸ್ ಕ್ಯಾಂಡಿಯ ಮೌಲ್ಡಿಗೆ ಸಿಹಿ ಸಿಹಿ ಕಾಯಿ ಹಾಲು ಸುರಿದು ಫ್ರೀಜರಿನೊಳಗಿಟ್ಟೆ. ಸಂಜೆಯ ಹೊತ್ತಿಗೆ ಸಿದ್ಧವಾಗಿರುತ್ತದೆ. ಅಲ್ಲಾ.. ಐಸ್ ಕ್ಯಾಂಡಿಗೆಲ್ಲಾ ತಿನ್ನಲು ಸಮಯಾಸಮಯಗಳ ಕಟ್ಟು ನಿಟ್ಟಿದೆಯೇ.. ಯಾವಾಗೆಂದರೆ ಆಗ ಫ್ರಿಡ್ಜ್ ಬಾಗಿಲು ತೆರೆದು ತಣ್ಣಗೆ ಹೊಟ್ಟೆಗಿಳಿಸಿದರಾಯಿತಪ್ಪಾ..!!

 ಇಷ್ಟಾಗುವಾಗ ಗಡಿಯಾರ ಮಧ್ಯಾಹ್ನದ ತಯಾರಿಯ ಕಡೆಗೆ ಬೆರಳು ತೋರಿಸುತ್ತಿತ್ತು.
ಕಾಲವನ್ನು ತಡೆಯೋರು ಯಾರೂ ಇಲ್ಲಾ.. ಎಂದು ಹಾಡುತ್ತಾ ಮುಂದಿನ ಕೆಲಸಗಳ ಕಡೆ ಗಮನ ಹರಿಸಿದೆ. 

****

ಕನ್ನಡದ ಬರಹಗಳನ್ನು ಹಂಚಿ ಹರಡಿ

5 thoughts on “ಹೆಣ್ಣಲ್ಲವೇ ನಮ್ಮನ್ನೆಲ್ಲ ಪೊರೆವವಳೂ: ಅನಿತಾ ನರೇಶ್ ಮಂಚಿ

  1. ಮಜವಾಗಿದೆ .. ಓದುತ್ತ ಚಿತ್ರಗಳು ಕಣ್ಣಿಗೆ ಕಟ್ಟಿದವು .. 

  2. abba nimma talme mechcha takkaddu. Mikkida padarthagalige hosaroopa koduva uthsaha  YENENDU POGALALI.

Leave a Reply

Your email address will not be published. Required fields are marked *