ಹೆಗ್ಣಾಮೆಷಿನ್!: ಎಸ್.ಜಿ.ಶಿವಶಂಕರ್

    ವಿಚಿತ್ರವೆನ್ನಿಸಬಹುದು! ವಾಷಿಂಗ್ ಮೆಷಿನ್, ಸ್ಯೂಯಿಂಗ್ ಮೆಷಿನ್, ಗ್ರೈಡಿಂಗ್ ಮೆಷಿನ್ ಎಲ್ಲಾ ಕೇಳಿರ್ತೀರಿ. ಆದರೆ ’ಹೆಗ್ಣಾಮೆಷಿನ್’ ? ಅಂದ್ರೆ…ಇದೆಂತಾ ಹೆಸರು..? ಇದೆಂತಾ ಮೆಷಿನ್ನು? ಇದು ಹೇಗೆ ಕೆಲಸ ಮಾಡುತ್ತೆ? ಏನು ಕೆಲಸ ಮಾಡುತ್ತೆ?  ಹೆಗ್ಗಣ ಹಿಡಿಯುವ  ಇಲ್ಲಾ ಹೆಗ್ಗಣ ಸಾಯಿಸುವ ಮೆಷಿನ್ ಇರಬಹುದೆ..? ಇಲ್ಲಾ…ಈ ಲೇಖಕ ಇಲಿಬೋನನ್ನೇ ಹೆಗ್ಣಾಮೆಷಿನ್ ಎಂದು ಹೇಳಿ ಲೇವಡಿ ಮಾಡುತ್ತಿರಬಹುದೆ..? ಈ ಪ್ರಶ್ನೆಗಳು ಈಗಾಗಲೇ ನಿಮ್ಮ ತಲೆಯಲ್ಲಿ ತುಂಬಿರಲು ಸಾಧ್ಯ!
    ‘ದೊಡ್ಡಪ್ಪ, ನಾವು ಹೆಗ್ಣಾಮೆಷಿನ್ನಿಗೆ ಯಾವಾಗ ಹೋಗೋದು..?’
    ‘ಮಿಲಿ’ ಎಂಬ ನಾಲ್ಕು ವರ್ಷದ ಹುಡುಗಿ ಮೂರು ದಿನಗಳಿಂದ ವಿಶ್ವನನ್ನು ಗೋಳುಹೊಯ್ದುಕೊಳ್ಳುತ್ತಿದ್ದಾಳೆ!
    ‘ಎಷ್ಟು ದಿನಾಂತ ಆ ಮಗೂನ ಗೋಳಾಡಿಸ್ತೀರಾ..? ಕರ್ಕೊಂಡು ಹೋಗಬಾರದೆ ?’ ಮಿಲಿ ಕೇಳಿದಾಗೆಲ್ಲಾ ವಿಶಾಲೂ ಬಿಸಿಬಿಸಿಯಾಗಿ ಹೊಸ ವಗ್ಗರಣೆ ಹಾಕುತ್ತಾಳೆ!
    ಹಾಗಾದರೆ ವಿಶ್ವ ಯಾರು..? ಮಿಲಿ ಯಾರು? ವಿಶಾಲೂ ಯಾರು? ಈ ಮೂವರ ಸಂಬಂಧವೇನು? ಎಂದು ನೀವು ಕೇಳುವ ಮುಂಚೆ ಹೇಳಿಬಿಟ್ಟರೆ ಅನುಕೂಲ ಅಲ್ಲವೆ?
    ವಿಶಾಲೂ ತಂಗಿ ಕುಶಾಲು. ಕುಶಾಲೂ ಮಗಳು ಮಿಲಿ; ಇಲಿಯಲ್ಲ!  ವಿಶ್ವ ಯಾರೆನ್ನುವಿರಾ..? ವಿಶಾಲೂ ಪತಿ ವಿಶ್ವ. ಮೂರು ದಿನದ ಹಿಂದೆ ಮಿಲಿ ತನ್ನನ್ನು  ಹೆತ್ತವರ ಜೊತೆ ಮೈಸೂರಿಗೆ  ಬಂದಿಳಿದಿದ್ದಾಳೆ. ಬಂದಾಗಿನಿಂದ ವಿಶ್ವನನ್ನು ಮಿಲಿ ಕೇಳುತ್ತಿದ್ದಾಳೆ ‘ನಾವು ಹೆಗ್ಣಾಮೆಷಿನ್ನಿಗೆ ಯಾವಾಗ ಹೋಗೋದು..?’
    ಈ ಹೆಗ್ಣಾಮೆಷಿನ್ನಿನ ಸಸ್ಪೆನ್ಸನ್ನು ಇಲ್ಲಿಗೆ ಬ್ರೇಕ್ ಮಾಡಿಬಿಡುವುದೇ ಒಳ್ಳೆಯದೆನಿಸುತ್ತಿದೆ. 
    ಮಿಲಿ ವಾಸ ಇರುವುದು ಧಾರವಾಡದಲ್ಲಿ.  ವಿಶ್ವ  ಕಳೆದ ವರ್ಷ ಧಾರವಾಡಕ್ಕೆ ಹೋದಾಗ, ಮಿಲಿಗೆ ‘ದಸರಾ ಟೈಮಲ್ಲಿ ಮೈಸೂರಿಗೆ ಬಂದರೆ ನಿನಗೆ ಹೆಗ್ಣಾಮೆಷಿನ್ನು ತೋರಿಸ್ತೇನೆ’ ಎಂದಿದ್ದ.  ಮೈಸೂರಿನಲ್ಲಿ ದಸರಾ  ಪ್ರಯುಕ್ತ ಪ್ರತಿ ವರ್ಷ  ತಿಂಗಳುಗಟ್ಟಲೆ   ನಡೆಯುವ  ಎಕ್ಸಿಬಿಷನನ್ನು ವಿಶ್ವ ಲೇವಡಿ ಮಾಡಲು  ಹೆಗ್ಣಾಮೆಷಿನ್ನು ಎಂದು ಕರೆಯುತ್ತಿದ್ದ ಮತ್ತು ಮಿಲಿಗೆ ಹಾಗೇ ಹೇಳಿದ್ದ.
    ‘ಹೆಗ್ಣಾ ಮೆಷಿನ್ನಾಗ ಏನಿರ್ತದೆ?’ ಎಂಬ ಧಾರವಾಡದ ಕಿಶೋರಿಯ ಪ್ರಶ್ನೆಗೆ, ವಿಶ್ವ ಅವಳ ಕುತೂಹಲ ಕೆರಳಿಸಿ ಆಸಕ್ತಿ ಹುಟ್ಟಿಸಿದ್ದ!
    ‘ಬಣ್ಣಬಣ್ಣದ ಲೈಟಿನ ಬೆಳಕಲ್ಲಿ ಕೊಲಂಬಸ್, ಮೆರ್ರಿ ಗೋ ರೌಂಡ್ ಅಂತ ತರಾವರಿ ಆಟಗಳಿರ್ತಾವೆ! ರುಚಿಯಾದ   ಡೆಲ್ಲಿ ಹಪ್ಪಳ, ಮೆಣಸಿನ ಕಾಯಿ ಬಜ್ಜಿ,  ಚುರುಮುರಿ…ಐಸ್‌ಕ್ರೀಂ…’
    ‘ಅಮೇಲೆ….?’
    ‘ಇಷ್ಟೇ ಅಲ್ಲ..ಬಳೆ, ಬಿಂದಿ..ಬೇಕಿರೋದು ಬೇಡದಿರೋದು ಎಲ್ಲಾ ಇರ್ತದೆ’
    ‘ಹಂಗಾದ್ರೆ ನಾ ಮೈಸೂರಿಗೆ ಬರ್ತೀನಿ! ಬಂದಾಗ ಖರೇನೆ ಹೆಗ್ಣಾಮೆಷಿನ್ನಿಗೆ ಕರ್ಕೊಂಡು ಹೋಗಬೇಕು’
     ಎಂದು ಮಿಲಿ ವರ್ಷದ ದಾರವಾಡದಲ್ಲಿ ಹಿಂದೆಯೇ ಹೇಳಿದ್ದಳು. ಆಗ ವಿಶ್ವ ಹರ್ಷದಿಂದ  ಭರವಸೆ ನೀಡಿದ್ದ.     ಈಗದನ್ನು ಈಡೇರಿಸಿ ಮರ್ಯಾದೆಯನ್ನು ಉಳಿಸುಕೊಳ್ಳುವ ಸಂದಿಗ್ಧ ಬಂದಿತ್ತು.    
    ಮಿಲಿಗೆ ಆಸೆ ತುಂಬಿಸಿ ಬಂದ ಎರಡೇ ತಿಂಗಳಲ್ಲಿ ದಸರಾ ಬಂದಿತ್ತು. ಜೊತೆಗೇ ವಿಶ್ವ ಕೆಲಸ ಮಾಡುತ್ತಿದ್ದ ಕಾರ್ಖಾನೆಯಲ್ಲೊಂದು  ಹೊಸ ವಾತಾವರಣ ಸೃಷ್ಟಿಯಾಗಿತ್ತು. ಸರ್ಕಾರದ ಮುಕ್ತ  ಮಾರುಕಟ್ಟೆ, ಉದಾರೀಕರಣ(ಉದರೀಕರಣವಲ್ಲವಾದರೂ ಉದರ ದೃಷ್ಟಿಯ ಸೃಷ್ಟಿ)  ನೀತಿಗಳ ಫಲವಾಗಿ ಸರ್ಕಾರೀ ಸ್ವಾಮ್ಯದ ವಿಶ್ವನ ಕಾರ್ಖಾನೆ ಖಾಸಗಿಯವರ ಪಾಲಾಗಿತ್ತು! ಮೊದಲಿಗೆ ಬೆಳಗ್ಗೆ ಎಂಟಕ್ಕೆ ಹೋಗಿ ಸಂಜೆ ಐದಾರು ಗಂಟೆಗೆ ಮನೆಗೆ ಹಿಂತಿರುಗುತ್ತಿದ್ದ ವಿಶ್ವ. ಈಗ ಬೆಳಗ್ಗೆ ಏಳಕ್ಕೆ ಕಾರ್ಖಾನೆ ಸೇರಿದರೆ ರಾತ್ರಿ ಒಂಬತ್ತರ ಸಮಯಕ್ಕೆ ಮನೆಗೆ ಬರುತ್ತಾನೆ. ಬರುವಷ್ಟರಲ್ಲಿ ಅರೆ  ಜೀವವಾಗಿರುತ್ತಾನೆ. ಉತ್ಸಾಹ ಬತ್ತಿರುತ್ತದೆ. ಎಲ್ಲಿಗಾದರೂ ಹೋಗಲು ಸಮಯವೂ ಇರುವುದಿಲ್ಲ, ಮನಸ್ಸೂ ಇರುವುದಿಲ್ಲ; ಉತ್ಸಾಹ ಮೊದಲೇ ಇರುವುದಿಲ್ಲ. ಜೀತ ಪದ್ಧತಿಯನ್ನು ತೊಡೆದು ಹಾಕಿಬಿಟ್ಟೆವೆಂದು ರಾಜ್ಯ ಸರ್ಕಾರ ಸಿಕ್ಕಲ್ಲಿ ತಮಟೆ  ಹೊಡೆಯುತ್ತಿದೆ. ಅದೇ ಹೊಸ ವೇಷದಲ್ಲಿ ವಿಜೃಂಬಿಸುತ್ತಿರುವುದರ ಅರಿವೇ ಇಲ್ಲದೆ! ಈ ಶೋಷಣೆಗೆ  ಈಗ ಸ್ಪರ್ಧೆ ಎಂಬ ಹೊಸ ಹೆಸರು!  ‘ಬಲಿಷ್ಠರು ಉಳಿಯುತ್ತಾರೆ! ಕನಿಷ್ಠರು ಕಳೆದುಹೋಗುತ್ತಾರೆ’ ಎಂಬ ಹೊಸ ಘೋಷಣೆ ಚಲಾವಣೆಗೆ ಬಂದಿದೆ. 

ಒಂದು ಪುಟ್ಟ ಹುಡುಗಿಯ ಆಸೆಯನ್ನು ತೀರಿಸಲಾಗುತ್ತಿಲ್ಲವಲ್ಲ ಎಂದು ವಿಶ್ವನಿಗೆ ತನ್ನ ಕಾರ್ಖಾನೆಯ ಮೇಲೆ ಅತೀವ ಸಿಟ್ಟು ಬಂದಿತ್ತು. ಆದರೆ ಬಡವನ ಕೋಪ ದವಡೆಗೆ ಮೂಲ ಎಂದು ಬಾಯಿ ಮುಚ್ಚಿಕೊಂಡಿದ್ದ. ವಿಶ್ವನ ಬಾಸು ಸದಾ ಬುಸುಗುಡುವ ಮನುಷ್ಯ!  ರಜಾ ಕೇಳಿದರೆ ಕಾಳಿಂಗ  ಸರ್ಪದಂತೆ ಬುಸುಗುಡುತ್ತಿದ್ದ.  ಹೆಚ್ಚುತ್ತಿರುವ ಕೆಲಸ ಮಾಡಲು ಜನ ಬೇಕೆಂದು ಕೇಳಿದರೆ ಜಪಾನ್, ಚೈನಾ ಮತ್ತು  ಕೊರಿಯಾ ದೇಶಗಳ ಉದಾಹರಣೆಯನ್ನು ಕೊಡುತ್ತಿದ್ದ.

 ’ಅಲ್ಲಿ ಜನ ಹನ್ನೆರಡು ತಾಸು ಮೀರಿ ಕೆಲಸ ಮಾಡುತ್ತಾರೆ.  ಅವರು ಸದಾ ಮನೆ, ಸಂಸಾರ ಎಂದು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರ ಸಂಸಾರ ಏನಿದ್ದರೂ ಶನಿವಾರ ಮತ್ತು ಭಾನುವಾರ’ ಎಂದು ಕೊರೆಯುತ್ತಿದ್ದ.   
ವಿಶ್ವ ಒಮ್ಮೆ ‘ಇಲ್ಲಿ ಶನಿವಾರ ಮತ್ತು ಭಾನುವಾರವೂ ಕೆಲಸ ಇರುತ್ತದಲ್ಲ ಸಾರ್, ಅಂದರೆ ಈ ಕಾರ್ಖಾನೆಯ ಜನರು ಸಂಸಾರ ಕಟ್ಟಿಕೊಳ್ಳಬಾರದೆ?’ ಎಂದು ಕಂಗಾಲಾಗಿ ಕೇಳಿ, ‘ನೀವು ಅಸಂಬದ್ಧವಾಗಿ ಮಾತನಾಡುತ್ತೀರ ವಿಶ್ವನಾಥ್’ ಎಂದು ಬೈಸಿಕೊಂಡಿದ್ದ. ಮಿಲಿಯನ್ನು  ಎಕ್ಸಿಬಿಷನ್ನಿಗೆ ಕರೆದುಕೊಂಡು ಹೋಗದಿರುವುದಕ್ಕೆ, ವಿಶಾಲೂ ಬೇರೆ ವಿಶ್ವನನ್ನು ಬಾಂಡಲಿಯಲ್ಲಿ ಹಾಕಿ ಹುರಿಯುತ್ತಿದ್ದಳು.  
 ಹೇಗಾದರೂ ಮಾಡಿ ಒಂದು ದಿನ ಸಂಜೆ ಐದರ ಸಮಯಕ್ಕೆ ಮನೆಗೆ ಬಂದು ಮಿಲಿಯನ್ನು ‘ಹೆಗ್ಣಾಮೆಷಿನ್’ಗೆ ಕರೆದುಕೊಂಡು ಹೋಗಿ ಮಾನ ಉಳಿಸಿಕೊಳ್ಳಬೇಕೆಂದು ಹವಣಿಸುತ್ತಿದ್ದ ವಿಶ್ವ. ಅಂಥ ಸಮಯ ಒಂದು ದಿನ ತಾನಾಗಿಯೇ ಒದಗಿ ಬಂತು! ಸಿನೀಮಾದಲ್ಲಿ ಡಣ್ ಎಂದು ಕಣ್ಮುಚ್ಚಿ ತೆರೆಯುವುದರಲ್ಲಿ ದೇವರು ಪ್ರತ್ಯಕ್ಷನಾಗಿ ವರ ಕೊಟ್ಟಂತೆ! ವಿಶ್ವನ ಬಾಸಿನ ಭಾವಮೈದುನನೊಬ್ಬ ಇಂಜಿನಿಯರಿಂಗ್ ಓದುತ್ತಿದ್ದು ಪ್ರಾಜೆಕ್ಟ್ ವರ್ಕ್ ಮಾಡಲು ಬಂದಿದ್ದ. ಅವನಿಗೆ ಗೈಡು ಮಾಡುವಂತೆ ವಿಶ್ವನಿಗೆ ಆದೇಶ ಕೊಟ್ಟರು ಬಾಸು.  ವಿಶ್ವ ಕೆಲಸ ಕಡಿಮೆ ಮಾಡಿಕೊಳ್ಳಲು ತಾನು ಇಂಜಿನಿಯರಿಂಗ್‌ನಲ್ಲಿ ಮಾಡಿದ  ಪ್ರಾಜೆಕ್ಟ್ ರಿಪೋರ್ಟನ್ನೇ ತಂದುಕೊಡುವೆ ಎಂದು ಹೇಳಿದ. ಅದು ಮನೆಯಲ್ಲೆಲ್ಲೋ ಸೇರಿರುವುದರಿಂದ ಹುಡುಕಲು ಸಮಯ ಬೇಕೆಂದು ಹೇಳಿ ಸಂಜೆ ಐದೂವರೆಗೆ ಮನೆಗೆ ಬಂದೇಬಿಟ್ಟ! ಈ ವಿಷಯ ಕೆಲವು ತಾಸುಗಳ ಹಿಂದೆಯೇ  ಫೋನ್ ಮಾಡಿ ಹೇಳಿದ್ದರಿಂದ ಮನೆಯಲ್ಲಿ ಎಲ್ಲರೂ ತಯಾರಾಗಿ ನಿಂತಿದ್ದರು. ಮಿಲಿಯಂತೂ ತುದಿಗಾಲಿನಲ್ಲಿ ನಿಂತಿದ್ದಳು.

ಆರು ಗಂಟೆಗೆ ವಿಶ್ವನ ಕಾರು ಎಕ್ಸಿಬಿಷನ್‌ಗೆಂದು ಹೊರಟೇಬಿಟ್ಟಿತು. ಅವತ್ತು ಶನಿವಾರವಾಗಿದ್ದರಿಂದ ವಸ್ತುಪ್ರದರ್ಶನದಲ್ಲಿ ಭಯಂಕರ ಜನಸಂದಣಿಯಿತ್ತು. ಜನರ ಓಡಾಟದಿಂದ ಎದ್ದಿದ್ದ ಧೂಳು ಆಗಲೇ ಹತ್ತು ಅಡಿ ಎತ್ತರದಲ್ಲಿ ಆವರಿಸಿಕೊಂಡಿತ್ತು. ಬೆಳಕಿನಲ್ಲಿ ಮಿಂದಿದ್ದ ವಸ್ತುಪ್ರದರ್ಶನದ ಆವರಣದಲ್ಲಿ ಅದು ಸ್ಪಷ್ಟವಾಗಿ ಕಾಣುತ್ತಿತ್ತು. ಕಾರ್ ಪಾರ್ಕಿಂಗ್‌ಗೆ ಹತ್ತು ರುಪಾಯಿ ಕಕ್ಕಿ ಎಕ್ಸಿಬಿಷನ್ ಕಡೆಗೆ ಹೊರಟಿತು ವಿಶ್ವನ ಗ್ಯಾಂಗು. ಮಿಲಿ ಉತ್ಸಾಹದಿಂದ ಪುಟಿಯುತ್ತಿದ್ದಳು.

ಅಂದು ಎಕ್ಸಿಬಿಷನ್ನಿನಲ್ಲಿ ವಿಶೇಷ ಮನರಂಜನೆ ಕಾರ್ಯಕ್ರಮವಿದ್ದುದರಿಂದ ಪ್ರವೇಶ ಪ್ರತಿ ತಲೆಗೆ ಇಪ್ಪತ್ತು ರೂಪಾಯಿ ನಿಗದಿ ಮಾಡಿದ್ದರು. ಏಳುಜನರಿಗೆ ತಲಾ ಎಪ್ಪತ್ತರಂತೆ ಒಚಿದು ನೂರು ನಲವತ್ತು ರೂಪಾಯಿಯನ್ನು ತೆತ್ತು ಒಳಗೆ ಪ್ರವೇಶ ಮಾಡಲು ಹವಣಿಸಿದರು. ಜನರು ನೂಕು ನುಗ್ಗಲು ನಿಯಂತ್ರಿಸಲು ಒಬ್ಬೊಬ್ಬರೇ ಸಾಲಿನಲ್ಲಿ ಹೋಗುವಂತೆ ಕಬ್ಬಿಣದ ಕಂಬಿಗಳನ್ನು ಅಳವಡಿಸಲಾಗಿತ್ತು. ಅದರೊಳಗೆ ಟಿಕೇಟು ಪಡೆಯಲೆಂದು ನಿಂತಿದ್ದವ ಕಂಬಿಯೊಳಗಿನ ಅರ್ಧ ಜಾಗದಲ್ಲಿ ನಿಂತಿದ್ದ. ಅವನಿಗೆ ಮೈ ತಾಗಿಸದೆ  ಒಳಗೆ ಹೋಗಲು ಸಾಧ್ಯವಿರಲಿಲ್ಲ. ಗಂಡಸರೇನೋ ಸರಿ, ಹೆಂಗಸರಿಗೆ ಇದೆಂತಾ ಮುಜುಗರ. ವಿಶ್ವ ಗುರ್ರೆಂದು ಅವನನ್ನು ನೋಡಿದರೂ ಮನುಷ್ಯ ‘ಕ್ಯಾರೆ’ ಎನ್ನದೆ ನಿಂತಿದ್ದ. 
‘ನೀನೇ ಅರ್ಧ ಜಾಗದಲ್ಲಿ ನಿಂತರೆ ಹೆಂಗಸರು ಹೇಗಯ್ಯಾ ಹೋಗ್ತಾರೆ..?’ ಎಂದು ರೇಗಿದ ಮೇಲೆ ಆತ ಕಂಬಿಯಿಂದಾಚೆ ಹೋಗಿ ನಿಂತ.

ಎಕ್ಸಿಬಿಷನನ್ನು ಪ್ರವೇಶಿಸುತ್ತಲೇ ಧಿಗ್ಭ್ರಮೆಯಾಗುವಂತ ಜನಸಂದಣಿ ಕಂಡಿತು! ಅರ್ಧ ಮೈಸೂರಿಗೆ ಮೈಸೂರೇ  ಅಲ್ಲಿತ್ತು! ಕಾಲಿಡಲು ಜಾಗವಿಲ್ಲದಷ್ಟು ಜನ! ಒಂದು ಕಡೆ ಕಾಟನ್ ಕ್ಯಾಂಡಿ, ಇನ್ನೊಂದೆಡೆ, ಪಾಪ್ ಕಾರನ್ ಸ್ಟಾಲು, ಹೆಂಗಸರ ಚೂಡಿದಾರ್, ಸ್ಕಾರ್ಫ್ ಮಾರುವ ಅಂಗಡಿ, ಬೆಲೂನಿನವರು, ಮಕ್ಕಳನ್ನು ಆಕರ್ಷಿಸುವ ಇನ್ನೇ ಏನೇನೋ ವಸ್ತುಗಳು! ಆ ಜನ ಜಂಗುಳಿ ವಿಶ್ವನಿಗೆ ಮಹಾಭಾರತದ ನೆನಪು ತಂದಿತು! ಈಚೆ  ಬರಲಾರದೆ ಚಕ್ರವ್ಯೂಹ ಪ್ರವೇಶಿಸಿ ಹತನಾದ ಕುರುಕ್ಷೇತ್ರ ಯುದ್ಧದ  ಅಭಿಮನ್ಯುವಿನ ನೆನೆಪಾಯಿತು!

‘ಕಾಟನ್ ಕ್ಯಾಂಡಿ…ನಂಗೆ ಕಾಟನ್ ಕ್ಯಾಂಡಿ ಬೇಕು’ ಮಿಲಿ ದೊಡ್ಡ ದನಿಯಲ್ಲಿ ಕೇಳಿದಳು. ಅವಳೇನಾದರೂ ಮೆಲ್ಲನೆ ಹೇಳಿದ್ದರೆ ಯಾರಿಗೂ ಕೇಳಿಸುತ್ತಲೂ ಇರಲಿಲ್ಲ! ‘ಅನ್‌ಬ್ರೇಕಬಲ್ ಪ್ಲಾಸ್ಟಿಕ್ ಸಾರ್’ ಎನ್ನುತ್ತಾ ಮಾರಾಟಗಾರನೊಬ್ಬ ಬಕೇಟೊಂದನ್ನು ದಭ್‌ದಭ್ ಎಂದು ನೆಲಕ್ಕೆ ಅಪ್ಪಳಿಸುತ್ತಿದ್ದ. ಸಾವಿರಾರು ಜನರ ಗದ್ದಲದಲ್ಲಿ, ಅಂಗಡಿಯವರ ಮಾರಾಟ ಮಾಡಲು ಕೂಗುವ ಭರಾಟೆಯಲ್ಲಿ ಯಾರು ಯಾರಿಗೆ ಏನು ಹೇಳಿದರೂ ಕೇಳುತ್ತಿರಲಿಲ್ಲ. ಇಷ್ಟರಲ್ಲೇ ದಟ್ಟಾವಾಗಿ ತುಂಬಿದ್ದ ಧೂಳಿಗೆ ವಿಶ್ವ ಕೆಮ್ಮಲು ಶುರು ಮಾಡಿದ. ವಿಶ್ವನ  ಧೂಳಿನ ಅಲರ್ಜಿ ರೆಕ್ಕೆ ಬಿಚ್ಚಿತ್ತು.

‘ಶುರುವಾಯಿತಾ ನಿಮ್ಮ ರಾಮಾಯಣ ?’ ವಿಶಾಲೂ ಕುಟುಕಿದಳು. ವಿಶ್ವ ಕರವಸ್ತ್ರ ಬಾಯಿಗೆ  ತುರುಕಿಕೊಂಡು ಕೆಮ್ಮು ತಡೆದುಕೊಂಡ. ಮಗ ಪವನನ್ನು ಕಾಟನ್ ಕ್ಯಾಂಡಿ ತರಲೆಂದು ಕಳಿಸಿದ. 
ಆ ಜನಜಂಗುಳಿಯಲ್ಲಿ ಯಾರಿಗೂ ಡಿಕ್ಕಿ ಹೊಡೆಯದೆ, ಯಾರನ್ನೂ ಮುಟ್ಟದೆ, ತಟ್ಟದೆ ಮುಂದೆ ಸಾಗುವಂತೆಯೇ ಇರಲಿಲ್ಲ. ಎಕ್ಸಿಬಿಷನ್ನಿನ ಒಳಗೆಲ್ಲ ಅಳವಡಿಸಿದ್ದ ಧ್ವನಿವರ್ಧಕಗಳಲ್ಲಿ ಜಾಹೀರಾತುಗಳು ಮೊಳಗುತ್ತಿದ್ದವು! ಸಾಬೂನುಗಳ ವಿವರಣೆ, ಷಾಂಪೂಗಳ  ವರ್ಣನೆ, ನೀರೆಯರ ಗಮನ ಸೆಳೆಯಲು ಕಾಂಚೀವರಂ ಸೀರೆ ಅಂಗಡಿಯವರು ‘ಸ್ಟಾಲಿಗೆ ಬಂದವರಿಗೆಲ್ಲಾ ಒಂದು ಆಕರ್ಷಕ ಉಚಿತ ಬಹುಮಾನ’ ಎಂದು ಬೇರೆ ಹೇಳಿ ಆಸೆಯನ್ನು ಕೆರಳಿಸುತ್ತಿzರು. ಎದುರು ಬರುವವರ, ಈಗಾಗಲೇ ಮುಂದೆ ನಡೆಯುತ್ತಿರುವವರ ಮಧ್ಯೆ ಜಾಗ ಮಾಡಿಕೊಂಡು  ಹೇಗೋ ಆಮೆಗಳೋಪಾದಿಯಲ್ಲಿ ನಡೆಯುತ್ತಿರುವಾಗ ಪವನ ಕಾಟನ್ ಕ್ಯಾಂಡಿ ತಂದ. ಮಿಲಿ ಕೈಯಲ್ಲಿ ಹಿಡಿದು, ಖುಷಿಯಿಂದ ಕುಣಿದಳು! ಕುಣಿಯುವಾಗ ಕೈಯಲ್ಲಿದ್ದ   ಕಾಟನ್ ಕ್ಯಾಂಡಿ ಮುಂದೆ ಹೋಗುತ್ತಿದ್ಡ ಹೆಂಗಸೊಬ್ಬರ ಸೀರೆಗೆ ತಗುಲಿ ಕೆಳಗೆ  ಬಿತ್ತು!   ಹೆಂಗಸು ಹಿಂದೆ ತಿರುಗಿ ವಿಶ್ವನನ್ನು ಕೆಕ್ಕರಿಸಿ ನೋಡಿದಳು!  ವಿಶ್ವ ‘ಸಾರಿ ಮೇಡಂ ಸಿಕ್ಕಾಪಟ್ಟೆ ಜನ! ಪಾಪ  ಮಗು’.  ಆಕೆ  ಅಷ್ಟಕ್ಕೆ ಬಿಡಬೇಕಲ್ಲ? ಸಿಂಹಿಣಿಯಂತೆ ಗರ್ಜಿಸಿದಳು,  ‘ಅದೇನೋ ಮಗೂ, ನೀವೇನೂ ಮಗು ಅಲ್ಲವಲ್ಲ? ಮಗೂನ ಸರಿಯಾಗಿ ನೋಡಿಕ್ಕೊಳ್ಳದಿದ್ದರೆ ಮಕ್ಕಳನ್ನೇಕೆ ಕರ್ಕೊಂಡು ಬರ್ಬೇಕು?’
ಇಷ್ಟರಲ್ಲಿ ಮಿಲಿಗೆ ಅಳು ಬಂದು ಬಿಟ್ಟಿತ್ತು. ಕಾಟನ್ ಕ್ಯಾಂಡಿ ನೆಲಕ್ಕೆ ಬಿದ್ದಿದ್ದು ಒಂದು ಕಾರಣವಾದರೆ ಇನ್ನೊಂದು ಆ ಹೆಂಗಸು ಬೈದಿದ್ದು! ಮಿಲಿಯನ್ನು ಸಮಾಧಾನಪಡಿಸಿ ಇನ್ನೊಮ್ಮೆ ಕಾಟನ್ ಕ್ಯಾಂಡಿಗೆ ಪವನನ್ನು ಕಳಿಸಿ ವಿಶ್ವ ಗಡಿಯಾರ ನೋಡಿಕೊಂಡ. ಗೇಟು ಪ್ರವೇಶಿಸಿದಾಗ ಸಮಯ ಏಳು ಗಂಟೆ! ಈಗ ಏಳೂವರೆ! ಅಂದರೆ ಅರ್ಧ ಗಂಟೆ, ಚಿಲ್ಲರೆ ವಿಷಯದಲ್ಲೇ ಕಳೆದು ಹೋಗಿದೆ. 
’ರೀ..ಇದೇನು ಹೀಗೆ ನಿಂತುಬಿಟ್ರೆ..? ನಾವು ಮುಂದಕ್ಕೆ ಹೋಗ್ತಿರೋಣ, ಪವನ್ ಬರ್ತಾನೆ’ ವಿಶಾಲೂ ಹೇಳಿದಳು. ಎದುರಿನಿಂದ ಬರುತ್ತಿದ್ದ ಜನ ಪ್ರವಾಹವನ್ನೆರಿಸಿ ನಿಂತಿದ್ದವರು ಈಗ ಪ್ರವಾಹದ ಜೊತೆಯಲ್ಲಿ ಹರಿಯತೊಡಗಿದರು.

ಸೋಲಾರ್ ಹೀಟರ್‌ನವರು, ಕಂಪ್ಯೂಟರ್ ಭವಿಷ್ಯದವರು, ಪಾತ್ರೆ ಅಂಗಡಿಯವರು, ಬನಿಯನ್ ಕಾಚಾ ಮಾರುವ  ತಮಿಳು ನಾಡಿನವರ  ಸ್ಟಾಲುಗಳು, ಗೊಬ್ಬರ ಕಂಪೆನಿಗಳ ಸ್ಟಾಲುಗಳನ್ನು ಬಿಟ್ಟು ಮುಂದುವರಿಯುತ್ತಿರುವಾಗ, ಪವನ ಯಾವಾಗಲೋ ಮಿಲಿಗೆ ಕಾಟನ್ ಕ್ಯಾಂಡಿ ಕೊಟ್ಟು, ಅದನ್ನು ಸವಿಯುವ ಸಂಭ್ರಮದಲ್ಲಿ ಮಿಲಿಯ ಮುಖವೆಲ್ಲಾ ಕ್ಯಾಂಡಿಮಯವಾಗಿತ್ತು! ಮುಖ, ಬಟ್ಟೆ, ಕೈಗಳೆಲ್ಲಾ ಕಾಟನ್ ಕ್ಯಾಂಡಿಯ ಅಂಟಿನಿಂದ ಮಿನುಗುತ್ತಿದ್ಡವು! ಅವಳನ್ನು ಬೈದ ಅವರಮ್ಮ, ಎಲ್ಲೋ ಕರೆದುಕೊಂಡು ಹೋಗಿ ಕೈ, ಮುಖ ತೊಳೆಸಿಕೊಂಡು ಬಂದಳು. ಇಷ್ಟರಲ್ಲಿ ವಿಶ್ವನ ಮಗಳು ಪಿಂಕಿಗೆ ಚುರುಮುರಿ ಅಂಗಡಿ ನೋಡಿ ಬಾಯಲ್ಲಿ ನೀರುಬರತೊಡಗಿತ್ತು. ಅವಳು ತನಗೆ ಚುರುಮುರಿ ಬೇಕೆನ್ನುತ್ತಿರುವಂತೆ ಎಲ್ಲರು ಒಕ್ಕೊರೊಲಿನಿಂದ ತಮಗೂ ಬೇಕೆಂದರು. ಅಂಗಡಿಯ ಮುಂದೆ ಕನಿಷ್ಟ ಇಪ್ಪತ್ತು ಜನರಿದ್ದರು. ಎಲ್ಲ ಅರ್ಜೆಂಟಿನಲ್ಲಿದ್ದರು. ಕೈಯಲ್ಲಿ ದುಡ್ಡು ಹಿಡಿದು ಅತುರಪಡಿಸುತ್ತಿದ್ದರು. ಚುರುಮುರಿ ಮಾಡುವವ ತನ್ನ ಶಕ್ತಿ ಮೀರಿದ ವೇಗದಲ್ಲಿ ಚುರುಮುರಿಯನ್ನು ಮಾಡುತ್ತಿದ್ದ. ಕಾದು ಚುರುಮುರಿ ಕಟ್ಟಿಸಿಕೊಂಡು ಬಾಯಾಡಿಸುತ್ತಾ ಎಲ್ಲಾ ಹೊರಟರು. ನಡೆಯುತ್ತಿರುವಾಗ ಯಾರೋ ವಿಶ್ವನ ಕೈಗೆ ಬಲವಾಗಿ ಕೈತಾಗಿಸಿ ಚುರುಮುರಿ ಪ್ಯಾಕೆಟ್ಟು ಗಾಳಿಯಲ್ಲಿ ಹಾರಿತು!  ಪುರಿ ಮುಂದಿದ್ದವರ ಮೇಲೆ ಹಾರಿತು!

‘ದಯವಿಟ್ಟು ಕ್ಷಮಿಸಿ’ ವಿಶ್ವನಿಗೆ ನೆಲ ಬಾಯಿಬಿಡಬಾರದೆ ಎನ್ನಿಸಿತ್ತು,  ಕ್ಷಮೆ ಬೇಡಿದ.
‘ಏನ್ಸಾರ್, ತಿನ್ನೋಕೆ ಎಕ್ಸಿಬಿಷನ್ನಿಗೇ ಬರ್ಬೇಕಾ..? ಈ ಚುರುಮುರಿ ಮೈಸೂರಲ್ಲಿ ಎಲ್ಲೂ ಸಿಗೊಲ್ಲವಾ..’ಮೈಮೇಲೆ ಪುರಿ ಚೆಲ್ಲಿಸಿಕೊಂಡವರಲ್ಲಿ ಒಬ್ಬಾತ ಶಾಲಿನಲ್ಲಿ ಚಪ್ಪಲಿ ಸುತ್ತಿ ಹೊಡೆದ. 
ಒಂದಿಬ್ಬರು ‘ಖಾರ..ಖಾರ’ ಎಂದು ಬೊಬ್ಬೆ ಹೊಡೆಯತೊಡಗಿದರು. ವಿಶ್ವ ಎಲ್ಲರನ್ನು ಐಸ್‌ಕ್ರೀಂ ಮಳಿಗೆಗೆ ಕರೆದೊಯ್ದು ಬಾಯಿ ತಂಪು ಮಾಡಿಸಿದ. ಆಗ ಅಲ್ಲೊಬ್ಬ ಬೆಲೂನಿನವನು ಕಂಡಿದ್ದರಿಂದ ಮಿಲಿ ಬೆಲೂನು ಬೇಕು ಎಂದು ಬೊಬ್ಬೆ ಹಾಕಿದಳು. ಪುಟ್ಟ ಹುಡುಗಿಯ ಆಸೆಯನ್ನು ತೀರಸದಿರಲಾದೀತೆ…? ಅದು ತನ್ನ ಮಡದಿಯ ತಂಗಿಯ ಮಗಳು! ಮಿಲಿ ಎಲ್ಲಕ್ಕಿಂತ ದೊಡ್ಡ ಗಾತ್ರದ ಬೆಲೂನನ್ನು ಆರಿಸಿಕೊಂಡಳು. ವಿಶ್ವ ‘ಇಲ್ಲ’ಎನ್ನುವಂತಿರಲಿಲ್ಲ. ಅಷ್ಟು ದೊಡ್ಡ ಬೆಲೂನನ್ನು ಆ ಜನಜಂಗುಳಿಯಲ್ಲಿ ಹೇಗೆ ಮ್ಯಾನೇಜ್ ಮಾಡುವುದು ಎಂಬುದು ಅವನ ಚಿಂತೆ! ಈ ಚಿಂತೆ ಮಿಲಿಗಿರಲಿಲ್ಲ! ಮಿಲಿಗೇಕೆ ಉಳಿದವರು ಯಾರಿಗೂ ಇರಲಿಲ್ಲ! 
ಜನರ ಕೈಯಲ್ಲಿ ಬೈಸಿಕ್ಕೊಳ್ಳುತ್ತ,  ತಳ್ಳಿಸಿಕ್ಕೊಳ್ಳುತ್ತಾ, ತಿವಿಸಿಕ್ಕೊಳ್ಳುತ್ತಾ ಸಿಕ್ಕ ತಿನಿಸುಗಳನ್ನು ಮುಕ್ಕುತ್ತಾ  ಮುಂದೆ ಸಾಗುತ್ತಿರುವಾಗ ಇದ್ದಕ್ಕಿದ್ದಂತೆ ಮನೆಯವರೆಲ್ಲ ‘ಮಿಲಿ..ಮಿಲಿ..’ ಎಂದು ತಾರಕ ಸ್ವರದಲ್ಲಿ ಕೂಗತೊಡಗಿದರು. ಮಿಲಿ ಜೊತೆಯಲ್ಲಿರಲಿಲ್ಲ! ತಪ್ಪಿಸಿಕೊಂಡಿದ್ದಳು! ಎಲ್ಲರಿಗೂ ಒಮ್ಮೆಲೇ ಗಾಬರಿ! ತಾವು ಬಂದ ದಾರಿಯಲ್ಲಿ ಹಿಂದೆ ಹೋಗಿ ನೋಡಿ ಬಂದರು. ಮಿಲಿಯ ಸುಳಿವಿರಲಿಲ್ಲ.  ಮಿಲಿ ತಾಯಿ ಕುಶಾಲೂ ಕಣ್ಣಲ್ಲಿ ನೀರು! ವಿಶಾಲೂ ಅವಳನ್ನು ಸಮಾಧಾನಿಸಲು ನಿಂತಳು. ವಿಶ್ವನ ಷಡ್ಕ ಪೆಚ್ಚಾಗಿ ನಿಂತಿದ್ದರು.
‘ಎಲ್ಲಾ ಒಂದ್ಕಡೆ ಕೂತಿರಿ. ಇಲ್ಲಿ ಇಂತದ್ದಕ್ಕೇಂತಾನೆ ಒಂದು ಪೊಲೀಸ್ ಸ್ಟೇಷನ್ ಇದೆ. ಒಂದರ್ಧ ಗಂಟೇಲಿ ಹುಡುಕಿಕೊಂಡು ಬಂದ್ಬಿಡ್ತೀನಿ. ಯಾರೂ ಗಾಬರಿಯಾಗಬೇಡಿ’ ಎಂದು ವಿಶ್ವ ಹೇಳುತ್ತ ಹಿಂದೊಮ್ಮೆ ನೋಡಿದ್ದ ಪೋಲೀಸ್ ಸ್ಟೇಷನ್ ಕಡೆಗೆ ಧಾವಿಸಿದ.  

ಮಿಲಿ ಅಪ್ಪ ವಿಶ್ವನನ್ನು ಹಿಂಬಾಲಿಸಿದರು. ಅಲ್ಲಿ ಇಲ್ಲಿ ಕೇಳಿ ಪೋಲೀಸ್ ಸ್ಟೇಷನ್ ಹುಡುಕಿ ಗಾಬರಿಯಿಂದ ಒಳಗೆ ಧಾವಿಸಿ, ಅಲ್ಲಿ ಆತುರದಿಂದ ಎಲ್ಲಾ ಒದರಿದಾಗ, ‘ಯಾಕಿಸ್ಟು ಗಾಬರಿ..? ಇಲ್ಲಿ ಇದು ಮಾಮೂಲು. ಒಚಿದು ಅನೌನ್ಸ್‌ಮೆಂಟ್ ಕೊಡ್ತೀವಿ…ಅದಕ್ಕೆ ಯಾರಾದ್ರೂ ನೋಡಿದವರು ಕರ್ಕೊಂಡು ಬರ್ತಾರೆ. ಈ ಮಕ್ಕಳಲ್ಲಿ ಯಾರಾದರೂ ನಿಮ್ಮ ಹುಡುಗೀನಾ..?’ ಎಂದು ಒಬ್ಬ ಕಾನ್ಸ್ಟೇಬಲ್  ಕೈತೋರಿಸಿದ ಕಡೆ ನೋಡಿದರೆ ಅಲ್ಲಿ ಸುಮಾರು ಹತ್ತು ಮಕ್ಕಳಿದ್ದವು. ಆದರೆ ಮಿಲಿ ಇರಲಿಲ್ಲ. ಹುಡುಗಿಯ ಚಹರೆಯನ್ನು, ತೊಟ್ಟಿದ್ದ ಬಟ್ಟೆ, ಅದರ ಬಣ್ಣ ಎಲ್ಲ ಹೇಳಿ ಮೈಕಿನಲ್ಲಿ ಅನೌನ್ಸ್ ಮಾಡಿಸಿದ ವಿಶ್ವ. ಆ ಅನೌನ್ಸ್‌ಮೆಂಟಿಗೆ ಯಾರಾದರೂ ಬರುತ್ತಾರಾ ಎಂದು ದುಗುಡದಿಂದ ಕಾದು ನಿಂತರು ವಿಶ್ವ ಮತ್ತು ಮಿಲಿಯ ತಂದೆ. ಅದಾದ ಹದಿನೈದು ನಿಮಿಷದಲ್ಲಿ ಒಬ್ಬಾತ ಮಿಲಿಯನ್ನು ಕರೆದುಕೊಂಡು ಬಂದ. ಮಿಲಿಯನ್ನು ನೋಡುತ್ತಲೇ ‘ಇವಳೇ ನಮ್ಮ ಹುಡುಗಿ’ ವಿಶ್ವ ಮತ್ತು ಮಿಲಿಯ ತಂದೆ ಆತುರದಿಂದ ಹೇಳಿದರು. ಮಿಲಿ ತಮ್ಮನ್ನು ನೋಡಿ ಅತ್ತು ರಂಪ ಮಾಡುತ್ತಾಳೇನೋ ಎಂದುಕೊಂಡಿದ್ದರೂ ಹಾಗೇನೂ ಆಗಲಿಲ್ಲ! ಮಿಲಿ ಬೆಲೂನನ್ನು ಒಂದು ಕೈಯಲ್ಲಿ ಭದ್ರವಾಗಿ ಹಿಡಿದುಕೊಂಡಿದ್ದಳು, ತುಟಿ ಮತ್ತು ಬಾಯಿಯ ಸುತ್ತ ಚಾಕೊಲೇಟ್ ತಿಂದ ಗುರುತಿತ್ತು. ಆಕೆ ಎಲ್ಲಿದ್ದಳು, ತಾನು ಅವಳನ್ನು ಹೇಗೆ ಕರೆದುಕೊಂಡು ಬಂದೆ ಎಂದು ಮಿಲಿಯನ್ನು ಕರೆದುಕೊಂಡು ಬಂದಾತ ಪೋಲೀಸರಿಗೆ ವಿವರಿಸಿದ.  ಪೋಲೀಸರಿಗೆ ಮತ್ತು ಮಿಲಿಯನ್ನು ಕರೆದುಕೊಂಡು ಬಂದವನಿಗೆ ವಿಶ್ವ ಧನ್ಯವಾದಗಳನ್ನು ಹೇಳಿ, ಹೊರಡುವಾಗ, ಠಾಣೆಯ ಸಿಬ್ಬಂದಿ,  ‘ಅವನ ಕೈಗೇನಾದ್ರು ಕೊಡಿ ಸಾರ್..ಪಾಪ ಕರ್ಕೊಂಡು ಬಂದವ್ನೆ’ ಎಂದರು.  

ಮರು ಮಾತಾಡಾದೆ ವಿಶ್ವ ನೂರರ ನೋಟೊಂದನ್ನು ಕೊಡಲು ಹೋದ. ಅವನು ಸಾಲಲಿಲ್ಲ ಎಂಬಂತೆ ತಲೆ ಕೆರೆದುಕೊಂಡ. ಇನ್ನೊಂದು ನೋಟು ಸೇರಿಸಿ ಕೊಟ್ಟು ವಿಶ್ವ ಅವನ ಮುಖ ನೋಡಿದ. ಅವನನ್ನೆಲ್ಲೋ ನೋಡಿದಂತೆ ಭಾಸವಾಯಿತು. ಅದರೆ ಎಲ್ಲಿ ಎಂದು ಹೊಳೆಯಲಿಲ್ಲ. ಸಧ್ಯ ಮಿಲಿ ಸಿಕ್ಕಳಲ್ಲ ಎಂಬ ನೆಮ್ಮದಿಯೊಂದಿಗೆ ಹಿಂತಿರುಗಿದರು! ಎಕ್ಸಿಬಿಷನ್ನು ನೋಡುವುದಿನ್ನೂ ಬಾಕಿಯಿತ್ತು. ಆದರೆ ಎಲ್ಲರಿಗೂ ಮೂಡ್ ‘ಆಫ್’ ಅಗಿತ್ತು! ‘ವಾಪಸ್ಸು ಹೋಗೋಣ’ ಎಲ್ಲ ಒಕ್ಕೊರೊಲಿನಿಂದ ಹೇಳಿದರು!   ಆ ಜನಪ್ರವಾಹನ್ನು ಈಜಿ ಕಾರ್ ಸ್ಟ್ಯಾಂಡು ತಲುಪಿದಾಗ ಯುದ್ದ ಗೆದ್ದ ಭಾವನೆ ವಿಶ್ವನಿಗೆ!
ಕಾರು ಹತ್ತುವಾಗ ವಿಶ್ವನಿಗೆ ತಟ್ಟನೆ ಹೊಳೆಯಿತು! ಮಿಲಿಯನ್ನು ಕರೆದುಕೊಂಡು ಬಂದವ ಬೇರಾರೂ ಅಲ್ಲ ಬೆಲೂನು ಮಾರಿದವನೇ! ಮಿಲಿ ಮಿಸ್ ಆಗಿದ್ದು, ಆಮೇಲೆ ಅನೌನ್ಸ್ ಮಾಡಿಸಿದ್ದು, ಅದಕ್ಕೆ ಪ್ರತಿಯಾಗಿ ಅವನು ಮಿಲಿಯನ್ನು ಕರೆದುಕೊಂಡು ಬಂದದ್ದು ಎಲ್ಲ್ಲಾ ನಾಟಕದಂತೆ ಕಂಡಿತು! ಆತ ತನಗೆ ದೊಡ್ಡ ಕ್ಯಾಡ್‌ಬರೀಸ್ ಚಾಕೊಲೇಟ್ ಕೊಡಿಸಿದ್ದರಿಂದ ತನಗೆ ಅಳು ಬರಲಿಲ್ಲವೆಂದು ಮಿಲಿ ಹೇಳಿದಾಗ ಅದೊಂದು ವ್ಯವಸ್ಥಿತವಾದ ‘ಅಡ್ಜಸ್ಟ್ಮೆಂಟ್’ ಕಾರ್ಯಕ್ರಮದಂತೆ ಕಂಡಿತು!  ತನ್ನ ಯೋಚನೆಯನ್ನು ಹೇಳಿದರೆ ಎಲ್ಲಿ ಇನ್ನು ಎಲ್ಲ ತಿರುಗಿ ತನ್ನ ಮೇಲೆ ಬೀಳುವರೋ ಎಂದು ಹೆದರಿ ಕಾರನ್ನು ಮನೆಯ ಕಡೆಗೆ ಚಾಲನೆ ಮಾಡಿದ. 

****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
vimi
vimi
9 years ago

super!!

1
0
Would love your thoughts, please comment.x
()
x