ಪ್ರಕಟಣೆ

ಹೆಗ್ಗಡಹಳ್ಳಿ ಮಕ್ಕಳಿಂದ “ನಿಮ್ಮ ಕಸ ನಿಮಗೆ” ಅಭಿಯಾನ.


‘ನಾಳೆಗಳು ನಮ್ಮದು” ಎಂಬ ಧ್ಯೇಯದೊಂದಿಗೆ ನಂಜನಗೂಡು ತಾಲೂಕಿನ ಹೆಗ್ಗಡಹಳ್ಳಿಯ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಕಳೆದ ವಾರ ನಡೆದ ಬಣ್ಣದಮೇಳದಲ್ಲಿ ಮಕ್ಕಳು ಅಪರೂಪದ ಅಭಿಯಾನವೊಂದನ್ನು ಆರಂಭಿಸಿದರು. ಬೇರೆ ಬೇರೆ ರುಚಿಯ ಅತ್ಯಾಕರ್ಷಕ ಮಕ್ಕಳ ತಿಂಡಿಗಳನ್ನು ದೇಶದಲ್ಲಿ ಹಲವಾರು ಕಂಪೆನಿಗಳು ಉತ್ಪಾದಿಸುತ್ತವೆ. ಸಣ್ಣ ಸಣ್ಣ ಹಳ್ಳಿಗಳಲ್ಲಿಯೂ ಇಂತಹ ಉತ್ಪನ್ನಗಳು ಸಿಗುತ್ತವೆ. ಆ ಉತ್ಪನ್ನಗಳನ್ನು ಬಣ್ಣ ಬಣ್ಣದ ಪ್ಲಾಸ್ಟಿಕ್ ಕವರುಗಳಲ್ಲಿ ತುಂಬಿ ಮಕ್ಕಳನ್ನು ಆಕರ್ಷಿಸಲಾಗುತ್ತದೆ.

ಹೆಗ್ಗಡಹಳ್ಳಿಯ ಮಕ್ಕಳು ಬಣ್ಣದಮೇಳದಲ್ಲಿ ಸೇರಿ ಈ ಕವರು ನಮ್ಮೂರಿಗೆ ಕಸವಾಗಿ ಹಾಗೆಯೇ ಉಳಿಯುತ್ತದೆ ಎಂಬುವುದನ್ನು ಬಣ್ಣದಮೇಳಕ್ಕೆ ಬಂದು ತಿಳಿದುಕೊಂಡರು. ಬೇರೆ ಬೇರೆ ತಜ್ಞರು ಪ್ಲಾಸ್ಟಿಕ್ ಇಂದ ಆಗುವ ಅನಾಹುತಗಳನ್ನು ತಿಳಿಸಿದ್ದರಿಂದ ಶಿಕ್ಷಕರ ಮಾರ್ಗದರ್ಶನದಲ್ಲಿ ಇಂದು ನಿಮ್ಮ ಕಸ ನಿಮಗೆ ಅಭಿಯಾನದ ಮೂಲಕ ನೆಸ್ಲೆ, ಬ್ರಿಟಾನಿಯಾ, ಪಾರ್ಲೆ, ಲೇಸ್, ಕುರ್ಕುರೆ, ಐಟಿಸಿ, ಹಲ್ದಿರಾಮ್ ಮುಂತಾದ ಪ್ರಖ್ಯಾತ ಕಂಪೆನಿಗಳಿಗೆ ಅವರದೇ ತಿಂಡಿಗಳ ಕವರುಗಳನ್ನು ಹೆಕ್ಕಿ ಲಕೋಟೆಯಲ್ಲಿಟ್ಟು, ಜತೆಯಲ್ಲಿ ‘ನಿಮ್ಮ ತಿಂಡಿಯಷ್ಟೇ ನಮಗೆ ಸಾಕು, ನಿಮ್ಮ ಕಸ ನೀವೇ ವಾಪಾಸು ಪಡೆದು ಮರುಬಳಕೆ ಮಾಡಿ, ಹೊಸ ಉತ್ಪಾದನೆ ಕಡಿಮೆ ಮಾಡಿ. ನಮ್ಮ ಸುಂದರ ನಾಳೆಯನ್ನು ಉಳಿಸಿಕೊಡಲು ಕೈಜೋಡಿಸಿ. ನಾವು ಯಾರಿಗೂ ಧಿಕ್ಕಾರ ಕೂಗುವುದಿಲ್ಲ ಎಂದು ತೊಂಬತ್ತಕ್ಕೂ ಹೆಚ್ಚು ಮಕ್ಕಳು ಸಹಿ ಮಾಡಿದ ಪತ್ರವನ್ನಿಟ್ಟು ಕೋರಿಯರ್ ಮಾಡಿದರು. ನಾಳೆಯ ಸುಂದರ ಪರಿಸರಕ್ಕಾಗಿ ಮಕ್ಕಳನ್ನು ಸಂಘಟಿಸುತ್ತಿರುವ ಸ್ವೀಡನ್ ದೇಶದ ಹದಿನಾರು ವರ್ಷದ ಗ್ರೇಟಾ ಟುನ್‍ಬರ್ಗ್ ಅವಳಿಂದ ಪ್ರೇರಣೆಗೊಂಡು ಈ ಅಭಿಯಾನವನ್ನು ಆರಂಭಿಸಲಾಯಿತು.

ತಾವು ನಡೆಸುತ್ತಿರುವ ಈ ಅಭಿಯಾನದ ಕುರಿತು ಮತ್ತು ನಮ್ಮ ನಾಳೆಗಳಿಗೆ ಪ್ಲಾಸ್ಟಿಕ್ ಕೊಳೆ ಬೇಡ, ಸುಂದರ ಪರಿಸರ ಉಳಿಸಿಕೊಡಿ ಎಂದು ರಾಜ್ಯದ ಮುಖ್ಯಮಂತ್ರಿಗಳಿಗೂ ಮಕ್ಕಳೆಲ್ಲ ಸಹಿ ಮಾಡಿ ಆಗ್ರಹಿಸಿ ಪತ್ರವನ್ನು ಬರೆದರು. ಪರಿಸರ ಜಾಗ್ರತಿಗಾಗಿ ಊರೊಳಗೆ ಘೋಷಣೆಗಳನ್ನು ಕೂಗುತ್ತಾ ಮರವಣಿಗೆಯಲ್ಲಿ ಸಾಗಿ ಊರಿನ ಬೀದಿಗಳಲ್ಲಿ ಪ್ಲಾಸ್ಟಿಕ್ ಕಸ ಹಾಕಲು ಕಸದ ಡಬ್ಬಿಗಳನ್ನು ಸ್ಥಾಪಿಸಿ ಎಂದು ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿಯನ್ನು ಮಾಡಿದರು. ಬಣ್ಣದಮೇಳದಲ್ಲಿ ಮಕ್ಕಳಿಗೆ ಪ್ಲಾಸ್ಟಿಕ್ ಮಾರಿ ಪರಿಸರಕ್ಕೆ ಮತ್ತು ವನ್ಯಜೀವಿಗಳಿಗೆ ಎಷ್ಟು ಮಾರಕ ಹಾಗೂ ಕಾಳ್ಗಿಚ್ಚುಗಳ ಬಗ್ಗೆ ತಿಳಿಸಿಕೊಡಲು ಬಂದಿದ್ದ ಬಂಡೀಪುರದ ಪರಿಸರ ಕಾರ್ಯಕರ್ತ ಶ್ರೀಕಂಠ ಹಾಗೂ ಕಾರ್ತಿಕ್ ಅಲ್ಲದೆ ಶಾಲೆಯ ನಾಟಗದ ಮೇಷ್ಟ್ರು ಸಂತೋಷ ಗುಡ್ಡಿಯಂಗಡಿ ಮಕ್ಕಳೊಂದಿಗೆ ಜತೆಯಾಗಿದ್ದರು.


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *