ಹೆಂಡತಿಯೊಬ್ಬಳು ಮನೆಯೊಳಗಿಲ್ಲದಿದ್ದರೆ: ಅಮರ್ ದೀಪ್ ಪಿ.ಎಸ್.

ಆಗಾಗ ಹೆಂಡತಿಯಾದವಳು ತವರಿಗೆ ಹೋಗಿ ಬರುತ್ತಿರಬೇಕು. ಮನೆಯ ದಿನನಿತ್ಯ ನಡೆಯುವ ಚಟುವಟಿಕೆಗಳಿಗೆ ಗಂಡನಾದವನು ಕಣ್ತೆರೆದಂತಾಗುತ್ತೆ. ಅಡುಗೆ ಕಸ, ಮುಸುರೆ, ದೇವರ ಪೂಜೆ, ಸಂಜೆ ಮುಂದೆ ದೀಪ ಹಚ್ಚುವುದು ಎಲ್ಲಾ ಕಡೆ ಗಮನ ಹರಿಸಿದಂತಾಗುತ್ತದೆ. ಹೆಂಡತಿ ಹೋದ ಮೊದ ಮೊದಲ ದಿನಗಳಲ್ಲಿ ಹುಮ್ಮಸ್ಸಿನ ಸ್ನಾನ,  ಸ್ನಾನದ ಮಧ್ಯೆ ಹಳೇ ಹಳೇ ನೆನಪುಗಳ ಹಾಡುಗಳು. ಹಳೆಯ ಹುಡುಗಿಯು ಹಲ್ಲು ಕಾಣದಂತೆ ನಕ್ಕ ನಗೆಯ ಪುಳಕ. ಹೊರ ಬರುತ್ತಿದ್ದಂತೆಯೇ ರಜೆಯನ್ನು ಎಲ್ಲಿ ಹೇಗೆ ಆಚರಿಸುವುದು? ಯಾರು ಜೊತೆಯಿರಬೇಕು? ಯಾರಿಗೆ ಫೋನು ಮಾಡಬೇಕು? ಬರೀ ಇವೇ ಲೆಕ್ಕಾಚಾರ. ಹೆಂಡತಿ ತವರು ಸುಮಾರು ದೂರ ಇದ್ದರಂತೂ ಒಮ್ಮೆ ಬಸ್ಸೋ ರೈಲೋ ಹತ್ತಿಸಿ ಬಂದರೆ ಅಥವಾ ಜೊತೆಗೇ ಹೋಗಿ ಬಿಟ್ಟು ಬಂದರೆ, ತಿರುಗಿ ಬರುವವರೆಗೆ  ಮದುವೆಯಾದ ಗಂಡಸರಿಗೆ …. ಒಂದೇ ಲಹರಿ ಆಹಾ….   "ಪೆಳ್ಳಾಂ ಊರೆಳ್ಳಿತೇ" (ಹೆಂಡತಿ ಊರಿಗೆ ಹೋದರೆ? ) ಅನ್ನುತ್ತಲ್ಲೇ ಒಳಗೊಳಗೇ ಖುಷಿಯಾಗಿರುತ್ತಾರೆ. ಇದು ಹೊಸದಾಗಿ ಮದುವೆ ಆದವರ ಸಂಗತಿಯಲ್ಲ. ಎಲ್ಲಾ ಗಂಡಸರ ಅಭ್ಯಾಸವೂ ಅಲ್ಲ. ಕೆಲವೇ ಕೆಲವರಲ್ಲಿ ಮದುವೆ ಆಗಿ ವರ್ಷವೋ ಎರಡು ವರ್ಷವೋ ಅದವರದು ಮತ್ತು ಇನ್ನು ಮಕ್ಕಳಾಗದೇ ಇರುವವರದು. ಒಂದಿಷ್ಟು ದಿನ ಅಷ್ಟೇ. ತಿರುಗಿ ಹೆಂಡತಿ ವಾಪಾಸು ಬಂದು ನೋಡಿದಾಗ ಮನೆ ಅನ್ನುವುದು ತಿಪ್ಪೆ ತರಹ ಇರುತ್ತೆ. 

ಹೆಂಡತಿ ಇದ್ದಾಗ ಮನೆ ಡ್ಯೂಟಿ, ಸಂಜೆ ವಾಕು, ಬೆಳಗಿನ ಬೆಡ್ ಕಾಫಿ, ನಡುವೆ ಎಣಿಸಿ ಪೊಣಿಸುವ "ಮುತ್ತು"ಗಳು. ಹೆಂಡತಿಯ ಪೊಸೆಸಿವ್ ನೆಸ್. ಸಣ್ಣ ಪುಟ್ಟ ಜಗಳ, ಒಂದರ್ಧ ಗಂಟೆಯಲ್ಲೇ ರಾಜಿ ಕಬೂಲಿ. ಮಾತು ಮಾತುಗಳ ಮಧ್ಯೆ ಗೇಲಿ. ಇಬ್ಬರ ಅಮ್ಮ ಅಪ್ಪ ದೂರದೂರಿನಲ್ಲಿ. ದಿನಕ್ಕೊಮ್ಮೆ 'ಹಲೋ". ಗಂಡಸರು ಭಲೇ ಪಂಕ್ಚುವಲ್ ಆಗಿರ್ತಾರೆ, ಹೆಂಡತಿ ಮನೆಯಲ್ಲಿದ್ದರೆ.  ಈ ಮಧ್ಯೆ ಸ್ನೇಹಿತರು "ಲೇ ಬಡ್ಡಿಮಗನೇ, ನಿಂಗೆ ಮದ್ವಿ ಮಾಡಿದ್ವಿ ಮಾಡಿದ್ವಿ ಕೈಗೆ ಸಿಗ್ವಲ್ಯಲ್ಲಲೇ" ಅನ್ನುವವರೇ, "ಮದುವೆ"  ಆಗದ ಹುಡುಗರು ಮತ್ತು ಅವರವರ ಹೆಂಡತಿಯರೂ ತವರಿಗೆ ಹೋದ ದಿನವನ್ನು ಸೆಲಬ್ರೆಟ್ ಮಾಡುವ ಇವನಂತೆ ಮದುವೆ ಆದವರು. ಇನ್ನು ಹೆಂಡತಿ ಊರಲ್ಲಿಲ್ಲ ಅಂದಮೇಲೆ ಕೇಳಬೇಕೇ? " ಏನ್ಲಾ, ಯಾವಾಗ್ ಸಿಕ್ತಿ ಕೈಗೆ? ಅನ್ನೋರೆ ಹೆಚ್ಚು. ಸಿಕ್ಕಿದ್ನಾ? ಮುಗೀತು ಆ ದಿನ ಸಂಜೆ "ರಂಗೆರಿದಂತೆಯೇ" ಲೆಕ್ಕ. 
 
ಈಗ್ಗೆ ಕೆಲ ವರ್ಷಗಳ ಹಿಂದೆ ನನಗೆ ಗೊತ್ತಿದ್ದ ಗೆಳೆಯನ ಮನೆಯಲ್ಲಿ ನಡೆದ ಒಂದು ಪ್ರಸಂಗ ಹೇಳ ಬೇಕಿನಿಸಿತು. ಅದನ್ನೇ ಹೇಳೋದಿಕ್ಕೆ ಇಷ್ಟೆಲ್ಲಾ ಪೀಠಿಕೆ ಹಾಕಬೇಕಾಯಿತು. ನಮ್ಮ  ಮನೆ ಹತ್ತಿರ ಬರೀ ಗಂಡ ಹೆಂಡತಿ ಇರುವಂಥ ಒಂದು ಮನೆ ಇತ್ತು. ಮೂಲತಃ ಆಂಧ್ರದ ಕಡೆಯವರು. ಮಾತೃ ಭಾಷೆ ತೆಲುಗು.  ನಾನು ಯಾರಿಗೂ ಗೊತ್ತಿಲ್ಲದಂತೆ ಅವರಿಬ್ಬರಿಗೆ ಹೆಸರಿಟ್ಟಿದ್ದು; ಗಂಡನಿಗೆ ಕುಮ್ಮಿ ಹೆಂಡತಿಗೆ ಪಮ್ಮಿ ಅಂತ. ನಾವು ಬಳ್ಳಾರಿಯಲ್ಲಿ ಇದ್ದು ಬಂದವರಾದ್ದರಿಂದ ತೆಲುಗು "ಮನಕೂ ತೆಲುಸು"(ನಮಗೂ ಗೊತ್ತು ). ಅದು ಆ ದಂಪತಿಗೆ ಗೊತ್ತಿಲ್ಲ.  ಅವರು ಅಡುಗೆ ಮನೆಯಲ್ಲಿ ಗುಸು ಗುಸು ಮಾಡಿದರೆ,  ತಮ್ಮ ಮನೆಯ ಹಾಲ್ ನಲ್ಲಿ ನಿಂತು ಮಾತಾಡಿದರೆ ನಮ್ಮ ಮನೆಯ ನಡುವಿನ ಕೋಣೆಗೆ ಅಪ್ಪಳಿಸುತ್ತುತ್ತು. ಹಂಗಾಗಿ ಅವರದು ಸಿಕ್ರೇಟ್ ವಿಷ್ಯಗಳೇನಿದ್ದರೂ ಅವರ ಬೆಡ್ ರೂಮಿನಲ್ಲೇ ಇರುತ್ತಿದ್ದವು. ಪ್ರತಿದಿನ ಎದ್ದ ಕೂಡಲೇ ಒಂದಿಲ್ಲೊಂದು ಪ್ರಸಂಗಗಳು ನಮ್ಮ ಕಿವಿಗಳಿಗೆ ಬೀಳುತ್ತಲೇ ಇದ್ದವು. ಅದೆಲ್ಲಾ ಮಾಮೂಲಾ ಗಿತ್ತು. ಆಮೇಲೆ ತೆಲುಗು ದಂಪತಿ ನಮಗೆ ತೆಲುಗು ಭಾಷೆ ಅರ್ಥವಾಗುವ ಸಂಗತಿ ಗೊತ್ತು ಮಾಡಿ ಕೊಂಡರು, ಅದೂ ಒಂದು ಬೆಕ್ಕಿನಿಂದ. ಆ ಬೆಕ್ಕಿನ ಸಲುವಾಗಿ ನಡೆದ ಪಮ್ಮಿ ಕುಮ್ಮಿಯಾ "ಗಲಾಟೆ ಸಂಸಾರ" ಕಾಮಿಡಿ ಷೋ ದಿಂದ. ಯಾಕೆಂದ್ರೆ ಒಂದೇ ಬೆಕ್ಕು ಅಕ್ಕಪಕ್ಕ ಇದ್ದ ನಮ್ಮ ಮನೆಗಳಲ್ಲಿ ಸಪ್ಪಳವಿಲ್ಲದೇ ಹಾಲು ಕುಡಿಯುವುದು, ಅಡುಗೆ ಮನೆಯ ಸಾಮಾನುಗಳನ್ನು ಬೀಳಿಸುವುದು ಮಾಡುತ್ತಿತ್ತು. ಎಷ್ಟು ಕಾವಲಿದ್ದರೂ ಎಲ್ಲಿಂದಲೋ ಒಳನುಗ್ಗಿ ತನ್ನ ಕೆಲಸ ಮಾಡುವುದು ತಪ್ಪಿದ್ದಿಲ್ಲ. 

ಆ ದಿನ ಪಮ್ಮಿ ತನ್ನ ತವರಿಂದ ಫೋನು ಬಂತೆಂದು ಊರಿಗೆ ಹೊರಡಲು ರೆಡಿಯಾದಳು. ಅಷ್ಟೆಲ್ಲಾ ಜಗಳ, ಮುನಿಸು, ಇದ್ದರೂ ಗಂಡನೆಂದರೆ ಮುದ್ದು ಆಕೆಗೆ. ಹೋಗುವಾಗ ಹಾಲು, ಮೊಸರು, ತರಕಾರಿ, ಪಲ್ಯ ಚಟ್ನಿ, ( ಫ್ರಿಡ್ಜ್ ) ತಂಗಳ ಪೆಟ್ಟಿಗೆ ಯಲ್ಲಿ ಇಡಲು ಕುಮ್ಮಿಗೆ ತಾಕೀತು ಮಾಡಿ  ಹೊತ್ತೊತ್ತಿಗೆ ಊಟ ಮಾಡಲು ಹೇಳಿ ರೈಲ್ವೆ ಸ್ಟೇಷನ್ ಗೆ ಡ್ರಾಪ್ ತೆಗೆದುಕೊಂಡು ಹೊರಟಳು. ಇತ್ತ ಮನೆಗೆ ಬಂದ ಕುಮ್ಮಿ ಮನೆಯಲ್ಲಿ ಟಿ. ವಿ ಹಚ್ಚಿ ಕುಳಿತ. ಮೊದಲೇ ಹೆಂಡತಿ ಇಲ್ಲದ ಖುಷಿ ಬೇರೆ. ಯಾವುದೋ ಚಾನಲ್ ನಲ್ಲಿ ಬಂದ ಸಿನಿಮಾ ನೋಡುತ್ತಿದ್ದ. ಮಧ್ಯಾಹ್ನ ಊಟ ಮಾಡಿದ. ಗಡದ್ದಾಗಿ ಬಿಸಿಲ ಝಳ ಇಳಿಯುವವರೆಗೆ ನಿದ್ದೆ ಹೊಡೆದು ಸಂಜೆ ಆಗುತ್ತಿದ್ದಂತೆಯೇ ಗೆಳೆಯರಿಗೆ ಒಂದು ಕಾಲ್ ಮಾಡಿ ಹೊರಟ. 

"ಶರಾಬ್ ಚೀಜ್ ಹಿ ಐಸೀ ಹೈ  ನ ಚೋಡಿ  ಜಾಯೆ …… ಏ ಮೇರಿ ಯಾರ್ ಕಿ ಜೈಸಿ ಹೇ … ನಾ ಚೋಡಿ ಜಾಯೆ ….."  ಆಹಾ … ಪಂಕಜ್ ಉಧಾಸ್ ಅವರ ಗಜಲ್ ಮೊಳಗುತ್ತಿತ್ತು, ಊರ ಹೊರಗಿನ "ಗಾರ್ಡನ್" ರೆಸ್ಟುರಾಂಟ್ ನಲ್ಲಿ. ಗೆಳೆಯನೊಬ್ಬ ಎರಡು ಕಪ್ಪು ಮೊಸರು, ನೆನೆಗಡ್ಲೆ ತರಲು ಹೇಳಿ ದಾಗಲೇ ಕುಮ್ಮಿಗೆ ನೆನಪಾಗಿದ್ದು, ತಾನು ಹಾಲು ಮೊಸರು ಪಪ್ಪು (ಗಟ್ಟಿ ಬೇಳೆ,ಸೊಪ್ಪಿನ ಪಲ್ಯ), ತಂಗಳ ಪೆಟ್ಟಿಗೆಯಲ್ಲಿಡದೇ ಎಲ್ಲ ಗ್ಯಾಸ್ ಕಟ್ಟೆ ಮೇಲೆ ಹಾಗೆ ಬಿಟ್ಟಿದ್ದು. ಇನ್ನೊಬ್ಬ ಗೆಳೆಯ ಕೂಗಿದ ನೆಂಬ ಕಾರಣಕ್ಕೆ ಅದೂ ಮರೆತು ಹೋಯಿತು.  ಸರಿ, ಸೇರಿದ್ದ ಗೆಳೆಯರಲ್ಲಿ ಒಬ್ಬೊಬ್ಬನದೂ ಒಂದು ವೈಶಿಷ್ಯ. ಒಬ್ಬನಿಗೆ ಹಾಡು ಮತ್ತೊಬ್ಬನಿಗೆ ಅಡುಗೆ, ಇನ್ನೊಬ್ಬನಿಗೆ ತನ್ನ ಹೆಂಡತಿಯ ಗನ್ ಶಾಟ್ ವಾರ್ನಿಂಗು, ಹೀಗೆ ಬಗೆ ಬಗೆಯ ಹಾಬಿಗಳು, ಫೋಬಿಯಾಗಳು.  ಅಹಾ… ಅಂತೂ ಶುರುವಾಯಿತು ಮೇಳ.   ಊಟಕ್ಕೆ ಆರ್ಡರ್ ಕೊಡಬೇಕು, ಸಪ್ಪ್ಲೈರ್ ನನ್ನು ಕರೆದು ಚಿಕನ್, ಮಟನ್, ಫಿಶ್  ಮೂಳೆ ಮುಳ್ಳು ಇದ್ದದ್ದು ಇಲ್ಲದ್ದು ಹೀಗೆ ತಮಗೇನು ಬೇಕೋ ಹೇಳಿದರು.  ಇದ್ದನಲ್ಲ ಅಡುಗೆ ಪ್ರಿಯ? ಅವನಂದ, "ನೋಡಪಾ,  ಎಲ್ಲಾ ಸರಿ, ಅಡುಗೆಗೆ ಮಾತ್ರ ಟೇಸ್ಟಿ ಇರಬೇಕು, ಅದು ಇದು ಹೇಳುತ್ತಿದ್ದ . ಅಷ್ಟರಲ್ಲಿ ಸಪ್ಲೈಯರ್ "ಸರ್ರ, ಖಾರ, ಮೀಡಿಯಮ್ಮೋ, ಸ್ಟ್ರಾಂಗೋ, ಅಥ್ವಾ ಕಡಿಮೇನಾ" ಅಂದ.   ಮೊದಲೇ ನಮ್ ಕಡೆ, ಭಾಷೆ ಒಗರಾಗಿರುತ್ತದೆ. ಬಯಲು ಶೌಚದ ಮಂದಿ ಬೇರೆ. ಸರ್ಕಾರದವರು "ವಿಜಿಲ್ ಅಭಿಯಾನ " ಆರಂಭಿಸಿ ಚೊಂಬು ಹಿಡಿದು ಹೊಂಟವರನ್ನು ಪೀಪಿ ಊದಿ ರೆಡ್ ಹ್ಯಾಂಡ್ ಆಗಿ ಹಿಡಿದು "ಮಹಾ ಜನಗಳೇ, ಮನೆ ಮುಂದೆ ಶೌಚಾಲಯ ಕಟ್ಟಿಸಿಕೊಳ್ಳಿ ಸರ್ಕಾರದಿಂದ ಧನ ಸಹಾಯ ನೀಡ್ತೀವಿ" ಅಂದ್ರೂ ಕೇಳೋದಿಲ್ಲ. ಅಂಥಾದ್ದರಲ್ಲಿ ಅಡುಗೆ ಪ್ರಿಯ ಗೆಳೆಯ "ನೋಡಪಾ, ಬೆಳಿಗ್ಗೆ ಎದ್ ಕೂಡ್ಲೇ ಹಂದಿಗಳು ನಮ್ ಹೆಸ್ರು ಹೇಳ್ಕಂಡು ಒದರ್ಯಾಡಿಕೊಂತ ಓಣಿ ತುಂಬಾ ಅಡ್ಡ್ಯಾಡದಂಗ ಇದ್ರೆ ಸಾಕ್ ನೋಡು" ಅಂದುಬಿಟ್ಟ. ಈ ಭಾಗದವನಲ್ಲದ ಸಪ್ಲೈಯರ್ ಸುಸ್ತೋ ಸುಸ್ತು….. 

ಊಟ ಆದ ನಂತರ ರಾತ್ರಿ ಹನ್ನೊಂದು ಗಂಟೆಯಾಗಿತ್ತೇನೋ.  ಕುಮ್ಮಿ ಗೆಳೆಯರಲ್ಲೇ ಇದ್ದನಲ್ಲ? ಗನ್ ಶಾಟ್ ವಾರ್ನಿಂಗ್ ಹೆಂಡತಿಯ ಗಂಡ?…. ಅವನಿಗೆ ಹೆಂಡತಿಯ ಕರೆ ಬಂದದ್ದೇ ತಡ. ಹಗುರಕ್ಕೆ ಫೋನೆತ್ತಿಕೊಂಡವನು, ಮೆಲ್ಲನೇ ಗಾರ್ಡನ್ ನಿಂದಲೇ ಜಾಗ ಖಾಲಿ ಮಾಡಿದ. ಇದ್ದ ನಾಲ್ಕೈದು ಮಂದಿಯಲ್ಲಿ  "ಹಾಡುವವನದು ಇನ್ನೂ ಹಾಡೇ ಮುಗಿದಿದ್ದಿಲ್ಲ. ಆಗಲೇ ಕುಮ್ಮಿ ಘಂಟಸಾಲ ಅವರು ಹಾಡಿದ ಹಳೆಯ ತೆಲುಗು ಪ್ಯಾಥೋ ಸಾಂಗು "ಮನಸು ಗತಿ ಇಂತೇ… ಮನಿಷಿ ಗತಿ ಇಂತೇ ಮನಸುನ್ನ ಮನಿಷಿಕಿ ಸುಖಮು ಲೇದಂಟೆ……….. " (ಮನಸಿನ ಗತಿ ಇಷ್ಟೇ, ಮನುಷ್ಯನ ಗತಿಯೂ ಇಷ್ಟೇ ಮನಸಿರುವ ಮನುಷ್ಯನಿಗೆ ಸುಖವೇ ಇಲ್ಲದಿದ್ದರೆ ? ಅನ್ನುವ ಅರ್ಥದ ಹಾಡು ) ಹಾಡಿದ ನೋಡಿ? ಮದುವೆ ಆಗದ ಒಂದಿಬ್ಬರೂ "ಲೇ ಇನ್ನೊಂದ್ ನಾಲ್ಕೈದು ವರ್ಷ ಮದುವೆ ಬಗ್ಗೆ ಆಸೆ ಬರದಂಗೆ ಮಾಡಬ್ಯಾಡಲೇ" ಅಂದವರೇ ಎದ್ದು ಮನೆಗೆ ನಡೆದರು.  ಪಾಪ… ಕುಮ್ಮಿ ಮತ್ತಿಬ್ಬರು ಮದುವೆ ಆದವರು ಕೂಡ ಮನೆ ಸೇರಿದರು. 

ಬೆಳಿಗ್ಗೆ ಎದ್ದು ಕಣ್ಣು ಬಿಟ್ಟಿದ್ದಿಲ್ಲ.. ಆಗಲೇ ಮನೆ ಕಾಲಿಂಗ್ ಬೆಲ್ ಒದರುತ್ತಿತ್ತು.  ಕುಮ್ಮಿ ನಿದ್ದೆ ಮಬ್ಬಿನಲ್ಲೇ ಎದ್ದು ಬಾಗಿಲು ತೆರೆದ ತಕ್ಷಣ "ನಿಚ್ಚಳ"ವಾಗಿದ್ದ. ಯಾಕಂದ್ರೆ ಎದುರಿಗಿದ್ದದ್ದು ಪಮ್ಮಿ. ಒಳಗೆ ಕಾಲಿಡು ತ್ತಿದ್ದಂತೆಯೇ ಒಂಥರಾ ವಾಸನೆ. ಹೆಜ್ಜೆ ಇಡುತ್ತಲೇ ಜಾಸೂಸಿ ಕೆಲಸ ಆರಂಭಿಸಿದಳು. ಅಡುಗೆ ಮನೆ, ಹಾಲ್, ಬೆಡ್ ರೂಮು.. ಹೊರಗೆ ಬಟ್ಟೆ ತೊಳೆಯೋ ಜಾಗ, ಎಲ್ಲಾ ತಡಕಾಡಿದಳು. 

"ಬರ್ತೀನಂತಾ ಒಂದೇ ಒಂದ್ ಫೋನ್ ಇಲ್ಲ?" ಕುಮ್ಮಿ ಕೇಳಿದ. 

ಆಕೆಗೆ ವಾಸನೆ ಚಿಂತೆ… 

"ನಿನ್ನೇದಾ?" ಅವನದು ಅನುಮಾನ. 

ಆಕೆಗೆ "ಅವನ ನಿನ್ನೆಯ ವಾಸನೆಗಿಂತ ಹೆಚ್ಹಾಗಿ " ಬೇರೆಯದೇ ವಾಸನೆ ಬರುತ್ತಿತ್ತು.  ಅಡುಗೆ ಮನೆ ನೋಡಿದವಳೇ ದುಸುಮುಸು ಶುರು ಮಾಡಿದಳು. "ನಿನ್ನೆ ನಿಂಗೆ ಹೇಳಿದ್ದಿಲ್ಲ? ಎಲ್ಲಾ ಫ್ರಿಡ್ಜ್ ನಲ್ಲಿ ಎತ್ತಿಡು ಅಂತ, ನೋಡಿಲ್ಲಿ ಬೆಕ್ಕು ಹಾಲು, ಮೊಸರು ಕುಡಿದು ಹೋಗಿದೆ".  ಆದರೂ ಆಕೆಗೆ ವಾಸನೆದೇ ಚಿಂತೆ. ಹಾಲ್ ನಲ್ಲಿ ಬಂದು ನೋಡಿದಳು ಪತ್ತೆಯಾಗಲಿಲ್ಲ. ಬೆಡ್ ರೂಮಿಗೆ ಕಾಲಿಟ್ಟಳು. ಪತ್ತೆ ಯಾಯಿತು ನೋಡಿ. ಕಳ್ಳ ಬೆಕ್ಕು ತೆರೆದ  ಕಪಾಟಿನಲ್ಲಿದ್ದ ತನ್ನ ರೇಷಿಮೆ ಸೀರೆ ಮೇಲೆಯೇ  ಕಕ್ಕ ಮಾಡಿ ಬಿಟ್ಟಿದೆ. ಎಲ್ಲಿಲ್ಲದ ಸಿಟ್ಟು ಬಂದು ಬಿಟ್ಟಿತ್ತು. ನಿದ್ದೆಗಣ್ಣಲ್ಲಿದ್ದ ಕುಮ್ಮಿಗೆ ಸಹಸ್ರ ನಾಮಾರ್ಚನೆ. ಚೆಂದಾಗಿ ಕಾಣಲೆಂದು ಸಣ್ಣದೊಂದು ಮಲ್ಲಿಗೆ ಹೂ ಕಿವಿ ಮೇಲೆ ಬೇರೆ. 

"ನಿನ್ನೆ ತಾನೇ ಹೋದವಳು ಒಂದು ಫೋನಿಲ್ಲ…. ಏನಿಲ್ಲ ಸಡನ್ನಾಗಿ ಬಂದದ್ದು ಯಾಕೆ?" ಕುಮ್ಮಿ ತಲೆಯಲ್ಲಿನ್ನೂ ಅದೇ ಪ್ರಶ್ನೆ ಇತ್ತು. ಅಷ್ಟರಲ್ಲೇ ಪಮ್ಮಿ ಆಗಲೇ ಕೈಯಲ್ಲಿ ಗಂಟೆ ಜಾಗಟೆ, ಗಂಧ, ಊದುಬತ್ತಿ, ಕುಂಕುಮ ಸಮೇತ ಪೂಜೆಗೆ ರೆಡಿಯಾಗಿದ್ದಳು. ಶುರುವಾಯಿತು ನೋಡಿ .. ಕಾಳಗ. 

"ಒಂದ್ ದಿನ ಮನೆಯಲ್ಲಿಲ್ಲಾಂದ್ರೆ ಅದೇನ್ ಕರ್ಮ ನೋಡಬೇಕಾಗಿ ಬರುತ್ತೋ, ನನ್ ಹಣೆಬರಹಕ್ಕೆ. ಹೋಗಿ ಹೋಗಿ ನಿನ್ನಂಥವನಿಗೆ ನಮ್ಮಪ್ಪ ನನ್ ಕೊಟ್ಟು ಬಿಟ್ಟ.  ಮೊದಲು ನೋಡಲು ಬಂದ  ವೈಜಾಕ್ ಕಡೆ ಹುಡುಗನಿಗೆ ಕೊಟ್ಟು ಮದ್ವಿ ಮಾಡಿದ್ರ ನಂಗೇ ಅಂತಾನೆ ಸಪರೇಟ್ ಆಗಿರುತ್ತಿದ್ದ ಮನೆಯಲ್ಲಿ, ಆಳು-ಕಾಳು ಜರ್ಪು, ಬಂಗಾರ, ದಿನಕ್ಕೊಂದು ನಮೂನೆ ಬಟ್ಟೆ, ಊಟ, ಜಾಗ ಅಂತ ತಿಂದು ಗಂಡನ್ನ ಜೊತೆ ತಿರುಗಾಡಬಹುದಿತ್ತು . ನನ್ ಕರ್ಮ, ಇಲ್ಲಿ ಬಂದ್ ಬೀಳೋದ್ ಹಣೇಲಿ ಬರೆದಿದೆ" ಪಮ್ಮಿ ನಾನ್ ಸ್ಟಾಪ್  ಆಗಿ ರುಬ್ಬುತ್ತಲೇ ಇದ್ದಳು. 

ಹಾ…. ನಾನು ಅಂದ್ಕಂಡಿದ್ದೆ "ಒಳ್ಳೆ ಹೆಂಡತಿ ಸಿಕ್ಕಿದರೆ ತಿರುಪ್ತಿ ತಿಮ್ಮಪ್ಪನಿಗೆ ಮುಡಿ ಕೊಟ್ಟು ಸಾಷ್ಟಾಂಗ ಹಾಕ್ತೀನಂತ,  ಅದ್ಕೆ ಮದುವೆ ಆಗಿ ಎರಡು ವರ್ಷ ಆಗಾಕ್ ಬಂದ್ರು ನಾನಿನ್ನು ತಿಮ್ಮಪ್ಪನ ಹೆಸ್ರು ಎತ್ತುತ್ತಿಲ್ಲ…." ಕುಮ್ಮಿ ಗುಮ್ಮುತ್ತಿದ್ದ. 

ಬೆಕ್ಕು ರೇಷಿಮೆ ಸೀರೆ ಮೇಲೆ ಕಕ್ಕ ಮಾಡಿದ್ದರ ವಿಷ್ಯ ಬಿಟ್ಟು ಬೇರೆಲ್ಲೋ ತಿರುಗುತ್ತಿತ್ತು. ಬಂದೆ ಬಂದೆ ಅನ್ನುತ್ತಲೇ ಪಮ್ಮಿ ಮತ್ತೆ ಬೆಕ್ಕಿನ ಸುದ್ದಿ ತೆಗೆದಳು.  "ಥೇಟ್ ನಿನ್ನಂಥದ ಪಡಪೋಶಿ ಪುಂಡ ಬೆಕ್ಕಾ ಇರಬೇಕ ನೋಡದು, ಅದ್ಕೆ ಹೆಂಗಸರು ಸೀರೆ ಮೇಲೆ ಕಕ್ಕ ಮಾಡಿಟ್ಟು ಹೋಗ್ಯೇತಿ" ಅಂತ ಪಮ್ಮಿ. ಬೆಡ್ ರೂಮಿಗೆ ಬರುತ್ತಲೇ ತನ್ನ ಕಣ್ಣಿಗೆ ಬಿದ್ದ ಪಂಜೆ ತೋರಿಸಿ,  "ಇಲ್ನೋಡು, ನಾನು ಮೊನ್ನೆ ದೀಪಾವಳಿ ಹಬ್ಬಕ್ಕ ತಂದ ಜರಿ ಪಂಜಿ ಮ್ಯಾಲೇನೂ ದರಿದ್ರದ್ದು ಬೆಕ್ಕು ಕಕ್ಕ ಮಾಡಿದೆ, ಗಂಡನ್ನ ಕಿಚಾಯಿಸಬೇಕೆಂದೇ ಹುಟ್ಟಿರೋ ನಿನ್ ಜಾತಿದೇ ಬೇಕ್ಕಿರಬೇಕದು" ಅನ್ನುತ್ತಾ ಕುಮ್ಮಿ.  ಇನ್ನೇನು ಬರೋಬ್ಬರಿ ಕಾಳಗ ಒಂದು ಹಂತಕ್ಕೆ ಬಂತು ಅನ್ನುವಾಗಲೇ ಕುಮ್ಮಿಯ  ತರಹೇವಾರಿ ಹಾಬಿಯ ಗೆಳೆಯರು ಅವರವರ ಪತ್ನಿಯರು ಬಂದು ಪಟ್ಟಾಂಗ ಹಾಕಿ ಕುಳಿತರು. ಮನೆ ಈಗ ಗ್ಯಾಸ್ ಆಫ್ ಮಾಡಿದ ಮೇಲೆ ವಿಜಿಲ್ ಊದಿದ ಕುಕ್ಕರ್ ನಂತೆ ವಾತಾವರಣ ಬುಸುಗುಡುತ್ತಿತ್ತು.  ನಂತರ  ನಡೆದ ಪಂಚಾಯಿತಿಯಲ್ಲಿ ತಪ್ಪಿತಸ್ಥ "ತೇಲುಗಣ್ಣುಗಳನ್ನು" ನಿಚ್ಚಳವಾಗುವಂತೆ ಜಡೆ ಮೇಳದವರು  "ತೊಳೆದರು"  ಎಂಬಲ್ಲಿಗೆ ಕುಮ್ಮಿ ಪಮ್ಮಿ ಯ ಅಂದಿನ ಲೈವ್ ಷೋ ಗೆ ತೆರೆ ಎಳೆದಾಗಿತ್ತು.  ಆದರೆ ಬೆಕ್ಕಿನ ವಿಚಾರ " ತೇಲುಗಣ್ಣ ತೊಳೆಯುವ" ಗಂಭೀರದಲ್ಲಿ ತಣ್ಣಗಾಗಿತ್ತು. ಆಕ್ಚುಯಲಿ, ಅದು ಕುಮ್ಮಿ ಪಮ್ಮಿ ಕಾಳಗಕ್ಕೆ ಪೀಠಿಕೆಯಾಗಿ ಮಾತ್ರ ಬಳಕೆಯಾಗಿತ್ತು.  

"ಮುಂದಿನ ಸಂಚಿಕೆಯಲ್ಲಿ ನೀವು ನಿರೀಕ್ಷಿಸುವ  ಪ್ರಸಂಗ ಯಾವುದು? ನಿಮ್ಮ ಉತ್ತರ ಬರೆದು ಕಳಿಸುವ ವಿಳಾಸ ಪೋಸ್ಟ್ ಬಾಕ್ಸ್ ಸಂಖ್ಯೆ ….. …."  ಹೀಗೆ ಕೇಳುವವರು ಯಾರೂ ಇದ್ದಿಲ್ಲ ವೆಂಬುದೇ ಸಮಾಧಾನದ ಸಂಗತಿ. 

ಕುಮ್ಮಿ ಅಂಡ್ ಕಂಪನಿ "ಪೆಳ್ಳಾಂ ಊರೆಳ್ಳಿತೇ" ಪ್ರಸಂಗವನ್ನು ಅಟ್ಲೀಸ್ಟ್ ಆ ದಿನದ ಮಟ್ಟಿಗೆ ಒಪ್ಪಿ ಕೊಂಡು ಕಾಲೇಜಿನಲ್ಲಿ ದೇಶದ ಹೊಸ ಮತದಾರರಾಗುವ ಯುವಕ/ಯುವತಿಯರನ್ನು ನಿಲ್ಲಿಸಿ "ಪ್ರಜಾಪ್ರಭುತ್ವದ ಸ್ವಾಸ್ಥ್ಯ ಕಾಪಾಡುವಲ್ಲಿ ಹಾಗೂ ಉತ್ತಮ ಆಡಳಿತ ನಡೆಸಿ ದೇಶದ ಸುಭದ್ರತೆ,  ಸೌಖ್ಯ, ಮತ್ತು ಪ್ರಜೆಗಳ ಹಿತ ಕಾಯುವ ನಾಯಕರನ್ನು ಆರಿಸಿ ಚುನಾಯಿಸಲು ಕಡ್ದಾಯವಾಗಿ ಮತ ಚಲಾಯಿಸುತ್ತೇವೆಂದು ಪ್ರಮಾಣ ಮಾಡ್ತಾರಲ್ಲ? ಅದೇ ಮಾದರಿಯಲ್ಲಿ "ನಾನು …….. …….  ….. ಇಲ್ಲವೆಂದು ಈ ದಿನ ಪ್ರಮಾಣ ಮಾಡುತ್ತೇನೆಂದರು. 

ಕುಮ್ಮಿ ಅಂಡ್ ಕಂಪನಿಯ ನಕರಾಗಳನ್ನೂ ರೆಡ್ ಹ್ಯಾಂಡ್ ಆಗಿ ಹಿಡಿಯಬೇಕಂತಲೇ ಪಮ್ಮಿ ಅಂಡ್ ಕಂಪನಿ ಪ್ಲಾನ್ ಮಾಡಿ "ತವರಿಗೆ ಹೋಗುವ" ಸಿಚ್ಯುವೇಶನ್ ಕ್ರಿಯೇಟ್ ಮಾಡಿದ್ದಾಗಿ ಆಮೇಲೆ ಅವರವರಲ್ಲಿ ಗೊತ್ತಾಯಿತೆನ್ನಿ.  ಇದನ್ನೆಲ್ಲಾ ಒಮ್ಮೆ ಹೆಪ್ಪಿಗೆ ಮೊಸರು ಕೇಳಲು ಬಂದಿದ್ದ ಪಮ್ಮಿ ನನ್ನ ಹೆಂಡತಿ ಎದುರಿಗೆ ಪಲುಕುತ್ತಿದ್ದಾಗ ಒಳಗಿದ್ದ ನನ್ನ ಕಿವಿಗೆ ತಗುಲಿದ್ದು.. ಅದಕ್ಕೂ ಮುಂಚೆ ಕುಮ್ಮಿ ಪಮ್ಮಿ ಶೋ ಲೈವ್  ಆಡಿಯೋ ಕೇಳಿದ್ದ ನನ್ನ ಹೆಂಡತಿ "ಮೀರು ಕಂಗಾರು ಪಡಕಂಡಿ .. ಅಂದರೂ ಇಂಟಿಲೋ ಚಿನ್ನಿ ಚಿನ್ನಿ ಗೊಡವಾಲು ಉಂಟಾಯಿ..(ನೀವು ಗಾಬರಿ ಆಗಬೇಡಿ ಎಲ್ಲರ ಮನೆಯಲ್ಲೂ ಸಣ್ಣ ಪುಟ್ಟ ಗೊಡವೆಗಳು ಇದ್ದದ್ದೇ )…… . " ಅಂದು ಪಮ್ಮಿಯನ್ನು ಸಾಗ ಹಾಕಿದ್ದಳು. 

ಇದಂತ ಚಪ್ಪಿನ ತರವಾತ ಮಾ ಪಕ್ಕಿಂಟಿವಾಲ್ಳು ಎಮನುಕುಂಟಾರೋ ಎಮೋ ಕಾನಿ ಮೀರು ಏಮೀ ಅನುಕೋಕಂಡಿ …. ಪ್ಲೀಸ್ … (ಇದನ್ನೆಲ್ಲಾ ಹೇಳಿದ ಮೇಲೆ ನಮ್  ಮನೆ ಪಕ್ಕಕ್ಕಿದ್ದವರು ಏನಂದು ಕೊಳ್ಳುತ್ತಾರೋ ಏನೋ ಆದ್ರೆ ನೀವೇನೂ ಅಂದುಕೊಳ್ಳಬೇಡಿ ಪ್ಲೀಸ್)…… 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
ganesh
ganesh
10 years ago

chennagide sir.  

C.M.Srinivasa
10 years ago

Its a good article sir.

 

From : C.M.Srinivasa, Typist, GVPP Govt.First Grade College,

           Hagaribommanahalli, Bellary (dist)

Kotraswamy M
Kotraswamy M
10 years ago

True and Funny!

3
0
Would love your thoughts, please comment.x
()
x