ಹೌದು! ಎಷ್ಟೋಬಾರಿ ಆತನ ಬಗ್ಗೆ ಬರೆದಿದ್ದೇನೆ. ಆದರೂ ಮತ್ತೇ ಮತ್ತೇ ಅವನ ವ್ಯಕ್ತಿತ್ವದ ಕುರಿತು ಬರೆಯಬೇಕೆನಿಸುತ್ತದೆ. ಅವನ ಬಗ್ಗೆ ಎಷ್ಟು ಬರೆದರೂ ಕಮ್ಮಿ ಅನಿಸಲು ಕಾರಣವೂ ಇದೆ. ಅವನ ಮತ್ತು ನನ್ನ ಸ್ನೇಹ-ಒಡನಾಟ ಹಾಗೇ ಇದೆ. ನಮ್ಮಿಬ್ಬರ ನಡುವೆ ಕೇವಲ ಸ್ನೇಹವಿದ್ದರೆ ಬಹುಶಃ ನಾನು ಅವನ ಕುರಿತು ಪದೆ ಪದೆ ಬರೆಯುತ್ತಿರಲಿಲ್ಲವೇನೋ? ಆದರೂ ಸ್ನೇಹಕ್ಕೂ ಮೀರಿದ ಅದ್ಯಾವುದೋ ಒಂದು ಶಕ್ತಿ ನಮ್ಮನ್ನು ಬೆಸೆದಿದೆ ಎನಿಸಿತ್ತದೆ. ಅದ್ಯಾವದೋ ಒಂದು ತಂತು ನಮ್ಮ ಮನಗಳಲ್ಲಿ ಸಮಾನವಾಗಿ ಮಿಡಿಯುತ್ತಿದೆ ಅನಿಸುತ್ತದೆ. ಅದಕ್ಕಾಗಿಯೇ ನಾವಿಬ್ಬರು ಸಮಾನ ಮನಸ್ಕರು, ಸಹೃದಯಿಗಳು ಆಗಿರಲು ಸಾದ್ಯವಿದೆ. ಹಾಗಾದಾರೆ ನಮ್ಮ ನಡುವಿನ ಆ ಶಕ್ತಿ ನಮ್ಮನ್ನಿಷ್ಟು ಆಳವಾಗಿ ಸ್ನೇಹ ಬಂಧನದಲ್ಲಿ ಕಟ್ಟಿಹಾಕಿದ ಆ ಸರಪಳಿ ಯಾವುದು?? ಎಂದು ಯೋಚಿಸಿದಾಗ ನನಗೆ ಸ್ಪಷ್ಟವಾಗಿ ಹೊಳೆಯುವ ಉತ್ತರ “ಸಾಹಿತ್ಯ”! ಹೃದಯವನ್ನು ಅರಳಿಸುವ ಸಾಹಿತ್ಯದಿಂದ ಸಕಲವೂ ಸಾದ್ಯ ಎಂದು ಬಲವಾಗಿ ನಂಬಿದವರಲ್ಲಿ ನಾನೂ ಒಬ್ಬ ವ್ಯಕ್ತಿತ್ವ ವಿಕಸನದ ಕುರಿತಾದ ನಿರಂತರ ಓದು, ಮನಕ್ಕೆ ಮುದ ನೀಡುವ ಸಾಹಿತ್ಯದ ಆರಾಧನೆ, ನೊಂದ ಮನಸ್ಸುಗಳಿಗೆ ನೆಮ್ಮದಿ ನೀಡುವ ಹೃದಯ ಸ್ಪರ್ಶಿ ಬರವಣಿಗೆಗಳಿಂದ ಮಾತ್ರ ಸುಂದರವಾದ ಸಮತಾ ಸಮಾಜ ನಿರ್ಮಾಣವಾಗಲು ಸಾದ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ನಿರಂತರ ಓದು ಹಾಗೂ ಸಾಹಿತ್ಯವೇ ನಮ್ಮನ್ನು ಒಂದುಗೂಡಿಸಿ ಬೆಳೆಸಿದೆ ಮತ್ತು ಮತ್ತೇ ಮತ್ತೇ ಒಂದಾಗಿರುವಂತೆ ಪ್ರೇರಪಿಸುತ್ತದೆ. ಪತಿ-ಪತ್ನಿಯರ ನಡುವೆ ಕೆಲವು ಅನಿವಾರ್ಯತೆಗಳು, ಜೀವನದ ಕೆಲವು ವಾಸ್ತವ ಸತ್ಯೆಗಳು ಬಂದು ಬಿನ್ನಾಪ್ರಾಯಗಳನ್ನು ಮೂಡಿಸಿ ಕೆಲವು ಕ್ಷಣಗಳವರೆಗೆ, ಕೆಲವು ದಿನಗಳವರೆಗೆ ಮಾತಾಡದಂತೆ, ಪರಸ್ಪರ ಮುಖವನ್ನು ನೋಡದಂತೆ ಅಗಲಿಸಿದರೂ ಒಳಗೊಳಗೆ ಆದಷ್ಟು ಬೇಗ ಒಂದಾಗುವ ತುಡಿತ ತೀವೃವಾಗಿಸುವ ಅಗೋಚರ ಶಕ್ತಿಯೇ ಪ್ರೇಮ.
ಈ ಅಗೋಚರ ಗುಪ್ತಗಾಮಿನಿಯಾಗಿ ಸಂಚರಿಸುವ ಪ್ರೇಮವೇ ಕೊನೆಗೂ ಅಗಲಿದ ದಂಪತಿಗಳನ್ನು ಒಂದುಗೊಡಿಸುತ್ತದೆ. ಇನ್ನಷ್ಟು ತೀವೃವಾಗಿ ಪ್ರೇಮಿಸುವಂತೆ ಮಾಡುತ್ತದೆ. ಹಾಗೆಯೇ ನಮ್ಮ ಮಧ್ಯ ಅದೆಷ್ಟೋ ಬಾರಿ ಭಿನ್ನಾಭಿಪ್ರಾಯಗಳು ಮೂಡಿದರೂ ಮತ್ತೇ ಮತ್ತೇ ಒಂದುಗೂಡಿಸಿದ್ದು ಮಾತ್ರ ಈ ಸಾಹಿತ್ಯವೇ ಎಂದರೆ ತಪ್ಪಲ್ಲ, ಒಮ್ಮೆ….. ಕೆಲ ದಿನಗಳವರೆಗೆ ನಾವೂ ಮಾತು ಬಿಟ್ಟಿದ್ದೇವೆ. ಕಾರಣಗಳನ್ನು ಹುಡುಕಾಡುತ್ತ ಹೋದರೆ ವಿನಾಕಾರಣವೇ ಎನಿಸಿಬಿಡುತ್ತದೆ ಇಂದು, ಅವು ಬದುಕಿನ ಆ ಕ್ಷಣದಲ್ಲಿ ಮಿಂಚಿದ ಆಕಸ್ಮಿಕಗಳಷ್ಟೇ ಎನ್ನಬಹುದು ಆದರೆ ಕೊನೆಗೆ ಸೇರಿದ್ದು ಮಾತ್ರ ಈ ಸಾಹಿತ್ಯ ಕಾರಣವೇ! ಪ್ರೇಮಕ್ಕೂ ಮೀರಿದ ಶಕ್ತಿ ಈ ಸಾಹಿತ್ಯಕ್ಕೆ ಇದೆ ಎಂದರೆ ಅತಿಶಯೋಕ್ತಿಯಲ್ಲ, ಪ್ರೇಮ ಮತ್ತು ಸಾಹಿತ್ಯ ಎರಡೂ ಅಗಲಿದ ಜೀವಿಗಳನ್ನು ಒಂದಾಗಿಸುವ, ಭಗ್ನ ಹೃದಯಗಳನ್ನು ಪುನಃ ಕಟ್ಟುವ ಕಾರ್ಯ ಮಾಡುತ್ತವೆ ಎಂದು ಹೇಳಬಹುದು, ನಾವಿಬ್ಬರೂ ಸಾಹಿತ್ಯ ಪ್ರೇಮಿಗಳು, ಸಾಹಿತಿಗಳು, ಸಾಹಿತ್ಯದಿಂದಲೇ ನಮ್ಮಿಬ್ಬರ ಸ್ನೇಹ ಕೂಡ ಶುರುವಾಗಿ ಇಷ್ಟೊಂದು ಆತ್ಮೀಯ ಸ್ನೇಹಿತರಾಗಿದ್ದೇವೆ ಎನ್ನುವದನ್ನು ಮರೆಯುವಂತಿಲ್ಲ.
ನಾನಾಗ ಗೋಕಾಕದ ಪ್ರತಿಷ್ಠಿತ ಜೆ.ಎಸ್.ಎಸ್. ಕಾಲೇಜಿನಲ್ಲಿ ಓದುತ್ತಿದ್ದೆ. ವಿದ್ಯಾರ್ಥಿ ಸಂಘಟನೆಯಲ್ಲಿ ಬಹು ಪ್ರಮುಖ ಪಾತ್ರವಹಿಸಿದ್ದೆ ಎ.ಐ.ಎಸ್.ಎಫ್. ರಾಜ್ಯ ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸುವ ಮೂಲಕ ಈ ಭಾಗದ ಎಲ್ಲ ಜನಪರ ಚಳುವಳಿಗಳಲ್ಲಿ ಭಾಗವಹಿಸುತ್ತಿದ್ದೆ. ಹಿರಿಯ ರಾಜಕೀಯ ನಾಯಕರೂ ಮತ್ತು ದಿಟ್ಟ ಪತ್ರಕರ್ತರಾದ ದಿವಂಗತ ಬಿ.ಎನ್.ಧಾರವಾಡಕರ, ಕ್ರಾಂತಿಕಾರಿ ಕವಿ ಜಿ.ಕೆ. ಬಡಿಗೇರ, ಜನಪ್ರಿಯ ರಾಜ್ಯ ವಿದ್ಯಾರ್ಥಿನಾಯಕರೂ, ಜನಪರ ಹೋರಾಟಗಾರರೂ, ಪ್ರಗತಿಶೀಲ ವಿಚಾರ ಸರಣಿಯ ಜನಪರ ಕವಿಗಳೂ ಆದ ಡಾ|| ಸಿದ್ದನಗೌಡ ಪಾಟೀಲ ಕವಿ,ಪತ್ರಕರ್ತ ಸಲೀಮ ಧಾರವಾಡಕರ (ಸಲೀಮ-ಭಾರತಿ) ಸೇರಿದಂತೆ ಇನ್ನೂ ಅನೇಕ ಹಿರಿಯ ಜೀವಗಳು ನನಗೆ ಮಾರ್ಗದರ್ಶನಕರಾಗಿದ್ದರು ಕನ್ನಡ ಪ್ರಧಾನ ವಿಷಯಯವನ್ನಾಗಿ ತೆಗೆದುಕೊಂಡು ಬಿ.ಎ. ಓದುತ್ತಿದ್ದ ನನಗೆ ಪ್ರೋ|| ಚಂದ್ರಶೇಖರ ಅಕ್ಕಿ, ಜಿ.ವ್ಹಿ. ಮಳಗಿ, ಸಿ.ಕೆ. ನಾವಲಗಿ, ದಾನಗೌಡ್ರು ಹಾಗೂ ಹಿರಿಯರಾದ ತೋಟದ ಸರ್ ನನಗೆ ಗುರುಗಳಾಗಿದ್ದರು ಹೀಗಾಗಿ ಸಾಹಿತ್ಯ ಮತ್ತು ಜನಪರ ಚಳುವಳಿಗಳು ನನ್ನ ಜೀವನದ ಅವಿಭಾಜ್ಯ ಅಂಗಗಳಾಗಿದ್ದವು ಸಾಹಿತ್ಯದ ಮುಖಾಂತರ ಶೋಷಿತ ಜನರ ನೋವಿಗೆ ಧ್ವನಿಯಾಗುವುದು ಮತ್ತು ಚಳವಳಿಗಳ ಮೂಲಕ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ನನ್ನ ಉದ್ದೇಶವಾಗಿತ್ತು ಅದೇ ಸಮಯದಲ್ಲಿ ಜಿಲ್ಲೆಯ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಒಂದಾದ “ನಾಡೋಜ” ಪತ್ರಿಕೆಯಲ್ಲಿ ಪ್ರಕಟವಾದ ಕವನವೊಂದು ನನ್ನ ಗಮನ ಸೆಳೆಯಿತು.
ಸಿಹಿ-ಕಹಿ ಸುಖ-ದುಃಖ,
ನೋವು- ನಲಿವುಗಳ ನಡುವೆ
ಉರುಳಿ ಉರುಳಿ ಹೊರಟಿದೆ ಜೀವನ ಗಾಲಿ…………….
ಹೀಗೆ ಆರಂಭವಾಗುವ “ಜೀವನ ಗಾಲಿ” ಎಂಬ ಶಿರೋನಾಮೆಯ ಕವನ ನನಗೆ ತುಂಬ ಮೆಚ್ಚುಗೆಯಾಯಿತು.
ಅಲ್ಲಿ ವ್ಯಕ್ತವಾಗಿದ್ದ ಜೀವನ ಪ್ರೀತಿ, ನೋವು-ನಲಿವುಗಳನ್ನು ಸಮಾನವಾಗಿ ಸ್ವೀಕರಿಸುವ ವಿಚಾರ ಜೊತೆಗೆ ಹಿಡಿದಿಡುವ ಕಾವ್ಯದ ಕಾವ್ಯಾತ್ಮತೆ, ಸಲೀಸಾಗಿ ಬಂದಂತಿರುವ ಪದಗಳ ಜೋಡನೆ ನನ್ನನ್ನ ಅಚ್ಚರಿಗೊಳಿಸಿದವು ಹೀಗಾಗಿ ಆ ಕವಿಯನ್ನು ಭೆಟ್ಟಿಯಾಗಬೇಕು ಎನ್ನಿಸಿತು ಕವಿ ನಮ್ಮೂರಿನವನೇ ಎಂದಾಗ ಭೆಟ್ಟಿ ಸುಲಭ, ಆದರೆ ಈ ಮೊದಲು ಆತನ ಪರಿಚಯ ನನಗೆ ಇ ದ್ದಿರಲಿಲ್ಲ ಹೆಸರು ಕೇಳಿಕೊಂಡು ಹೋಗಿ ಭೆಟ್ಟಿಯಾದಾಗ ನನಗೆ ಆಶ್ಚರ್ಯ ಕಾದಿತ್ತು. ನನಗಿಂತ ವಯಸ್ಸಿನಲ್ಲಿ ಚಿಕ್ಕವ, ಹಾಯಸ್ಕೂಲ ಓದುತ್ತಿರುವ ವಿದ್ಯಾರ್ಥಿ, ಕವನ ಓದಿ ಆತ ತುಂಬಾ ಅನುಭವಿ, ವಯಸ್ಸಿನಲ್ಲಿ ನನಗಿಂತ ಬಹು ದೊಡ್ಡವನೇ ಇದ್ದಿರಬಹುದು ಎನ್ನುವ ನನ್ನ ಊಹೆ ಸುಳ್ಳಾಗಿತ್ತು. ಅವನನ್ನು ಕಂಡರೆ ಇವನೇನು ಬರೆಯುತ್ತಾನೆ ಎನ್ನುವಂತಿದ್ದ.
ಆದರೆ ಒಂದರ ನಂತರ ಒಂದು ಕಥೆ-ಕವನಗಳು ನನ್ನೊಟ್ಟಿಗೆ ಪ್ರಕಟವಾ ಗತೊಡಗಿದವು. ಸಂಪರ್ಕ ಬೆಳೆಯುತ್ತ ಸಂದೇಹಗಳು ನಿವಾರಣೆ ಆಗುತ್ತ ಹೋದವು. ನಾನಾಗ ಜಿಲ್ಲೆಯ ಎಲ್ಲ ಪತ್ರಿಕೆಗಳಿಗೂ ನಿರಂತರ ಬರೆಯುತ್ತಿದ್ದೆ. ಮುಂದೆ ಬರೆಯುವುದೇ ನನ್ನ ಗೀಳಾಯಿತು ಅದುವೇ ನನ್ನ ಉಸಿರಾಯಿತು ಎಂದರೂ ತಪ್ಪಲ್ಲ. ಬರದೇ ಬದುಕಬೇಕು ಎನ್ನುವ ಛಲ ಮೂಡಿತು ಆ ಮೇಲೆ ಹಲವು ಪತ್ರಿಕೆಗಳಲ್ಲಿ ನಾನು ಕೆಲಸ ಮಾಡಿದೆ. ಆಸಂದರ್ಭಗಳಲ್ಲಿ ಈ ಗೆಳೆಯನ ಬರಹಗಳನ್ನು ಅತ್ಯಂತ ಪ್ರೀತಿಯಿಂದ ಪ್ರಕಟಿಸುತ್ತಿದ್ದೆ. ನನ್ನ ಸಂಪಾದಕತ್ವದ “ಬೆವರಿನ ಬೆಲೆ” ಮತ್ತು “ಈಶ್ವರ” ಪತ್ರಿಕೆಗಳು ಆರಂಭಗೊಂಡ ನಂತರವಂತೂ ನನ್ನ ನೇತೃತ್ವದ ಆ ಎರಡೂ ಪತ್ರಿಕೆಗಳಿಗೆ ಖಾಯಂ ಬರಹಗಾರನಾಗಿ ಹೋದ. ಜೀವನದ ಸೂಕ್ಷ್ಮತೆಗಳನ್ನು, ಮಾನವನ ದ್ವಂದ್ವಗಳನ್ನು, ಸೋತ, ಶೋಷಿತ ಜನರಲ್ಲಿ ಆತ್ಮಸ್ಥೈರ್ಯ ತುಂಬುವ ತನ್ನ ಅನುಭವಗಳ ಮೂಲಕ ಜನರ ಜೀವನಕ್ಕೆ ಕನ್ನಡಿ ಹಿಡಿಯುವ ಜೀವನ್ಮುಖಿ ಸಾಹಿತಿ ಅವನು. ಸಾಹಿತಿಗೆ ಇರಬೇಕಾದ ಸೂಕ್ಷ್ಮತೆ, ಹೃದಯವಂತಿಕೆ ಅವನಲ್ಲಿದೆ. ಅದು ಅವನ ಕಥೆ, ಕವಿತೆಗಳಲ್ಲಿ ಕಾಣುತ್ತದೆ. ಪ್ರೇಮ ಅವನ ಸಾಹಿತ್ಯದ ಹಿಂದಿನ ಪ್ರೇರಕ ಶಕ್ತಿ, ಹೀಗಾಗಿ ಅವನು ಬರೆದದ್ದು ಎಲ್ಲರಿಗೂ ಇಷ್ಟವಾಗುತ್ತದೆ, ಪ್ರಿಯವಾಗುತ್ತದೆ. ನನಗೂ ಕೂಡ, ಹೀಗೆ ಸಾಹಿತ್ಯವೇ ನಮ್ಮಿಬ್ಬರನ್ನು ಸ್ನೇಹ ಬಂಧನದಲ್ಲಿ ಬಂದಿಸಿದ್ದು. 1998 ರಲ್ಲಿ ಅವನ ಮೊದಲ ಕಥಾ ಸಂಕಲನ “ಪ್ರೇಮವೆಂದರೆ……….” ಪ್ರಕಟವಾಯ್ತು. ಅದಕ್ಕೆ ಆಗಿನ ತಾಲೂಕಾ ಕ.ಸಾ.ಪ. ಅಧ್ಯಕ್ಷನಾಗಿದ್ದ ಸಾಹಿತಿ ಮಿತ್ರ ಪ್ರಕಾಶ, ಬೆಳಕೂಡ ಅವರಿಂದ ಮುನ್ನುಡಿ ಬರೆಸಿ ನಾನೇ ಬೆನ್ನುಡಿ ದಾಖಲಿಸಿದೆ.
ಪ್ರೇಮವೆಂದರೆ……………… ಕಥಾ ಸಂಕಲನವನ್ನು ಮೂಡಲಗಿಯ ನಮ್ಮ ಗೆಳೆಯರ ಬಳಗ ತುಂಬ ಸಂತೋಷದಿಂದ ಲೋಕಾರ್ಷಣೆ ಮಾಡಿ ತಮ್ಮ ಸಂತಸ ಹಂಚಿಕೊಂಡ ಆ ಸಮಾರಂಭದ ಸವಿ ನೆನಪುಗಳು ನನ್ನಲ್ಲಿನ್ನೂ ಹಸಿರಾಗಿಯೇ ಉಳಿದಿವೆ. ಮೂಲತ ಕವಿಯಾಗಿದ್ದ ಆತ ಬರೆದ ಕವನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದುವೇ ವಿನಃ ಸಂಗ್ರಹ ರೂಪದಲ್ಲಿ ಬೆಳಕು ಕಂಡಿರಲಿಲ್ಲ. ನನ್ನ ಒತ್ತಾಸೆಯ ಮೇರೆಗೆ ಕವನ ಸಂಕಲನದ ಕನಸು ನನಸಾದದ್ದು 2011 ರಲ್ಲಿ, ಅಂದರೆ ಬರೋಬ್ಬರಿ 13 ವರ್ಷಗಳ ನಂತರ “ಮನೋಲೋಕ” ಪ್ರಕಟವಾಯಿತು. ಅದಕ್ಕೂ ನಾನೇ ನಿಂತು ಕೆಂಪು ಕವಿ ಡಾ|| ಸಿದ್ದನಗೌಡ ಪಾಟೀಲ ಹಾಗೂ ಹಿರಿಯ ಪತ್ರಕರ್ತ ಎಲ್.ಎಸ್. ಶಾಸ್ತ್ರೀಯವರ ಮುನ್ನುಡಿಗಳನ್ನು ಬರೆಸಿದ್ದೆ. ಆಶ್ಚರ್ಯವೆನ್ನುವಂತೆ ಮನೋಲೋಕದ ಅಭೂತಪೂರ್ವ ಯಶಸ್ಸಿನ ಸ್ಪೂರ್ತಿಯಿಂದ ಒಂದೇ ಒಂದು ವರ್ಷದ ಅವ ಧಿಯೊಳಗೆ ಇನ್ನೊಂದು ಕವನ ಸಂಕಲನ. “ಒಂದು ಜೋಡಿ ಕಣ್ಣು ಪ್ರಕಟವಾಯ್ತು. ಅದಕ್ಕೆ ನೀನೇ ಮುನ್ನುಡಿ ಬರೆಯಬೇಕೆಂದು ಒತ್ತಾಯಿಸಿ “ಮುನ್ನುಡಿ” ರೂಪದ ನನ್ನ ಕಟು ವಿಮರ್ಶೆಯನ್ನು ಒಪ್ಪಿಕೊಂಡು ಪ್ರೀತಿಯಿಂದ ಪ್ರಕಟಿಸಿದ. ಅವನ ಮನಸ್ಸೇ ಅಂತಹದ್ದು ಹೃದಯ ವಿಶಾಲ. ಪ್ರಚಾರ ದಿಂದ ದೂರ ಇರುವ, ಸಿಹಿ – ಕಹಿ ಎರಡನ್ನೂ ಸಮನಾಗಿ ಸ್ವೀಕರಿಸುವ, ಜನಪ್ರೀಯತೆಯಿಂದ ಬಚಾವ್ ಆಗುವ ಸಂಕೋಚ ಪ್ರವೃತ್ತಿಯ ವ್ಯಕ್ತಿತ್ವ. 1998ರ ನಂತರ ಬರೆಯುತ್ತ ಬಂದ ಕಥೆಗಳನ್ನು ಸದ್ಯ ಪುಸ್ತಕ ರೂಪದಲ್ಲಿ ನೀಡುವ ಯೋಚನೆಯಲ್ಲಿರುವ ಅವನು ಆ ಕಾರ್ಯದಲ್ಲಿ ಮಗ್ನನಾಗಿದ್ದಾನೆ. ಅವನ ಕಥೆಗಳೂ ಕೂಡ ಅವನ ಕಾವ್ಯಗಳಂತೆ ಸೊಗಸು. ಸಾಹಿತ್ಯ ಹೃದಯಿಯ ಹೃದಯದ ದಾಹ ನೀಗಿಸುವ ಶಕ್ತಿ ಅವನ ಸಾಹಿತ್ಯಕ್ಕಿದೆ ಎಂದರೆ ಖಂಡಿತ ಅತಿಶಯೊಕ್ತಿಯಲ್ಲ. ಇಷ್ಟೇಲ್ಲ ಹೇಳಿದ ಮೇಲೆ ಆ ಬರಹಗಾರ ಗೆಳೆಯನ ಹೆಸರು ಹೇಳುವುದು ಅಗತ್ಯವಿಲ್ಲ ಎನಿಸುತ್ತದೆ. ಆ ಭರವಸೆಯ ಕವಿ, ಕಥೆಗಾರ ನಮ್ಮ ಬರಹಗಾರರ ಗೆಳೆಯರ ಗುಂಪಿನ ಅಶ್ಪಾಕ ಎಚ್. ಪೀರಜಾದೆ. ಅಂದ ಹಾಗೇ…….ಅಶ್ಪಾಕ್ ನಿನ್ನ “ಜನ್ನತ್ ಮತ್ತು ಇತರ ಕಥೆಗಳು” ಆದಷ್ಟು ಬೇಗ ಓದುಗರ ಕೈಗೆ ಸೇರಲಿ ಎಂದು ಆಶಿಸುತ್ತೇನೆ.
– ಈಶ್ವರ ಚ ಮಗದುಮ್ಮ