ಸುಡುಸುಡು ಬಿಸಿಲಿನಲ್ಲಿ ಬಿಳಿ ಟೊಪ್ಪಿಗೆಯನ್ನು ಹಾಕಿಕೊಂಡು ರಫೀಕ್ ತಾತನು ಎಳೆನೀರನ್ನು ಮಾರುತ್ತಿದ್ದನು. ಹೊಂದಿಸಿಟ್ಟ ಎಳೆನೀರನ್ನು ರಾಯಲ್ ಫೀಲ್ಡ್ ಬೈಕಿನಲ್ಲಿ ಬಂದ ಶೋಕಿಲಾಲ್ ರಾಕಿಭಾಯ್ ತನಗಿಷ್ಟವಾದುದನ್ನು ಕಿತ್ತುಕೊಂಡು ರಫೀಕ್ ತಾತನ ಕೈಯಲ್ಲಿ ಕೊಟ್ಟನು. ತಾತನ ಬಿಳಿ ಟೊಪ್ಪಿಗೆಯು ನೀರು ದೋಸೆಯಂತೆ ನಾನ್ ಸ್ಟಿಕ್ ತಲೆಯ ಮೇಲೆ ಹೊಯ್ದುಬಿಟ್ಟಿತ್ತು. ಬೆವರ ಹನಿಯಲ್ಲೂ ರಾಕಿಭಾಯ್ ಮೇಲೆ ಸಿಟ್ಟು ಬರಲಿಲ್ಲ. ಕೈಯಲ್ಲಿರುವ ಮಚ್ಚು ಎಳೆನೀರನ್ನು ಕೊಚ್ಚಿತೇ ವಿನಹ ಬೈಕ್ ಸವಾರನನ್ನಲ್ಲ.
ಆ ತಾತನು ಬಿಸಿಯಾಗಿದ್ದ ಎಳೆನೀರನ್ನು ಕುಡಿಯುತ್ತಿದ್ದ ರಾಕಿಭಾಯ್ ಗೆ ಒಂದು ನಿಂಬೆಹಣ್ಣನ್ನು ತುಂಡರಿಸಿ, ಅದನ್ನು ಹಿಂಡಿ ಕುಡಿಯೆಂದನು. ಅಷ್ಟೋತ್ತಿಗೆ ಬಾಣಲೆಯಂತೆ ಕಾದಿದ್ದ ರಾಕಿಭಾಯ್ ಎಳೆನೀರು ಕುಡಿದ ಮೇಲೆ ತಣ್ಣಗಾದನು. ದಿಮಾಕಿನಿಂದ ನೂರು ರೂಪಾಯಿ ಕೊಟ್ಟು ಚೇಂಜ್ ನಿನ್ನ ಕಡೆ ಇಟ್ಕೋ ಅಂತ ತಾತನಿಗೆ ಹೇಳಿದನು. ತಾತನು ವಿನಮ್ರವಾಗಿ 75ರೂಪಾಯಿ ವಾಪಸ್ ಕೊಡುತ್ತಾ, “ಬೇಟಾ, ನನ್ನ ಮಗ ತಿರುವನಂತಪುರದಲ್ಲಿ ಸಾಫ್ಟವೇರ್ ಇಂಜನಿಯರ್ ಇದ್ದಾನೆ, ಅವನ ಹೆಂಡತಿಯು ಸಾಫ್ಟವೇರ್ ಇಂಜನಿಯರ್, ಇಬ್ಬರು ಮೊಮ್ಮಕ್ಕಳಿದ್ದಾರೆ, ರೊಕ್ಕಕ್ಕೆ ಆ ಅಲ್ಲಾಹ ಏನು ಕಡಿಮೆ ಮಾಡಿಲ್ಲ, ಸ್ವಲ್ಪ ಯಮಕು ಕಡಿಮೆ ಆದ್ರೆ ಸಾಕು, ನಂಗೆ ಎಳೆನೀರು ವ್ಯಾಪಾರ ಸುಲಭವಾಗುತ್ತದೆ “.
ಯಾರಿಗೆ ಯಾರು ಮಾತಿನಲ್ಲೇ ಚಾಟಿಯೇಟು ಬೀಸಿದರು ಅನ್ನೋದೇ ಗೊಂದಲ ನಿರ್ಮಾಣಗೊಳ್ಳುವ ಮುಂಚೆಯೇ 75ರೂಪಾಯಿಗಳನ್ನು ತೆಗೆದುಕೊಂಡು ರಾಕಿಭಾಯ್ ಕಾಲ್ಕಿತ್ತನು.
ಇತ್ತ ಸಾಫ್ಟವೇರ್ ಇಂಜನಿಯರ್ ಮಗನು ಹೆಂಡತಿ ಮಕ್ಕಳೊಂದಿಗೆ ಆರಾಮವಾಗಿದ್ದನು. ಹೆಂಡತಿಗೆ ಹುಬ್ಬಳ್ಳಿಗೆ ಹೋಗುವ ಇಷ್ಟವಿರಲಿಲ್ಲ. ಆ ಮಲೆಯಾಳಿ ಹೆಂಡತಿಯು ಗಂಡನ ಊರಿಗೆ ಬರಲು ಯಾವತ್ತೂ ಪ್ರಯತ್ನವನ್ನು ಮಾಡಲಿಲ್ಲ. ಇತ್ತ ರಫೀಕನಿಗೆ ಮೊಮ್ಮಕ್ಕಳನ್ನು ನೋಡುವ ಆಸೆಯಾಗುತ್ತಿತ್ತು. ಅವಾಗಿವಾಗ್ ತಿರುವನಂತಪುರಕ್ಕೆ ಹೋಗಿ ಬರುತ್ತಿದ್ದನು. ಅಪ್ಪನಿಗೆ ಸ್ಮಾರ್ಟ್ ಫೋನ್ ಕೊಡಿಸಿದ್ದನು. ಬೇರೆದವರ ಸಹಾಯದಿಂದ ಬಳಸುತ್ತಿದ್ದನು. ಬಸ್ ಸ್ಟ್ಯಾಂಡ್ ಹಾಗೂ ರೈಲು ನಿಲ್ದಾಣ ಒಂದೇ ಕಡೆ ಇರುವ ಕುಮಟಾ ದಿಂದ ತಿರುವನಂತಪುರಕ್ಕೆ ಆನ್ ಲೈನ್ ರೈಲು ಟಿಕೆಟ್ ಕಾಯ್ದಿರಿಸಿದ್ದನು. ಬೇಸಿಗೆ ರಜೆಯಲ್ಲಿ ಸೀಟು ವೇಟಿಂಗ್ ಲಿಸ್ಟ್ ಆಗಿತ್ತು. ಮೊದಲೆಲ್ಲ ರೈಲು ನಿಲ್ದಾಣದಲ್ಲಿ ರಫೀಕನು ಸೀಟು ಕಾಯ್ದಿರಿಸುತ್ತಿದ್ದನು. ಅಕಸ್ಮಾತ್ ವೇಟಿಂಗ್ ಇದ್ದರೂ ಹೆಂಗೋ ಪ್ರಯಾಣ ಮಾಡಬಹುದಾಗಿತ್ತು. ಮಗ ಅಲ್ತಾಫನು ಸ್ಮಾರ್ಟ್ ಫೋನ್ ಕೊಡಿಸಿದಾಗಿನಿಂದ ಆನ್ ಲೈನ್ ಟಿಕೆಟ್ ನ್ನು ಮಗನೇ ಕಾಯ್ದಿರಿಸುತ್ತಿದ್ದನು. ಮಗನು ರೈಲು ಚಲಿಸುತ್ತಿದ್ದ ಯಾವುದೋ ಸ್ಥಳದಿಂದ ತಿರುವನಂತಪುರಕ್ಕೆ ಕಾಯ್ದಿರಿಸಿ ಬೋರ್ಡಿಂಗ್ ಪಾಯಿಂಟ್ ಕಾರವಾರ ಹಾಕುತ್ತಿದ್ದನು. ಈ ಸಲ ಯಾವುದೂ ಗೀಟಲಿಲ್ಲ. ಇತ್ತ ಅಪ್ಪನಿಗೂ ಚಾರ್ಟ್ ಪ್ರಿಫೇರ್ ಆಗುವ ಸಮಯವನ್ನು ತಿಳಿಸಲಿಲ್ಲ. ಸಾಫ್ಟವೇರ್ ಇಂಜನಿಯರನು ತತ್ಕಾಲ್ ಟಿಕೆಟ್ ಗಾಗಿ ಆಫೀಸಿನ ಹೈ ಸ್ಪೀಡ್ ಇಂಟರ್ನೆಟ್ ಬಳಸಿ ದನು. ಏನು ಕೆಲಸ ಆಗಲಿಲ್ಲ. ಅಲ್ತಾಫನ ಹೃದಯವು ಆಫೀಸಿನ ಕೆಲಸದ ಮಧ್ಯೆಯೇ ಸೀಟಿ ಹೊಡೀತಿತ್ತು. ಬೇರೆ ರೈಲಿಗಾಗಿ ತಡಕಾಡಿದನು. ಸಮಯವು ಮೀರಿ ಹೋಗಿತ್ತು.
ಇತ್ತ ರಫೀಕ್ ತಾತನು ಹುಬ್ಬಳ್ಳಿಯಿಂದ ಕುಮಟಾ ರೈಲು ನಿಲ್ದಾಣಕ್ಕೆ ಬಂದನು. ಮಗ ಅಲ್ತಾಫನು ಅಪ್ಪನಿಗೆ ಆಫೀಸಿನ ಕೆಲಸದಲ್ಲಿ ಚಾರ್ಟ್ ಪ್ರಿಪೇರ್ಡ್ ಆದಮೇಲೆ ಟಿಕೆಟ್ ಕ್ಯಾನ್ಸಲ್ ಆಗಿದ್ದನ್ನು ಹೇಳಲು ಮರೆತಿದ್ದನು.
ಅಪ್ಪನು ಅಲ್ತಾಫ್ ನಿಗೆ ಫೋನ್ ಮಾಡಿದನು. ಟಿಕೆಟ್ ಕ್ಯಾನ್ಸಲ್ ಆದ ವಿಷಯವನ್ನು ಮಗನು ತಿಳಿಸಿದನು. ಅಪ್ಪ ನಿನಗೆ ಸಾದಾ ಬೋಗಿಯಲ್ಲಿ ಬರುವುದಕ್ಕೆ ಕಷ್ಟವಾದರೆ ಬರಬೇಡ, ನೀ ಬರದಿದ್ರು ನಡೆಯುತ್ತೇ ಅಂತ ಬಿರುಸಾಗಿ ಹೇಳಿದನು.
“ಬೇಟಾ, ನೀ ಸಾಫ್ಟವೇರ್ ಇಂಜನಿಯರ್ ಆಗಿರಬಹುದು, ನಾನು ನಿನ್ನ ನೋಡಲು ಬರುತ್ತಿಲ್ಲ, ನನ್ನ ಮೊಮ್ಮಕ್ಕಳನ್ನು ನೋಡಲು ಬರುತ್ತಿದ್ದೇನೆ, ನೀನು ತುಮಕೂರಿನಲ್ಲಿ ಇಂಜನೀಯರಿಂಗ್ ಓದೋವಾಗ, ಸಾದಾ ಬೋಗಿಯಲ್ಲಿ ನ್ಯೂಸ್ ಪೇಪರ್ ನೆಲಕ್ಕೆ ಹಾಸಿ ಯಾರ್ಯಾರ ಕಾಲುಗಳು ಯಾರ್ಯಾರಿಗೋ ಆಶೀರ್ವಾದದ ಶಯನದಲ್ಲಿಯೇ ತಲುಪುತ್ತಿದ್ದೆ, ನನಗೆ ಸಾದಾ ಬೋಗಿ ಹೊಸದಲ್ಲ, ಪುಗಸಟ್ಟೆ ಮಾತು, ಎಲೆ ಅಡಿಕೆ ಎಲ್ಲ ಸಿಗುತ್ತೆ ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಯಿಂದ ಮಾತನಾಡುವ ನಾಲ್ಕು ಜನರು ಸಿಗ್ತಾರೆ, ಮುಂಜಾನೆ ತಿರುವನಂತಪುರ ರೈಲು ನಿಲ್ದಾಣಕ್ಕೆ ನೀ ಬರಬೇಡ, ರೊಕ್ಕ ಕೊಟ್ರೆ ಆಟೋದವರು ಮನೆಗೆ ಬಿಡುತ್ತಾರೆ, ಫೋನ್ ಇಡಲೇ”, ಹೀಗೆ ಅಲ್ತಾಫನು ಗದರಿಸುವುದನ್ನು ಪ್ಲಾಟ್ ಫಾರಂ ಕುಳಿತಿದ್ದ ಪ್ರಾಧ್ಯಾಪಕರು ಎಲ್ಲವನ್ನು ಕೇಳಿಸಿಕೊಂಡಿದ್ದರು. ಪ್ರಾಧ್ಯಾಪಕರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತಿರುವನಂತಪುರಕ್ಕೆ ಹೊರಟಿದ್ದರು.
ಪ್ರಾಧ್ಯಾಪಕರು ಅಲ್ತಾಫರಿಗೆ ಚಿಕ್ಕದಾಗಿ ರೈಲಿನ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಇಂಟರ್ನೆಟ್ ಟಿಕೆಟ್ ತೆಗೆದುಕೊಂಡು ಪ್ರಯಾಣಿಕರ ಹಣೆಬರಹವನ್ನು ಪ್ರಾಧ್ಯಾಪಕರು ಅಲ್ತಾಫರಿಗೆ ಎಳೆಎಳೆಯಾಗಿ ಬಿಡಿಸಿ ಹೇಳಿದರು. ಬೆಳಗ್ಗೆ 11 ರಿಂದ 12ರ ವರೆಗೆ ತತ್ಕಾಲ್ ಬುಕಿಂಗ್ ಸಮಯದಲ್ಲಿ ಒಂದು ನಿಮಿಷಕ್ಕೆ ಸೀಟು ಖಾಲಿಯಾಗಿರುತ್ತವೆ. ಹೋದ ವರ್ಷದ ಸೀಟಿನ ಸಂಭವನೀಯತೆಯನ್ನು ನೀಡೋದ್ರಿಂದ ಯಾವ ಪ್ರಯೋಜನವಿಲ್ಲ. ತತ್ಕಾಲ್ ಸೀಟು ಖಾಲಿಯಾದರೂ ಸಾಮಾನ್ಯ ವೇಟಿಂಗ್ ಲಿಸ್ಟ್ ಮಿಸುಗಾಡಿರುವುದಿಲ್ಲ. ಹಾಗಾದ್ರೆ ಎಲ್ಲಿಯೋ ಕಾಸು ಮಿಸುಗಾಡಿಸಿದವರಿಗೆ ಸೀಟು ಸಿಕ್ಕಿರುತ್ತೇ!. ಈ ಎಲ್ಲ ವಿಚಾರಗಳನ್ನು ಅಲ್ತಾಫರಿಗೆ ತಿಳಿಸಿದರು.
ಕುಮಟಾ ರೈಲಿನಲ್ಲಿ ಸದಾ ಟಿಕೆಟ್ ತೆಗೆದುಕೊಳ್ಳುವಂತೆ ಪ್ರಾಧ್ಯಾಪಕರು ರಫೀಕ್ ರಿಗೆ ಸೂಚಿಸಿದರು. ಪ್ರಾಧ್ಯಾಪಕರೊಬ್ಬರ ಆಗಲೇ ಸೈಡ್ ಲೋವರ್ ಬರ್ತ್ ಕಾಯ್ದಿರಿಸಿದ್ದರು ಆ ಸೀಟಿಗೆ ಕರ್ಣನ ಸೀಟು ಅಂತ ಪ್ರಾಧ್ಯಾಪಕರು ನಾಮಕರಣ ಮಾಡಿದ್ದರು. ರಫೀಕರು ಪರಿಚಯವಾದ ಕೂಡಲೇ ಪ್ರಾಧ್ಯಾಪಕರು ತಾವು ಕಾಯ್ದಿರಿಸಿದ ಸೀಟಿನಲ್ಲಿಯೇ ರಫೀಕರಿಗೆ ಸ್ಥಳಾವಕಾಶ ಮಾಡಿಕೊಟ್ಟರು. ಸೈಡ್ ಲೋವರ್ ಬರ್ತ್ ನ್ನು ಎರಡು ಸೀಟುಗಳನ್ನಾಗಿ ಬೇರ್ಪಡಿಸಿದರು.
TTE (Travelling Ticket Examiner) ಯು ಪ್ರಾಧ್ಯಾಪಕರ ಜೊತೆ ಜಗಳ ಮಾಡಿದನು. ರಫೀಕ್ ರನ್ನು ಸಾದಾ ಬೋಗಿಗೆ ಕಳಿಸಲು ಆಜ್ಞೆಯಿತ್ತನು. ಯಾವುದೇ ಕಾರಣಕ್ಕೂ ಕಳಿಸಲ್ಲ, ಅಲ್ಲಿ ಕುಳಿತುಕೊಳ್ಳುವುದು ಸೀಟಿನಲ್ಲಿ, ಇಲ್ಲಿ ಕುಳಿತಿದ್ದು ಸೀಟಿನಲ್ಲಿ ಅಂತ ಪ್ರಾಧ್ಯಾಪಕರು ವಾದ ಮಾಡಿದರು. ವಿಧಿ ಇಲ್ಲದೆ ಟಿ. ಟಿ. ಯು ಸುಮ್ಮನಾದರು. ತಪ್ಪು ಒಪ್ಪು ಲೆಕ್ಕ ಹಾಕದೆ ಪ್ರಾಧ್ಯಾಪಕರ ಕಾಳಜಿಗೆ ಮನಸ್ಸಿನಲ್ಲಿಯೇ ಧನ್ಯವಾದ ಹೇಳಿದರು.
ರಾತ್ರಿವಿಡೀ ಮೆಲುದನಿಯಲ್ಲಿಯೇ ತಿರುವನಂತಪುರ ರೈಲು ನಿಲ್ದಾಣ ಬರೋತನಕ ಮಾತನಾಡಿದರು. ತಿರುವನಂತಪುರ ರೈಲು ನಿಲ್ದಾಣವನ್ನು ರೈಲು ತಲುಪಿತು. ರಫೀಕರನ್ನು ಪ್ರಾಧ್ಯಾಪಕರು ಅವರ ಮಗನ ಮನೆಯ ತನಕ ಬಂದು ತಲುಪಿಸಿದರು. ಒಂದು ರೈಲಿನ ಪ್ರಯಾಣದ ಆತ್ಮೀಯತೆಯು ರಫೀಕರ ಕಣ್ಣಲ್ಲಿ ನೀರು ತರಿಸಿತು. ಸಂಬಳ ಕಡಿಮೆ ಇದ್ದರೂ ಮಗನು ಪ್ರಾಧ್ಯಾಪಕನಾಗಿದ್ದರೆ ಚೆನ್ನಾಗಿರುತ್ತಿತ್ತು. ಈ ಹಾಳಾದ ಊರಿನಲ್ಲಿ ಮೊಮ್ಮಕ್ಕಳನ್ನು ಒಂದು ವಾರ ನೋಡದೇ ಜೀವನಪರ್ಯಂತ ಜೊತೆಯಲ್ಲಿಯೇ ಇರಬಹುದಾಗಿತ್ತೆಂದು ಕನವರಿಸುತ್ತಲೇ ಪ್ರಾಧ್ಯಾಪಕರನ್ನು ಬೀಳ್ಕೊಟ್ಟರು.
ಲಾಸ್ಟ್ ಪಂಚ್:WHO IS RIGHT? ಅಂತ ಯೋಚಿಸುವುದಕ್ಕಿಂತ WHAT IS RIGHT? ಅಂತ ಯೋಚಿಸಿದ್ರೆ ಜೀವನದಲ್ಲಿ FIGHT ಆಗಿ ಗಂಡಾಗುಂಡಿಯಾಗುವುದಿಲ್ಲ.
–ಭಾರ್ಗವ ಎಚ್ ಕೆ