ಈ ನೆನಪೆ ಶಾಶ್ವತವು ಮಿಂಚಿದ ಶಾಲದಿನವು ಈ ಹಾಡು ನಮ್ಮ ಕಥೆಗೆ ಎಷ್ಟು ಸಾಮ್ಯತೆಯಿದೆಯೆಂದರೆ….? ನನ್ನ ನೆನಪಿನ ಸಂಚಿಯ ಪ್ರತಿ ನೆನಪಿಗೂ ಜೀವ ತುಂಬಬಲ್ಲ ಶಕ್ತಿಯಿದೆ ಎಂದರೆ ಅತಿಯೋಶಕ್ತಿಯಾಗಲಾರದು. ನನ್ನ ಮನದಾಳದ ವ್ಯತೆಯನ್ನು ಕಥೆಯಾಗಿ ಹೇಳುವೆ ಗೆಳತಿ ಮನಸಾರೆ ಕೇಳುವೆಯೆಂಬ ನಿರೀಕ್ಷೆಯೊಂದಿಗೆ ನನ್ನ ಪತ್ರವನ್ನು ಆರಂಭಿಸುತ್ತೇನೆ.
ಡಿಯರ್ ಗೆಳತಿ ನಿನ್ನೊಂದಿಗೆ ಕಳೆದ ಶಾಲಾದಿನಗಳು ಎಷ್ಟೊಂದು ಸುಮಧುರ ಅಲ್ವಾ , ನೆನಪಿಸಿಕೊಂಡರೆ ಜಾಲಿ ಡೇಸ್ ಸಿನಿಮಾನೆ ಕಣ್ಣಂಚಿನಲ್ಲಿ ಹಾದು ಹೋದ ಅನುಭವ ಆಗುತ್ತೆ, ನಮ್ಮ ಸ್ನೇಹ ಎಷ್ಟೋಂದು ಅನ್ಯೋನ್ಯವಾಗಿತ್ತಲ್ವ. ನಮ್ಮ ಸ್ನೇಹ ಕಂಡು ಗೆಳೆಯರೆಲ್ಲಾ ಅಸೂಯೆ ಪಟ್ಟ ಪ್ರಸಂಗಗಳಂತೂ ಅಧಿಕ, ನಾನು-ನೀನು ಕೂಡಿ ಓದಿದ ಪ್ರತಿ ಕ್ಷಣವು ಉಲ್ಲಾಸದ ಕಾರಂಜಿ, ಹಲವು ಬಾರಿ ಆ ಕ್ಷಣವು ಮತ್ತೆ ಮರುಕಳಿಸುವುದೇ ಎಂದು ಯೋಚಿಸಿದ್ದುಂಟು, ಆದರೆ ಅದಾಗದು ಎಂಬುವುದು ವಾಸ್ತವ. ಪ್ರೀತಿಗಿಂತ ಮಧುರ, ಪ್ರೇಮಕ್ಕಿಂತ ಸುಮಧುರವಾದ ಕಲ್ಪನೆಯೊಂದಿದ್ದರೆ ಸ್ನೇಹ ಮಾತ್ರ ಎಂಬುವುದಕ್ಕೆ ನಮ್ಮ ಸ್ನೇಹವೇ ಸಾಕ್ಷಿ ಗೆಳತಿ.
ಓದು ಎಂಬ ಮೊದಲ ನಿಲ್ದಾಣದಲ್ಲಿ ಸಿಕ್ಕವಳು ಸಿಕ್ಕಷ್ಟೇ ಬೇಗ ಮುಂದೊಂದು ನಿಲ್ದಾಣದಲ್ಲಿ ಇಳಿದು ಹೊಗುತ್ತಿಯ ಎಂದು ಭಾವಿಸಿರಲಿಲ್ಲ, ಆದರೂ ಇಳಿದು ಹೋಗಿರುವೆ…. ನಮ್ಮ ಮಧುರ ಸ್ನೇಹಕ್ಕೆ ಯಾಕೆ ಪೂರ್ಣವಿರಾಮವಿಟ್ಟೆ ಎಂಬ ನನ್ನ ಪ್ರಶ್ನೆಗೆ ಇಂದಿಗೂ ಉತ್ತರ ನಿನಿತ್ತಿಲ್ಲ, ನಮ್ಮ ಸ್ನೇಹದ ಸಿಹಿನೆನಪುಗಳು ಬತ್ತಿಲ್ಲ. ಅವು ದಿನೇ ದಿನೇ ಹೆಚ್ಚಾಗುತ್ತಾ ಹೋದವು.
ಒಂದು ನೈಜ ವಿಷಯವೆಂದರೆ ವ್ಯಾಸಂಗದಲ್ಲಿ ನಾವಿಬ್ಬರು ಟಾಫರ್ ಆಗಿರುವುದರಿಂದಲೊ, ತುಂಬಾ ಆತ್ಮೀಯ ಒಡನಾಟದಿಂದಲೊ, ಗೆಳೆಯರೆಲ್ಲಾ ಪ್ರೇಮಿಗಳೆಂದು ಭಾವಿಸಿದ್ದುಂಟು. ಈ ಸಂಗತಿ ಆ ನಿನ್ನ ಕೋಮಲ ಮನಕ್ಕೆ ಘಾಸಿ ಮಾಡಿತೋ ಅಥವಾ ನಮ್ಮ ಸ್ನೇಹದ ಗೋಪುರ ಕುಸಿಯಲು ಕಾರಣವಾಯಿತೋ ಗೋತ್ತಿಲ್ಲ ಗೆಳತಿ… ಅಂದಿನಿಂದ ಕಳಚಿದ ಸ್ನೇಹದ ಕೊಂಡಿ, ಇದುವರೆಗೂ ಆತ್ಮೀಯವಾಗಿ ಬೆರೆತಿಲ್ಲ. ಈ ಜೀವವನ್ನು ಒಬ್ಬಂಟಿಯಾಗಿಸಿದಿಯಲ್ಲ ಇದು ನ್ಯಾಯನಾ…..? ನನ್ನ ಮನದ ಭುವಿಯಲ್ಲಿ ಪ್ರೀತಿಯ ಬೆಳೆ ತೆಗೆದವಳು ನಿನಲ್ಲಾ, ಅವಳ್ಯಾರು ಎಂಬ ನಿನ್ನ ಪ್ರಶ್ನೆ, ಹಾಗೇ ಪ್ರಶ್ನೆಯಾಗಿಯೇ ಇರಲಿ. ಒಂದು ಯಾವ ಕೆಟ್ಟ ಘಳಿಗೆ ನಿನ್ನನ್ನಾವರಿಸಿ ಮಾತು ಮುರಿದು ನಮ್ಮ ಸ್ನೇಹದಲ್ಲಿ ಇಂದಿಗೂ ಮೌನದ ಛಾಯೆ ಆವರಿಸಿದೆ ಅಲ್ಲವೆ. ಹತ್ತಿರವಿದ್ದರೂ ಅಪರಿಚಿತನೆಂದು ಭಾವಿಸುತ್ತಿರುವುದು ವಿಪರ್ಯಾಸದ ವಿಷಯವೇ ಸರಿ. ಬಟ್ ನಾನು ನಿನ್ನನ್ನು ಆ ಭಾವನೆಯಿಂದ ನೋಡುವೆ ಎಂದು ಭಾವಿಸಬೇಡ. ಯಾಕೆಂದರೆ ಆತ್ಮೀಯರಲ್ಲಿ ಆತ್ಮೀಯಳು ನೀನೆಂಬುವುದಕ್ಕೆ ಎರಡು ಮಾತಿಲ್ಲ.
ನಿನ್ನಿಂದ ಕಲಿತ ಜೀವನದ ಪಾಠಗಳು ಹಲವು. ಆದರೆ ನನ್ನ ಬದುಕಲ್ಲಿ ಅಳವಡಿಸಿಕೊಂಡಿದ್ದು ಮಾತ್ರ ಕೆಲವೇ ಕೆಲವು. ಆ ಕೆಲವೇ ಪಾಠಗಳು ನನ್ನನ್ನು ಇಂದಿನ ಸ್ಥಿತಿಗೆ ತಂದಿದೆ. ಒಂದು ವೇಳೆ ನಿನ್ನೆಲ್ಲಾ ಬದುಕಿನ ಪಾಠವನ್ನು ಪಾಲಿಸಿದ್ದರೆ ನಾನು ಇನ್ನೆಷ್ಟು ಎತ್ತರಕ್ಕೆ ಬೆಳೆಯುತ್ತಿದ್ದೆನೇನೋ ಎಂದೆನಿಸುತ್ತಿದೆ. ನನ್ನ ಬದುಕಿಗೆ ಪಾಠವಾಗಿರುವ ನೀನೇ ನನ್ನನ್ನು ಅಪರಿಚಿತನೆಂದು ಕಾಣಲು ಹಠ ಮಾಡುವುದು ಸರಿನಾ…..?
ನೀನಿಲ್ಲದ ಈ ಸ್ನೇಹಜೀವಿ ಒಬ್ಬಂಟಿ. ತೀರಾ ಒಬ್ಬಂಟಿತನ ಕಾಡಿದರೆ ಮೌನಿ ನಾನಾಗುವುದರಲ್ಲಿ ಸಂದೇಹವಿಲ್ಲ. ಮುಂಬರುವ ಜೀವನದ ಪ್ರತೀ ಪ್ರಶ್ನೆಗೂ ಮೌನವೇ ಉತ್ತರವಾಗಬಹುದೇನೋ ಎಂಬ ಆತಂಕದಲ್ಲಿರುವೆ.
ನೀನು ಭಾವಿಸಿರಬಹುದು ಅವನದು ಸರ್ಕಾರಿ ಹುದ್ದೆ ನೆಮ್ಮದಿಯ ಜೀವನ, ಸಂತಸದ ಪಯಣ, ಅವನಿಗೆಲ್ಲಿ ನಮ್ಮ ಮನನ ಅಂತಾ. ಆದರೆ ಅದು ತಪ್ಪು ಕಣ್ರೀ…. ನೀನು ಭಾವಿಸಿರುವಷ್ಟೂ ನಾನು ಸಂತಸದಿಂದಿಲ್ಲ. ಆದರೆ ಸಂತಸದಿಂದ ಇರುವವನಂತೆ ನಟಿಸುತ್ತಿರುವೆ. ಕೊನೆಯಲ್ಲಿ ನಾನು ಇಷ್ಟೆಲ್ಲಾ ಏಕೆ ಬರೆದೆ ಎನ್ನಲು ಕಾರಣವಿದೆ. ನನ್ನ ಸ್ನೇಹದ ಹೊತ್ತಿಗೆಯಲ್ಲಿನ ಒಂದು ಪುಟವು ಸಹ ಕಿತ್ತೆಸೆಯಲು ಸಾಧ್ಯವಿಲ್ಲ. ಅಂತದ್ರಲ್ಲಿ ನೀನು ದೂರ ಆಗುತ್ತಿರುವುದು ತುಂಬಾ ನೋವುಂಟುಮಾಡುತ್ತಿದೆ. ಈ ನನ್ನ ಮನದಳುವಿಗೆ ನಿನ್ನ ಪ್ರೀತಿ ತುಂಬಿದ ಮಾತುಗಳೇ ಉತ್ತರವಾಗಬೇಕು. ನೀನಾದರು ಇನ್ನೂ ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದು ತುಂಬಾ ಸಂತಸದ ಸಂಗತಿಯೇನು ಸರಿ. ಆದರೆ ಈ ಸಂತಸದ ಶುಭ ಸಂಧರ್ಭಕ್ಕಾದರೂ ಈ ಒಬ್ಬಂಟಿ ಜೀವಕ್ಕೆ ಆತ್ಮೀಯ ಆಮಂತ್ರಣ ಬರುವುದೇ……? ಬಾಡಿ ಹೋದ ನಮ್ಮ ಸ್ನೇಹದ ಬಳ್ಳಿ ಮತ್ತೆ ಚಿಗುರಿ ಕಂಗೊಳಿಸುವುದೇ ಎಂಬ ಅಪಾರ ನಿರೀಕ್ಷೆಯಲ್ಲಿ ಕಾದಿರುವ ಈ ಜೀವ….
-ಪುಟ್ಟ ಹಾರ್ಟ್
****
supar