ಪ್ರೇಮ ಪತ್ರಗಳು

ಹೃದಯದ ಬೀದಿಯಲ್ಲಿ: ಸಚಿನ್ ನಾಯ್ಕ ಅಂಕೋಲ

ಹೃದಯದ ಬೀದಿಯಲ್ಲಿ ಮಿಂಚತೆ ಹಾದು ಹೋದ

ನಿನಗಾಗಿ….                                                       ನಿನ್ನವನಿಂದ….

ಸೂರ್ಯನನ್ನೇ ನುಂಗಿ ಬಿಟ್ಟ
ಇಳಿಸಂಜೆಯ ನೀರವತೆ,
ಹಸಿರೆಲೆಯ  ಮೈಸೋಕಿ
ಮೆಲ್ಲನೆ ಹರಿಯುವ ತಂಗಾಳಿ
ಹೆಪ್ಪುಗಟ್ಟಿ ಎದೆಯಲ್ಲಿ
ಸಣ್ಣನೆ ನೋವು,
ದೂರದಲ್ಲೆಲ್ಲೋ ಗುನುಗುವ ಹಾಡು
ಯಾವ ಮೋಹನ ಮುರಳಿ ಕರೆಯಿತೋ,
ದೂರ ತೀರಕೆ ನಿನ್ನನು….
ಯಾವ ಬೃಂದಾವನವು…………….

ಹಳೆಯ ದಿನಗಳೇ ಚೆಂದ…. ನಿನ್ನಪ್ಪನಿಗೆ ವರ್ಗವಾಗಿ ಊರಿಗೆ ಬಂದಾಗ ನೀನಿನ್ನೂ ಹೈಸ್ಕೂಲ್ ಹುಡುಗಿ….! ಹೊಸ ಊರಿಂದ ಬಂದ ಚೆಂದದ ಬೊಂಬೆಯಂತಹ ನಿನ್ನ ಎಲ್ಲರೂ ಇಷ್ಟ ಪಟ್ಟವರೇ…. ಆದರೆ ಎದೆಯಲ್ಲಿ ಬಚ್ಚಿಟ್ಟು ಕೊಂಡು ಪೂಜಿಸಿದ್ದು ಮಾತ್ರ ನಾನೊಬ್ಬನೆ….ನಿಂಗೆ ನೆನಪಿದೆಯಾ….? ನೀನು ಸ್ಕೂಲಿಗೆ  ಹೋಗುವಾಗೆಲ್ಲ ನಮ್ಮ ಮನೆಯ ಪಕ್ಕದ ರಸ್ತೆಯನ್ನ ದಾಟಿಯೇ ಹೋಗಬೇಕಿತ್ತು…. ಆ ಕ್ಷಣಗಳನ್ನೆಲ್ಲಾ ನಾ ಕಳೆದದ್ದು ನನ್ನ ಕೋಣೆಯ ಪುಟ್ಟ ಕಿಟಕಿಯಲ್ಲಿ ನಿನ್ನ ಬರುವಿಕೆಗಾಗಿ ಕಾಯುತ್ತಾ, ನೀನು ಎದುರು ಬಂದಾಗಲೆಲ್ಲಾ ಎದೆ ಬಡಿತ  ಹೆಚ್ಚಾಗಿ ಕಣ್ಣ್ ತಪ್ಪಸಿಕೊಂಡು ಓಡಾಡುತ್ತಾ….!! ಅದ್ಯಾಕೋ ನಾ ನಿನ್ನ  ಅತೀಯಾಗೇ ಹಚ್ಚಿಕೊಂಡುಬಿಟ್ಟಿದ್ದೆ….!! ನಿನ್ನ  ತಿಳಿ ಬೆಳದಿಂಗಳ ಬಣ್ಣ , ಮೊಗದ ಗಂಭೀರತೆ,  ಅಪರೂಪದ ಮುಗುಳ್ನಗೆ ಕೆನ್ನೆಯ  ಹೊಳಪು, ಕಣ್ಣಂಚಿನ ಮೋಹಕತೆ, ಉದ್ದನೆಯ ಆ ಎರಡು ಜಡೆ. ಬಳ್ಳಿಯಂತ ಮೈ….!! ನಿಜಕ್ಕೂ ನೀ ಅದ್ಬುತ ಸುಂದರಿಯೇ….!!

ದಿನಗಳು ಹಾಗೇ ಕಳೆದು ಹೋದವು…. ನನ್ನದೇ ಕವಿತೆಯ ಸಾಲುಗಳು ನೆನಪಿಗೆ ಬರುತ್ತವೆ…..
ನೀ ಹತ್ತನೇ ಕ್ಲಾಸಿಗೆ ಹೋತಿದ್ರೆ
ನಾ ಪಿಯುಸಿ ಹೋದೆ ; 
ನೀ ಪಿ.ಯು.ಸಿ. ಹೋತಿದ್ರೆ
ನಾ ಡಿಗ್ರಿ ಹೋದೆ ;
ನೀ ಡಿಗ್ರಿ ಹೋತಿದ್ರೆ
ನಾ ಹಾದಿಮೇಲ್ ನಿಂತ್‌ಕಂಡು
ನಿನ್ನ ದಾರಿ ಕಾಯ್ತಿದ್ದೆ…..!!

 ನೀ ಮಾತ್ರ ಒಮ್ಮೆಯೂ ಮಾತಾಡಿದ್ದಿಲ್ಲಾ….!! ನನ್ನ  ಕಂಡಾಗ ನಿನ್ನ ಮೊಗದಲ್ಲಿ ಅರಳುತಿದ್ದ ನಗೆ  ಮಾತ್ರ ಪ್ರತಿ ದಿನವೂ ನಿನಗಾಗಿ ಕಾದು ನಿಂತಿರುವಂತೆ ಮಾಡುತಿದ್ದದ್ದು ಸುಳ್ಳಲ್ಲ….!! ಎಲ್ಲೇ ಅಂದದ ಗುಲಾಬಿ ಹೂ ಕಂಡರೂ ಅದನ್ನು ನಿನಗೇ ಕೊಡಬೇಕು ಅಂದುಕೊಳ್ಳುತ್ತಿದ್ದ ನಾನು ಆ ಸಮಯದಲೆಲ್ಲಾ ಅದ್ಯಾರ್‍ಯಾರ ಮನೆಯ ಕಂಪೌಡ್ ಹಾರಿದ್ದಿನೋ ಲೆಕ್ಕವೇ ಇಲ್ಲ….!! ಅದೆಷ್ಟು ಭಾರಿ ನಾಯಿಗಳು ಅಟ್ಟಿಸಿಕೊಂಡು ಬಂದಿದ್ದಾವೋ ಅದು ಲಿಕ್ಕಕ್ಕಿಲ್ಲಾ….!! ಆದರೆ ಅದ್ಯಾವ ಗುಲಾಬಿಯೂ ನಿನ್ನ ಮುಡಿ ಸೇರಲೇ ಇಲ್ಲ ಅನ್ನೋದು ಮಾತ್ರ ದುರಂತ….!! ಹಾಗಂತ ನಂದೇನೂ ಬರೇ one way love ಆಗಿರಲಿಲ್ಲ ಅಲ್ವಾ….!! ಪಯಣದಲ್ಲಿ ನಾವು ಬೆಳೆದಂತೆ  ಪ್ರೀತಿಯೂ ಹೆಮ್ಮರವಾಗಿ ಬೆಳೆದಿತ್ತು…. ನಿನ್ನೆದುರು ಎಲ್ಲವನ್ನು ಹೇಳೊಕೊಳ್ಳದಿದ್ದರೂ ಯಾವುದನ್ನು ಮುಚ್ಚಿಡಲಾಗಿರಲಿಲ್ಲ..! ಇದೆಲ್ಲದರ ಅರಿವಿದ್ದರೂ, ಎದೆಯಲ್ಲಿ ಆಸೆ ಕನಸುಗಳಿದ್ದರೂ ಇಲ್ಲದಂತೆ  ನಟಿಸಿದ ನೀನು ಮಾತ್ರ ಮಹಾಜಾಣೆಯೇ ಸರಿ….!! but ಅಂತದಹದೊಂದು ದಿನ ಬಂದೆ ಬಿಟ್ಟತ್ತು….! ನೀನು ಡಿಗ್ರಿ exam ಮುಗಿಸಿ ಬರುವಾಗ  ಎಂದಿನಂತೆ ನಿನಗೆ ಕಾದಿದ್ದ ನನ್ನ ಕೈಗೆ ನೀನಿಟ್ಟ ಪತ್ರ ಮಿಂಚಿನ ಹಿಂದೆ ಬಂದ  ಸಿಡಿಲಿನಂತೆ ಅಪ್ಪಳಿಸಿತ್ತು….!!

ಇದೇ ಮೊದಲ ಪತ್ರ ; ಬಹುಶಃ ಇದೇ ಕೊನೆಯದೂ ಕೂಡ ನೀನು ನನ್ನೆಡೆಗೆ ಹೊಂದಿದ್ದ ಅಪಾರ  ಪ್ರೀತಿಯನ್ನು ನಿನ್ನ ಕಣ್ಣುಗಳೇ ನಿವೇದಿಸಿಕೊಂಡಿವೆ…. ಗೆಳೆಯ ಬೇಡವೆಂದರೂ ನನ್ನೊಳಗೆ ನುಸುಳಿದ ನಿನ್ನೆಡೆಗಿನ ಪ್ರೇಮವನ್ನು ಹೇಳಿಕೊಳ್ಳಲಾಗದ ಅಸಹಾಯಕಳು ನಾನು…. ನಿನ್ನೆಡೆಗಿನ ಅಪಾರ ಕಾಳಜಿಯೇ  ನನ್ನನ್ನು ಬಂಧಿಸಿ ಬಿಟ್ಟಿದೆ…. ಈ ಪ್ರೀತಿ ನಮಗೆ ಕೈಗೆಟುಕದ ಕುಸುಮ…. ಕ್ಷಮೆ ಇರಲಿ…. ನನ್ನ ದಾರಿ ಕಾಯಬೇಡ……………………………………………………………………………………ನಿನ್ನವಳಲ್ಲದ ನಿನ್ನವಳು….

ಅಬ್ಬಾ ನಿನ್ನ ನಾಲ್ಕು ಸಾಲಿನ ಪತ್ರ ನನ್ನ ಬದುಕಿಗೆ ನಾಲ್ಕು ಚುಕ್ಕಿಗಳನಿಟ್ಟು ಅಂತ್ಯ ಹಾಡಿದಂತಿತ್ತು….!! ಅದ್ಯಾವ  ಕಾಣದ ಮಾಯೆ ನಿನ್ನನ್ನು ಬಂದಿಸಿತ್ತೋ ನನಗಂತೂ ಅರಿವಾಗಲೇ ಇಲ್ಲ….! ಐದು ವರುಷಗಳ ನನ್ನ  ನಿರಂತರ ಧ್ಯಾನಕ್ಕೆ  ಕತ್ತಲೆಯ ಹೊರತು ಮತ್ತೇನನ್ನೂ ಉಳಿಸಿರಲಿಲ್ಲ ನಿನ್ನ ಪತ್ರ….!! ಹೆಜ್ಜೆ ಗುರುತನ್ನೂ ಮರೆಸಿ ಹೋದ ನೀನು ಬಿಟ್ಟು ಹೋದದ್ದು ಮಾತ್ರ ನನ್ನೊಳಗೆ ಕಟ್ಟಿಕೊಂಡಿದ್ದ ಕನಸುಗಳ ಪುಟ್ಟ ಮನೆಯನ್ನು ; ಅದರ ತುಂಬಾ ಖಾಲಿ ತನವನ್ನು; ಬರೀ ಅಂಧಕಾರವನ್ನು…. ಆದರೂ ಮನೆಯ ಬಾಗಿಲಲಿ  ಹಣತೆಯೊಂದ ಹಚ್ಚಿಟ್ಟಿದ್ದೇನೆ  ಮುಂದೊಮ್ಮೆ ನೀ ಮರಳಿ  ಬಂದಾಗ ಹೊಸ್ತಿಲು ಎಡವದಿರಲಿ ಎಂದು….!! 

ಇಂತಿ 
ನಿನ್ನನ್ನೇ ಧ್ಯಾನಿಸುತ್ತಾ,
ನಿನ್ನನ್ನೇ ಪ್ರೀತಿಸುತ್ತಾ,
ಸುತ್ತುತ್ತಾ ನಿನ್ನದೇ 
ಸುತ್ತಾ,
ಉಸಿರು ಬಿಗಿ ಹಿಡಿದು 
ಕಾದಿರುವ,
 ನಿನ್ನವನಾಗೇ ಉಳಿದಿರುವ 
ನಿನ್ನವ……

*****

 

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಹೃದಯದ ಬೀದಿಯಲ್ಲಿ: ಸಚಿನ್ ನಾಯ್ಕ ಅಂಕೋಲ

Leave a Reply

Your email address will not be published. Required fields are marked *