ಈ ನವಿರು ಮುಂಜಾವಿಗೆ ನಿನ್ನ ನೆನಪುಗಳಿಂದಲೆ ನೇಯ್ದ ಪ್ರೇಮದ ಬೆಡ್ ಶೀಟ್ ಹೊದ್ದು ಮಲಗಿದ್ದೇನೆ ಸಖಿ. ಸಿಹಿ ಕನಸುಗಳು ನೆನಪಿನ ಪುಟಗಳು ಒಂದೊಂದಾಗಿ ತೆರೆದುಕೊಳ್ಳುತ್ತವೆ. ಆ ನೆನಪಿನ ಪುಟಗಳ ಸಾಲು ಸಾಲು ಅಕ್ಷರಗಳ ಬೀದಿಯಲಿ ಅಲೆದಂತೆ ಅಲ್ಲೆಲ್ಲೊ ನಿನ್ನ ನಗುವಿನ ವೀಣಾ ಲಹರಿ ತೇಲಿದರೆ, ಮತ್ತೆಲ್ಲೋ ನಿನ್ನ ನುಣುಪು ಪಾದಗಳ ಕಾಲ್ಗೆಜ್ಜೆಯ ಝೇಂಕಾರ ಧುಮ್ಮಿಕ್ಕುವುದು, ಕಿವಿಯ ಬಳಿ ಬಂದು ಪ್ರಿಯ ಎಂದು ನೀ ಉಸುರಿದಂತೆ, ಕೈ ಬಳೆಗಳ ಸರಿಗಮ ಚೆಲ್ಲಿದಂತೆ, ಮತ್ತೆಲ್ಲೊ ನಿನ್ನಾ ಕಳ್ಳಗಣ್ಣಿನ ಕೆಣಕುವ ನೋಟ, ರಕ್ತವನ್ನೆ ಚಿಮ್ಮುವ ಕೆಂಗುಲಾಬಿ ದಳಗಳಂತೆ ಹೊಳೆಯುವ ಆ ಕೆಂದುಟಿಗಳಿಂದ ನನಗೆ ಕಾಣದೆ ಕೊಟ್ಟಂತ ಸಿಹಿ ಮುತ್ತು, ಬೆನ್ನಿಂದೆ ಬಂದು ಪುಟ್ಟ ಮಗು ತಂದೆಯನ್ನು ಬಾಚಿಕೊಂಡಂತೆ ನೀ ಅದೆಲ್ಲಿಂದಲೊ ಭಯ ಬಿದ್ದಂತೆ ಓಡಿ ಬಂದು ಬಾಚಿಕೊಳ್ಳುವೆ, ಸಿಹಿ ನಿದ್ದೆಯಲಿ ಮಗು ತುಸು ನಕ್ಕಂತೆ ನಾನು ನಕ್ಕಿರಬೇಕು ಸವಿ. ಅಲ್ಲೆಲ್ಲೊ ನೀ ದಿಗಂತದದೂರಿನ ಚುಕ್ಕಿ ಚಂದ್ರಮರ ನಾಡಿನಲ್ಲಿ ಹಂಸಗಮನಿಯಾಗಿ ನಡೆದು ಬರುತಿರುವಂತೆ ಕಾಣುವುದು. ಆಗಲೆ ಈ ಫಕೀರನ ಭಾವನೆಗಳ ಭದ್ರ ಕೊಟೆಗೆ ಯಾರೊ ಲಗ್ಗೆಇಟ್ಟಂತಾಗಿ, ಹೃದಯದ ಮೂಲೆಯಲ್ಲಿ ಕವಿತೆಯ ಸಾಲು ಮೆಲ್ಲ ಮೆಲ್ಲನೆ ಪದಗಳನ್ನು ಕೂಡಿಟ್ಟುಕೊಂಡು ಜನಿಸುತ್ತದೆ. ಅದರೆ ಬೆನ್ನತ್ತುವೇ ನಾನಾಗ, ಕೊನೆಗೆ ಕವಿತೆ ಸೃಜಿಸುವುದು ಅದು ನಿನ್ನ ಪ್ರತಿರೂಪವಾಗಿ.
ಚುಕ್ಕಿ ಚಂದ್ರಮರ ಲೋಕದಲಿ
ನಲಿದಾಡುತಿದೆ ಧ್ರುವ ತಾರೆ
ಚಂದಿರನೆದೆಗೆ ನಗುವಿನ
ಬೆಳದಿಂಗಳನು ಚೆಲ್ಲುತ
ನನ್ನೆದೆಯ ಅಂಗಳಕೆ
ಪ್ರೀತಿಯ ಒಲವಿನಾಮೃತ ಚಿಮ್ಮುತ…,
ಮುಂಜಾವಿನ ಸವಿಗನಸಿನಲ್ಲಿ ಎದೆಯ ಮೇಲೆ ಯಾವುದೊ ಕೈ ಸರಿದಾಡಿದಂತಾಗಿ ಈ ಪುಟ್ಟ ಹೃದಯ ಝೆಲ್ಲೆಂದು ತಟ್ಟನೆ ಎಚ್ಚರಗೊಂಡುಬಿಡುವೇ. ಸಿಹಿ ಕನಸು ಭಗ್ನಗೊಂಡಾಗ ಸ್ವರ್ಗವೆಂಬುದು ಕೈ ಜಾರಿ ಹೋದಂತಾಗುವುದು. ವಾಸ್ತವ ಲೋಕ ತೆರೆದುಕೊಂಡಾಗಲೆ ನಾನು ನಿನ್ನ ಮಧುರ ಲೋಕದಲ್ಲಿ ಅಲೆದಾಡುತಿದ್ದೆ ಎಂದು ತಿಳಿಯುವುದು. ನೆನಪುಗಳ ನಷೆಏರಿದ ನರಿ ನಾನಾಗ. ಮೊದಲೆಲ್ಲಾ ನಾನು ದೂರನಿಂತೇ ಗದ್ಗದಿತನಾಗುತ್ತಿದ್ದೆ. ಈಗೀಗ ನಿನ್ನ ಸಮಿಪವೆಂಬುದು ನಂದನವನವಾಗಿದೆ, ನಿನ್ನೊಲುಮೆ ಎಂಬ ರಮ್ಯೋಧ್ಯಾನದಲ್ಲಿ ಅಲೆಯುತ್ತಿರುವೆ ಸದಾ. ಇಷ್ಟೊಂದು ಚೆಲುವು, ಇಷ್ಟೊಂದು ಒಲುವು, ಅಮ್ಮನಂತ ಪ್ರೀತಿ ಕೊಡುವ, ಅಪ್ಪನಂತೆ ಕಾಳಾಜಿ ಮಾಡುವ, ಸಹೋದರಿಯಂತೆ ನನ್ನ ಪ್ರತಿ ಹೆಜ್ಜೆಯ ಸರಿ ತಪ್ಪುಗಳನ್ನು ಗಮನಿಸಿ ದಾರಿ ತೋರಿಸುವ, ಬಂಧುವಾಗಿ, ಪ್ರೇಯಸಿಯಾಗಿ ನನ್ನ ಪ್ರತಿ ಯಶಸ್ಸಿಗೆ ಬೆನ್ನಾಗಿ ನಿಂತುಕೊಳ್ಳುವ, ನನ್ನ ದಾರಿಗೆ ಒಲವಿನ ಹಣತೆಯನ್ನಚ್ಚಿ ಪ್ರೀತಿಯ ಬೆಳದಿಂಗಳನ್ನು ಹಾದಿಗೆ ಚೆಲ್ಲವ ನಿನ್ನ ಪ್ರೇರಣೆಯ ಮಾತುಗಳಿಗೆ, ನಿನ್ನ ತುಂಬಿದ ಪ್ರೀತಿಗೆ ನಾನು ಆರ್ಹನಾ? ಎಂದು ಎಷ್ಟೊ ಬಾರಿ ಯೋಚಿಸಿದ್ದೇನೆ. ಉತ್ತರವೇ ದಕ್ಕುತ್ತಿಲ್ಲ ನನಗೆ. ನೀನೆ ಉತ್ತರಿಸಬೇಕು ಸವಿ.
ನೀ ಜೊತೆ ಇಲ್ಲವೆಂಬ ವಿರಹದ ಬೇಗೆಯಲಿ ಬೇಯುವಾಗ ನಾನೊಬ್ಬನೆ ಕುಂತು ಮನಸ್ಸಿಗೆ ಅದೆಷ್ಟು ಸಮಾಧಾನ ಹೇಳಿಕೊಳ್ತಿನಿ ಗೊತ್ತಾ? ತೀರ ಆಸೆ ಪಡಬೇಡ, ದೊಡ್ಡವರ ಮನೆಯ ಒಬ್ಬಳೆ ಮಗಳು, ಶ್ರೀಮಂತಿಕೆಗಿಂತ ಚೆಲುವು ತುಟ್ಟಿ. ಅವಳೆಲ್ಲಿ, ನೀನೆಲ್ಲಿ. ಕೊಳಲಿಗೆ ಒಲಿದಳೋ ದನ ಕಾಯುವವನ ನೆರಳಿಗೆ ಒಲಿದಳೊ ಆದರೆ ಬದುಕಿನುದ್ದಕ್ಕು ನಡೆದು ಜೊತೆಗೆ ಬರೆಬೇಕು ಅಂದರೆ ಹೇಗೆ ಮನಸೆ? ಎಂದು. ನೀನು ನನ್ನವಳೆಂಬ ಹಮ್ಮು, ಭಿಮ್ಮು, ಹೆಮ್ಮೆ, ನಂಬಿಕೆ, ಯಾತನೆ, ಪ್ರಾರ್ಥನೆ, ನಿವೇಧನೆ, ಆಲಾಪನೆ, ಎಲ್ಲವು ಇವೇ ಸಖಿ, ಒಂದೊಮ್ಮೆ ತೊರೆದು ಹೋದರೆ ನೀನು ‘ಒಡೆದು ಹೋದ ಕೊಳಲು ಮಾತ್ರ’ ಉಳಿಯುತ್ತದೆ. ಮನಸ್ಸೆ ಆಸೆ ಕೊಂದುಕೊ, ನಿನಗೆ ಸಿಗಬೇಕು ಎಂದು ಹಣೆಯಲ್ಲಿ ಬರೆದಿದ್ದರೆ ಯಾರಪ್ಪನಿಂದಲು ತಪ್ಪಿಸಲಾಗದು – ಹಾಗಂತ ತುಂಬ ಹೇಳುತ್ತೇನೆ. ಹೇಳಿದಂತೆಲ್ಲ ಹಟಕ್ಕೆ ಬಿಳುತ್ತದೆ ಮನಸ್ಸು. ಅದು ರಚ್ಚೆಹಿಡದ ಮಗು. ಕಡೆಗೆ ನಾನೆ ಸೋಲುತ್ತೇನೆ. ಸುಮ್ಮನಾಗುತ್ತೇನೆ. ಮನಸ್ಸು ಆಗ ಮಾತನಾಡುವ ಹಕ್ಕಿ.
ಎದೆಯ ಗೂಡಿನಲ್ಲಿ ಹಕ್ಕಿ ಗೂಡು ಕಟ್ಟಿದೆ
ಪ್ರೇಮದ ಪಯಣಕ್ಕೆ ಸಿದ್ದವಾಗಿ ನಿಂತಿದೆ
ಒಲಮೇ ಬಾಂಗಳದ ತುಂಬಾ ರೆಕ್ಕೆ ಬಿಚ್ಚಿ
ನಲ್ಲೆಯನ್ನರಸುತ್ತಾ ತೇಲಾಡಿದೆ.
ಅರ್ದ ಚೆಂದಿರನ ಅವಳ ಕಣ್ ಕವಡೆಯ
ಮೇಲೆ ಕುಳಿತು ಹೃದಯದೋಲೆ ಓದುತಿದೆ…,
ಯಾವತ್ತೋ ಒಂದು ನವಿರು ಮುಂಜಾವಿನ ಝಡಿ ಮಳೆಯಂತೆ ನಿನ್ನಲ್ಲಿಗೆ ಬಂದು ಸೇರಿಕೊಳ್ಳುವೆ. ನೀನಿರುವಲ್ಲಿಗೆ. ಒಲುಮೆಯ ಮಳೆಯನ್ನು ಎಗ್ಗಿಲ್ಲದೆ ಹೃದಯ ನೆಲದ ಮೇಲೆ ಸುರಿದುಬಿಡುವೆ. ಆಗ ಈ ನಯನದಲ್ಲಿ ನಿನ್ನ ನಗುವಿನ ಪ್ರತಿ ಬಿಂಬವಷ್ಟೆ ತೇಲಾಡುತ್ತಿರಲಿ ಸಖಿ. ಎದೆಯಲ್ಲಿ ನಿನ್ನ ಒಲವಿನ ಪ್ರೇಮದ ಸುಗ್ಗಿಯ ಹೃದಯ ಮಿಲನಗಳ ಹಾಡು ಸುಮ್ಮನೆ ಚಿಮ್ಮುತ್ತದೆ. ನಿನ್ನ ನುಣುಪು ಬೆರಳುಗಳಿಂದ ದಣಿವಿಲ್ಲದ ವೈಣಿಕನಂತೆ ಈ ಹೃದಯ ತಂತಿಯನ್ನು ಮೀಟುತ್ತಿರು, ಯುಗಳ ಗೀತೆ ನಮ್ಮಿಬ್ಬರ ಮಿಲನದಂತೆ ಸುಖಿಸುವುದು. ನಿನ್ನೆದೆ ಬೀಗಿತಕ್ಕೆ ಪ್ರೀತಿಯ ನಿರಂಥರ ಧಾರೆ ಸುರಿಸುವೆನಾಗ. ನಿನ್ನ ತಬ್ಬುಗೆಯಲ್ಲಿ ಕರಗಿಬಿಡುವೆ. ನಿನ್ನ ಅಮ್ಮನಂತ ಮಡಿಲಿನ ಮಗುವಾಗಿ ಮೆರೆದು ಬೀಡುವೆ. ಆಗ ಆಗಲಿ ಹೃದಯಗಳ ಸಂಗಮ ನಲ್ಲೆ. ಹೃದಯಗಳ ಮಿಲನಮಹೋತ್ಸವವೆಂಬುದು ಅತ್ಮಾನು ಸಂಧಾನ ಕಣೆ, ಪ್ರೇಮ ಕಾಮದೆಡೆಗೆ ಕರೆದುಕೊಂಡೋಗುವ ಕೈ ತೋಟ. ಕಾಮವೆಂಬುದು ದೇಹಗಳ ಮಿಲನಮಹೋತ್ಸವ. ಹೃದಯ ಮಿಲನ ಪ್ರೇಮಕ್ಕೆ ಮುನ್ನುಡಿ ಬರೆದರೆ, ದೇಹಗಳ ಮಿಲನ ನಮ್ಮಿಬ್ಬರ ನಂಬಿಕೆಯ ಬದುಕಿಗೆ ಮುನ್ನುಡಿಯಾಗಬೇಕು. ಅದು ನಮ್ಮಿಬ್ಬರ ಅತ್ಮಾನುಸಂಧಾನ.
ಹೃದಯ ಮಿಲನಗಳ ಸಂಗಮ
ಬದುಕಿಗೆ ಅದುವೇ ಆಲಿಂಗನ
ಬರೆಯುವೇ ಒಲುಮೆಯ ಪ್ರೇಮದೋಲೆ
ನಿನ್ನೆಸರಿನಲಿ ಕವಿತೆಯ ಜೊತೆಗೂಡಿ
ನಿನಗಾಗಿ ಸಖಿ ಮನದ ಪುಟಗಳಲಿ….,
ನಿನ್ನ ಸಂದೇಶಗಳು ಸಮಯಕ್ಕೆ ಸರಿಯಾಗಿ ನನ್ನ ಬಂದು ಸೇರದೆ ಇದ್ದಾಗ ಒಂದೊಂದು ಸಲ ಹೇಗೆ ಕೆರಳಿಬಿಡುತ್ತೇನೆ ಗೊತ್ತ Sweeti? I go crazy. ರಾತ್ರಿ ಶತ್ರುವಾಗುತ್ತೆ. ಏಕಾಂತಕ್ಕೆ ಯಾವ ಶಿಕ್ಷೆ ಹೇಳು? ಮಧುರಯೆಂಬ ಹೆಣ್ಣ ಮನೆಯಂಗಳದ ತುಂಬೆಲ್ಲಾ ತನ್ನ ಕಾಲ್ಗೆಜ್ಜೆಯ ಸಪ್ಪಳವನ್ನು ಕಿವಿಗಪ್ಪಳಿಸುವಂತೆ ನಡೆದಾಡುತ್ತಿರುತ್ತಾಳೆ. ಆದರೆ ಅವಳನ್ನು ನಾನೆಂದು ಮನೆಗೆ ಸೇರಿಸಿಕೊಂಡಿಲ್ಲ. ಸುಮ್ಮನೆ ಬೆಳದಿಂಗಳ ರಾತ್ರಿಯಲ್ಲಿ ನಿದ್ರೆ ಬಾರದ ತಾರೆಗಳ ಜೊತೆ ಅಲೆಯಲು ಹೋರಡುತ್ತೇನೆ. ವಿರಹದ ಕಾಡಾರಣ್ಯದಲ್ಲಿ ನಿನ್ನ ಸವಿ ನೆನಪುಗಳನ್ನು ಬೇಟೆಯಾಡಲು. ಒಲುಮೆಯ ಹೆಜ್ಜೆನನ್ನುಡುಕುವ ಕರಡಿಯಾಗಿ ನಾನು, ಅದು ನನ್ನ ಹಾಡುಗಳಿಲ್ಲದ ಮೌನ ಪಯಣ. ಕತ್ತಲಿನಲ್ಲು ದಾರಿ ತೊರುವ ಆ ತಾರಾಗಣ, ಮತ್ತು ನಿನ್ನ ನೆನಪುಗಳು, ಅಲ್ಲೆಲ್ಲೊ ಬೀದಿಯ ತಿರುವಿನಲ್ಲಿ ನಿನ್ನ ಸವಿ ನೆನಪುಗಳ ಜೊತೆ ಸಂಭಾಷಣೆಗೆ ಕುಳಿತುಬಿಡುತ್ತೇನೆ. ಬಂದು ಮನೆಯಲ್ಲಿ ಮಲಗಿದರೆ ಹಿತ್ತಲಿನಲ್ಲಿ ಯಾರೋ ಮಧುರ ಸ್ವರ ಹೊಮ್ಮಿಸಿದಂತೆ, ಇಡೀ ರಾತ್ರಿಯಲ್ಲಿ ನಿದ್ದೆಬಾರದ ಹೊತ್ತಿನಲ್ಲಿ ಕೇಳಿಸುತ್ತದೆ ಅಸ್ಪಷ್ಟ ಗಾಯನ. ಎದ್ದು ಹೋಗಿ ಹಿತ್ತಲಲ್ಲಿ ಇಣುಕಿದರೆ ಅಲ್ಲಿ ಯಾರು ಇರುವುದಿಲ್ಲ. ನಿನ್ನ ಬೆಳದಿಂಗಳ ಬಣ್ಣದ ದುಪ್ಪಟ್ಟಾ ಮಾತ್ರ ಅಲ್ಲಿ ಸುಮ್ಮನೆ ಬಿದ್ದುಕೊಂಡಿರುತ್ತದೆ. ಬೇಸರದ ಮಿಡಿ ನಾಗರ, ಸುಳಿದಿರುಗಿ ಮಲಗಿದಲ್ಲೆ ಸದ್ದಿಲ್ಲದೆ ತನ್ನ ಪೊರೆ ಕಳಚಿಟ್ಟು ಹೋದ ಹಾಗೆ, ಅಲ್ಲಿಂದ ಸುರುವಾಗುತ್ತೆ ನಿನ್ನ ನೆನಪುಗಳನ್ನು ಎಕ್ಕಿ ತಂದು ಬೆಡ್ ಶೀಟ್ ಮಾಡಿಕೊಂಡು ಹೊದ್ದು ಮಲಗಿದಾಗ ನಿನ್ನ ಸಿಹಿ ಕನಸಿನ ಪಯಣ.
ಮನಸುಗಳ ಮಿಲನಮಹೋತ್ಸವೆಂಬುದು
ಪ್ರೇಮಾನು ಸಂಧಾನ ಕಣೆ
ಹೃದಯಗಳ ಮಿಲನಮಹೋತ್ಸವವೆಂಬುದು
ಅತ್ಮಾನು ಸಂಧಾನ ಕಣೆ…,
-ಸಿದ್ದುಯಾದವ್ ಚಿರಿಬಿ…