ಭಾವಗಳ ತೋಟದಲ್ಲೊಂದು ಹೂವ ಬಯಸಿದ ಮನಕೆ ಆ ಹೂವೊಂದು ಮಾಲೆ ಸೇರಿದ ದಿನ ಬಹಳ ಬೇಸರ. ಹೂವಾಗೋ ಸಮಯದಲ್ಲಿ ಮೊಗ್ಗಾಗುತ್ತಿದ್ದ ಭಾವಗಳೆಲ್ಲಾ ಯಾವಾಗ ನವಿರಾಗಿ ಹೂವಾದವೋ ಗೊತ್ತೇ ಆಗದಂತೆ ಕಳೆದುಹೋಗಿತ್ತಲ್ಲ ಕಾಲ. ಮೊಗ್ಗಾಗಿದ್ದ ಜೀವಗಳೆಲ್ಲಾ ಹೂವಾಗಿ ಒಂದೊಂದಾಗಿ ತೋಟದಿಂದ ಖಾಲಿಯಾಗುತ್ತಿದ್ದರೂ ಮಾಲೆಯಾದರೆ ಆ ಹೂವೊಂದಿಗೇ ಆಗಬೇಕೆಂಬ ಕನಸು ಬೇಸಿಗೆಯ ಬೆವರಂತೆ ಹೆಚ್ಚಾಗುತ್ತಲೇ ಇತ್ತು.ಇನ್ನೊಂದು ಹೊಸ ಮಾಲೆ, ಎನ್ನೆಷ್ಟು ಸಮಯದಲ್ಲಿ ನನ್ನದಿರಬಹುದೆನ್ನುತ್ತಾ ಸುಮ್ಮನೇ ದಿಟ್ಟಿಸಿದವನಿಗೊಮ್ಮೆ ದಿಗ್ರ್ಭಾಂತಿ. ಬಯಕೆ ಬೇಸಿಗೆಯಲ್ಯಾವ ಮಾಯೆಯಲ್ಲಿ ಮಳೆ ಬಂತೋ, ಗೊತ್ತೇ ಆಗದಂತೆ ಕನಸಿನಾಕೃತಿ ಕರಗಿಸಿದ ಆ ಮಾಲೆ ಉಳಿಸಿದ್ದು ಬರೀ ನೆನಪು.
ಬೆಳಗ ಸೂರ್ಯನಿಗೇಕೆ ಹೊತ್ತಿಗೊಂದು ಬಣ್ಣ ? ಶಾಂತ ಶಶಿಗೇಕಿಲ್ಲ ಹಲವು ವರ್ಣ ಎಂಬ ಪ್ರಶ್ನೆ ಕುಡಿಯೊಡೆಯುತಿರುವ ಸತ್ವದ್ದು ತನಗಾಸರೆಯಿತ್ತಿರೋ ಮಹಾಸತ್ವಕ್ಕೆ. ಇದಕ್ಕೆ ನಾನುತ್ತರಿಸೋ ಬದಲು ಮೊಳಕೆಯಾಗಿ, ಬೇರಾಗಿ, ಎಲೆಯಾಗಿ, ಚಿಗುರಾಗಿ ಎಲ್ಲೆಲ್ಲೂ ಹರಿದಾಡುತ್ತಿರೋ ನನ್ನಿತರ ಸತ್ವಗಳನೇ ಕೇಳು , ಅವರುತ್ತರಿಸಿಯಾರು ಎಂದಿತಾ ಮಹಾಸತ್ವ. ಪೌರ್ಣಿಮೆಯಲ್ಲಿ ಹಳದಿಯಾಗಿ, ಅಮವಾಸ್ಯೆಯಲಿ ಕಪ್ಪಾಗಿ, ಉಳಿದ ದಿನಗಳಲಿ ಕ್ಷಯವಾಗಿ, ಅಕ್ಷಯವಾಗೋ ಚಂದ್ರನ ಕಲೆ ಈಗ ತಾನೇ ಕಣ್ಣೊಡೆಯುತಿರುವ ಕುಡಿಗೆಲ್ಲಿ ತಿಳಿದೀತು ? ಚಂದ್ರನಾಗಲೀ, ಸೂರ್ಯನಾಗಲೀ ತನ್ನ ಕಂಡ ದಿನವೇ ತನ್ನ ಕೊನೆಯೆಂಬ ಬೇರಿನ ಭಯ, ಸೂರ್ಯನೆಂಬುದು ಜಗದ ಹೊಟ್ಟೆ ತುಂಬಿಸಲು ಆಹಾರ ತಯಾರಿಸಲೊಂದು ಒಲೆಯಷ್ಟೇ ಎಂದೆನುವ ಎಲೆಯ ಭಾವ ಕುಡಿ ಹೇಗೆ ಅರಿತೀತು ? ಚುಕ್ಕಿಗಳ ರಂಗೋಲಿ ಬಿಡಿಸೋ ಚಂದ್ರನ ಸವಿಯನ್ನು, ಹಕ್ಕಿಗಳ ಸಾಲ ಹೊರಡಿಸೋ ರವಿಯ ಸಿರಿಯನ್ನು ವರ್ಣಿಸಲೊಂದು ಹಕ್ಕಿಯೇ ಬರಬೇಕಿಲ್ಲಿ, ಮಕರಂದ ಹೀರೋ ನೆಪದಲ್ಲಿ. ಮೊಗ್ಗಾಗಿ ಮುಂಜಾನೆಯ ಕಂಡ ಜೀವ ಹೂವಾಗಿ ದಿನಗಳೆದು ಒಂದು ಮುಸ್ಸಂಜೆಯಲ್ಲಿ ಶಶಾಂಕನ ರೂಪಾಂತರಗಳ ಕಾಣುತ್ತಲೇ ಬಾಡಿ,ತೊಟ್ಟು ಕಳಚಿ ತಾನೂ ಹೊಸ ರೂಪ ಪಡೆಯೋ ಹೊತ್ತಿಗೆ ತಾನಾಗೇ ಅರಿವಾದೀತೆಂದು ಸುಮ್ಮನಾಯಿತೇನೋ ಆ ಮಹಾಸತ್ವ.
ಅಷ್ಟರಲ್ಲೇ ಅರಿವಾಗಿತ್ತು ಸತ್ವಕ್ಕೆ ತನ್ನೆಸರು ಮೊಗ್ಗು ಎಂದು. ಮೊಗ್ಗು ಮೊಗ್ಗು ಎಂದು ಎಲ್ಲಾ ಕರೆದದ್ದಕ್ಕೆ ತನ್ನೆಸರು ಮೊಗ್ಗೆಂದಾಯಿತಾ ಅಥವಾ ಮೊಗ್ಗೆಂದು ತನ್ನೆಸರು ಮುಂಚೆಯೇ ಇದ್ದಿದ್ದಕ್ಕೆ ಎಲ್ಲಾ ಮೊಗ್ಗೆಂದರಾ ಎಂಬುದದರ ಸಂದೇಹ. ಮತ್ತೆ ಮಹಾಸತ್ವವನ್ನೇ ಪ್ರಶ್ನಿಸಲಾ ಎಂದರೆ ಮತ್ತೆ ಮತ್ತೆ ಅದನೇ ಕೇಳಲೊಂದು ಬೇಸರ. ಬೆಳೆದಿಲ್ಲವೇ ನೀನು ? ಅರಿಯಲಾರೆಯ ಜಗವಾ ಎಂದರೇನನ್ನಲೆಂದು ಅಳುಕು. ಮಹಾಸತ್ವವೂ ಮುಂಚೆಯೊಂದು ಸತ್ವವಾಗಿರಬಹುದಾ ? ಆಗಿದ್ದರದು ಬೇರಾಗಿತ್ತಾ ? ಎಲೆಯಾಗಿತ್ತಾ ? ಮೊಗ್ಗಾಗಿತ್ತಾ ? ಅಥವಾ ಇವಿಷ್ಟೂ ಅಲ್ಲದೆಯೂ ಬೇರಿನ್ನೇನಾದರೂ ? ಯೋಚನೆಯಲ್ಲಿದ್ದಾಗಲೇ ಮೈಮನವೆಲ್ಲಾ ಬೆಂದ ಭಾವ. ಹಿಂದಿನ ರಾತ್ರೆ ಅನುಭವಿಸಿದ ಕೋಮಲತೆಯಲ್ಲಿ ನಿದ್ರೆಗೆ ಜಾರಿದ್ದವನಿಗೆ ಎಚ್ಚರಿಸಿದ ಹಕ್ಕಿಗಳು ಏನು ಹೇಳಬಂದಿರಬಹುದೋ ? ನನ್ನ ಪ್ರಶ್ನೆಗಳಿಗೇನಾದರೂ ಉತ್ತರವಿದ್ದೀತೇ ಅವರ ಬಳಿಯಲ್ಲಿ. ಆ ಕಳೆದ ಘಂಟೆಗಳಲ್ಲಿ ಕೇಸರಿ, ಹಳದಿ ಹೀಗೆ ಹಂತ ಹಂತವಾಗಿ ಬಣ್ಣ ಬದಲಾಯಿಸುತ್ತಿದ್ದ ರವಿಯೀಗ ಬೆಳ್ಳಗಾಗಿದ್ದ. ಬೆಟ್ಟ,ಮೋಡಗಳಾಚೆ ಆಡುತ್ತಿದ್ದವನು ಈಗ ತಲೆಯ ಮೇಲೇ ಪ್ರತ್ಯಕ್ಷನಾಗಿದ್ದ. ಉರುಳಿದ್ದು ಘಂಟೆಗಳಂತೆ, ತನ್ನಲಾಗುತ್ತಿರೋ ಬದಲಾವಣೆಗಳು ಹೂವೆಂದು ಕರೆಯೋ ಘಟ್ಟದೆಡೆಗಿನ ಪಯಣವಂತೆ ಎಂದು ಅರಿತಿತ್ತಾ ಸತ್ವ.
ದಿನವೆಂಬ ಒಂದಿಷ್ಟು ಘಂಟೆಗಳ ಕಾಲದಲ್ಲಿ ತಮ್ಮ ಜೀವನ ಪಯಣವನ್ನೇ ಮುಗಿಸಿ ಮತ್ತೇನೋ ಆಗೋ ಸತ್ವಗಳಿಗಿಂತ ಹೆಚ್ಚಿನವದಿಯ ತನ್ನ ಜೀವನದಲ್ಲಿ ಮಹತ್ವದ್ದೇನೋ ಇರಬಹುದೆಂಬ ಆಸೆಯಲ್ಲಿದ್ದಾಗಲೇ ಸೆಳೆದಿದ್ದು ಮತ್ತೊಂದು ಹೂವು. ಕಣ್ಣಳತೆಯಲ್ಲಿದ್ದರೂ ಮಾತಿಗಿಳಿಯಲು ಬೇಕಿತ್ತು ಪವನನ ಸಹಾಯ. ಗಾಳಿಯ ಪ್ರತೀ ಬೀಸುವಿಕೆಯಲ್ಲೂ ನಡೆದಿತ್ತೊಂದಿಷ್ಟು ಮಾತುಕತೆ ಹೀಗೇ ಸುಮ್ಮನೆ. ಬೀಸಿದ ಮಾರುತದಲ್ಲೇನೂ ದನಿಯಿಲ್ಲದಿದ್ದರೆ ಏನಾಗಿರಬಹುದತ್ತಲೆಂಬ ದುಗುಡ. ಸದ್ದೇ ಇಲ್ಲದ ಸಮಯವೆಲ್ಲಾ ಆತಂಕದ ಕ್ಷಣಗಳೇ. ಕಳಿಸಿದ ಸಂದೇಶದುತ್ತರಕ್ಕಾಗಿ, ಅತ್ತಲಿನ ಸಂದೇಶಕ್ಕಾಗಿನ ಕಾತುರತೆ ಪ್ರತೀ ಮಾರುತವನ್ನೆದುರು ನೋಡುವಂತೆ ಮಾಡುತ್ತಿತ್ತು. ಒಂದೆಡೆಯಿದ್ದ ನನ್ನ ಮಾತೃನೆಲೆಯಿಂದ ಬೇರ್ಪಡಿಸಿ ಮತ್ತೆಲ್ಲೋ ತಂದಿಟ್ಟರು ಕೆಲವರು. ಮುಂದಿನ ಬೆಳವಣಿಗೆಗೆಗದು ಪೂರಕವೆಂದರು, ಅದೆಂತದೋ ಜೀವನದ ಹಂತವೆಂದರದರನು. ದೂರದಲ್ಲೆಲ್ಲೋ ಇದ್ದ ಹೂವಿನ ಜೊತೆಗಿನ ಮಾತುಕತೆ ಗಾಳಿಯ ಮೇಲೇ ನಿರ್ಧರಿತವಾಗಿತ್ತೀಗ. ಅತ್ತ ಬೀಸಿದ ಗಾಳಿಯಿತ್ತ ಬೀಸಿದರಷ್ಟೇ ಏನಾದರೂ ಮಾತುಕತೆಯಾಗೋ ಸಾಧ್ಯತೆ. ಇತ್ತ ಬೀಸಿದ ಪ್ರತೀ ಮಾರುತವೂ ಅತ್ತ ಬೀಸೇ ಇತ್ತ ಬಂದಿತ್ತೆಂಬ ಖಚಿತತೆಯೆಲ್ಲಿ ? ಇತ್ತ ಬೀಸಿದ ಮಾರುತದೊಂದಿಗಿನ ಸಂದೇಶ ಅಲ್ಲೂ ಸಾಗೀತೆಂಬ ನಿರೀಕ್ಷೆಯೀಡೇರೀತೇ ? ಕಳೆದ ಕಾಲದ ಜೊತೆಗೆ, ಎದುರಿಗಿಲ್ಲದ ದೇಹದಾಕಾರ ನೆನಪ ಮರೆಸೀತೇ ? ಏನಾಗಿರಬಹುದೆಂಬ ಪ್ರಶ್ನೆಗಳಿಗೊಂದು ಪೂರ್ಣವಿರಾಮವಿತ್ತಿತ್ತು ಕಂಡಾ ಹೊಸ ಮಾಲೆ. ಮಹಾಸತ್ವದ ನೆನಪು, ಜೊತೆಯಾಗಿದ್ದ ಉಳಿದ ಸತ್ವಗಳ ನೆನಪ ಹಿಂದೆ ತನ್ನ ನಿರೀಕ್ಷೆಯಲ್ಲಿರೋ ಮತ್ತೊಂದು ಹೂವಿನ ಅರಿವೇ ಇಲ್ಲವಾಗಿತ್ತು ಜೀವಕ್ಕೆ. ಜೀವದ ಗುರಿಯೇನೇ ಇದ್ದರೂ ದೇವನ ಗುರಿಯಿನ್ನೇನೋ ಇದ್ದಿರಬಹುದಾ ? ಹೂವಾಡಿಗನ ಹೊಸ ಮಾಲೆಯಲ್ಲೀ ಸತ್ವದ ಜೊತೆಗೆ ಮತ್ತೊಂದು ಸತ್ವದ ಜೋಡಿ ನಿಕ್ಕಿಯಾಗಿತ್ತು. ಹೊಸಮಾಲೆಗೊಂದು ದಾರ ಸಿದ್ದವಾಗಿತ್ತು.
*****