ಹುಲಿ ವಿಧವೆ ರಹೀಮಾ ಬೇಗಂ: ಅಖಿಲೇಶ್ ಚಿಪ್ಪಳಿ


ಮೊನ್ನೆ ಭಾನುವಾರ ಬೇರೆ ಯಾವುದೋ ವಿಚಾರಕ್ಕೆ ಊರಿನಲ್ಲಿ ಮೀಟಿಂಗ್ ಸೇರಿದ್ದೆವು. ಹತ್ತಾರು ಜನರಿದ್ದ ಆ ಗುಂಪಿನಲ್ಲಿ ರಸ್ತೆ ಅಗಲೀಕರಣದ ವಿಷಯ ಅದೇಗೋ ನುಸುಳಿ ಬಂತು. ಗ್ರಾಮಪಂಚಾಯ್ತಿಯ ಸದಸ್ಯರೊಬ್ಬರು ಹೇಳಿದರು. ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಬದಿಯ ಮರಕಡಿಯಲು ಪರವಾನಿಗೆ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂಬುದು ಸಾರಾಂಶ. ಸರಿ ಪರಸ್ಪರ ಚರ್ಚೆ ಶುರುವಾಯಿತು.  ಕೆಲವರು ಹೇಳಿದರು ಅಭಿವೃದ್ಧಿಗಾಗಿ ರಸ್ತೆ ಬದಿಯ ಸಾಲು ಮರಗಳನ್ನು ತೆಗೆಯುವುದು ಅನಿವಾರ್ಯ. ಹಿಂದೆ ಅದ್ಯಾವುದೋ ಕಾಲದಲ್ಲಿ ಜನರು ನಡೆದುಕೊಂಡೊ ಅಥವಾ ಎತ್ತಿನ ಗಾಡಿಗಳಲ್ಲಿ ದೂರದೂರುಗಳಿಗೆ ಹೋಗುತಿದ್ದರು. ಅವರಿಗೆ ಬಿಸಿಲಿನ ಝಳ ತಾಗಬಾರದು ಎಂದು ರಾಜರ ಕಾಲದಲ್ಲಿ ನೆಟ್ಟ ಸಾಲು ಮರಗಳು ಇವತ್ತು ಅಪ್ರಸ್ತುತ. ಇವತ್ತಿನ ದಿನಗಳಲ್ಲಿ ಯಾರೂ ನಡೆದುಕೊಂಡು ಹೋಗುವುದಿಲ್ಲ. ಎಲ್ಲರ ಬಳಿಯೂ ವಾಹನಗಳಿವೆ. ಸಾರ್ವಜನಿಕ ಸಾರಿಗೆ ಸಂಪರ್ಕಗಳಿವೆ. ಇನ್ನು ಖಾಸಗಿ ವಾಹನಗಳಲ್ಲಿ ವಾತಾನುಕೂಲದ ವ್ಯವಸ್ಥೆ ಇರುತ್ತದೆ. ಆದ್ದರಿಂದ ದಾರಿ ಬದಿಯ ಸಾಲುಮರಗಳನ್ನು ತೆಗೆಯುವುದು ಸರಿ. ಇನ್ನೊಬ್ಬರು ಹೇಳಿದರು ಈಚೆಗೆ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಹಳೇ ಕಾಲದ ರಸ್ತೆಯ ಅಗಲ ಸಾಲುವುದಿಲ್ಲ. ಆದ್ದರಿಂದ ಮರಗಳನ್ನು ತೆಗೆಯುವುದು ಸೂಕ್ತ. ಇನ್ನೊಬ್ಬರು ಪ್ರಕಾರ ಗಾಳಿ-ಮಳೆಗೆ ಮರಗಳು ಬಿದ್ದು ಜನರಿಗೆ ಅಪಾಯ ಸಂಭವಿಸಬಹುದು. ಆದ್ದರಿಂದ ಮರಗಳನ್ನು ತೆಗೆಯುವ ಕಾರ್ಯ ಸ್ವಾಗತಾರ್ಹ. ಇವರೆಲ್ಲರೂ ವಿದ್ಯಾವಂತರು ಜೊತೆಗೆ ಬುದ್ಧಿವಂತರೂ ಕೂಡ. 

ಆದರೆ ಅವಿವೇಕಿಗಳು ಎಂದು ಹೇಳಬಹುದು. ಇವೆರಲ್ಲಾ ವಾದಗಳೂ ಮನುಷ್ಯನ ಅಭಿವೃದ್ಧಿಯೆಂಬ  ಸ್ವಾರ್ಥದ ಸುತ್ತಲೇ ಸುತ್ತುತ್ತಿದ್ದವು. ಅಲ್ಲಾ ಮಾರಾಯರೆ, ನಿಮಗೆ ಮಾನವ ಹಕ್ಕು, ಮಾನವನ ಪ್ರಾಣ, ಮಾನವನ ಅಭಿವೃದ್ಧಿ ಮಾತ್ರ ಮುಖ್ಯವೇ. ಒಂದು ಮರವೆಂದರೆ ಏನೆಂದು ತಿಳಿದಿರಿ? ಬಲಿತ ಅಥವಾ ಹಣ್ಣು-ಹೂ ಬಿಡುವ ಮರಗಳಿಂದ ಮಾನವನ ಹೊರತಾಗಿ ಇತರ ಪ್ರಾಣಿಗಳಿಗೆ ಆಹಾರ ರೂಪದಲ್ಲಿ, ಆಶ್ರಯದ ರೂಪದಲ್ಲಿ, ಇನ್ನೂ ಪಟ್ಟಿ ಮಾಡಲಾರದ ಅನೇಕ ರೂಪದಲ್ಲಿ ಪ್ರಯೋಜನವಿದೆ. ನೀವು ನಿಮ್ಮ ವಾಹನಗಳಿಗೆ ವೇಗವಾಗಿ ತಿರುಗಾಡಲು ಅಗಲವಾದ ರಸ್ತೆ ನಿರ್ಮಾಣಕ್ಕೆ ಮರಗಳನ್ನು ಕಡಿಯುವುದು ಎಷ್ಟು ಸರಿ. ಭಾರತದ ಸಂವಿಧಾನದಲ್ಲಿ ಪ್ರಾಣಿಗಳಿಗೂ ಬದುಕುವ ಹಕ್ಕನ್ನು ಕಲ್ಪಿಸಲಾಗಿದೆ ಎಂಬುದನ್ನು ಮರೆತು ನೀವುಗಳು ಮಾತನಾಡುತ್ತಿರುವುದು ಸರಿಯಲ್ಲ ಎಂದೆ. ಜೀವಿ ವೈವಿಧ್ಯದ ಪ್ರಾಮುಖ್ಯತೆಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದೆ. ನಾನು ಹೇಳಿದ ಎಲ್ಲಾ ವಿಚಾರಗಳೂ ಅಲ್ಲಿ ಎಲ್ಲರಿಗೂ ತಿಳಿದಿತ್ತು. ಆದರೂ ಅವರ್‍ಯಾರು ಅಂದಾದುಂಧಿ ಅಭಿವೃದ್ಧಿಯ ವಿರುದ್ಧವಾಗಿ ಖಾಸಗಿಯಾಗಿಯೂ ಚರ್ಚೆ ಮಾಡುವ ಮನ:ಸ್ಥಿತಿಯಲ್ಲಿ ಇರಲಿಲ್ಲ. ನನ್ನ ವಾದವನ್ನು ಒಪ್ಪುತ್ತಲೇ ವಿರೋಧಿಸುವ ಇಬ್ಬಂದಿತನವನ್ನು ತೋರಲು ಶುರು ಮಾಡಿದರು. ಇನ್ನೂ ೫೦ ವರ್ಷಗಳಲ್ಲಿ ಈ ದೇಶ ಯಾವ ಮಟ್ಟದಲ್ಲಿ ಇರಬಹುದು ಎಂಬ ಸ್ಪಷ್ಟ ಕಲ್ಪನೆ ಯಾರಿಗೂ ಇಲ್ಲ. ವಾಹನಗಳ ಮಾರಾಟ, ಅದರಿಂದ ರಾಜ್ಯ-ದೇಶಕ್ಕೆ ಸಿಗುವ ಆದಾಯ, ತೈಲೋತ್ಪನ್ನಗಳಿಂದ ಬರುವ ಆದಾಯ ಇತ್ಯಾದಿ ಪ್ರತ್ಯಕ್ಷ ಲಾಭಗಳ ಬಗ್ಗೆಯೇ ಚರ್ಚೆ ನಡೆಯುತ್ತದೆ. ಆರ್ಥಿಕ ತಜ್ಞರೂ ಕೂಡ ನಿಪ್ಟೀ, ಸೆನ್ಸೆಕ್ಸ್ ಎಂಬ ಷೇರುಪೇಟೆಯ ವ್ಯವಹಾರದ ಬಗ್ಗೆಯೇ ಹೆಚ್ಚಿನ ಒಲವು ತೋರುತ್ತಾರೆ. ನಿಸರ್ಗದ ಇತರ ಜೀವಿಗಳ ಸೇವೆಯನ್ನು ಯಾರೂ ಆರ್ಥಿಕವಾದ ದೃಷ್ಟಿಯಿಂದ ನೋಡುವುದಿಲ್ಲ. ಜೇನಿನ ಪರಾಗಸ್ಪರ್ಶದ ಕೆಲಸಕ್ಕೆ ಯಾರೂ ಹಣ ನೀಡುವುದಿಲ್ಲ.

ಕೀನ್ಯಾದ ಹಳ್ಳಿಗಳಲ್ಲಿ ಬಡತನವಿದೆ. ನಮ್ಮ ಹಳ್ಳಿಗಳಲ್ಲೂ ಬಡತನವಿದೆ. ಒಂದು ಕುಟುಂಬವನ್ನು ನಡೆಸುವ ವ್ಯಕ್ತಿ ಸಾಮಾನ್ಯವಾಗಿ ಮಹಿಳೆಯಾಗಿರುತ್ತಾಳೆ. ಪುರುಷಪ್ರಧಾನ ಜಗತ್ತಿನಲ್ಲಿ, ನಿಶ್ಚಿತವಾಗಿ ಕುಟುಂಬದ ಯಜಮಾನ ದುಡಿದು ತರುವ ವ್ಯಕ್ತಿಯಾದರೂ, ಇಡೀ ಕುಟುಂಬವನ್ನು ಸಲಹುವ ಜವಾಬ್ದಾರಿಯಿರುವುದು ಹೆಣ್ಣಿನ ಮೇಲೆ. ಪೇಟೆ ಜೀವನಕ್ಕೂ ಮತ್ತು ಹಳ್ಳಿಯ ಜೀವನಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಲಾಗಾಯ್ತಿನಿಂದ ಕೀನ್ಯಾದ ಹಳ್ಳಿಗಳ ಹೆಂಗಳೆಯರು ಉರುವಲಿಗಾಗಿ ಕಾಡನ್ನು ಅವಲಂಬಿಸಿದ್ದಾರೆ. ಪ್ರತಿನಿತ್ಯ ಮನೆಗೆ ಸಾಲುವಷ್ಟು ಒಣ ಉರುವಲನ್ನು ತರುವುದು ಅವರಿಗೊಂದು ಸವಾಲಾಗಿದೆ. ಮೊದಲೆಲ್ಲಾ ಊರಿನ ಸಮೀಪದಲ್ಲೆ ಕಾಡಿತ್ತು. ಪ್ರತಿದಿನ ಉರುವಲಿಗಾಗಿ ಇಡೀ ಊರು ಆ ಹತ್ತಿರ ಕಾಡುಗಳನ್ನು ಅವಲಂಬಿಸಿತ್ತು. ದಿನೇ ದಿನೇ ಕಾಡು ಊರಿನಿಂದ ದೂರವಾಗುತ್ತಾ ಹೋಯಿತು. ಈಗ ಒಂದು ಹೊರೆ ಕಟ್ಟಿಗೆಗಾಗಿ ಸುಮಾರು ೫ ಮೈಲುಗಳಷ್ಟು ದೂರದ ದಾರಿ ಸವೆಸಬೇಕಾಗಿದೆ. ಉರುವಲನ್ನು ತಂದರೆ ಮಾತ್ರ ಊಟ. ಊಟಕ್ಕೆ ಉರುವಲು ಅನಿವಾರ್ಯ. ಹೀಗಾಗಿ ಅಲ್ಲಿನ ಮಹಿಳೆಯರದ್ದು ತೀರದ ಗೋಳು. ಈ ಪರಿಸ್ಥಿತಿ ಭಾರತದ ಹಳ್ಳಿಗಳನ್ನೂ ಬಿಟ್ಟಿಲ್ಲ. ಮನೆಯ ಒಳಗಡೆ ಕಟ್ಟಿಗೆ ಒಲೆಯನ್ನು ಉರಿಸಿದಾಗ ಅಪಾರ ಪ್ರಮಾಣದ ಹೊಗೆ ಏಳುತ್ತದೆ. ಹಸಿಕಟ್ಟಿಗೆಯಿಂದ ಅಥವಾ ಮಳೆಗಾಲದಲ್ಲಿ ಅನ್ನ ಬೇಯಿಸುವ ಕೆಲಸ ಅತ್ಯಂತ ಕಷ್ಟಕರವಾದದು. ಕಟ್ಟಿಗೆ ಒಲೆಯ ಮುಂದೆ ಕುಳಿತು ಊದುಕೊಳವೆಯಿಂದ ಊದುತ್ತಾ ಬೆಂಕಿಯನ್ನು ಹದಗೊಳಿಸುತ್ತಾ ಅನ್ನ ಬೇಯಿಸುವಾಗ ಮಹಿಳೆಯರು ಅಪಾರ ಪ್ರಮಾಣದ ಹೊಗೆಯನ್ನು ಉಸಿರಾಡುತ್ತಾರೆ. ಇದರಿಂದಾಗಿ ಶ್ವಾಸಕೋಶದ ಕಾಯಿಲೆಗಳು ಅಮರಿಕೊಳ್ಳುತ್ತವೆ. ಸದಾ ಕೆಮ್ಮುತ್ತಾ, ಕಣ್ಣಿನಿಂದ ನೀರು ಸುರಿಯುತ್ತಾ ಇರುವ ಆ ಪರಿಸ್ಥಿತಿ ಯಾರಿಗೂ ಬೇಡ. ಲಂಡನ್ ಸ್ಕೂಲ್ ಆಫ್ ಹೈಜಿನ್ ಎಂಡ್ ಟ್ರಾಫಿಕಲ್ ಮೆಡಿಸಿನ್ ಸಂಸ್ಥೆಯ ಹೃದಯ ವಿಜ್ಞಾನ ಪತ್ರಿಕೆಯಲ್ಲಿ ವರದಿಯಾದ ಇತ್ತೀಚಿನ ಸಂಶೋಧನೆಯ ಪ್ರಕಾರ ವಾಯು ಮಾಲಿನ್ಯದಿಂದಾಗಿ ಬರೀ ಶ್ವಾಸಕೋಶ ಮತ್ತು ಉಸಿರಾಟದ ತೊಂದರೆ ಮಾತ್ರವಲ್ಲ, ಹೃದಯ ಬಡಿತದ ಮೇಲೂ ವಾಯುಮಾಲಿನ್ಯ ದುಷ್ಪರಿಣಾಮ ಬೀರುತ್ತದೆ. ಅಲ್ಲದೆ ರಕ್ತದ ಚಲನೆಯ ಮೇಲೂ ಪರಿಣಾಮ ಬೀರುತ್ತದೆ. 

ಲಿಂಗ ತಾರತಮ್ಯ ಪ್ರಪಂಚದ ಎಲ್ಲಾ ಕಡೆಗಳಲ್ಲೂ ಇದೆ. ಕೀನ್ಯಾದ ಹಳ್ಳಿಗಳ ಮಹಿಳೆಯರೂ ಲಿಂಗತಾರತಮ್ಯಕ್ಕೆ ಹೊರತಾಗಿಲ್ಲ. ಒಂದು ದೇಶದ ಪ್ರಗತಿಗೆ ಈ ಲಿಂಗತಾರತಮ್ಯವೆಂಬ ಆಚರಣೆ ಹಿನ್ನೆಡೆ ತರುತ್ತದೆ. ಯಾವ ದೇಶದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮೇಲುಗೈ ಸಾಧಿಸುತ್ತಾರೋ ಅಂತಹ ದೇಶ ನಿಶ್ಚಿತವಾಗಿ ಪ್ರಗತಿಯಲ್ಲಿ ಮುನ್ನಡೆ ಕಾಣುತ್ತದೆ. ಮೇಲೆ ಹೇಳಿದ ಕೀನ್ಯಾದ ಹಳ್ಳಿಗಳ ಮಹಿಳೆಯರು ತೆರೆದ ಒಲೆಯಿಂದಾಗುವ ವಾಯುಮಾಲಿನ್ಯ ಮತ್ತು ಆರೋಗ್ಯ ಮಾಲಿನ್ಯಕ್ಕೆ ಅಂತ್ಯ ಹಾಡಲು ನಿರ್ಧರಿಸಿದರು. ಅವರಿಗೆ ಆಹಾರ ಬೇಯಿಸಲು ಕಟ್ಟಿಗೆಯ ಹೊರತಾಗಿ ಯಾವ ಆಧುನಿಕ ಸೌಲಭ್ಯಗಳು ಲಭ್ಯವಿಲ್ಲ. ಕಟ್ಟಿಗೆಯಿಂದಲೇ ಉರಿಯುವ ಸುಧಾರಿತ ಒಲೆಯನ್ನು ಮಹಿಳೆಯರೇ ಸೇರಿ ಆವಿಷ್ಕರಿಸಿದರು. ಸ್ಥಳೀಯವಾಗಿ ಲಭ್ಯವಿರುವ ಮಣ್ಣು ಮತ್ತು ಸಗಣಿಯಿಂದ ಒಲೆಯನ್ನು ತಯಾರಿಸಿದರು. ನಮ್ಮಲ್ಲೂ ಅಸ್ತ್ರ ಒಲೆಯೆಂಬ ಸುಧಾರಿತ ಒಲೆ ಲಭ್ಯವಿದೆಯಾದರೂ ಹಳ್ಳಿಗಳಲ್ಲಿ ಈ ಒಲೆ ಅದೇಕೋ ಜನಪ್ರಿಯವಾಗಿಲ್ಲ. ಕೀನ್ಯಾದ ಮಹಿಳೆಯರು ತಯಾರಿಸಿದ ಈ ಹೊಸರೂಪದ ಒಲೆಯಿಂದಾಗಿ ಶೇ ೭೦% ಕಟ್ಟಿಗೆ ಉಳಿತಾಯವಾಗುತ್ತದೆ ಜೊತೆಗೆ ಅತ್ಯಂತ ಕಡಿಮೆ ಹೊಗೆಯನ್ನು ಉಗುಳುತ್ತದೆ. ಅಲ್ಲಿನ ಅಡುಗೆ ಮನೆಗಳೀಗ ಮಾಲಿನ್ಯಮುಕ್ತವಾಗಿವೆ. ಹೆಚ್ಚಿನ ಮಹಿಳೆಯರ ಮುಖದಲ್ಲಿ ಸಂತೃಪ್ತಿಯಿದೆ. ಜೊತೆಗೆ ವಾತಾವರಣಕ್ಕೆ ಸೇರಿಸುವ ಇಂಗಾಲಾಮ್ಲದ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು ಅಲ್ಲಿನ ಮಹಿಳೆಯರಲ್ಲಿ ಇನ್ನೂ ಹೊಸದನ್ನು ಸಾಧಿಸುವ ಆತ್ಮ ವಿಶ್ವಾಸ ಮೂಡಿದೆ.

ಈಗ ಮೊದಲಿನ ಪ್ಯಾರಾದ ಚರ್ಚೆಯನ್ನು ಇನ್ನೊಮ್ಮೆ ಕೈಗೆತ್ತಿಕೊಳ್ಳೋಣ. ಅದರ ಮುಂದುವರೆದ ಭಾಗವಾಗಿ ಹೇಳುವುದಾದರೆ, ಅಭಿವೃದ್ಧಿಯನ್ನು ಅಂದಾದುಂದಿಯಾಗಿ ಮಾಡಬಾರದು. ಬಡತನಕ್ಕೂ ಮತ್ತು ಹವಾಮಾನ ವೈಪರೀತ್ಯಕ್ಕೂ ಸಂಬಂಧವಿದೆಯೇ? ಹೆಚ್ಚಿನ ಬಾರಿ ಹೌದು ಎಂದೇ ಹೇಳಬೇಕಾಗುತ್ತದೆ. ಏಕೆಂದರೆ ಬಡತನವೆಂದರೆ ಊಟಕ್ಕೂ ತತ್ವಾರವಾಗಿರುವ ಸ್ಥಿತಿ. ಈ ಸ್ಥಿತಿಯಲ್ಲಿರುವವರ ಪರಿಸರದ ಮೇಲಿನ ಹೆಜ್ಜೆಯ ಗುರುತು ಚಿಕ್ಕದಾಗಿಯೇ ಇರುತ್ತದೆ. ಅವರ ಹತ್ತಿರ ಐಷಾರಾಮಿ ವಾಹನಗಳಿರುವುದಿಲ್ಲವಾದ್ದರಿಂದ, ಅವರ ತಲಾವಾರು ಇಂಗಾಲಾಮ್ಲ ಉಚ್ಚಿಷ್ಟ ಕಡಿಮೆಯಾಗಿರುತ್ತದೆ. ಭಾರತದ ಉದಾಹರಣೆಯನ್ನೇ ಇಟ್ಟುಕೊಂಡು ಈ ವಾದವನ್ನು ಪುಷ್ಟಿಕರಿಸಬಹುದು. ೩೩೪ ಸಸ್ಯ ಪ್ರಭೇದಗಳು, ೬೯೩ ವಿವಿಧ ಜಾತಿಯ ಪ್ರಾಣಿಗಳು ಇವುಗಳಲ್ಲಿ ೪೯ ಜಾತಿಯ ಸಸ್ತನಿಗಳು, ೫೯ ಜಾತಿಯ ಸರಿಸೃಪಗಳು ಮತ್ತು ೩೧೫ ಜಾತಿಯ ನೀರುಹಕ್ಕಿಗಳನ್ನು ಹೊಂದಿರುವ ಭಾರತ ಮತ್ತು ಬಾಂಗ್ಲಾದೇಶದ ಕರಾವಳಿ ಪ್ರದೇಶದಲ್ಲಿ ೧೬೦೦ ಚದರ ಕಿಲೋಮೀಟರ್ ವಿಸ್ತಾರವ್ಯಾಪ್ತಿಯಲ್ಲಿ ಹರಡಿಕೊಂಡಿರುವ ವಿಶ್ವದ ಅತಿದೊಡ್ಡ ಕಾಂಡ್ಲ ಅರಣ್ಯ ಪ್ರದೇಶದ ಹೆಸರು ಸುಂದರಬನ. ಈ ಸಂರಕ್ಷಿತ ಸುಂದರಬನದ ಹೊರಭಾಗದಲ್ಲಿ ೧೭ ಲಕ್ಷ ಜನ ವಾಸಿಸುತ್ತಿದ್ದಾರೆ. ಇದರಲ್ಲಿ ಹೆಚ್ಚಿನಂಶ ಜನ ಈ ಅರಣ್ಯ ಪ್ರದೇಶವನ್ನೇ ನೆಚ್ಚಿಕೊಂಡು ಬದುಕುತ್ತಿದ್ದಾರೆ. ಇಷ್ಟೇ ಆದರೆ ಇದೊಂದು ಜಗತ್ತಿನಲ್ಲೇ ಅಪೂರ್ವವಾದ ಘಟನೆಯಾಗಿರುತ್ತಿತ್ತು. ಆದರೆ ಈ ಪ್ರದೇಶದಲ್ಲಿ ಬಡತನ ತಾಂಡವವಾಡುತ್ತಿದೆ. 

ಇಲ್ಲಿಯ ಜನರ ಬಡತನವನ್ನು ನೋಡಿದರೆ ಸೋಮಾಲಿಯಾದ ನೆನಪು ಬರುವಷ್ಟು ಬಡತನ ತನ್ನ ಶ್ರೀಮಂತಿಕೆಯನ್ನು ಮೆರೆಯುತ್ತಿದೆ. ೨೦೦೭ರಲ್ಲಿ ಅಪ್ಪಳಿಸಿದ ಸಿರ್‍ಡ್ ಮತ್ತು ೨೦೦೯ರಲ್ಲಿ ಅಪ್ಪಳಿಸಿದ ಏಲಿಯಾ ಚಂಡಮಾರುತಗಳು ಸುಂದರಬನದ ಶೇ ೩೦% ಅರಣ್ಯವನ್ನು ನಾಶ ಮಾಡಿದ್ದಲ್ಲದೆ, ಅಲ್ಲಿಯ ಕೃಷಿಕ್ಷೇತ್ರವನ್ನು ಉಪ್ಪು ಮಾಡಿ ಹಾಕಿತು. ಅನಿವಾರ್ಯವಾಗಿ ಜನ ಹೆಚ್ಚು-ಹೆಚ್ಚಾಗಿ ಸಂರಕ್ಷಿತ ಅರಣ್ಯ ಪ್ರದೇಶವನ್ನು ಅವಲಂಬಿಸುವುದು ಅನಿವಾರ್ಯವಾಯಿತು. ಮರಕಡಿತಲೆ, ಜೇನು ಹಾಗೂ ಕಾಡಿನ ಇತರೆ ಕಿರುಅರಣ್ಯ ಉತ್ಪನ್ನಗಳ ಜೊತೆಗೆ ಭೇಟೆಯಾಡುವುದನ್ನು ಪ್ರಾರಂಭಿಸಿದರು. ವನ್ಯಜೀವಿ-ಮಾನವ ಸಂಘರ್ಷ ತಾರಕ್ಕಕೇರಿತು. ಈ ಮೊದಲೇ ಅಲ್ಲಿನ ಘೆಂಡಾ ಮತ್ತು ಚಿರತೆಗಳು ಅಳಿದು ಹೋಗಿದ್ದು, ಇನ್ನು ಉಳಿದ ಬೆಂಗಾಲ್ ಹುಲಿಗಳ ಸಂಖ್ಯೆ ಬರೀ ೩೦೦ ಮಾತ್ರ. ಈ ೩೦೦ ಹುಲಿಗಳಲ್ಲೂ ಕೆಲವು ನರಭಕ್ಷಕಗಳಾಗಿ ಪರಿವರ್ತಿತವಾಗಿವೆ. ಕಾಡಿನ ಆವರಣ ಕಡಿಮೆಯಾದಂತೆ, ಹುಲಿಗಳಿಗೆ ಬಲಿಪ್ರಾಣಿಗಳು ದುರ್ಲಭವಾಗಿ ದಕ್ಕುತ್ತವೆ. ಇದೇ ಸಮಯದಲ್ಲಿ ಜೇನು ಹಿಡಿಯಲು ಹೋದ ವ್ಯಕ್ತಿ ಅನಾಯಾಸವಾಗಿ ಹುಲಿಗೆ ಬಲಿಯಾಗುತ್ತಾನೆ. ಪ್ರತಿವರ್ಷ ೨೦-೩೦ ಜನರ ಈ ಪ್ರದೇಶದಲ್ಲಿ ಹುಲಿ ದಾಳಿಗೀಡಾಗುತ್ತಿದ್ದಾರೆ ಎಂದು ವರದಿ ಹೇಳುತ್ತದೆ. ಅಥವಾ ಈ ಸಂಖ್ಯೆ ಇನ್ನೂ ಹೆಚ್ಚೂ ಇರಬಹುದು ಎಂಬ ಅನುಮಾನವನ್ನು ಪಡಲಾಗುತ್ತಿದೆ. ಅಂದರೆ ಅಲ್ಲಿನ ಹವಾಮಾನ ವೈಪರೀತ್ಯಕ್ಕೆ ಅಲ್ಲಿನ ಬಡಜನ ಖಂಡಿತಾ ಕಾರಣವಲ್ಲ. ಅವರ ತಲಾವಾರು ಇಂಗಾಲಾಮ್ಲ ಉಚ್ಚಿಷ್ಟ ಅತಿ ಕಡಿಮೆಯಾದರೂ, ಹವಾಮಾನ ವೈಪರೀತ್ಯದ ಬಲಿಪಶುಗಳು ಅವರೇ ಆಗಿದ್ದು ವಿಪರ್‍ಯಾಸ ಹಾಗೂ ಹವಾಮಾನ ವೈಪರೀತ್ಯದ ಮತ್ತೊಂದು ಮುಖದ ಆಘಾತಕಾರಿ ಪರಿಣಾಮವಾಗಿದೆ.

ರಹಿಮಾ ಬೇಗಂ ಅಥವಾ ಹುಲಿ ವಿಧವೆ (ಟೈಗರ್ ವಿಡೋ) ಎಂದು ಕರೆಯಲ್ಪಡುವ ಈ ೪೫ ವರ್ಷದ ಮಹಿಳೆಯ ಗಂಡ ವ್ಯವಸಾಯ ಮಾಡುತ್ತಿದ್ದ. ಚಂಡಮಾರುತದಿಂದಾದ ಅನಾಹುತದಿಂದಾಗಿ ಇವನ ಪೂರಾ ಜಮೀನು ಉಪ್ಪಾಯಿತು. ಈ ಜಮೀನಿನಲ್ಲಿ ಏನೇ ಹರಸಾಹಸ ಮಾಡಿದರೂ ಫಸಲು ತೆಗೆಯಲು ಆಗಲಿಲ್ಲ. ಮೂರು ಹೆಣ್ಣುಮಕ್ಕಳ ತಂದೆಯಾದ ಸತ್ತಾರ್ ಅನಿವಾರ್ಯವಾಗಿ ಕಾಡಿನ ಉತ್ಪನ್ನಗಳಿಗೆ ಮೊರೆ ಹೋಗಬೇಕಾದ ಪರಿಸ್ಥಿತಿ ಒದಗಿ ಬಂತು. ಅಂತೂ ಧೈರ್ಯ ಮಾಡಿ ಒಂದು ದಿನ ಬೆಳಗ್ಗೆ ಕಾಡಿಗೆ ಹೋದವನು ಇಂದಿಗೂ ಮರಳಿ ಮನೆಗೆ ಬಂದಿಲ್ಲ. ನಿಶ್ಚಿತವಾಗಿ ಹುಲಿ ಸತ್ತಾರ್‌ನನ್ನು ಮುಗಿಸಿ ಹಾಕಿದೆ ಎಂಬುದು ಊರಿನವರ ಬಲವಾದ ನಂಬಿಕೆ. ಸತ್ತಾರ್‌ನಿಂದ ಶುರುವಾದ ನರಬಲಿ ತೆಗೆದುಕೊಳ್ಳುವ ಪ್ರಕ್ರಿಯೆ ಇಂದಿಗೂ ಮುಂದುವರೆದಿದೆಯಾದ್ದರಿಂದ. ರಹೀಮಾ ಬೇಗಂಗೆ ಅಲ್ಲಿನ ಜನರು ತಾತ್ಸಾರದಿಂದ ಹುಲಿ ವಿಧವೆ ಎಂದು ಕರೆಯುತ್ತಾರೆ. ಇಡೀ ಊರಿನ ಜನರ ತಾತ್ಸಾರದಿಂದ ನೊಂದುಕೊಂಡೇ ಮೂರು ಹೆಣ್ಣು ಮಕ್ಕಳನ್ನು ಬೆಳೆಸುವ ಜವಾಬ್ದಾರಿಯಿರುವ ರಹೀಮಾ ಈಗಲ್ಲಿ ಅಸ್ಪಶ್ಯಳಂತೆ ಬದುಕು ಸಾಗಿಸುತ್ತಿದ್ದಾಳೆ.

ಹವಾಮಾನ ವೈಪರೀತ್ಯದಿಂದಾಗುವ ಅನೇಕ ದುರ್ಘಟನೆಗಳು ವರದಿಯಾಗುವುದೇ ಇಲ್ಲ ಅಥವಾ ಸಮಗ್ರವಾಗಿ ಯಾರೂ ಗ್ರಹಿಸುವುದಿಲ್ಲ. ಇಲ್ಲಿ ರಹೀಮಾ ಮತ್ತು ಅಲ್ಲಿನ ಸುತ್ತ-ಮುತ್ತಲ ಜನರ ಬದುಕು ಇನ್ನಷ್ಟು ಕಹಿಯಾಗಲು ಹವಾಮಾನ ವೈಪರೀತ್ಯವೇ ಕಾರಣ. ನಮ್ಮಲ್ಲಿ ಅಭಿವೃದ್ಧಿಗಾಗಿ ಕಡಿಯುವ ಪ್ರಕ್ರಿಯೆ ಎಲ್ಲೋ ಯಾರದೋ ಜೀವನವನ್ನು ನಾಶ ಮಾಡಬಲ್ಲದು ಎಂಬುದಕ್ಕೆ ಉದಾಹರಣೆಯಾಗಿ ಈ ಘಟನೆಯನ್ನು ಉಲ್ಲೇಖಿಸಲಾಗಿದೆ. 

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
amardeep.p.s.
amardeep.p.s.
10 years ago

really how sad sir.?

1
0
Would love your thoughts, please comment.x
()
x