ಹುಲಿಯೋ, ಸುಂದರಾಂಗಿಯೋ?: ಜೆ.ವಿ.ಕಾರ್ಲೊ

ಹುಲಿಯೋ, ಸುಂದರಾಂಗಿಯೋ?
ಮೂಲ: ಫ್ರ್ಯಾಂಕ್ ಸ್ಟೊಕ್ಟನ್
ಅನುವಾದ: ಜೆ.ವಿ.ಕಾರ್ಲೊ

ಬಹಳ ಬಹಳ ವರ್ಷಗಳ ಹಿಂದೆ ಒಬ್ಬ ರಾಜ ರಾಜ್ಯವನ್ನಾಳುತ್ತಿದ್ದ. ತನ್ನ ನೆರೆಯ ಲ್ಯಾಟಿನ್ ಸಾಮ್ರಾಜ್ಯದ ಪ್ರಭಾವದಿಂದಾಗಿ ಅವನು ತೋರಿಕೆಗೆ ನಾಗರಿಕನಾಗಿ ಕಾಣುತ್ತಿದ್ದನಾದರೂ, ಮೂಲತಃ ತುಂಬಾ ಕ್ರೂರಿಯಾಗಿದ್ದ, ಚಂಚಲ ಸ್ವಭಾವದವನಾಗಿದ್ದ. ಯಾವ ಗಳಿಗೆಯಲ್ಲಿ ಅವನ ಯೋಚನೆಗಳು ಹೇಗೆ ತಿರುಗುತ್ತವೆಂದು ಊಹಿಸಲು ಯಾರಿಗೂ ಸಾಧ್ಯವಿರಲಿಲ್ಲ. ಅವನೇ ಅವನ ಆಪ್ತ ಸಲಹಾಕಾರನಾಗಿದ್ದ ಮತ್ತು ಆ ಗಳಿಗೆಯಲ್ಲೇ ತೀರ್ಮಾನಿಸಿ ಜಾರಿಗೊಳಿಸುತ್ತಿದ್ದ. ಅವನ ರಾಜ್ಯಭಾರ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸರಾಗವಾಗಿ ನಡೆಯುತ್ತಿದ್ದರೆ ಅವನು ತುಂಬಾ ಖುಷಿಯಾಗಿ, ಲವಲವಿಕೆಯಿಂದುರುತ್ತಿದ್ದ. ಏನಾದರೂ ಸಮಸ್ಯೆ ಎದುರಾದರೆ ಅವನು ರಾಕ್ಷಸನಂತಾಗುತ್ತಿದ್ದ. ಅದನ್ನು ಆ ಗಳಿಗೆಯಲ್ಲೇ ಸರಿಪಡಿಸದಿದ್ದರೆ ಅವನಿಗೆ ಸಮಧಾನವಾಗುತ್ತಿರಲಿಲ್ಲ.

ಅವನ ರಾಜ್ಯಭಾರದಲ್ಲಿ ಸಾರ್ವಜನಿಕ ವೇದಿಕೆ, ಅಥವಾ ಅಂಗಣ ಬಹಳವಾಗಿ ಉಪಯೋಗಕ್ಕೆ ಬರುತ್ತಿತ್ತು. ನ್ಯಾಯ ದೊರಕಿಸಿಕೊಳ್ಳಬೇಕಾದರೆ ಸ್ವಂತ ಬಲದಿಂದಲೋ, ಪ್ರಾಣಿಗಳೊಡನೆ ಕಾದೋ ದೊರಕಿಸಕೊಳ್ಳಬೇಕಿತ್ತು.

ಇಲ್ಲೂ ಅವನ ಕ್ರೂರತನ ಎದ್ದು ಕಾಣುತ್ತಿತ್ತು. ರಾಜನ ಎದುರು ಬರುತ್ತಿದ್ದ ಯಾವುದೇ ನ್ಯಾಯದ ತೀರ್ಮಾನ ಸಾರ್ವಜನಿಕ ವೇದಿಕೆಯಲ್ಲೇ ತೀರ್ಮಾನವಾಗುತ್ತಿತ್ತು. ಇಂಥಾವೊಂದು ತೀರ್ಮಾನ ಇಂಥಾ ದಿವಸ ಸಾರ್ವಜನಿಕ ವೇದಿಕೆಯಲ್ಲಿ ತೀರ್ಮಾನವಾಗುತ್ತದೆಂದು ಡಂಗುರ ಹೊಡೆದು ಸಾರಲಾಗುತ್ತಿತ್ತು. ಸಾರ್ವಜನಿಕ ಅಂಗಣ ರೋಮನ್ ಸಾಮ್ರಜ್ಯದ ಅನುಕರಣೆ ಎಂದು ಹೇಳಬಹುದಾಗಿದ್ದರೂ ಇಲ್ಲಿ ಜರುಗುತ್ತಿದ್ದ ನ್ಯಾಯ ಪ್ರಧಾನದ ಪ್ರಹಸನ ಮಾತ್ರ ರಾಜನ ತಿಕ್ಕಲುತನಕ್ಕೆ ಒಳಪಟ್ಟಿತ್ತು.

ಸಭಾಂಗಣ ತುಂಬಿ, ರಾಜ ಎತ್ತರದ ವೇದಿಕೆಯ ಮೇಲೆ ಆಸೀನನಾಗುತ್ತಿದ್ದಂತೇ ಅವನು ತನ್ನ ವೇದಿಕೆಯ ಕೆಳಗಿನ ಕೋಣೆಯ ಬಾಗಿಲನ್ನು ತೆರೆಯಲು ಸೂಚಿಸುತ್ತಿದ್ದ. ಆಗ ಒಳಗಿನಿಂದ ಅಪರಾಧಿ ಸಾರ್ವಜನಿಕ ವೇದಿಕೆಗೆ ನಡೆದು ಬರುತ್ತಿದ್ದ. ಅವನ ಎದುರಿಗೆ ಒಂದೇ ಥರದ ಎರಡು ಮುಚ್ಚಿದ ಬಾಗಿಲುಗಳಿರುತ್ತಿದ್ದವು. ಈ ಎರಡು ಬಾಗಿಲುಗಳಲ್ಲಿ ಒಂದನ್ನು ಅಪರಾಧಿ ಆಯ್ಕೆ ಮಾಡಬಹುದಿತ್ತು. ಅವನ ಅದೃಷ್ಟಕ್ಕೆ ತಕ್ಕಂತೆ ಒಂದು ಬಾಗಿಲಿನಿಂದ ಹಸಿದ ಹೆಬ್ಬುಲಿ ಹೊರಬರುವ ಸಾಧ್ಯತೆ ಇತ್ತು. ಹಸಿದ ಹೆಬ್ಬುಲಿಗೆ ಅವನು ಎದುರಾದರೆ ಏನು ಹೇಳಬಹುದು? ಅವನು ಹುಲಿಯ ಗ್ರಾಸವಾಗುವುದರಲ್ಲಿ ಸಂಶಯವೇ ಇರಲಿಲ್ಲ. ಇದನ್ನು ಕಣ್ಣುಬಿಟ್ಟು ನೋಡುತ್ತಿದ್ದ ಜನರು, ಒಂದೇ ವಿಷಾದದಿಂದಲೋ, ಅಥವಾ ಅಮಾನುಷ ತೃಪ್ತಿಯಿಂದ ದೀರ್ಘ ಶ್ವಾಸ ಬಿಡುತ್ತಾ ಭಾರವಾದ ಹೆಜ್ಜೆಗಳಿಂದ ಮನೆಯ ಕಡೆಗೆ ತೆರಳುತ್ತಿದ್ದರು. ರೋಧಿಸಲೆಂದೇ ಬಾಡಿಗೆಗೆ ಬಂದವರ ಅಕ್ರಂದನದಿಂದ ವಾತಾವರಣ ಕಲಕುತ್ತಿತ್ತು.

ಒಂದು ವೇಳೆ ಅಪರಾಧಿ ಮತ್ತೊಂದು ಧ್ವಾರವನ್ನು ಆಯ್ಕೆ ಮಾಡಿದನೆನ್ನಿ, ಆಗ ಏನು? ಒಬ್ಬಳು ಸುರಸುಂದರಿ ಬಳುಕುತ್ತಾ ಹೊರಬರುತ್ತಿದ್ದಳು! ಅಪರಾಧಿ ನಿರಪರಾಧಿಯಾಗುತ್ತಿದ್ದ! ಅಲ್ಲದೆ ರಾಜ ಅವನನ್ನು ಆ ಸುಂದರಿಯೊಡನೆ ಮದುವೆ ಮಾಡುತ್ತಿದ್ದ. ಅಪರಾಧಿಗೆ ಈ ಮೊದಲು ಮದುವೆಯಾಗಿ ಮನೆಯಲ್ಲಿ ಹೆಂಡತಿಯಿದ್ದರೆ ಅದು ರಾಜನ ಸಮಸ್ಯೆಯಾಗಿರಲಿಲ್ಲ! ಅವನ ನ್ಯಾಯದಲ್ಲಿ ಇಂತಹ ಸೂಕ್ಷ್ಮಗಳಿಗೆ ಜಾಗವಿರಲಿಲ್ಲ. ಇಷ್ಟೆಲ್ಲಾ ಸಾರ್ವಜನಿಕ ವೇದಿಕೆಯಲ್ಲಿ ನಡೆಯುತ್ತಿತ್ತು. ಇದರ ನಂತರ ನಡೆಯುವ ಸಂಬ್ರಮ ಹೇಳಲಿಕ್ಕಾಗದು. ಅಂದು ರಾಜನ ಖರ್ಚಿನಲ್ಲೇ ಎಲ್ಲರಿಗೂ ಭರ್ಜರಿ ಮದುವೆ ಔತಣ. ರಾಜನ ನ್ಯಾಯಪ್ರಧಾನ ವ್ಯವಸ್ಥೆಯಲ್ಲಿ ಪಕ್ಷಪಾತಕ್ಕೆ ಅವಕಾಶವೇ ಇರಲಿಲ್ಲ. ಅಪರಾಧಿ ತಪ್ಪಿತಸ್ಥನು ಹೌದೇ, ಅಲ್ಲವೇ ಎಂದು ರಾಜನೇನು ತೀರ್ಪು ಕೊಡುತ್ತಿರಲಿಲ್ಲ. ತಪ್ಪಿತಸ್ಥನಾಗಿದ್ದರೆ ಶಿಕ್ಷೆ ಅದೇ ಗಳಿಗೆಯಲ್ಲಿ ಲಭಿಸುತ್ತಿತ್ತು ಮತ್ತು ನಿರಪರಾಧಿಯಾದರೆ ಬಹುಮಾನವೂ ಸಿಗುತ್ತಿತ್ತು.

ಪ್ರಜೆಗಳು ಕೂಡ ಈ ವ್ಯವಸ್ಥೆಯಿಂದ ಸಂತೃಪ್ತರಾಗಿದ್ದರು. ಕೊನೆವರೆಗೂ ಫಲಿತಾಂಶ ಏನಾಗಬಹುದೆಂದು ಗೊತ್ತಾಗುತ್ತಿರಲಿಲ್ಲ. ಫಲಿತಾಂಶ ಏನೇ ಆದರೂ ಮನರಂಜನೆಯಂತೂ ಖಂಡಿತಾ ಸಿಗುತ್ತಿತ್ತು.

ಇಂತಾ ಕ್ರೂರಿ ರಾಜನಿಗೆ ಒಬ್ಬಳು ಸುಂದರ ಮಗಳಿದ್ದಳು. ರಾಜ ಅವಳನ್ನು ಜಗತ್ತಿನಲ್ಲೇ ಅತ್ಯಂತ ಸುಂದರವಾದ ಮಾಣಿಕ್ಯದಂತೆ ಜತನದಿಂದ ನೋಡಿಕೊಂಡಿದ್ದ. ಅವಳು ರಾಜನ ಕಣ್ಣುಗೊಂಬೆಯಾಗಿದ್ದಳು.

ರಾಜನ ಆಸ್ಥಾನದಲ್ಲಿ ಒಬ್ಬ ಸುರಸುಂದರ ಬಲಶಾಲಿ, ಧೈರ್ಯಶಾಲಿ ಯುವಕನಿದ್ದ. ಪ್ರೀತಿಗೆ ಕಣ್ಣಿಲ್ಲ ಅಂತಾರಲ್ಲಾ, ಅಂತೆಯೇ ರಾಜಕುಮಾರಿ ಸಹಜವಾಗಿ ಅವನಿಗೆ ಮಾರುಹೋಗಿದ್ದಳು. ಅವನ ಸ್ಥಾನಮಾನಗಳ ಬಗ್ಗೆ ರಾಜಕುಮಾರಿ ತನ್ನ ಸುಂದರವಾದ ತಲೆಯನ್ನು ಕೆಡಿಸಿಕೊಳ್ಳಲೇ ಇಲ್ಲ. ಪ್ರೀತಿಯನ್ನು ಎಷ್ಟು ದಿನ ಕದ್ದು ಮುಚ್ಚಿಡಬಹುದು? ಒಂದು ದಿನ ಹೊರಬರಲೇಬೇಕು ತಾನೆ? ಒಂದು ದಿನ ಇದರ ವಾಸನೆ ರಾಜನ ಮೂಗಿಗೆ ಅಡರಿತು. ಅವನು ತಡಮಾಡಲಿಲ್ಲ. ಅವನು ಏನು ಮಾಡಬೇಕಿತ್ತೋ ಮಾಡಿದ. ಯುವಕನ್ನು ಜೈಲಿಗೆ ಅಟ್ಟಿದ ಹಾಗೂ ನ್ಯಾಯ ತೀರ್ಮಾನವೆಂದು ಒಂದು ದಿನವನ್ನೂ ಗೊತ್ತುಮಾಡಿದ. ಇದೊಂದು ವಿಶೇಷ ನ್ಯಾಯ ತೀರ್ಮಾನವೆಂದು ಎಲ್ಲರೂ ಆ ದಿನಕ್ಕಾಗಿ ಕುತೂಹಲದಿಂದ ಎದುರು ನೋಡತೊಗಿದರು. ಇಂತಾ ಘಟನೆ ರಾಜ್ಯದಲ್ಲಿ ಎಂದೂ ಘಟಿಸಿರಲೇ ಇಲ್ಲ. ಒಬ್ಬ ಸಾಮಾನ್ಯ ಪ್ರಜೆ ರಾಜಕುಮಾರಿಯನ್ನು ಪ್ರೇಮಿಸಿ ದಕ್ಕಿಸಿಕೊಳ್ಳುವುದೇನು ದೈನಂದಿನ ಸಂಗತಿಯಾಗಿರಲಿಲ್ಲ.

ಕ್ರೂರಿ ರಾಜನ ರಾಜ್ಯದಲ್ಲಿ ಒಂದು ಕಡೆ ಅತೀ ಕ್ರೂರ ಹುಲಿಯ ಅನ್ವೇಷಣೆ ಶುರುವಾಗಿದ್ದರೆ, ಮತ್ತೊಂದು ಕಡೆ, ಆಕಸ್ಮಾತ್ ಯುವಕನ ಅದೃಷ್ಟ ಚೆನ್ನಾಗಿದ್ದರೆಂದು ಅವನಿಗೆ ತಕ್ಕ ಸುಂದರಿಯಾದ ಹುಡುಗಿಯ ಹುಡುಕಾಟವೂ ನಡೆದಿತ್ತು. ಇದಕ್ಕೆಂದು ರಾಜ ಒಂದು ಆಯ್ಕೆದಾರರ ಸಮಿತಿಯನ್ನೇ ರಚಿಸಿದ. ಯುವಕನ ಅಪರಾಧ ಎಲ್ಲರ ಕಣ್ಣ ಮುಂದಿತ್ತು. ಇದನ್ನು ಅವನಾಗಲೀ, ರಾಜಕುಮಾರಿಯಾಗಲೀ ನಿರಾಕರಿಸಿರಲಿಲ್ಲ. ಆದರೂ ರಾಜನಿಗೆ ಅವನ ಇಚ್ಛೆಯ ವಿಚಾರಣೆ ನಡೆಸಲೇ ಬೇಕಿತ್ತು.
ಗೊತ್ತು ಮಾಡಿದ ದಿವಸವು ಉದಿಸಿತು. ಇದಕ್ಕೆಂದೇ ನಿರ್ಮಿಸಿದ ವಿಶಾಲವಾದ ಅಂಗಣ ಜನರಿಂದ ತುಂಬಿ ತುಳುಕುತ್ತಿತ್ತು. ಒಳಗೆ ಕಾಲಿಡಲು ಜಾಗವಿಲ್ಲದೆ ಎಷ್ಟೋ ಜನ ಹೊರಗೆ ತುಂಬಿದ್ದರು. ರಾಜ ಮತ್ತು ಅವನ ಪರಿವಾರ ಈಗಾಗಲೇ ತಮ್ಮ ಆಸನಗಳನ್ನು ಅಲಂಕರಿಸಿದ್ದರು. ರಾಜನ ಎದುರಿಗೇ ಹುಲಿ ಮತ್ತು ಸುಂದರಿಯನ್ನು ಕೂಡಿಟ್ಟಿದ್ದ ಎರಡು ಧ್ವಾರಗಳಿದ್ದವು. ಯಾವುದೇ ವ್ಯತ್ಯಾಸಗಳು ಕಾಣದ ತದ್ರೂಪಿ ಧ್ವಾರಗಳು.

ಎಲ್ಲವೂ ತಯಾರಾಗಿತ್ತು. ರಾಜನಿಂದ ಸೂಚನೆ ಹೋಯಿತು. ರಾಜ ಪರಿವಾರ ಕುಳಿತ್ತಿದ್ದ ಕೆಳಗಿನ ಕೋಣೆಯೊಂದರ ಬಾಗಿಲು ತೆರೆಯಿತು. ರಾಜಕುಮಾರಿಯನ್ನು ಪ್ರೀತಿಸುತ್ತಿದ್ದ ಸ್ಪುರದ್ರೂಪಿ ಯುವಕ ಗಾಂಭೀರ್‍ಯದಿಂದ ಅಂಗಣಕ್ಕೆ ನಡೆದು ಬಂದ. ಅವನ, ಕಡೆದು ಕೆತ್ತಿದಂತ ಬಲಿಷ್ಟ     ದೇಹವನ್ನು ನೋಡಿ ಸಭಿಕರಲ್ಲಿ ವಿದ್ಯುತ್ ಹರಿದಂತೆ ಏನೋ ಸಂಚಲನ ಉಂಟಾಯಿತು. ಅಷ್ಟೊಂದು ಸ್ಪುರದ್ರೂಪಿ ತರುಣನೊಬ್ಬ ತಮ್ಮ ಮಧ್ಯೆ ಇದ್ದನೆಂಬ ಸಂಗತಿ ಜನರಿಗೆ ಇವತ್ತೇ ಗೊತ್ತಾದದ್ದು. ಅಂತವನನ್ನು ಮೋಹಿಸಿದ್ದರಲ್ಲಿ, ಜನರಿಗೆ ರಾಜಕುಮಾರಿಯ ಯಾವ ತಪ್ಪೂ ಕಾಣಿಸಲಿಲ್ಲ. ರಾಜ ಮನೆತನದ ಹೊರಗೆ ಹುಟ್ಟಿದ್ದೇ ನತದೃಷ್ಟ ಯುವಕನ ತಪ್ಪಾಗಿತ್ತು.

ಅಂಗಣದ ಮಧ್ಯೆ ನಡೆದುಬಂದ ಯುವಕ ವಾಡಿಕೆಯಂತೆ ರಾಜನ ಕಡೆ ತಿರುಗಿ ತಲೆ ಬಗ್ಗಿಸಿದ. ಆದರೆ ಅವನ ದೃಷ್ಟಿ ಮಾತ್ರ ರಾಜನ ಬಲಬಗಲಿಗೆ ಕುಳಿತ್ತಿದ್ದ ರಾಜಕುಮಾರಿಯ ಮೇಲಿತ್ತು. ಅಂತ ಕ್ರೂರ ತಂದೆಯ ರಕ್ತ ಮಗಳ ಧಮನಿಗಳಲ್ಲೂ ಹರಿಯದಿದ್ದಲ್ಲಿ ಅವಳು ಈ ಕ್ರೂರ ಆಟ ನೋಡಲು ಬರುತ್ತಿದ್ದಳೆ? ಈ ಹಿಂಸೆಯನ್ನು ಆಸ್ವಾದಿಸಲು ಖಂಡಿತವಾಗಿಯೂ ಅವಳು ಹಾತೊರೆಯುತ್ತಿದ್ದಿರಬೇಕು! ಯುವಕ ತಾನೆಸಗಿದ ಅಪರಾಧಕ್ಕೆ ಶಿಕ್ಷೆಯೋ, ಬಹುಮಾನವನ್ನೋ ಎಲ್ಲರ ಎದುರಿಗೆ ಅಂಗಣದಲ್ಲೇ ಸ್ವೀಕರಿಸಬೇಕೆಂಬ ರಾಜನ ಆಜ್ಞೆಯನ್ನು ಕೇಳಿದಂದಿನಿಂದ ಅವಳ ಕುತೂಹಲ ಜಾಗೃತವಾಗಿತ್ತು. ರಾಜಕುಮಾರಿ ’ಆ ದಿನ’ ವನ್ನು ಎದುರು ನೋಡುತ್ತಿದ್ದಳು. ಇದಲ್ಲದೆ ಬೇರ್‍ಯಾವ ಆಲೋಚನೆಗಳು ಆ ಚೆಲುವೆಯ ತಲೆಯೊಳಗೆ ಸುಳಿಯುತ್ತಿರಲಿಲ್ಲ. ಈ ಬಗ್ಗೆ ಏನೆಲ್ಲಾ ವಿಷಯಗಳನ್ನು ಸಂಗ್ರಹಿಸಲು ಸಾಧ್ಯವೋ ಅದನ್ನೆಲ್ಲಾ ಅವಳು ಮಾಡಿಯಾಗಿತ್ತು. ಅವಳ ಹಟಮಾರಿತನ ಮತ್ತು ಪ್ರಭಾವದಿಂದ, ಇದುವರೆಗೆ ಯಾರಿಗೂ ಸಾಧ್ಯವಾಗಿರದ ಜೋಡಿ ದ್ವಾರಗಳ ರಹಸ್ಯವನ್ನು ರಾಜಕುಮಾರಿ ತಿಳಿದುಕೊಂಡಿದ್ದಳು. ಯಾವ ಧ್ವಾರದೊಳಗೆ ಹಸಿದ ಹೆಬ್ಬುಲಿ ಮತ್ತು ಯಾವ ಧ್ವಾರದೊಳಗೆ ಸುಂದರ ಯುವತಿ ಅವಿತ್ತಿದ್ದಾರೆಂದು ಅವಳು ತಿಳಿದುಕೊಂಡಿದ್ದಳು. ಅಂಗಣದ ಕಾವಲುಭಟನಿಗೂ ಈ ರಹಸ್ಯ ಗೊತ್ತಿರಲು ಸಾಧ್ಯವಿರಲಿಲ್ಲ.

ಯಾವ ಬಾಗಿಲಿನಿಂದ ಸುಂದರ ಯುವತಿ ಮುಗುಳ್ನಗುತ್ತಾ ಹೊರಬರುತ್ತಾಳೆಂಬುದಷ್ಟೇ ಅಲ್ಲ, ಅವಳು ಯಾರು ಎಂಬುದನ್ನು ಕೂಡ ರಾಜಕುಮಾರಿ ಗೊತ್ತು ಮಾಡಿಕೊಂಡಿದ್ದಳು. ಅವಳು ಇಡೀ ರಾಜ್ಯದಲ್ಲೇ ಜರಡಿ ಹಿಡಿದು ಆಯ್ಕೆ ಮಾಡಿದ್ದ ಅಪ್ರತಿಮ ಸುಂದರಿಯಾಗಿದ್ದಳು. ಅವಳು ಎಷ್ಟೊಂದು ಸುಂದರಳಾಗಿದ್ದಾಳೆಂದರೆ, ರಾಜಕುಮಾರಿ ಅವಳ ಮೇಲೆ ಹೊಟ್ಟೆಕಿಚ್ಚು ಪಡುವಷ್ಟು ಎಂದರೆ ಬಹಳ ಸೌಮ್ಯವಾದ ಮಾತಾಯಿತೆನ್ನಬಹುದು. ಈ ಹುಡುಗಿ ತನ್ನ ಪ್ರಿಯಕರನನ್ನು ಬುಟ್ಟಿಗೆ ಹಾಕಿಕೊಳ್ಳಲು ಮೊದಲಿಂದಲೂ ಹಾತೊರೆಯುತ್ತಿದ್ದಾಳೆಂದು ರಾಜಕುಮಾರಿಗೆ ಹೇಗೋ ಗೊತ್ತಾಗಿಬಿಟ್ಟಿತ್ತು. ಅವಳ ಪ್ರಿಯಕರನೂ ಒಂದೆರಡು ಭಾರಿ ಅವಳ ಕಣ್ಣೋಟಕ್ಕೆ ಸ್ಪಂದಿಸಿ ಮುಗುಳ್ನಕ್ಕಿದ್ದ ಎಂತಲೂ ಅವಳಿಗೆ ಗೊತ್ತಾಗದಿರಲಿಲ್ಲ. ಅವರಿಬ್ಬರು ಒಂದರೆಡು ಭಾರಿ ಮಾತಾಡಿಯೂ ಇದ್ದರು! ಕೆಲವೇ ಕ್ಷಣಗಳಿರಬಹುದು. ಆದರೂ, ಕೆಲವು ಕ್ಷಣಗಳಲ್ಲಿ ಏನೆಲ್ಲಾ ಸಾಧ್ಯ! ತನ್ನ ಪ್ರಿಯಕರನನ್ನು ತನ್ನ ಪ್ರೇಮಜಾಲದಲ್ಲಿ ಕೆಡವಲು ಯೋಜನೆಗಳನ್ನು ಹೆಣೆಯುತ್ತಿದ್ದ ಆ ಯುವತಿಯ ಮೇಲೆ ರಾಜಕುಮಾರಿಗೆ ಸಿಟ್ಟು ನೆತ್ತಿಗೇರುವಂತೆ ಮಾಡಿತ್ತು.

ಅಂಗಣದಲ್ಲಿದ್ದ ಯುವಕನ ದೃಷ್ಟಿ ತನ್ನ ಪ್ರಿಯತಮೆ ರಾಜಕುಮಾರಿಯ ದೃಷ್ಟಿಗೆ ಸೇರಿತು. ಬೇರೆಲ್ಲಾ ಕಣ್ಣುಗಳಲ್ಲಿ ಎದ್ದು ಕಾಣುತ್ತಿದ್ದ ಆತಂಕ, ಗಾಬರಿ ಅಲ್ಲಿ ಲವಲೇಶವೂ ಕಾಣುತ್ತಿರಲಿಲ್ಲ. ಅವಳ ಕಣ್ಣುಗಳಲ್ಲಿ, ಯಾವ ಬಾಗಿಲಿನ ಹಿಂದೆ ಹುಲಿಯಿದೆ, ಯಾವ ಬಾಗಿಲಿನ ಹಿಂದೆ ಸುಂದರಿ ಇದ್ದಾಳೆಂಬ ಅರಿವು ಅವನು ಗಮನಿಸಿದ. ಅದನ್ನವನು ಚೆನ್ನಾಗಿಯೇ ಅರಿತಿದ್ದ. ಯಾರಿಗೂ ಗೊತ್ತಾಗದಂತೆ ಅವಳು ತನಗೆ ಸುಳಿವು ನೀಡಬಲ್ಲಳೆಂದು ಅವನು ಅರಿತಿದ್ದ. ಅವನಿಗೆ ಆನಂದವಾಯಿತು.
ಅವನ ದೃಷ್ಟಿ ರಾಜಕುಮಾರಿಯ ದೃಷ್ಟಿಯನ್ನು ಪ್ರಶ್ನಿಸಿತು:

ಯಾವ ಬಾಗಿಲು?

ರಾಜಕುಮಾರಿಗೆ ಅವನ ಪ್ರಶ್ನೆ ಬಹಳ ಸ್ಪಷ್ಟವಾಗಿ, ಕೂಗಿ ಕೇಳಿದಂತೆ ಕೇಳಿಸಿತು. ವಿಳಂಬಕ್ಕೆ ಅವಕಾಶವಿರಲಿಲ್ಲ. ಅವನು ಕೇಳಿದಷ್ಟೇ ವೇಗವಾಗಿ ಅವಳು ಉತ್ತರಿಸಬೇಕಿತ್ತು. ಅವಳು ತನ್ನ ಕೋಮಲವಾದ ಕೈಗಳನ್ನು ಎದುರಿನ ಕಟ್ಟೆಯ ಮೇಲೆ ಚಾಚಿದ್ದಳು. ಗಾಳಿಗೆ ಹಾರುತ್ತಿದ್ದ ಕೂದಲನ್ನು ಹಿಂದೆ ತಳ್ಳಲೆಂಬಂತೆ ಅವಳು ಒಂದು ಕೈಯನ್ನು ಮೇಲಕ್ಕೆತ್ತಿದಳು ಮತ್ತು ಮಿಂಚಿನಂತೆ ಬಲಕ್ಕೆ ತಿರುಗಿಸಿ ತಲೆಯನ್ನೊಮ್ಮೆ ನೇವರಿಸಿಕೊಂಡಳು. ಎಲ್ಲರ ಕಣ್ಣು ಯುವಕನ ಮೇಲೆ ಕೇಂದ್ರಿಕೃತವಾಗಿತ್ತಾದ್ದರಿಂದ ರಾಜಕುಮಾರಿಯ ಸನ್ನೆಯನ್ನು ಯಾರೂ ಗಮನಿಸಲಿಲ್ಲ.

ಯುವಕ ಎದುರಿನ ಧ್ವಾರಗಳ ಕಡೆ ತಿರುಗಿದ. ಈಗ ಅವರಿಗೆ ಅವನ ಬೆನ್ನು ಮಾತ್ರ ಕಾಣಿಸುತ್ತಿತ್ತು. ಧೃಡವಾದ ಖಚಿತ ಹೆಜ್ಜೆಗಳನ್ನಾಕುತ್ತಾ ಅವನು ಮುಂದೆ ಸಾಗಿದ. ಕೆಲವು ಕ್ಷಣ ಎಲ್ಲರ ಹೃದಯದ ಬಡಿತ ಸ್ತಬ್ಧಗೊಂಡಂತೆ ಭಾಸವಾಯಿತು. ಕೆಲವು ಕ್ಷಣ ಶ್ವಾಸ ತೆಗೆದುಕೊಳ್ಳುವ, ಹೊರಹಾಕುವ ಕ್ರಿಯೆಯೂ ಎಲ್ಲರಿಗೂ ಮರೆತು ಹೋಯಿತು! ಎಲ್ಲರ ದೃಷ್ಟಿ ಯುವಕನ ಬೆನ್ನ ಮೇಲೆ ನೆಟ್ಟಿತ್ತು. ಯಾವುದೇ ದ್ವಂದ್ವಗಳಿಗೆ ಎಡೆಮಾಡಿಕೊಡದೆ ಅವನು ಮುಂದೆ ನಡೆದು ಬಲಭಾಗದ ಬಾಗಿಲಿನ ಚಿಲಕವನ್ನು ಎಳೆದು ಬಾಗಿಲನ್ನು ತೆರೆದ…

***   ****  
ಈ ಕತೆಯ ಮುಖ್ಯ ಪ್ರಶ್ನೆ ಯಾವುದೆಂದರೆ, ರಾಜಕುಮಾರಿಯ ಪ್ರಿಯಕರನು ತೆರೆದ ಬಾಗಿಲಿನಿಂದ ಹೊರಗೆ ಬಂದಿದ್ದು ಹಸಿದ ಹೆಬ್ಬುಲಿಯೋ ಅಥವಾ, ನಾಚುತ್ತಾ ಕೈಯಲ್ಲಿ ಹಾರವನ್ನು ಹಿಡಿದು ಬಂದ ಸುಂದರಾಂಗಿಯೋ?

ಉತ್ತರ ಹೇಳುವುದು ಕಷ್ಟ. ಈ ಪ್ರಶ್ನೆಗೆ ಖಚಿತವಾಗಿ ಉತ್ತರ ಹೇಳಬೇಕೆಂದರೆ ನಮಗೆ ಮನುಷ್ಯನ ಸ್ವಭಾವದ ನಿಕಟ ಪರಿಚಯವಿರಬೇಕು. ಇಂತ ಸಂದರ್ಭಗಳಲ್ಲಿ ಹೃದಯ ಮೆದುಳಿಗೆ ಯಾವೆಲ್ಲಾ ದಾರಿ ತಪ್ಪಿಸುವ ಸೂಚನೆಗಳನ್ನು ಕೊಡುತ್ತದೆ ಎಂಬುದು ಅರಿವಿರಬೇಕು. ರಾಜಕುಮಾರಿಯ ಪಾಲಿಗೆ ಅವಳ ಪ್ರಿಯಕರ ಎಂದೋ ಕಳೆದು ಹೋಗಿದ್ದಾನೆ. ಕ್ರೂರ ತಂದೆಯ ರಕ್ತವನ್ನು ಹಂಚಿಕೊಂಡು ಹುಟ್ಟಿದ ರಾಜಕುಮಾರಿ ಹತಾಶೆಯಿಂದ, ಹೊಟ್ಟೆಕಿಚ್ಚಿನಿಂದ ನಲುಗಿ ಹೋಗಿದ್ದಾಳೆ. ಈ ಹಿನ್ನೆಲೆಯಲ್ಲಿ ಪ್ರೀತಿಯ ಓದುಗರೇ ನೀವು ಮೇಲಿನ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕು.

ಎಚ್ಚರವಿದ್ದ ಪ್ರತಿಯೊಂದು ಕ್ಷಣವೂ ರಾಜಕುಮಾರಿಯು ಎಷ್ಟೊಂದು ಭಾರಿ ತನ್ನ ಪ್ರಿಯಕರನು ಹುಲಿಯ ಧ್ವಾರವನ್ನು ತೆರೆದಾಗ ಹೆದರಿಕೆಯಿಂದ ಕಂಪಿಸಿಲ್ಲ? ಏಕಾಂತದಲ್ಲಿದ್ದಾಗ ಗಾಬರಿಯಿಂದ ಕಿರುಚಿಲ್ಲಾ? ಹಾಗೆಯೇ, ತನ್ನ ಪ್ರಿಯಕರ ಸುಂದರಾಂಗಿಯ ಧ್ವಾರವನ್ನು ತೆರೆದಾಗ ರಾಜಕುಮಾರಿ ತಳಮಳಗೊಂಡಿಲ್ಲ? ಹೊಟ್ಟೆಕಿಚ್ಚಿನಿಂದ ಹಲ್ಲುಗಳನ್ನು ಮಸೆದಿಲ್ಲಾ? ಬಾಗಿಲು ತೆರೆದು ಸುಂದರಾಂಗಿ ಹೊರಬಂದಾಗ ತನ್ನ ಪ್ರಿಯಕರನು ಖುಷಿಯಿಂದ ಹಲ್ಲುಗಿಂಜಿದ್ದು ನೋಡಿ ಮರೆಯಲು ಹೇಗೆ ಸಾಧ್ಯ? ತನ್ನ ಪ್ರಿಯಕರನನ್ನು ನೋಡಿದಾಕ್ಷಣ ಬಹುಮಾನದ ಸುಂದರಿ ನಾಚಿಕೆಯಿಂದ ಕೆಂಪಗಾಗಿದ್ದು ನೋಡಿಯೂ ನೋಡದಂತೆ ಇರಲು ಸಾಧ್ವವೇ ಹೇಳಿ? ಅವರು ಕೈಕೈ ಹಿಡಿದು ಅಂಗಣದ ಮಧ್ಯಕ್ಕೆ ನಡೆದು ಬಂದದ್ದು, ಆಸ್ಥಾನದ ಪುರೋಹಿತರು ಬಂದು ಅವರ ಲಗ್ನ ನೆರವೇರಿಸಿದ್ದು, ಯುವಕನು ಒಮ್ಮೆಯೂ ಹಿಂದಿರುಗಿ ರಾಜಕುಮಾರಿಯನ್ನು ನೋಡದೆ ಜನರ ಕೇಕೆ, ಜಯಕಾರಗಳಿಗೆ ಖುಷಿಗೊಂಡು ತನ್ನ ನವ ವಧುವಿನ ಜೊತೆ ಹೊರಹೋಗುವುದು… ಈ ಮಧ್ಯೆ ರಾಜಕುಮಾರಿಯ ಹೃದಯವಿದ್ರಾವಕ ಕೂಗು ಈ ಗದ್ದಲದಲ್ಲಿ ಯಾರಿಗೆ ಕೇಳಿಸುತ್ತದೆ?.. ಇಷ್ಟೆಲ್ಲಾ ತಾನು ಅನುಭವಿಸುದಕ್ಕಿಂತ ಅವನೇ ಸತ್ತರೆ ಮೇಲಲ್ಲವೇ? ಎಂದು ರಾಜಕುಮಾರಿ ಯೋಚಿಸಿದ್ದರಲ್ಲಿ ಏನು ತಪ್ಪಿದೆ?

ಆದರೂ.. ಹಸಿದ ಹುಲಿಗೆ ಆಹಾರವಾಗುವುದೆಂದರೆ? ಆ ರಕ್ತ, ಆಕ್ರಂದನ!
ರಾಜಕುಮಾರಿಯ ನಿರ್ಧಾರ ಆ ಘಳಿಗೆಗೆ ತಳೆದಿದ್ದು ಅಂತ ಅನಿಸಿದ್ದರೂ, ಅವಳ ಬಹಳ ಹಿಂದೆಯೇ ಒಂದು ತೀರ್ಮಾನಕ್ಕೆ ಬಂದಿದ್ದಳು. ಅವನು ಅವಳ ಸಹಾಯ ಕೇಳುತ್ತಾನೆಂದು ಅವಳಿಗೆ ಗೊತ್ತಿತ್ತು. ಏನು ಹೇಳಬೇಕೆಂದು ಅವಳು ನಿರ್ಧರಿಸಿಯಾಗಿತ್ತು ಮತ್ತು ಅವಳು ಹಿಂದೆಮುಂದೆ ನೋಡದೆ ಬಲಕ್ಕೆ ಸನ್ನೆ ಮಾಡಿದ್ದಳು. ಅವಳು ಏನು ನಿರ್ಧರಿಸಿದ್ದಳೆಂದು ನಾನೂ ಅರಿಯೇ! ನೀವೂ ಕೇಳುತ್ತಿರುವಂತೆ ನಾನೂ ಕೇಳುತ್ತಿದ್ದೇನೆ. ಬಲ ಭಾಗದ ಬಾಗಿಲಿನಿಂದ ಹೊರಬಂದಿದ್ದು ಹೆಬ್ಬುಲಿಯೇ ಅಥವಾ ಸುಂದರಾಂಗಿಯೇ?

*******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
10 years ago

ಒಳ್ಳೆ ಗೊಂದಲಕ್ಕೆ ತಳ್ಳಿದಿರಲ್ಲ. ಹೇಳಿ ಮಾರಾಯ್ರೆ.

ಜೆ.ವಿ.ಕಾರ್ಲೊ
ಜೆ.ವಿ.ಕಾರ್ಲೊ
10 years ago

ಖಂಡಿತವಾಗಿ ನನಗೂ ಗೊತ್ತಿಲ್ಲ ಮಾರಾಯ್ರೆ!

Guruprasad Kurtkoti
10 years ago

ಜೇ.ವಿ. ಕಾರ್ಲೊ, ಕಥೆ ತುಂಬಾ ಚೆನ್ನಾಗಿದೆ! ಹೊರಗೆ ಬಂದದ್ದು ಹೆಬ್ಬುಲಿಯೇ ಅಂತ ನನ್ನ ಅನಿಸಿಕೆ.

ಜೆ.ವಿ.ಕಾರ್ಲೊ
ಜೆ.ವಿ.ಕಾರ್ಲೊ
10 years ago

ನನಗೂ ಹಾಗೆ ಅನ್ನಿಸ್ತು. ಧನ್ಯವಾದಗಳು.

Rajendra B. Shetty
10 years ago

ಓದುಗನ ಕುತೂಹಲ ಕೆರಳಿಸಲು, ಓದುಗ ಚಿಂತಿಸುವಂತೆ ಮಾಡಲು ಕಥೆಗಳಿಗೆ ಇಂತಹ ಕೊನೆ ಇರಬೇಕು. ಈ ಕಥೆಗೆ ನಮ್ಮ ಮನೋಗುಣಕ್ಕೆ ಅನುಸಾರವಾಗಿ, ಯಾವ ಉತ್ತರವನ್ನೂ ಕೊಡ ಬಹುದು.

5
0
Would love your thoughts, please comment.x
()
x