ಕೃತಿ: ಹುರಿಗೆಜ್ಜಿ
ಲೇಖಕರು:
ರಾಜಕುಮಾರ್ ಮಡಿವಾಳರ
ಅವಲೋಕನ:
ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ
ಹುರಿಗೆಜ್ಜಿಯ ಸದ್ದು ಮನಸಿನ ಕಿವಿತಾಕಿದಾಗ…
***
ರಾಜಕುಮಾರ್ ಮಡಿವಾಳರ ಅವರನ್ನು ಬೇಟಿಯಾಗಿ ಸರಿಯಾಗಿ ಎರಡು ವರ್ಷಗಳ ನಂತರ ಮತ್ತೊಮ್ಮೆ ಮೊನ್ನೆ ನಡೆದ ಮಕ್ಕಳ ಸಾಹಿತ್ಯ ಸಮ್ಮೇಳನ ಧಾರವಾಡದಲ್ಲಿ ಎದುರುಗೊಂಡೆನು. ಈ ಕವಿ ಜೊತೆಗೆ ಬರೆತಾಗ ಕವಿ ಬೆರೆಯುವದಕ್ಕು ಬರೆಯುವದಕ್ಕೂ ವ್ಯತ್ಯಾಸವಿಲ್ಲ ಅನಿಸಿತು. ಪ್ರೀತಿಯಿಂದ ಹುರಿಗೆಜ್ಜಿ ಕೇಳಿದಾಗ ರಾಜಮರ್ಯಾದೆಯೊಂದಿಗೆ…
ಎಂದು ಬರೆದು ನನ್ನ ಕೈಗಿಟ್ಟ ಈವತ್ತು ಅವನ ಹುರಿಗೆಜ್ಜಿಯ ಸದ್ದನ್ನು ಮನಸಿನ ಕಿವಿ ನಿಮರಿಸಿಕೊಂಡು ಕೇಳುವ ಮನಸ್ಸಾಯಿತು ಕೇಳಿದೆ. ಕವಿ ಗೆಳೆಯ ಅವನ ಬದುಕಿನ ಸಹಜತೆಯನ್ನೇ ನನಗೆ ಉಣಿಸಿದಷ್ಟು ಆಪ್ತವಾಗಿ ಮತ್ತಷ್ಟು ಆಪ್ತನಾಗಿ ಹೋದ.
"ಹುರಿಗೆಜ್ಜಿ" ಅನ್ನೊ ದೇಶಿಯ ಶಬ್ದ ಹಳ್ಳಿ ಬದುಕಿನ ಸಂಗೀತ ಕೇಳಿದವರಿಗೆ ಅದರ ಅಂದ ಚಂದ ಎರಡನ್ನೂ ಕಣ್ತನಿಸುತ್ತದೆ. ಈ ಕವಿಯ ಹುರಿಗೆಜ್ಜೆಯೂ ಹಾಗೆ ಮನದ ಆಳಕ್ಕಿಳಿದು ಕಣ್ಣಿಂದ ಹೊರಬರುವ ಹನಿಯಾಗುತ್ತದೆ. ಬದುಕನ್ನು ಬರೆದುಕೊಂಡ ತೀರಾ ಖಾಸಗಿ ಕವಿತೆಗಳಾದರೂ ಎಂತಹ ಓದುಗನಾದರೂ ಒಂದು ಬಾರಿ ತನ್ನ ಬದುಕಿಗವುಗಳನ್ನು ಪೋಣಿಸಿಕೊಂಡುಬಿಡುತ್ತಾನೆ. ಅಪ್ಪನ ಕುರಿತು ಬರೆದ ೨೨ ಕವಿತೆಗಳು ಒಂದಕ್ಕೊಂದು ಗಂಟ್ಹಾಕಿಕೊಂಡಿವೆ ಆದರೂ ಬೇರೆ ಬೇರೆ ಬದುಕಿನ ರೀತಿಗಳನ್ನು ಬಿಚ್ಚಿಡುತ್ತವೆ.
ಅಪ್ಪ ೨ ರಲ್ಲಿ
ಕೈಬೆರಳ ಹಿಡಿದು ನಡೆಸುವ ಅಪ್ಪ ಹೆಗಲಮೇಲೆ ಹೊತ್ತು ನಡೆವ ಪ್ಪ ಪ್ರತಿ ಕ್ಷಣವೂ ಮಗನ ವ್ಯಂಗ್ಯ, ಮತ್ತು ಗಂಭೀರತೆ ಮತ್ತು ಕಾಟ ಇವುಗಳಲ್ಲೆಲ್ಲ ಖುಷಿ ಕಾಣುವ ಆತನೇ ಒಂದು ಸಂತಸದ ಸಂತಸ. ಕವಿ ಈ ಕವಿತೆಯಲ್ಲಿ
ನೀ-
ರಾಗ ಈಸುವುದ ನಿಂತು ನೀ ನೋಡು ಬಾ..
ಎಂದು ಕರೆಯವ ಸಾಲುಗಳು ಬದುಕಿನಲಿ ಅಪ್ಪನಿಂದ ಎಲ್ಲವನ್ನು ಕಲಿತು ಬದುಕುತ್ತಿರುವ ಈ ಬದುಕನ್ನೊಮ್ಮೆ ನೋಡು ಬಾ ಎಂದು ಕರೆಯುವಲ್ಲಿ ಕಳೆದುಕೊಂಡ ಅಪ್ಪನಲ್ಲಿನ ನಂಬಿಕೆ ಮತ್ತು ಈಜು ಕಲಿತ ಬದುಕಿನ ಸಾಹಸಗಾಥೆಯನು ಕಾಣಲು ಬಾ ಎಂದು ಕರೆಯುವ ಕೂಗು ಮನವನಳಿಸಿತು.
ಅಪ್ಪ ೧೪ ರಲ್ಲಿ
ಎದಿ ಅನ್ನೊದು ಎರಿಹೊಲ ಇದ್ದ್ಹಾಂಗ
ಅಪ್ಪ ನಿಮ್ಮ ನೆನಪೂನೂ
ಹಂಗ ಮೇಯುತಾವರಿ…
ಅಪ್ಪನೆದೆಯಮೇಲೆ ಮಲಗಿ ಆಡಿದ ನೆನಪುಗಳು ಎರಿಹೊಲದಾಂಗ ಅನ್ನೊ ರೂಪಕ ದುಡಿಮೆಯ ಪ್ರತೀಕ ಅಪ್ಪನ ದುಡಿಮೆಯ ಎರಿಹೊಲಾ ಸದಾ ನೀರನ್ನು ಹಿಡಿದಿಟ್ಟುಕೊಳ್ಳುವ ಗುಣವುಳ್ಳದ್ದು ಹಾಗೆ ಅವನ ನೆನಪುಗಳು ಸದಾ ನೀರಾಗುತ್ತವೆ ಮತ್ತು ಸದಾ ನೀರಲ್ಲಿರುವ ತಾವರೆಯ ಹಾಗೆ ಅವನ ನೆನಪಲ್ಲೇ ನಾನು ಅರಳುತ್ತಿರುವೆ ಅನ್ನುವ ಮತ್ತು ಅದೇ ನೆನಪಿನ ನೀರು ಬದುಕಿನ ದಾಹವ ತನಿಸಿದೆ ಎಂದು ಕವಿ ಹೇಳುತ್ತಿರುವಂತಿದೆ.
ಅಪ್ಪ ೧೯ ರಲ್ಲಿ
ಅಪ್ಪನನ್ನು ಬರೆಯುವದರ ಕುರಿತು ಹೇಳುವ ಪ್ರತಿ ಸಾಲುಗಳು ಸವಾಲನ್ನು ಹಾಕುತ್ತ ಗೆದ್ದು ನಿಲ್ಲುತ್ತವೆ. ಅಪ್ಪ ೨೨ರಲ್ಲಿ ಅಮ್ಮನ ಕಣ್ಣಲ್ಲಿ ಅಪ್ಪನನ್ನು ಕಂಡು ಅಪ್ಪನನ್ನು ಚಿತ್ರಿಸುವ ಪರಿ ತುಂಬಾ ಇಷ್ಟವಾಗುತ್ತದೆ. "ಮತ್ತ ನಾ ನೋಡೇ ಇಲ್ಲ ಪಾ" ಕವಿತೆ ತುಂಬಾ ಸರಳವಾದರೂ ಬದುಕಿನಲಿ ಹೆಣ್ಣಿನ ನೋವು ಸಂಕಟ ಮತ್ತು ತೌರುಮನೆ ಬಿಟ್ಟು ಗಂಡನ ಮನೆಯ ಬದುಕಿಗಂಟಿಕೊಂಡು ನಡೆಸುವ ದಿಟ್ಟ ಬದುಕಿನಲಿ ತನ್ನ ತಂದೆ ತಾಯಿ ಮತ್ತೆಲ್ಲ ಬಂಧುಗಳನು ಬಿಟ್ಟು ಬರುವ ಹೆಣ್ಣು ಬದುಕಿನ ಬಾಗವಾಗಿ ನಿಲ್ಲುವ ಪರಿ ಅಮ್ಮನ ಮಾತುಗಳಲ್ಲಿ ಮನಸೇರುತ್ತವೆ. "ಕೊಳಲು" ಕವಿತೆ ಒಂದರ್ಥದಲ್ಲಿ ಡಬಲ್ ರೋಲ್ ನಂತಿದ್ದು ಇಷ್ಟವಾಗುತ್ತದೆ ಬಿಟ್ಟುಹೋದ ಬದುಕಿನ ವಿಶ್ವರೂಪದ ದರ್ಶನವೂ ಮನದಿಳಿದು'ಕೊಳಲು' ಕವಿತೆಯು ಒಳಗಿಳಿಯುತ್ತದೆ.
ಎದುರಾಗಿದ್ದು? ಎದುರುಗೊಳ್ಳಲೆಂದೇ!
ಕುಡಿ ನೋಟ, ಬಿಡಿ ನೋಟ
ಸಿಡಿ ನೋಟವೂ! ಬೇರೆ ಸಲ, ಬೇರೆ ಥರ
ಸ್ಥಳ ಬೇರೆ, ಸಲ ಸಲಕೂ ಸಿಕ್ಕಷ್ಟು
ಸಲ ಎದುರು ಬದುರೇ ಸಿಕ್ಕೆವು
ನಕ್ಕೇವು! ಆಡಬೇಕಿತ್ತು ನಿನಗನ್ನಿಸಿದ…
ನಿನ್ನ ಕುರಿತು ನಾನೂ
"ಎಷ್ಟು ಸಲ ಸಿಕ್ಕರೂ" ಕವಿತೆಯ ಈ ಮೇಲಿನ ಸಾಲುಗಳು ಪ್ರೇಮದ ಪರಿಯಲಿ ಮತ್ತೆ ಮತ್ತೆ ಎದುರುಗೊಂಡರೂ ಮರೆಯಾಗಂತಿರುವ ತಾಕಲಾಟವನ್ನು ಇಲ್ಲಿ ಕಾಣಬಹುದು..
ಇದನ್ನೇ ಸ್ನೇಹಕ್ಕೆ ಸೀಮಿತಗೊಳಿಸಿಕೊಂಡು ವಯಕ್ತಿಕವಾಗಿ ಓದಿಕೊಂಡಾಗ ಸಿಕ್ಕ ಕವಿಯ ಸ್ನೇಹದ ಪರಿಯು ಮತ್ತೆ ಮತ್ತೆ ಸಿಗುವಷ್ಟು ಎದುರುಗೊಳ್ಳುವಷ್ಟು ಹತ್ತಿರವಾಗುತ್ತದೆ.
"ಸುಶಿಲಮ್ಮ" ಕವಿತೆ ಒಂದು ಕ್ಷಣ ಕಣ್ಣೀರನ್ನು ತರಿಸಿತು ಈ ಕವಿತೆಯಲಿ ಕವಿಕೇಳುವ ಪ್ರಶ್ನೆಗೆ ಉತ್ತರವಿಲ್ಲ ಅನ್ನೊದಂತು ಸತ್ಯ ಆದರೆ ಅದಕ್ಕೆ ಉತ್ತರವಾಗಿ ನಿಲ್ಲುವ ಸುಶಿಲಮ್ಮ ಮಮತೆಯ ಮಹಾಮಾತೆ ಅನ್ನೊದಂತು ಕಣ್ಮುಂದಿರುವ ಚಿತ್ರ. "ಗುಬ್ಬಿ" ಕವಿತೆಯು ಕವಿತೆಯ ಸ್ವಾತಂತ್ರತೆಯನ್ನು ಪ್ರಶ್ನಿಸುವ ಮತ್ತು ಅದನ್ನು ಸಾಬೀತುಪಡಿದುವ ನಿಟ್ಟಿನಲ್ಲಿ ಸಾಗಿವ ವಿಭಿನ್ನವಾದ ಕವಿತೆಯಾಗಿದೆ. 'ಅಕ್ಕನ ಮಗಳು' 'ಗೆಳೆಯನ ಮಗಳು' 'ಮಗಳು ಮಗಳೇ' ಕವಿತೆಗಳು ತುಂಬಾ ಆಪ್ತವಾಗುತ್ತವೆ.
ರಾಜಕುಮಾರ ಮಡಿವಾಳರ ಅವರ ಕವನಗಳಲ್ಲಿನ ದೇಶಿಯ ಸಂಗೀತಕ್ಕೆ ಬಾವನೆಗಳು ಹದವಾಗಿ ಮೈಒಡ್ಡಿಕೊಂಡಿವೆ. ಹೆಜ್ಜೆ ಹೆಜ್ಜೆಗೂ ಜೊತೆಯಾಗುವ ಗೆಜ್ಜಿ ಸದ್ದನ್ನು ಎದೆಯ ಕಿವಿ ತೆರೆದು ಮನದ ಕದ ತೆರೆದು ಭಾವದ ಬಾಗಿಲಲಿ ನಿಂತು ಆಸ್ವಾದಿಸಿದಾಗ ಕವಿ ಮತ್ತು ಕವಿತೆಯ ಒಳಗಿನೆದೆಯ ಭಾವ ಮತ್ತು ಬದುಕು ನಮ್ಮ ಮನಮುಟ್ಟುವದು.
ಒಟ್ಟು ೫೭ ಕವಿತೆಗಳ ಭಾವಗುಚ್ಚವಿದು. ಗೆಳೆಯ ರಟ್ಟಿಹಳ್ಳಿ ರಾಘವನ 'ಕನಸು' ಪ್ರಕಾಶನ ಪ್ರಕಟಿಸಿದ ಈ ಕೃತಿಯನ್ನು ಅಪ್ಪ ಮತ್ತು ಬದುಕು
ಎರಡನ್ನೂ ಅರಿತು ಬೆರೆತು ಬದುಕಿ ಬರೆಯುವವರು ಒಮ್ಮೆ ಓದಲೇಬೇಕು…
-ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ.
ಉತ್ತಮ ವಿಮರ್ಶೆ. ಕೃತಿಯನ್ನು ಓದಲೇಕು ಅನಿಸುತ್ತಿದೆ.
ಪರಿಚಯಾತ್ಮಕ ವಿಮರ್ಶೆ. ಅಭಿನಂದನೆಗಳು