ಸಾಯಂಕಾಲ ಆಯಿತೆಂದರೆ ಗಾರ್ಡನ್ನಿನಲ್ಲಿ ಮಕ್ಕಳ ಚೆಲ್ಲಾಟದ ಸದ್ದು, ಜೋಕಾಲಿ ಜೀಕುವ ಸಪ್ಪಳ, ಮಹಿಳೆಯರ ಮಾತಿನ ಕಾವು ಏರುತ್ತಲೇ ಇರುತ್ತದೆ. ಆದರೆ ಅಂದು ಸಂಜೆ ಹೊತ್ತು ಗುಡುಗು ಸಿಡಿಲಿನ ಅಬ್ಬರದೊಂದಿಗೆ ಮಳೆಯಾಗಿದ್ದರಿಂದ ಗಾರ್ಡನ್ ಯಾವುದೇ ಸದ್ದು ಗದ್ದಲವಿಲ್ಲದೇ ಬಿಕೋ ಎನ್ನುತ್ತಿತ್ತು. ಬೆಂಚುಗಳು ಸೀನಿಯರ್ ಸಿಟಿಜನ್ಸ್ ಮತ್ತು ಮಾತು ಹೇಳುವ ಮಾತೆಯರಿಲ್ಲದೇ ಬಣಗುಡುತ್ತಿದ್ದವು. ಜೋರಾಗಿ ಬೀಸಿದ ಗಾಳಿಗೆ ಉದುರಿ ಬಿದ್ದ ಗಿಡದ ಎಲೆ-ಹೂಗಳು ಬೆರಳಣಿಕೆಯಲ್ಲಿ ವಾಕಿಂಗ್ ಮಾಡುತ್ತಿದ್ದ ನಮ್ಮನ್ನು ಸ್ವಾಗತಿಸುವಂತೆ ಭಾಸವಾಗುತ್ತಿತ್ತು.ಮಳೆಯಾದುದರಿಂದ ತಂಗಾಳಿ ಮೈಗೆ ತಂಪೆರೆಯುತ್ತಿತ್ತು.
ಅದೇ ಸಮಯದಲ್ಲಿ ವಯಸ್ಸಾದವರೊಬ್ಬರು ಕೈಯಲ್ಲಿ ಹೈಟೆಕ್ ಮೊಬೈಲ್ ಹಿಡಿದು ಗಾರ್ಡನ್ನಿಗೆ ಎಂಟ್ರಿ ಕೊಟ್ಟರು. ಮಳೆಯಿಂದ ಬೆಂಚು ತೊಯ್ದಿದ್ದರಿಂದ ಅಲ್ಲಿಯೇ ನಿಂತು,”ಇಲ್ಲೆ ಇಲ್ಲೆ ಎಲ್ಲೋ ನನ್ನ ಮನಸು ಕಾಣೆಯಾಗಿದೆ. ಹೇಳದೆನೆ ಕೇಳದೆನೆ ನನಗೆ ಏನೋ ಆಗಿದೆ” ಎನ್ನುವ ಚಲನ ಚಿತ್ರಗೀತೆಯನ್ನು ಜೋರಾಗಿ ಹಚ್ಚಿಕೊಂಡು ವಾಕಿಂಗ್ ಪ್ರಾರಂಭಿಸಿದರು.ನಂತರ “ನೀನೆಂದರೆ ನನಗೆ ಇಷ್ಟ ಕಣೋ”, “ಸ್ಪೀಡಾಗಿದೆ ಜಮಾನಾ ನೀನು ತುಂಬ ನಿಧಾನ.” ಎನ್ನುವ ಗೀತೆಗಳನ್ನು ಕೇಳುತ್ತ ಅದರೊಂದಿಗೆ ಗುಣುಗುಣಿಸುತ್ತ ವಾಕಿಂಗ್ ಮುಂದುವರಿಸಿದ್ದರು.
ಅರೆ! ಈ ವಯಸ್ಸಿನಲ್ಲಿ ಈ ಅಜ್ಜ ಇಂಥ ಹಾಡುಗಳನ್ನು ಕೇಳ್ತಿದಾರಂದ್ರೆ ಒಂದು ವಯಸ್ಸಿನಲ್ಲಿ ಈ ಅಜ್ಜ ಹೇಗಿದ್ದರೋ ಏನೋ ಯೌವನದಲ್ಲಿ ಬಹಳ ರಸಿಕರಾಗಿದ್ದಿರಬಹುದು,ಇವರ ಬಾಳ ಸಂಗಾತಿಯೊಂದಿಗೆ ತುಂಬ ಸುಮಧುರ ಕ್ಷಣಗಳನ್ನು ಕಳೆದಿರಬಹುದು. ಎಂಬ ನೂರೆಂಟು ಪ್ರಶ್ನೆಗಳು ತಲೆಯಲ್ಲಿ ಗಿರಕಿ ಹೊಡೆಯಹತ್ತಿದವು.
ಹತ್ತಾರು ರೌಂಡು ಹಾಕಿದ ದೇಹ ದಣಿದಿತ್ತು. ಅಷ್ಟರಲ್ಲಿಯೇ ಸುಯ್ಯೆಂದು ಬೀಸಿದ ತಂಗಾಳಿಗೆ ಬೆಂಚುಗಳು ಒಣಗಿದ್ದವು.ದಣಿವಾರಿಸಿಕೊಂಡು ಮನೆ ಕಡೆ ಮುಖ ಮಾಡಿದರಾಯಿತೆಂದು ಬೆಂಚಿನ ಒಂದು ತುದಿಯ ಮೇಲೆ ಕುಳಿತೆ. ಕಾಕತಾಳೀಯವೆಂಬಂತೆ ಆ ವಯಸ್ಸಾದ ಹಿರಿಯರು ನಾ ಕುಳಿತ ಬೆಂಚಿನ ಇನ್ನೊಂದು ತುದಿಯ ಮೇಲೆ ಆಸೀನರಾದರು. ಇದುವರೆಗೂ ತಲೆಯಲ್ಲಿ ಗಿರಕಿ ಹೊಡೆದ ಪ್ರಶ್ನೆಗಳನ್ನು ಕೇಳಿಬಿಡಲೆ?ಕೇಳುವದಾದರೆ ಹೇಗೆ ಕೇಳುವದು? ಎಂದು ಅನುಮಾನಿಸುತ್ತಿರುವಾಗ “ ಇವತ್ತು ಸಾಯಂಕಾಲ ಮಳಿ ಚುಲೋ ಆತು ನೋಡ್ರಿ, ಮಳಿ ಆಗಿದ್ದಕ್ಕ ಗಾರ್ಡನ್ನಿಗೆ ಬಾಳ ಜನ ಬಂದಿಲ್ಲ..” ಅಂತ ಅವರೇ ಮಾತಿಗಿಳಿದರು.”ಹೌದ್ರಿ ಎಂದು ತಲೆ ಅಲ್ಲಾಡಿಸುತ್ತ, ನಿಮ್ಮ ಮನಿ ಎಲ್ರಿ? ಇಷ್ಟ ದಿನ ನೀವು ಗಾರ್ಡನ್ನೊಳಗ ಕಂಡೆ ಇಲ್ಲ. ಹೊಸದಾಗಿ ಬಂದಿರೆನ” ಎಂದೆ. ಅದಕ್ಕೆ ಅವರು “ಹೌದು ನಾವು ಇಷ್ಟ ದಿನ ನಮ್ಮೂರಾಗ ಇದ್ವಿ. ಇಲ್ಲಿಗೆ ಬಂದು ಈಗ ಎಂಟು ದಿನ ಆತು. ನಮ್ಮ ಗಂಡ್ಮಕ್ಳು ಫಾರಿನ್ನಾಗ ಸೆಟ್ಲ ಆಗ್ಯಾರ ಎರಡ್ಮೂರು ವರ್ಷಕ್ಕೊಮ್ಮೆ ಬರ್ತಾರ. ಮಗಳು ಬ್ಯಾಡ ಅಂದ್ರೂ ಒತ್ತಾಯ ಮಾಡಿ ಕರಕೊಂಡು ಬಂದಾಳ.ಬ್ಯೂಟಿ ಪಾರ್ಲರ್ ಬಾಜುಕ ಐತೆಲ್ಲ ಅದ ನಮ್ಮ ಮಗಳ ಮನಿ. ನಮ್ಮಾಕಿಗೆ ಸಂಗೀತ ಅಂದ್ರ ಪಂಚ ಪ್ರಾಣ ಯಾವಾಗ್ಲೂ ರೇಡಿಯೋ ಟಿವಿಯೊಳಗಿನ ಹಾಡು ಕೇಳಕೋತ ಕೆಲ್ಸ ಮಾಡತಿದ್ಲು. ನಾನು ಕ್ರಿಕೆಟ್ಟು ನ್ಯೂಸು ಅಂತ ಆಕಿ ಜೋಡಿ ಇರು ಒಂದು ರಿಮೋಟಿಗೆ ಗುದ್ದಾಡತಿದ್ದೆ. ಇಬ್ರ ಜಗಳ ಒಮ್ಮೊಮ್ಮೆ ತಾರಕಕ್ಕೆರತ್ತಿತ್ತು.ಅದು ಗೊತ್ತಾಗಿ ನಮ್ಮ ಮಗಳು ನಮ್ಮಾಕಿಗೆ ಹೈಟೆಕ್ ಮೊಬೈಲ್ ಕೊಡಿಸಿ ಅದರಾಗ ಅಕಿಗೆ ಇಷ್ಟವಾಗೋ ಹಾಡು ತುಂಬಿಸಿ ಕೊಟ್ಟಿದ್ಲು. ಆಗಿಂದ ನಮ್ಮಿಬ್ಬರ ಜಗಳ ಸ್ವಲ್ಪ ಕಮ್ಮಿ ಆಗಿತ್ತು. ಇದ್ದಕ್ಕಿಂದಂಗ ಹದಿನೈದ ದಿನದ ಹಿಂದ ನಮ್ಮಾಕಿ ನಮಗ್ಯಾರಿಗೂ ಮುನ್ಸೂಚನಿ ಕೊಡದ ಶಿವನ ಪಾದ ಸೇರಿಕೊಂಡಬಿಟ್ಲು.
ಅಕಿ ಕಳಕೊಂಡ ಮ್ಯಾಲೆ ನಾನು ಒಂಥರಾ ಹುಚ್ಚ ಆದಂಗ ಆಗೆನಿ.ಎದರಾಗೂ ನೆಮ್ಮದಿ ಸಿಗವಲ್ತು. ಕುಂತ್ರು ನಿಂತ್ರು ಅಕಿದ ನೆನಪು “ಸಂಗೀತ ಎಂಥ ದುಃಖಾನೂ ಮರಸ್ತೈತಿ ಅದಕ್ಕ ದೇವರು ಆ ಶಕ್ತಿ ಕೊಟ್ಟಾನ.ಕೊನೆಗಾಲದಾಗ ನಾ ಫಾರಿನ್ನೊಳಗ ಇರು ಗಂಡ್ಮಕ್ಕಳನ ಮೊಮ್ಮಕ್ಕಳನ ನೋಡಬೇಕು ಅಂತ ಆಸೆ ಪಟ್ಟು ದುಃಖ ಪಟ್ಟೆನಿ ಅಂಥ ದುಃಖಾನೂ ಈ ಸಂಗೀತ ಸ್ವಲ್ಪ ಕಾಲನರ ಮರಸ್ತೈತಿ.ನಿಮಗ ಗೊತ್ತಿಲ್ಲ ಸಂಗೀತದ ಶಕ್ತಿ ಅಂತಿದು.್ಲ” ಅದನ್ನ ನಾನು ಸತತ ಅಲ್ಲಗಳಿತಿದ್ನಿ.ಆದರ ಆಕಿ ನನ್ನಿಂದ ದೂರ ಆದ ಮ್ಯಾಲೆ, ನನಗ ಅಕಿ ಹೇಳಿದ ಮಾತುಗಳು ಖರೆ ಅನಸಾಕತ್ತಾವು.ಇವತ್ತ ನನ್ನ ಜೊತಿ ಅಕಿ ಇಲ್ಲ ಆದರ ಅಕಿ ಜೀವದಾಗಿನ ಜೀವದಂಗ ಇದ್ದ ಸಂಗೀತ ನನ್ನ ಜೊತಿ ಐತಿ. ನನ್ನ ಕೊನೆಯುಸಿರು ಇರುವವರೆಗೂ ಸಂಗೀತ ಕೇಳಕೋತ ಅಕಿ ನೆನಪಿನ ದುಃಖ ಮರಿಬೇಕಂತ ನಿರ್ಧಾರ ಮಾಡೆನಿ.ಮನಸ್ಸನ್ಯಾಗಿನ ನೋವು ನಲಿವು ಹಂಚಿಕೊಳ್ಳಾಕ ಇಳಿವಯಸ್ಸಿನ್ಯಾಗ ಸಂಗಾತಿ ಇರಬೇಕಂತಾರ.ಈ ಟೈಂನ್ಯಾಗ ಅಕಿ ನನ ಜೊತಿ ಬಿಟ್ಟು ಹೋದ್ಲು. ಮನಷ್ಯಾಗ ಹತ್ರ ಇದ್ದ ವಸ್ತುವಿನ ಬೆಲೆ ಗೊತ್ತಾಗುದಿಲ್ಲ. ದೂರಾದ ಮ್ಯಾಲೆ ಅದರ ಬೆಲೆ ಗೊತ್ತಾಗತೈತಿ.” ಅಂತ ಹೇಳುವಾಗ ಆ ಹಿರಿಯರ ಕಣ್ಣಂಚಿನಿಂದ ನೀರು ಸುರಿಯುತ್ತಿತ್ತು.
ಆ ಹಿರಿಯರು ಮೊಬೈಲಿನಲ್ಲಿ ಹಾಡು ಕೇಳುವದರ ಹಿಂದೆ ಇಷ್ಟೊಂದು ದುಃಖ ಹುದುಗಿದೆ ಎಂದು ತಿಳಿದು ನನಗರಿವಿಲ್ಲದೆಯೆ ನನ್ನ ಕೆನ್ನೆ ಮೇಲೆ ಹರಿಯುತ್ತಿದ್ದ ನೀರನ್ನು ಎರಡು ಕೈಗಳು ಒರೆಸುತ್ತಿದ್ದವು. ಅಷ್ಟರಲ್ಲಿ ಅವರ ಮೊಬೈಲಿನಲ್ಲಿ “ಹುದುಗಲಾರದ ದುಃಖ ಹುದುಗಿರಿಸಿ ಮನದಲ್ಲಿ ನಸು ನಗುತ ನೀ ಬಂದೆ ಎದುರು” ಎನ್ನೋ ಭಾವಗೀತೆ ತೇಲಿ ಬರುತ್ತಿತ್ತು. ಆ ಹಾಡನ್ನು ಕೇಳುತ್ತ . ಅವರು ನನಗೆ ಬೆನ್ನು ಮಾಡಿ ನಡೆದರು. ಅವರಿಗೆ ಹೇಗೆ ಸಂತೈಸಬೇಕೆಂದು ತಿಳಿಯದೆ, ನಾನು ಅವgನ್ನೇ ದಿಟ್ಟಿಸುತ್ತ ದಿಗ್ಮೂಡಳಾಗಿ ನಿಂತೆ.
-ಜಯಶ್ರೀ.ಜೆ.ಅಬ್ಬಿಗೇರಿ