ನಟ್ಟು ಕಾಲಂ

ಹುಡುಗಿ ಕಚ್ಚಿದ್ರೆ ಲೈಫೇ ಊದಿಕೊಳ್ಳುತ್ತೆ: ನಟರಾಜು ಎಸ್. ಎಂ.

ಇತ್ತೀಚೆಗೆ ಒಂದು ದಿನ ಹಾಸಿಗೆಯ ಮೇಲೆ ಮಲಗಿ ವಿರಮಿಸುತ್ತಿದ್ದಾಗ ಒಂದು ಇರುವೆ ಹಾಸಿಗೆಯ ಸುತ್ತ ಮುತ್ತ ಸುಮ್ಮನೆ ಅಡ್ಡಾಡುತ್ತಿದ್ದುದ ನೋಡಿ ಸುಮ್ಮನಾಗಿದ್ದೆ. ಎಲ್ಲೆಲ್ಲೋ ಅಡ್ಡಾಡಿ ಬಂದ ಆ ಇರುವೆ ಕೊನೆಗೆ ಹಾಸಿಗೆಯ ಮೇಲೆ ಚಾಚಿದ್ದ ನನ್ನ ಕೈ ಬೆರಳ ಮೇಲೆ ಹತ್ತಿ ಹರಿದಾಡುತ್ತಿತ್ತು. ಆ ಇರುವೆಯ ಹರಿದಾಡುವಿಕೆಯನ್ನು ಮುಗುಳ್ನಗುತ್ತಾ ನೋಡಿದ ನಾನು ಅದು ನನ್ನ ಬೆರಳನ್ನು ಕಚ್ಚುವಾಗ "ಇರುವೆ ತಾನೆ ಬಿಡು ಕಚ್ಚಲಿ. ಇರುವೆ ಕಚ್ಚಿದರೆ ಹೆಚ್ಚೆಂದರೆ ಕಚ್ಚಿದ ಜಾಗ ಒಂಚೂರು ಉರಿದು ಕೆಂಪಾಗಿ ಒಂದು ಸಣ್ಣ ಗಂದೆಯಾಗುಬಹುದು." ಎಂದು ಸುಮ್ಮನಿದ್ದೆ. ನಮ್ಮ ಕಡೆಯ ಗೊದ್ದ (ದಪ್ಪವಾದ ಕಪ್ಪು ಇರುವೆ), ನಚ್ಚಿರುವೆ, ಕರಿ ಇರುವೆ, ಕೆಂಪು ಇರುವೆ, ಇವುಗಳನ್ನು ನೋಡಿ ಅವುಗಳಿಂದ ಕಚ್ಚಿಸಿಕೊಂಡ ಅನುಭವವಿದ್ದ ನಾನು ಇರುವೆ ಕಚ್ಚಿದರೆ ಅಂತಹ ವಿಷಕಾರಿಯೇನಲ್ಲ ಅಂತ ಬಲವಾಗಿ ನಂಬಿದ್ದೆ. ಆ ನಂಬಿಕೆಯನ್ನು ಸುಳ್ಳು ಮಾಡಲೆಂದೇ ಇರಬೇಕು ನನ್ನ ಕೈ ಬೆರಳ ಮೇಲೆ ಸ್ವಲ್ಪ ಕಚ್ಚುತ್ತಿದ್ದ ಇರುವೆ ಇದ್ದಕ್ಕಿದ್ದಂತೆ ನನ್ನ ಬೆರಳನ್ನು ಜೋರಾಗಿ ಕಚ್ಚಿ ಹಿಡಿದಿತ್ತು. ಅದರ ಕಚ್ಚುವಿಕೆಯನ್ನು ಮೊದಲಿಗೆ ಮುಗುಳ್ನಗೆಯಿಂದ ನೋಡಿದ ನಾನು ಆ ಇರುವೆ ಕಚ್ಚುವ ಸ್ಟೈಲ್ ನೋಡಿ "ನನ್ ಮಗಂದು ಯಾವುದೋ ಡೇಂಜರ್ ಇರುವೆ ಇದು" ಎಂದು ಮನಸಿನ್ನಲ್ಲಿ ಅಂದುಕೊಂಡು ಆ ಇರುವೆಯನ್ನು ಕಿತ್ತು ಬಿಸಾಡಲು ಮುಂದಾಗಿದ್ದೆ.

ಕೈ ಬೆರಳನ್ನು ತನ್ನ ಮೂತಿಯಿಂದ ಕಚ್ಚಿ ಹಿಡಿದಿದ್ದ ಇರುವೆಯನ್ನು ಕಿತ್ತು ಹಾಕಲು ಹೋದಾಗ ತನ್ನ ಕಡಿತದ ಹಿಡಿತವನ್ನು ಆ ಇರುವೆ ಇನ್ನಷ್ಟು ಬಿಗಿಗೊಳಿಸಿತು. ಆ ಕಡಿತದಲ್ಲಿ ಭಯಂಕರ ನೋವಾಗುತ್ತಿರುವುದು ಅರಿವಿಗೆ ಬಂದು ಆ ಇರುವೆಯನ್ನು ಜೋರಾಗಿ ಕಚ್ಚಿ ಹಿಡಿದಿರುವ ಜಾಗದಿಂದ ಕಿತ್ತು ಹಾಕುವಾಗ ಅದರ ಮೂತಿಯ ಕೊಂಡಿಗಳು ನನ್ನ ಬೆರಳ ಚರ್ಮದ ಒಳಗೆ ಮುರಿದುಕೊಂಡ ಅನುಭವವಾಯಿತು. ಆ ಇರುವೆಯನ್ನು ಕಿತ್ತು ಹಾಕಿದ ಒಂದೆರಡು ನಿಮಿಷದಲ್ಲಿ ನನಗೆ ಅಚ್ಚರಿ ಎಂಬಂತೆ ಇಡೀ ಮುಂಗೈ ಇಡ್ಲಿಯ ಹಾಗೆ ಊದಿಕೊಂಡಿತು. ಒಂದರ್ಧ ಗಂಟೆಯಲ್ಲಿ ಬೆರಳುಗಳನ್ನು ಮಡಚಲು ಆಗದಷ್ಟು ಮುಂಗೈ ಪೂರ್ತಿ ನೋವಾಗುತ್ತಿತ್ತು. ಆ ನೋವಿನಲ್ಲಿ ಬ್ಯಾಗನ್ನು ಹೆಗಲಿಗೇರಿಸಿಕೊಂಡು ಹೇಗೋ ಆಫೀಸಿಗೆ ಹೋಗಿಬಿಟ್ಟಿದ್ದೆ. ಆಫೀಸಿನಲ್ಲಿ ಕೆಲವರು ನನ್ನ ಊದಿಕೊಂಡ ಮುಂಗೈ ನೋಡಿ "ಏನ್ ಕಚ್ಚಿತು ಗುರು? ಕೈ ಹಿಂಗ್ಯಾಕೆ ಊದಿಕೊಂಡಿದೆ?" ಅಂತೆಲ್ಲಾ ಪ್ರಶ್ನಿಸಿದ್ದರು. "ನನ್ ಮಗಂದು ಒಂದು ಇರುವೆ ಕಚ್ಚಿಬಿಡ್ತು" ಅಂತ ನಾನಂದಾಗ ಆ ಇರುವೆಯ ಕಚ್ಚುವಿಕೆಯ ಅನುಭವ ಅವರಿಗೆ ಇರುವಂತೆ "ಓಹ್! ಕಟ್ ಇರುವೆ ಕಚ್ಚಿದೆ. ಇರುವೆ ಕಚ್ಚಿದ ತಕ್ಷಣ ಸುಣ್ಣ ಸವರಿದ್ದರೆ ಇಷ್ಟೊಂದು ದೊಡ್ಡದಾಗಿ ಕೈ ಊದಿಕೊಳ್ತಾ ಇರಲಿಲ್ಲ. ಬಹುಶಃ ಇರುವೆಯ ಮೂತಿ ಒಳಗೆ ಮುರಿದಿದೆ ಆ ಕಾರಣಕ್ಕೆ ಕೈ ಹೀಗೆ ಊದಿಕೊಂಡಿದೆ. ನಾಳೆ ಸರಿ ಹೋಗುತ್ತೆ ಬಿಡು" ಎಂದರು. ಈಗ ಸುಣ್ಣ ಹಚ್ಚಿದ್ರೆ ಪ್ರಯೋಜನ ಇಲ್ವಾ ಅಂದೆ. ಉಹೂಂ.. ಪ್ರಯೋಜನ ಇಲ್ಲ ಅಂತ ಒಬ್ಬ ಹುಡುಗ ಹೇಳಿದ.

ಆ ನೋವಿನಲ್ಲೇ ಆಫೀಸಿನಲ್ಲಿ ಕೆಲಸ ಮಾಡುವಾಗ ಒಂದು ಕ್ಷಣ ಮೈ ಬೆವೆತ ಅನುಭವವಾಗಿತ್ತು. ಕೈ ನೋವು ಕ್ಷಣದಿಂದ ಕ್ಷಣಕ್ಕೆ ಜಾಸ್ತಿಯಾಗುತ್ತಲೇ ಹೋಗಿತ್ತು. ನೋವು ತಡೆದುಕೊಳ್ಳಲಾರದೆ ಕುತೂಹಲಕ್ಕೆ ಇಂಟರ್ ನೆಟ್ ನಲ್ಲಿ ant bite ಅಂತ ಸರ್ಚ್ ಕೊಟ್ಟು ನೋಡಿದಾಗ ವಿಧ ವಿಧದ ವಿಷಕಾರಿ ಇರುವೆಗಳ ಬಗ್ಗೆ ಓದಿ ಒಂದು ಕ್ಷಣ ಮೈ ಜುಮ್ಮೆಂದಿತು. ನನಗೆ ಕಚ್ಚಿರುವ ಇರುವೆ ಇಂಟರ್ ನೆಟ್ ನಲ್ಲಿ ಮಾಹಿತಿ ಇರೋ ಇರುವೆಗಳಷ್ಟು ವಿಷಕಾರಿಯಾಗಿರಲ್ಲ ಅಂತ ನನಗೆ ನಾನೇ ಸಮಾಧಾನ ಮಾಡಿಕೊಂಡು ನನ್ನ ಇರುವೆ ವೃತ್ತಾಂತವನ್ನು ನನ್ನ ತಾಯಿಯೊಡನೆ ಫೋನ್ ನಲ್ಲಿ ಹಂಚಿಕೊಂಡಿದ್ದೆ. "ಅಯ್ಯೋ ಮಗ. ಯಾವಾಗ ಕಚ್ತಪ್ಪಾ. ಕೈ ಜಾಸ್ತಿ ನೋಯ್ತಾ ಇದ್ದದೆ. ಎಲ್ಲೋ ಕಟ್ ಇರುವೆ ಕಚ್ ಬುಟ್ಟದೆ. ಹೋಗಿ ಕಣ್ ನೋವಿನ ಟ್ಯೂಬ್ ಹಚ್ಚಕಳಪ್ಪ. ನೋವು ಕಡಿಮೆಯಾಗದೆ ಹೋದ್ರೆ ಅಯೋಡೆಕ್ಸ್ ಹಚ್ಕೋ ಮಗ." ಅಂತ ನಮ್ಮವ್ವ ಹೇಳಿತ್ತು. ನೋವು ಜಾಸ್ತಿ ಇದೆ ಅಂದ್ರೆ ಅವ್ವ ನೊಂದುಕೊಳ್ತಾಳೆ ಅಂದುಕೊಂಡು "ಅಷ್ಟು ನೋವೇನು ಇಲ್ಲ ಕಣವ್ವ. ಅದೇನೋ ಸುಣ್ಣ ಹಚ್ಕಂಡ್ರೆ ಸರಿ ಹೋಯ್ತದಂತಲ್ಲವ್ವ?" ಅಂದಾಗ "ಹೂಂ.. ಸುಣ್ಣಾನು ಹಚ್ಕೋಬಹುದು ಕಣ್ ಮಗ." ಅಂತ ಅವ್ವ ಸಲಹೆ ನೀಡಿತ್ತು.

ಆಫೀಸಿನ ಕೆಲಸ ಮುಗಿಸಿ ಸಂಜೆ ಗೆಳೆಯರೊಬ್ಬರ ಮನೆಗೆ ಹೋದಾಗ ನನ್ನ ಊದಿಕೊಂಡ ಮುಂಗೈ ನ ಅವಸ್ಥೆ ನೋಡಿ ತಕ್ಷಣ ತಮ್ಮ ಮನೆಯಲ್ಲಿ ಎಲೆ ಅಡಿಕೆ ಜಗಿಯಲು ಇಟ್ಟುಕೊಂಡಿರುವ ಸುಣ್ಣವನ್ನು ನೀರಿನಲ್ಲಿ ಕಲಸಿ ನನ್ನ ಕೈಗೆ ಲೇಪನ ಹಚ್ಚಿದರು. ಆ ಕ್ಷಣಕ್ಕೆ ಒಂಚೂರು ತಂಪು ಅನಿಸಿದರೂ ನೋವು ಹಾಗೆಯೇ ಇತ್ತು. ನೋವು ಮುಂಗೈನ ಮೂಳೆಗಳ ಒಳಗೂ ಇಳಿದಿರುವ ಅನುಭವ ನನಗಾಗುತ್ತಿತ್ತು. ನನಗೆ ಇರುವೆ ಕಚ್ಚಿ ಕೈ ಇಡ್ಲಿಯ ಹಾಗೆ ಊದಿಕೊಂಡಿರುವ ವಿಷಯವನ್ನು ನನ್ನ ಗೆಳತಿಗೆ ತಿಳಿಸಿದಾಗ "ಅಲ್ಲಾ ರೀ, ಇರುವೆ ಕಚ್ತಾ ಇದ್ರೆ ನೋಡಿಕೊಂಡು ಕುಳಿತ್ತಿದ್ರಾ ನಿಮಗೆ ನಿಮಗೆ ಬುದ್ದಿ ಇಲ್ವಾ?" ಅಂತ ಬೈಗುಳಗಳ ಹೂ ಮಳೆಗಳ ಅವಳು ಸುರಿಸುತ್ತಿದ್ದರೆ ನಾನು ಯಾಕೋ ಮುಗುಳ್ನಗುತ್ತಿದ್ದೆ.  ರಾತ್ರಿ ಮಲಗುವಾಗ ಅಂಗೈಯನ್ನು ತಲೆಯ ಕೆಳಗೆ ದಿಂಬಿನ ಹಾಗೆ ಹಾಕಿಕೊಂಡು ಮಲಗಿ ಅಭ್ಯಾಸವಿರುವವನಿಗೆ ಆ ರಾತ್ರಿ ಹಾಗೆ ಅಂಗೈಯನ್ನು ದಿಂಬಿನ ಹಾಗೆ ಹಾಕಿಕೊಂಡು ಮಲಗಲು ಹೋದಾಗ ತುಂಬಾ ನೋವಾಗಿತ್ತು. 

ಒಂದೆರಡು ದಿನದ ನಂತರವೂ ನನ್ನ ಕೈ ಊತ ಇನ್ನೂ ಕಡಿಮೆಯಾಗಿರದ ಕಾರಣ ಆ ಸುದ್ದಿಯನ್ನು ನನ್ನ ನಲ್ಮೆಯ ಗೆಳತಿ ತನ್ನ ತಂಗಿಗೂ ತಿಳಿಸಿದ್ದಳು. ಹೀಗೆ ಒಂದು ಮಧ್ಯಾಹ್ನ ಫೋನಿಗೆ ಸಿಕ್ಕಿದ ನನ್ನ ಗೆಳತಿಯ ತಂಗಿ "ಮಾಮ ಹೇಗಿದ್ದೀರ? ಅದೇನೋ ಇರುವೆ ಕಚ್ಚಿತಂತಲ್ಲಾ ಈಗ ಸರಿ ಹೋಯಿತಾ? ಅಂತೆಲ್ಲಾ ಯೋಗ ಕ್ಷೇಮ ವಿಚಾರಿಸಿ. ಮಾಮ, ನಾನು ಒಂದು ಕತೆ ಹೇಳ್ತೀನಿ ಕೇಳಿ ಅಂತ ಕತೆ ಹೇಳಲು ಶುರು ಮಾಡಿದಳು. ಹುಟ್ಟಾ ತರಲೆಯಂತೆ ಕಾಣುವ ಆ ಪುಟ್ಟ ಹುಡುಗಿ ಅವತ್ತು ಅಷ್ಟು ಚಂದವಾಗಿ ಕತೆ ಹೇಳುತ್ತಿದ್ದರೆ ಯಾಕೋ ನಾನು ಆ ಕತೆ ಕೇಳಿ ನಕ್ಕು ನಕ್ಕು ಸುಸ್ತಾಗಿದ್ದೆ. ಆ ಪುಟ್ಟ ಹುಡುಗಿ ಹೇಳಿದ ಕತೆ ನಿಮಗಾಗಿ ನೀಡ್ತಾ ಇದ್ದೇನೆ. ಒಂಚೂರು ಓದಿಕೊಂಡು ಬಿಡಿ. 

"ಮಾಮ, ಒಂದೂರಲ್ಲಿ ಒಂದು ಹುಡುಗಿ ಇರ್ತಾಳೆ. ಅವಳು ಕಾಲೇಜ್ ನಲ್ಲಿ ಓದ್ತಾ ಇರ್ತಾಳೆ. ಆ ಕಾಲೇಜ್ ನಲ್ಲಿ ಒಬ್ಬ ಹುಡುಗ ಇರ್ತಾನೆ ಅವನು ಹೆಸರು ಬಟಾಣಿ ಕಾಳು. ಆ ಬಟಾಣಿ ಕಾಳು ಆ ಹುಡುಗೀನ ಪಟಾಯಿಸಬೇಕು ಅಂತ ಏನೇನೋ ಡ್ರಾಮಾ ಮಾಡಿ ಕೊನೆಗೂ ಒಂದಿನ ಆ ಹುಡುಗಿಯ ಬಾಯ್ ಫ್ರೆಂಡ್ ಆಗ್ತಾನೆ. ಆ ಹುಡುಗಿ ಸಹ ಹೋಗ್ಲಿ ಪಾಪ ಅಂತ ಬಟಾಣಿ ಕಾಳನ್ನು ಒಂಚೂರು ಲವ್ ಮಾಡ್ತಾ ಇರ್ತಾಳೆ. ಆದರೆ ಅವಳ ಮನಸ್ಸನಲ್ಲಿ ಅವಳ ಕನಸಿನ ರಾಜಕುಮಾರನೇ ಮನೆ ಮಾಡಿರ್ತಾನೆ. ಆ ಕನಸಿನ ರಾಜಕುಮಾರನ ತರಾನೇ ಇರೋ ಒಬ್ಬ ಹುಡುಗ ಕೈಯಲ್ಲಿ ಗಿಟಾರ್ ಹಿಡಿದು ಅವಳ ಕಾಲೇಜಿನ ಕ್ಯಾಂಪಸ್ಸಿನಲ್ಲಿ ಒಂದಿನ ಕಾಣಿಸಿಕೊಳ್ತಾನೆ. ಆ ಹುಡುಗ ಒಂದು ಫಂಕ್ಷನ್ ದಿನ ಗಿಟಾರ್ ಹಿಡಿದು ಹಾಡು ಹಾಡಲು ಶುರು ಮಾಡಿದಾಗ ಇಡೀ ಕಾಲೇಜಿಗೆ ಕಾಲೇಜೇ ಅವನ ಹಾಡಿಗೆ ಮರುಳಾಗುತ್ತೆ. ಅವನ ಹಾಡಿಗೆ, ಸ್ಟೈಲಿಗೆ, ಸ್ಮೈಲಿಗೆ ಬಿದ್ದೋದ ಇವಳು ಹಿಂದೆ ಮುಂದೆ ನೋಡದೆ ಸಮಯ ನೋಡಿ ಒಂದಿನ ಆ ಹುಡುಗನಿಗೆ ಪ್ರಫೋಸ್ ಮಾಡಿಬಿಡ್ತಾಳೆ. ಆ ರಾಜಕುಮಾರನ ತರಹ ಕಾಣೋ ಹುಡುಗ ಇವಳ ಪ್ರಫೋಷಲ್ ಗೆ ಮರುಳಾಗಿ ಇವಳನ್ನು ಲವ್ ಮಾಡಲು ಶುರು ಮಾಡ್ತಾನೆ. ಅಂದ ಹಾಗೆ ಆ ಹುಡುಗನ ಹೆಸರು ಬೇಳೆ ಕಾಳು. ಈ ಹುಡುಗೀನ ಬಟಾಣಿ ಕಾಳು, ಅದೇ ಫರ್ಸ್ಟ್ ಲವರ್ ಅವನು ಡೀಪ್ ಆಗಿ ಲವ್ ಮಾಡ್ತಾ ಇರ್ತಾನೆ. ಈ ಹುಡುಗಿ ನೋಡಿದ್ರೆ ಬೇಳೆ ಕಾಳನ್ನ ಸಿಕ್ಕಾಪಟ್ಟೆ ಲವ್ ಮಾಡ್ತಾ ಇರ್ತಾಳೆ. ಇವಳಿಗೆ ಬಟಾಣಿ ಕಾಳಿನ ಜೊತೆ ಬದುಕೋಕೆ ಇಷ್ಟ ಇಲ್ಲ. ಹಾಗೆಯೇ ಅವನಿಗೆ ಬೇಜಾರು ಮಾಡೋ ಮನಸು ಇಲ್ಲ. ತಾನು ಬೇಳೆ ಕಾಳನ್ನು ಲವ್ ಮಾಡ್ತಾ ಇದ್ದೀನಿ ಅವನ ಜೊತೇನೆ ಮದುವೆಯಾಗ್ತೀನಿ ಅಂತ ಬಟಾಣಿ ಕಾಳಿಗೆ ಹೇಗೆ ತಿಳಿಸೋದು ಅಂತ ಆ ಹುಡುಗಿ ಚಿಂತೆಗೆ ಬೀಳ್ತಾಳೆ. ಆ ಟೈಮ್ ಗೆ ಒಂದು ಒಳ್ಳೆ ಐಡಿಯಾ ಹೊಳೆಯುತ್ತೆ. ಅದೇನಪ್ಪ ಅಂದ್ರೆ ಆ ಹುಡುಗಿಗೆ ಒಬ್ಬ ಕ್ಲೋಸ್ ಫ್ರೆಂಡ್ ಇರ್ತಾನೆ. ಅವನ ಹೆಸರು ಕಡ್ಲೇಕಾಳು. ಇಂತಹ ಕಷ್ಟದ ಕಾಲದಲ್ಲಿ ತನಗೆ ಹೆಲ್ಪ್ ಮಾಡೋಕೆ ಅವನೇ ಸರಿಯಾದ ವ್ಯಕ್ತಿ ಅಂತ ಅಂದುಕೊಂಡು ಈ ಹುಡುಗಿ ಕಡ್ಲೇ ಕಾಳಿಗೆ ಕಾಲ್ ಮಾಡಿ ತನ್ನ ಪ್ರಾಬ್ಲಂನ ಹೇಳಿಕೊಳ್ತಾಳೆ. ಜೊತೆಗೆ ಸಂಜೆ ಒಂದು ಜಾಗದಲ್ಲಿ ಮೀಟ್ ಮಾಡಿ ಇಬ್ಬರೂ ಸೇರಿ ಒಂದು ಪ್ಲಾನ್ ಮಾಡ್ತಾರೆ. 

ಪ್ಲಾನ್ ಪ್ರಕಾರ ಬಟಾಣಿ ಕಾಳಿನ ಹತ್ತಿರ ಕಡ್ಲೇ ಕಾಳನ್ನು ಹುಡುಗಿ ಕರೆದುಕೊಂಡು ಹೋಗಿ "ನೋಡಿ ಡಿಯರ್ ಬಟಾಣಿ ಕಾಳು, ಕಡ್ಲೇ ಕಾಳು ನನ್ನ ಪ್ರಾಣ ಸ್ನೇಹಿತ. ನಾವಿಬ್ಬರು ಒಟ್ಟಿಗೆ ಓದಿದ್ವಿ. ಒಟ್ಟಿಗೆ ಬೆಳೆದ್ವಿ. ಈಗ ನಮ್ಮ ಮನೇಲಿ ನಮ್ಮ ಅಪ್ಪ ಅಮ್ಮ ನಾವಿಬ್ಬರು ಮದುವೆಯಾಗಿ ಸೆಟಲ್ ಆದರೆ ತುಂಬಾ ಖುಷಿಪಡ್ತಾರೆ. ಅದಕ್ಕೆ ನಾವಿಬ್ಬರು ಮದುವೆಯಾಗೋಣ ಅಂತ ಡಿಸೈಡ್ ಮಾಡಿಕೊಂಡಿದ್ದೀವಿ. ಇಷ್ಟು ದಿನ ನಾನು ನಿಮ್ಮ ಜೊತೆ ಓಡಾಡಿದ್ದು, ಮಾತಾಡಿದ್ದು, ಮೆಸೇಜ್ ಮಾಡಿದ್ದು, ಫಿಲಂ ನೋಡಿದ್ದು, ಐಸ್ ಕ್ರೀಂ ತಿಂದದ್ದು, ಎಲ್ಲಾ ನೀವು ದಯವಿಟ್ಟು ಕನಸು ಅಂದುಕೋಬಿಡಿ. ಸಾರಿ." ಅಂತ ಎಷ್ಟು ಸಾಧ್ಯನೋ ಅಷ್ಟು ಡ್ರಾಮಾ ಮಾಡಿ ಕೇಳಿಕೊಳ್ತಾಳೆ. ಪಾಪ ಬಟಾಣಿ ಕಾಳು ಅವಳು ಹೇಳಿದ್ದೆಲ್ಲಾ ನಿಜ ಅಂತ ನಂಬಿ, ಒಳಗೊಳಗೆ ಎಷ್ಟೊಂದು ನೋವಾದ್ರು ತಡಕೊಂಡು, ನೀವಿಬ್ಬರು ಚೆನ್ನಾಗಿ ಬಾಳಿ ಅಂತ ಹರಸಿ ಕಳಿಸಿಕೊಡ್ತಾನೆ. ಆಮೇಲೆ ಆ ಹುಡುಗಿ ತನ್ನ ಬಾಯ್ ಫ್ರೆಂಡ್ ಬೇಳೆ ಕಾಳಿನ ಜೊತೆ ಒಂದು ಶುಭ ದಿನ ಮದುವೆಯಾಗ್ತಾಳೆ. ಅಷ್ಟೊತ್ತಿಗೆ ಅವಳ ಕ್ಲೋಸ್ ಫ್ರೆಂಡ್ ಕಡ್ಲೇಕಾಳಿಗೆ ಒಂದೊಳ್ಳೆ ಕಂಪನೀಲಿ ಕೆಲಸ ಸಿಗುತ್ತೆ. "ಲೋ ಕಡ್ಲೇ ಕಾಳು ನಿಂಗೆ ಒಂದು ಲಕ್ಷ ಸಂಬಳ ಬರುತ್ತಲ್ಲಾ ಮಾರಾಯ. after all ನಾನು ನಿನ್ನ ಕ್ಲೋಸ್ ಫ್ರೆಂಡ್ ಅಲ್ವೇನೋ. ನಿನ್ನ ಸಂಬಳದಲ್ಲಿ ಅರ್ಧ ಸಂಬಳಾನ ನನ್ನ ಅಕೌಂಟ್ ಗೆ ಹಾಕಿಬಿಡಪ್ಪಾ. ನಾನು ಮತ್ತು ನನ್ನ ಹಬ್ಬಿ ಆರಾಮಾಗಿ ಲವ್ ಮಾಡಿಕೊಂಡು ಇದ್ದು ಬಿಡ್ತೀವಿ." ಅಂತಾಳೆ. ಜೀವದ ಗೆಳತಿ ಆಣತಿಯಂತೆ ಕಡ್ಲೇ ಕಾಳು ತನ್ನ ಸಂಬಳವನ್ನು ಪ್ರತಿ ತಿಂಗಳು ತನ್ನ ಗೆಳತಿಯ ಅಕೌಂಟ್ ಗೆ ಹಾಕ್ತಾ ಇರ್ತಾನೆ. ಆ ಹುಡುಗಿ ಮತ್ತು ಅವಳ ಹಬ್ಬಿ ಬೇಳೆ ಕಾಳು, ರಾಜ ರಾಣಿಯರ ಹಾಗೆ ಖುಷಿಯಿಂದ ನೂರ್ಕಾಲ ಬಾಳ್ತಾರೆ. ಅವರು ಬಾಳೋದನ್ನು ನೋಡಿ ಕಡ್ಲೇ ಕಾಳು ಆನಂದಭಾಷ್ಪ ಸುರಿಸುತ್ತಾ ಅವನು ಸಹ ಒಂದು ಹುಡುಗಿಯನ್ನು ಮದುವೆಯಾಗಿ ಸುಖವಾಗಿ ಬಾಳ್ತಾನೆ. ಇದಲ್ವಾ ಮಾಮ ಟ್ರೂ ಲವ್ವು, ಟ್ರೂ ಫ್ರೆಂಡ್ ಶಿಪ್?" 

ಅಂತ ಅವಳು ಕತೆ ಹೇಳಿ ಮುಗಿಸಿದಾಗ ನನ್ನ ಲೈಫ್ ನಲ್ಲೇ  ಒಂದು ಕತೆಯ ಪಾತ್ರಗಳ ಹೆಸರನ್ನು ಮೊದಲ ಬಾರಿಗೆ ಬಟಾಣಿ ಕಾಳು, ಬೇಳೆ ಕಾಳು, ಕಡ್ಲೇ ಕಾಳು ಅಂತ ಕೇಳಿ ಸಿಕ್ಕಾಪಟ್ಟೆ ನಕ್ಕಿದ್ದೆ. ನಗುತ್ತಲೇ "ಅಲ್ಲಾ ಕಣೆ ತರ್ಲೆ. ಕತೆಯೇನೋ ಸೂಪರ್ ಆಗಿದೆ.  ಎಲ್ಲಾ ಸರಿ ಪಾಪ ಆ ಬಟಾಣಿ ಕಾಳು ಕತೆ ಕೊನೆಗೆ ಏನಾಯ್ತು?" ಅಂತ ಕೇಳಿದೆ. ಅದಕ್ಕೆ ಅವಳು "ಅವನ ಲೈಫು ಪಾಪ ಊದಿಕೊಂಡುಬಿಡ್ತು ಮಾಮ" ಅಂದ್ಲು. ಲೈಫು ಊದಿಕೊಂಡುಬಿಡ್ತು ಅಂದರೆ! ಅಂತ ನಾನು ಆಶ್ಚರ್ಯಚಕಿತನಾಗಿ ಅವಳನ್ನು ಪ್ರಶ್ನಿಸಿದ್ದೆ. "ಅಲ್ಲಾ ಮಾಮ ನಿಮಗೆ ಈಗ ಇರುವೆ ಕಚ್ಚಿ ಬರೀ ಕೈಯಷ್ಟೇ ಊದಿಕೊಂಡು ನಿಮಗೆ ಸಿಕ್ಕಾಪಟ್ಟೆ ನೋವಾಗ್ತಾ ಇದೆ ಅಲ್ವಾ?" ಅಂದ್ಲು. ನಾನು "ಹೂಂ.." ಅಂದೆ. "ಈಗ ನೋಡಿ ಒಂದು ಸ್ಲೋಗನ್ ಬರಕೊಳ್ಳಿ. ಇರುವೆ ಕಚ್ಚಿದ್ರೆ ಕಚ್ಚಿದ ಜಾಗ ಮಾತ್ರ ಊದಿಕೊಳ್ಳುತ್ತೆ. ಆದರೆ ಹುಡುಗಿ ಕಚ್ಚಿದ್ರೆ ಲೈಫೇ ಊದಿಕೊಳ್ಳುತ್ತೆ." ಅಂದ್ಲು. ನಂಗೆ ನಗು ತಡೆಯೋಕೆ ಆಗಲಿಲ್ಲ. ಎಲ್ಲಿ ಇನ್ನೊಂದು ಸಾರಿ ಹೇಳು ಅಂದೆ. "ಮಾಮ, ಮೋಸ್ಟ್ ಲೀ ಯೋಗರಾಜ್ ಭಟ್ಟರಾದ ಮೇಲೆ ಇಂತದೊಂದು ಸೂಪರ್ ಸ್ಟೋರಿ ಹೇಳಿ ಅದಕ್ಕೆ ಈ ತರಹದೊಂದು ಸೂಪರ್ ಲೈನ್ ಬರೆದಿದ್ರೆ ಅದೂ ಬಹುಶಃ ನಾನೇ ಅನಿಸುತ್ತೆ. ಇನ್ನೊಂದ್ ಸಾರಿ ಸರಿಯಾಗಿ ಕೇಳಿಸಿಕೊಳ್ಳಿ "ಇರುವೆ ಕಚ್ಚಿದ್ರೆ ಕಚ್ಚಿದ ಜಾಗ ಮಾತ್ರ ಊದಿಕೊಳ್ಳುತ್ತೆ. ಹುಡುಗಿ ಕಚ್ಚಿದ್ರೆ ಲೈಫೇ ಊದಿಕೊಳ್ಳುತ್ತೆ." ಅಂತ ಹೇಳಿ ಸಿಕ್ಕಾಪಟ್ಟೆ ನಗ್ತಾ ಇದ್ಲು. ಅವಳ ಕ್ರಿಯೇಟಿವಿಟಿ ನೆನೆದು ನಂಗೂ ಸಿಕ್ಕಾಪಟ್ಟೆ ನಗು ಬಂದಿತ್ತು. :))

******

ಕನ್ನಡದ ಬರಹಗಳನ್ನು ಹಂಚಿ ಹರಡಿ

17 thoughts on “ಹುಡುಗಿ ಕಚ್ಚಿದ್ರೆ ಲೈಫೇ ಊದಿಕೊಳ್ಳುತ್ತೆ: ನಟರಾಜು ಎಸ್. ಎಂ.

  1. ನಕ್ಕು ನಕ್ಕು ಸಾಕಾಯಿತು ಸರ್:-)

Leave a Reply

Your email address will not be published. Required fields are marked *