ನೈಲ್ ಕಟ್ಟರ್ ಎಲ್ಲಿದೇ ..ಎಂದು ಮೂರನೇ ಸಾರಿ ನಮ್ಮ ಮನೆಯ ಲಾಯರ್ ಸಾಹೇಬ್ರ ಕಂಠ ಮೊಳಗಿತು. ಈ ಸಲವೂ ಹುಡುಕಿ ಕೊಡದಿದ್ರೆ ಹೊಂಬಣ್ಣದ ಮೈಯ ನವಿಲು ಬಣ್ಣದ ಬಾರ್ಡರಿನ ಸೀರೆಯ ಅಹವಾಲು ಡಿಸ್ ಮಿಸ್ ಆಗುವ ಭಯದಲ್ಲಿ ನಿಲ್ಲೀ ಹುಡುಕಿ ಕೊಡ್ತೀನಿ ಅಂದೆ.. ಸತ್ಯ ಹರಿಶ್ಚಂದ್ರನ ಆಣೆಯಾಗಿಯೂ ಅದು ಎಲ್ಲಿದೆ ಅಂತ ನನಗೆ ತಿಳಿದಿರಲಿಲ್ಲ. ನಮ್ಮ ಮನೆಯಲ್ಲಿರುವ ಸ್ಥಿರ ವಸ್ತುಗಳಿಗೂ ಕೈ ಕಾಲು ಬಂದು ಅವು ಚರ ವಸ್ತುಗಳಾಗಿ ಸಿಕ್ಕ ಸಿಕ್ಕ ಕಡೆ ಹೋಗಿ ಸಿಗಬೇಕಾದಾಗ ಸಿಗದೇ ಇರುವುದು ಇದಕ್ಕೆ ಕಾರಣ. ಮೊನ್ನೆಯಷ್ಟೇ ಈ ವರ್ಷದ ಹನ್ನೊಂದನೇ ನೈಲ್ ಕಟ್ಟರ್ ಮನೆಗೆ ಬಂದಿತ್ತು. ಅದು ಬಂದ ದಿನವೇ ಕಾಣೆಯಾಗಿದ್ದ ನೀಲಿ ಬಣ್ಣದ ಪೆನ್ನನ್ನು ಹುಡುಕುವಾಗ ಮನೆಗೆ ಬಂದ ಈ ವರ್ಷದ ಮೂರನೇ ನೈಲ್ ಕಟ್ಟರ್ ಮತ್ತು ಈ ವರ್ಷದ ಆರನೆಯ ಕನ್ನಡಕದ ಜೊತೆ ಚಪ್ಪಲಿ ಸ್ಟ್ಯಾಂಡಿನಲ್ಲಿ ಸಿಕ್ಕಿತ್ತು. ಆಗಲೇ ನನ್ನ ಈ ವರ್ಷದ ಏಳನೆ ಜೊತೆ ಚಪ್ಪಲ್ ಕಾಣೆಯಾಗಿದೆ ಅಂತ ಅರಿವಿಗೆ ಬಂತು.. ಮೂರನೇ ನೈಲ್ ಕಟ್ಟರನ್ನು ಎದುರಲ್ಲಿಟ್ಟು ತಂದ ಹೊಸ ನೈಲ್ ಕಟ್ಟರನ್ನು ಜಾಗ್ರತೆಯಾಗಿ ತೆಗೆದಿರಿಸಿದ್ದೆ. ಎಲ್ಲಿ ಅಂತ ಮಾತ್ರ ಈಗ ಮರೆತು ಹೋಗಿತ್ತು.
ಈಗಲೂ ನಾನು ನನ್ನ ಅನುಭವದ ನೆಲೆಯಲ್ಲಿ, ನೈಲ್ ಕಟ್ಟರ್ ಇಡಲೆಂದೇ ಇರುವ ಗೋಡೆಯಲ್ಲಿ ನೇತು ಹಾಕಿದ್ದ ಸ್ಟ್ಯಾಂಡಿನ ಕಡೆಗೆ ಕಣ್ಣೂ ತಿರುಗಿಸದೇ ಸೀದಾ ಅಂಗಳಕ್ಕಿಳಿದೆ. ಸ್ವಲ್ಪ ಹುಡುಕಾಡಿದಾಗ ತುಳಸಿ ಕಟ್ಟೆಯ ಮೇಲೆ ಪವಡಿಸಿದ್ದ ಆಗಲೇ ಸ್ವಲ್ಪ ತುಕ್ಕು ಹಿಡಿದಿದ್ದ ಒಂದು ನೈಲ್ ಕಟ್ಟರ್ ಕಾಣಿಸಿತು. ನನ್ನ ಕೈಯಲ್ಲಿ ಅದನ್ನು ಕಾಣುತ್ತಲೇ ನಮ್ಮತ್ತೆ.. ಹೋ ಇದು ಸಿಕ್ತಾ.. ಮೊನ್ನೆ ನಾನು ಮನೆಯೊಳಗಡೆ ಉಗುರು ತೆಗೀಬಾರದು ಅಂತ ಹೊರಗೆ ಅಂಗಳಕ್ಕೆ ತೆಗೊಂಡು ಹೋಗಿದ್ದೆ. ನೋಡು ನಂಗೆ ಎಷ್ಟು ಚೆನ್ನಾಗಿ ನೆನಪಿದೆ.. ಎಂದು ಈ ಪ್ರಾಯದಲ್ಲೂ ಚೆನ್ನಾಗಿ ಕೆಲಸ ಮಾಡುವ ತಮ್ಮ ಮೆದುಳಿನ ಬಗ್ಗೆ ಹೆಮ್ಮೆ ಪಡತೊಡಗಿದರು.
ಅವರನ್ನು ಅವರ ಪಾಡಿಗೆ ಬಿಟ್ಟು ನಾನು ನನ್ನ ಸೀರೆಯ ಕನಸು ಕಾಣುತ್ತಾ ನೈಲ್ ಕಟ್ಟರನ್ನು ಇವರ ಕೈಗಿತ್ತೆ. ಇವರು ಬೆಳೆದು ಉದ್ದವಾಗಿ ಗಿನ್ನಿಸ್ ದಾಖಲೆಯಾಗಬಹುದಾಗಿದ್ದ ತಮ್ಮ ಉಗುರನ್ನು ಕತ್ತರಿಸುವ ಪ್ರಯತ್ನದಲ್ಲಿರುವಾಗಲೇ ಒಳಗಿನಿಂದ ಮಾವನ ಸ್ವರ ಕೇಳಿಸಿತು. ಆ ಕಪ್ಪು ಹಿಡಿಯ ಚೂರಿ ಎಲ್ಲಿದೇಮ್ಮಾ.. ಕಾಣ್ತಾ ಇಲ್ಲ.. ಒಂದು ತಿಂಗಳಿಂದ ಹುಡುಕ್ತಾ ಇದ್ದೀನಿ.. ಸ್ವಲ್ಪ ನೋಡಮ್ಮಾ.. ನಿನ್ನ ಕಣ್ಣಾದ್ರೆ ಸೂಕ್ಷ್ಮ ಇರುತ್ತೆ ಎಂದು ಸರೀ ಅಳೆದರೆ ನಾಲ್ಕಡಿಯಷ್ಟೇ ಇದ್ದ ನನ್ನನ್ನು ಎತ್ತರಕ್ಕೇರಿಸಿದರು. ಮತ್ತೆ ನನ್ನ ಹುಡುಕಾಟದ ಕೆಲಸ ಮುಂದುವರಿಯಿತು. ಈ ಹುಡುಕಾಟದಲ್ಲಿ ನಿನ್ನೆಯಷ್ಟೇ ಕಳೆದು ಹೋಗಿದ್ದ ಮಗನ ಬೈಕಿನ ಕೀ ಫ಼್ರಿಡ್ಜಿನೊಳಗೆ ಇಟ್ಟಿದ್ದ ದ್ರಾಕ್ಷೆ ಗೋಡಂಬಿ ಡಬ್ಬದ ಹತ್ತಿರ ಸಿಕ್ಕಿತು. ನನ್ನ ಹಳೇ ನೈಲ್ ಪಾಲಿಶ್ ರಿಮೂವರ್ ನ ಬಾಟಲ್ ಮೆಡಿಕಲ್ ಕಿಟ್ ನ ಕಪ್ ಸಿರಪ್ ಬಾಟಲ್ಲಿನ ಜೊತೆ ಕಂಡಿತು. ಹಿಂದಿನಿಂದಲೇ ಬಂದ ಮಾವನವರು ಇವತ್ತು ನಿನ್ನ ಅದೃಷ್ಟ ಚೆನ್ನಾಗಿದೇಮ್ಮಾ.. ನೀನು ಹುಡುಕಿದ್ದೆಲ್ಲಾ ಸಿಗುತ್ತೆ.. ಹುಡುಕು ಹುಡುಕು ಎಂದು ಹುರಿದುಂಬಿಸಿದರು. ನಾನು ಹೌದೇನೋ ಎಂದುಕೊಂಡು ನನ್ನ ಕೆಲಸ ಮುಂದುವರಿಸಿದೆ. ಕಪ್ಪು ಬಣ್ಣದ ಒಂದು ಸಾಕ್ಸ್, ಥರ್ಮೋಮೀಟರ್, ಎರಡು ಸ್ಟೀಲ್ ಸ್ಪೂನ್, ಒಂದು ಹಳೇ ಟೆಸ್ಟರ್, ಎಲ್ಲಾ ಒಂದೊಂದಾಗಿ ಸಮುದ್ರ ಮಥನದಲ್ಲಿ ವಸ್ತುಗಳು ಕಾಣಿಸಿಕೊಂಡಂತೆ ಕಂಡರೂ ಕಪ್ಪು ಹಿಡಿಯ ಚೂರಿ ಸಿಗಲೇ ಇಲ್ಲ. ಗಂಟೆ ನೋಡಿದರೆ ಹನ್ನೊಂದಾಗಿತ್ತು. ಇನ್ನು ಅಡುಗೆ ತಯಾರಿ ಆಗಬೇಕಲ್ಲಾ ಅಂದುಕೊಂಡು ಮನೆಯ ಹಿಂದಿನ ಬಸಳೆ ಚಪ್ಪರದಿಂದ ಬಸಳೆ ತರಲು ಹೋದೆ. ಬೇಕಾದಷ್ಟು ಕೊಯ್ದಾದ ಮೇಲೆ ಕಣ್ಯಾಕೋ ಚಪ್ಪರದ ಮೂಲೆಯ ಕಡೆ ತಿರುಗಿತು. ಅಲ್ಲೇ ಇತ್ತು ನೋಡಿ ಮಾವನ ಕಪ್ಪು ಹಿಡಿಯ ಚೂರಿ.. ಮಾವಾ ನಿಮ್ಮ ಚೂರಿ ಸಿಕ್ತು ಅಂತ ಹಿಡಿದು ಎಳೆದೆ. ಕಪ್ಪು ಹಿಡಿ ಕೈಗೆ ಬಂತು. ಚೂರಿಯ ಭಾಗವೆಲ್ಲಾ ತುಕ್ಕು ಹಿಡಿದು ಮಾಯವಾಗಿತ್ತು. ಮಾವ ಅದನ್ನು ನೋಡಿ ಶೋಕಾತಪ್ತರಾಗಿ ಕಣ್ಣೊರೆಸಿಕೊಳ್ಳಲು ಕರವಸ್ತ್ರ ಹುಡುಕಿದಾಗ ಅದು ಸಿಗದೇ ಅಮ್ಮಾ ನನ್ನ ಕರವಸ್ತ್ರ .. ಎಂದು ಮುಂದಿನ ಹುಡುಕಾಟವನ್ನು ಮುಂದುವರಿಸಲು ಕೊಂಡಿ ನೀಡಿದರು.
ಆವಾಗಲೇ ಹೊರಗಿನಿಂದ ’ಅಕ್ಕೇರೇ’ ಎಂಬ ಧ್ವನಿ ಕೇಳಿಸಿತು. ಈ ಅಶರೀರ ವಾಣಿಯ ಪರಿಚಯ ಮೊದಲೇ ನಿಮ್ಗೆ ಮಾಡಿಬಿಡ್ತೇನೆ. ಇವನು ನಮ್ಮ ಮನೆಯ ಆಲ್ ಇನ್ ಒನ್ ಕೆಲಸಗಾರ. ಹೆಸರು ಕೂಸ. ಇನ್ನೆರಡು ತಿಂಗಳಲ್ಲಿ ಇವನು ಮದುವೆಯಾಗಿ ಚತುರ್ಭುಜನಾಗುವಾತ. ಈಗ ಇಡೀ ದಿನ ನಿಂತಲ್ಲಿ ಕೂತಲ್ಲಿ ಕೆಲ್ಸ ಮಾಡುವುದು ಬಿಟ್ಟು ಕನಸು ಕಾಣುತ್ತಾ ಇರುವಾತ. ಸಧ್ಯಕ್ಕೆ ಇಷ್ಟು ಸಾಕು.. ಇಲ್ಲದಿದ್ದರೆ ಇವನ ಬಗ್ಗೆಯೇ ಕಾದಂಬರಿ ಬರೆಯಬೇಕಾದೀತು. ಮತ್ತೊಮ್ಮೆ ಅಕ್ಕೇರೇ ಎಂದು ಜೋರಾಗಿ ಕೇಳಿಸಿತು.
ಹೊರಗಿಣುಕಿದರೆ, ಕೂಸ ನಾನು ಹೇಳಿದ ಕೆಲಸ ಮಾಡುವುದು ಬಿಟ್ಟು ಅಂಗಳದಲ್ಲೇ ಅತ್ತಿತ್ತ ಹುಡುಕುತ್ತಿದ್ದ. ಎಂತದು ಮಾರಾಯ ಗಂಟೆ ಹತ್ತಾದರು ಕೆಲಸವೇ ಶುರು ಆಗಿಲ್ಲ ನಿನ್ನದು..ಮಾಡುವುದೆಂತದು ನೀನು.. ಎಂದೆ ಸಿಟ್ಟಿನಲ್ಲಿ. ’ ಎಂತದು ಅಕ್ಕಾ ನೀವು ಹೇಳುವುದು.. ನಾನು ಆಗಲೇ ಎರಡು ಸರ್ತಿ ಇಡೀ ತೋಟ ಸುತ್ತಿ ಬಂದೆ. ಈಗ ಚಾ ಕೊಡಿ ಮೊದಲು.. ಪುನಃ ತೋಟಕ್ಕೆ ಹೋಗ್ಲಿಕ್ಕಿದೆ ಎಂದ. ಅರ್ರೇ.. ಅವನಿಗೆ ನಾನು ಅಂಗಳದ ಮೂಲೆಯಲ್ಲಿರುವ ಹೂವಿನ ಗಿಡದ ಸಾಲು ಸ್ವಚ್ಛ ಮಾಡಲು ಹೇಳಿದ್ದೆ. ಹೂವಿನ ಕುಂಡಗಳಲ್ಲಿ ಹೂವಿನ ಗಿಡಕಿಂತ ಹೆಚ್ಚಾಗಿ ಹುಲ್ಲಿನ ಗಿಡಗಳೇ ಕಾಣಿಸುತ್ತಿದ್ದವು. ಅದನ್ನು ಮಾಡುವುದು ಬಿಟ್ಟು ತೋಟಕ್ಯಾಕೆ ಹೋದ ಇವನು .. ಎಂದು ಪ್ರಶ್ನಾರ್ಥಕವಾಗಿ ಅವನ ಮುಖ ನೋಡಿದೆ.
ಅವನು ಸ್ವಲ್ಪ ಸಣ್ಣ ಸ್ವರದಲ್ಲಿ ಅದೂ ಮೊನ್ನೆ ಕೊಂಡೋದ ಕತ್ತಿ ಕಾಣುವುದಿಲ್ಲ ಅಕ್ಕೇರೇ.. ತೋಟದಲ್ಲಿಯೇ ಉಳೀತೋ ಏನೋ ಅಂತ ಹುಡುಕುತ್ತಾ ಇದ್ದೇನೆ. ಅದು ಸಿಕ್ಕಿದ ಕೂಡಲೇ ಕೆಲಸ ಶುರು.. ಎಂತದು ನೀವು.. ನನಗೆಂತ ಅಷ್ಟೂ ಗೊತ್ತಿಲ್ವಾ.. ನೀವು ಕೊಡುವ ಸಂಬಳಕ್ಕೆ ಮೋಸ ಮಾಡ್ತೇನಾ ನಾನು ಎಂದು ಕೇಳಿದ.
ಸರಿ ಎಂತಾದ್ರು ಮಾಡು ಎಂದು ಅವನಿಗೆ ಚಾ ಕೊಟ್ಟು ಕಳಿಸಿದೆ. ಸ್ವಲ್ಪ ಹೊತ್ತಿನಲ್ಲಿ ಎವರೆಸ್ಟ್ ಏರಿದವನಂತೆ ಗೆಲುವಿನ ಮುಖ ಹೊತ್ತು ಮರಳಿದ. ನಾನು ಇನ್ನಾದರೂ ಕೆಲಸ ಶುರು ಆಗುವ ಸಂಭ್ರಮದಲ್ಲಿ ಮುಖವರಳಿಸಿ, ಕತ್ತಿ ಸಿಕ್ಕಿತಾ ಎಂದೆ.
ಇಲ್ಲಾ ಅಕ್ಕೇರೆ ಕತ್ತಿ ಸಿಕ್ಲಿಲ್ಲ.ಆದ್ರೆ ಕಳೆದ ವಾರ ಕಳೆದು ಹೋದ ಗುದ್ದಲಿ ಸಿಕ್ಕಿತು. ನೋಡಿ.. ನನ್ನಜ್ಜಿ ಪುಣ್ಯ ಅಕ್ಕೇರೆ ಇದು ಸಿಕ್ಕಿದ್ದು…. ನೆಲದ ಮೇಲೆ ಇಟ್ಟರೆ ಹಾಳಾಗುತ್ತದೆ ಎಂದು ನಾನೇ ತೊಳೆದು ಕೊಕ್ಕೋ ಮರಕ್ಕೆ ನೇತಾಡಿಸಿದ್ದೆ. ಮೊನ್ನೆಯಿಂದ ಹಗಲು ರಾತ್ರಿ ಇದೇ ಚಿಂತೆ ನನಗೆ.. ನಿದ್ರೆ ಕೂಡಾ ಬೀಳ್ತಿರಲಿಲ್ಲ.. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ತೇನೆ.. ನನ್ನ ಅದೃಷ್ಟ ಚೆನ್ನಾಗಿತ್ತು. ಇಲ್ಲದಿದ್ರೆ ನಾನು ಸುಮ್ಮನೆ ಅಪವಾದಕ್ಕೆ ಒಳಗಾಗಬೇಕಿತ್ತು ಎಂದೆಲ್ಲಾ ಫಿಲಾಸಫಿ ಮಾತಾಡಿದ.
ಅರೇ .. ನಮ್ಮ ವಸ್ತುಗಳ ಬಗ್ಗೆ ಒಳ್ಳೇ ಕಾಳಜಿ ಇದೆ ಇವನಿಗೆ.. ಗುದ್ದಲಿ ಕಾಣೆಯಾಗಿದ್ದಕ್ಕೆ ಎಷ್ಟೆಲ್ಲ ಚಿಂತೆ ಮಾಡ್ತಾನೆ ಇವನು ಅಂತ ಖುಷಿ ಆಯ್ತು. ಅವನು ಗುದ್ದಲಿಯ ಹಿಡಿಯನ್ನೇ ತಿರುಗಿಸಿ ಮುರುಗಿಸಿ ಏನನ್ನೋ ಹುಡುಕುತ್ತಿದ್ದ. ನಾನು ಅವನನ್ನು ಗಮನಿಸಿದ್ದನ್ನು ಕಂಡು ನಾಚುತ್ತಾ.. ನಂಗೆ ಮೊನ್ನೆ ಮದುವೆ ನಿಕ್ಕಿ ಆಗಿದೆ ಅಂತ ಹೇಳಿದ್ದೆ ಅಲ್ವಾ ಅಕ್ಕೇರೆ.. ಅವಳು ಮೊನ್ನೆ ನಾನು ತೋಟದಲ್ಲಿರುವಾಗ ಮೊಬೈಲಿಗೆ ಫೋನ್ ಮಾಡಿದ್ದಳು. ಅವಳ ಹೊಸ ನಂಬರನ್ನು ಬಾಯಲ್ಲಿ ಹೇಳಿದ್ದಳು. ಅಲ್ಲೆಂತದರಲ್ಲಿ ಬರ್ಕೊಳ್ಳೋದು ನಾನು ಅಲ್ವಾ.. ಅದಕ್ಕೆ ಅದನು ಕತ್ತಿಯ ತುದಿಯಿಂದ ಗುದ್ದಲಿಯ ಮರದ ಹಿಡಿಯಲ್ಲಿ ಬರೆದಿದ್ದೆ. ನಂಗೆ ಈ ಮೊಬೈಲಿಗೆ ನಂಬರ್ ಬರೆಯೋದು ಗೊತ್ತಿಲ್ಲ. ಮನೆಗೆ ಬಂದು ನಿಮ್ಮ ಹತ್ರ ಹೇಳಿ ಹಾಕಿಕೊಳ್ಳಬೇಕು ಅಂತ ಮಾಡಿದ್ದೆ. ಆದರೆ ಆ ದಿನ ಗುದ್ದಲಿ ಕಾಣೆಯಾಯಿತಲ್ವಾ.. ಪಾಪ ಅವಳ ನಂಬರ್ ಇಲ್ಲದೇ ಇಷ್ಟು ದಿನ ಅವಳಿಗೆ ಫೋನ್ ಕೂಡಾ ಮಾಡಿಲ್ಲ.. ಅಕ್ಕೇರೇ ನೋಡಿ ಎಂದು ಗುದ್ದಲಿಯಲ್ಲಿ ಗೀರಿದ್ದ ನಂಬರ್ ತೋರಿಸಿ ಅದನ್ನು ಅವನ ಮೊಬೈಲಿಗೆ ಹಾಕಿಕೊಡಲು ಹೇಳಿದ. ನಾನು ಆ ಕೆಲ್ಸ ಮಾಡಿದ ಕೂಡಲೇ ಅಂಗಳದ ಮೂಲೆಗೆ ಹೋಗಿ ಆ ನಂಬರಿಗೆ ಫೋನ್ ಮಾಡಿ ಮಾತಾಡುತ್ತಿದ್ದ. ನನ್ನದು ಅಡುಗೆ ಆಗಿ ಊಟಕ್ಕೆ ಬಾಳೆಲೆ ನೀರು ಇಟ್ಟು ಕರೆಯುವವರೆಗೂ ಅವನ ಮಾತೇ ನಿಂತಿರಲಿಲ್ಲ. ನನ್ನ ಸ್ವರ ಕೇಳಿ ತಿರುಗಿದವನು ಅಕ್ಕೇರೇ ನನಗೆ ಊಟ ಬೇಡ.. ಈಗ ಅರ್ಜೆಂಟಾಗಿ ಪೇಟೆಗೆ ಹೋಗಬೇಕು. ನಿಮ್ಮ ಕೆಲಸ ನಾಳೆ ಮಾಡಿಕೊಡ್ತೇನೆ. ಆದ್ರೆ ಆ ಕತ್ತಿ ಸ್ವಲ್ಪ ಹುಡುಕಿಡಿ.. ಅವಳು ಪಿಕ್ಚರಿಗೆ ಕರ್ಕೊಂಡು ಹೋಗಿ ಅಂತ ಹೇಳಿದ್ಲು.. ಹಾಗಾಗಿ ಈ ವಾರದ ಸಂಬಳ ಕೂಡಾ ಈಗಲೇ ಕೊಡಿ ಎಂದು ಅವಸರ ಮಾಡಿದ.
ಇದಕ್ಕೆಲ್ಲಾ ಒಂದು ಗತಿ ಕಾಣಿಸಲೇ ಬೇಕು. ವಸ್ತುಗಳಿಗೆ ಆಯಾಯ ಸ್ಥಾನ ಅಂತ ಇರಲೇ ಬೇಕು ಅಂತ ನಿರ್ಧರಿಸಿ ಅದನ್ನು ಅನುಷ್ಟಾನಕ್ಕೆ ತರುವ ಏರ್ಪಾಡಲ್ಲಿ ತೊಡಗಿದೆ. ಮೊದಲಿಗೆ ನಮ್ಮ ಮನೆಯಲ್ಲಿ ಆಗಾಗ ಕಾಣೆಯಾಗುವ ವಸ್ತುಗಳ ಪಟ್ಟಿ ತಯಾರಿಸಿದೆ. ಅವುಗಳನ್ನು ಇಡಲು ಒಂದೊಂದು ನಿರ್ಧಿಷ್ಟವಾದ ಜಾಗಗಳನ್ನು ಗುರುತಿಸಿದೆ. ಯಾರು ಯಾವ ವಸ್ತುವನ್ನು ಎಲ್ಲಿಂದ ತೆಗೆದರೋ ಅಲ್ಲಿಯೇ ಇಡತಕ್ಕದ್ದು.ಅದಕ್ಕೆಂದೇ ಒಂದು ದೊಡ್ಡ ಲೆಡ್ಜರ್ ಪುಸ್ತಕ ತಂದೆ. ಅದರಲ್ಲಿ ವಸ್ತುಗಳನ್ನಿರಿಸಿದ ಸ್ಥಳದ ವಿವರಣೆ ಇರುತ್ತದೆ. ವಸ್ತುಗಳನ್ನು ತೆಗೆದ ಕೂಡಲೇ ಪುಸ್ತಕದಲ್ಲಿ ವಸ್ತುವಿನ ಹೆಸರು ಬರೆಯ ಬೇಕು. ಅದನ್ನು ಸ್ವಸ್ಥಾನಕ್ಕೆ ಸೇರಿಸಿದ ನಂತರ ಅದರಲ್ಲಿ ಅವರ ಸಹಿ ಹಾಕಬೇಕು. ಇದನ್ನು ಕಟ್ಟು ನಿಟ್ಟಾಗಿ ಎಲ್ಲರೂ ಪಾಲಿಸಲೇಬೇಕು ಎಂದು ಆರ್ಡರ್ ಮಾಡಿದೆ. ಈಗ ಎಲ್ಲರ ಮೊಗದಲ್ಲೂ ನಗು.. ಮನೆಯಲ್ಲಿ ಹುಡುಕಾಟದ ತಲೆಬಿಸಿ ಇಲ್ಲ.. ಮಾತಿನ ಚಕಮಕಿ ಇಲ್ಲ.. ಆಹಾ ನಮ್ಮ ಸಂಸಾರ ಆನಂದ ಸಾಗರ.. ಎಂದು ಹಾಡುತ್ತಾ ಬಂದ ನನಗೆ ಎದೆ ಒಡೆಯುವಂತಾಯಿತು. ಅಲ್ಲಿದ್ದ ಪುಸ್ತಕವೇ ಮಾಯವಾಗಿತ್ತು. ನಿನ್ನೆ ರಾತ್ರೆ ಶರ್ಟಿನ ಗುಂಡಿ ಹೊಲಿಯಲು ತೆಗೆದುಕೊಂಡ ಸೂಜಿಯನ್ನು ಸ್ವಸ್ಥಾನಕ್ಕೆ ಸೇರಿಸಿ ಸಹಿ ಹಾಕಿ ಆ ಪುಸ್ತಕವನ್ನು ಎಲ್ಲಿಟ್ಟೆ ಮಾರಾಯ್ರೆ..
ಛೇ… ಇನ್ನೆಂತ ಮಾಡುವುದು ಅದನ್ನು ಹುಡುಕಬೇಕಷ್ಟೇ..
(ಹುಡುಕಾಟ ಮುಂದುವರಿಯುವುದು)
*****
Ha ha……. 🙂
Ledger kaige sikktha? gud1 Ani……….
"ಅಂತೂ 'ಹುಡ್ಕೋ' ಸ್ಕೀಮ್ ಜಾರಿ ಮಾಡಿದೀರಿ ಅನ್ನಿ……" ಚೆನ್ನಾಗಿದೆ ಮೇಡಂ..
ಉತ್ತಮವಾದ ಹಾಸ್ಯಮಯ ಮಂಚಿ ಮೇಡಂ
ನಿಮ್ಮ ಬರವಣಿಗೆಯ ಶೈಲಿ ಸುಂದರವಾಗಿದೆ . ಕನ್ನಡದಲ್ಲಿ ಲಘು ಪ್ರಭಂದಗಳನ್ನು ಬರೆಯುವವರ ಸಂಖ್ಯೆ ಕಡಿಮೆಯಾಗಿ ಇರುವ ಈ ಸಂಧರ್ಭದಲ್ಲಿ ನಿಮ್ಮ ಸಾಹಿತ್ಯ ಕೃಷಿ ಅಗತ್ಯ ಇದೆ.ದಯವಿಟ್ಟು ನಿಮ್ಮಪ್ರಭಂದಗಳನ್ನು ಮುಂದುವರೆಸಿ.