ಹುಚ್ಚು ಖೋಡಿ ಮನಸು
ಅದು ಹದಿನಾರರ ವಯಸು
ಮಾತು ಮಾತಿಗೇಕೋ ನಗು
ಮರು ಘಳಿಗೆಯೇ ಮೌನ
ಕನ್ನಡಿ ಮುಂದಷ್ಟು ಹೊತ್ತು
ಬರೆಯದಿರುವ ಕವನ…
(ಹೆಚ್.ಎಸ್. ವೆಂಕಟೇಶ್ ಮೂರ್ತಿ)
ಹುಚ್ಚು ಪ್ರೀತಿ ಎಂದಾಕ್ಷಣ ಬಿ.ಆರ್.ಛಾಯಾರವರು ಹಾಡಿದ ಈ ಸಾಲುಗಳು ನೆನಪಾಗುತ್ತದೆ. ಎಷ್ಟು ಅರ್ಥಪೂರ್ಣ ಹಾಗೂ ಸತ್ಯ. ಮಾತು ಮಾತಿಗೂ ನಗು, ಸದಾ ಕಾಲ ಖುಷಿ, ಅದೇಕೋ ಮೌನ, ತನ್ನಂದವ ತಾನೇ ನೋಡಿ ನಲಿವ ಮನಸ್ಸು, ಹೇಗೆ ಕಾಣುವೆನೋ ತಿಳಿಯಲು ಕನ್ನಡಿ ಮುಂದಷ್ಟು ಹೊತ್ತು ಕಳೆವ, ಮನದಲ್ಲೇ ಪದ ಕಟ್ಟುವ ಅದೂ ಕವನವೇ ಆದರೂ ಕವನವೆಂದು ಬರೆಯಲು ತಿಳಿಯದ ಹದಿನಾರರ ವಯಸ್ಸಿನ ಮನಸ್ಸು ಅದು.
ಹದಿನಾರರ ವಯಸ್ಸು ಎಂದರೆ ಹದಿಹರೆಯದ ವಯೋಮಾನ. ಪ್ರೀತಿ ಬಯಸುವಂತ ಮನಸ್ಸು ಹುಟ್ಟುವ, ಪ್ರೇಮ ಭಾವನೆಗಳು ಮೂಡುವ ಕಾಲವೆಂದು ಸಾಮಾನ್ಯವಾಗಿ ಹೇಳುತ್ತೇವೆ. ಅದೇ ರೀತಿ ಜೀವನದ ಯಾವುದೇ ವಯೋಮಾನದವರಾದರೂ ಪ್ರೀತಿ ವಿಚಾರದಲ್ಲಿ ಚಿಕ್ಕ ಪ್ರಾಯದವರೇ ಆಗಿಬಿಡುತ್ತಾರೆ. ಅದೇ ತುಂಟತನವನ್ನು ಮತ್ತೆ ಪಡೆದು ಬಿಡುತ್ತೇವೆ. ಆಗ ವಯಸ್ಸಿನ ಪ್ರಭಾವದಿಂದ ತುಂಟರಾದರೆ, ಪ್ರೌಢರಲ್ಲಿ ಪ್ರೀತಿಯು ತುಂಟತನವನ್ನು ತಂದಿರುತ್ತದೆ. ಅದೇ "ಪ್ರೀತಿಯ ಸುಖ". ನಮ್ಮ ತುಂಟತನವನ್ನು ಸಹಿಸುವ ನಮ್ಮನ್ನು ಮಕ್ಕಳಂತೆ ರಮಿಸುವ ಆ ಇನ್ನೊಂದು "ಜೀವದ ಆಪ್ಯಾಯಮಾನ ಪ್ರತಿಸ್ಪಂದನೆ"ಯೇ ಪ್ರೀತಿಯ "ಬಂಧ-ಸಂಬಂಧ". ಜೀವನದಲ್ಲಿ ಇಂತಹದೊಂದು ಬಂಧವು ಸಿಗುವುದೇ ಒಂದು "ಅದೃಷ್ಟ" ಎಂದೆನ್ನಬಹುದು.
ಎಲ್ಲೋ ಕೇಳಿದ ಮಾತು," ಹಸಿವಿನಿಂದ ಸತ್ತವರಿಗಿಂತ, ಪ್ರೀತಿಗಾಗಿ ಹಂಬಲಿಸಿ ಸತ್ತವರೇ ಹೆಚ್ಚು". ಹೌದು ಕೆಲವೊಮ್ಮೆ ನಾವು ಬಯಸಿದವರು ಅದೇಕೋ ದೂರಾಗಿಬಿಟ್ಟಿರುತ್ತಾರೆ. ಹಲವು ಪ್ರಿಯ ಮುಖಗಳನ್ನು ಕಂಡಿದ್ದರೂ ಪ್ರೀತಿ ಹುಟ್ಟಿರುವುದಿಲ್ಲ. ಎಂದೊ ಹೇಗೊ ಪ್ರೀತಿ ಅಂಕುರವಾದಾಗ, ಅವರಿಗಾಗಿಯೇ ಕಾಯುತ್ತೇವೆ. ಅವರನ್ನೇ ಹಂಬಲಿಸುತ್ತೇವೆ. ಅದೇ ನೀಯತ್ತು. ಪ್ರೀತಿಯಲ್ಲಿ ಪ್ರಾಮಾಣಿಕತೆ ಬಹು ಮುಖ್ಯ. ಸಾಮಾನ್ಯವಾಗಿ ನಂಬಿಕೆ ಮುಖ್ಯವೆಂದು ಕೇಳಿರುತ್ತೇವೆ. ನನ್ನ ಪ್ರಕಾರ ಪ್ರಾಮಾಣಿಕತೆಯು ಮುಖ್ಯ. ನಂಬಿಕೆಯು ಪ್ರಾಮಾಣಿಕತೆಯ ಹಿಂದೆಯೇ ಬರುವ ನೆರಳಿನಂತೆ ಎನ್ನಬಹುದು. ಜೀವನದಲ್ಲಿ ಯಾವುದಕ್ಕೆ ಅಪ್ರಾಮಾಣಿಕರಾದರೂ ಯಾರಿಗೂ ತಿಳಿಯದು, ಆದರೆ ಪ್ರೀತಿಗೆ ಅಪ್ರಾಮಾಣಿಕರಾದರೆ ಕೊನೆಗದು ಯಾರಿಗೂ ಕಾಣದೆ ನಮ್ಮನ್ನಷ್ಟೆ ಕಾಡುವ ವ್ಯಾದಿಯಾಗಿಬಿಡುತ್ತದೆ.
ಆದ್ದರಿಂದ ನಮಗಾಗಿ ಜೀವಿಸೋಣ. ನಮ್ಮ ಆತ್ಮ ಸಾಕ್ಷಿಗೆ ಒಪ್ಪಿಗೆಯಾಗುವಂತೆ ನಡೆಯೋಣ. ಎಲ್ಲೋ ಗುಡಿಯಲ್ಲಿರುವ ದೇವನಿಗೆ ಹರಕೆ ಹೊತ್ತು ಸಂತುಷ್ಟಗೊಳಿಸಿ ಸಂತೋಷವನ್ನು ಬೇಡುವುದರಲ್ಲಿ ಅರ್ಥವಿಲ್ಲ. ನಮ್ಮಲ್ಲಿನ ದೇವನೆಂಬ ಮನಃಸಾಕ್ಷಿಯು ಒಪ್ಪುವಂತಹ ನಡೆ ನಮ್ಮದಾದಾಗ ಜೀವನ ಸಂತಸದಾಯಕ. ಪ್ರೀತಿಗೂ ಮನಃಸಾಕ್ಷಿಗೂ ತೀರ ಹತ್ತಿರದ ನಂಟೆಂದೇ ಹೇಳಬಹುದು. ಹಾಗಾಗಿ ಪ್ರೀತಿಯೇ ದೇವರೆಂದು ತಿಳಿದರೆ ತಪ್ಪಾಗಲಾರದು. ಪ್ರೀತಿಗೆ, ಪ್ರೀತಿಸುವವರಿಗೆ ಎಂದೂ ನೋವೆಂಬ ಅಪಚಾರವನ್ನು ಮಾಡದಿರೋಣ. ಕಳೆದುಕೊಂಡ ಮೇಲೆ ಹುಡುಕಿ ಸಿಗದೆ ವ್ಯಥೆ ಪಡುವುದಕ್ಕಿಂತ ಪ್ರೀತಿಸುವವರೊಂದಿಗೆ ಪ್ರೀತಿಯಿಂದ ಪ್ರೀತಿಗಾಗಿ ಜೀವನ ಸಾಗಿಸುವುದು ಒಳಿತಲ್ಲವೇ?
"ಹುಚ್ಚು ಪ್ರೀತಿ", ಎಂಬ ಶೀರ್ಷಿಕೆ ಇಟ್ಟಾಕ್ಷಣ ಪ್ರೀತಿಯೊಂದು ಹುಚ್ಚು ಎಂದು ಹೇಳಲು ನಾ ಹೊರಟಿಲ್ಲ. ನನ್ನರ್ಥ ಇಷ್ಟೆ; ಪ್ರೀತಿಯಲ್ಲಿ ತನ್ನನ್ನು ತಾನು ಮರೆತು, ಪ್ರೀತಿಯಲ್ಲಿ ಬೆರೆತು, ಅತೀ ಮೃದು, ಅತೀ ಮುದ್ದು, ಅತೀ ಮುಗ್ಧತೆಗಳನ್ನು ಪಡೆದುಬಿಡುತ್ತೇವೆ. ನಾವು ಮತ್ತೊಮ್ಮೆ ಮಕ್ಕಳಾಗಿಬಿಡುತ್ತೇವೆ. " ತುಂಬಾ ಗಂಭೀರ" ಎನಿಸಿಕೊಳ್ಳುವ ವ್ಯಕ್ತಿಯೂ ತನ್ನ ಪ್ರಿಯರೊಂದಿಗೆ ಚಿಕ್ಕ ಮಗುವಿನಂತೆ ಕಾಡುವ, ಬೇಡುವ, ಅಳುವ; ಮರು ಘಳಿಗೆಯಲ್ಲಿಯೇ ತುಂಟತನದಿ ಮೆರೆವ ಮುದ್ದು ಮರಿಯಾಗುತ್ತಾನೆ. ಇದನ್ನೇ ಪ್ರೀತಿಯಲ್ಲಿನ ಹುಚ್ಚು ಎನ್ನುವುದು. ಜೀವನದ ಘಟ್ಟಗಳಲ್ಲಿ ಕಲ್ಲಿನಂತೆ ಕಷ್ಟಗಳನ್ನು ಎದುರಿಸಿದ್ದರೂ ತನ್ನ ಪ್ರೀತಿಯ ಮುಂದೆ ಕರಗಿ ನೀರಾಗುವ ಮಂಜುಗಡ್ಡೆಯೇ ಸರಿ. ನೋಡಲು ಗಟ್ಟಿ ಆದರೆ ಕರಗುವುದಂತೂ ನಿಜ!. ಇಲ್ಲಿ ಗಡಸುತನದ, ಒರಟುತನದ, ಬಿಗುಮನಸ್ಸಿನ ಸನ್ನಿವೇಶಗಳಿಲ್ಲ. ಎಲ್ಲವನ್ನು ಮೃದುತ್ವ ಆವರಿಸಿಬಿಡುತ್ತದೆ.
ಈ ಪ್ರೀತಿ ಪ್ರಯಾಣದಲ್ಲಿ ಸಂಶಯ ಸ್ಥಿತಿ (ಕನ್ಪ್ಯೂಷನ್ ಸ್ಟೇಟ್) ಒದಗುವುದು ಮೋಹ(ಕಾಮ)ವು ಎದುರಾದಾಗ. ಎಂದೊ ರೇಡಿಯೋದಲ್ಲಿ ಕೇಳಿದ ನೆನಪು; "ಕಾಮದ ಕೆಸರಿನಲ್ಲಿಯೇ ಪ್ರೀತಿಯ ಕಮಲ ಹುಟ್ಟುವುದು" ಎಂಬ ಅರ್ಥದ ಭಾವಗೀತೆಯ ಸಾಲನ್ನು; ಹೆಣ್ಣೊಂದು ಹಾಡಿದ್ದ ಹಾಡು ಅದಾಗಿತ್ತು. ನನ್ನ ಪ್ರಕಾರ ಆ ಭಾವಗೀತೆಯು ಕವಿಯದ್ದೇ, ಕವಯತ್ರಿಯದಂತೂ ಅಲ್ಲ. ಕವಯತ್ರಿಯು ಬರೆದಿದ್ದರೆ "ಪ್ರೀತಿಯ ಹೂ ಅರಳಿ ಕಾಮದಿ ಕಾಯಾಗಿದೆ" ಎಂಬ ಭಾವಗಳಲ್ಲಿ ಗೀತೆ ರಚನೆಯಾಗಿರುತ್ತಿತ್ತು. ಹೂವನ್ನು ಪ್ರೀತಿಯ ಪ್ರತೀಕವಾಗಿ ನಾವು ಕಾಣುತ್ತೇವೆ. ಹೂವಿನ ಅಂದಕ್ಕೆ ಮಾರು ಹೋಗಿ ಮಧುವರಸಿ ಬಂದ ದುಂಬಿಗಳ ಸಹಾಯದಿಂದ ಹೂವಿನಲ್ಲಿ ಪರಾಗಸ್ಪರ್ಶವೇರ್ಪಟ್ಟು ಹೂವಿಂದ ಕಾಯಿಯಾಗುತ್ತದೆ. ಹಾಗೆಯೇ ಪ್ರೀತಿಯಿಂದ ಪ್ರೀತಿಗಾಗಿ ಹಂಬಲಿಸಿದ ಮನಗಳಲ್ಲಿ ಪ್ರೇಮವಾಗಿ ದಾಂಪತ್ಯವು ಪ್ರಾರಂಭವಾಗುವುದು ಪ್ರಕೃತಿ ನಿಯಮ. ಪ್ರೀತಿಯಿಂದ ಕಾಮವು ಹುಟ್ಟೀತೇ ವಿನಃ, ಕಾಮದಿಂದ ಎಂದಿಗೂ ಪ್ರೀತಿ ಹುಟ್ಟಲು ಸಾಧ್ಯವಿಲ್ಲ. ಒಮ್ಮೆ ತನ್ನ ನಲ್ಲನನ್ನು ತುಂಬಾ ಪ್ರೀತಿಸುವ ಹುಡುಗಿಯು ಅವನೆಷ್ಟೇ ಬೇಸರ ತರಿಸಿದರೂ. ಏನೇ ಜಗಳವಾದರೂ ತಾನೇ ಸೋತು ಅವನನ್ನು ರಮಿಸಿ ಮಾತನಾಡಿಸುವಾಗ ಆತ, "ಇಷ್ಟೆಲ್ಲಾ ಸೋಲುವಳಲ್ಲ?" ಎಂದು ಯೊಚಿಸಿ ತಿರುಗಿ, "ಏನು ಬೇಕು?" ಎಂದು ಕೇಳಿಬಿಟ್ಟರೆ ಅವಳಲ್ಲಾಗುವ ಆಘಾತಕ್ಕೆ ಪದಗಳಿಲ್ಲ,,,,,, "ಪ್ರೀತಿ" ಎಂದು ಉತ್ತರಿಸಲೂ ಆಗದ ಮನಃಸ್ಥಿತಿ. ತನ್ನನ್ನೇ ತಾನು ಕೀಳಾಗಿ ಕಾಣುವಂತೆ ಮಾಡಿಬಿಟ್ಟಿರುತ್ತಾನೆ ಆತ. ಅದರ ಮೇಲೂ ತನ್ನ ದೃಢತೆಯಿಂದ "ಪ್ರೀತಿನೇ" ತನಗೆ ಬೇಕಾದ್ದು ಎಂದುಳಿಯುವ ಹೆಣ್ಣಿಗೆ ಕೊನೆಗೊಂದು ದಿನ ಪ್ರೀತಿ ಸಿಕ್ಕೀತ್ತೇನೊ?.
ಇದೇ ನೋಡಿ ಗಂಡು-ಹೆಣ್ಣಿನಲ್ಲಿನ ವ್ಯತ್ಯಾಸ. ಹೆಣ್ಣು ಪ್ರೀತಿಯನ್ನು ಪ್ರೀತಿಯಿಂದ ನೋಡುವಾಗ, ಗಂಡು ಪ್ರೀತಿಯ ಹೊರತುಪಡಿಸಿ ಕೇವಲ ಕಾಮ/ಮೋಹವಾಗಿ ಪರಿಗಣಿಸುತ್ತಾನೆ. ಈ ವ್ಯತ್ಯಾಸಗಳು ವ್ಯತ್ಯಾಸವಾಗಿ ಇಬ್ಬರ ಭಾವವೂ ಒಂದೇ ಆಗಿಬಿಟ್ಟರೆ ಪ್ರೀತಿಗೆ-ಮಾನವೀಯತೆಗೆ ಬೆಲೆ. ಆಗಲಾದರೂ ಹೆಣ್ಣಿನ ಮೇಲಿನ ದೌರ್ಜನ್ಯಗಳು ಕಡಿಮೆಯಾದೀತು. ಹೆಣ್ಣನ್ನು ಪ್ರೀತಿಸುತ್ತಿಲ್ಲ, ಅದಕ್ಕಾಗಿಯೇ ಅವಳನ್ನು ಒಲಿಸಲು, ರಮಿಸಲು ಗಂಡು ಮೃದುವಾಗುವ ಅವಕಾಶವೇ ಇಲ್ಲ. ಬದಲಾಗಿ ಅವಳನ್ನು ಕ್ರೂರವಾಗಿ ನೆಡೆಸುತ್ತಿದ್ದಾರೆ, ದುಡಿಸುತ್ತಿದ್ದಾರೆ, ಹಿಂಸಿಸುತ್ತಿದ್ದಾರೆ.
ಇಷ್ಟಾಗಿಯೂ ಹೆಣ್ಣಿನಲ್ಲಿ ಪ್ರೀತಿಯ ಮೇಲೆ ನಂಬಿಕೆಯಿದೆ. ಅದರಲ್ಲೂ ತನ್ನ ಪ್ರೀತಿಯ ಮೇಲೆ. ಸಾಯುವ ಮುನ್ನ ಸಿಕ್ಕೀತ್ತೆಂಬ ಆಶಯವಷ್ಟೇ. ಅಂತಹ ಪ್ರೇಮಮೂರ್ತಿ ಹೆಣ್ಣನ್ನು ಯಾವ ಕಾರಣಕ್ಕೆ ಬೀಳಾಗಿ ಕಾಣುವರೋ ಕಾಣೆ. ಹೆಣ್ಣನ್ನು ಗಂಡು ಯಾವುದರಲ್ಲೂ ಸೋಲಿಸಲು ಸಾಧ್ಯವೇ ಇಲ್ಲ. ಎಲ್ಲಾ ಕ್ಷೇತ್ರದಲ್ಲೂ ಗಂಡಿಗಿಂತ ಹೆಚ್ಚು ಸಮರ್ಥಳು. ಆದರೆ ಅದೇ ಹೆಣ್ಣನ್ನು ಪ್ರೀತಿ/ಭಾವನೆಗಳ ಅಂಕುಶದಿಂದ ಸೋಲಿಸಿ ಪುರುಷ ಪ್ರಧಾನ ಸಮಾಜವನ್ನು ನಿರ್ಮಿಸಿಕೊಂಡಿದ್ದಾನೆ ಅಷ್ಟೆ. ಹೆಣ್ಣಿನ ಪ್ರೀತಿಯ ಹಂಬಲವಷ್ಟೇ ಗಂಡಿನ ಶಕ್ತಿ.
ಇವೆಲ್ಲವೂ ತಿಳಿದಿದ್ದರೂ ಪ್ರೀತಿಯೆಂಬ ಹೊಳೆಯಲ್ಲಿ ಧುಮುಕಲು ಹೆಣ್ಣು ಅಂಜುವುದೇ ಇಲ್ಲ. ಆದರೆ ಗಂಡು ಅಂಜುತ್ತಾನೆ:-) ನನ್ನಕ್ಕ ಹೇಳುತ್ತಿದ್ದಳು, "ನಿಜವಾದ ಪ್ರೀತಿ-ಪ್ರೇಮಗಳೆಲ್ಲಾ ಕಥೆ-ಕಾದಂಬರಿ-ಸಿನೆಮಾಗಳಲ್ಲಿ ಮಾತ್ರ, ನಿಜ ಜೀವನದಲ್ಲಿ ಬಯಸಿ ನಿರಾಶರಾಗಬಾರದು", ಎಂದು, ಇರಬಹುದೇನೋ ಕಥೆ-ಕಾದಂಬರಿಗಳಲ್ಲೇ ಖುಷಿ ಹೆಚ್ಚು. ಆದರೂ ತಮ್ಮ ತಮ್ಮ ಜೀವನಗಳನ್ನು ಸುಂದರ ಪ್ರೀತಿಮಯ ಕಾದಂಬರಿಯನ್ನಾಗಿ ಪರಿವರ್ತಿಸುವ ಹಂಬಲವನ್ನು ಮಾತ್ರ ಯಾರೂ ಕೈ ಬಿಡಬಾರದು. ಒಳ್ಳೆಯದಕ್ಕೆ ಕಾಲವುಂಟು, ಪ್ರಾಮಾಣಿಕತೆಗೆ ಬೆಲೆಯುಂಟು, ಕಾಯಬೇಕಷ್ಟೆ. ಹುಚ್ಚು ಪ್ರೀತಿಯಲ್ಲಿ ಮುಳುಗೇಳುವ ಅವಕಾಶವನ್ನು ಕೈಬಿಟ್ಟು ಕೊನೆಗೆ ವಿಧಿಯನ್ನು ಹಳಿಯದಿರಿ. ಎಲ್ಲಿ ಎಲ್ಲರೂ ತಮ್ ತಮ್ಮ ಪ್ರೀತಿಯನ್ನು ನೆನೆದು, ತುಂಟತನದ ನಗೆಯೊಂದನ್ನು ಬೀರಿ…! 🙂
ಪ್ರೀತಿ-ಪ್ರೇಮಗಳ ಬಗ್ಗೆ ಒಳ್ಳೇ ಸಾಲುಗಳನ್ನು ಬರೆದಿದ್ದೀರಿ…ಪ್ರೀತಿಯಿಂದ ಕಾಮವು ಹುಟ್ಟೀತೇ ವಿನಃ, ಕಾಮದಿಂದ ಎಂದಿಗೂ ಪ್ರೀತಿ ಹುಟ್ಟಲು ಸಾಧ್ಯವಿಲ್ಲ..ಖಂಡಿತ ಸತ್ಯದ ಮಾತು…
ಧನ್ಯವಾದಗಳು ಮೇಡಂ 🙂
ಮೇಡಮ್ ಜಿ….ಎಲ್ಲಾ (ಆಂಗಲ್) ದೃಷ್ಟಿಕೋನಗಳಿಂದ ವಿವರಿಸುತ್ತಾ ಎಚ್.ಎಸ್.ವಿ. ಅವರ ಕವನವೊಂದನ್ನು ಪ್ರತಿಮೆಯಾಗಿಟ್ಟುಕೊಂಡು ಯಾರೂ ಯೋಚನೆ ಮಾಡಿರದ ರೀತಿಯಲ್ಲಿ ವಿಶಾಲವಾಗಿ ವಿಷಯವೊಂದನ್ನು ವಿವೇಚಿಸುವ ಶೈಲಿ ಚೆನ್ನಾಗಿದೆ…ಶುಭಾಶಯಗಳು !
ಅನಿಸಿದಂತೆ ಮತ್ತು ನಾ ಒಪ್ಪಿಕೊಂಡಂತೆ ವಿಚಾರಗಳನ್ನು ಮಂಡಿಸಿದ್ದೇನೆ ಸರ್. ಲೋಪ ದೋಷಗಳಿದ್ದರೆ ತಿಳಿಸಿದರೆ ತಿಳಿಯುವೆ, ಒಪ್ಪಿಗೆಯಾದರೆ ಒಪ್ಪುವೆ. ಧನ್ಯವಾದಗಳು ಸರ್ 🙂
ಚೆನ್ನಾಗಿದೆ ಮೇಡಂ.
ಪ್ರೀತಿಯಲ್ಲಿ ಪ್ರಾಮಾಣಿಕತೆ ಮತ್ತು ಮಾನವೀಯತೆಯಿರಬೇಕೆ ಹೊರತು ಕೃತ್ರಿಮತೆ, ದಬ್ಬಾಳಿಕೆಗಳಿರಬಾರದು ಎಂಬುದನ್ನು ಬಹಳ ಚೆನ್ನಾಗಿ ಹೇಳಿದ್ದೀರಿ
ಧನ್ಯವಾದಗಳು ಸರ್
ಪ್ರೀತಿ ಪ್ರೇಮದ ಹಿಂದಿನ ಆಶಯ ಮನ ಮುಟ್ಟಿತು ..
ಇಷ್ಟವಾಯ್ತು 🙂
ಧನ್ಯವಾದಗಳು 🙂
ನಿಜವಾದ ಪ್ರೀತಿ ಬಹು ತಾಳ್ಮೆಯುಳ್ಳದ್ದು
ಅದು ಪ್ರೀತಿ ಸುವವರ ಏಳಿಗೆಯನ್ನೇ ನೋಡುವುದು
ಅದು ಎಲ್ಲವನ್ನೂ ಸಹಿಸುವುದು
ಕಾಮಕ್ಕೂ ಪ್ರೀತಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂದೆನಿಸುವುದು
🙂 ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ
channagide medum………………..
ಥ್ಯಾಂಕ್ಯೂ ಸರ್