ಹುಚ್ಚು ಖೋಡಿ ವಯಸ್ಸು: -ಗೌರಿ.ಚಂದ್ರಕೇಸರಿ, ಶಿವಮೊಗ್ಗ.

 

ವಿದ್ಯಾರ್ಥಿ ಜೀವನವೇ ಹಾಗೆ. ನಿತ್ಯ ಸಂತೋಷ, ಸಂಭ್ರಮ, ತಮಾಷೆಗಳಿಂದ ಕೂಡಿರುತ್ತದೆ. ಒಬ್ಬರಿನ್ನೊಬ್ಬರ ಕಾಲೆಳೆಯುವುದು, ಚುಡಾಯಿಸುವುದು, ಮೂರ್ಖರನ್ನಾಗಿಸುವುದು ನಡೆದೇ ಇರುತ್ತದೆ. ಆಗ ತಾನೆ ಹೈಸ್ಕೂಲನ್ನು ಹಿಂದೆ ಬಿಟ್ಟು ಕಾಲೇಜಿಗೆ ಅಡಿ ಇಡುವ ವಿದ್ಯಾರ್ಥಿಗಳಂತೂ ಅಪ್ಪಟ ಮದ್ಯ ಹೀರಿದ ಮಂಗಗಳಂತಾಡುತ್ತವೆ. ನಾವು ಏನೇ ಮಾಡಿದರೂ ಅದು ಕೇವಲ ತಮಾಷೆಗಾಗಿ ಎಂದು ಇವರು ತಮ್ಮಷ್ಟಕ್ಕೆ ತಾವೇ ದೃಢೀಕರಿಸಿಕೊಂಡು ಬಿಟ್ಟಿರುತ್ತಾರೆ. ಹುಚ್ಚು ಖೋಡಿ ಮನಸು ಅದು ಹದಿನಾರರ ವಯಸ್ಸು ಎಂಬ ಮಾತನ್ನು ಅಕ್ಷರಷ: ಸತ್ಯ ಎಂಬುದನ್ನು ಸಾಬೀತು ಪಡಿಸುತ್ತಾರೆ. ಮಾಡುವ ತಮಾಷೆಗಳು ಇತಿ-ಮಿತಿಯಲ್ಲಿದ್ದರೆ ಆರೋಗ್ಯಕರ. ಆದರೆ ಅವು ಲೈನ್ ಆಫ್ ಕಂಟ್ರೋಲ್ ದಾಟಿದರೆ ಅನಾಹುತ, ಆಘಾತ, ಅವಘಡಗಳು ಸಂಭವಿಸಲೂಬಹುದು.

ನನ್ನ ಕಾಲೇಜು ಜೀವನದಲ್ಲಿ ನಡೆದ ಘಟನೆಯೊಂದು ಆಗಾಗ ನೆನಪಿಗೆ ಬಂದು ಹೋಗುತ್ತಿರುತ್ತದೆ. ಸಹಾಯ, ಅನುಕಂಪದ ಜಾಗದಲ್ಲೂ ಹುಡುಗರು ಇನ್ನೊಬ್ಬರನ್ನು ಪೇಚಿಗೆ ಸಿಕ್ಕಿಸಿ ಅದು ಹೇಗೆ ತಾನೇ ಸಂಭ್ರಮಿಸುತ್ತಾರೆಂದು ಆಶ್ಚರ್ಯವಾಗುತ್ತದೆ. ಅದು ಅವರ ವಯಸ್ಸಿನ ಸಿದ್ಧ ಹಕ್ಕು ಎನ್ನುವಂತೆ ಸದಾ ತಮಾಷೆಯನ್ನೇ ಹಾಸಿ ಹೊದ್ದುಕೊಂಡಿರುತ್ತಾರೆ. ನಾನು ಪ್ರಥಮ ವರ್ಷದ ಪಿ.ಯು.ಸಿ.ಗೆ ಕಾಲಿಟ್ಟ ಮೊದಲ ದಿನ ನಮ್ಮ ತರಗತಿಗೆ ಅಂಧ ವಿದ್ಯಾರ್ಥಿಯೊಬ್ಬ ಪ್ರವೇಶ ಪಡೆದಿದ್ದ. ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದ ಆತ ಚಟುವಟಿಕೆಯಿಂದ ಕೂಡಿದವನಾಗಿದ್ದ. ಅದೇ ಮೊದಲ ದಿನ ಕಾಲೇಜಿನ ಕ್ಯಾಂಪಸ್‍ನಲ್ಲಿ ಅಡಿ ಇಟ್ಟಿದ್ದ ಆತನಿಗೆ ಯಾವ ಯಾವ ತರಗತಿಗಳು ಎಲ್ಲಿ ನಡೆಯುತ್ತವೆ, ಯಾವ ವಿಭಾಗದ ಕಟ್ಟಡಗಳು ಎಲ್ಲಿವೆ ಎಂಬುದರ ಬಗ್ಗೆ ತಿಳಿದಿರಲಿಲ್ಲ. ಅಂದು ಒಂದು ತರಗತಿ ಮುಗಿದ ನಂತರ ಇನ್ನೊಂದು ತರಗತಿ ಪ್ರಾರಂಭವಾಗಲು ಒಂದು ಗಂಟೆಯ ಸಮಯವಿತ್ತು. ಆ ವೇಳೆಯಲ್ಲಿ ಆ ಅಂಧ ವಿದ್ಯಾರ್ಥಿಗೆ ಕಾಲೇಜಿನ ಗ್ರಂಥಾಲಯಕ್ಕೆ ಹೋಗಬೇಕಿತ್ತು. ಆಗ ಇನ್ನೊಬ್ಬರ ಸಹಾಯ ಆತನಿಗೆ ಅನಿವಾರ್ಯವಾಗಿತ್ತು. ಆಗ ಆತ ತನ್ನ ಅಕ್ಕ-ಪಕ್ಕದಲ್ಲಿ ನಿಂತು ಹರಟೆಯಲ್ಲಿ ನಿರತರಾದ ಹುಡುಗರಲ್ಲಿಗೆ ಹೋಗಿ ತಾನು ಗ್ರಂಥಾಲಯಕ್ಕೆ ಹೋಗಬೇಕೆಂದೂ ದಯವಿಟ್ಟು ದಾರಿ ತೋರಿಸಬೇಕೆಂದು ಕೇಳಿಕೊಂಡಿದ್ದ. ಅದೇ ಅವಕಾಶ. ಬಿಟ್ಟರೆ ಸಿಕ್ಕಲಾರದೆಂದು ಆ ಹುಡುಗರ ಗುಂಪು ಆತನ ಕೈ ಹಿಡಿದುಕೊಂಡು ಹೋಗಿ ಇದೇ ಗ್ರಂಥಾಲಯ, ಒಳಗಡೆ ಹೋಗೆಂದು ಹೇಳಿ ಅಲ್ಲಿಂದ ಕಾಲು ಕಿತ್ತಿದ್ದರು. ಆ ಅಮಾಯಕ ಹುಡುಗ ಒಳಗಡೆ ಪ್ರವೇಶಿಸುತ್ತಿದ್ದಂತೆಯೇ ಅಲ್ಲಿದ್ದ ನಾನು ನನ್ನ ಸ್ನೇಹಿತೆಯರು ಯಾರನ್ನು ಹುಡುಕಿಕೊಂಡು ಬಂದದ್ದು, ಇಲ್ಲಿ ಒಳಗಡೆ ಪ್ರವೇಶವಿಲ್ಲ, ಇದು ಹುಡುಗಿಯರ ಹಾಸ್ಟೆಲ್ ಎಂದಾಗ ಆ ಹುಡುಗ ಭೂಮಿಗಿಳಿದು ಹೋಗಿದ್ದ. ಅವಮಾನ, ದು:ಖ, ಅಸಹಾಯಕತೆಗಳೆಲ್ಲ ಒಟ್ಟಾಗಿ ಅವನ ಮುಖದಲ್ಲಿ ಮೇಳೈಸಿದ್ದವು. ಆಗ ಆತ ನಮ್ಮ ಹತ್ತಿರ ಕ್ಷಮೆಯಾಚಿಸುತ್ತ ನಡೆದ ವೃತ್ತಾಂತವನ್ನೆಲ್ಲ ಹೇಳಿದ್ದ. ಆತನ ಪರಿಸ್ಥಿತಿಯಿಂದ ಕನಿಕರಗೊಂಡು ಆತನನ್ನು ನಾವು ಗ್ರಂಥಾಲಯದವರೆಗೂ ಬಿಟ್ಟು ಬಂದಿದ್ದೆವು.

ಕನಿಷ್ಠ ಪಕ್ಷ ಅಂಧನೆಂಬ ಅನುಕಂಪವನ್ನೂ ತೋರದೆ ಸಹಾಯ ಮಾಡುವ ನೆಪದಲ್ಲಿ ಆ ಹುಡುಗರು ಅವನನ್ನು ಗೋಳು ಹೊಯ್ದುಕೊಂಡಿದ್ದರು. ತನಗಾದ ಅವಮಾನವನ್ನು ನೆನೆದು ಆ ಅಂಧ ವಿದ್ಯಾರ್ಥಿ ಅದೆಷ್ಟು ವ್ಯಥೆಪಟ್ಟಿರಬೇಕೆಂದು ಯೋಚಿಸಿದಾಗ ಈಗಲೂ ಮನಸ್ಸು ನಿರ್ವಿಣ್ಣಗೊಳ್ಳುತ್ತದೆ. ನಾವು ಮಾಡುವ ತಮಾಷೆಗಳು ಇತಿ-ಮಿತಿಯಲ್ಲಿರಬೇಕು. ಅವುಗಳಿಂದ ಇನ್ನೊಬ್ಬರು ಆಘಾತ, ಅವಮಾನವನ್ನು ಅನುಭವಿಸುವಂತಾಗಬಾರದು. ನಾವು ಮಾಡುವ ತಮಾಷೆಯಿಂದ ಇನ್ನೊಬ್ಬರು ಸಂತಸದಲ್ಲಿ ಮಿಂದೇಳಬೇಕು. ಅದು ನಿಜವಾದ ತಮಾಷೆ.

-ಗೌರಿ.ಚಂದ್ರಕೇಸರಿ, ಶಿವಮೊಗ್ಗ.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x