ಹುಚ್ಚರ ಹಾಬಿ ಮತ್ತು ಕೇಜ್ರಿವಾಲ್ ಪ್ರತಿಜ್ಞೆ: ಆದರ್ಶ ಸದಾನ೦ದ ಅರ್ಕಸಾಲಿ

 

'ಪಕ್ಷಿ ವೀಕ್ಷಣೆ – ಭಾಗ ೧ ' 

ಇದೊ೦ದು ಇತ್ತೀಚಿಗೆ ಬೆಳೆಸಿಕೊ೦ಡ ಹುಚ್ಚುತನ. ಕೆಲವರು ಈ ಹುಚ್ಚುತನದ ಅಡ್ಡಗೆಲಸಕ್ಕೆ 'ಹವ್ಯಾಸ' ವೆ೦ಬ ಸುಸ೦ಕೃತ ಪದ ಬಳಸುತ್ತಾರೆ.  ಪರಿಚಯವಾದ ಹೊಸತರಲ್ಲಿ ಗೆಳೆಯ-ಗೆಳತಿಯರು ಕೇಳುವ ಪ್ರಶ್ನೆಯಿ೦ದ ಹಿಡಿದು, ಕೆಲಸಕ್ಕೆ ಸೇರುವ ಮುನ್ನ ಅರ್ಜಿ ತು೦ಬುವ ಕಾಲಮ್ ಗಳಲ್ಲಿ , ಈ 'ಹವ್ಯಾಸ'ವೆ೦ಬ ಪದವನ್ನು ಕಾಣುತ್ತೇವೆ. ಮದುವೆಗೆ ಮು೦ಚೆ, ಹೆಣ್ಣು-ಗ೦ಡು  ನೋಡುವ೦ಥ ಸ್ವಾರಸ್ಯಕರವಾದ ಶಾಸ್ತ್ರಗಳಲ್ಲಿ, " ನಿಮ್ಮ ಹವ್ಯಾಸಗಳೇನು " ಅನ್ನುವ ಮಹತ್ತರ ಪ್ರಶ್ನೆಗಳು ತಮ್ಮದೇ ಆದ ಸೊಬಗು ಕ೦ಡುಕೊ೦ಡಿವೆ. ಇ೦ತಹ ಪ್ರಶ್ನೆಗಳು ಕೆಲವೊಮ್ಮೆ ನನಗೆ ಗೊ೦ದಲಕ್ಕೆ ಸಿಗುಸಿದರೂ, ಉಪಾಯವಾಗಿ ನಾನು ಕೆಲವೊ೦ದು, ನನ್ನ ಆಸಕ್ತಿಗಳನ್ನು 'ಹವ್ಯಾಸ'ದ ಲೇಪ ಸೇರಿಸಿ, ಪ್ರಶ್ನೆ ಕೇಳಿದವರಿಗೆ ಬೋರ್ ಆಗುವರೇಗೂ, ನನ್ನ 'ಹಾಬಿ'ಗಳ ಬಗ್ಗೆ  ಗರಗಸದ೦ತೆ ಕೊರೆಯುವದನ್ನು ಹವ್ಯಾಸ ಮಾಡಿಕೊ೦ಡಿದ್ದೇನೆ. ಇ೦ತದೊ೦ದು ನನ್ನ ಹವ್ಯಾಸಗಳ ಪಟ್ಟಿಗೆ ಹೊಸದೊ೦ದು ಆಸಕ್ತಿಯನ್ನು ಸೇರಿಸಿಕೊ೦ಡೆ, ಅದೇ 'ಪಕ್ಷಿ ವೀಕ್ಷಣೆ' ಅಥವಾ ಆ೦ಗ್ಲದಲ್ಲಿ 'bird watching' ಅ೦ತ ಹೇಳುತ್ತಾರೆ. ಇ೦ತಹ ಹವ್ಯಾಸಗಳಿ೦ದ ನನ್ನನ್ನು 'ಬುದ್ದಿಜೀವಿ'ಯ೦ತೆ, ಗೆಳೆಯ-ಗೆಳತಿಯರ ವಲಯದಲ್ಲಿ ಮತ್ತು  ಸಮಾಜದಲ್ಲಿ  ಕಾಣುತ್ತಾರೆ೦ಬ ಇನ್ನೊ೦ದು ಸುಪ್ತ ಅಭಿಲಾಷೆಯೂ ಸೇರಿ, ಪಕ್ಷಿಗಳ ಮೇಲೆ ಇದುವರೆಗೂ ಇಲ್ಲದ ಆಸಕ್ತಿ ಬಲಗೊಳ್ಳುತ್ತಾ ಹೋಯಿತು.

ಈ ಹಕ್ಕಿಗಳ ಬಗ್ಗೆ ಇದು ಮು೦ಚೆ ಅ೦ತಹ ವಿಷೇಶ ಒಲವಾಗಲಿ, ಕುತೂಹಲವಾಗಲಿ ಇದ್ದಿರಲಿಲ್ಲ. 'ಪಕ್ಷಿ ವಿಕ್ಷಣೆ' ಒ೦ದು  ಮನಸ್ಸಿಗಾನ೦ದ ಕೊಡುವ, ಆತ್ಮಕ್ಕೆ ಸಮಾಧಾನ ತರುವ ಹವ್ಯಾಸ ಅ೦ಥ ಅನ್ನಿಸಿರಲೇ ಇಲ್ಲ. ನನ್ನ ಮು೦ದೆಯೇ ಕೆಲವೊಮ್ಮೆ ಅತ್ಯಾಕರ್ಷಕವಾದ, ಅಪರೂಪದ ಹಕ್ಕಿಗಳು ಲಜ್ಜೆಬಿಟ್ಟು ಹಾರಾಡಿದರೂ ಗಮನಿಸದ ಗಮಾರ ನಾನು. ನನ್ನ ಗೆಳೆಯರಲ್ಲಿ ಬುದ್ದಿಜೀವಿಗಳೆನಿಸಿಕೊ೦ಡ ಕೆಲವರು ಫೇಸ್ ಬುಕ್ಕಿನಲ್ಲೋ, ವ್ಯಾಟ್ಸಯಾಪ್ ನಲ್ಲೋ ಆವಾಗಾವಾಗ ತಮ್ಮ ಹವ್ಯಾಸದ ಹಿರಿಮೆ ತೋರಿಸಿಕೊಳ್ಳಲೋಸ್ಕರ ಹಾಕುವ ಹಕ್ಕಿಗಳ ಬಣ್ಣ ಬಣ್ಣದ ಛಾಯಾಚಿತ್ರಗಳಿಗೆ ತುಸು ವ್ಯ೦ಗ್ಯದ ಕಾಮೆ೦ಟ್ಸ್ ಹಾಕಿ ಅವರ ಸಿಟ್ಟಿಗೆ ಕೃಪಾಪಾತ್ರನಾಗಿದ್ದೇನೆ. ಇ೦ತಹ ಕಲಾತ್ಮಕವಾದ ಹವ್ಯಾಸದ ಬಗ್ಗೆ ನನಗಿರುವ ಉದಾಸೀನದ ಧೋರಣೆಗೆ ಧಿಕ್ಕಾರ ಮಾಡುತ್ತ ನನ್ನ ಆಪ್ತಮಿತ್ರನೊಬ್ಬ ತು೦ಬಾ ನೊ೦ದುಕೊ೦ಡು ರಾಹುಕಾಲದಲ್ಲಿ ನನಗೊ೦ದು ಕಾಲ್ ಮಾಡಿದ

" ಲೇ ನಿನೊ೦ದು ವೇಸ್ಟ್ ಬಾಡಿ, ಹಾಸ್ಪಿಟಲ್ಲಿನ ಏಸಿ ರೂಮಲ್ಲಿ ಕೂತ್ಕೊಂಡು ಕಾಮೆ೦ಟ್ಸ್ ಮಾಡುವುದು ತು೦ಬಾ ಇಜಿ. ನಾನಿಲ್ಲಿ ಒ೦ದೂವರೆ ಘ೦ಟೆ ಬಕ ಪಕ್ಷಿಯ೦ಗ ನಿಂತಗೊ೦ಡು ಎಪ್ಪೈತ್ತೈದು ಸಾವಿರ ರೂಪಾಯಿಯ ಈ ಕ್ಯಾಮೆರಾಕ್ಕೆ ಇಪ್ಪೈತ್ತೈದು ಸಾವಿರ ರೂಪಾಯಿಯ ಲೆನ್ಸ್ ಹಾಕಿ, ಮಟ ಮಟ ಮಧ್ಯಾಹ್ನದಾಗ ಇ೦ಥಾ ಅಪರೂಪದ ಹಕ್ಕಿದು ಫೋಟೊ ತೆಗೆದು ಫೇಸ್ಬುಕ್ ದಾಗ ಪೋಸ್ಟ್ ಮಾಡಿದ್ರ, ಬಡ್ಡಿ ಮಗನ ನೀನು ಅದರ ಬಗ್ಗೆ ಎಡವಟ್ಟು ಕಾಮೆ೦ಟ್ ಮಾಡ್ತಿಯಲ್ಲಾ!? ನಾನೇನು ಮಾಡಾಕತ್ತೀನಿ ಅ೦ಥ ನಿನಗೇನರ ಅರಿವೈತೆನು? ಎಷ್ಟು ಒಳ್ಳೋಳ್ಳೆ ಫೋಟೋ ಹಾಕೀನಿ ! ಅದರ ಬಗ್ಗೆ ವಿವರಾನೂ ಕೊಟ್ಟೀನಿ !  ಎಲ್ಲಾರೂ ಮೆಚ್ಚಿದ್ರ ನಿ೦ದೊ೦ದು ಬ್ಯಾರೆನ!!  ಹಿ೦ಗ್ಯಾಕ ಮಾಡಾಕತ್ತಿ ಲೇ!? " ಥೇಟ್.. ಪ್ರೇಯಸಿ ಕೈಕೊಟ್ಟ ಪ್ರೇಮಿಯ ವಿಷಾದದ ಧ್ವನಿಯಲ್ಲಿ ಗೋಗರೆದ. ಹವ್ಯಾಸವನ್ನು ಅಷ್ಟು ಗ೦ಭೀರವಾಗಿ ತೆಗೆದುಕೊ೦ಡು, ನನ್ನ ಪೋಲಿ ಕಾಮೆ೦ಟ್ಸುಗಳನ್ನು ಆವಶ್ಯಕ್ಕಿ೦ತ ಅತಿಯಾಗಿ ಮನಸ್ಸಿಗೆ ಹಚ್ಚಿಕೊ೦ಡಿದ್ದ ಅ೦ಥ ಕಾಣುತ್ತೆ.

" ಏಪ್ಪೋ  ಸ೦ತ್ಯಾ ( ಸ೦ತೋಷ ಅವನ ಹೆಸರು)……ಸಾಕ್ ಸುಮ್ನೀರು ,,, ಹಾಬಿ ಅ೦ಥ  ಹಾಬಿ!!.. ಹುಚ್ಚರ 'ಹಾಬಿ'ಲೇ ನಿಮ್ದು !  ಸಾವಿರಾರು ರೂಪಾಯಿಯ  ಕ್ಯಾಮೆರಾ ಬಗಲಾಗ ಹಿಡಕೊ೦ಡು ಹಿ೦ಗ ಬಿಸಲಾಗ ನಾಯಿ ಥರಾ ತಿರುಗಾಡಿತಿರಲ್ಲಾ, ಅದು ಒ೦ದು ಹಕ್ಕಿ ಫೋಟೊಗ,,, ಏನು ಪಾಯ್ದಾ ಲೇ!?  ಸುಮ್ನ ಇ೦ಟೆರ್ ನೆಟ್ ದಾಗ ಬೇಕಾದಷ್ಟು ಫೋಟೊಗಳ ಅದಾವ, ಅವನ್ನ ನೋಡಿದ್ರಾತು. ನ೦ಗ೦ತೂ ನಿನ್ನ ಪರಿಸ್ತಿತಿ ನೋಡಿ ನಗಬೇಕೋ, ಅಳಬೇಕೋ ಗೊತ್ತಾಗ೦ಗಿಲ್ಲ ಲೇ!" ………ಕೋಪಗೊ೦ಡ ಹುಲಿಯ ಬಾಲ ತಿರುವುವ ಬ೦ಢ ಧೈರ್ಯ ಮಾಡಿದೆ. 

"ಕತ್ತೆಗಳಿಗೇನು ಗೊತ್ತು ಮಾವಿನ ಹಣ್ಣಿನ ರುಚಿ? ನೀನು ಒ೦ದ್ಯಾಲ್ಡಸಲ ಪೋಟೋ ತೆಗಿ …ನಿ೦ಗ ಗೊತ್ತಾಗುತ್ತ. ನಿನ್ನ ಮು೦ದ ಹೇಳಿದ್ರೇನು ಬ೦ತು, ಕೋಣದ ಮು೦ದ ಕಿನ್ನರಿ ಭಾರಿಸಿದ೦ಗ. ನೀನಾಗೇ ಈ ಹಾಬಿದು ಸುಖ ಅನುಭವಿಸೋ ವರೆಗೂ, ನಿನ್ನ ಮು೦ದ ನಾನು ಎಷ್ಟು ಬೊಮ್ಡಾ ಹೊಡೆದ್ರೂ ವೇಸ್ಟು !" ಫೋನಲ್ಲೆ ಗುರುಗುತ್ತಾ…….ನನ್ನನ್ನು ಕತ್ತೆ-ಕೋಣದ೦ತ ಸು೦ದರ ಚುರುಕು ಪ್ರಾಣಿಗಳಿಗೆ ಹೋಲಿಸಿ, ನನ್ನ ಘನತೆ ಹೆಚ್ಚಿಸುವ ವ್ಯರ್ಥ ಪ್ರಯತ್ನ ಮಾಡಿದ.

" ಏನು ಮಹಾ ಅ೦ತ ಕಿಸಿತಿಯಪ್ಪಾ!! ಇದೇನೂ ದೊಡ್ದ ರಿಸರ್ಚೋ? ನೀನೇನು ನ್ಯಾಶನಲ್ ಜಿಯಾಗ್ರಫಿಕಲ್ ರಿಪೋರ್ಟ್ರ ರಾ ಇಲ್ಲಾ ಡಿಸ್ಕವರಿ ಚಾನೆಲ್ಲಿನ ಮಾಲಿಕನ ಅಳಿಯನೋ? ಒ೦ದೆರಡು ಪಕ್ಷಿ ಫೋಟೊ ಏನ್ ತೆಗೆದಿದಿಯಾ, ಅದಕ್ಕಿಷ್ಟು ಕೊ೦ಬು. ನಿನಕಿ೦ತಾ ಚೆ೦ದ ಇರೋ ಹಕ್ಕಿ ಫೋಟೋ ತೇಗಿತೀನಿ ನೋಡ್ಲೆ. ಅಲ್ಲಿವರೆಗೂ  ತಿ….  ಮುಚ್ಕೊ೦ಡು ಸುಮ್ನಿರು. ಬರೀ ಫೋಟೋ ಅಲ್ಲಲೇ, ನೀ ನೋಡಿದ್ದಕ್ಕಿ೦ತಾ ಜಾಸ್ತಿ ವರೈಟಿ ಪಕ್ಷಿಗಳ ಫೋಟೋ ಹೊಡೆದು ನಿನ್ನ ಹೊಟ್ಟೆ ಉರಿಯುವ೦ಗ ಮಾಡ್ತೀನಿ. ಇದುವರೆಗೂ ಇದರ ಬಗ್ಗೆ ತಲೆ ಕೆಡೆಸಿಕೊ೦ಡಿಲ್ಲ, ಈಗ ನೀ ಹಿ೦ಗ ನನಗೆ ಕೆಣಕಾಕತ್ತಿ ಅ೦ದ್ರ, ಇದ್ರಾಗ ಒ೦ದು ಕೈ ಹಾಕೇ ಬಿಡ್ತೀನಿ!! ನಾಳೆ ನನ್ನ ಫೋಟೋ ಮು೦ದ ನಿನ್ನವು ಸಪ್ಪೆ ಅನ್ಸಿದ್ರ ನನ್ನ ಮನಸ್ಸಿನಾಗ ಬೈಬೇಡ " …ಯಾವುದೋ ಐತಿಹಾಸಿಕ ನಾಟಕದ ಸಿಟ್ಟು ಬ೦ದ ಖಳನಾಯಕನ ದಾಟಿಯಲ್ಲಿ  'ಕೇಜ್ರಿವಾಲ್' ಪ್ರತಿಜ್ಞೆ ಮಾಡಿ, ಮೊಬೈಲಿನ ಕಾಲ್ ಅನ್ನು ನಾಜೂಕಾಗಿ ಕಟ್ ಮಾಡಿದೆ. ಸಿಟ್ಟು ನನಗೂ ಬರುತ್ತದೆ ಎ೦ದು ತೋರಿಸಲು ಈ ರೀತಿ, ಫೋನಲ್ಲಿ ಮಾತಾಡುವಾಗ, ಸ೦ಭಾಷಣೇ ತಾರಕಕ್ಕೇರಿದಾಗ, ಕರೆಯನ್ನು ಕಟ್ ಮಾಡುವುದರಲ್ಲಿ ಒ೦ಥರಾ ಗೆದ್ದ ಮನಸ್ಥಿತಿ ಕೊಡುವ ಉನ್ಮಾದವಿದೆ ಅ೦ತ ಮತ್ತೊಮ್ಮೆ ಅರಿವಾಯಿತು. (ಕೇಜ್ರಿವಾಲ ಪ್ರತಿಜ್ಞೆ : ಪ್ರತಿಜ್ಞೆಮಾಡಿದ ನ೦ತರ ಸ್ವಲ್ಪದಿನಗಳಲ್ಲಿಯೇ, ಅದನ್ನು ಮರೆತು  U turn ತೆಗೆದುಕೊಳ್ಳುವುದು).

ಪ್ರತಿಜ್ಞೆಯೆನೋ ಜೋಶ್ ಅಲ್ಲಿ, ಹೋಶ್ ಇಲ್ಲದೇ ಮಾಡಿದ್ದೆ. ಅದಕ್ಕೆ ಎಳ್ಳಷ್ಟು ಬೆಲೆ ಬರಬೇಕ೦ದ್ರೆ ಶಾಸ್ತ್ರಕ್ಕಾಗೋವಷ್ಟು ಒ೦ದಿಷ್ಟು ಹಕ್ಕಿಗಳನ್ನು ನೋಡಿ, ನಾಮ್ ಕಾ ವಾಸ್ತಾ ಒ೦ದಿಷ್ಟು ಫೋಟೋ ತೆಗೆದು ತೋರಿಸಿದರಾಯಿತು. ಇ೦ಟೆರನೆಟ್ ಅ೦ತೂ ಇದ್ದೆ ಇದೆ, ಗೂಗಲ್ ರಾಣಿಯ  ಸಹಾಯ ಪಡೆದು ನನಗೇನೂ ಬೇಕೋ ಅದರ ಮಾಹಿತಿ ಪಡೆದರಾಯಿತು. ಪಕ್ಷಿ-ವೀಕ್ಷಣೆಗೆ ಅದೆನೂ ಬೇಕೋ…..ಅದೆಲ್ಲರ ಬಗ್ಗೆ ಸ್ವಲ್ಪ ಜ್ಞಾನ ಪಡೆದು, ನ೦ತರ ವೀಕ್ಷಣೆಗೆ ಹೋಗ ಬೇಕೆ೦ದು ತೀರ್ಮಾನಿಸಿದೆ.

ಪಕ್ಷಿಗಳನ್ನು ನೋಡಿ ಅರಿಯಬೇಕೆ೦ದರೆ ನಮಗೆ ಮೊದಲು ಬೇಕಾಗಿರುವುದು ಒ೦ದು ದುರ್ಬಿನ್ನು ಮತ್ತು ಅವುಗಳ ಅ೦ದ-ಚೆ೦ದ ಸೆರೆಹಿಡಿಯಲೊ೦ದು  ಕ್ಯಾಮೆರ. ಅ೦ತರ್ಜಾಲದ ಹವ್ಯಾಸಿ ತಾಣಗಳು, ಪಕ್ಷಿ-ವೀಕ್ಷಣೆಗೆ ಬೇಕಾದ ಮಾಹಿತಿಯನ್ನು, ನನ್ನ 'ತಾಳ್ಮೆಯಿ೦ದ ಓದುವ ಸಾಮರ್ಥ್ಯ' ಮತ್ತು ಅದನ್ನು 'ಅರಗಿಸಿಕೊಳ್ಳುವ ಗ್ರಹಣಶಕ್ತಿ'ಗಿ೦ತ ಹತ್ತು ಪಟ್ಟು ಅತ್ಯಧಿಕವಾಗಿ ತ೦ತಮ್ಮ ಪುಟಗಳಲ್ಲಿ ತು೦ಬಿದ್ದರು. ಈ ಹುಚ್ಚರ ಹಾಬಿಗೆ ಬೇಕಾದ ಕನಿಷ್ಟತರ ಮಾಹಿತಿಯನ್ನು ಒ೦ದೆರಡುಸಲ ಓದಿ, 

"ಇಷ್ಟೇನಾ !!….ಇದಕ್ಯಾಕೆ ಇವರಿಷ್ಟು ತಲೆ ಕೆಡಸಿಕೊ೦ಡಾರೋ ??!" ಸ್ವಗತದಲ್ಲಿ ವ್ಯ೦ಗವಾಡಿದೆ.

ಒ೦ದು ದುರ್ಬೀನು ಮತ್ತು ಒ೦ದು ಕ್ಯಾಮೆರ.

ಕಳೆದ ಮಾರಿಯಮ್ಮನ ಜಾತ್ರಿಯಲ್ಲಿ ನನ್ನ ಮಗನಿಗೆ ಕೊಡಸಿದ ದುರ್ಬೀನು ಇದೆ ಮತ್ತು ಮೂರ್ನಾಲ್ಕು ವರ್ಷ ಹಳೆಯದಾದ ೩.೨ ಮೆಗಾಪಿಕ್ಸೆಲ್ ನ ಡಿಜಿಕ್ಯಾಮ ಒ೦ದಿದೆ. ಎರಡನ್ನೂ ಪ್ರೀತಿಯಿಂದ ಅವುಗಳ 'ಅನಾಥಾಶ್ರಮ'ದಿ೦ದ ಹೊರತೆಗೆದು, ಮೇಲಿದ್ದ ಧೂಳನ್ನು ವಾತ್ಸಲ್ಯದಿ೦ದ ಒರೆಸಿ, ನನ್ನ ಮರುದಿನ ಮು೦ಜಾವಿನ ಪಕ್ಷಿನೋಟಕ್ಕೆ ಅಣಿಗೊಳಸಿದೆ. ಮರುದಿನವೇ ಗೊತ್ತಾಯ್ತು ಇವುಗಳ ಅರ್ಹತೆ. ಅದರ ಬಗ್ಗೆ ಮು೦ದಿನ ಕ೦ತಿನಲ್ಲಿ ಹೇಳುವೆ. 

ನಾನಿರುವ ಸ್ಥಳ ಕೇರಳದ ವಾಯನಾಡ್, ಒ೦ಥರದ ಗಿರಿಧಾಮ. ಮು೦ಜಾವಿನಲ್ಲಿ ಮ೦ಜು ಆಕ್ರಮಿಸಿ, ಚಳಿ ಧಾಳಿ ಮಾಡಿ , ಕ೦ಬಳಿಗಳಲ್ಲಿ ಬೆಚ್ಚಗೆ ಶರಣಾಗತರಾದ ನಮಗೆ ಮನೆಹೊರಗೆ ಕಾಲಿಡಲು ಅಸಾಧ್ಯವಾಗುವ೦ತೆ ಮಾಡುತ್ತದೆ. ಇದು ಮನುಷ್ಯರೆ೦ಬ ನಾಜೂಕು ಜಾತಿಯ ಪ್ರಾಣಿಗಳಿಗೆ ಮಾತ್ರ ಅನ್ವಯವಾಗುತ್ತದೆ. ಬೇರೆ ಪ್ರಾಣಿ-ಪಕ್ಷಿಗಳೆಲ್ಲ ಒ೦ದೆರಡು ಘ೦ಟೆ ಮು೦ಚೇನೆ ಎದ್ದು ದಿನದ ತೈಯಾರಿ ನಡೆಸಿಕೊ೦ಡಿರುತ್ತವೆ. ಪಕ್ಷಿಗಳನ್ನು ನೋಡಬೇಕೆ೦ದರೆ ಮು೦ಜಾವಿನ ಸಮಯ ತು೦ಬಾ ಪ್ರಶಸ್ತವಾದ ವೇಳೆ ಅ೦ತ ಮಾಹಿತಿಜಾಲದಲ್ಲಿ ಮನ ಮುಟ್ಟುವ ಹಾಗೆ ಬರೆದಿದ್ದಾರೆ. ಪಕ್ಷಿಗಳು ಬೆಳಿಗ್ಗೆ ಬೇಗನೆ ಎದ್ದು ದಿನ ನಿತ್ಯದ ಆಹಾರ ಹುಡುಕಾಟಕ್ಕೆ ಅಣಿಯಾಗುತ್ತವೆ. ತಮ್ಮ ಗೂಡಿನಿ೦ದ ಹೊರಬ೦ದು ಬಲಿತ ಹಣ್ಣನ್ನೋ, ಹೂವಿನ ಮಕರ೦ದವನ್ನೋ  ಇಲ್ಲ್ಲಾ ಕೆಳಗೆ ಬಿದ್ದ ಬೀಜಗಳನ್ನೋ ಹೆಕ್ಕಿ ತಿನ್ನುವುದನ್ನು ನೋಡಬಹುದೆ೦ದು, ಮತ್ತು ಅವುಗಳ ಆಹಾರ ಅನ್ವೇಷಣೆಗೆ ಭಗ್ನವಾಗದ ರೀತಿಯಲ್ಲಿ ಅವುಗಳನ್ನು ನೋಡಿ, ಆನ೦ದಿಸಿ,ಕ್ಯಾಮೆರದಲ್ಲಿ ಸೆರೆಹಿಡಿಯಿರಿ ಅ೦ತ ಹಿತವಾದ ಸಲಹೆಗಳನ್ನು ಪಕ್ಷಿವೀಕ್ಷಣೆಗೆ ತಯಾರಾದ ಜನರಿಗೆ ಹಿತವಾಗಿ ಕೊಡಲು ಮರೆಯುವುದಿಲ್ಲ. 

ಎಲ್ಲಾ ಸರಿ, ಆದ್ರೆ ಈ ಹಾರಾಡುವ ವಿಹಗಗಳು ( ವಿಹ೦ಗಮ ನೋಟ ಅ೦ದರೆ ಪಕ್ಷಿನೋಟ, ಪಕ್ಷಿಗಳಿಗೆ ವಿಹಗ, ಖಗ ಅ೦ತೆಲ್ಲ ಕನ್ನಡದಲ್ಲಿ ಶಬ್ಧಗಳಿವೆ ) ಬೆಳಿಗ್ಗೆ ಬೆಳಿಗ್ಗೆ  ಕೂಗುತ್ತಾ, ಹಾಡುತ್ತಾ, ಮನಗಿ೦ಪಾಗುವ೦ತೆ ಧಾ೦ಧಲೆ ಮಾಡುತ್ತ, ಕಲರವ ಯಾಕೆ ಮಾಡುತ್ತವೆ !!? 
ಸುಮ್ನೆ ಎದ್ದು, ಮುಖ ತೊಳ್ಕೊ೦ಡು, ಚಾ ಕುಡ್ದು,,,ಕೆಲಸಕ್ಕ ಹೋದ್ರ ಸಾಕು. ಈ ಥರ ಹಾಡಿ ಎಲ್ಲರನ್ನೂ ಎಬ್ಬಿಸೋ ಸಾರ್ವಜನಿಕ ಅಲಾರಾಮ್ ಯಾಕಾಗ್ಬೇಕು? 

ಪಕ್ಷಿಗಳು ತಮ್ಮ ಧ್ವನಿ ಪೆಟ್ಟಿಗೆಯಿ೦ದ ಥರ ಥರದ ಧ್ವನಿಗಳನ್ನು ಸ೦ದರ್ಭಗನುಸಾರವಾಗಿ ಹೊರಡಿಸಬಲ್ಲವು, ಹಕ್ಕಿ ಹಾಡೂ ಸಹ ಬಗೆ ಬಗೆಯದಾಗಿರುತ್ತದೆ. ಕೆಲವೊಮ್ಮೆ ಧ್ವನಿಯನ್ನು ಸ್ವಲ್ಪವೆ ಹೊರಡಿಸಿ ಮಿನಿ ಗಾನ ಹಾಡಬಲ್ಲವು, ಇನ್ನು ಕೆಲವೊಮ್ಮೆ , ಮೂಡ್ ಬ೦ದಾಗ ರಾಗವಾಗಿ ಶಾಸ್ತ್ರೀಯ ಸ೦ಗೀತ ಹಾಡಬಲ್ಲವು. ಹಕ್ಕಿಯ ಹಾಡೆ೦ದರೆ ಥಟ್ಟನೆ ನೆನಪಾಗುವುದು ಕೋಗಿಲೆಯ ಕುಹೂ ಕುಹೂ, ಕೋಗಿಲೆಯ೦ತೆಯೆ ನೂರಾರು ಹಕ್ಕಿಗಳು ಇ೦ಪಾಗಿ ಹಾಡಬಲ್ಲವು. ಹಕ್ಕಿಗಳ ಧ್ವನಿ ಮತ್ತು ಹಾಡುಗಳ ಬಗ್ಗೆ ತು೦ಬಾ ಜನರು ಅನೇಕಾನೇಕ ರೀತಿಯಲ್ಲಿ ಸ೦ಶೋಧನೆ ಮಾಡಿ, ತರ ತರಹದ ಲೇಖನಗಳನ್ನು, ಪುಸ್ತಕಗಳನ್ನು ಬರೆದಿದ್ದಾರೆ. 

ಪಕ್ಷಿ-ವೀಕ್ಷಣೆ ಬರೀ ಕಣ್ಣಿನ ಕೆಲಸವಲ್ಲದೇ , ಕಿವಿಯೆ೦ಬ ಇ೦ದ್ರಿಯಕ್ಕೂ ಸ೦ಭ೦ದಪಟ್ಟಿದ್ದು  ಎ೦ಬುದು ಈ ಲೇಖನಗಳಿ೦ದ ಮನದಟ್ಟಾಯಿತು. ಬರೀ ಹಕ್ಕಿ ಚ೦ದ ಐತಿ ಅ೦ಥ ಬಾಯಿ ಬಿಟಕೊ೦ಡು ನೋಡಬಾರದು, ಅದರ ಜೊತೆ ಅದೆ೦ಥಹ ದ್ಚನಿ ಹೊರಡಿಸುತ್ತಿದೆ ಅ೦ಥ ಕಿವಿಯಲ್ಲಿ ಹತ್ತಿ ಇದ್ದರೆ ತೆಗೆದು, ಧ್ವನಿ ಬ೦ದ ಕಡೆ ಕಿವಿ ಹೊರಳಿಸಿ ಕೇಳಬೇಕೆ೦ದು ನಿರ್ಧರಿಸಿ , ಮತ್ತೇನಾದರೂ ಬೇರೆ ಬೇರೆ ಇ೦ದ್ರಿಯಗಳನ್ನು ಪಕ್ಷಿ-ವೀಕ್ಷಣೆಗೆ ಉಪಯೋಗಿಸಬಹುದಾ ? ಅ೦ತ ಜಿಜ್ಞಾಸೆ ಬ೦ದರೂ, ಸಧ್ಯಕ್ಕೆ ಕಣ್ಣು-ಕಿವಿ ಸಾಕೆ೦ದು ತೀರ್ಮಾನಿಸಿ ನನಗೆ ನಾನೇ ಮುಗುಳ್ನಕ್ಕೆ. ಹೆ೦ಡತಿ, ನನ್ನ ಇ೦ತಹ ಮನಸ್ಸಿನ ಹುಚ್ಚುಗಳಿಗೆ, ನಾನೆ ಪ್ರತಿಕ್ರಿಯಿಸಿ,…ಕೆಲವೊಮ್ಮೆ ಮುಗುಳ್ನಗುವುದು, ಕೆಲವೊಮ್ಮೆ ಜೋರಾಗಿ ನಗುವುದು, ಇನ್ನು ಕೆಲವೊಮ್ಮೆ ತಲೆ ಕೆರೆದುಕೊಳ್ಳುವುದು,, ಮು೦ತಾದ ಹಾವಭಾವಗಳನ್ನು  ಸುಮಾರು ಸಾರಿ ನೋಡಿದ್ದರಿ೦ದ, ಕಾರಣ ಕೇಳದೇ ತಲೆಯಾಡಿಸಿ ತನ್ನ ಕೆಲಸದಲ್ಲಿ ಮಗ್ನಳಾದಳು.

ಹಕ್ಕಿಗಳ ಧ್ವನಿಗಳ ಮೇಲಿರುವ ಲೇಖನಗಳ ಭಟ್ಟಿ ಇಳಿಸಿ, ಮುಖ್ಯವಾದ ಕೆಲವು ಅ೦ಶಗಳನ್ನು ತಿಳಿಯಪಡಿಸುತ್ತೇನೆ. ಹಕ್ಕಿಗಳ ಮಾತು, ಕೂಗು, ಹಾಡು, ಕಲರವ, ಟುವ್ವಿ-ಟುವ್ವಿ, ಚಿಲಿಪಿಲಿ ………….ಈ ತರಹದ ಬಗೆಯವು

೧. ಅಪಾಯದ ಕರೆಗಳು : ರಾತ್ರಿ ಪಾಳೆಯದ ಗುರ್ಖಾ ಉದೂವ ಶಿಲ್ಲೆ ಕೆಲವೊಮ್ಮೆ, ಜರೂರಿ ಕೆಲ್ಲಸಕ್ಕೆ ಅವೇಳೆಯಲ್ಲಿ ಎದ್ದ ನಮಗೆ ಕೇಳಿಸಿರಬಹುದು. ಪಕ್ಷಿ ಸ೦ಕುಲದಲ್ಲಿ ಸಮಯ ಸಾ೦ಧರ್ಬಿಕವಾಗಿ ಈ ಗುರ್ಖಾದ ಕೆಲಸ ಗ್ರೂಪಿನ ಎಲ್ಲ ಪಕ್ಷಿಗಳೂ ನಿಭಾಯಿಸುತ್ತವೆ. ಅಪಾಯದ ಸುಳಿವು ಸ್ವಲ್ಪ ಸಿಕ್ಕರೂ ಸಾಕು, ತಮ್ಮ ಧ್ವನಿ ಪೆಟ್ಟಿಗೆಯನ್ನು ಶ್ರುತಿಸಿ, ಹರಿತವಾದ ಉಚ್ಛ ಸ್ವರದಲ್ಲಿ ಕೂಗಿ ಗ್ರೂಪಿನ ಬೇರೆ ಪಕ್ಷಿಗಳನ್ನು ಸಕಾಲದಲ್ಲಿ ಎಚ್ಚರಿಸುತ್ತವೆ. ಅಪಾಯದ ಈ ಕರೆಗಳು ಏರು ಧ್ವನಿಯಲ್ಲಿದ್ದರೂ ಅಲ್ಪಕಾಲದವುಗಳು, ಮತ್ತು ತು೦ಬಾ ದೂರದ ವರೆಗೆ ಕೇಳಿಸುವ೦ತಹುಗಳು. ಬಲಿಷ್ಟವಾದ ಕೆಲವು ಪಕ್ಷಿಗಳು ಇತರ ಪಕ್ಷಿಗಳನ್ನು ಹೆದರಿಸಲೂ ಸಹ ಈ ತರಧದ ಧ್ವನಿಗಳನ್ನು ಹೊರಡಿಸುವವು. ಈ ಕೆಳಗಿನ ಯು-ಟೂಬ್ ವಿಡಿಯೋದಲ್ಲಿ 'ರಾಬಿನ್' ಅನ್ನುವ ಹಕ್ಕಿಯು ಬೆಕ್ಕನ್ನು ಕ೦ಡು ಹೇಗೆ ಅಪಾಯದ ಕರೆಗಳನ್ನು ಕೊಟ್ಟು ಇತರರಿಗೆ ಎಚ್ಚರಿಸುತ್ತದೆ ಅನ್ನುವುದನ್ನು ಸೆರೆಹಿಡಿಯಲಾಗಿದೆ.

೨.ಅಳಲಿನ ಇಲ್ಲಾ ಗೋಳು ಕರೆಯ ಕೂಗುಗಳು : ಮಾತು ಬರದ ಕ೦ದಮ್ಮಗಳು ಅಮ್ಮನ ಗಮನ ಸೆಳೆಯಲು ಒ೦ದೋ ಎರಡೋ ಶಬ್ದಗಳ ಧ್ವನಿ ಹೊರಡಿಸುವುದನ್ನು ಕ೦ಡಿದ್ದೇವೆ. ಅದೇ ರೀತಿ ಮರಿ ಪಕ್ಷಿಗಳು ಈ ರೀತಿ ಕಿಚಿ-ಕಿಚಾಯಿಸುವ, ಅಳುವ ತರಹದ ಶಬ್ಧಗಳನ್ನು ಅಮ್ಮನ ಗಮನ ಸೆಳೆಯಲು ಮಾಡುತ್ತವೆ. ಅದರ ಜೊತೆಗೆ ತಮ್ಮ ಪುಕ್ಕಗಳನ್ನು ಸಿಟ್ಟಿನಲ್ಲಿ ಮತ್ತು ಸ್ಪೀಡಿನಲ್ಲಿ ಕೆಲವೊಮ್ಮೆ ಹಾರಾಡಿಸುವವು,,, ಥೇಟ್ ಮಕ್ಕಳ ಥರ..ಅಳುವಾಗ…..ಕೈಕಾಲು ಜೋರಾಗಿ ಬಡಿಯುವ ಥರ. ಕೆಳಗಿನ ವಿಡಿಯೋ ದಲ್ಲಿ, ಪುಟ್ಟ ಹಕ್ಕಿ ಮರಿಯ ಈ ತರಹದ ಅಳಲಿನ ಕೂಗನ್ನು ಕಾಣ ಬಹುದು.

೩.ಸ೦ಪರ್ಕದ ಕರೆಗಳು : ನಮಗೆಲ್ಲಾ ಮೊಬೈಲ್ ಇವೆ ಬಿಡಿ, ಯಾರನ್ನಾದರೂ ಸ೦ಪರ್ಕಿಸಬೇಕೆ೦ದರೆ ಮೊಬೈಲ್ ನಲ್ಲಿ ಕಾಲ್ ಮಾಡಿದರಾಯಿತು. ಪಕ್ಷಿಗಳು ಸಮೂಹದಲ್ಲಿ ಹಾರಾಡುವಾಗ, ತಮ್ಮ ತಮ್ಮಲ್ಲೇ ಮಾತನಾಡಲು ಈ ತರಹದ ಮೀಡಿಯಮ್ ಸ್ವರದ ಧ್ವನಿಗಳನ್ನು ಹೊರಡಿಸುತ್ತವೆ. ಗ್ರೂಪಿನಲ್ಲಿ ತಮ್ಮ ಗೆಳೆಯ ಗೆಳತಿಯರನ್ನು 'ನನ್ನ ಮರೆಯಬೇಡ'  ಅ೦ತ ಹೇಳಲೂ ಈ ತರಹದ ಧ್ವನಿಗಳನ್ನು ಹೊರಡಿಸುತ್ತವೆ. ಹಾಗೆ, ಆಹಾರದ ನಿಧಿ ಕ೦ಡಾಗ ಬೇರೆ ಸದಸ್ಯರಿಗೆ ಈ ಕರೆಗಳಿ೦ದ ತಿಳಿಯಪಡಿಸುತ್ತವೆ. ಈ ವಿಡಿಯೋದಲ್ಲಿ ಅತ೦ಹ ಕರೆಗಳನು ಕೇಳಬಹುದು.

೪. ಹಕ್ಕಿ ಹಾಡುಗಳು : ತು೦ಬಾ ವಿಶಿಷ್ಟವಾದವುಗಳು ಮತ್ತು ನಮಗೆಲ್ಲಾ ತು೦ಬಾ ಪರಿಚಯವಿರುವ೦ತಹಗಳು ಈ ಧ್ವನಿಗಳು. ಕೋಗಿಲೆಯ ಇ೦ಪಾದ ಸ೦ಗೀತಕ್ಕೆ ನಾವೆಲ್ಲ ಮರುಳಾಗಿದ್ದೇವೆ. ಈ ತರಹದ ಧ್ವನಿಗಳು ತು೦ಬಾ ಉದ್ದವಾದ, ವಿವರವಾದ ಮತ್ತು ತು೦ಬಾ ಕಿವಿಗಿ೦ಪಾದವುಗಳು. ಪಕ್ಷಿಗಳು ಈ ತರಹದ ಹಾಡುಗಳನ್ನು  ನಲ್ಲ/ನಲ್ಲೆಯರನ್ನು ಕರೆಯಲು  ಇಲ್ಲಾ ತಮ್ಮ ಸಾಮ್ರಾಜ್ಯದ ಗಡಿಯನ್ನು ಸಾರಲು, ಇಲ್ಲಾ ಬೇರೆ ಅಪಾಯಕಾರಿ ಪಕ್ಷಿಗಳನ್ನು ದೂರ ಓಡಿಸಲು ಬಳಸುತ್ತವೆ. ಕೆಲವೊಂದು ಪಕ್ಷಿಗಳು ಬೆಳಿಗ್ಗೆ ಬೇರೆ ರಾಗದ ಹಾಡು ಹಾಡಿದರೆ ಸ೦ಜೆ ಬೇರೆ. ಈ ವಿಡಿಯೋದಲ್ಲಿ ಹಕ್ಕಿ ಹಾಡಿನ ಝಲಕ್ ಇದೆ.

೫.ಧ್ವನಿಪೆಟ್ಟಿಗೆಯಲ್ಲದೇ, ಶರೀರದ ಇತರ ಭಾಗದಿ೦ದ ಹೊರಡಿಸುವ ಧ್ವನಿಗಳು : ಇವು ಪುಕ್ಕ ಬಡಿಯುವ ಧ್ವನಿಯಾಗಿರಬಹುದು ಇಲ್ಲಾ ಕೊಕ್ಕು ಕುಕ್ಕುವ ಧ್ವನಿಯಾಗಿರಬಹುದು. ಇ೦ಥಹ ಧ್ವನಿಗಳೂ ಪಕ್ಷಿಗಳ ಬಗ್ಗೆ ತಿಳಿದುಕೊಳ್ಳಲು ಸಹಾಯವಾಗುತ್ತವೆ.

ಬರಿ ಚಿಲಿಪಿಲಿ ಇಲ್ಲಾ ಟುವ್ವಿ ಟುವ್ವಿ ಅಥವಾ ಮಾಕ್ಸಿಮಮ್ ಕುಹೂ ಕುಹೂ ದಲ್ಲೆ ಪಕ್ಷಿಗಳ ಧ್ವನಿಗಳನ್ನು ಅರಿತ ನನಗೆ, ಈ ಲೇಖನಗಳಿ೦ದ, ಅವುಗಳ ಬಗೆಗೆ ಹೊಸದೊ೦ದು ಲೋಕವನ್ನೇ ತೆರೆದಿಟ್ಟಿತು. ಆದರೂ, ಇದೊ೦ದು ತಲೆಕೆಡೆಸಿಕೊಳ್ಳುವಷ್ಟು ದೊಡ್ದ ಹವ್ಯಾಸವಾ!? ಅಷ್ಟೊ೦ದು ದುಬಾರಿ ಬೆಲೆಯ ಕ್ಯಾಮೆರಾ, ಅದಕ್ಕೊ೦ದುವ ಲೆನ್ಸು ಅದರ ಜೊತೆಗೆ ಬೆಲೆಕಟ್ಟಲಾಗದ ನಮ್ಮ ಟೈಮು, ಇವೆಲ್ಲಗಳನ್ನು ಬ೦ಡವಾಳವಾಗಿಸಿ ಹಕ್ಕಿಗಳನ್ನು ನೋಡಿ ಅವುಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ಮತ್ತು ಅದರ ಬಗ್ಗೆ ಡೌಲು ಮಾಡುವುದು ಸಧ್ಯಕ್ಕೆ ನನಗೆ ಅರಗಿಸಿಕೊಳ್ಳಲಾಗದ ತುತ್ತಾಗಿತ್ತು. 

******

ಮು೦ದಿನ ಕ೦ತು :  ಮೊದಲ ಚು೦ಬನ ದ೦ತ ಭಗ್ನ   … 'ಪಕ್ಷಿ ವೀಕ್ಷಣೆ-ಭಾಗ ೨"

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

10 Comments
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
10 years ago

ಪಕ್ಷಿವೀಕ್ಷಣೆ ನಿಜವಾಗಿಯೂ ಅಧ್ಭುತ-ಅನನ್ಯ ಅನುಭವ ನೀಡುತ್ತದೆ.
ಪಕ್ಷಿವೀಕ್ಷಣೆಯ ನಿಮ್ಮ ಹಾಬಿ ಬೆಲೆಕಟ್ಟಲಾಗದ ಟೈಮುನ್ನು
ಹಾಳುಮಾಡುತ್ತದೆ ಎಂಬುದು ತಪ್ಪು. ಪಕ್ಷಿವೀಕ್ಷಣೆಯಿಂದ
ಬೆಲೆಕಟ್ಟಲಾಗದ ಆನಂದವೂ ಸಿಗುತ್ತದೆ.
ಹೆಚ್ಚಿನ ಮಾಹಿತಿಗಾಗಿ: ಸಲೀಂ ಆಲಿಯವರ ಪುಸ್ತಕ ಹಾಗೂ
ಪೂಚಂತೇಯವರು ಬರೆದ ಪುಸ್ತಕಗಳನ್ನು ನೋಡಿ.
ನಿಮ್ಮ ಪಕ್ಷಿವೀಕ್ಷಣೆ ಮತ್ತು ಬರವಣಿಗೆ ಕಾರ್ಯಕ್ರಮ ಸಾಂಗವಾಗಿ ನೆರವೇರಲಿ.

rajshekhar
rajshekhar
10 years ago

Adarsh…..like santosh I too had similar experience,one of seniour collegue hd commentd ironically u are one who post crows and sparrow n Facebook…i felt so bad….anyway the way u descrbd abt diff voices of birds,really informtive,u really TK good pic too…so kp writng and dnt leave birdng frnd…all the best.

ಆದರ್ಶ
ಆದರ್ಶ
10 years ago
Reply to  rajshekhar

ರಾಜ್………ಮು೦ದಿನ ಕ೦ತುಗಳಲ್ಲಿ ನನ್ನ ಅನುಭವಗಳ ಜೊತೆಗೆ, ನಾ ತೆಗೆದ ಫೋಟೋಗಳು ಮತ್ತು ಸ೦ಕ್ಷಿಪ್ತ ಮಾಹಿತಿಗಳು ಇರುತ್ತವೆ. journey has just begun. 

thanks for reading and replying

ಆದರ್ಶ
ಆದರ್ಶ
10 years ago

ಧನ್ಯವಾದಗಳು ಅಖಿಲೇಶ್ ಅವರಿಗೆ.
ಮು೦ದಿನ ಕ೦ತುಗಳಲ್ಲಿ , ನೀವು ಹೈಲೆಟ್ ಮಾಡಿದ ಅ೦ಶಗಳು ಲೇಖನದಲ್ಲಿ ಕಾಣಿಸಿಕೊಳ್ಳುತ್ತವೆ. 
ಪಕ್ಷಿ ವೀಕ್ಷಣೆ, ನನ್ನ ತಪ್ಪು ಕಲ್ಪನೆಗಳನ್ನು ಹೇಗೆ ಸರಿ ಪಡಿಸಿ ಅದರ ಬಗ್ಗೆ ಒಲವು ತೋರುವ೦ತೆ ಮಾಡಿತು ಅನ್ನುವುದರ ಬಗ್ಗೆ, ಜೊತೆಗೆ ಪಕ್ಷಿಗಳು ನಮಗೆ ಕೊಡುವ ಪಾಠಗಳ ಬಗ್ಗೆ ನನ್ನ ಶೈಲಿಯಲ್ಲೇ ಬರೆಯುತ್ತಿದ್ದೇನೆ. ಬರೆಯಲು ಹುರಿದು೦ಬಿಸಿದ್ದಕ್ಕೆ ಧನ್ಯವಾದಗಳು.

ವನಸುಮ
10 years ago

ಉತ್ತಮ ಬರಹ. ನಿಮ್ಮ ಈ ಹವ್ಯಾಸ ಬರೀ ಕೇಜ್ರೀವಾಲ್ ಪ್ರತಿಜ್ಞೆಯಾಗದೇ ನಿರಂತರ ಮುಂದುವರೆಯಲಿ. ಇನ್ನಷ್ಟು ಬರಹಗಳ ನಿರೀಕ್ಷೆಯಲ್ಲಿ ಇರುತ್ತೇವೆ. ಧನ್ಯವಾದಗಳು.

ಶುಭವಾಗಲಿ.

ಆದರ್ಶ
ಆದರ್ಶ
10 years ago

ಧನ್ಯವಾದಗಳು ವನಸುಮ, ಬರಹ ಮೆಚ್ಚಿದ್ದಕ್ಕೆ ಮತ್ತು ಎಚ್ಚರಿಸಿದ್ದಕ್ಕೆ. ಈ ಹವ್ಯಾಸ,,,ದಿನದಿ೦ದ ದಿನಕ್ಕೆ , ಆಸಕ್ತಿಯಿ೦ದ ಹುಚ್ಚುತನಕ್ಕೆ ಮಾರ್ಪಾಡಾಗುತ್ತಿದೆ. ಕಲಿಯುವುದು ಇನ್ನೂ ತು೦ಬಾ ಇದೆ. ಇದೊ೦ದು ಮಹಾಸಾಗರ.

Guruprasad Kurtkoti
10 years ago

ಆದರ್ಶ, ತುಂಬಾ ಚೆನ್ನಾಗಿದೆ! ವಿಹಗ ವೀಕ್ಷಕರಿಗೊಂದು ದಾರಿ ದೀಪ ಇದಾಗಲಿ… ಅಂದ ಹಾಗೆ ವಿಹಗವೆನ್ನುವ ಚೆಂದದ ಪದದ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು!

ಆದರ್ಶ
ಆದರ್ಶ
10 years ago

ಧನ್ಯವಾದಗಳು ಗುರು. ವಿಹಗ , ನನಗೂ ಗೊತ್ತಿರಲಿಲ್ಲ, ಜಿಜ್ನಾಸೆಯಿ೦ದ ಶಬ್ಧಕೋಶ ನೋಡಿದಾಗ ಗೊತ್ತಾಯ್ತು. 

Santosh
Santosh
10 years ago

Adarshanna, WOOOW!!!! nangoo inspiration barakattaiti….inn myaga ellera hodra nanoo pakshi nodaka/avagala matu kelaka shuru madtini…thanks for this inspiration:-)

10
0
Would love your thoughts, please comment.x
()
x