ಪಂಜು-ವಿಶೇಷ

ಹೀಗೋರ್ವ ಹಸಿರು ಸ್ವಾಮೀಜಿ:ಪ್ರಸಾದ್ ಎಸ್

 

ಒಂದು ಸಮೃದ್ದವಾದ ಅರಣ್ಯವನ್ನು ನಾಶ ಮಾಡಲು ಮಾನವನಿಗೆ ಕೇವಲ ಕೆಲವು ಸಮಯ ಸಾಕು. ಆದರೆ ಒಂದು ಸಮೃದ್ದವಾದ ಅರಣ್ಯ ಬೆಳೆಸುವುದು ಒಂದು ಸಾಧನೆಯೇ ಸರಿ, ಅದಕ್ಕೆ ದಶಕಗಳೇ ಬೇಕು. ಅರಣ್ಯವನ್ನು ಬೆಳೆಸುವುದು ಸುಲಭದ ಮಾತಲ್ಲ. ಅದಕ್ಕೆ ಅಗಾಧವಾದ ಪರಿಶ್ರಮ ಬೇಕು, ಸುಮ್ಮನೆ ಒಂದಷ್ಟು ಜಾಗದಲ್ಲಿ ಒಂದಷ್ಟು ಗಿಡಗಳನ್ನು ನೆಟ್ಟು ಬಂದರೆ ಅರಣ್ಯ ಬೆಳೆಯುವುದಿಲ್ಲ.ಅದನ್ನು ಸರಿಯಾಗಿ ಪೋಷಿಸುವುದು ಅತ್ಯಂತ ಮಹತ್ವದ್ದಾಗಿರುತ್ತದೆ .ಈ ಕೆಲಸವನ್ನು ನಮ್ಮ ಸ್ವಾಮೀಜಿ ಅತ್ಯಂತ ಶೃದ್ದೆಯಿಂದ ಮಾಡಿದ್ದಾರೆ. ಆದ್ದರಿಂದಲೇ ಇಂದು ಶಿವನಹಳ್ಳಿಯಲ್ಲಿ ಸಮೃದ್ದವಾದ ನೂರಾರು ಎಕರೆ ಅರಣ್ಯ ತಲೆ ಎತ್ತಿರುವುದು.

ಅದು 1986 ರ ಸಮಯ ರಾಮಕೃಷ್ಣ ಮಿಶನ್, ದುಸ್ಥಿತಿಯಲ್ಲಿದ್ದ ಶಿವನಹಳ್ಳಿಯ ಸರ್ಕಾರಿ ಶಾಲೆಯನ್ನು ತೆಗೆದುಕೊಂಡು ಅಲ್ಲಿನ ಮಕ್ಕಳಿಗೆ ವಿಧ್ಯಾಭ್ಯಾಸ ನೀಡುವ ಮಹಾತ್ ಯೋಜನೆಯನ್ನು ಕೈಗೆತ್ತಿಕೊಂಡಿತು. ಸ್ವಾಮೀಜಿ ಎದುರು ಆಗ ಹಲವಾರು ಸವಾಲುಗಳಿದ್ದವು. ಆದರೆ ಅಲ್ಲಿನ ಕೆಲವು ಜನರ ಸಹಾಯದಿಂದ ಎಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿ ಯಶಸ್ಸನ್ನು ಕಂಡಿದ್ದಾರೆ. ಇದರ ಫಲವಾಗಿಯೇ 1986 ರಲ್ಲಿ ಆ ಶಾಲೆಯಲ್ಲಿ 70 ರಷ್ಟು ಇದ್ದ ಮಕ್ಕಳ ಸಂಖ್ಯೆ ಇಂದು 300 ದಾಟಿದೆ.

ಕೇವಲ ಅಲ್ಲಿನ ಮಕ್ಕಳಿಗೆ ವಿಧ್ಯಾಭ್ಯಾಸ ನೀಡುವುದಲ್ಲದೆ ಸ್ವಾಮೀಜಿ ಕೈಗೊಂಡ ಇನ್ನೊಂದು ಅದ್ಭುತ ಕಾರ್ಯವೇ ಅರಣ್ಯ ಬೆಳೆಸುವುದು. ಒಂದಷ್ಟು ಖಾಲಿ ಜಾಗದಲ್ಲಿ ಗಿಡಗಳನ್ನು ನೆಟ್ಟು ಪೋಷಿಸಲು ಶುರು ಮಾಡಿದ ಇವರ ಕೆಲಸ ಇಂದು ಹೆಮ್ಮರವಾಗಿ ಬೆಳೆದಿದೆ. ಇಲ್ಲಿನ ಅರಣ್ಯದಲ್ಲಿ (120 ಎಕರೆ ) ಸುಮಾರು 150 ಕ್ಕೂ ಅಧಿಕ ಬಗೆಯ ಮರಗಳಿವೆ ಮತ್ತು 120 ಕ್ಕೂ ಅಧಿಕ ಬಗೆಯ ಔಷಧೀಯ ಸಸ್ಯಗಳಿವೆ. ನಾಲ್ಕು ಕೃತಕ ಕರೆಗಳಿವೆ. ಇಲ್ಲಿ ಅನೇಕ ವನ್ಯಮೃಗಗಳು, ಪಕ್ಷಿಗಳು ತಮ್ಮ ದಾಹ ತಣಿಸಿಕೊಳ್ಳಲು ಬರುತ್ತವೆ. ಸ್ವಾಮೀಜಿ ಈ ಗಿಡಗಳನ್ನು  ಕಲೆಹಾಕಲು ಬಹಳ ಕಷ್ಟ ಪಟ್ಟಿದ್ದಾರೆ. ಇದಕ್ಕಾಗಿ ಅವರು ರಾಜ್ಯದ -ರಾಷ್ಟ್ರದ ಅನೇಕ ಜಿಲ್ಲೆಗಳನ್ನು ಸುತ್ತಿದ್ದಾರೆ. ಅಂಡಮಾನ್ನಿಂದ   ಸಸಿಗಳನ್ನು ತಂದು ಬೆಳೆಸಿದ್ದಾರೆ. ಸ್ವಾಮೀಜಿಯವರ ಈ ಅರಣ್ಯ ಲೋಕದಲ್ಲಿ 175 ಕ್ಕೂ ಹೆಚ್ಚು ಬಗೆಯ ಪಕ್ಷಿಗಳು ತಮ್ಮ ಕಲರವವನ್ನು ಮಾಡುತ್ತಿದ್ದಾವೆ.

ಸ್ವಾಮೀಜಿ ಇಷ್ಟು ಅರಣ್ಯವನ್ನು ಬೆಳೆಸಿ ಸುಮ್ಮನೆ ಕೂತಿಲ್ಲ. ಮುಂದಿನ ಅವರ ಯೋಜನೆಯಲ್ಲಿ ಸುಮಾರು 200 ಎಕರೆ ಅರಣ್ಯ ಬೆಳೆಸುವ ಯೋಚನೆ ಇದೆ. ಈ 200 ಎಕರೆಯಲ್ಲಿ ಸುಮಾರು 20,000 ಗಿಡಗಳನ್ನು ಬೆಳೆಸುವ ಗುರಿ ಹೊಂದಲಾಗಿದೆ. ಚಿಟ್ಟೆಗಳ ಉದ್ಯಾನವನ ಹಾಗು ಔಷಧಿ ಸಸ್ಯಗಳ ಜ್ಞಾನವನವನ್ನು ನಿರ್ಮಿಸುವ ಗುರಿ ಹೊಂದಿದ್ದಾರೆ ಸ್ವಾಮೀಜಿ. 

ನೀವೂ ಕೂಡ ಇಲ್ಲಿಗೆ ಪ್ರತೀ ತಿಂಗಳ ಮೂರನೇ ಭಾನುವಾರದಂದು ಭೇಟಿ ನೀಡಬಹುದು. ನಿಮಗೆ ಅಲ್ಲಿ ಆಹಾರ ಹಾಗು ಇತರೆ ಸೌಲಭ್ಯಗಳನ್ನು ಆಶ್ರಮದವರೇ ನೀಡುತ್ತಾರೆ. ಆದರೆ ನೀವು ಅಲ್ಲಿಗೆ ಮೊಬೈಲ್, ಪ್ಲಾಸ್ಟಿಕ್ ಬಾಟಲ್ ಹಾಗು ಪ್ಲಾಸ್ಟಿಕ್ ಬ್ಯಾಗ್ ಗಳನ್ನು ಕೊಂಡೊಯ್ಯುವಂತಿಲ್ಲ. ಪ್ರಕೃತಿ ಪ್ರೇಮವೆಂದರೆ ಕೇವಲ ಪ್ರಕೃತಿಯನ್ನು ಉಳಿಸುವುದೊಂದೇ ಅಲ್ಲದೇ ಪ್ರಕೃತಿಯನ್ನು ಬೆಳೆಸುವುದೂ ಕೂಡ ಆಗಿದೆ.ಈ ಮಾತನ್ನು ವಿಷ್ಣುಮಯಾನಂದರನ್ನು ನೋಡಿ ತಿಳಿಯಬಹುದು. ಅದಕ್ಕೆ ನಾನು ಇವರನ್ನು 'ಹಸಿರು' ಸ್ವಾಮೀಜಿ ಎಂದು ಕರೆದದ್ದು. ತನ್ನ ಸ್ವಾರ್ಥಕ್ಕಾಗಿ ಅಮೂಲ್ಯವಾದ ಅರಣ್ಯವನ್ನು  ನಾಶ ಮಾಡುತ್ತಿರುವ ಜನರೇ ಹೆಚ್ಚಿರುವ ಈ ಕಾಲದಲ್ಲಿ ಅರಣ್ಯವನ್ನು ಬೆಳೆಸಿ ಉಳಿಸುತ್ತಿರುವ ವಿಷ್ಣುಮಯಾನಂದರಿಗೆ ನಮ್ಮ ನಮನ. ಇಂಥವರ ಸಂಖ್ಯೆ ಹೆಚ್ಚಲಿ. ಅರಣ್ಯಗಳು ಹೆಚ್ಚು ಹೆಚ್ಚು ಬೆಳೆದು ವನ್ಯ ಪ್ರಾಣಿಗಳು ನೆಮ್ಮದಿಯಿಂದ ಬದುಕಿ ಬಾಳಲಿ ಎಂದು ಆಶಿಸೋಣ.

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಹೀಗೋರ್ವ ಹಸಿರು ಸ್ವಾಮೀಜಿ:ಪ್ರಸಾದ್ ಎಸ್

Leave a Reply

Your email address will not be published. Required fields are marked *