ಅಂದು ಮಾರ್ಚ 8. ವಿಶ್ವ ಮಹಿಳಾ ದಿನಾಚರಣೆ. ಶಾಲೆಯಲ್ಲಿ ವಿಶ್ವ ಮಹಿಳಾ ದಿನದ ಇತಿಹಾಸವನ್ನು, ಮಹಿಳೆಯರ ಹಕ್ಕು, ರಕ್ಷಣೆ, ಖ್ಯಾತ ಮಹಿಳಾ ಸಾಧಕಿಯರು, ಸಾಧನೆಯ ಹಾದಿಯಲ್ಲಿ ಎದುರಾಗುವ ತೊಡಕುಗಳು, ಅವುಗಳನ್ನು ಮೆಟ್ಟಿನಿಂತು ಸಾಧನೆಯ ನಗುಚಲ್ಲುವ ಛಾತಿಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲು , ಅವರೊಂದಿಗೆ ಚರ್ಚಿಸಲು ತುಂಬಾ ಉತ್ಸುಕಳಾಗಿದ್ದೆ. ಸಂಸಾರ ಮತ್ತು ವೃತ್ತಿಗಳೆರಡನ್ನು ಯಶಸ್ವಿಯಾಗಿ ನಿಭಾಯಿಸುತ್ತಿರುವ ಸುಪರ್ ವುಮನ್ ಗಳ ಸಾಲಿನಲ್ಲಿ ನಾನೂ ಒಬ್ಬಳು ಎಂದು ಬೀಗುತ್ತ, ಲಗುಬಗೆಯಲ್ಲಿ ಶಾಲೆಗೆ ನಡೆದೆ. ಯಾವತ್ತೂ ಅಭ್ಯಾಸದಲ್ಲಿ, ಶಾಲೆಯ ಪ್ರತಿ ಚಟುವಟಿಕೆಗಳಲ್ಲಿ “ ಹುಡುಗಿಯರದೇ ಮೇಲು ಗೈ” …..! ಹಾಗಾಗೇ ವಿಧ್ಯಾರ್ಥಿನಿಯರೆಡೆಗೆ ಸ್ವಲ್ಪ ಹೆಚ್ಚಾಗೇ ಹೆಮ್ಮೆಯಿಂದ ವಾಲಿದ್ದೆ. ದಿಟ್ಟ ಹುಡುಗಿಯರೆಂದರಂತೂ ನನಗೆ ಪಂಚ ಪ್ರಾಣ. ಯಾವ ವಿಧ್ಯಾರ್ಥಿನಿಯೂ ಕೆಟ್ಟ ಸ್ಪರ್ಷ ಸಹಿಸಬಾರದು. ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಬಾರದು ಎಂದು ನನಗೆ ಸಾದ್ಯವಾದಮಟ್ಟಿಗೆ ಅವರಿಗೆ ತಿಳುವಳಿಕೆನೀಡಿ, ಕೀಟಲೆ ಮಾಡುವವರ ಹೆಡೆಮುರಿ ಕಟ್ಟಲು ಅವರಿಗೆ ಧೈರ್ಯ ನೀಡುತ್ತಿರುತ್ತೇನೆ.
ಶಾಲೆಯ ಕಪೌಂಡ ದಾಟುತ್ತಲೇ “ ನಮಸ್ತೇ ಟೀಚರ್” ಎಂದು ಮುಗಿಬಿದ್ದ ಹುಡುಗಿಯರು ನನ್ನ ಕೈಲಿದ್ದ ಬ್ಯಾಗ್ ತೆಗೆದು ಕೊಂಡು ನನ್ನನ್ನು ಹಗುರ ಗೊಳಿಸಿದರು. ಅವರಿಗೆ ನಾ ಮೊದಲೇ ಮಹಿಳಾ ದಿನಾಚರಣೆಯ ಬಗ್ಗೆ ಹೇಳಿದ್ದರಿಂದ , ಹೆಮ್ಮೆಯಿಂದ “ಹ್ಯಾಪಿ ವುಮನ್ಸ ಡೇ ಟೀಚರ್” ಎಂದು , ಇಷ್ಟಗಲ ಅರಳಿದ ಮುಖದೊಂದಿಗೆ ಒಬ್ಬೊಬ್ಬರೆ ಕೈ ಕುಲುಕ ತೊಡಗಿದರು. ನಾ ತಂದೆ ತಾಯಿಯರ ಹಣ ವ್ಯರ್ಥ ಮಾಡಬೇಡಿ ಎಂದು ಉಪದೇಶಿಸುವರಿಂದ , ತಾವೇ ತಯಾರಿಸಿದ ಗ್ರೀಟಿಂಗ್ ಕಾರ್ಡ್ಸ ಕೊಟ್ಟು ನನಗೆ ವಿಶ್ ಮಾಡುತ್ತಿದ್ದರು. ಇದನ್ನು ನೋಡುತ್ತಿದ್ದಂತೆಯೇ ನನಗೆ ಜಗತ್ತಿನಲ್ಲಿ ಯಾರೂ ಸಾಧಿಸಲಾಗದ, ಅಸಮಾನ್ಯ ವಾದದ್ದೇನನ್ನೋ ಸಾಧಿಸಿದ ನಾಯಕಿ ನಾನೇ ಏನೋ….! ಎಂಬ ಭಾವ ನನ್ನನ್ನು ಆಕಾಶದೆತ್ತರಕ್ಕೆ ಏರಿಸಿತ್ತು. ತಕ್ಷಣ ನನಗೆ “ ಹೋಲ್ಡ ಆನ್…ಹೋಲ್ಡ ಆನ್… ಹೆಣ್ಣ ಮಕ್ಳಿಗೆ ಸ್ವಲ್ಪ ಹೊಗಳಿದ್ರೆ ಮೇಲೆ ಹೋಗಿಬಿಡ್ತೀರಿ” ಎಂಬ ನನ್ನ ಪತಿಯ ಮಾತು ನೆನಪಾಗಿ , ನನ್ನನ್ನು ಮತ್ತೆ ಭೂಮಿಗೆ ಎಳೆದು ತಂತು. ಆದರೂ ಆ ವಯಸ್ಸಿನಲ್ಲಿ ಮಕ್ಕಳಿಗೆ ತಮ್ಮ ಶಿಕ್ಷಕರೇ ದೊಡ್ಡ ಸಾಧಕರು…ನಾಯಕರು… ಒಟ್ಟಿನಲ್ಲಿ ಸಾರ್ಥಕತೆಯ ಭಾವದಲ್ಲಿ ಶಾಲೆ ಒಳಹೊಕ್ಕೆ. ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದೆವು. ಅಂದು ವಾಟ್ಸ ಆಪ್ ನಲ್ಲಿ ಬಂದಂತಹ “ ತಾಯಿಯಾಗಿ, ಸಹೋದರಿಯಾಗಿ, ಹೆಂಡತಿಯಾಗಿ, ಮಗಳಾಗಿ……” ಎಲ್ಲ ಹೊಗಳಿಕೆಗಳಿಂದ ಪುಳಕಿತ ಗೊಂಡಿದ್ದೆವು.
ಅಂತೂ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಮುಖ್ಯೋಪಾಧ್ಯಾಯರು ಪೂರ್ವಭಾವಿ ಸಭೆ ಕ ರೆದು ಎಲ್ಲರಿಗೂ ಒದೊಂದು ಜವಾಬ್ದಾರಿ ಹಂಚಿಕೊಟ್ಟರು. ಯಾವುದೇ ಜವಾಬ್ದಾರಿಕೊಟ್ಟರೂ ಟೊಂಕಕಟ್ಟಿ ಯಶಸ್ಸು ಗೊಳಿಸುವ ಜಾಯಮಾನದ ಸಿಬ್ಬಂದಿ ನಮ್ಮ ಶಾಲೆಯದು. ಆದರೆ ಎಲ್ಲರಿಗೂ ಕುತೂಹಲ, ಕಾರ್ಯಕ್ರಮದ ಮುಖ್ಯ ಅತಿಥಿ ಯಾರು? ಎಲ್ಲದರಲ್ಲೂ ಸ್ವಲ್ಪ ವಿಶೇಷ ವಾಗಿರುವ ನಮ್ಮ ಮುಖ್ಯೋಪಾಧ್ಯಾಯರು ಇದನ್ನು ಮಾತ್ರ ತುಂಬಾ ರಹಸ್ಸವಾಗಿಟ್ಟಿದ್ದರು. ನೇರವಾಗಿ ಸಭೆಯ ವೇದಿಕೆಯ ಮೇಲೇ ಆ ಅತಿಥಿಗಳನ್ನು ಕರೆಯುವುದಾಗಿ ಹೇಳಿದರು. ವಿಧ್ಯಾರ್ಥಿಗಳಿಗೂ, ಶಿಕ್ಷಕರಿಗೂ ತುಂಬಾ ಕುತೂಹಲ. ಯಾವ ಸಾಧಕಿಯನ್ನು ನಾವು ಇಂದು ಕಣ್ತುಂಬಿ ಕೊಳ್ಳಬಹುದೆಂದು ಕಾಯುತ್ತಿದ್ದೆವು.
ಅಂತೂ ಕಾರ್ಯಕ್ರಮ ಆರಂಭವಾಗೇ ಬಿಟ್ಟಿತು. ಆದರೆ ಅತಿಥಿಯ ಸದ್ದೇ ಇರಲಿಲ್ಲ. ಅಧ್ಯಕ್ಷೀಯ ಸ್ಥಾನ ವಹಿಸಿಕೊಂಡ ಮುಖ್ಯೋಪಾಧ್ಯಾಯರಿಗೇ , ಅತಿಥಿಗಳ ಹೆಸರನ್ನು ಬಹಿರಂಗ ಪಡಿಸಲು ತಿಳಿಸಿದೆ. ಅವರು ಹೆಸರು ಹೇಳಿದ ತಕ್ಷಣ ಮಕ್ಕಳಿಂದ ಅಭೂತಪೂರ್ವ ಕರತಾಡನ. ಆದರೆ ಮುಖ ಮುಖ ನೋಡಿ ಕೊಳ್ಳುವ ಸರದಿ ಮಾತ್ರ ನಮ್ಮದಾಗಿತ್ತು. ನನಗರಿವಿಲ್ಲದೇ ನನ್ನ ಕಣ್ಣಂಚಿನಿಂದ ಆನಂದ ಭಾಷ್ಪ ತಾನೇ ಜಿನುಗುತಿತ್ತು. ಆ ಒಂದು ಸೂಕ್ತ ಆಯ್ಕೆಗೆ ಮುಖ್ಯೋಪಾಧ್ಯಾಯರಿಗೆ ನನ್ನ ಮನಸ್ಸು ಕ್ರುತಜ್ನತೆ ಸಲ್ಲಿಸುತ್ತಿತ್ತು. ವೇದಿಕೆಯ ಮೇಲೆ ಮೂಲೆಯಲ್ಲಿ ನಿಂತಿದ್ದ ರಜಿಯಾ ದಿಕ್ಕು ತಿಳಿಯದೇ , ಸದ್ದಿಲ್ಲದೇ ಸ್ಟಾಫ್ ರೂಮಿನತ್ತ ಮುಖಮಾಡಿದ್ದಳು.
ರಜಿಯ ನಮ್ಮ ಶಾಲೆಯ ಡಿ ದರ್ಜೆಯ ನೌಕರಳು. ಕೇವಲ 5 ನೇ ತರಗತಿ ಕಲಿತಿದ್ದ ರಜಿಯಾಳ ಗಂಡ ಶಿಕ್ಷಣ ಇಲಾಖೆಯಲ್ಲಿ ಕ್ಲರ್ಕ ಆಗಿದ್ದ. ಅವಳ ಚೊಚ್ಚಲ ಮಗು ಗಂಡಾಗಿದ್ದು ಒಂದು ವರ್ಷದ ಅವಧಿಯಲ್ಲೇ ತೀರಿ ಹೋಗಿತ್ತು. ಮತ್ತೆರಡು ಹೆಣ್ಣು ಮಕ್ಕಳನ್ನು ಕೊಟ್ಟು ಗಂಡ ಅನಾರೋಗ್ಯದಿಂದ ತೀರಿ ಹೋಗಿದ್ದ. ಮನೆ ಬಿಟ್ಟು ಹೊರಗೆ ಹೋಗಲೂ ತಿಳಿಯದ ರಜಿಯಾ ಎರಡು ಚಿಕ್ಕ ಚಿಕ್ಕ ಹೆಣ್ಣು ಮಕ್ಕಳ ತಾಯಾಗಿ , ಯೌವನದಲ್ಲೇ ಅಕ್ಷರಷಃ ಅನಾಥಳಾಗಿದ್ದಳು. ಎಷ್ಟು ದಿನ ಮೂಲೆಯಲ್ಲಿ ಕುಳಿತು ಅಳಲು ಸಾದ್ಯ….? ಮಕ್ಕಳ ಭವಿಷ್ಯಕ್ಕಾಗಿ ಅನುಕಂಪದ ಮೇಲೆ ಡಿ-ದರ್ಜೆ ನೌಕರಿ ಗೀಟಿಸಿದ್ದಳು. ಆಕೆಯ ಮನೆಯಲ್ಲೋ ಹೆಣ್ಣು ಮಗಳನ್ನು ಹೊರಗೆ ಕಳಿಸುವುದು ಹೇಗೆ? ಅದರಲ್ಲೂ ಡಿ ದರ್ಜೆ ಅಂದ ಮೇಲೆ ಕಚೇರಿಯ ಕಸ ಹೊಡೆವುದು….ಎಲ್ಲರ ಕೈ ಕೆಳಗೆ ಕೆಲಸ ಮಾಡುವುದು… ಯೋಚಿಸಿಯೇ ಮನೆಯಲ್ಲಿ ಹಾಯಾಗಿ ಇರಬೇಕಾದ ಹೆಣ್ಣು ಹೊರಗಡೆ, ಕಂಡವರ ಬಾಯಿಗೆ ಆಹಾರವಾಗುವುದು ಬೇಡ ಎಂದು ಹಿರಿಯರು ಹಠ ಹಿಡಿದರು. ಆದರೂ ತನ್ನ ಭವಿಷ್ಯಕ್ಕಾಗಿ ಆಕೆ ಧೃಢ ನಿರ್ಧಾರ ತೆಗೆದುಕೊಳ್ಳಲೇ ಬೇಕಿತ್ತು… ಗಾಳಿ, ಮಳಿ, ಚಳಿ ಗೆ ಮೈ ಒಡ್ಡಲೇ ಬೇಕಿತ್ತು… ಗುಡುಗು, ಸಿಡಿಲುಗಳ ಆರ್ಭಟ ಸಹಿಸಲೇ ಬೇಕಿತ್ತು… ತವರು ಮನೆ, ಗಂಡನ ಮನೆ ಯಿಂದ ಬಹುದೂರದ ಊರಿಗೆ ನೇಮಕಾತಿ ಕೊಟ್ಟಾಗ , ಆಕಾಶವೇ ತಲೆ ಮೇಲೆ ಬಿದ್ದಿತ್ತು. ಆದರೂ ಪುಟ್ಟ ಕಂದಮ್ಮಗಳನ್ನು ಕಂಕುಳಲ್ಲಿ ಎತ್ತಿಕೊಂಡೇ ಶಾಲೆಯ ಮೆಟ್ಟಿಲೇರಿದ್ದಳು.
ದಯೆ- ಸಿಟ್ಟು, ಒಳ್ಳೆಯ- ಕೆಟ್ಟ, ಸಂಶಯ- ಪ್ರೀತಿ, ಹೀಗೆಲ್ಲ ವೈರುಧ್ಯಗಳ ಮಧ್ಯೆಯೇ ವರುಷಗಳು ಉರುಳುತ್ತಿದ್ದವು. ಎರಡೂ ಹೆಣ್ಣು ಕಂದಮ್ಮಗಳು ಕಣ್ಣು ಕುಕ್ಕುವಂತೆ ಬೆಳೆಯುತ್ತಿದ್ದವು. ಮೊದಲೆಲ್ಲ ಚಿಕ್ಕ ಪುಟ್ಟ ಮಾತಿಗೆ ಮುಸಿ ಮುಸಿ ಅಳುತ್ತಿದ್ದ ರಜಿಯ , ಈಗ ಶಾಲೆಯಲ್ಲಿ ನಮಗೇ ಧೈರ್ಯ ಹೇಳುವಂತೆ ಬೆಳೆದಿದ್ದಳು. ಒಂಟಿ ಹೆಣ್ಣು ಎಂದು ಅವಳ ಬಗ್ಗೆ ಇಲ್ಲ ಸಲ್ಲದ ಮಾತುಗಳು ನನ್ನ ಕಿವಿಗೂ ಬಿದ್ದಿದ್ದವು. “ಡಿ ದರ್ಜೆ” ಎಂದೋ , ಒಂಟಿ ಹೆಣ್ಣು ಎಂದೋ ಗುಬ್ಬಿ ಮೇಲೆ ಬ್ರಹ್ಮಾಸ್ತ್ರಗಳು ದಶ ದಿಕ್ಕು ಗಳಿಂದಲೂ ಬಹಳ ಪ್ರಯೋಗವಾಗುವುದನ್ನು ನಾನೂ ಕಂಡಿದ್ದೆ. ನಾನೂ ಒಬ್ಬ ಹೆಣ್ಣಾಗಿ, ಸಾಕ್ಷಿ-ಪುರಾವೆಗಳಿಲ್ಲದೇ ಅವರಿವರ ಮಾತುಗಳನ್ನು ನಂಬಿ , ಆ ಹೆಣ್ಣಿನ ಬಗ್ಗೆ ಹೀನಾಯವಾಗಿ ಮಾತನಾಡಲು ನನ್ನ ಆತ್ಮ ಸಾಕ್ಷಿ ನನ್ನನ್ನು ಬಿಡುತ್ತಿರಲಿಲ್ಲ. ಸದಾ ಅವಳ ಜಾಗೆಯಲ್ಲಿ ನಾನಿದ್ದರೆ…. ಎಂಬ ಭಾವ ನನ್ನನ್ನು ಕಾಡುತ್ತಿತ್ತು. ದಿಟ್ಟೆಯಾಗಿ ಎಲ್ಲರನ್ನೂ ಎದುರಿಸಿ , ತನ್ನೆದೆಯ ದನಿಗೆ ತಾ ಅಂಜಿ , ಇಬ್ಬರೂ ಹೆಣ್ಣು ಮಕ್ಕಳನ್ನು ಓದಿಸಿ, ಮದುವೆ ಮಾಡಿ , ಗಂಡ ತನ್ನ ಮೇಲೆ ಹೊರಿಸಿದ್ದ ಜವಾಬ್ದಾರಿಯನ್ನು ಆಕೆ ಈಗ ನಿಭಾಯಿಸಿದ್ದಳು. ಮತ್ತೆ ತನ್ನ ಒಂಟಿ ಪಯಣದ ದಾರಿಯನ್ನು ತಾ ಶಾಲೆಯ ಸೇವೆಯಿಂದ ಸವೆಸಲು ಪ್ರಾರಂಭಿಸಿದ್ದಳು.
ಆಕೆ ತನ್ನೊಳಗಿನ ದುಃಖವನ್ನು , ತಾ ಎದುರಿಸಿದ ಕಷ್ಟಗಳನ್ನು ನನ್ನೆದುರಿಗೆ ಹೇಳುತ್ತಿದ್ದರೆ ತುಂಬಾ ಭಾವ ಪರವಶವಾಗುತ್ತಿದ್ದಳು. ವೈರಿ ನೆಲದಲ್ಲಿ ಬಿದ್ದು , ಯಮನ ಬಾಯಿಂದ ತಪ್ಪಿಸಿಕೊಂಡು ಬಂದ ಸೈನಿಕನಂತೆ ಬೀಗುತ್ತಿದ್ದಳು. ಶಾಲೆಯಲ್ಲಿ ತನ್ನ ಪಾಲಿನ ಎಲ್ಲ ದೈಹಿಕ ಕೆಲಸಗಳನ್ನೂ ಮುಜುಗರವಿಲ್ಲದೇ ಮಾಡುತ್ತಿದ್ದಳು. ಆಡುವವರ ಬಾಯಿಯ ನಾಲಿಗೆಗೆ ಎಲುಬಿಲ್ಲ ಎಂದು ತನ್ನ ನೌಕರಿ ಸಣ್ಣದಾದರೂ ಎಂದೂ ಯಾರೆದರೂ ಸಣ್ಣತನ ತೋರಿದವಳಲ್ಲ. ಯಾರ ಅನುಕಂಪವನ್ನೂ ಬಯಸದೇ ಸ್ವಾಭಿಮಾನಿಯಾಗಿದ್ದವಳು.
ಇಂದು ಆಕೆ ಅತಿಥಿ ಎಂದು ಘೋಷಿಸಿದ ತಕ್ಷಣ ಆಕೆಯ ಜೀವನ ಹೋರಾಟ ಒಂದು ಕ್ಷಣ ನನ್ನ ಕಣ್ಣೆದುರು ಸುಳಿದು ಹೋಯಿತು. ಮಹಾನ್ ಸಾಧಕಿಯರ ಸಾಲಿನಲ್ಲೇ… ತಮಗೆ ಸಿಕ್ಕ ಜೀವನದ ಅವಕಾಶವನ್ನೂ, ಜವಾಬ್ದಾರಿಗಳನ್ನೂ ಯಾವುದೇ ಗೊಣಗಾಟವಿಲ್ಲದೇ ಯಶಸ್ವಿಯಾಗಿ ನಿಭಾಯಿಸುವುದೂ ಒಂದು ಮಹಾನ್ ಸಾಧನೆಯೇ ಅನಿಸಿತು. ಯಾರು ಎಷ್ಟೇ ಎಗರಾಡಿದರೂ, ದರ್ಪ ತೋರಿದರೂ ಆಕೆಯ ಮೊಗದ ನಗುವನೆಂದೂ ಕಸಿದುಕೊಳ್ಳಲು ಸಾದ್ಯವಾಗಿರಲಿಲ್ಲ. ಆಕೆಯ ಮೊಗದಲ್ಲಿ ಚಿಂತೆಯ ಗೆರೆಗಳನ್ನು ಮೂಡಿಸುವಲ್ಲಿ ಅವರು ಪಟ್ಟ ಪ್ರಯತ್ನಗಳೆಲ್ಲ ವಿಫಲವಾಗಿದ್ದವು. ಎಲ್ಲಿಯಾದರೂ ನಾ ಸ್ವಾಭಿಮಾನದಿಂದ ಬದುಕ ಬಲ್ಲೆ ಎಂಬ ಅವಳ ಧೋರಣೆ ನನ್ನ ಯುನಿವರಸಿಟಿಯ ಸರ್ಟಿಫಿಕೇಟ್ಗಳನ್ನು ನಾಚಿಸುತ್ತಿದ್ದವು. ರಜಿಯಳಂತ ಸಾಮಾನ್ಯರಲ್ಲೇ ಸಾಮಾನ್ಯ ಯಶಸ್ವಿ ಮಹಿಳೆಗೆ ಸಿಕ್ಕ ಸನ್ಮಾನ ಮಹಿಳಾ ದಿನಾಚರಣೆಯನ್ನು ಸಾರ್ಥಕ ಗೊಳಿಸಿತು.
–ಶೀಲಾ. ಶಿವಾನಂದ. ಗೌಡರ.
Madam,really superb article.
ತುಂಬ ಸುಂದರ ಲೇಖನ. ವಿಭಿನ್ನ ಎನಿಸಿದ್ದನ್ನು ಗುರುತಿಸಿ ಬರೆಯುವ ದೃಷ್ಟಿಕೋನ ಲೇಖಕಿಗೆ ಭವಿಷ್ಯವಿದೆ ಎಂದು ತೋರಿಸುತ್ತದೆ