ನಿಜ, ನೀನಂದ್ರೆ ನನಗೆ ಇಷ್ಟ ಇರ್ಲಿಲ್ಲ. ಯಾಕಂದ್ರೆ ಯಾವಾಗ್ಲೂ ಮನೆಗೆ ಬಂದಾಗ ನನ್ನನ್ನ ಅಳಿಸ್ತಾ ಇದ್ದೆ ನೀನು. ನನ್ನ ಉದ್ದವಾದ ಜೆಡೆಯನ್ನ ಹಿಡಿದು ಕುದುರೆ ಓಡಿಸ್ತಾ ಇದ್ದೆ. ಗುಂಡಗಿನ ಕೆನ್ನೆನ ನೋವು ಬರೋ ಹಾಗೆ ಹಿಂಡ್ತಾ ಇದ್ದೆ. ಕಣ್ಣಲ್ಲಿ ನೀರಿಳಿಸೋ ಹಾಗೆ ಕಾಡಿಸ್ತಾ ಇದ್ದೆ. ಮನೆಯೆಲ್ಲಾ ಕೇಳಿಸೋ ಹಾಗೆ ಕಿರಿಚಾಡಿಸ್ತಾ ಇದ್ದೆ. ನೆನಪಿದ್ಯಾ ನಿಂಗೆ ? ನಿನ್ನ ಹೊಡಿಯೋಕೆ ಅಂತ ಸೌದೆಯನ್ನ ಕೈಯಲ್ಲಿ ಹಿಡಿದು ಮನೆಯೆಲ್ಲಾ ಓಡಾಡಿಸಿದ್ದೆ, ನನ್ನ ಕೈಗೆ ಆಗಲೂ ಸಿಗಲಿಲ್ಲ ನೀನು ಹಾಗೇ ಈಗಲೂ……
ಅಣ್ಣ ! ಆಗ ಕಾಡಿಸೋ ಅಣ್ಣ, ಮತ್ತೆ ಪ್ರೀತಿಸೋ ಅಣ್ಣ, ತಪ್ಪನ್ನ ತಿದ್ದಿ ಗುರುವಾಗೋ ಅಣ್ಣ, ಉಡುಗೊರೆ ಕೊಟ್ಟು ಮುದ್ದಿಸೋ ಅಣ್ಣ, ಭಾವನೆಗಳಿಗೆ ಸ್ಪಂದಿಸೋ ಭಾವಜೀವಿ ಅಣ್ಣ, ಮನಸ್ಸಿಗೆ ಹತ್ತಿರವಾಗೋ ಅಣ್ಣ, ಮತ್ತೆಲ್ಲೋ ದೂರ ಸರಿದ ಅಣ್ಣ. ನೋಡು, ಪಾತ್ರವೇನೇ ಇರಬಹುದು, ಆದರೆ ಕೊನೆಗೆ ನೀ ಅದೇ ಅಣ್ಣ.
ಮಂಗಳೂರಿನ ಪಿ.ಜಿ ಯ ಅದೇ ಕಿಟಕಿಯ ಬಳಿ ಕುಳಿತು ನಿನ್ನೊಂದಿಗೆ ಹರಟಿದ ನೆನಪು. ನಮ್ಮಿಬ್ಬರ ಪ್ರೀತಿಯನ್ನು ಒಬ್ಬರಲ್ಲೊಬ್ಬರು ಹಂಚಿಕೊಂಡು ತಿಳುವಳಿಕೆಯ ಮಾತನಾಡಿದ ನೆನಪು. ನಿನ್ನ ಮೆಕ್ಯಾನಿಕಲ್ ಇಂಜಿನೀರಿಂಗ್ ಅನ್ನು ನಿಧಾನವಾಗಿ ಆಗಲೇ ನನ್ನೊಳಗಿಳಿಸಿದ ನೆನಪು. ನಿನ್ನ ಹುಟ್ಟುಹಬ್ಬಕ್ಕೆ ಶುಭಾಷಯ ಹೇಳಲು ಮರೆತಾಗ," ಮನ್ಸಿಗೆ ಹತ್ರ ಆದೋರು ಲೈನ್ ನ ಕೊನೇಲಿದ್ರೂ ಮೊದ್ಲು ಕಾಣ್ಸ್ತಾರೆ ಕಣೇ", ಅಂತ ನೀ ಸಮಾಧಾನಿಸಿದ ನೆನಪು. ಚಿಕ್ಕಮಗಳೂರಿನಲ್ಲಿ ಒಟ್ಟಿಗೆ ಕುಳಿತು ಸಿನೆಮಾ ನೋಡಿದ ನೆನಪು, ಮೊದಲ ಸರ್ಕಸ್ ನೋಡಿದ ನೆನಪು. ಮೊನ್ನೆ-ಮೊನ್ನೆ ನೈಟ್ ಷೋ ಮುಗಿಸಿ ನಿನ್ನ ಆ ಬೈಕ್ನಲ್ಲಿ ಎಲ್ಲ ವೇಗವನ್ನು ನೀ ನಿನ್ನೊಡನೆ ತುಂಬಿಕೊಂದಂತೆ ಓಡಿಸುವಾಗ ಕಣ್ಮುಚ್ಚಿ ಕುಳಿತ ನೆನಪು. ಒಂದೇ ಕಪ್ ನಲ್ಲಿ ಐಸ್ಕ್ರೀಮ್ ಅನ್ನು ಕಿತ್ತಾಡಿ ತಿಂದ ನೆನಪು. ಎಂದೂ ನಾಲಿಗೆ ತುದಿಯಲ್ಲಿರುವ ಟಿಕ್ಕಿ ಪುರಿಯ ರುಚಿಯ ನೆನಪು. ನೀ ಮೊದಲು ಕೊಟ್ಟ ಆ ದೊಡ್ಡ ಗ್ರೀಟಿಂಗ್ ಕಾರ್ಡ್ ಮತ್ತು ಬೋರ್ನ್ವಿಲ್ಲೆ ಚಾಕ್ಲೇಟ್, ನನ್ನ ಮೈಗೊಪ್ಪುವ ಕಡುಕಪ್ಪು ಬಣ್ಣದ ಸೀರೆಯಿಂದ ಹಿಡಿದುಮೊನ್ನೆ-ಮೊನ್ನೆ ಕೊಟ್ಟ ಪಿಂಕ್ ಆಂಕ್ಲೆಟ್ ನ ವರೆಗೆ ಎಲ್ಲವನ್ನು, ಎಲ್ಲಾ ನೆನಪುಗಳನ್ನು ಈ ಮನಸಲ್ಲಿ ಬಿಡಿಸಲಾಗದಂತೆ ಬಲೆ ಹೆಣೆದಂತೆ ಹಿಡಿಸಿಟ್ಟಿದ್ದೇನೆ.
ಅಣ್ಣ, ಜೀವನವೆಂದರೆ ಹೂವಿನ ಹಾಸಿಗೆಯಂತೂ ಅಲ್ಲ. ಕಲ್ಲು ಮುಳ್ಳಿನ ಹಾದಿಯಂತೂ ಸತ್ಯ. ಮುಳ್ಳಿನ ನೋವನ್ನು ಹೂವಿನ ನಗೆಯಾಗಿಸಬೇಕಾದವರು ನಾವು. ಇನ್ನು ಕಲ್ಲು ಸಿಕ್ಕರೆ ಕೆಲವರು ದಾಟಬಹುದು, ಕೆಲವರು ಎಡವಬಹುದು. ನಿಜ, ನಾನು ಹಲವಾರು ಬಾರಿ ಎಡವಿರಬಹುದು, ಆದರೆ ಎಡವುತ್ತಾ-ಎಡವುತ್ತಾ ದಾಟಲು ಕಲಿತಿದ್ದೇನೆ. ಎಷ್ಟೊಂದು ಸಂದರ್ಭಗಳಲ್ಲಿ ನಾವು ಬೇರೆಯವರಿಂದ ಕೇಳಿದ್ದು ಮತ್ತು ಅದರ ಮೇಲೆ ಮಾಡಿದ ನಿರ್ಧಾರಗಳಿಂದ ಒಳ್ಳೆಯದೂ, ಕೆಟ್ಟದ್ದೂ ಆಗುತ್ತದೆ. ಆದರೆ ಆದದ್ದೆಲ್ಲಾ ಒಳ್ಳೆಯದಕ್ಕೆ ಎಂಬ ಭಾವವನ್ನು ತಾಳಬೇಕೆಂಬುದನ್ನು ಕಲಿತಿದ್ದೇನೆ.
ಇದೆಲ್ಲಾ ಯಾಕೆ !? ಯಾಕೆಂದರೆ ಮತ್ತೆ ಬಂದಿದೆ ರಕ್ಷಾ ಬಂಧನ. ನಮ್ಮಲ್ಲಿರುವ ಪ್ರೀತಿಯನ್ನು ತೋರ್ಪಡಿಸಲು ಯಾವುದೋ ಒಂದು ದಿನವೆಂಬ ಹೆಸರಿನಿಂದ ಆಚರಿಸುವುದನ್ನು ನನ್ನ ಮನಸ್ಸು ಮೊದಲಿನಿಂದ ಒಪ್ಪಿಕೊಳ್ಳದಿದ್ದರೂ, ಕೆಲವೊಮ್ಮೆ ಇಂದಿನ ಮನಃಸ್ಥಿತಿಗೆ ಹೀಗಿದ್ದರೆ ಒಳ್ಳೆಯದೆಂಬ ಭಾವನೆಯೂ ಮೂಡಿದ್ದಿದೆ. ಹಲವಾರು ಜನರಿಂದ ತುಳಿಸಿಕೊಂಡ ಈ ಕಲ್ಲು ಉಳಿ ಪೆಟ್ಟುಗಳನ್ನೂ ತಿಂದು, ಮುಂದೊಂದು ದಿನ ಜನರಿಂದ ಕೈ ಎತ್ತಿ ನಮಸ್ಕರಿಸಿಕೊಂಡಾಗ ಇದೇ ಅಣ್ಣನಿಂದ ಇವಳು ನನ್ನ ತಂಗಿ ಎನ್ನಿಸಿಕೊಳ್ಳುತ್ತೇನೆಂಬ ಭರವಸೆಯೊಂದಿಗೆ.
ರಕ್ಷಾ ಬಂಧನದ ಶುಭಾಷಯಗಳು.
*****