ಕೊಕ್ಕೋ ಹಣ್ಣಿನ್ನು ಒಡೆದು ಬೀಜ ಬೇರ್ಪಡಿಸುವ ಕೆಲಸ ಶುರುವಾಗಿತ್ತು. ನಾನೂ ಹೋಗಿ ಸೇರಿಕೊಂಡೆ. ಇವರು ಹಣ್ಣುಗಳನ್ನು ಒಡೆದು ರಾಶಿ ಹಾಕಿದರೆ ನಾನು, ಮಾವ, ಮತ್ತು ನಮ್ಮ ತೋಟದ ಸಹಾಯಕರಾದ ವಿನ್ಸಿ, ಸುಬ್ಬಪ್ಪ, ಇಸುಬು ಎಲ್ಲರೂ ಸೇರಿ ಒಳಗಿನ ಬೀಜ ಬೇರ್ಪಡಿಸಿ ದೊಡ್ಡ ಕಟಾರ ( ಹಿಡಿ ಇರುವ ದೊಡ್ಡದಾದ ಪಾತ್ರೆ) ಕ್ಕೆ ತುಂಬುತ್ತಿದ್ದೆವು. ಸಮಯ ಬೇಡುವಂತಹ ಕೆಲಸ ಇದಾದ ಕಾರಣ ಹೊತ್ತು ಹೋಗಲು ಏನಾದರೊಂದು ಟಾಪಿಕ್ ಇದ್ದೇ ಇರುತ್ತಿತ್ತು.
‘ ಮೊನ್ನೆ ಲಾರೆನ್ಸ್ ಬೈಕಿನಲ್ಲಿ ಹೋಗ್ತಾ ಇದ್ದ ಸ್ಟೈಲ್ ನೋಡಿದೆಯಾ’ ಸುಬ್ಬಪ್ಪ ವಿನ್ಸಿಯ ಕಡೆ ತಿರುಗಿ ಕೇಳಿದ.
ಅದಕ್ಕುತ್ತರ ಇಸುಬು ಕಡೆಯಿಂದ ಬಂದಿತು. ‘ನೀನು ಅವನ ಕೈ ನೋಡಿದೆಯಾ’? ಒಂದೊಂದು ಕೈಯಲ್ಲಿ ಎರಡೆರಡು ಉಂಗುರ ಮಾರ್ರೇ..
ವಿನ್ಸಿ ಹೇಳಿದ.. ‘ಈಗ ಕೈಯಲ್ಲಿ ಹಣ ಇದೆ. ಮಗ ಕೂಡಾ ಕೆಲಸ ಮಾಡ್ತಾನೆ ಅಲ್ವಾ.. ಆದ್ರೆ ಗಮ್ಮತ್ತು ಗೊತ್ತುಂಟಾ, ಮೊನ್ನೆ ಸಿಕ್ಕಿದವ ನನ್ನತ್ರ ಹೇಳಿದ್ದು, ಅಲ್ಲಾ ಅದು ಹೇಗೆ ಮಾರಾಯಾ ಈ ಚಡವು ( ಏರು) ಹತ್ತಿಕೊಂಡು ನಡೀತೀರಾ ನೀವು? ನನಗೆ ನಡೆಯೋದೇ ಮರೆತಿದೆ.. ಅಂತ.. ಅಲ್ಲಾ ಅವನ ಸೊಕ್ಕು ನೋಡಿ..’
ನಾನು ಮೆಲ್ಲನೆ ಒಗ್ಗರಣೆ ಸೇರಿಸಿದೆ ‘ ಅಲ್ಲಾ ಅವ್ನು ಹೇಳೋದು ಸರಿ ಅಲ್ವಾ.. ಅವನಿಗೆ ನಡೆದು ಅಭ್ಯಾಸ ಇರುವುದು ಹೇಗೆ? ಮೊದಲು ಕೂಡಾ ಅವ್ನೆಲ್ಲಿ ನಡೀತಿದ್ದ? ದಾರಿಯಲ್ಲಿ ಬಿದ್ದವನನ್ನು ಅವನ ಹೆಂಡತಿ ಎತ್ತಿ ರಿಕ್ಷಾಕ್ಕೆ ಹೊತ್ತು ಹಾಕಿ ತರ್ತಾ ಇದ್ದಿದ್ದಲ್ವಾ.. ?
ನಗು ಸಾಂಕ್ರಾಮಿಕವಾಗಿ ಹರಡಿತು.
‘ ಆದ್ರೆ ಈಗ ನೋಡಿ ಹೇಗೆ ಸಾಬೀತಾಗಿದ್ದಾನೆ ಅಂತ.. ಕುಡಿಯೋದು ಬಿಟ್ಟ ಕಾರಣ ಅವನಿಗೆ ಇದು ಸಾಧ್ಯವಾಗಿದ್ದು , ನಿಮಗೆ ನೆನಪಿದೆಯಾ ಅವನ ಹೆಂಡತಿ ಬೇಸಿಗೆಯಲ್ಲಿ ನೀರಿಗೆ ಅಂತ ನಮ್ಮಲ್ಲಿಗೆ ಕೊಡಪಾನ ಹಿಡಿದುಕೊಂಡು ಬರುವಾಗಲೂ ಅವಳ ಹತ್ತಿರ ಇದ್ದ ನೆಕ್ಲೇಸನ್ನು ಹಾಕಿಕೊಂಡೇ ಬರ್ತಾ ಇದ್ದಳು.. ಮನೆಯಲ್ಲಿ ಅದನ್ನು ಇಟ್ಟು ಬಂದರೆ ಆತ ಅದನ್ನೂ ಮಾರಿ ಹೆಂಡ ಕುಡೀತಾನೆ ಅಂತ ಅವಳಿಗೆ ಭಯವಿತ್ತು. ಕೆಲವೊಮ್ಮೆ ನಾನೇ ವಾಕಿಂಗ್ ಮುಗಿಸಿ ಬರುವಾಗ ಚರಂಡಿಯ ಬದಿಯಲ್ಲಿ ಗೊಣಗಾಡುತ್ತಾ ಬಿದ್ದವನನ್ನು ಕಂಡು ಅವನ ಹೆಂಡತಿಗೆ ಸುದ್ದಿ ಮುಟ್ಟಿಸಿದ್ದು ಇದೆ’ ಮಾವನ ಮಾತಿಗೆ ಎಲ್ಲರ ತಲೆದೂಗಿತು.
‘ಎಷ್ಟು ಸಲ ತೋಟದಲ್ಲಿ ಅಡಿಕೆ ಗೊನೆ ಕದ್ದು ಸಿಕ್ಕಿ ಬಿದ್ದಿದ್ದ.. ನೀವೇನೋ ಬೈದು ಸುಮ್ಮನಾಗುತ್ತಿದ್ರಿ.. ಕೇಸ್ ಕೊಟ್ಟಿದ್ರೆ ಜೈಲಲ್ಲಿ ಕೂರಬೇಕಿತ್ತು ಅವ..’ ವಿನ್ಸಿ ಮಾತು ಪೋಣಿಸಿದ.
‘ ಕೇಸ್ ಕೊಟ್ಟು ಎಂತ ಮಾಡ್ಲಿಕ್ಕಿತ್ತು. ಅವನ ಹೆಂಡತಿ ಬಂದು ನಮ್ಮಲ್ಲಿ ಅತ್ತು ಕರೆದು ಗಲಾಟೆ ಮಾಡ್ತಿದ್ದಳು. ಮತ್ತೆ ದಂಡ ಕಟ್ಟಿ ಬಿಡಿಸಿಕೊಂಡು ಬರಲು ಕೂಡಾ ನಾನೇ ದುಡ್ಡು ಕೊಡ್ಬೇಕಿತ್ತು. ಅದರ ಬದಲು ಹೋದ್ರೆ ನಾಲ್ಕು ಅಡಿಕೆ ಅಲ್ವಾ.. ಅಂತ ಸುಮ್ಮನಾಗಿದ್ದಷ್ಟೇ. ಅದೊಂದು ರಾತ್ರೆ ಎಲ್ಲರನ್ನೂ ಹೆದರಿಸಿದ್ದು ನೆನಪಿದೆಯಾ? ಇವರು ಕೊಕ್ಕೋ ಒಡೆಯುತ್ತಲೇ ಕೇಳಿದರು.
‘ಹ್ಹಹ್ಹ’ ಇಸುಬು ಜೋರಾಗಿ ನಕ್ಕ ‘ ನೆನಪಿಲ್ಲದೇ ಏನು? ಆ ದಿನ ನೀವು ಆ ವಿಚಿತ್ರ ಸ್ವರ ಕೇಳಿಯೂ ಹೆದರದೆ ಟಾರ್ಚ್ ಹಿಡಿದು ಹೋದ ಕಾರಣ ಅವನಿನ್ನೂ ಇದ್ದಾನೇನೋ..?
ಆ ದಿನ ನನ್ನ ಕಣ್ಣೆದುರು ಬಂತು.
ಊಟ ಮುಗಿಸಿ ನಾಯಿಗಳಿಗೆ ಹಾಕಲೆಂದು ಹಾಲನ್ನದ ಪಾತ್ರೆ ಹೊತ್ತು ಅವರ ಗೂಡಿನ ಕಡೆಗೆ ಹೆಜ್ಜೆ ಹಾಕುತ್ತಿದ್ದೆ. ಇದ್ದಕ್ಕಿದ್ದಂತೆ ವಿಚಿತ್ರ ಸ್ವರವೊಂದು ಕಿವಿಗೆ ಕೇಳಿಸಿತು. ಇಷ್ಟರವರೆಗೆ ಕೇಳದ ಸ್ವರ ಅದು. ಕೊಂಚ ಅಳುಕೆನಿಸಿ ಕೂಡಲೇ ಮನೆಯವರನ್ನೆಲ್ಲಾ ಕರೆದೆ. ಅವರೆಲ್ಲಾ ಬರುವಾಗ ಸದ್ದು ನಿಂತಿತ್ತು. ಹೊರಗೆ ನಿಂತವರು ಒಂದೊಂದು ಊಹೆ ಮಾಡುತ್ತಿದ್ದೆವು. ಅತ್ತೆ ಅದು ಗುಮ್ಮನ(ಗೂಬೆ) ಕೂಗಿರಬಹುದು ನಿನಗೆ ಸಡನ್ ಕೇಳಿದ್ದರಿಂದ ವಿಚಿತ್ರವೆಂದೆನಿಸಿತೇನೋ ಎಂದರೆ, ಮಾವ ಅದು ಕುಕ್ಕುಸೂಡು ಹಕ್ಕಿಯದ್ದಿರಬಹುದು, ಅದು ರಾತ್ರಿ ವಿಚಿತ್ರ ಸ್ವರದಲ್ಲೇ ಕೂಗುವುದು. ಇನ್ನೊಂದು ನಂಬಿಕೆ ಕೂಡಾ ಇದೆ ಆ ಹಕ್ಕಿಯ ಕೂಗಿನ ಸ್ವರದ ಸದ್ದು ಎಲ್ಲಿ ಕೊನೆಗೊಳ್ಳುತ್ತದೋ ಆ ಮನೆಯಲ್ಲಿ ಮರಣ ಸಂಭವಿಸುತ್ತದೆ ಅನ್ನುತ್ತಾರೆ. ಆದರೆ ಅದರ ಸದ್ದು ಕೊನೆಗೊಳ್ಳುವ ಜಾಗ ಎಲ್ಲಿ ಅಂತ ಕಂಡು ಹಿಡಿಯೋದು ಹೇಗೆ ಅಲ್ವಾ.. ಯಾರಾದ್ರು ಅದರ ಸದ್ದು ಕೇಳಿದ ದಿನವೇ ಅಲ್ಲೆಲ್ಲಾದರೂ ಆಸುಪಾಸಿನಲ್ಲಿ ಮರಣ ಆಗಿರಬಹುದು ಅದನ್ನೇ ಗಟ್ಟಿಯಾಗಿ ಹಿಡಿದುಕೊಂಡು ಹೀಗೆ ಜನ ಕಥೆ ಕಟ್ಟಿರಬಹುದು.. ಎಂದೆಲ್ಲಾ ಮಾತನಾಡುತ್ತಾ ಎಲ್ಲರೂ ಅಂಗಳದಲ್ಲಿ ನಿಂತು ಮತ್ತೊಮ್ಮೆ ಕೇಳಿಬರಬಹುದಾದ ಸದ್ದಿಗೆ ಕಾಯುತ್ತಿದ್ದಾಗಲೇ ಇನ್ನೊಮ್ಮೆ ಕೇಳಿತ್ತು ಆ ವಿಚಿತ್ರ ಸ್ವರ.
‘ಇದು ಗುಮ್ಮ ಅಲ್ಲ, ಕುಕ್ಕುಸೂಡು ಹಕ್ಕಿಯೂ ಅಲ್ಲ.. ತೋಟದಲ್ಲೆಲ್ಲಾದ್ರೂ ನರಿ ಬಂದಿರಬಹುದು ಅದರ ಕೂಗೇನೋ’ ಎಂದರು ಮಾವ.
‘ನರಿಗಳಾದ್ರೆ ಎಲ್ಲಾ ಒಟ್ಟಿಗೆ ರಾಗ ತೆಗೀತಾವೆ. ಅವುಗಳ ಸ್ವರವೂ ಹೀಗೆ ಕೇಳುವುದಿಲ್ಲ. ಒಂದು ಕೂಗಿನಿಂದ ಇನ್ನೊಂದು ಕೂಗಿಗೆ ಇಷ್ಟೊತ್ತಿನ ಅಂತರ ಇರಲು ಸಾಧ್ಯವಿಲ್ಲ’ ಎಂಬುದು ಇವರ ವಾದ.
ಮತ್ತೆಷ್ಟು ಹೊತ್ತು ಕಾದರೂ ಸದ್ದು ಕೇಳಲಿಲ್ಲ.. ಏನೋ ಪ್ರಾಣಿಯ ಕೂಗಿರಬಹುದು.. ಈಗ ಹೋಯ್ತೇನೋ ಅಂದುಕೊಂಡು ಮಲಗಿದೆವು. ಕಣ್ಣಿಗೆ ಇನ್ನೇನು ನಿದ್ದೆ ಬರಬೇಕು ಎನ್ನುವಷ್ಟರಲ್ಲಿ ಮತ್ತೆ ಕೇಳಿತ್ತು ಆ ಕೂಗು.
ಅತ್ತೆ ಮತ್ತು ಮಾವನ ವಿರೋಧದ ನಡುವೆಯೂ ಇವರು ಟಾರ್ಚ್ ಹಿಡಿದು ಹೊರಟೇ ಬಿಟ್ಟರು ತೋಟಕ್ಕೆ. ಹೇಳಿದ ಮಾತು ಕೇಳುವುದಿಲ್ಲ ನೀನು ನಾಳೆ ಬೆಳಗ್ಗೆ ನೋಡಿದರಾಗದೇ? ಎಂದು ಗೊಣಗಿಕೊಂಡೇ ಮಾವನೂ ಇವರ ಹಿಂದೆ ನಡೆದರು.
ತೋಟದ ಒಳಗೆಲ್ಲೂ ಏನೂ ಸದ್ದಿಲ್ಲ. ತೋಟದ ಮೂಲೆಯಲ್ಲಿ ಒಂದು ಸಣ್ಣ ಗುಂಡಿಯಿತ್ತು. ಹಳೇ ಬಾವಿಯನ್ನು ಅರ್ಧದಷ್ಟು ಮುಚ್ಚಿ ಇನ್ನರ್ಧದಷ್ಟು ಬಿಟ್ಟ ಜಾಗ ಅದು. ಒಂದು ತೆಂಗಿನ ಗಿಡ ನೆಡಬಹುದಾದಷ್ಟು ಆಳವಿತ್ತು. ಅದರಿಂದಾಚೆ ಮುಳ್ಳು ಬಿದಿರಿನ ಮೆಳೆ. ಅದು ನಮ್ಮ ತೋಟಕ್ಕೂ ಹೊರಗಿನ ರಸ್ತೆಗೂ ಸಹಜವಾದ ಬೇಲಿಯಂತಾಗಿತ್ತು. ಆ ಕಡೆಯಿಂದ ಪ್ರಾಣಿಗಳೂ ಕೂಡಾ ನುಸುಳಿ ಬಾರದಂತ ಅಬೇಧ್ಯ ಕೋಟೆಯಂತಿತ್ತು ಅದು. ಟಾರ್ಚಿನ ಬೆಳಕಲ್ಲಿ ಇವರು ಅತ್ತ ಹೊರಟರೆ ಮಾವ ‘ ಅಲ್ಲೆಂತ ನೋಡುವುದು. ಅಲ್ಲಿ ಇರುವೆ ಕೂಡಾ ನುಗ್ಗಲ್ಲಿಕೆ ಜಾಗ ಇಲ್ಲದಷ್ಟು ಮುಳ್ಳು ತುಂಬಿದೆ, ಅಲ್ಲೆಂತ ಇರ್ಲಿಕ್ಕೆ ಸಾಧ್ಯವೇ ಇಲ್ಲ’ ಅನ್ನುತ್ತಿರುವಾಗಲೇ ಮತ್ತೊಮ್ಮೆ ಅದೇ ಕಡೆಯಿಂದ ಕೂಗು..
ಅಂಗಳದ ತುದಿಯಲ್ಲಿ ನಿಂತು ಇವರಿಬ್ಬರೂ ಬರುವುದನ್ನು ಕಾಯುತ್ತಿದ್ದ ನನಗೂ ಅತ್ತೆಗೂ ನಿಂತಲ್ಲೇ ಮೈ ನಡುಕ.
ಹೋಗಿ ನೋಡಿದರೆ ಲಾರೆನ್ಸ್ ಆ ಹೊಂಡದೊಳಗೆ ಬಿದ್ದಿದ್ದಾನೆ.. ಆಗಾಗ ಮೇಲೆ ಬರುವ ಪ್ರಯತ್ನ ಮಾಡುತ್ತಾ ವಿಫಲವಾದಾಗ ತೊದಲು ಸ್ವರದಲ್ಲಿ ವಿಚಿತ್ರವಾಗಿ ಕಿರುಚುತ್ತಿದ್ದ.
ಅವನನ್ನು ಎತ್ತಿ ಮೇಲೆ ತರುವುದು ಇವರಿಬ್ಬರಿಂದ ಆಗದ ಕೆಲಸ. ಜೊತೆಗೆ ಬಿದ್ದ ರಭಸಕ್ಕೆ ಕೈಯೋ ಕಾಲೋ ಮುರಿದಿರಬಹುದೆಂಬ ಹೆದರಿಕೆಯೂ ಇತ್ತು. ಅವನ ಮನೆಗೆ ಹೋಗಿ ಹೇಳಿ ಬಂದರೂ ಮಲಗಿರುವ ಪುಟ್ಟ ಮಕ್ಕಳನ್ನು ಬಿಟ್ಟು ಅವನ ಹೆಂಡತಿ ಬಂದರೂ ಆಕೆ ಮಾಡುವುದಾದರೂ ಏನನ್ನು? ಆಗೆಲ್ಲಾ ಫೆÇೀನ್ ಎನ್ನುವುದು ದುಬಾರಿ ವಸ್ತು ಎಂದೇ ನಂಬಿಕೆಯಿದ್ದ ಕಾಲ. ಒಂದು ಮೈಲಿಗಿಂತಲೂ ದೂರವಿದ್ದ ಇದೇ ಸುಬ್ಬಪ್ಪನ ಮನೆಗೆ ಹೋಗಿ ಅವನನ್ನು ಎಬ್ಬಿಸಿ, ಅವನೊಡನೆ ಅವನ ಇಬ್ಬರು ಗಂಡು ಮಕ್ಕಳನ್ನೂ ಕರೆದುಕೊಂಡು ಬಂದರು.
ಎಲ್ಲರೂ ಸೇರಿ ಅವನನ್ನು ಮೇಲೆತ್ತಿದರೂ ಆತ ನಡೆಯುವ ಸ್ಥಿತಿಯಲ್ಲಿರಲಿಲ್ಲ. ಎತ್ತಿಕೊಂಡು ಹೋಗೋಣ ಎಂದರೆ ಆತ ಕೈಕಾಲು ಬಡಿಯುತ್ತಾ ವಿಚಿತ್ರವಾಗಿ ಕಿರುಚುತ್ತಾ ಇದ್ದ. ಆಗ ಇವರಿಗೆ ಹೊಳೆದ ಉಪಾಯ ಒಂದೇ. ಮನೆಯ ಮಾಡಿಗೆ ಕಟ್ಟಿದ್ದ ವೀಳ್ಯದೆಲೆ ಕೊಯ್ಯುವ ಪುಟ್ಟ ಏಣಿ ಮತ್ತು ಎರಡು ತುಂಡು ಹಗ್ಗ ಹಿಡಿದುಕೊಂಡು ಹೋಗಿ ಅವನನ್ನು ಬಲವಂತವಾಗಿ ಅದರ ಮೇಲೆ ಮಲಗಿಸಿ ಕಟ್ಟಿ ಎತ್ತಿ ಅವನ ಮನೆಗೊಯ್ದರು. ಅವನ ಅವಸ್ಥೆ ನೋಡಿ ಅವನ ಹೆಂಡತಿ ಬಾಯಿಗೆ ಬಂದಂತೆ ಅವನನ್ನೂ ಮೂದಲಿಸುತ್ತಲೇ ಚಾಪೆ ಬಿಡಿಸಿದಳು. ಅದರಲ್ಲಿ ಅವನನ್ನು ಹೊತ್ತು ಹಾಕಿ ಇವರೆಲ್ಲಾ ಹೊರಟು ಬರುವಾಗ ‘ ನನ್ನ ಮಾಂಗಲ್ಯ ಉಳಿಸಿದಿರಿ’ ಎಂದು ಕಣ್ಣೀರು ತುಂಬಿಕೊಂಡಿದ್ದಳು.
ಗಂಡನನ್ನು ಸರಿ ದಾರಿಗೆ ತರುವ ಹಠ ಹೊತ್ತವಳೇ ಒಂದು ತಿಂಗಳು ಶಾಲೆಗೆ ಹೋಗುವ ಮಕ್ಕಳನ್ನು ಅತ್ತೆಯ ವಶಕ್ಕೆ ಬಿಟ್ಟು ಅವನನ್ನು ಕರೆದುಕೊಂಡು ತವರು ಮನೆಯ ದಾರಿ ಹಿಡಿದಿದ್ದಳು. ತನ್ನ ಸಹೋದರದ ಸಹಾಯದಿಂದ ಮಧ್ಯವರ್ಜನ ಶಿಬಿರಕ್ಕೆ ಅವನನ್ನು ಸೇರಿಸಿದಳು. ಮೊದಲ ಸಲ ಅಲ್ಲಿಂದ ಹೊರ ಬಂದವನು ಮನೆಗೆ ಬಂದು ನಾಲ್ಕು ದಿನ ಮನೆಯೊಳಗೇ ಇದ್ದು ಐದನೇ ದಿನ ತೋಟದೆಲ್ಲಾ ಬಾಳೆಗೊನೆಗಳನ್ನು ಕಡಿದು ರಿಕ್ಷಾದಲ್ಲಿ ತುಂಬಿ ಮಾರಲು ತೆಗೆದುಕೊಂಡು ಹೋದ. ತನ್ನ ಗಂಡ ಜವಾಬ್ಧಾರಿಯಿಂದ ವರ್ತಿಸುತ್ತಿರುವದನ್ನು ಕಂಡ ಆಕೆಗೆ ಹೆಮ್ಮೆ ಎನ್ನಿಸಿತ್ತು. ಸ್ವಲ್ಪ ಹೊತ್ತಷ್ಟೇ.. ಹೋದ ರಿಕ್ಷಾದಲ್ಲಿಯೇ ಯಾರೋ ಇಬ್ಬರು ಅವನನ್ನು ಹೊತ್ತು ತಂದು ಮನೆಯಂಗಳದಲ್ಲಿ ಇಳಿಸಿದ್ದರು. ಬಾಳೆಕಾಯಿ ಮಾರಿದ ಎಲ್ಲಾ ಹಣದಿಂದ ಆತ ಕುಡಿದಿದ್ದ.
ಎದೆ ಬಡಿದುಕೊಂಡು ಅತ್ತರೂ ಎದೆಗುಂದಲಿಲ್ಲ ಆಕೆ. ಮತ್ತೊಮ್ಮೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿದಳು. ಅಲ್ಲಿಂದ ಬಂದವನನ್ನು ಒಂದು ಆಶ್ರಮದಲ್ಲಿ ಬಿಟ್ಟಿದ್ದಳು. ನಂತರ ಇನ್ನೊಂದು ಮಧ್ಯವರ್ಜನ ಶಿಬಿರಕ್ಕೆ.. ಹೀಗೆ ಆಕೆ ಆತನನ್ನು ಕಟ್ಟಿಕೊಂಡು ನಾಲ್ಕಾರು ಬಾರಿ ಅಲೆದಾಡಿ, ಒದ್ದಾಡಿದ ಬಳಿಕ ಅವನೂ ಕುಡಿಯುವುದು ಹಾನಿಕರ ಎಂಬುದನ್ನು ಅರ್ಥಮಾಡಿಕೊಂಡಿದ್ದ.
ಹಣದ ವ್ಯವಹಾರಗಳನ್ನೆಲ್ಲಾ ಈಗ ಅವಳೇ ನಡೆಸುತ್ತಿದ್ದಳು. ಮೊದಲೆಲ್ಲಾ ಅವಳನ್ನು ಹೊಡೆದು ಬಡಿದು ಹಣ ಎತ್ತಿಕೊಂಡು ಹೋಗುತ್ತಿದ್ದವನು ಈಗ ಬದಲಾಗಿದ್ದ.
ಮಕ್ಕಳು ದೊಡ್ಡವರಾಗುತ್ತಿದ್ದರು.
ಮನೆಯ ಸಮೀಪ ಕೃಷಿ ಮಾಡದೇ ಬಿಟ್ಟಿದ್ದ ಜಾಗದಲ್ಲಿ ಅಡಿಕೆ ಗಿಡಗಳೆದ್ದವು. ಬಾಳೆ, ಕರಿಮೆಣಸು ಕೈ ಹಿಡಿದವು. ಗಂಡನ ಕೆಟ್ಟ ಅಭ್ಯಾಸ ತನ್ನ ಮಗನಿಗೆ ಬರಬಾರದೆಂದು ತವರಿನಲ್ಲಿಯೇ ಓದುತ್ತಿದ್ದ ಮಗ ಉದ್ಯೋಗಿಯಾಗಿ ಮನೆಗೆ ಮರಳಿದ್ದ. ಇಬ್ಬರು ಮಗಳಂದಿರು ಮದುವೆಯಾಗಿ ಯೋಗ್ಯ ಮನೆ ಸೇರಿದ್ದರು. ಮೊನ್ನೆ ಮೊನ್ನೆಯಷ್ಟೇ ಹರಿದು ಬೀಳುವಂತಿದ್ದ ಹಳೇ ಮನೆಯನ್ನು ಬೀಳಿಸಿ ಹೊಸಾ ಮನೆ ಕಟ್ಟಿಸಿದ್ದ. ಸೆಕೆಂಡ್ ಹ್ಯಾಂಡ್ ಬೈಕ್ ಕೂಡಾ ತೆಗೆದಿದ್ದ.
ನನ್ನ ನೆನಪಿನೆಳೆ ಕಡಿಯುವಂತೆ ‘ ಆದರೆ ಅವನಿಗೆ ಈಗ ಡೌಲು ಬಂದದ್ದು ಹೌದು ಮಾರ್ರೇ.. ಮೊನ್ನೆ ಹಾಲಿನ ಸೊಸೈಟಿಗೆ ಹಾಲು ಹಾಕಿ ಖಾಲಿ ಕ್ಯಾನ್ ಹಿಡಿದು ಬರುವಾಗ ಇವನ ಬೈಕ್ ಮೈನ್ ರೋಡಿನಿಂದ ನಮ್ಮ ಮಣ್ಣಿನ ಮಾರ್ಗಕ್ಕೆ ತಿರುಗುತ್ತಿತ್ತು ಹಿಂದಿನ ಸೀಟ್ ಖಾಲಿ ಇತ್ತಲ್ಲ .. ‘ಹೋಯ್ ನಾನೂ ಬರ್ತೇನೆ ಮಾರಾಯ ನಿಲ್ಸು .. ಅಂತ ಕಿರುಚಿದೆ. ನಿಲ್ಲಿಸದೇ ಹೋಗಿದ್ದೇ ಅಲ್ವಾ ಈ ಜನ..’ ದೂರುವಂತೆ ಹೇಳಿದ ಸುಬ್ಬಪ್ಪ..
ವಿನ್ಸಿ ಜೋರಾಗಿ ನಗುತ್ತಾ ‘ ಅವ್ನು ಬೈಕ್ ಬಿಡುವುದನ್ನು ನೋಡಿದ್ದೀರಾ? ಅಂದು ಅವನು ಕುಡಿದು ತೂರಾಡುತ್ತಿದ್ದಂತೆ ಈಗವನ ಬೈಕ್ ತೂರಾಡ್ತದೆ ಮಾರ್ರೇ.. ಇನ್ನೂ ಡ್ರೈವಿಂಗ್ ಸ್ಟಡಿ ಆಗ್ಲಿಲ್ಲ.. ನಿನ್ನ ಪುಣ್ಯ ಅವನು ಕೂರಿಸಿಕೊಳ್ಳದಿದ್ದುದು.. ಇಲ್ಲದಿದ್ರೆ ನಮ್ಮ ಮಣ್ಣಿನ ಮಾರ್ಗದ ಹೊಂಡ ಗುಂಡಿಗಳಲ್ಲಿ ಅದರ ಟಯರ್ ಬಿದ್ದು ಮೇಲೇಳುವಾಗ ನೀನು ಜಾರಿ ಹೊಂಡದಲ್ಲಿರ್ತಿದ್ದೀಯಾ..’ಎಂದ.
‘ಅದು ನೀನು ಹೇಳುವುದು ಕರೆಕ್ಟ್. ಅಲ್ಲಾ ಎಂತಾ ಅವಸ್ಥೆ ನಮ್ಮ ಮಾರ್ಗದ್ದು .. ಈ ಸಲ ಮಾರ್ಗದಲ್ಲಿ ನೆಟ್ಟಗೆ ನಡೀಲಿಕ್ಕೆ ಆಗುವುದಿಲ್ಲ ಮಾರಾಯಾ.. ಅಷ್ಟು ಹಾಳಾಗಿದೆ.. ’ ಎಂದು ಇಸುಬು ಹೇಳುತ್ತಿದ್ದಂತೆ ಮಾತು ಲಾರೆನ್ಸನ್ನು ಬಿಟ್ಟು ಮಾರ್ಗದ ದುರವಸ್ಥೆಯ ಕಡೆಗೆ ತಿರುಗಿತು.
-ಅನಿತಾ ನರೇಶ್ ಮಂಚಿ.
******
ಚೆನ್ನಾಗಿದ ಮೇಡಂ.
ಲಾರೆನ್ಸನ ಕುಡಿತವನ್ನು ಬಿಡಿಸಿ ಅವನನ್ನು ಮನುಷ್ಯನನ್ನಾಗಿ ಮಾಡಿದ ಅವನ ಹೆಂಡತಿಯನ್ನು ಮೆಚ್ಚಲೇ ಬೇಕು. ನಿರೂಪಣೆ ಚೆನ್ನಾಗಿದೆ.
manege baruva kelasadavara kuditada avaste nodi, eshtendaru bidada avara kuditada kadeya aasakti nodi eshto sala beragagiddide…. chennagide !!
Tnq.. 🙂
ಚೆಂದದ ನಿರೂಪಣೆ ಮೇಡಮ್:-)