ಚಳಿಯ ಕಾರಣಕ್ಕೆ ವಾಕಿಂಗ್ ಮತ್ತು ಜಾಗಿಂಗ್ ಅನ್ನು ಅಕ್ಷರಶಃ ನಿಲ್ಲಿಸಿಬಿಟ್ಟಿದ್ದ ನಾನು ಇತ್ತೀಚೆಗೆ ಶಿವರಾತ್ರಿಯ ತರುವಾತ ಚಳಿ ಕಡಿಮೆ ಆದ ಕಾರಣ ಬೆಳಿಗ್ಗೆ ಅಥವಾ ಸಂಜೆ ಮತ್ತೆ ವಾಕ್ ಶುರು ಮಾಡಿದ್ದೆ. ಆಫೀಸಿನ ದಿನಗಳಾದರೆ ಸಂಜೆ ಐದೂವರೆ ಆರು ಗಂಟೆ ಆಗುತ್ತಿದ್ದಂತೆ ಆಫೀಸಿನಿಂದಲೇ ಸೀದಾ ತೀಸ್ತಾ ನದಿಯ ಪಕ್ಕದಲ್ಲಿರುವ ಕಟ್ಟೆಯ ಮೇಲೆ ಒಂದೂ ಒಂದೂವರೆ ಗಂಟೆ ತಪ್ಪದೆ ವಾಕ್ ಮಾಡುತ್ತೇನೆ. ಇವತ್ತು ಭಾನುವಾರ ರಜೆ ಇದ್ದುದರಿಂದ ಬೆಳಿಗ್ಗೆ ಬೇಗನೆ ಎದ್ದವನು ರೆಡಿಯಾಗಿ ಮಾರ್ನಿಂಗ್ ವಾಕ್ ಗೆಂದು ತೀಸ್ತಾ ನದಿಯ ತೀರದಲ್ಲಿ ಅಡ್ಡಾಡಿ ಬರಲೇಬೇಕು ಎಂದು ಹೊರಟುಬಿಟ್ಟಿದ್ದೆ. ನದಿ ನಾನು ನಿತ್ಯ ವಾಕ್ ಮಾಢುವ ಆ ಕಟ್ಟೆಯಿಂದ ಒಂಚೂರು ದೂರದಲ್ಲಿ ಇರುವ ಕಾರಣ ನದಿಯ ಸಮೀಪ ಹೋಗಿ ತುಂಬಾ ದಿನವಾಗಿತ್ತು.
ನಾನು ಇವತ್ತು ವಾಕಿಂಕ್ ಹೋಗಿದ್ದ ತೀಸ್ತಾ ನದಿಯ ಜಾಗಕ್ಕೆ ತೀಸ್ತಾ ಸ್ಪಾರ್ ಅಂತ ಕರೀತಾರೆ. ಆ ಜಾಗದಲ್ಲಿ ಒಂದು ಪುಟ್ಟ ಪಾರ್ಕ್ ಸಹ ಇದೆ. ದಿನವಿಡೀ ಆ ಪಾರ್ಕಿನ ಆಸುಪಾಸಿನ ಬಳಿ ಜನಗಳು ಇದ್ದೇ ಇರುತ್ತರಾದರೂ ಸಂಜೆಯ ವೇಳೆಯಂತು ಜನರ ಒಂದು ಪುಟ್ಟ ಜಾತ್ರೆಯೇ ಆ ಜಾಗದಲ್ಲಿ ನೆರೆಯುತ್ತದೆ. ಆ ಜಾಗದಲ್ಲಿ ನಿಂತರೆ ವಿಸ್ತಾರವಾದ ತೀಸ್ತಾ ನದಿಯನ್ನು ಕಣ್ತುಂಬಿಕೊಳ್ಳಬಹುದು. ಆ ಜಾಗದಲ್ಲಿ ತೀಸ್ತಾ ನದಿಯ ಅಗಲ ಬಹುಶಃ ಮೂರು ಕಿಲೋ ಮೀಟರ್ ನಷ್ಟಿರಬಹುದು. ಮಳೆಗಾಲದಲ್ಲಾದರೆ ಉಕ್ಕಿ ಹರಿವ ತೀಸ್ತಾ ಇವತ್ತು ನೀರೇ ಇಲ್ಲದೆ ಬತ್ತಿ ಹೋಗಿರುವುದ ಕಂಡು ನನಗೆ ಒಂಚೂರು ಬೇಸರವೇ ಆಯಿತು ಎನ್ನಬಹುದು. ನೀರೇ ಇಲ್ಲದಂತೆ ತೀಸ್ತಾ ಬತ್ತಿ ಹೋಗಿರುವುದು ನಾನು ಈ ಎರಡು ವರ್ಷದಲ್ಲಿ ನೋಡಿರಲಿಲ್ಲ. ಆ ನದಿಯ ಅಗಲ ಸುಮಾರು 3 ಕಿಲೋ ಮೀಟರ್ ಇರುವ ಕಾರಣ 2 ಕಿಲೋ ಮೀಟರ್ ದೂರದಲ್ಲಿ ತೀಸ್ತಾ ಪುಟ್ಟದಾಗಿ ಹರಿಯುತ್ತದಂತೆ. ಸಾಮಾನ್ಯವಾಗಿ ನೀರಿಲ್ಲದ ಚಳಿಗಾಲ ಅಥವಾ ಬೇಸಿಗೆಯಲ್ಲಿ ಜನ ತೀಸ್ತಾ ನದಿಯ ಒಂದು ತೀರದಲ್ಲಿ ತೀಸ್ತಾ ಸ್ಪಾರ್ ನ ಬಳಿ ಮರಳಿನಲ್ಲಿ ಆಟವಾಡಿಕೊಳ್ಳುತ್ತಾರೆ. ಅದೃಷ್ಟವಿದ್ದರೆ ತೀಸ್ತಾ ನದಿ ಹೀಗೆ ತೀರ ಬತ್ತಿಲ್ಲವೆಂದರೆ ಅಲ್ಲೇ ದೋಣಿ ವಿಹಾರದ ಸೌಲಭ್ಯ ಸಹ ಇರುತ್ತದೆ.
ಇವತ್ತು ತೀಸ್ತಾ ಸ್ಪಾರ್ ತಲುಪಿದ ಮೇಲೆ ಅಲ್ಲಿಂದ ನೀರಿಲ್ಲದ ತೀಸ್ತಾದ ನದಿಯಲ್ಲಿ ಒಂದಷ್ಟು ದೂರು ಸುಮ್ಮನೆ ನಡೆದುಬಿಟ್ಟಿದ್ದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಬೋರ್ಗರೆಯುವ ತೀಸ್ತಾ ದಸರ ದೀಪಾವಳಿಯ ನಂತರ ಪುಟ್ಟ ನದಿಯಾಗಿ ಮಾರ್ಪಾಟಾಗುತ್ತದೆ. ಹಾಗೆ ಪುಟ್ಟ ನದಿಯಾಗಿ ಮಾರ್ಪಾಟಾದಾಗ ನದಿಯನ್ನು ದಾಟಿ ಒಂದಷ್ಟು ದನ ಕರುಗಳು ತೀಸ್ತಾ ನದಿಯ ಮಧ್ಯ ಭಾಗದಲ್ಲಿರುವ ಹುಲ್ಲುಗಾವಲಿನಂತಹ ಜಾಗದಲ್ಲಿ ಮೇಯುತ್ತವೆ. ಅಲ್ಲಿಗೆ ಬರುವ ಪ್ರೇಕ್ಷಕರಾರು ಆ ಪುಟ್ಟ ನದಿಯನ್ನು ದಾಟಿ ಆ ಹುಲ್ಲುಗಾವಲಿನಂತಹ ಜಾಗದಲ್ಲಿ ಎಂದೂ ಅಡ್ಡಾಡುವುದಿಲ್ಲ. ಈ ಹಿಂದೆ ತೊಡೆಮಟ್ಟದ ನೀರಿನಲ್ಲಿ ನದಿ ದಾಟಿ ತೀಸ್ತಾ ನದಿಯಂತಹ ಹುಲ್ಲುಗಾವಲಿನಲ್ಲಿ ಓಡಾಡಿ ತೀಸ್ತಾ ನದಿಯ ತಡದಲ್ಲಿ ಸುಂದರ ಸಂಜೆಗಳನ್ನು ಕಳೆದುಬಂದಿರುವ ನಾನು ಇವತ್ತೂ ಹಾಗೆಯೇ ನೀರಿಲ್ಲದ ನದಿಯಲ್ಲಿ ಅಡ್ಡಾಡುತ್ತ ಆ ಹುಲ್ಲುಗಾವಲಿನಂತಹ ಜಾಗ ತಲುಪಿದ್ದೆ. ಆಗ ಆ ಹುಲ್ಲುಗಾವಲಿನಂತಹ ಜಾಗದಲ್ಲಿ ನನ್ನ ಎರಡು ವರ್ಷದ ಜಲ್ಪಾಯ್ಗುರಿಯ ಅವಧಿಯಲ್ಲಿ ಕಾಣದ ಒಂದು ಅಚ್ಚರಿ ನನಗೆ ಇಂದು ಕಂಡಿತ್ತು.
ಯಾರೋ ನದಿಯಲ್ಲಿ ಬೆಳೆಯುವ ಒಂದು ತರಹದ ಹುಲ್ಲನ್ನು ಕುಯ್ದು ಒಂದು ಕಡೆ ಚಂದವಾಗಿ ಜೋಡಿಸಿಟ್ಟಿದ್ದರು. ನನಗೆ ಆ ಹುಲ್ಲಿನ ಮೆದೆಗಳನ್ನು ನೋಡಿ ಅಚ್ಚರಿಯಾಗಲಿಲ್ಲ. ಬದಲಿಗೆ ಆ ಹುಲ್ಲುಗಾವಲಿನಲ್ಲಿ ಕಾಣುತ್ತಿದ್ದ ಒಂದೆರಡು ಪುಟ್ಟ ಗುಡಿಸಲುಗಳನ್ನು ನೋಡಿ ಅಚ್ಚರಿಯಾಗಿತ್ತು. ಇವು ಮೀನುಗಾರರ ಗುಡಿಸಲು ಎನ್ನೋಣ ಎಂದರೆ ನದಿಯಲ್ಲಿ ನೀರೇ ಇಲ್ಲದ ವೇಳೆ ಮೀನುಗಾರರು ಗುಡಿಸಲು ಕಟ್ಟಿಕೊಂಡು ಏನು ಮಾಡ್ತಾರೆ ಎನಿಸಿತ್ತು. ಹಾಗಾದರೆ ಈ ಗುಡಿಸಲುಗಳು ಯಾರ ಗುಡಿಸಲು ಎಂದೆನಿಸುತ್ತ ಆ ಹುಲ್ಲುಗಾವಲಿನ ಬಳಿ ಹೋಗಿ ನೋಡಿದಾಗ ಟ್ರಾಕ್ಟರ್ ನಲ್ಲಿ ಆ ಜಾಗವನ್ನು ಯಾರೋ ಉತ್ತಿದ್ದಂತೆ ಕಂಡಿತು. ಏನೋ ಇರಬೇಕೆಂದು ನನಗ್ಯಾಕೆ ಎಂದುಕೊಂಡು ನೀರಿಲ್ಲದ ನದಿಯ ನುಣುಪಾದ ಮರಳಿನ ಮೇಲೆ ನಡೆಯುತ್ತಾ ಹೋದೆ. ದೂರದಲ್ಲಿ ಒಂದಷ್ಟು ಹದ್ದುಗಳು ಕಂಡವು. ಇನ್ಯಾವುದೋ ಹಕ್ಕಿ ನೆಲದ ಮೇಲೆಯೇ ನಡೆಯುತ್ತಲೇ ನನ್ನ ಕಂಡು ತನ್ನ ನಡಿಗೆಯ ವೇಗವನ್ನು ಹೆಚ್ಚಿಸಿಕೊಳ್ಳುತ್ತಾ ಓಡಿ ಹೋಯಿತು. ಯಾರ ಪಾದದ ಸ್ಪರ್ಶವೂ ತಾಕಿಲ್ಲದ ಆ ಮರಳಿನ ಮೇಲೆ ಸೂಕ್ಷ್ಮವಾಗಿ ಗಮನಿಸಿದಾಗ ಹಕ್ಕಿಯ ಪಾದದ ಚಿತ್ತಾರಗಳು ಕಂಡವು. ಮೊಬೈಲ್ ನಿಂದ ಹಕ್ಕಿಗಳ ಹೆಜ್ಜೆ ಗುರುತುಗಳನ್ನು ಕ್ಲಿಕ್ಕಿಸಿಕೊಂಡು ನನಗಿಷ್ಟದ ಒಂದು ಹೆಸರನ್ನು ಆ ಮರಳ ಮೇಲೆ ಬರೆದು ಅದರ ಫೋಟೋ ತೆಗೆದು ಒಂದಷ್ಟು ಸೆಲ್ಫಿ ತೆಗೆದು ಮತ್ತೆ ಆ ಹುಲ್ಲುಗಾವಲಿನ ಮೇಲೆ ಹೆಜ್ಜೆ ಇಟ್ಟೆ. ಅಜ್ಜನೊಬ್ಬ ತನ್ನ ದನಗಳನ್ನು ಹೊಡೆದುಕೊಂಡು ಬರುತ್ತಿದ್ದ. ಅವನ ಹಿಂದೆ ಒಬ್ಬ ಅಜ್ಜಿಯೂ ತನ್ನ ಎರಡು ದನಗಳೊಂದಿಗೆ ತೂರಾಡುತ್ತಾ ಬರುತ್ತಿದ್ದರು. ಇಬ್ಬರನ್ನೂ ಆ ಗುಡಿಸಲು ಯಾರವು ಎಂದು ಕೇಳಿದೆ. ಅವರಿಬ್ಬರ ಭಾಷೆ ನನಗೆ ಸರಿಯಾಗಿ ಅರ್ಥವಾಗದ ಕಾರಣ ಯಾಕೋ ಏನೋ ಪಾದ ಇಟ್ಟರೆ ಮರಳಿನಲ್ಲಿ ಪಾದಗಳು ಊತು ಹೋಗುವ ಆ ಹುಲ್ಲುಗಾವಲಿನ ಮಣ್ಣಿನ ಮೇಲೆ ಹೆಜ್ಜೆ ಇಡುತ್ತಾ ದೂರದಲ್ಲಿ ಕಾಣುತ್ತಿದ್ದ ಗುಡಿಸಲಿನ ಬಳಿ ಹೊರಟುಬಿಟ್ಟೆ.
ನನ್ನ ಅಚ್ಚರಿಗೆ ಆ ಗುಡಿಸಲಿನ ಬಳಿ ಹೋಗುತ್ತಿದ್ದಂತೆ ದೂರದಿಂದಲೇ ಯಾವುದೋ ಫಸಲನ್ನು ಹೊತ್ತ ಹೊಲ ಕಂಡಿತು. ಈ ಜಾಗಕ್ಕೆ ಒಂದಷ್ಟು ತಿಂಗಳಿನಿಂದ ನಾನು ಬಂದಿಲ್ಲದಿದ್ದರಿಂದ ಅಲ್ಲಿ ಕಂಡ ಹೊಲ ನನಗೆ ಅಚ್ಚರಿ ಮೂಡಿಸಿತ್ತು. ಆ ಗುಡಿಸಲಿನ ಬಳಿ ಹೋಗಿ ಅಲ್ಲಿ ಕುಳಿತು ಬಿದಿರಿನ ಬೊಂಬುಗಳನ್ನು ಕತ್ತರಿಸುತ್ತಿದ್ದ ವ್ಯಕ್ತಿಯ ಬಳಿ "ಅಲ್ಲಾ ನಾನು ಎರಡು ವರ್ಷದಿಂದ ಈ ಜಾಗ ನೋಡಿದ್ದೀನಿ. ನದಿ ಮಧ್ಯೆ ಇರೋ ಈ ಜಾಗದಲ್ಲಿ ಹುಲ್ಲುಗಾವಲು ನೋಡಿದ್ದೆನಾ ಹೊರತು ಹೊಲ ನೋಡಿದ್ದು ಇದೇ ಮೊದಲು ಎಂದು ನನ್ನ ಅಚ್ಚರಿ ಹೇಳಿದೆ. "ಹೂಂ ಒಂದು ನಾಲ್ಕೈದು ತಿಂಗಳಿಂದ ಈ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದೀನಿ ಎಂದು ನಗುತ್ತಾ ಆ ವ್ಯಕ್ತಿ ತಾನು ಆ ಬಯಲಿನಲ್ಲಿ ಬೆಳೆದ ಗೋದಿ, ಟೊಮಾಟೋ, ಕುಂಬಳ, ಬದನೆಕಾಯಿ, ಮೆಣಸಿನಕಾಯಿ, ಹಾಗಲಕಾಯಿ, ಪಟೋಲ್, ಕೀರೆ, ತಂಬಾಕು, ಎಲೆ ಕೋಸು, ಮೂಲಂಗಿ, ಗೆಣಸು, ಸೋರೆಕಾಯಿ, ಹೀರೆಕಾಯಿ, ಕೊತ್ತಂಬರಿ ಸೊಪ್ಪು, ಜ್ಯೂಟ್ ಗಿಡಗಳನ್ನು ತೋರಿಸುತ್ತಾ ಹೋದ. ಅರೆ! ನದಿ ಮಧ್ಯೆ ಹೀಗೊಂದು ಸಾಹಸ ಸಾಧ್ಯನಾ ಅಂತ ನಾನು ಅಚ್ಚರಿಗೊಳ್ಳುತ್ತಿದ್ದರೆ ಆತ ನಗು ನಗುತ್ತಾ ತನ್ನ ಸಾಹಸಗಾಥೆಯನ್ನು ನನಗೆ ವಿವರಿಸುತ್ತಾ ಹೋಗಿದ್ದ.
"ನಮ್ಮಪ್ಪ 150 ರೂಪಾಯಿ ಕೊಟ್ಟು ನಲವತ್ತು ವರ್ಷದ ಹಿಂದೆ ಇಲ್ಲಿ ಜಮೀನು ಕೊಂಡಿದ್ದರು. ಹತ್ತು ವರ್ಷ ಈ ನೆಲ ನಮ್ಮ ಅನ್ನದ ಮೂಲವಾಗಿತ್ತು. ನಮ್ಮ ಮನೆ ಸಹ ಇಲ್ಲೇ ಇತ್ತು. ಮೂವತ್ತು ವರ್ಷದ ಹಿಂದೆ ತೀಸ್ತಾ ಉಕ್ಕಿ ಹರಿದು ಪ್ರವಾಹ ಬಂದ ಪರಿಣಾಮ ನಮ್ಮ ಹೊಲ ಮನೆಗಳೆಲ್ಲಾ ತೀಸ್ತಾದ ನೀರಿನಲ್ಲಿ ಕೊಚ್ಚಿ ಹೋದವು. ಆಗ ಎಷ್ಟೋ ಜನ ತೀರಿಕೊಂಡರು. ಆಮೇಲೆ ಅಲ್ಲಿ ದೂರದಲ್ಲಿ ಕಾಣ್ತಾ ಇದೆಯಲ್ಲ ಊರು ಅಲ್ಲಿ ಹೋಗಿ ಮನೆ ಕಟ್ಟಿಕೊಂಡು ವಾಸ ಮಾಡ್ತಾ ಇದ್ವಿ. ಕಳೆದ ವರ್ಷ ನಮ್ಮಪ್ಪ ತೀರಿಕೊಂಡ್ರು. ಯಾಕೋ ತೀಸ್ತಾ ನದಿಯಲ್ಲಿ ಓಡಾಡುವಾಗೆಲ್ಲಾ ನಮ್ಮ ಜಮೀನಿನ ನೆನಪಾಗ್ತಾ ಇತ್ತು. ಹೋದ ವರ್ಷ ಧೈರ್ಯ ಮಾಡಿ ಜೇಬಲ್ಲಿದ್ದ ಮೂವತ್ತು ಸಾವಿರ ಖರ್ಚು ಮಾಡಿ ಪುಟ್ಟ ಪಂಪ್ ಸೆಟ್ ಹಾಕಿಸಿ ಈ ಗುಡಿಸಲು ಕಟ್ಟಿಕೊಂಡು ಟ್ರಾಕ್ಟರ್ ನಿಂದ ಹೊಲ ಉಳಿಸಿ, ಜೀವನದಲ್ಲೇ ವ್ಯವಸಾಯ ಮಾಡದೇ ಇದ್ರು ಅವರಿವರ ಹತ್ರ ತಿಳಕೊಂಡು ಹೀಗೆ ಬೆಳೆ ಬೆಳೆಯೋಣ ಅಂತ ಡಿಸೈಡ್ ಮಾಡಿದೆ. ಇದು ನದಿಯ ಜಾಗ ಆದ್ದರಿಂದ ನಮ್ಮ ಜಾಗ ಯಾವುದು ಬೇರೆಯವರ ಜಾಗ ಯಾವುದು ಅಂತ ಹೇಳೋದು ಕಷ್ಟ. ಒಂದಷ್ಟು ಊರ ಹಿರಿಯವರನ್ನು ಕರೆಸಿ ನಮ್ಮ ಜಾಗ ಇದು ಅಂತ ಇತ್ಯರ್ಥ ಆದ ಮೇಲೆ ವ್ಯವಸಾಯ ಮಾಡೋಕೆ ಶುರು ಮಾಡಿದೆ. ನಾನು ಈ ಜಮೀನಿನಲ್ಲಿ ದುಡಿಯೋಕೆ ಶುರು ಮಾಡಿದಾಗ ಜನ ನನಗೆಲ್ಲೋ ಹುಚ್ಚು ಅಂದರು. ನೀರು ಬಂದರೆ ಎಲ್ಲಾ ಕೊಚ್ಚಿಕೊಂಡು ಹೋಗುತ್ತೆ. ಸುಮ್ಮನೆ ಖರ್ಚು ಮಾಡಿ ಲಾಸ್ ಮಾಡಿಕೊಳ್ತಾನೆ. ಅಂತ ಮಾತನಾಡಿಕೊಂಡ್ರು. ನಾನು ಮಾತ್ರ ಅನಿಸಿದ್ದನ್ನು ಮಾಡ್ತಾ ಬಂದೆ. ಇವತ್ತು ಹೀಗಿದೆ ನೋಡಿ ನನ್ನ ಹೊಲ" ಅಂತ ತುಂಬಿ ನಿಂತ ತನ್ನ ಗೋದಿ ಹೊಲದ ಕಡೆ ಕೈ ತೋರಿಸಿದ.
ನೀರಿನ ಅಭಾವದ ಕಾರಣಕ್ಕೋ ಮಣ್ಣು ಮರಳು ಮರಳಾಗಿರುವ ಕಾರಣಕ್ಕೋ ಕೆಲವು ಬೆಳೆಗಳು ಸರಿಯಾಗಿ ಇನ್ನೂ ಕಣ್ಬಿಟ್ಟಿಲ್ಲದ ನೋಡಿದಾಗ "ಇವತ್ತು ನೀರಿದ್ದರೆ ಇವು ಇನ್ನು ಚೆನ್ನಾಗಿರ್ತಾ ಇದ್ದೋ. ತಂದ ಮೋಟರ್ ಕೆಟ್ಟು ನಿಂತಿದೆ. ಒಂದು ಚೂರು ಚೂರೆ ಹಣ ಹೊಂದಿಸಿಕೊಂಡು ಕೆಲಸ ಮಾಡ್ತಾ ಇದ್ದೇನೆ. ಇವತ್ತು ಎಲ್ಲದ್ದಕ್ಕೂ ಬಂಡವಾಳ ಹಾಕಬೇಕಾದ ಕಾರಣದಿಂದ ನನಗೆ ಹೀಗೆ ತೊಂದರೆಯಾಗ್ತಾ ಇದೆಯಾ ಹೊರತು ಮುಂದಿನ ವರ್ಷದಿಂದ ನಾನು ಬೆಳೆದಿದ್ದೆಲ್ಲಾ ಲಾಭವಾಗುತ್ತೆ." ಅಂತ ಖುಷಿಯಿಂದ ಹೇಳಿಕೊಂಡ. ನದಿ ಮಧ್ಯೆ ಇಂತದೊಂದು ಸಾಹಸಕ್ಕೆ ಕೈ ಹಾಕಿರುವ ಆತನ ಕಣ್ಣುಗಳಲ್ಲಿರುವ ಆಸೆ ನೋಡಿ ನಾನು ಅಚ್ಚರಿಪಟ್ಟಂತೆ ಅವನ ಊರಿನವರು ಅವನ ಹೊಲ ಕಂಡು ಅಚ್ಚರಿಪಟ್ಟಿದ್ದರು ಅನಿಸುತ್ತೆ. ಆ ಕಾರಣಕ್ಕೆ ನಾನು ಆತನೊಡನೆ ಮಾತನಾಡುವ ಸಮಯಕ್ಕೆ ಒಂದಷ್ಟು ಜನ ಛತ್ರಿ ಹಿಡಿದುಕೊಂಡು ಅಲ್ಲೆಲೋ ಒಂದು ಗುಂಪು ಮಾಡಿಕೊಂಡಿದ್ದರು. "ಯಾರವರು" ಎಂದೆ. "ನಮ್ಮ ಊರವರು. ತಮ್ಮ ಜಮೀನು ಎಲ್ಲೆಲ್ಲಿದೆ ಅಂತ ಜಮೀನನ್ನು ಹುಡುಕೋಕೆ ಬಂದಿದ್ದಾರೆ." ಅಂತ ಹೇಳಿದ. ದೂರದಲ್ಲಿ ಇನ್ನೊಂದಷ್ಟು ಛತ್ರಿ ಹಿಡಿದ ಗುಂಪು ಹುಲ್ಲುಗಾವಲಿನಂತಿದ್ದ ನದಿಯ ಭಾಗದಲ್ಲಿ ತಮ್ಮ ಜಮೀನು ಯಾವುದು ಅಂತ ಹುಡುಕೋದರಲ್ಲಿ ತೊಡಗಿದ್ದರು. ಇನ್ನೊಂದು ಜಾಗದಲ್ಲಿ ಟ್ರಾಕ್ಟರ್ ನಲ್ಲಿ ಒಬ್ಬ ವ್ಯಕ್ತಿ ಹೊಲ ಉಳುತ್ತಿದ್ದ. ನನ್ನ ಎದುರಿಗಿದ್ದ ವ್ಯಕ್ತಿ ನದೀ ಮಧ್ಯೆ ಹೀಗೆ ಹೊಲ ಮಾಡಿ ಇಡೀ ಊರಿನವರಿಗೆಲ್ಲಾ ಈ ರೀತಿಯ ಜಮೀನಿನ ವ್ಯವಸಾಯದ ವ್ಯಾಮೋಹ ತಂದು ಬಿಟ್ಟೀದ್ದಾನಲ್ಲ ಎಂದು ನನಗೆ ಅಚ್ಚರಿಯಾಗಿತ್ತು.
ನಮ್ಮ ನಡುವಿನ ಮಾತುಕತೆ ಹೀಗೆ ಸಾಗುತ್ತಿರುವಾಗ ಮತ್ತೊಬ್ಬ ವ್ಯಕ್ತಿ ಬಂದು ನಮ್ಮ ಜೊತೆ ಸೇರಿಕೊಂಡ. ಆತನ ಕೈಯಲ್ಲಿ ಒಂದಷ್ಟು ಕಡ್ಲೆಪುರಿ ತುಂಬಿದ್ದ ಪುಟ್ಟ ಪೊಟ್ಟಣಗಳಿದ್ದವು. "ನಮ್ಮ ಪರಿಚಯದವನು ನಮ್ಮ ಹೊಲದಲ್ಲಿ ಕೆಲಸ ಮಾಡ್ತಾನೆ" ಎಂದು ನೋನಿ ದಾ ಹೇಳಿದ. ನೋನಿ ದಾ ಎಂದರೆ ಇಷ್ಟು ಹೊತ್ತು ನನ್ನ ಜೊತೆ ಮಾತನಾಡಿದ ರೈತ. ಆತನ ಪೂರ್ಣ ಹೆಸರು ನೋನಿ ಗೋಪಾಲ ವಿಶ್ವಾಸ್. ಅಲ್ಲಿಗೆ ಬಂದ ವ್ಯಕ್ತಿಯ ಹೆಸರು ಶಂಕರ್ ದಾ. ನಾನು ಮತ್ತು ನೋನಿ ದಾ ಮಾತನಾಡುತ್ತಿರುವಾಗ ಶಂಕರ್ ದಾ ನಮಗೆ ಟೀ ಮಾಡಿ ಕೊಟ್ಟ. ಲಾಲ್ ಚಾ ಕುಡಿದು ಅವರು ಕೊಟ್ಟ ಕಡ್ಲೆಪುರಿ ತಿಂದು ಇವತ್ತು ದಿನ ಪೂರ್ತಿ ಯಾಕೆ ನೋನಿ ದಾ ನ ಹೊಲದಲ್ಲೇ ಕಳೆಯಬಾರದು ಎಂದು ನಿರ್ಧರಿಸಿದವನೇ "ಇವತ್ತು ಹೊಲದಲ್ಲಿ ಏನೇನು ಕೆಲಸ ಇದೆ." ಅಂತ ಕೇಳಿದೆ. "ಅಯ್ಯೋ ತುಂಬಾ ಕೆಲಸ ಇದೆ. ಯಾವುದನ್ನು ಮೊದಲು ಮಾಡೋದು ಅಂತಾನೆ ಗೊತ್ತಾಗ್ತ ಇಲ್ಲ" ಅಂದ ನೋನಿ ದಾ. ಫಸಲಿಗೆ ಬಂದ ಗೋಧಿಯ ಹೊಲವನ್ನು ಒಂಚೂರು ಕುಯ್ದು ಹಾಗೆ ಬಿಟ್ಟಿದ್ದು ಕಾಣಿಸಿತು. ನನ್ನೊಡನೆ ಮಾತನಾಡುತ್ತಾ ನೋನಿ ದಾ ಕತ್ತರಿಸಿದ್ದ ಬಿದಿರಿನ ಕಡ್ಡಿಗಳನ್ನು ಮತ್ತು ಪ್ಲಾಸ್ಟಿಕ್ ದಾರದ ಗಂಟನ್ನು ಹಿಡಿದುಕೊಂಡು ಟೊಮಾಟೋ ಗಿಡಗಳ ಬಳಿ ನಡೆದ. ನಂತರ ಬಿದಿರಿನ ಕಡ್ಡಿಗಳನ್ನು ನೆಟ್ಟು ದಾರದಿಂದ ಟೊಮಾಟೋ ಗಿಡಗಳ ನೆಟ್ಟಗೆ ನಿಲ್ಲಿಸುವ ಕಾಯಕದಲ್ಲಿ ನೋನಿ ದಾ ಮತ್ತು ಶಂಕರ್ ದಾ ನ ಕಾಯಕದಲ್ಲಿ ನಾನೂ ಜೊತೆಯಾದೆ.
ಒಂದಷ್ಟು ಹೊತ್ತಾದ ಮೇಲೆ ಹೊಟ್ಟೆ ಚುರುಗುಟ್ಟುತ್ತಿದೆ ಎನಿಸಿದ ನೋನಿ ದಾ ಶಂಕರ್ ದಾ ಗೆ ಅಡುಗೆ ಮಾಡುವಂತೆ ಸೂಚಿಸಿದ. ಜೇಬಿನಿಂದ ಒಂದಷ್ಟು ದುಡ್ಡು ತೆಗೆದು "ಶಂಕರ್ ದಾ ಹೋಗಿ ಮೀನೋ ಮಾಂಸನೋ ತನ್ನಿ" ಎಂದು ಕೊಡಲು ಹೋದಾಗ, ನೋನಿ ದಾ "ಬೇಡ ಸುಮ್ನಿರಿ" ಎಂದ. ಶಂಕರ್ ದಾ "ಅತಿಥಿ ಬಂದವ್ರೆ ಬೇಳೆ ಸಾರು ತಿನ್ನಿಸ್ತಿಯೇನಪ್ಪ ಸುಮ್ನಿರು" ಎನ್ನುತ್ತಾ ದುಡ್ಡು ತೆಗೆದುಕೊಂಡು ಬಜಾರಿನ ಕಡೆ ನಡೆದ. ಅತ್ತ ಶಂಕರ್ ದಾ ಹೋದ ಮೇಲೆ ನೋನಿ ದಾ ನ ಊರಿನ ಒಂದಷ್ಟು ಜನ ನೋನಿ ದಾ ನ ಗುಡಿಸಲಿಗೆ ಬರತೊಡಗಿದರು. ಅವರ ಬರುವಿಕೆಯನ್ನು ಅರಿತ ನೋನಿ ದಾ "ನಮ್ಮ ಊರವರು. ಇಲ್ಲಿ ಬಂದು ಭಂಗಿ ಸೇದ್ತಾರೆ. ಬನ್ನಿ ನಿಮದೊಂದು ಜಾಗ ಮಾಡಿಕೊಡ್ತೀನಿ. ಅಂತ ಕುಂಬಳ ಗಿಡಕ್ಕೆಂದು ಮಾಡಿದ್ದ ಚಪ್ಪರದ ಕೆಳಗೆ ಎರಡು ಪ್ಲಾಸ್ಟಿಕ್ ಚೀಲ ಹಾಕಿಕೊಟ್ಟ. ಉರಿ ಬಿಸಿಲಿನಲ್ಲಿ ಆ ಚಪ್ಪರದ ನೆರಳು, ತಂಪಾಗಿ ಬೀಸೋ ಗಾಳಿ, ಎದುರಿಗಿದ್ದ ಗೋಧಿ ಹೊಲವನ್ನು ಕಣ್ತುಂಬಿಕೊಂಡು ಕುಳಿತ್ತಿದ್ದೆ. ಅಲ್ಲೆಲ್ಲೋ ಕಪ್ಪು ಬಣ್ಣದ ಬಾಲ ಸೀಳಿರುವಂತೆ ಕಾಣುವ ಹಕ್ಕಿ ಆಟವಾಡಿಕೊಳ್ತಾ ಇತ್ತು. ನೋನಿ ದಾ ಮಧ್ಯೆ ಮಧ್ಯೆ ಬಂದು ನನ್ನೊಡನೆ ಮಾತಿಗೆ ಕುಳಿತುಕೊಳ್ಳುತ್ತಿದ್ದ. ಒಂದಷ್ಟು ಹೊತ್ತಾದ ಮೇಲೆ ಗುಡಿಸಲಿನ ಒಳಗಿದ್ದ ಭಂಗಿ ಗುಂಪು ಗುಡಿಸಲಿನ ಹೊರ ಬಂದು ನೆರಳಿರುವ ಒಂದು ಜಾಗದಲ್ಲಿ ಇಸ್ಪೀಟು ಆಡಲು ತೊಡಗಿತ್ತು. ನನಗೆ ಆ ಚಪ್ಪರದ ಕೆಳಗೆ ಒಂಚೂರು ಬಿಸಿಲು ರಾಚಿದಂತಾಗುತ್ತಿದ್ದ ಕಾರಣ ಗುಡಿಸಲಿನ ಬಳಿ ನಡೆದಿದ್ದೆ.
ಬಜಾರಿಗೆ ಹೋಗಿದ್ದ ಶಂಕರ್ ದಾ ಎಷ್ಟೋ ಹೊತ್ತಾದ ಮೇಲೆ ಬಂದ. ಬಂದವನೇ "ಮೀನು ಸಿಗಲಿಲ್ಲ. ಮಾಂಸ ತಂದಿದ್ದೀನಿ. ಮಟನ್ ಮಸಾಲ ಇದೆ." ಅಂತ ಹೇಳಿ ಗುಡಿಸಲಿನ ಒಳಗೆ ತರಕಾರಿ ಹಚ್ಚೋದರಲ್ಲಿ ತೊಡಗಿದ್ದ. ನಾನು ಗುಡಿಸಲಿನಲ್ಲಿ ಒಂದಷ್ಟು ಹೊತ್ತು ಕುಳಿತ್ತಿದ್ದೆನಾದರು ಅಲ್ಲಿ ಮಾಡಲು ಕೆಲಸವಿರದಿದ್ದ ಕಾರಣ ಪ್ಯಾಂಟು ಬಿಚ್ಚಿಟ್ಟು ಪಟಾಪಟಿ ಬರ್ಮುಡಾ ಚಡ್ಡಿಯಲ್ಲಿ ಒಂದಷ್ಟು ದೂರದಲ್ಲಿದ್ದ ಮತ್ತೊಂದು ಚಪ್ಪರದ ನೆರಳಿನಲ್ಲಿ ಹೋಗಿ ಕುಳಿತೆ. ನೋನಿ ದಾ ಸಹ ನನ್ನ ಜೊತೆ ಸೇರಿದ. ಆತ ನನ್ನೊಡನೆ ಕುಳಿತು ತನ್ನ ಮನೆ, ಮಕ್ಕಳು, ಸಂಸಾರ, ತನ್ನ ದುಡಿಮೆ ಎಲ್ಲವನ್ನೂ ವಿವರಿಸುತ್ತಾ ಹೋದ. ಮನೆಯವರೆಲ್ಲಾ ಸೇರಿದ್ರು ತಿಂಗಳಿಗೆ ಏಳೆಂಟು ಸಾವಿರ ಸಂಪಾದನೆ ಮಾಡೋಕು ಆಗಲ್ಲ. ಅಂತದರಲ್ಲಿ ಸಂಸಾರದಲ್ಲಿ ಖರ್ಚಿನ ಮೇಲೆ ಖರ್ಚು. ಜೊತೆಗೆ ಈಗ ಈ ಜಮೀನಿನ ಮೇಲೆ ಹಾಕ್ತಾ ಇರೋ ಖರ್ಚು ಅಂತ ತನ್ನ ಸ್ಥಿತಿಯನ್ನು ತೆರೆದಿಡುವಾಗ "ಆದದ್ದು ಆಗಲಿ ನಾನು ಈ ಕೆಲಸ ಮಾಡಿ ತೀರೋನೆ" ಎನ್ನುವ ಅವನ ನಂಬಿಕೆಯೆದುರು ನನ್ನ ತಿಂಗಳಿನ ಸಂಪಾದನೆಯನ್ನು ಒಮ್ಮೆ ನೆನಪಿಸಿಕೊಂಡೆ. ಅವರ ಮನೆಯವರೆಲ್ಲಾ ಸೇರಿ ದುಡಿಯುವ ಒಂದಷ್ಟು ಪಟ್ಟು ಹೆಚ್ಚೇ ದುಡಿಯುವ ನಾನು ನೋನಿ ದಾ ನಿಂದ ಕಲಿಯಬೇಕಾದುದು ಬಹಳವಿದೆ ಅನಿಸಿತು. ನಾನು ನೋನಿ ದಾ ಮಾತನಾಡುವಾಗ ನೋನಿ ದಾ ನ ಊರಿನ ಮತ್ತೊಬ್ಬ "ಏನು ಬಿಸಿಲು ನೋನಿ ದಾ" ಎಂದು ಹೇಳುತ್ತಾ ಬಂದು ನಮ್ಮ ಜೊತೆಯಾದ. ಅವರ ಕಷ್ಟ ಸುಖದ ಮಾತುಗಳಿಗೆಲ್ಲಾ ನಾನು ಸುಮ್ಮನೆ ಕಿವಿಯಾದೆ. ಬಡ ರೈತರಿಗೆ ತಮ್ಮದೇ ಆದ ಬವಣೆಗಳಿರುತ್ತವೆ ಎನಿಸಿತು.
ಹೀಗೆ ನಾವು ಮಾತಿನಲ್ಲಿ ಮುಳುಗಿರುವಾಗ ಭಂಗಿ ಗುಂಪಿನ ಸದಸ್ಯರು ಬನ್ರಪ್ಪಾ ನೀವು ಅಂತ ನಮ್ಮನ್ನು ಗುಡಿಸಲಿನ ಕಡೆಯಿಂದ ಕೈ ಬೀಸಿ ಕರೀತಿದ್ರು. ಅಲ್ಲಿಗೆ ಹೋದಾಗ ಭಂಗಿ ಗುಂಪಿನ ಸದಸ್ಯರೊಬ್ಬರು ತಂದಿದ್ದ ಚಪಾತಿಗಳನ್ನು ನಮಗೂ ತಿನ್ನಲು ನೀಡಿದರು. ಶಂಕರ್ ದಾ ಚಪಾತಿಗಳ ಜೊತೆ ನೆಂಚಿಕೊಳ್ಳಲು ಚಿಕನ್ ಕೊಟ್ಟ. ನಾನು ಚಿಕನ್ ಮತ್ತು ಚಪಾತಿ ತಿಂದು ಆ ಚಪ್ಪರದ ಕೆಳಗೆ ಮತ್ತೆ ಹೋಗಿ ಮಲಗಿದೆ. ಆಗಸದ ಎಡೆಗೆ ಕಣ್ಣು ಹಾಯಿಸಿದಾಗ ಚಂದವಾಗಿ ಹಾರಾಡುತ್ತಿರುವ ಹದ್ದುಗಳು ಕಾಣುತ್ತಿದ್ದವು. ದೂರದಲ್ಲಿ ಹಾರುವ ಹಕ್ಕಿಗಳ ಚಿಲಿಪಿಲಿ, ಮತ್ತು ಹುಲ್ಲುಗಾವಲಿನ ಗಾಢ ಮೌನವನ್ನು ಸುಮ್ಮನೆ ಮಲಗಿ ಆಹ್ವಾದಿಸುತ್ತಿದ್ದೆ. ಭಂಗಿ ಗುಂಪು ಯಾವಾಗ ಹೊರಟು ಹೋಗಿದ್ದರೋ ಗೊತ್ತಿಲ್ಲ. ಅಡುಗೆಯಾದ ಮೇಲೆ ನೋನಿ ದಾ ನನ್ನನ್ನು ಗುಡಿಸಲಿಗೆ ಕರೆದ. ನೋನಿ ದಾ ನ ಹೆಂಡತಿ ನಮ್ಮೆಲ್ಲರಿಗೂ ಊಟ ಬಡಿಸಿದರು. ನೋನಿ ದಾ ನ ಹೆಂಡತಿಯ ಮುಖ ನೋಡಿದೆ. ನಮ್ಮವ್ವನ ವಯಸ್ಸಿನವರು. ನಮ್ಮವನ್ನೇ ನನಗೆ ಅನ್ನವಿಕ್ಕುತ್ತಿರುವಂತೆ ಭಾಸವಾಯಿತು. ಅದೂ ವರ್ಷದ ತೊಡಕಿನ ದಿನ. ತಟ್ಟೆಯಲ್ಲಿ ಇದ್ದ ಅನ್ನವನು ನೆನೆದು ಎಲ್ಲಿಯ ಅನ್ನದ ಋಣವಿದು ಎಂದುಕೊಂಡೆ.
ಊಟ ಮಾಡಿದ ಮೇಲೆ ನೋನಿ ದಾ ಕೆಲಸದ ನಿಮಿತ್ತ ಪಕ್ಕದ ಹೊಲದಲ್ಲಿ ಉಳುಮೆ ಮಾಡುತ್ತಿದ್ದ ಟ್ರಾಕ್ಟರ್ ಬಳಿ ಹೊರಟ. ನಾನು ಅದೇ ಚಪ್ಪರದಡಿ ನೆಲಕ್ಕೆ ತಲೆಕೊಟ್ಟೆ ಅಷ್ಟೆ. ಗಾಢ ನಿದ್ರೆ. ನೋನಿ ದಾ ಟ್ರಾಕ್ಟರ್ ನ ಬಳಿಯಿಂದ ವಾಪಸ್ಸು ಬಂದು ನನ್ನನ್ನು ಟೀ ಕುಡಿಯಲು ಕರೆದೊಯ್ದ. ಒಂಚೂರು ಬಿಸಿಲು ಕಡಿಮೆಯಾಗುತ್ತಿದ್ದಂತೆ ಕೈ ಕಾಲು ಮುಖ ತೊಳೆದು ಟೀ ಕುಡಿದು ನಾನು ಮತ್ತು ನೋನಿ ದಾ ಮತ್ತೆ ಟೊಮಾಟೊ ಗಿಡಗಳಿಗೆ ಬಿದರಿನ ಕಡ್ಡಿ ನೆಡಲು ಹೋದೆವು. ಕಡ್ಡಿ ನೆಡುವಾಗ ಮುಳುಗುತ್ತಿರುವ ಸೂರ್ಯನ ದಿಟ್ಟಿಸಿದೆ. ಅವನ ನೋನಿ ದಾ ನ ಗುಡಿಸಲು, ಗೋಧಿ ಹೊಲ, ಬೆದರು ಬೊಂಬೆ ಎಲ್ಲದರ ಮೇಲೆ ತನ್ನ ಚಿನ್ನದ ಬಣ್ಣದ ಬೆಳಕ ಚೆಲ್ಲಿದ್ದ. ಅಲ್ಲೆಲ್ಲೋ ಟ್ರಾಕ್ಟರ್ ನಲ್ಲಿ ಹೊಲ ಉಳುತ್ತಿದ್ದವ ಆ ದಿನದ ಕೂಲಿಗಾಗಿ ನೋನಿ ದಾ ನ ಮುಂದೆ ನಿಂತಿದ್ದ. ನಾನು ಮತ್ತು ನೋನಿ ದಾ ಟೊಮಾಟೋ ಗಿಡಗಳನ್ನು ನೆಟ್ಟಗೆ ನಿಲ್ಲಿಸುವ ಕೆಲಸವನ್ನು ಆ ದಿನಕ್ಕೆ ಸಾಕು ಎಂದು ನಿಲ್ಲಿಸಿ ಗುಡಿಸಲಿನತ್ತ ನಡೆದೆವು. ಟ್ರಾಕ್ಟರ್ ನ ಡ್ರೈವರ್ ನೋನಿ ದಾ ನಿಂದ ಹಣ ಪಡೆದು ಹೊರಟು ಹೋದ ಮೇಲೆ ನಾನು ಕೈ ಕಾಲು ತೊಳೆದುಕೊಂಡು ಒಂದೆರಡು ನಿಮಿಷದ ನಂತರ ಹೊರಡ್ತೀನಿ ನೋನಿ ದಾ ಎಂದೆ. ನನ್ನನ್ನು ಕಳುಹಿಸುವ ಮನಸಿಲ್ಲದವನಂತೆ ನೋನಿ ದಾ "ಸರಿ" ಎಂದ. ದೂರದ ಮತ್ತೊಂದು ಹೊಲದಲ್ಲಿ ನೆಲ ಸಮತಟ್ಟು ಮಾಡುತ್ತಿದ್ದ ಶಂಕರ್ ದಾ "ಮತ್ತೆ ಮುಂದಿನ ವಾರ ಬನ್ನಿ" ಎಂದು ಕೈ ಬೀಸಿ ಮುಗುಳ್ನಕ್ಕ.
ನಾನು ನೋನಿ ದಾ ನ ಹೊಲದಿಂದ ನಡೆದು ಮಬ್ಬುಗತ್ತಲಿನಲ್ಲಿ ತೀಸ್ತಾ ನದಿಯ ಪಾರ್ಕಿನ ಬಳಿ ಬಂದಾಗ ಭಾನುವಾರದ ಜನ ಸಂದಣಿ ಅಲ್ಲಿ ನೆರೆದಿತ್ತು. ಅವರಲ್ಲಿ ಬೊಜ್ಜು ಕರಗಿಸಲು, ಟೈಂ ಪಾಸ್ ಮಾಡಲು ಬಂದವರೇ ಜಾಸ್ತಿ ಇದ್ದುದರಿಂದ ಇವರೆಲ್ಲಾ ವಾರಕ್ಕೆ ಒಂದು ದಿನ ಯಾರದಾದರು ಹೊಲದಲ್ಲಿ ಕೆಲಸ ಮಾಡಿದ್ರೆ ಅವರಿಗೆ ಉಪಯೋಗವಾಗುವುದರ ಜೊತೆಗೆ ಒಬ್ಬ ರೈತನಿಗೆ ಅದೆಷ್ಟು ಉಪಯೋಗವಾಗುತ್ತೆ ಅಲ್ವಾ ಅನಿಸ್ತು. ಯಾಕೋ ಗೊತ್ತಿಲ್ಲ ಇತ್ತೀಚೆಗೆ ಯಾರ ಹೊಲದಲ್ಲಾದರು ಪ್ರತಿ ವಾರ ಹೋಗಿ ಕೆಲಸ ಮಾಡಿ ಬರಬೇಕು ಎಂದನಿಸುತ್ತಿತ್ತು. ನನಗೆ ಅನಿಸಿದ್ದನ್ನು ನಮ್ಮ ಡ್ರೈವರ್ ಒಬ್ಬನ ಜೊತೆ ಹಂಚಿಕೊಂಡಿದ್ದೆ ಸಹ. ಅಚ್ಚರಿ ಎಂದರೆ ನಾನು ಅಂದುಕೊಂಡಿದ್ದು ಹೀಗೆ ಜಾಗವಲ್ಲದ ಜಾಗದಲ್ಲಿ ನನಗಾಗಿಯೇ ಹೀಗೆ ಉದ್ಬವಿಸಿದೆ. ತೀಸ್ತಾ ನದಿಯ ಮಧ್ಯೆ ಹೊಲ ಗದ್ದೆಗಳು ಅಂದ್ರೆ ಯಾರೂ ನಂಬಲ್ಲ. ಆದರೆ ನೋನಿ ದಾ ಜನ ಮರಳಾಗೋ ಹಾಗೆ ವ್ಯವಸಾಯ ಮಾಡ್ತಾ ಇದ್ದಾನೆ. ಸಮಯ ಸಿಕ್ಕರೆ ಮತ್ತೆ ಮುಂದಿನ ವಾರ ಆ ಹೊಲದಲ್ಲಿ ದುಡಿಯೋಕೆ ಹೋಗ್ತೀನಿ. ಸಾಧ್ಯವಾದರೆ ಹೊಲದಲ್ಲಿ ಕೆಲಸ ಮಾಡೋ ಈ ಕಾಯಕವನ್ನು ನಾನು ಬದುಕಿನಲ್ಲಿ ಅಳವಡಿಸಿಕೊಳ್ಳೋಕೆ ಪ್ರಯತ್ನಪಡ್ತೀನಿ.
ಮತ್ತೆ ಸಿಗೋಣ
ನಿಮ್ಮ ನಲ್ಮೆಯ
ನಟರಾಜು
22 ಮಾರ್ಚ್ 2015
ಜಲ್ಪಾಯ್ಗುರಿ
******
*****
Ondu olleya anubhava nataraj avare. Diet maadalu oddaduva jana holadalli kelasa maadidare ibbarigu upayoga ennuva nimma maatalli sundara alochaneyide. Naanu saha agaaga urige hodaga holadalli kelasa maaduttene……
ಮಣ್ಣಿನ ಋಣವೇ ಅಂತದ್ದು, ಕಾಡಿ ಕರೆಯುತ್ತೆ, ಮತ್ಯಾವ ಕೆಲಸದಲ್ಲೂ ಸಿಗದ ತೃಪ್ತಿ ಮಣ್ಣಿನ ಕೆಲಸದಲ್ಲಿ ಸಿಗುತ್ತೆ. ಅದಕ್ಕಾಗಿಯೇ ಹಿಂದಿನವರು ಹೇಳಿದ್ದು, ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಲೇಸು. ಕೈ ಕೆಸರಾದರೆ ಬಾಯಿ ಮೊಸರು. ದಾ ನ ಸಾಹಸವನ್ನು ಮೆಚ್ಚಲೇ ಬೇಕು. ತೀಸ್ತಾ ನದಿ ಎಂದೋ ನುಂಗಿದ ಜಾಗದಲ್ಲಿ ಮತ್ತೆ ಕೃಷಿಯೆಂದರೆ, ಫಿನಿಕ್ಸ್ ನಂತೆ ಮೇಲೆದ್ದು ಬಂದಂತೆ. ಚೆನ್ನಾಗಿದೆ ನಿರೂಪಣೆ ನಟ್ಟು.