ಲೇಖನ

ಹೀಗೊಂದು ಮಾತು: ಶ್ರೀವತ್ಸ ಕಂಚೀಮನೆ

ಕಳೆದ ಮಹಿಳಾ ದಿನಾಚರಣೆಗಾಗಿ ಒಂದು ಲೇಖನ ಬರೆದಿದ್ದೆ.

ಬರೆದ ವಿಷಯ ಸತ್ಯವೇ. ತುಂಬಾ ಜನ ಮೆಚ್ಚಿಕೊಂಡರು ಕೂಡ. ಆದರೆ ನನಗೇ ಯಾಕೋ ಸಂತೃಪ್ತ ಅನ್ನಿಸಿಲ್ಲ. ಬರೆದ ಬರಹದಲ್ಲಿ ದೇಹ ಸದೃಢವಾಗೇ ಇದ್ದರೂ ಯಾಕೋ ಆತ್ಮ ಇಲ್ಲ ಅನ್ನಿಸ್ತಾ ಇತ್ತು. ಕಾರಣ ಇಷ್ಟೇ ನನ್ನ ಮನಸು ಪುರುಷ ಪ್ರಧಾನ ಮತ್ತು ಸ್ತ್ರೀ ಪ್ರಧಾನ ಎಂಬ ಎರಡೂ ವಾದಗಳನ್ನು ಒಪ್ಪಲಾರದು. ನಾನೆನ್ನುತ್ತೇನೆ ನಮ್ಮನೆಲ್ಲ ಸಷ್ಟಿಸಿದ ಪ್ರಕೃತಿ ಮಾತ್ರ ಪ್ರಧಾನ. ಅದರ ಪ್ರಾಧಾನ್ಯತೆಯನ್ನು ಒಪ್ಪಿಕೊಳ್ಳದ ನಾವು, ಅದು ನೀಡಿದ ಮಿತಿಗಳನ್ನು ಮೀರಲು ಹವಣಿಸುವ ನಾವು, ಪುರುಷ ಮೇಲು ಇಲ್ಲಾ ಸ್ತ್ರೀ ಮೇಲು ಎಂದುಕೊಂಡು ಬಡಿದಾಡಿಕೊಂಡು ನಿಜವಾದ ನಮ್ಮನ್ನು ನಾವೇ ಕಳೆದುಕೊಳ್ಳುತ್ತಿದ್ದೇವೇನೋ ಅನ್ನಿಸುತ್ತೆ ನಂಗೆ. ದೌರ್ಜನ್ಯಗಳ ಮಾತು ಬಿಟ್ಟುಬಿಡಿ. ಅದು ಮನಸಿನ ಸಂಸ್ಕಾರ ಇಲ್ಲದವರು ಮತ್ತೊಬ್ಬರ ಮೇಲೆ ನಡೆಸೋ ಕ್ರೌರ್ಯ. ಮಿತಿಗಳ ಅರಿತುಕೊಂಡು ಹೊಂದಿ ಬಾಳುವ ಬಗ್ಗೆ ಯೋಚಿಸೋಣ…

ಇಷ್ಟೆಲ್ಲ ಜೀವರಾಶಿಗಳನ್ನು ಸೃಷ್ಟಿಸಿದ ಪ್ರಕೃತಿ ಪ್ರತಿ ಜೀವಕ್ಕೂ ಅದರದೇ ಆದ ವಿಶಷ್ಠ ಸಾಮರ್ಥ್ಯ ಮತ್ತು ಮಿತಿ ಎರಡನ್ನೂ ನೀಡಿದೆ. ಸುತ್ತಲಿನ ವಾತಾವರಣದ ಅನುಕೂಲತೆಯನ್ನು ಬಳಸಿಕೊಂಡು ತನ್ನ ಪ್ರಬೇಧಗಳನ್ನು ತಾನೇ ಸ್ವತಂತ್ರವಾಗಿ ವೃದ್ಧಿಸಿಕೊಳ್ಳಬಲ್ಲ ಸಾಮರ್ಥ್ಯ ನೀಡಿ ಸಸ್ಯ ಸಂಕುಲವನ್ನು ಸೃಷ್ಟಿಸಿ; ವಾತಾವರಣ ಮುನಿದರೆ ಉಳಿಯಲಾರದ ಮಿತಿಯನ್ನೂ ಅದಕೆ ನೀಡಿದ್ದು ಪ್ರಕೃತಿ…

ಅದೇ ಪ್ರಕೃತಿ ಪ್ರಾಣಿ ಪ್ರಪಂಚದಲ್ಲಿ ಪ್ರತ್ಯೇಕ ಗಂಡು – ಹೆಣ್ಣು ಎಂಬ ಎರಡು ಪ್ರಭೇದವನ್ನೇ ಸೃಷ್ಟಿಸಿತು. ಅದರಲ್ಲೂ ಮನುಷ್ಯ ಪ್ರಾಣಿಗೆ ವಿಶೇಷವಾದ ವಿವೇಚನಾ ಶಕ್ತಿಯನ್ನೂ ನೀಡಿತು. ಮನುಷ್ಯ ಸ್ವಲ್ಪ ಮುಂದುವರಿದ (?) ಪ್ರಾಣಿ ತಾನೇ…

ಈಗ ನಾವು ಪ್ರಕೃತಿಯ ಸೃಷ್ಟಿಯಲ್ಲಿನ ಮನುಷ್ಯ ಜಂತುವಿನ ಬಗ್ಗೆ ಮಾತಾಡೋಣ…

ಗಂಡು – ಹೆಣ್ಣು ಎರಡೂ ಬೌದ್ಧಿಕವಾಗಿ ಸಮಾನ ಪ್ರಾಭಲ್ಯವುಳ್ಳ ಶಕ್ತಿಗಳು. ದೈಹಿಕತೆಯಲ್ಲಿ ಮಿತಿಗಳನ್ನಿಟ್ಟದ್ದು ಪ್ರಕೃತಿ…

ದೈಹಿಕ ಮಿತಿಗಳ ಮೀರುತ್ತೇನೆಂದು ಹೊರಡುವವರಿಗೆ ಬೇಲಿಯಂತಹ ಸೃಷ್ಟಿಯೇ ಅಗೋಚರ ಮನಸು…

ಮನಸು ಇದು ಮನುಜನಿಗಾಗಿ ಪ್ರಕೃತಿ ನೀಡಿದ ಅದ್ಭುತ ಕೊಡುಗೆ ಮತ್ತು ಅಷ್ಟೇ ಪ್ರಭಾವಶಾಲಿ ಮಿತಿ ಕೂಡಾ…

ಎರಡು ಬೇರೆಯದೇ ಶಕ್ತಿಗಳು ಒಂದೇ ಭಾವದಲ್ಲಿ ಬೆಸೆದು ಹೊಳೆಯುವ ವಿಶಿಷ್ಟ ಜೀವನ ಪ್ರೀತಿಗೆ ಮೂಲ ಧಾತು ಈ ಮನಸೆಂಬೋ ಮನಸಿನ ಆಳದ ಒಲವ ಬಯಕೆ…

ಸುಂದರ – ಸದೃಢ ಕಾಯ, ಪ್ರಭಲ ಬುದ್ಧಿ ಶಕ್ತಿ ಇವೆರಡನ್ನೂ ನೀಡಿ ಅವುಗಳನ್ನು ನಿಯಂತ್ರಿಸಲು ಮನಸು ಮತ್ತು ಅದರೊಳಗೊಂದಿಷ್ಟು ಪ್ರಾಕೃತಿಕ ಬಯಕೆಗಳನ್ನು ನೀಡಿದ್ದು ಪ್ರಕೃತಿ. ತಾ ಮೇಲು ತಾ ಮೇಲು ಎಂದು ಸಾಧಿಸಲು ಹೊರಟಾಗ ಗಂಡು ಮತ್ತು ಹೆಣ್ಣು ಇಬ್ಬರೂ ಒಬ್ಬರ ಮೇಲೊಬ್ಬರು ಕಾಯ ಹಾಗೂ ಬುದ್ಧಿಯ ಮೀತಿಗಳನ್ನು ಮೀರಿಬಿಟ್ಟಾರು. ಆದರೂ ಮನಸಿನ ಮಿತಿಗಳನ್ನು ಮೀರಲಾಗದೇ ಸೋತದ್ದೇ ಹೆಚ್ಚು ಸಾರಿ…

ಎಲ್ಲ ಬಡಿದಾಟಗಳಿಂದ ತನ್ನ ಮೇಲರಿಮೆಯನ್ನು ಸಾಧಿಸಿದ ಮೇಲೆ ಮನಸಲ್ಲಿ ಪ್ರಕೃತಿ ಬಚ್ಚಿಟ್ಟ ಮೂಲ ಬಯಕೆ ತನ್ನ ಪ್ರತಿಕೃತಿಯ ಸೃಷ್ಟಿಯ ಮಾತು ಬಂದಾಗ ಎಲ್ಲ ಮೇಲರಿಮೆಗಳೂ ಸಾಯಲೇಬೇಕಾದ್ದು ಅನಿವಾರ್ಯ. ಅದು ನಮಗೆ ಪ್ರಕೃತಿ ನೀಡಿದ ಮಿತಿ…

ಗಂಡು ತನ್ನ ಪುರುಷ ಶಕ್ತಿಯ ಸದ್ಬಳಕೆಯ ಬಯಕೆ ತೀವ್ರವಾಗಿ ಕಾಡಿದ ಕ್ಷಣ ಹೆಣ್ಣು ಜೀವದ ಮಡಿಲ ಅರಸಿ ಚಡಪಡಿಸುತ್ತಾನೆ…

ಹೆಣ್ಣು ತನ್ನ ಮೂಲ ಭಾವವಾದ ತಾಯ್ತನದ ಪೂರ್ಣತ್ವ ಹೊಂದಲೋಸುಗ ಗಂಡಿನ ತೆಕ್ಕೆಗಾಗಿ ಹಂಬಲಿಸುತ್ತಾಳೆ…

ಒಂದು ಬೀಜ ಮತ್ತು ಇನ್ನೊಂದು ಕ್ಷೇತ್ರ…

ಒಂದನ್ನುಳಿದು ಇನ್ನೊಂದು ಅಪೂರ್ಣ…

ಬೀಜದ ಪೂರ್ಣತ್ವ ಅದು ಕ್ಷೇತ್ರದಲ್ಲಿ ಬೆರೆತು ಹೊಸ ಸಸಿಯಾಗಿ ನಕ್ಕಾಗ…

ಬೀಜವೊಂದಕ್ಕೆ ಮಡಿಲಲ್ಲಿ ತಾವು ನೀಡಿ – ನೀರು ಗೊಬ್ಬರ ಉಣಿಸಿ – ಬೀಜಕ್ಕೆ ಉಸಿರ ತುಂಬಿ ಜೀವ ನೀಡುವಲ್ಲಿ ಕ್ಷೇತ್ರದ ಗರಿಮೆ…

ಒಂದು ಇನ್ನೊಂದನ್ನು ಬೆರೆತು ಒಂದಾಗಿ (ಒಂದೇ ಆಗಿ) ಹೊಸದೊಂದು ನಗುವನ್ನು ಸೃಜಿಸಿ ಸಂತತಿಯೊಂದು ಹಸಿರಾಗಿ ಟಿಸಿಲೊಡೆಯಲು ಒಂದನ್ನೊಂದು ಸೇರಬೇಕಾದದ್ದು ಪ್ರಕೃತಿ ನಮಗೆ ನೀಡಿದ ಚಂದದ ಮಿತಿ ಹಾಗೂ ಪ್ರೀತಿ…

ಆ ಪ್ರಕೃತಿಯ ಮಿತಿಗಳ ಮನಸಾರೆ ಒಪ್ಪಿಕೊಂಡು – ನಮ್ಮ ಮನದ ಪ್ರೀತಿಯ ಪ್ರಾಮಾಣಿಕವಾಗಿ ಅಪ್ಪಿಕೊಂಡು – ‘ನೀನು’ ‘ನಾನು’ ಎಂಬ ಅಹಂಗಳಿಂದಾಚೆ ಬಂದು – ‘ನಾವಾ’ಗಿ ಬೆರೆತು ಈ ಪುರುಷ ಪ್ರಧಾನ, ಸ್ತ್ರೀ ಪ್ರಧಾನ, ಸಮಾನತೆ ಎಂಬೆಲ್ಲ ತಿಕ್ಕಾಟ ಬಡಿದಾಟಗಳನು ಮೀರಿ ಬರೀ ಪ್ರೇಮ ಪ್ರಧಾನವಾದ ಸಮಾಜವನ್ನು ನಿರ್ಮಿಸಲಾಗದಾ…

ಹಾಗೆ ಬಯಸೋದು ಅತಿಯಾಸೆಯಾದೀತಾ…

ಮನುಷ್ಯ ಸ್ವಲ್ಪ ಮುಂದುವರಿದ ಪ್ರಾಣಿ ಎಂಬುದು ಸತ್ಯವಾ…

ಆತ ಬೆವರಿಳಿಸಿ ಹಣ ದುಡಿದರೆ – ಆಕೆ ಅನ್ನ ಬೇಯಿಸಿ ಬೆವರಾಗುತ್ತಾಳೆ…

ಅನ್ನ ಹೊಟ್ಟೆಗಿಳಿಯದೇ ಆತ ದುಡಿಯಲಾರ – ಆತನ ಹಣವೇ ಆಕೆಯ ಅನ್ನಕ್ಕೆ ಆಧಾರ…

ಹಾಗಿರುವಾಗ (ಹಣ) ದುಡಿಯುವ ಕೈ ಮತ್ತು ಬಡಿಸುವ ಕೈಗಳ ನಡುವೆ ಗುದ್ದಾಟವೇಕೆ…

ನಾಲ್ಕೂ ಕೈಗಳು ಪ್ರೇಮದಲಿ ಬೆಸೆದುಕೊಂಡರೆ ಕುಟುಂಬವೊಂದು ಒಲವ ಬಂಧದಲ್ಲಿ ಬೆಳಗಲಾರದಾ…

ಅಂಥ ಕುಟುಂಬಗಳು ನಾಲ್ಕು ಸೇರಿದರೆ ಒಂದು ಪುಟ್ಟ ಭವ್ಯ ಪ್ರೇಮ ಪೂರ್ಣ ಸಮಾಜ…

ಅಂಥ ಕುಟುಂಬಗಳ ಸಮುಚ್ಛಯವೇ  ನೂರಾಗಿ, ಸಾವಿರವಾಗಿ….

ಆಸೆ ಅತಿಯಾಯಿತಾ…!!!

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಹೀಗೊಂದು ಮಾತು: ಶ್ರೀವತ್ಸ ಕಂಚೀಮನೆ

Leave a Reply

Your email address will not be published. Required fields are marked *