ಹೀಗೊಂದು ಪ್ರಸಂಗ: ಗವಿಸ್ವಾಮಿ

ಮೊನ್ನೆ ಬೈಕಿನಲ್ಲಿ ಪಕ್ಕದ ಹಳ್ಳಿಗೆ ಹೊರಟಿದ್ದೆ. ಹೊರಡುವಾಗಲೇ ಸೂಜಿಗಾತ್ರದ ಹನಿಗಳು  ಗಾಳಿಯಲ್ಲಿ ಚದುರಿಕೊಂಡು ಉದುರುತ್ತಿದ್ದವು.  ಜನರ ಓಡಾಟ ಮಾಮೂಲಿನಂತೆಯೇ ಇತ್ತು.ಒಂದು ಮೈಲಿಯಷ್ಟು ಮುಂದೆ ಹೋಗುವಷ್ಟರಲ್ಲಿ  ಸೂಜಿ ಗಾತ್ರದ ಹನಿಗಳು  ದಬ್ಬಳದ ಗಾತ್ರಕ್ಕೆ ತಿರುಗಿದ್ದವು. ಎದುರುಗಾಳಿ ಬೀಸುತ್ತಿದ್ದರಿಂದ  ಹನಿಗಳು ಮುಖವನ್ನು ಅಡ್ಡಾದಿಡ್ಡಿ ಪಂಕ್ಚರ್ ಮಾಡತೊಡಗಿದವು. ಅಲ್ಲೇ ರಸ್ತೆ ಬದಿಯಲ್ಲಿದ್ದ ಹುಣಸೆಮರದಡಿಯಲ್ಲಿ ಗಾಡಿ ನಿಲ್ಲಿಸಿ ಫೇಸ್ ಬುಕ್ ಓಪನ್ ಮಾಡಿದೆ.

ನೋಟಿಫಿಕೇಶನ್ ಐಕಾನ್ ಖಾಲಿ ಹೊಡೆಯುತ್ತಿತ್ತು. ಒಂದು ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಸಡನ್ನಾಗಿ ಓಕೆ ಕೊಡುವುದು ಬೇಡ, ನಿಧಾನಕ್ಕೆ ಕನ್ಫರ್ಮ್ ಮಾಡಿದರಾಯಿತು ಎಂದುಕೊಂಡು ಹಾಗೇ ಫೇಸ್ ಬುಕ್ಕಿನೊಳಗೆ ಮುಳುಗಿದೆ !

ಹಿಮ್ಮಡಿಗೆ ಇಂಜೆಕ್ಷನ್ ಚುಚ್ಚಿದ ಹಾಗೆ ಭಾಸವಾಯಿತು. ಪಟ್ಟನೆ ಕಾಲೆತ್ತಿ ಕೆಳಗೆ ನೋಡಿದೆ. ಕಾಲ ಬುಡದಲ್ಲಿ ಕಟ್ಟಿರುವೆ ಗೂಡಿತ್ತು. ಒಂದು ಇರುವೆ ಹಿಮ್ಮಡಿಗೆ ಕಚ್ಚಿಕೊಂಡಿತ್ತು. ಅದನ್ನು ನಾಜೂಕಾಗಿ ಬೇರ್ಪಡಿಸಲು ಪ್ರಯತ್ನಿಸಿದೆ. ಆದ್ರೆ ಅದರ ಇಕ್ಕಳದ ಬಾಯಿಯ ಹಿಡಿತ ತುಂಬಾ ಬಿಗಿಯಾಗಿದ್ದರಿಂದ ಹಿಂಭಾಗ ಕೈಗೆ ಬಂದುಬಿಡ್ತು. ಬುರುಡೆ ಹಾಗೇ ಕಚ್ಚಿಕೊಂಡಿತ್ತು .

ಇಬ್ಬರು ರೈತರು ಹೊಲದೊಳಗೆ ಕೆಲಸದಲ್ಲಿ ತೊಡಗಿದ್ದರು, ಇಂಥ ಮಳೆಗೆಲ್ಲಾ ಅಂಜಿ ಓಡಿದರೆ ಕೆಲಸ ಕೆಡುತ್ತದೆ ಎಂಬ ಯೋಚನೆ ಅವರದು. ''ಜೋರಾಗೂ ಉಯ್ಯಲ್ಲ, ನಿಲ್ಲದೂ ಇಲ್ಲ.. ಯಾವ್ ಸೀಮ ಮಳೆಯಾ  ಇದು'' ಅಂದೆ.

''ಆದ್ರಿ ಮಳ ಸಾ ಇದು, ಕಳ್ ಬಡ್ಡೈದನ್ ಮಳ.. ಆಕಾಸ್ದಲ್ಲೂ ಇರಲ್ಲ ಬೂಮ್ಗೂ ತಟ್ಟಲ್ಲ.. ನಿಂತಿದ್ರ ನಿಂತೇಯಿರ್ಬಾಕಾಯ್ತದ, ಸುಮ್ನ ಒಂಟೋಬುಡಿ ಮೂಡ್ಲು ಅಪಾರ ಮ್ವಾಡಿಲ್ಲ, ಎದ್ದೋಗದ ಕಣಾ'' ಅಂದ ಒಬ್ಬ.

ಅವನು ಹೇಳಿದ್ದು ಸರಿಯೆನಿಸಿ ಬೈಕ್ ಸ್ಟಾರ್ಟ್ ಮಾಡಿದೆ. ಅವ ಹೇಳಿದಂತೆ ಒಂದು ಕಿಲೋ  ಮೀಟರಿನಷ್ಟೂ ಮುಂದೆ ಮಳೆ ಹೆಚ್ಚೂಕಡಿಮೆ ನಿಂತು ಹೋಗಿತ್ತು. ದಾರಿಯಲ್ಲಿ ನನ್ನನ್ನು ಕಾದು ನಿಂತಿದ್ದ ಪಾರ್ಟಿ ಕೈ ಅಡ್ಡಹಾಕಿದ. ಅವನನ್ನು ಕೂರಿಸಿಕೊಂಡು ತೋಟದ ದಾರಿಯತ್ತ ಬೈಕ್ ತಿರುಗಿಸಿದೆ. ಅದೊಂದು ತೆಂಗಿನ ತೋಟ. ತೋಟದ  ಒಳಗೆ ಒಂದು ಚಿಕ್ಕ ಸ್ಟಾಟರ್ ಬೋರ್ಡ್ ಮಡಗುವಷ್ಟು ಗಾತ್ರದ ಪಂಪ್ ಹೌಸಿತ್ತು. ನಮ್ಮ ಭಾಷೇಲಿ ಮಿಸಿನ್ ಮನ.

ಮಿಸಿನ್ ಮನೆಯ ಮುಂಭಾಗ ಒಂದು ಗುಳ್ಳಿತ್ತು. ಆ ಗುಳ್ಳಿನೊಳಗಿಂದ ಜೋರು ಗದ್ದಲ ಕೇಳಿಬರುತ್ತಿತ್ತು. ಒಂದು ನಿಮಿಷ ಅಲ್ಲೇ ನಿಂತೆ, ಏನಾಗುತ್ತಿದೆಯೆಂದು ಕೇಳಿಸಿಕೊಳ್ಳಲು. ನನ್ನ ಜತೆಯಲ್ಲಿದ್ದವ, ''ಬನ್ನಿ ಸಾ ಆ ಬಡ್ಡೆತ್ತವ್ರದು ಇದ್ದದಿಯಾ ಕಣಾ ' ಅಂದ. 'ಯಾನ್ ನಡತಾ ಇದ್ದದು ಅಲ್ಲಿ?' ಅಂದೆ.

''ನಮ್ಮೂರವ್ರಿಬ್ಬರ್ಗ ಜಗಳತ್ಕಂಡದ. ಒಬ್ಬ  ಇದೇ ತ್ವಾಟ್ದಲ್ಲಿ ನೀರಾ  ಇಳಿಸ್ತನ.. ಆ ಗುಳ್ನೊಳ್ಗಿಯಾ   ಅವ್ನ್ ಯಾಪಾರ..  ಇನ್ನೊಬ್ಬ ಟೌನ್ನಿಂದ  ಡ್ರಿಂಕ್ಸ್ ತಂದು ಕದ್ದುಮುಚ್ಚಿ ಮಾರ್ತಿದ್ದ, ಮೊನ್ನ ರಾತ್ರ  ಪೋಲೀಸ್ನವರು ಬಂದು  ಅವನ್ನ  ಎತ್ತಾಕಂಡೋಗಿದ್ರು..   ಮುಚ್ಚುಳ್ಕ ಬರಸ್ಕಂಡು ನೆನ್ನ ವತಾರೆ ಬುಟ್ಕಳಿಸಿದ್ರು. ನೀರಾ ಇಳೀಸವ್ನೇ  ಪೋಲೀಸರ್ಗ  ಸುದ್ದಿ ಕೊಟ್ಟು ಹಿಡಿಸಿರಂವ ಅಂತ ಇವ್ನ್  ಗುಮಾನಿ. ಅದ್ಕ ಜಗಳಕ್ ಬಿದ್ದನ.. ಬಾವಬಾಮೈಕ್ಳ್  ಕಂಡಗಿದ್ದ  ಬಡ್ಡೆತ್ತವು, ಕಡ್ದಾಡ್ತವ ಈಗ''

ಸ್ವಲ್ಪ ದೂರ ಮುಂದೆ ನಡೆದು, ಅವನು ಹಸು ಕಟ್ಟಿದ್ದ ಜಾಗಕ್ಕೆ ತಲುಪಿದೆವು. ಹಸುವಿಗೆ ಚಿಕಿತ್ಸೆ ನೀಡುವಲ್ಲಿ ನಿರತನಾದೆ. ಐದು ನಿಮಿಷಗಳೂ ಆಗಿರಲಿಲ್ಲ. ಸದ್ದುಗದ್ದಲ, ಬೈಗುಳಗಳ ತೂರಾಟ ಬಯಲಿಗೆ ಶಿಫ್ಟಾಗಿತ್ತು. ದೂರದಿಂದ ನೋಡುತ್ತಿದ್ದರೆ ಕೆಲವರು ಹಗ್ಗವಿಲ್ಲದೇ ಟಗ್ ಆಫ್ ವಾರ್ ಆಡುತ್ತಿರುವಂತೆ ಕಾಣಿಸುತ್ತಿತ್ತು. ಆಕಡೆ ನಾಲ್ಕು ಜನ ಈ ಕಡೆ ನಾಲ್ಕು ಜನ ಇಬ್ಬರನ್ನೂ ಹಿಂದಕ್ಕೆಳೆಯುತ್ತಿದ್ದರು. ಒಂಚೂರು  ಹಿಡಿತ ಸಡಿಲವಾಗುತ್ತಿದ್ದಂತೆ ಇಬ್ಬರೂ ಮತ್ತೆ ಅಂಟಿಕೊಳ್ಳಲು ಓಡಿ ಬರುತ್ತಿದ್ದರು. ಮತ್ತೆ ಅವರನ್ನು ಹಿಂದಕ್ಕೆಳೆಯಲಾಗುತ್ತಿತ್ತು.

ಕೊನೆಗೆ ಜಗಳ ಬಿಡಿಸುತ್ತಿದ್ದವರಿಗೂ ರೋಸಿ ಹೋಗಿರಬೇಕು! ಇಬ್ಬರಲ್ಲಿ ಒಬ್ಬನನ್ನು ಸ್ಥಳಾಂತರಿಸುವುದೇ ಸೂಕ್ತ ಎಂದುಕೊಂಡು, ಮೂರು ಮಂದಿ ಸೇರಿ ಒಬ್ಬನನ್ನು ಅನಾಮತ್ತಾಗಿ ಹೊತ್ತುಕೊಂಡು  ತೋಟದ ಹೊರಗೆ ನಡೆದರು. ಅವರ ಹೆಗಲ ಮೇಲೆ ಮಿಸುಕಾಡುತ್ತಾ, ತಿರುಗಿ ತಿರುಗಿ ನೋಡುತ್ತಾ, ಆಣಿಮುತ್ತುಗಳನ್ನು ಉದುರಿಸುತ್ತಾ ಆತ ಕಣ್ಮರೆಯಾದ.

ಚಿಕಿತ್ಸೆ ಮುಗಿಸಿ ಇನ್ನೇನು ಹೊರಡಬೇಕೆನ್ನುವಾಗ ಮತ್ತೆ ಮಳೆ ಶುರುವಾಯಿತು. ತೆಂಗಿನ ಮರಗಳ ಸಾಲುಗುಂಟ ಓಡುತ್ತಾ ಗುಳ್ಳು ಸೇರಿಕೊಂಡೆವು. ಒಂದು ಮೂಲೆಯಲ್ಲಿ ಹೆಂಡದ ಗಡಿಗೆಯಿತ್ತು. ಅದನ್ನು ಬಾಳೆ ಎಲೆಯಿಂದ ಮುಚ್ಚಿ ಮೇಲೊಂದು ಜಗ್ ದಬಾಕಲಾಗಿತ್ತು. ಇಬ್ಬರು ಬಿಟ್ಟ ಬಾಯಿ ಬಿಟ್ಟ ಹಾಗೆ ಮೇಲೆ  ನೋಡುತ್ತಾ ಬಿದ್ದಿದ್ದರು. ಒಬ್ಬ ಬಿಳಿಹೆಂಡವನ್ನು ಮಜ್ಜಿಗೆ ಕುಡಿವಷ್ಟು ಸರಾಗವಾಗಿ-ಬಾಯಿಗೆ ಸುರಿದುಕೊಳ್ಳುತ್ತಿದ್ದ. ಇನ್ನೊಬ್ಬ ಬೀಡಿ ಕಚ್ಚಿ ತುಟಿಯನ್ನು  ರೌಂಡಗೆ ಮಾಡಿ ಕೆನ್ನೆಗಳನ್ನು ಒಳಗೆಳೆದುಕೊಂಡು  ಒಂದೇ ಸೂಲಿನಲ್ಲಿ  ಹೊಗೆಯನ್ನು ರಾಚುತಿದ್ದ. ಬೀಡಿ ಹೊಗೆ, ನೀರಾದ ಘಮಘಮ ಎಲ್ಲವೂ ಬೆರೆತುಕೊಂಡು ಒಂದು ಟಿಪಿಕಲ್ ಹವಾ ಸೃಷ್ಟಿಯಾಗಿತ್ತು.

ನೀರಾಪಾರ್ಟಿ ಇನ್ನೂ ಜಗಳದ ಮೂಡಿನಲ್ಲೇ ಇದ್ದ. ಬಿಟ್ಟೂ ಬಿಟ್ಟೂ ಬಯ್ಯುತ್ತಲಿದ್ದ. ನನ್ನ ಜತೆಗಿದ್ದ ಹಸುವಿನ ಪಾರ್ಟಿ ಅಂದ, ''ಸಾಕು ಮುಚ್ಚುಡ ಅಂವ  ವೋಗಾಯ್ತು''

''ನನ್ ಮ್ಯಾಗ್ಯಾಕ ಆ ಬಡ್ಡೈದನ್ಗ ಗುಮಾನಿ.. ಆಣಪ್ರಮಾಣ ಮಾಡದ್ರು ನೆಂಬಲ್ವಲ್ಲ ಇನ್ನ್ಯಾಗ್ ನೆಂಬುಸ್ಬೇಕು  ಬಡ್ಡೈದನ್ನ''

'' ಗಿರಾಕಿಗಳ್ನ ಹೆಚ್ಚಸ್ಗಳಕ ನೀನೇ ಐಡ್ಯ ಮಾಡಿ ಹಿಡಿಸಿರದು ಅಂತ ಅವ್ನ್ ಅನ್ಮಾನ.. ಅವನ್ ಮಾತ್ನೂ  ತಳ್ಳಾಕಕಾಗಲ್ಲ ಬುಡು ''

''ಇದಪ್ಪಾ ಮಾತು ಅಂದ್ರ..ಕಂತೂ ಗಿಂತೂ ಕೊಡ್ತನಲ್ಲ  ಅದ್ಕ ಅವನ್ನೇ ವೈಸ್ಗಂಡು ಮಾತಾಡ್ತಿದ್ದೈ''

''ಎಲ್ಲಿಂದೆಲ್ಗ್ಯಾ ಗಂಟಾಕ್ತವ..  ಕುಡ್ಕ್ ಬಡ್ಡೆತವ್ಕ ಯಾನ್ನು ಹೇಳ್ಬಾರ್ದು ಅನ್ನದು ಅದ್ಕ ಮತ್ತ''

ಇನ್ನೊಬ್ಬ ಬಾಯಿ ಹಾಕಿದ, ''ಕಾಸ್ಮಡ್ಗ್ಬುಟ್ಟು  ಸೀಸ ಮುಟ್ಟು  ಅಂತಿದ್ ಪಾರ್ಟಿ ಅಂವ , ಅವನ್ತಂವು ಸಾಲಗೀಲ ಕ್ಯಾಬಿನೈ.. ವಟ್ಟಕಿಚ್ಗ ಯಾವನಾದ್ರೂ ಹಿಡಿಸಿರ್ಬೇದು. ಇಂತೆವ್ನೇ ಹಿಡಿಸನ ಅಂತ ಯಾಳಕಾಗಲ್ಲ''

ಮತ್ತೇರಿಸಿಕೊಂಡು ಬಿದ್ದಿದ್ದ ಇನ್ನೊಬ್ಬ ಬಾಯಿ ಹಾಕಿದ, ''ಮೊನ್ನ ರಾತ್ರ ಪೋಲಿಸ್ನವ್ರು ಬಂದಿದ್ದಾಗ ನಾನೂ ಅಲ್ಲೇ ಇದ್ದಿ..
ಆ ಬಡ್ಡೈದ್ನೂ ಪುಲ್ ಚಿತ್ತಾಬುಟ್ಟಿದ್ದ.. ಅವ್ನ್ ಗಾಚಾರ್ಕ  ಪೋಲಿಸ್ರು ಮಪ್ತಿಲಿ  ಬಂದ್ಬುಟ್ಟಿದ್ರು.. ಡೇ ಪೋಲೀಸ್ರುಕುಡ ಪೋಲೀಸ್ರುಕುಡ ಅಂದ್ರ ಅಂವ ಪೋಲೀಸಾದ್ರ ಅವನ್ ಟೇಸನ್ಗ ನನ್ ಮನ್ಗೆಲ್ಲ ಅಂದ್ಬುಡದಾ.. ಅವ್ರ್ ಬುಟ್ಟರಾ, ತಬ್ದದೇ ಜೀಪ್ನೊಳಕ ಎತ್ತಾಕಂಡ್ವಾದ್ರು , ಅವರ್ಗೂ ಹೊಸಿ ಕೈಬಾಯ್ ತೊಡ್ತು ಸಮ್ತಿ ಮಾಡಿದ್ರ ಇಷ್ಟಾಲ್ಲಾ ಆಯ್ತಿರ್ನಿಲ್ಲ''

ಅದುವರೆಗೂ ಯಾರ ಗಮನಕ್ಕೂ ಬಾರದೇ ನಿಂತಿದ್ದ  ನನ್ನೆಡೆಗೆ ಒಬ್ಬ ಸನ್ನೆ ಮಾಡುತ್ತಾ ಅಂದ, ''ಸಾ ನೀವಾಕಲ್ವ''. ಇನ್ನೊಬ್ಬ, ''ಬಡ್ಡಿಕೂಸೇ ಅವ್ರು ಡ್ಯೂಟಿ ಮ್ಯಾಲವ್ರ''

''ಅದ್ಕ?''

'ಸಸ್ಮೆಂಡಾಗೋಯ್ತರ''

''ಸಸ್ಮೆಂಡ್ ಮಾಡ್ಬುಟ್ಟನು? ಅದ್ಯಾವನ ಮಾಡ್ಬುಡಂವ ನನ್ಗೂ ಗೊತ್ತದ ಕಾನೂನು ಡೆಲ್ಲಿಗಂಟುವ ''

ನನ್ನ ಜತೆಯಲ್ಲಿದ್ದವ (ಹಸುವಿನ ಪಾರ್ಟಿ ) ಅಂದ, '' ಸುಮ್ನೇ ಯಾಕ ಅವರ್ನೂ ಎಳ್ದರಿ .. ನಿಮ್ಮ ಪಾಡ್ಗ ನೀವು ಕುಡ್ದು ಸಾಯ್ರಿ ಬಡ್ಡೆತ್ತವೆ''

''ಚೆಚೇ .. ಮಾತ್ಗ   ಯ್ಯೋಳುದ್ದು.. ಆ ಪಾಯ್ಗಳ ಒತ್ತಾಯ ಮಾಡಾಕಾದ್ದ ''

ನೀರಾಪಾರ್ಟಿ ಮೌನದಿಂದ ಕುಳಿತಿದ್ದ .

(ಅವನ ಕಡೆ ತಿರುಗಿ) ಹಸುವಿನಪಾರ್ಟಿ ಅಂದ, ''ರಾತರ್ಗ ಪುನ ಜಗಳ ಕಾಯ್ಬೇಡ ಕಾ ಬಡ್ಡೈದ .. ಗಮ್ಮನ್  ಮನಲಿರು''

''ಆ ಮಾತ ಅವನ್ಗ್ಯೋಳು''

(ನಗುತ್ತಾ) ''ಅವನ್ಗೂ ಯ್ಯೋಳ್ತಿನಿಕುಡ .. ಅವನ್ಗ್  ಅಂಜ್ಕಂಡನ.. ಅದ್ನೂ ಮೀರಿ ನೀವು ಊರೊಳ್ಗ ಕಾದಾಡಕ್ ನಿಂತ್ಗಂಡ್ರ ಕಟ್ತಿಂವಿ  ಇಬ್ಬರ್ನೂವ ಚಾವ್ಡಿ ಕಂಬ್ಕ''

''ಅವ್ನಾಗಿದ್  ಮ್ಯಾಲ್ಬಿದ್ಬಂದ್ರ ಬುಡಲ್ಲ ಇಸೊತು ,ಹಾಕ್ಬುಡದಿಯಾ ''
ಎಂದು ಪಕ್ಕದಲ್ಲಿ ಬಿದ್ದಿದ್ದ ಮಚ್ಚನ್ನು ಎತ್ತಿ ತೋರಿಸಿದ!

''ಅಯ್ಯ ಬಡ್ಡೀಕೂಸೇ ..  ಏಣಸ್ಬೇಕಾಯ್ತದ ಒಂದು ಏಡು ಒಂದು ಏಡು ಅಂತ ಸಾಯಗಂಟುವ''

ಅಷ್ಟೊತ್ತೂ ಒಂದೂ ಮಾತಾಡದೇ ಗಪ್ಪಗೆ ಕೂತಿದ್ದವನೊಬ್ಬ ಬಾಯಿ ಹಾಕಿದ,''ಬ್ಯಾಡಕಪ್ಪಾ ಆ ಟೇಸನ್ನು ಕೋರ್ಟ್ನ ಸಾವಾಸ.. ಟ್ಯಾಕ್ಟ್ರಿ ಕೇಸ್ಲಿ ಸಾಕ್ಸಿ ಹೇಳಕ್ಕೋಗಿದ್ನಲ್ಲಾ ಬ್ಯಾಡಾ ನನ್ ಪಾಡು.. ಅಂವ ಎಷ್ಟೊತ್ಗ ಕೂಗ್ತನ ಅಂತ ಯ್ಯೋಳಕ್ಕಾಗಲ್ಲ ನಾಯಿನ್  ಕಂಡಗ ಕಾಯ್ಕಂಡ್ ಕೂತ್ಗಬೇಕು.. ಕೊನ್ಗೂ ನನ್ನೆಸ್ರು ಬಂತುಕಪ್ಪ.. ವಳಕೋಗಿ ಸಾಕ್ಸಿಕಟ್ಟಲಿ ನಿಂತ್ಕಂಡಿ .. ನೀವೇಯೇನ್ರಿ ನಾಗರಾಜು ಅಂದ್ರು ಜಜ್ಜು , ಹೂಂಕನಿ ಮಾಸೋಮಿ ಅಂದಿ .. ಹಾಗನ್ನದೇ ತಡ ಚೆಡ್ಡಿ ಜೋಬ್ನೊಳ್ಗ ಜೊಲಜೊಲಜೊಲಜೊಲ ಅಂತ ಸದ್ದಾಗೋಯ್ತು !..ಎಲ್ಲಾ ನನ್ನ ದಿಕ್ ನೋಡಾವ್ರಿಯಾ, ಮುಟ್ ನೋಡ್ಕತಿನಿ ಮೊಬೈಲು ! ..
ಇದ್ಯಾಕ ಆನಾಗಲ್ಲ ತೋರುಸ್ಗಬಣ್ಣ ಅಂತ ಕೊಟ್ಟಿತ್ತು  ನಮ್ಗಂಡು.. ಜೋಬ್ಗಾಕಂಡು ಮರ್ತೇಬುಟ್ಟಿದ್ದಿ.. ಸುಚ್ಚಾಪಾಗಿದ್ದದು ಐನ್ಟೈಮ್ಲಿ ಅದ್ಯಾಗ್ ಆನಾಯ್ತಾ ಬಗ್ವಂತ್ನೇ ಬಲ್ಲ.. ಮದ್ಲೇ ಕಾರ್ಬನ್ಸಟ್ಟು!
ಐವತ್ರುಪಾಯ್ ದಂಡ ಕಟ್ಟಸ್ಗಂಡ್ರುಕಪ್ಪ''

ಅಷ್ಟರಲ್ಲಿ ಮಳೆಯಲ್ಲಿ ನೆನೆದಿದ್ದ ಒಂದು ನಾಯಿ ಒಳಗೆ ಬಂತು. ಬಂದದ್ದೇ ಮೈಯನ್ನು ಟಪಟಪನೆ  ಒದರಿತು. ಕೂತಿದ್ದವರ ಮೋರೆಗೆಲ್ಲಾ ನೀರು ಆರಿತು.

ಒಬ್ಬ ಅಂದ, ''  ಈ ನಾಯ್ನವ್ ಬೊಗ್ಳದ್  ನಿಲ್ಸ ಅಂತೆದು ಯಾವ್ದ್ಯಾರೂ ಔಂಸ್ತಿ ಇದ್ದದ ಸಾ… ನಮ್ದೊಂದ್ ನಾಯದ ಬಡ್ಡೆತ್ತದು ನಿದ್ದನೇ ಮಾಡ್ಬುಡಲ್ಲ , ಬ್ಯಳಗಾನು ಬೊಗಳ್ತದ''

ಹಸುಪಾರ್ಟಿ ಅಂದ, ''ಇಲ್ ನಿಂತಿದ್ರ  ಮೆಂಟ್ಲಾಬೇಕಾಯ್ತದ  ನಡರೀ ವಾಗಂವು!''

ಮಳೆ ಒಂಚೂರು ತಗ್ಗಿತ್ತು.
ಗುಳ್ಳಿನಿಂದ ಈಚೆ ಬಂದಾಗ  ಯಾವ್ದೋ ಬೇರೆ ಪರ್ಪಂಚದಿಂದ ಹೊರಗೆ ಬಂದೆನೆನೋ ಅನ್ನಿಸ್ತಿತ್ತು.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
ಹಿಪ್ಪರಗಿ ಸಿದ್ದರಾಮ್
ಹಿಪ್ಪರಗಿ ಸಿದ್ದರಾಮ್
10 years ago

ಅಬ್ಬಾ ! ಚೆನ್ನಾಗಿದೇರಿ….

parthasarathyn
10 years ago

ಹೌದು ಬೇರೆ ಪ್ರಪಂಚಕ್ಕೆ ಹೋಗಿ ಬಂದಗಾಯ್ತು !

Utham Danihalli
10 years ago

Adu bhasheyanu baraha ellisiruva shyli estavaythu

3
0
Would love your thoughts, please comment.x
()
x