ಹೀಗೊಂದು ಪರ್ಯಟನೆ: ದಿವ್ಯ ಆಂಜನಪ್ಪ

ಈ ಗಿಜಿಬಿಜಿ ಜಂಜಾಟದ ಬದುಕಿನಲ್ಲಿ ವಯಸ್ಸಿಗೂ ಮೀರಿದ ವೈರಾಗ್ಯಗಳು ಮನೆ ಮಾಡಿ ನಾನೇ ನಾನಲ್ಲವೇನೋ ಎಂದೆನಿಸುವಷ್ಟು ಈ ಐದಾರು ವರ್ಷಗಳನ್ನು ಹೀಗೆಯೇ ಕಳೆದುಬಿಟ್ಟಿದ್ದೆ. ಉತ್ತಮವಾದ ಅಂಶವೆಂದರೆ ಅನಿಸಿದ್ದೆಲ್ಲವನ್ನೂ ಬರೆದುಬಿಡುವುದು ಒಂದು ಖಯಾಲಿಯಾಗಿ ಜೀವನಕ್ಕೊಂದು ಹೊಸ ಹುರುಪನ್ನು ಕಂಡುಕೊಂಡಿದ್ದೆ. ಈ ಅಕ್ಷರ ದಾರಿ ಕಾಣಿಸಿದ ಆ ಎಲ್ಲಾ ಸ್ನೇಹಿತರನ್ನೂ ನಾನು ಎಂದಿಗೂ ನೆನೆಯುವೆನು.

ಹೀಗಿರುವಾಗ ನನ್ನ ಬಾಲ್ಯ ಸ್ನೇಹಿತೆಯೊಬ್ಬಳು ಕಳೆದ ತಿಂಗಳು ಜುಲೈನ ಒಂದು ದಿನ ಸಂಜೆ ಕರೆ ಮಾಡಿ, ''ಒಂದು ದಿನದ ಟ್ರಿಪ್ ಕಣೆ, ನಾವು ನಮ್ಮ ಪ್ರಾಥಮಿಕ ಸಹಪಾಠಿಗಳೊಂದಿಗೆ ಹೊರಡೊ ವಿಚಾರದಲ್ಲಿದ್ದೇವೆ; ನೀನೂ ಬಾರೆ'' ಎಂದು ನನ್ನನ್ನು ಆಹ್ವಾನಿಸಿದಳು. ನಾನು ಅಷ್ಟಾಗಿ ಎಲ್ಲಿಯೂ ಹೊರಗೆ ಹೋಗದವಳು, ಬರೀ ಕೆಲಸ-ಮನೆಯಂತಾಗಿತ್ತು, ಅದೇನಾಯ್ತೋ ಏನೋ ಒಮ್ಮೆಲೆ ಹೊರಡುವ ಮನಸ್ಸಾಗಿ ಹೋಗಿತ್ತು. 'ಅಪ್ಪನೂ ಒಪ್ಪಬಹುದು, ನಾನು ಎಂದೂ ಹೀಗೆ ಕೇಳಿಲ್ಲವೆಂದು', ಎಂಬ ಭರವಸೆಯು ಬೇರೆ. ''ಆಯ್ತು ಕಣೆ, ಬರ್ತೀನಿ'' ಎಂದರೂ ಫೋನಿನ ಆ ಕಡೆಯ ಗೆಳತಿಗೇಕೋ ಅನುಮಾನ!, ''ನೀನೊಮ್ಮೆ ಅಪ್ಪನ್ನ ಕೇಳಿ ಹೇಳೇ" ಎಂದಳು. ''ಸರಿ'' ಎಂದು ಫೋನಿಟ್ಟೆ.

ಸರಿ ಇನ್ನು ಅಪ್ಪ ಒಪ್ಪದಿದ್ದರೆ ಹೋಗುವುದು ಬೇಡವೆಂದು ನಿರ್ಧರಿಸಿ, ಕೇಳಿಯೇಬಿಟ್ಟೆ. ''ಅಣ್ಣಾ, ಒಂದು ಟ್ರಿಪ್ ಇದೆ ಹೋಗ್ಲಾ?,,, ಅದೇ ಅರ್ಚನಳ ಜೊತೆ,,, ಚಿಕ್ಕೋರಾಗಿದ್ದಾಗ ಬರ್ತಿದ್ರಲ್ಲಾ ಆ ಎಲ್ಲಾ ಫ್ರೆಂಡ್ಸ್ ಜೊತೆ. ಅವರು, ಅವರ ಫ್ಯಾಮಿಲಿ ಅಂಡ್ ಫ್ರೆಂಡ್ಸ್ ಹೊರಟಿದ್ದಾರೆ, ನನ್ನನ್ನೂ ಕರಿತಾ ಇದ್ದಾಳೆ, ನೀನು ಹೋಗು ಅಂದ್ರೆ ಹೋಗ್ತೀನಿ ಅಷ್ಟೇ,,, ". ಅಣ್ಣಾ ಒಪ್ತಾರಾ? 'ಏನೋ' ಎಂಬ ಅನುಮಾನದಲ್ಲೇ ಮೌನ,,, ಸರಿ ಅಣ್ಣನೂ ಏನೂ ಹೇಳಲಿಲ್ಲ, ಇನ್ನು ಬೇಡವೆಂದೇ ಅರ್ಥವೆಂದು ಸುಮ್ಮನಾದೆ. ಊಟದ ಕೊನೆಯ ಹಂತ, ಅಣ್ಣ ಹೇಳಿದ್ರು, ''ನೋಡಮ್ಮ ನಿನ್ನಿಷ್ಟ, ಹೋಗೋದಾದ್ರೆ ಹೋಗು, ಎಷ್ಟು ದಿನಾ?!,,, ನನಗೋ ಒಪ್ಪಿಕೊಳ್ಳುತ್ತಿರುವುದೇ ದೊಡ್ಡ ವಿಚಾರ,, ಅದರಲ್ಲೂ ಎಷ್ಟು ದಿನವೆಂದು ಕೇಳಿದ್ದು ನನಗಂತು ಬಹಳ ಆಶ್ಚರ್ಯ!!!. ಒಂದೇ ದಿನವೆಂದು ಮನವರಿಕೆ ಮಾಡಿ ಖುಷಿಯಿಂದ ಗೆಳತಿಗೊಂದು ಮೆಸೇಜ್ ಕಳಿಸಿಬಿಟ್ಟೆ. ''ಬರ್ತೀನಿ ಕಣೇ, ಅಪ್ಪ ಒಪ್ಪಿದ್ರು!!! 🙂 "

ಆ ದಿನ ಭಾನುವಾರ. ಭಾನುವಾರವೆಂದರೆ ತಡವಾಗಿ ಏಳೋ ಮನಸ್ಸಿಗೆ ಅಂದು ಒಮ್ಮೆಲೆ ಹುಮ್ಮಸ್ಸಿನ ಚುರುಕು!. ಮನೆಯ ಹತ್ತಿರವೇ ಬಸ್ ಬರುತ್ತಿದ್ದು, ಆಗಲೇ ಎಲ್ಲಾ ಗೆಳತಿಯರೂ ಆ ಸ್ಥಳಕ್ಕೆ ಆಗಮಿಸಿ ನನಗೆ ಫೋನ್ ಮಾಡಲು ಶುರು ಮಾಡಿದ್ದರು. ದಡಬಡ ರೆಡಿಯಾಗಿ, ಅಣ್ಣನಿಗೆ ಬೈ ಹೇಳಿ ಮನೆಯಿಂದ ಹೊರಬಿದ್ದೆ. ನಾಲ್ಕೈದು ನಿಮಿಷಗಳಲ್ಲಿ ಗೆಳತಿಯರನ್ನು ಕೂಡಿಕೊಂಡೆ. ಬಹಳ ತಿಂಗಳು-ವರ್ಷಗಳ ನಂತರ ಸಿಕ್ಕ ಗೆಳತಿಯರಿದ್ದರು, ದೂರದ ಗೆಳತಿಯರನ್ನೇ ಮೊದಲು ಮಾತನಾಡಿಸಿದ್ದು, ನಂತರ ಹತ್ತಿರದವರನ್ನು. ಸುಮ್ಮನೆ ಒಂದು ಕಿಚ್ಚು ಹತ್ತಿಸಲು ಹತ್ತಿರದ ಅರ್ಚನಾಳಿಗೆ,,! 🙂

ಸರಿ ಅದು ಇದು ಮಾತುಗಳು, ಮಾತಿಗಿಂತ ಬರೀ ಚುಡಾಯಿಸಿ ಹಾಸ್ಯ ಮಾಡಿ ನಕ್ಕಿದ್ದೇ ಹೆಚ್ಚು. ಆಗಿನ್ನೂ ಬಸ್ ಬಂದಿರಲಿಲ್ಲ. ಮುಂದಿನ ಹತ್ತು ಹದಿನೈದು ನಿಮಿಷಗಳಲ್ಲಿ ಬಸ್ ಬಂದು ನಿಂತಿತು. ನಾವೂ ಬಸ್ ಗಾಗಿ ಕಾಯುತ್ತಿದ್ದೆವು. ಬಂದ ಬಸ್ಗೆ ನಾವು ಓಡಿದೆವು ಕಾರಣ ಪೂಜೆ ಕಾರ್ಯಕ್ರಮವೂ ಇತ್ತು. ಸರಿ ಬಸ್ಸಿನ ನಾಲ್ಕು ಚಕ್ರಗಳಿಗೂ ನಿಂಬೆಹಣ್ಣನ್ನು ಇಟ್ಟರು ಗೆಳತಿಯರ ಯಜಮಾನ ಹುಡುಗರು. ಅರ್ಚನಾಳಿಗೆ ಪೂಜೆ ಮಾಡುವಂತೆ ಎಲ್ಲರೂ ಸೂಚಿಸಲು, ಅವಳು ಪೋಜಿಸಿ ಬಸ್ಸನ್ನು ಒಂದು ಪ್ರದಕ್ಷಿಣಿ ಹಾಕಲು ಹೊರಟಳು ಅದೂ ಉಲ್ಟಾ!! 🙂 ತಕ್ಷಣಕ್ಕೆ ಸರಿಯೇ ಅನಿಸಿದರೂ ಒಮ್ಮೆಲೆ ಅವಳ ತಪ್ಪು ಪ್ರದಕ್ಷಿಣೆಯ ಪ್ರಾರಂಭಕ್ಕೆ ಎಲ್ಲರೂ 'ಗೊಳ್' ಎಂದು ನಕ್ಕರು. ನಾಚಿಕೆಗೆ, ''ಹೋಗಿ ನಾನು ಪೂಜೆ ಮಾಡೊಲ್ಲ'' ಎಂದು ನನ್ನ ಪಕ್ಕ ಬಂದು ನಿಂತಳು,, ಎಲ್ಲರಿಗೋ ಬೆಳಬೆಳಗ್ಗೇ ಒಳ್ಳೆ ನಗು,, ಆಗ ಸಮಯ ಸುಮಾರು ೬.೨೦ ಇರಬಹುದು.. ಹೂವಿಂದ ಸಿಂಗರಿಸಿದ ಬಸ್ ನಮ್ಮ ಮುಂದೆ ನಿಂತಿತ್ತು. ಇನ್ನೇನು ಎಲ್ಲರೂ ಬಸನ್ನು ಏರಬೇಕು ಅನ್ನುವಷ್ಟರಲ್ಲಿ ಮಾತು-ಹಾಸ್ಯದಲ್ಲೇ ಮುಳುಗಿದ್ದ ನಮ್ಮ ಮಧ್ಯೆಯೇ ಆ ಬಸ್ ದಿಢೀರ್ ಸ್ಟಾರ್ಟ್ ಆಗಿತ್ತು, ಈಗ ಅದರೊಳಗೆ ಡ್ರೈವರ್ರೂ ಬಂದು ಕೂತಿದ್ದ, ನೋಡ ನೋಡುತ್ತಲೇ ಬಸ್ ಚಲಿಸತೊಡಗಿತು, ಅರೇ ಹೊರಟೇಬಿಟ್ಟಿತು,,, ನಾವೆಲ್ಲಾ ಜಾಗಬಿಟ್ಟು ಹೋಗೋ ಬಸ್ನೇ ನೋಡ್ತಾ ನಿಂತುಬಿಟ್ವಿ,,! ಒಂದು ಕ್ಷಣ ಏನಾಗ್ತಿದೆ ಎಂದೇ ಗೊತ್ತಾಗ್ಲಿಲ್ಲ. ಮೌನ,,,,,,,,,

''ಅಯ್ಯೋ, ಅದು ನಮ್ ಬಸ್ ಅಲ್ಲ'' ಎಂಬ ಉದ್ಗಾರ ಕೇಳಿ ಬಂತು.. ನಗೆ ಉಕ್ಕಿ ಬಂದಿತು, ಎಲ್ಲರೂ ಮತ್ತೂ ಬಿದ್ದು ಬಿದ್ದು ನಕ್ಕಿದ್ದು. ಈ ಬಾರಿ ರೋಡಲೆಲ್ಲಾ ಉಳ್ಳಾಡಿ ನಕ್ಕಿದ್ದು.. ಎಲ್ಲಾದ್ರೂ ಬಿದ್ಬಿಡ್ತೀವೇನೋ ಅನ್ನೋ ಹಾಗೆ 😀 ಅಬ್ಬಾ.. ನಕ್ಕು ನಕ್ಕು ಸಾಕಾಯ್ತು, ಬಹುಶಃ ನಾವೆಲ್ಲರೂ ಸಮಾನ ವಯಸ್ಕರಾದ ಕಾರಣ ಭಾವ ಸಂದರ್ಭಕ್ಕೆ ಯಾರೂ ಭಿನ್ನವಾಗಿರಲಿಲ್ಲ. ನಮ್ಮ ಬಸ್ ಬರುವವರೆಗೂ ನಕ್ಕಿದ್ದಾಯ್ತು. ಹತ್ತು ನಿಮಿಷಗಳಲ್ಲೇ ಬಸ್ ಬಂದಿತು. ಈಗ ಎಲ್ಲರಿಗೂ ಅನುಮಾನ,, ಇದು ನಮ್ಮದೇ ಬಸ್ಸೋ ಅಲ್ವೋ? ಎಂದು. ''ಯಾರೋ ಅದು ಬುಕ್ ಮಾಡಿದ್ದು, ಮೊದ್ಲು ಕೇಳ್ರೋ, ಆಮೇಲ್ ಪೂಜೆ ಮಾಡೋಣ'' ಅಂತ ಕೂಗು. ಈ ಬಾರಿ ಅರ್ಚನ, ''ನಾನ್ ಮತ್ತೆ ಪೂಜೆ ಮಾಡೋಲ್ಲಪ್ಪಾ" ಅಂತ ರಾಗ ತೆಗೆದಳು. ನಿಂಬೆ ಹಣ್ಣು ಹೂವನ್ನು ಆ ಹೋದ ಬಸ್ಸಿಗೆ ಇಟ್ಟಿದ್ದಾಯ್ತು. ಈಗ ಮತ್ತೆ ಹೂವನ್ನು ಮಾತ್ರ ತಂದು ಪೂಜೆ ಮಾಡಿದ್ದಾಯ್ತು. ಇಷ್ಟು ಕಾರ್ಯಕ್ರಮದಲ್ಲೂ ನಮ್ಮದು ಬರೀ ನಗುವೇ,,,, 🙂

*** ***

ನಮ್ಮ ಬಸ್ ಹೊರಟ್ಟಿದ್ದು ಕೆಂಗೇರಿ ಬಿಡದಿ ಮೂಲಕ ಮೈಸೂರಿನ 'ತಲಕಾಡಿನ' ಕಡೆಗೆ, ದಾರಿ ಮಧ್ಯೆ ಚೆಲುವಾದ ಇಡ್ಲಿ-ವಡೆ ಮತ್ತು ಖಾರ ಪೊಂಗಲ್ ತಿಂದೆವು. ಪ್ರಯಾಣ ಬಲು ಸೊಗಸಾಗಿತ್ತು, ನಾನೋ ಕಿಟಕಿಯ ಪಕ್ಕ ಕೂತು, ಹೊರಗಿನ ಹೊಲ-ಗದ್ದೆಗಳ, ಬಾಳೆ-ತೆಂಗು-ಅಡಿಕೆಗಳ ಸೌಂದರ್ಯವನ್ನು ಸವಿಯುತ್ತಿದ್ದೆ. ಕಣ್ಣು ಹಾಯ್ಸಿದಷ್ಟು ದೂರವೂ ಬರೀ ಹಸಿರೆ, ಎನ್ನೆದೆಯಲಿ ಕುವೆಂಪುರವರ ಕಾವ್ಯ, ''ಹಸುರತ್ತೆಲ್/, ಹಸುರಿತ್ತಲ್/, ಹಸುರೆತ್ತಲ್ ಕಡಲಿನಲಿ/, ಹಸುರ್ಗಟ್ಟಿತೊ ಕವಿಯಾತ್ಮಂ, /ಹಸಿರ್ನೆತ್ತರ್ ಒಡಲಿನಲಿ,,, ''.

ಬಸ್ಸಿನ ಒಳಗೆ ನಮ್ಮದು ಅದು ಇದು ಆಟಗಳು, ಬಹಳ ಚೆನ್ನಾಗಿತ್ತು ನಾನೂ ಮೊದಲ ಬಾರಿಯೇ ಆಡಿದ್ದು ಕೂಡ. ನಮ್ಮನ್ನು ಎರಡು ತಂಡಗಳಾಗಿ ಮಾಡಿದ್ದರು. ಒಂದು ತಂಡದಿಂದ ಒಬ್ಬರು ಒಂದು ಸಿನೆಮಾ ಹೆಸರನ್ನು ಮತ್ತೊಂದು ತಂಡದ ಪ್ರತಿನಿಧಿಗೆ ಕಿವಿಯಲ್ಲಿ ಉಸುರುವುದು, ಅದರಂತೆ ಅವರು ಸಿನೆಮಾ ಹೆಸರನ್ನು ಕೇವಲ ನಟನೆಯ ಮೂಲಕ ಆ ತಂಡದವರಿಂದ ಹೇಳಿಸಬೇಕು. ನಾನಂತೂ ಹಳೇ ಹಳೇ ಹೆಸರನ್ನು ಅರ್ಚನಾಳಿಗೆ ತಿಳಿಸಿ ಎದುರು ತಂಡಕ್ಕೆ ಸೂಚಿಸಲು ತಿಳಿಸುತ್ತಿದ್ದೆ. ಹಾಗೆಯೇ ಆ ತಂಡದವರು ನೀಡಿದ ಹೆಸರನ್ನು ನಮ್ಮ ತಂಡದವರು ನಟಿಸಿ ತೋರಿಸುವಾಗ ನಾವೂ ಪರದಾಡಿದ್ದೂ ಇದೆ,, ತುಂಬಾ ಖುಷಿಕೊಟ್ಟ ಆಟವಿದು. ನಾವು ಮತ್ತೆ ಮತ್ತೆ ಚಿಕ್ಕವರಾದಂತೆ!! 🙂

ಮೊದಲಿಗೆ ನಾವು ತಲಕಾಡನ್ನು ತಲುಪಿದೆವು, ಅಲ್ಲಿ ಈಶ್ವರನ ದರ್ಶನ ಮಾಡಿದೆವು. ತಲಕಾಡಿನ ಮರಳು ನಮ್ಮ ಕಾಲುಗಳನ್ನು ತನ್ನಲಿ ಸೆಳೆದುಕೊಳ್ಳುತ್ತಿದ್ದದ್ದು ನಮಗೆ ಒಂದು ಮೋಜಿನ ವಿಷಯವೇ ಆಗಿತ್ತು.. ತುಳುಕುತ ಬಳುಕುತಾ ನಡೆಯುವಂತೆನಿಸಿ, ಒಬ್ಬರನ್ನೊಬ್ಬರೊ ನೋಡಿ ಹಾಸ್ಯವಾಡಿ ನಕ್ಕಿದ್ದೇ ನಕ್ಕಿದ್ದು ನಾವು ಗೆಳೆತಿಯರು…

ಈ ಸಂದರ್ಭದಲ್ಲಿ ತಲಕಾಡು ಮರಳಾದ, ಅರಸು ಮನೆತನಕೆ ಮಕ್ಕಳಾಗದ ಆ ನೊಂದ ಹೆಣ್ಣಿನ ಶಾಪವು ನನಗೆ ನೆನಪಾಗದೇ ಇರಲಿಲ್ಲ……………….

''ಅಲಮೇಲಮ್ಮನ ಗಂಡ ಶ್ರೀರಂಗರಾಯನು ವಿಜಯನಗರದ ಪ್ರತಿನಿಧಿಯಾಗಿ ಶ್ರೀರಂಗಪಟ್ಟಣವನ್ನು ಆಳುತ್ತಿದ್ದ ಕಾಲ. ಶ್ರೀರಂಗರಾಯನಿನಿಗೆ ''ಬೆನ್ನುಪಣಿ'' ಎಂಬ ರೋಗ ತಗುಲಿ ಆತ ಶ್ರೀಗಂಗಪಟ್ಟಣದಲ್ಲಿಯೇ ಮೃತನಾಗುತ್ತಾನೆ. ಈ ಸಂದರ್ಭದ ಉಪಯೋಗ ಪಡೆದು, ಒಡೆಯರುಗಳು ಶ್ರೀರಂಗ ಪಟ್ಟಣವನ್ನು ಆಕ್ರಮಿಸಿಕೊಳ್ಳುತ್ತಾರೆ. ತಲಕಾಡಿನ ಪಕ್ಕದ ಮಾಲಂಗಿಯಲ್ಲಿ ನೆಲಸಿದ ಅಲಮೇಲಮ್ಮನ ಬಳಿಯಿದ್ದ ಅತ್ಯಮೂಲ್ಯ ಮೂಗುತಿ, ಆಭರಣಗಳನ್ನು ಬಲವಂತವಾಗಿ ಕಸಿದುಕೊಳ್ಳಲು ಒಡೆಯರು ಮುಂದಾಗುತ್ತಾರೆ. ಇದರಿಂದ ಮೊದಲೇ ನೋವಿನಲ್ಲಿದ್ದ ಅಲಮೇಲಮ್ಮ ಮತ್ತೂ ನೊಂದು ಉಗ್ರಳಾಗಿ, ''ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ, ಮೈಸೂರು ರಾಜರಿಗೆ ಮಕ್ಕಳಾಗದಿರಲಿ'' ಎಂದು ಶಾಪ ನೀಡಿ, ಒಡವೆಗಳೊಡನೆ ಕಾವೇರಿ ನದಿಗೆ ಹಾರಿ ಪ್ರಾಣಬಿಡುತ್ತಾಳೆ''. ಇದೊಂದು ದಂತ ಕಥೆಯೆಂದೇ ಹೇಳಿದರೂ, ವಾಸ್ತವದಲ್ಲಿ ಈಗ ತಲಕಾಡು ಮರಳೇ, ಮಾಲಂಗಿ ಮಡುವೇ, ಅರಸರು ದತ್ತು ಪುತ್ರರನ್ನೇ ನೆಚ್ಚಿಕೊಳ್ಳುವಂತಾಗಿದ್ದು ನಿಜವೇ.

*** *** ***

ನಂತರ ಇಲ್ಲಿನ ಕಾವೇರಿ ನದಿಯಲ್ಲಿ ತೆಪ್ಪದ ತೇಲಾಟವು ನಮಗೆ ಬಹು ಸಂತೋಷಕರ ಸಂಗತಿಯಾಗಿತ್ತು. ನನಗಿದು ಮೊದಲ ಅನುಭವ!. ತುಂಬಾ ಖುಷಿಯಾಯಿತು. ಒಳಹೊರಗೂ ಸಮಾನವಾದಂತೆ ನಾನು ಮನಸೋ ಇಚ್ಛಿ ನಕ್ಕಿದ್ದೆ,, ಹಗುರಾಗಿದ್ದೆ. ನೀರಿನ ಮೇಲೆ ತೇಲೋ ತೆಪ್ಪ, ಮನವನ್ನೂ ತೇಲಿಸಿತ್ತು!!.

ಇಲ್ಲಿಂದ ನಾವು ಹೊರಟಿದ್ದು ಸೋಮನಾಥೇಶ್ವರ ದೇವಾಲಯಕ್ಕೆ, ಒಳ ಹೋಗುತ್ತಿದ್ದಂತೆ ಭವ್ಯವಾದ ದೇವಾಲಯ ನಮ್ಮನ್ನು ಮಂತ್ರಮುಗ್ಧರನ್ನಾಗಿಸಿತ್ತು. ಎಲ್ಲರೂ ನೋಡುವುದರಲ್ಲೇ ಮಗ್ನರು ಯಾರೂ ಯಾರೊಂದಿಗೂ ಮಾತನಾಡರು ಈಗ. ನೋಡುವಷ್ಟು ಹೊತ್ತು ನೋಡತ್ತಾ ಕಳೆದು ಹೋದೆವು. ದೇವಾಲಯದ ಮುನ್ನೋಟವೇ ಹಾಗಿತ್ತು.

''ಸೋಮನಾಥ ದೇವಾಲಯವನ್ನು ಹೊಯ್ಸಳರು ಕಟ್ಟಿಸಿದ್ದು ಎಂದು ತಿಳಿದು ಬರುತ್ತದೆ. ಇದು ಚೆನ್ನಕೇಶವ ದೇವಾಲಯವಾಗಿದೆ. ೧೨೬೮ರಲ್ಲಿ ಸೋಮ ಎಂಬಾತನು ಇದನ್ನು ಕಟ್ಟಿಸಿದ್ದನು. ದೇವಾಲಯದಲ್ಲಿ ಮೂರು ಪ್ರಮುಖ ಶಿಖರವಿರುವ ಕಾರಣ ಇದನ್ನು 'ತ್ರಿಕುಟಚಲ'ವೆನ್ನುತ್ತಾರೆ. ನೋಡುವುದಕ್ಕೆ ಆನೆಗಳೇ ಇಡೀ ದೇವಾಲಯವನ್ನು ಹೊತ್ತು ನಿಂತಿದೆಯೇನೋ ಎನಿಸುವಷ್ಟು ಗಜಶಿಲ್ಪಗಳು ಕಂಗೊಳಿಸುತ್ತವೆ. ಈ ದೇವಾಲಯದಲ್ಲಿ ಮೂರು ಗರ್ಭಗುಡಿಗಳಿದ್ದು, ಉತ್ತರದಲಿ ಜನಾರ್ಧನ, ದಕ್ಷಿಣದಲ್ಲಿ ತ್ರಿಭಂಗಿಯಲ್ಲಿ ನಿಂತ ವೇಣುಗೋಪಾಲವಿದ್ದು ಮಧ್ಯದ ಗರ್ಭಗುಡಿಯಲ್ಲಿ ಯಾವುದೇ ವಿಗ್ರಹವಿಲ್ಲ, ಹಿಂದೆ ಇಲ್ಲಿ ವಿಗ್ರಹವಿತ್ತೆಂದು ಹೇಳಲಾಗುತ್ತದೆ''.

ಪ್ರಶಾಂತವಾದ ಹಸಿರ ನಡುವೆ ದೇವಾಲಯವು ಅಮೋಘವಾಗಿ ಶಾಂತವಾಗಿ ನಿಂತಿದೆ, ಆ ತಿಳಿ ನೀಲಿ ಮೋಡದ ತೆಳು ಪದರದ ಕಿರೀಟ ತೊಟ್ಟು, ನಮ್ಮನ್ನು ಮತ್ತೂ ಮೋಹಗೊಳಿಸುತ್ತಲಿದೆ,, ಆಹಾ!! ಎಂತಾ ಸೌಂದರ್ಯ,, ಎನ್ನುತ್ತಲೇ ಹಲವು ಫೋಟೋಗಳನ್ನು ಕ್ಲಿಕ್ಕಿಸಿದ್ದೆವು. ನಮ್ಮ ಮನಸ್ಸು ಈಗ ಅಷ್ಟೇ ಶಾಂತ ರೂಪಿಯಾಗಿತ್ತು, ನಮ್ಮೆಲ್ಲಾ ನೋವುಗಳ ಮರೆತು!. 🙂

 

***

ಅಲ್ಲಿಂದ ಹೊರಟು ದಾರಿ ಮಧ್ಯೆ ಊಟ ಮಾಡಿ ತಲುಪಿದ್ದು, ಬಲಮುರಿಗೆ, ಅಲ್ಲಿ ಎಲ್ಲರೂ ನೀರಿಗಿಳಿದು ಆಟವಾಡಿದರೂ,, ನಾನೂ ಇಳಿದೆನಾದರೂ ಬಂಡೆ ಮೇಲೆ ಕೂತು ಸುಮ್ಮನೆ ಅವರನ್ನು ನೋಡುತ್ತಾ ರಂಜಿಸುತ್ತಲಿದ್ದೆ. ಮಕ್ಕಳಂತೆ ಅವರೆಲ್ಲಾ ಆಡುತ್ತಿದ್ದರೂ,, ಒಂದಷ್ಟು ಫೋಟೋಗಳನ್ನು ತೆಗೆದೆ.

ಸಂಜೆಯಾಗಿತ್ತು, ಹಾಗೆಯೇ ದಣಿವೂ,, ನಾವೆಲ್ಲರೂ ಬಸ್ ಹತ್ತಿ ಕುಳಿತೆವು. ಮತ್ತೊಮ್ಮೆ ಆಟಗಳು ಶುರುವಾದವು. ಅಲ್ಲೆಲ್ಲೋ ಇಳಿದು ಟೀ ಹೀರಿದೆವು,, ಸಂಜೆಯ ತಂಗಾಳಿಯಲ್ಲಿ ಬಿಸಿ ಟೀ ಒಂದು ರೀತಿಯ ಹಿತವನ್ನು ನೀಡಿತ್ತು. ಏಕೋ ಏನೋ ನನಗೆ ನನ್ನವನಿಲ್ಲದ ಅನುಭವವಾಯ್ತು,, ಮುಂದೆ ಹೀಗೆ ಸುತ್ತುವುದಾದರೆ ಅವನೊಂದಿಗೇ ಸುತ್ತೋಣವೆಂದು ಮನಕೆ ಸಾಂತ್ವನ ಹೇಳುತ್ತಾ ನಮ್ಮ ಬಸ್ ಹತ್ತಿದೆ. ಪ್ರಯಾಣ ಮುಂದುವರೆಯಿತು,,,, ಮುಂದೆ ದಾರಿಯಲ್ಲಿ ಊಟ ಮಾಡಿ ಮನೆಯ ಕಡೆಗೆ ಎಂದು ಯೋಜನೆಯಿತ್ತು. ಮನಸ್ಸು ನಿರ್ಮಲ, ಶಾಂತವಾಗಿತ್ತು ಆದರೂ ಏನೋ ಕಾಡಿದಂತೆ ಮತ್ತೂ ಬೇಡಿದಂತೆ ಊರ ಸೇರಿತ್ತು. ಆ ದಿನ ರಾತ್ರಿ ನಿದ್ದೆ ಹತ್ತದಾಗಿತ್ತು. ಊದಿದ ಬೆಲೂನಿದೆ ಕೊಂಚ ಕುಳಿದಾಡೋ ಹುಮ್ಮಸ್ಸು, ನಿದ್ದೆ ಹತ್ತದಾಯ್ತು.

ಹೀಗೂ ಒಂದು ಉಲ್ಲಾಸವಿರಬಹುದು ಎಂಬ ಕಲ್ಪನೆಯಿರದೆ ಇದ್ದವಳಿಗೆ ಗೆಳತಿ ಅರ್ಚನ ಒಂದು ಬದಲಾವಣೆಯನ್ನು ತಂದುಕೊಟ್ಟಿದ್ದಳು. ಬಾಲ್ಯದಲ್ಲಿ ನಾನೇ ಇಷ್ಟಪಟ್ಟು ಅವಳ ಸ್ನೇಹ ಸಂಪಾದಿಸಿದ್ದೆ. ಇದು ಇನ್ನೂ ನನ್ನೊಂದಿಗಿದೆ. ಅವಳ ಸ್ನೇಹಿತರೆಲ್ಲಾ ನನ್ನ ಸ್ನೇಹಿತರೇ, ಶೃತಿ, ಹೇಮ, ಕೃತಿಕಾ,,, ಹೀಗೆಯೇ ಎಲ್ಲರೂ. ಇದೊಂದು ನನ್ನ ಹೆಮ್ಮೆಯೇ ಸರಿ. 🙂

ಮನಕ್ಕೆ ಹಿತವಾದದ್ದೂ, ಅಹಿತವಾದದ್ದೂ ಎಲ್ಲವೂ ಎಲ್ಲಕ್ಕೂ ಈಗ ಅಕ್ಷರ ಪ್ರೀತಿಯಾಗಿದೆ. ''ದೇಶ ಸುತ್ತಬೇಕು; ಕೋಶ ಓದಬೇಕು'', ಎಂಬಂತೆ ಓದಿಕೊಂಡದ್ದರ ದುಪ್ಪಟ್ಟು ಲಾಭವಿದೆ ಈ ಸುತ್ತಾಟಗಳಿಂದ ಎಂದೆನಿಸಿದ್ದು ನಿಜವೇ. ಇನ್ನಷ್ಟು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡೋ ಹುಮ್ಮಸ್ಸು ತುಂಬಿದೆ ಈ ಒಂದು ದಿನದ ಸಂಚಾರದಿಂದ. ನಾವು ಓದಿದ ನಾವು ಪಡೆದ ಅನುಭವಗಳು ಮತ್ತೊಂದು ಮನಕ್ಕೆ ಮುಟ್ಟಿ, ತುಸು ರಂಜನೆ-ನಿರಾಳ ಭಾವವನ್ನು ಹುಟ್ಟಿಸಿದ್ದೇ ಆದರೆ ಆ ಅನುಭವದ ವಿವರಣೆಗದೇ ಪುರಸ್ಕಾರ.

ಧನ್ಯವಾದಗಳು ಸ್ನೇಹಿತರೇ,,

ದಿವ್ಯ ಆಂಜನಪ್ಪ
೦೩/೦೮/೨೦೧೪

****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

19 Comments
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
10 years ago

ಬಾಲ್ಯ ಸ್ನೇಹಿತರ ಭೇಟಿ
ಮಾಡುವುದೆಂದರೆ, ಹಾಲು-ಜೇನು
ಸವಿದಂತೆ, ಸ್ವರ್ಗ ಮೂರೇ ಗೇಣು.
ಚೆನ್ನಾಗಿದೆ ಪ್ರವಾಸ ಕಥನ.

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
10 years ago

ಥ್ಯಾಂಕ್ಯೂ ಸರ್ 🙂

Archana
Archana
10 years ago

Thanks a lot kane. Beautiful trip with beautiful experience.

My Hubby read it for me thanks to him as well.

Thanks a lot for this wonderful Article.

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
10 years ago
Reply to  Archana

Archann 😉 🙂 ……….. thank u 🙂

Archana
Archana
10 years ago

ok

Rukmini Nagannavar
Rukmini Nagannavar
10 years ago

ಸ್ನೇಹವೇ ಹಾಗೆ. ನಮ್ಮನ್ನು ನಮ್ಮ ಒಂಟಿತನವನ್ನೆಲ್ಲ ತಬ್ಬಿಕೊಳ್ಳುತ್ತೆ. ಒಂದು ದಿನದ ಪರ್ಯಟನೆ ಸೊಗಸಾಗಿತ್ತು ದಿವ್ಯಕ್ಕ. ನಾನೂ ಕೂಠ ಅದೆಲ್ಲ ಜಾಗಗಳನ್ನು ನೋಡಿದ ಹಾಗೆ ಕಣ್ಣಿಗೆ ಕಟ್ಟಿಕೊಡುವಂತೆ ಸವಿಸ್ತಾರವಾಗಿ ಬರೆದಿದ್ದೀಯ..

ಅಂಕಣ ಬರೆಯುವುದನ್ನು ಮುಂದುವರೆಸು ಪ್ಲೀಸ್..

ರುಕ್ಮಿಣಿ ಎನ್.

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
10 years ago

ರುಕ್ಕೂ,,,,,,,,, ಥ್ಯಾಂಕ್ಯೂ 🙂

ಅಮರದೀಪ್.ಪಿ.ಎಸ್.
ಅಮರದೀಪ್.ಪಿ.ಎಸ್.
10 years ago

ನಮ್ದೂ  ಒಂದ್ ಟ್ರಿಪ್ ಆದಂತೆಯೇ ಆಯಿತು…. ಅಷ್ಟು ಚೆನ್ನಾಗಿ ಓದಿಸಿತು ನಿಮ್ಮ ಬರಹ….. ಅಭಿನಂದನೆಗಳು..

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
10 years ago

ಧನ್ಯವಾದಗಳು ಸರ್ 🙂

murthy
murthy
10 years ago

Lekhana bahaLa chennagide. sanna sanna ghaThanegaLu – Annana anumati, bus pradakshine, ityadigaLu odalu kushiyaayitu. 

sundaravaada dina, sundara nenapugaLu sadaa nimmondigide uLiyuttade…nimma barahadinda nammondige kooDa.

 

 

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
10 years ago

ಸಣ್ಣ ಸಣ್ಣ ಸಂಭ್ರಮಗಳೇ ನಮ್ಮನ್ನು ನೆಮ್ಮದಿಯ ಜೀವನದತ್ತ ಕರೆದೊಯ್ಯುವುದು ಎಂಬುದು ನನ್ನ ನಂಬಿಕೆ,,,,,,

ಧನ್ಯವಾದಗಳು ಸರ್ 🙂

hridayashiva
hridayashiva
10 years ago

ishtavaytu….

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
10 years ago
Reply to  hridayashiva

 ಓದಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು ಸರ್ 🙂 

Gaviswamy
10 years ago

ಪ್ರವಾಸ ಕಥನ ಚೆನ್ನಾಗಿದೆ

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
10 years ago
Reply to  Gaviswamy

thank u so much Gavi sir 🙂

prem sarala
prem sarala
10 years ago

tumba chanagide.

 

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
10 years ago
Reply to  prem sarala

thank u 🙂

hema
10 years ago

Tumba chenagide Kane ninna varnane thanks for joining with us on that day

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
10 years ago
Reply to  hema

thank u hema 😉 🙂

19
0
Would love your thoughts, please comment.x
()
x