(ನಮ್ಮ ಗೆಳೆಯರ ಬಳಗ ಹಾಗೂ ಅಗಿನ ನನ್ನ ಅನುಭವಗಳ ಬಗ್ಗೆ ಹಿಂದೊಮ್ಮೆ ಬರೆದಿದ್ದೆ. ಅದಕ್ಕೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆಯಿಂದ ಪುಳಕಿತನಾದೆ. ಅದನ್ನು ಓದಿದ ಕೆಲವು ಗೆಳೆಯರ ಆಗ್ರಹದ ಮೇರೆಗೆ, ಆ ಸಮಯದಲ್ಲಿ ನಮ್ಮ ಜೊತೆಗಿದ್ದ ಇನ್ನೂ ಕೆಲವು ವ್ಯಕ್ತಿಗಳು ಹಾಗೂ ಕೆಲವು ಮೋಜಿನ ಸಂಗತಿಗಳ ಬಗ್ಗೆ ಈಗ ಬರೆದಿದ್ದೇನೆ. ಹಿಂದಿನ ಲೇಖನ ಓದಿಯೇ ಇದನ್ನು ಓದಬೇಕೆಂದೇನು ಇಲ್ಲ. ಆದರೂ ಓದಿದರೆ ನಾನು ಬೇಡ ಅನ್ನುವುದಿಲ್ಲ! 🙂 ಇಲ್ಲಿದೆ ಅದರ ಲಿಂಕ್
*****
ನಮ್ಮ ಬಳಗದ ಇನ್ನೊಂದು ಅವಿಭಾಜ್ಯ ಅಂಗ ಆಗಿದ್ದಾಂವಾ ರಾಜಾ ಸಾಬ್ ಅನ್ನೋ 'ಆಫಿಸ್ ಬೊಯ್'. ಅವಾಗ ಅಂವಾ ಹತ್ತೋ ಹನ್ನೆರಡೊ ವಯಸ್ಸಿನ ಬಾಲ ಕಾರ್ಮಿಕ! ಈಗ ಬಿಡ್ರೀ ಲಗ್ನಾಗಿ ಇನ್ನೊಂದಿಷ್ಟ ಬಾಲ ಕಾರ್ಮಿಕರನ್ನ ಸೃಷ್ಟಿ ಮಾಡ್ಯಾನ! ಅಂವಾ ನಮ್ಮ ಹತ್ರ ಸಂಜೀ ಮುಂದ ಆರು ಗಂಟೇಕ್ಕ ಕರ್ರೆಕ್ಟಾಗಿ ಬಂದ ಅಂದ್ರ, ನಮ್ಮ ಹೊಟ್ಟಿ ಗುರ್ ಅಂತಿದ್ವು. ಯಾಕಂದ್ರ ನಮ್ಮ ಆಫಿಸೀನ್ಯಾಗ ಸಂಜೀ ಮುಂದ ಏನರೆ ತಿನ್ಲಿಕ್ಕೆ ಕೊಡತಿದ್ರು. ನಾಂವೂ ಪುಗಶೆಟ್ಟೆ ಸಿಗ್ತದ ಅಂಥೇಳಿ ಖುಷಿಲೇ ತಿಂತಿದ್ವಿ. ಆದ್ರ, ತಿಂದು ಋಣದಾಗ ಬಿದ್ದು ರಾತ್ರಿ ಹತ್ತರ ತಂಕಾ ಕೆಲ್ಸ ಮಾಡ್ತಿದ್ವಿ. ರಾಜಾ ಸಾಬ್ ಹತ್ರ ಬಂದಾ ಅಂದ್ರ ಏನೊ ತಿನ್ಲಿಕ್ಕೆ ಸಿಗ್ತದ ಅಂತ ನಮ್ಮ ಹೊಟ್ಟಿ ಅರ್ಥಾ ಮಾಡ್ಕೊಂಡಿದ್ವು. ಅದಕ್ಕ ಅಂವಾ ಬಂದ್ ಕೂಳ್ಲೆ 'ಗುರ್' ಅಂತ ಅವಾಜ್ ಹಾಕ್ತಿದ್ವು.
ಅಂವಾ ಒಬ್ಬೊಬ್ರ ಹತ್ರ ಬಂದು ನಿಂತು "ಸರ್ರ, ನಿನಗ ವೆಜ್ ಪಪ್ಪಾ ಎಗ್ ಪಪ್ಪಾ (ಪಫ್)"? ಅಂತ ಕೇಳಿದ ಕೂಳ್ಲೆ ನಮಗಾಗ್ತಿದ್ದ ಸಡಗರ ಅಶ್ಟಿಷ್ಟಲ್ಲಾ. ಮರ್ಯಾದಿ ಜೊತಿಗೇ ಸಲಿಗಿಯಿಂದ ಮಾತಾಡೊದ್ ಹೆಂಗ ಅಂತ ಕಲೀಬೇಕಂದ್ರ ನೀವ್ ರಾಜಾ ಸಾಬ್ ನ ಕಡೆ ಟ್ರೇನಿಂಗ್ ತೊಗೊಬೇಕು! 'ಸರ್ರ್' ನೂ ಅಂತಿದ್ದ 'ನಿನಗ' ಅಂತ ಏಕವಚನದಾಗ ಮಾತಡತಿದ್ದ!
ಒಮ್ಮೊಮ್ಮೆ ತಲಿ ಕೆಡಿಸ್ಕೊಂಡು ಕೆಲ್ಸಾ ಮಾಡ್ಕೊತ ಕೂತಾಗ ಇಂವ ಬಂದ ಹಿಂಗ ಕೇಳಾಂವಾ. "ಲೇ ಏನರ ಒಂದು ತೊಗೊಂಬಾ ಹೋಗ್ಲೇಪಾ" ಅಂತ ಬೈತಿದ್ವಿ. ಅಂವಾ ಅಷ್ಟ ತಣ್ಣಗ ಹೇಳ್ತಿದ್ದಾ "ರೀ ಸರ್ರ, ಅಮ್ಯಾಲ್ ಏನರ ಬೈದಿ ಅಂದ್ರ ನಂಗ ಸಂಬದಿಲ್ಲಾ ಮತ್ತ!"
ಅಂವಾ ಕೆಲ್ಸಾನೂ ಹಂಗ ಮಾಡ್ತಿದ್ದಾ. ನಾವು ಮುಂಜಾನೆ ಬರೂದ್ರಾಗ ಎಲ್ಲಾ ಕಸಾ ಹೊಡದು, ನೆಲ ವರಿಸಿ ಚೊಕ್ಕ ಮಾಡಿಟ್ಟಿರ್ತಿದ್ದಾ. ಬಿಟ್ರ ಕಂಪ್ಯುಟರ್ರು ಸೊಚ್ಛಾಗಿ ತೊಳದ ಬಿಡಾಂವಾ! ಕೆಲ್ಸಾ ಮಾತ್ರ ಚೊಕ್ಕ.
ಅಲ್ಲಿದ್ದದ ಇನ್ನೊಂದ್ ಕ್ಯಾರೆಕ್ಟರ್ ಬಗ್ಗೆ ಹೇಳಲಿಲ್ಲಾ ಅಂದ್ರ ಈ ಕತಿ ಅರ್ಧ ಆದಂಗ! ನನ್ನ ನಸೀಬಕ್ಕ ಅಲ್ಲೆ ಇನ್ನೊಬ್ಬ 'ಗುರು' ಬ್ಯಾರೆ ಇದ್ದ. ಅವನ ಹೆಸರು ಗುರುರಾಜ, ಆದ್ರೂ ಎಲ್ಲಾರೂ ಅಂವಗೂ 'ಗುರು' ಅಂತನ ಕರೀತಿದ್ರು. ಅಂವಗ ಪಾಪ ಅಷ್ಟು ಕೆಲಸಾ ಇರ್ತಿದ್ದಿಲ್ಲ. ಅದು ಅವ್ನ ತಪ್ಪಲ್ಲಾ ಬಿಡ್ರಿ. ಯಾವಾಗ್ಲೂ ನಿದ್ದಿ ಹೊಡಿತಿದ್ದಾ. ಬಾಸ್ ಇದ್ದಾಗ ಮಾತ್ರ ಕಷ್ಟ ಪಟ್ಟು ಕಣ್ಣು ತಕ್ಕೊಂಡ ಇರ್ತಿದ್ದಾ. ಆದ್ರೂ ತನಗ ಗೊತ್ತಿಲ್ದಂಗ ತುಕಡಸ್ತಿದ್ದಾ. ಬಾಸ್ ಎಷ್ಟೋ ಸರ್ತಿ ಘನಘೊರ ಕೆಲ್ಸಾ ಇದ್ದವ್ರಂಗ "ಗುರೂ…" ಅಂತ ಒದ್ರತ್ತಿದ್ರು. ಅವಾಗ ನಾನು ಮತ್ತ ಇನ್ನೊಬ್ಬ ಗುರು ಇಬ್ರೂ ಅವ್ರ ಹತ್ರ ಓಡಿ ಹೋಗ್ತಿದ್ವಿ. "ಏ ನೋಡ್ರೀ ನೀವ್ ಬಂದ್ರೇನು, ನಾ ಕರದದ್ದು ಗುರುರಾಜಗ" ಅಂತನೋ "ನಾ ಕರದಿದ್ದು ಗುರುಪ್ರಸಾದ ಗ" ಅಂತನೋ ನಮ್ಮ ಬಾಸು ವಿನಾಕಾರಣ ಆ ಗುರುವಿನ ನಿದ್ರಾ ಭಂಗ ಮಾಡತಿದ್ರು ಪಾಪಾ!
ನಮ್ಮ ಎಲ್ಲಾ ಸಾಫ್ಟವೇರ್ ಪ್ರಾಜೆಕ್ಟು ಹುಬ್ಳಿ ಧಾರವಾಡದಾಗ ಇರ್ತಿದ್ವು. ಹಿಂಗಾಗಿ ನಮ್ಮ ಕಸ್ಟಮರ್ರು ಇದ್ದದ್ದು ಅಲ್ಲೇ. ನನಗೊಂದು ಧಾರವಾಡದ ಪ್ರಾಜೆಕ್ಟು ಕೊಟ್ಟಿದ್ರು. ನಂದ ಮನಿ ಧಾರವಾಡದಾಗ ಇದ್ದದ್ದಕ್ಕ ಅಲ್ಲೆ ಹೋಗೋದು ಬರೋದು ಭಾಳ ಮಾಡ್ತಿದ್ದೆ! ಅದೊಂದು ಬ್ಯಾಟರಿ ತಯಾರ ಮಾಡಿ ಮಾರೋ ಕಂಪನಿ. ಅದೂ ಅಲ್ದ ನಾನೂ ಅವಾಗ ಬ್ಯಾಚಲರ್ರೂ. ಆ ಕಂಪನಿಯೊಳಗ ಒಬ್ಬಾಕಿ ಹುಡಗಿ ಬ್ಯಾರೆ ಇದ್ಲು! ಆ ಕಾರಣಕ್ಕ ನಾ ಅಲ್ಲೆ ಸಲ್ಪ ಜಾಸ್ತೀನ ಹೋಗತಿದ್ದೆ! ತಿಂಗಾಳಾನುಗಟ್ಲೆ ಆದ್ರೂ ಆ ಪ್ರಾಜೆಕ್ಟು ಮುಗ್ಯೊ ಲಕ್ಷಣ ಕಾಣಲಿಲ್ಲ. ಆ ಹುಡಗಿ ಇದ್ದದ್ದಕ್ಕ ಅಲ್ರೀಪಾ! ಆ ಕಷ್ಟಮರ್ರಿಗೆ ತನಗ ಏನು ಬೇಕು ಅನ್ನೋದು ಗೊತ್ತಿರಲಿಲ್ಲ, ಮತ್ತ ನನಗ ಹೆಂಗ ಮಾಡಬೇಕು ಅನ್ನೋದೂ ಗೊತ್ತಿರಲಿಲ್ಲಾ! ಸಾಫ್ಟವೇರ್ ಕೆಲಸದ ಅನುಭವಾ ನನಗಾವಾಗ ಇನ್ನೂ ಕಡಿಮಿ ಇತ್ತು. ಏನೊ ತಪ್ಪ ತಪ್ಪ ಮಾಡಿ ಕೊಡ್ತಿದ್ದೆ. ಅದ ಕರೆಕ್ಟು ಅಂತ ತೋರಸ್ತಿದ್ದೆ. ಆ ಹುಡುಗಿ "ಕರೆಕ್ಟ್ ಆಗ್ಯಾದ ನೋಡ್ರಿ. ನಮಗ ಸಾಫ್ಟವೇರ್ ಹಿಂಗ ಬೇಕು" ಅಂತಿದ್ಲು. ನಾ ಹುರುಪಿಲೆ ಅದನ್ನ ಅಕಿ ಬಾಸ್ ಗ ತೋರಸ್ತಿದ್ದೆ. ಅವ್ರು ನೋಡು ತನಕಾ ನೋಡಿ "ಛೆ ಹಿಂಗಲ್ರೀ ನಂಗ ಬೇಕಾಗಿರೋದು. ಈಗ ನೀವು ಬ್ಯಾಂಕಿಗೆ ಹೋಗ್ತೀರಿ ಅಂತ ತಿಳ್ಕೋರಿ. ಅಲ್ಲೆ ನಮ್ಮ ನಂಬರು ಹೊಡದು ಕೂಳ್ಲೆ, ಸರ್ರ ಅಂತ ನಮ್ಮ ಕುಂಡಲೀನ ಬಂದ ಬಿಡತೈತಿ. ಹಂಗ ಬರ್ಬೇಕ್ ನಂಗ" ಅಂತಿದ್ರು. ನಾನು ಏನ್ ಕಡಮಿ ಇದ್ದಿದ್ದಿಲ್ಲಾ. "ಸರ್ರ ಅದು ಬರ್ಬೇಕಂದ್ರ ಮೊದ್ಲ ಎಲ್ಲಾ ಮಾಹಿತಿ ಫೀಡ್ ಮಾಡ್ಬೇಕ್ರೀ. ಬ್ಯಾಂಕ್ ನ್ಯಾಗ ಹಂಗ ಮಾಡಿರ್ತಾರ. ನಿಮಗ ಗೊತ್ತಿರೂದಿಲ್ಲ ಅಷ್ಟ" ಅಂತ ಹೇಳಿ ಅವರ ಕೆಂಗಣ್ಣಿಗೆ ಗುರಿ ಆಗ್ತಿದ್ದೆ! "ನಾ ಹೇಳೂದು ನಿಮಗ ಅರ್ಥ ಆಗವಲ್ದು" ಅಂಥೇಳಿ ಆಗಿನ ಕಾಲದಾಗ ಮೊಬೈಲ್ ಇಟಗೊಂಡಿದ್ದ ಅವ್ರು ಬ್ಯಾರೆ ಯಾರಿಗೊ ಫೋನ್ ನ್ಯಾಗ ಬೊರೊಬ್ಬರಿ ಒದರ್ಯಾಡಿ ಬೈದು ನನ್ನ ಮ್ಯಾಲಿನ ಸಿಟ್ಟು ಪಾಪಾ ಇನ್ನ ಯಾವಂದೋ ಮ್ಯಾಲೆ ತೀರಿಸ್ಕೋತಿದ್ರು! ನಾ ಅವತ್ತಿನ ಕೆಲ್ಸ ಮುಗೀತು ಅಂತ ಮನೀಗೆ ಹೋಗ್ತಿದ್ದೆ!
ನನ್ನ ಬಾಸು ಒಂದ್ ಸಲಾ ಕೇಳಿದ್ರು "ಎಲ್ಲಿಗೆ ಬಂತ್ರ್ಯಪಾ ನಿಮ್ಮ ಪ್ರಾಜೆಕ್ಟು?" ನಾನ ಇದ್ದ ವಿಷಯ ಹೇಳಿದೆ. ಆ ಹುಡುಗಿ ವಿಷಯ ಒಂದು ಬಿಟ್ಟು! ಬಾಸ್ ಗೂ ಸಹನೆ ಮುಗದಿತ್ತು. "ರೊಕ್ಕಾ ಅರೆ ಕೊಡು ಅಂತ ಹೇಳ್ರೀ ಆ ನಿಮ್ಮ ಕಷ್ಟಮರ್ ಗ". ಅಂತ ಸಿಟ್ಟ್ಲೆ ಹೇಳಿದ್ರು. "ಕೆಲ್ಸಾ ಮುಗ್ಯು ತನಕಾ ಕೊಡಂಗಿಲ್ಲಂತ್ರೀ" ಅಂತ ಹೇಳಿದ್ದಕ್ಕ "ಇನ್ನೂ ಏನ್ ಮಾಡಬೇಕಂತ ಅಂವಗ? ಒಂದು ಕಪಾಳಕ್ಕ ಹೊಡೀರಿ ಅಂವಗ. ಮುಂದಿಂದು ನಾ ನೋಡ್ಕೋತೀನಿ!" ಅಂತ ಕೆಂಡಾಂಡಲ ಆದ್ರು. ಅವ್ರು ಮಾತ್ ಕೇಳಿ ನಾ ಕಪಾಳಕ್ಕ ಹೊಡ್ಯೋ ಧೈರ್ಯಾ ಮಾಡಲಿಲ್ಲ ಬಿಡ್ರಿ. ಅಂತೂ ಆ ಪ್ರಾಜೆಕ್ಟ್ ಕತಿ ಅಲ್ಲಿಗೆ ಮುಗೀತು! ನಾ ಅಲ್ಲೆ ಹೋಗೋದು ನಿಲ್ಸಿದೆ. ಅವಾಗವಾಗ ಆ ಹುಡಗಿ ನೆನಪಾಗ್ತಿದ್ಲು. ಆ ಮ್ಯಾಲೆ ನೆನಪಿಂದ ದೂರಾದ್ಲು!
ಹಿಂಗ ನಮ್ಮ ಜೀವನ ನಡದಿತ್ತು. ನಾ ಮೊದ್ಲ ಹೇಳಿದಂಗ ನಮ್ಮ ಬಾಸ್ ನಾವು ಬೊರೊಬ್ಬರಿ ಮನೀಗೆ ಹೋಗು ವೇಳ್ಯಾಕ್ಕ ಬಂದು ತಮ್ಮ ಸಿಂಹಾಸನದ ಮ್ಯಾಲೆ ಆಸೀನ್ರಾಗೊರು. ನಮಗ ಮನೀಗೆ ಹೋಗ್ಲಿಕ್ಕೆ ಭಾಳ ತ್ರಾಸ್ ಆಗೊದು. ಯಾಕಂದ್ರ ನಾವು ಹೊರಗ ಹೋಗಬೇಕಂದ್ರ ಅವರ ಕ್ಯಾಬಿನ್ನು ದಾಟೇ ಹೋಗಬೇಕು. ಒಳ್ಳೆ ಹುಲಿ ಗುಹೆ ಮುಂದ ಹಾಸಿ ಹೊಂಟಂಗ. ಅದಕ್ಕ ಒಂದು ಉಪಾಯಾನೂ ಇತ್ತು! ನಮ್ಮ ವಿಟ್ಠಲ ಯಾವಗ್ಲೂ ಬಾಸ್ ಜೋಡಿ ಜಗಳಾ ಮಾಡಂವಾ. ಅವ್ನ ಇದ್ದದ್ದ ಇದ್ದಂಗ ಹೇಳಾಂವ. ನಾವು ಸುಮ್ನ ಇರ್ತಿದ್ವಿ. ಆದ್ರ ಬಾಸ್ ಯಾಕ್ ಕೇಳ್ತಾರ? ಇಬ್ಬರಿಗೂ ವಾದ ವಿವಾದ ನಡದಿರ್ತಿತ್ತು. ಅದ ಟೈಮಿಗೆ ನಾವು ಹೇಳ್ದ ಕೇಳ್ದ ಹಿಂದಿನಿಂದ ಪರಾರಿ ಆಗ್ತಿದ್ವಿ! ಆದ್ರ ಜಗಳ ಯಾವಾಗ್ಲೂ ನಡಿತಿದ್ದಿಲ್ಲ. ಹಿಂಗಾಗಿ ಒಂದೊಂದ್ ಸಲ ಬಾಸ್ ಎದರಿಗೇನ ಧೈರ್ಯ ಮಾಡಿ ತಪ್ಪಿಸಿಕೊಂಡ್ ಹೋಗೊ ವ್ಯರ್ಥ ಪ್ರಯತ್ನ ಮಾಡತಿದ್ವಿ. ನಾವು ಕದ್ದು ಹೋಗೋದು ಅವ್ರಿಗೆ ಕಂಡ ಬಿಡ್ತಿತ್ತು! "ಎಲ್ಲಿಗ್ ಬಂತ್ರೀ ನಿಮ್ಮ ಪ್ರಾಜೆಕ್ಟು" ಅಂತ ಒದ್ರಿ ನಮಗ ಬ್ರೇಕ್ ಹಾಕೇಬಿಡ್ತಿದ್ರು. ನಾವು ಒಳಗ ಹೋಗಿ ಅವ್ರ ಮುಂದ ನಿಂತ್ಕೊಂಡು ನಮ್ಮ ಸಮಸ್ಯೆನ ಹೇಳ್ಕೊಂತಿದ್ವಿ. ಕೇಳತಿದ್ರೋ ಇಲ್ಲೋ ಗೊತ್ತಿಲ್ಲಾ, ಒಮ್ಮೆಲೇ ಹುಬ್ಬ ಏರ್ಸಿ "ನೋಡ್ರೀ NASDAQ full down" ಅಂದು ಲೊಚ ಲೊಚ ಗುಡ್ತಿದ್ರು. ನಮಗ ಅವಾಗ NASDAQ ಅಂದ್ರ ಅಮೇರಿಕಾದ stock market ಅನ್ನೋ ತಿಳುವಳಿಕಿ ಇರ್ಲಿಲ್ಲಾ. ಅದೂ ಅಲ್ದ ಅದು down ಆದ್ರ ನಮಗೇನು ಸಂಬಂಧ ಅಂತನೂ ಗೊತ್ತಿರ್ಲಿಲ್ಲ. ಅದು ಆಮ್ಯಾಲೆ ಗೊತ್ತಾತು! ಅದು down ಆದ್ರ ಅಲ್ಲಿನ ಆರ್ಥಿಕ ಪರಿಸ್ಥಿತಿ ಕೆಟ್ಟದು ಅಂತ. ನಮ್ಮ ಕೆಲವು ಸಾಫ್ಟವೇರು ಅಮೇರಿಕಾಕ್ಕ export ಆಗ್ತಿದ್ದದ್ದಕ್ಕ, ಅದ್ರ ಮ್ಯಾಲೆ ಇದು ಪರಿಣಾಮ ಆತು. ಅದಕ್ಕ ನಮ್ಮ ಪಗಾರಕ್ಕ ಬೊರೊಬ್ಬರಿ ಕತ್ರಿ ಬಿತ್ತು. ಹಿಂಗಾಗಿ ಅದು ನಮ್ಮ ಆರ್ಥಿಕ ಪರಿಸ್ಥಿತಿನೂ ಚಿಂತಾಜನಕ ಮಾಡ್ತು. ದಿನಾ ಸಂಜೀ ಮುಂದ ಸಿಗ್ತಿದ್ದ "ವೆಜ್ ಪಪ್ಪ್" ಗೂ ಕತ್ರಿ ಬಿತ್ತು. ನಮ್ಮ ಹೊಟ್ಟಿ ಅದ್ಕೂ ಹೊಂದ್ಕೊಂಡ್ತು. ರಾಜಾ ಸಾಬ್ ಬಂದ್ರ ಗುರ್ ಗೊಡೋದು ನಿಲ್ಸಿತ್ತು! ರಾತ್ರಿ ಮಲಕೊಂಡಾಗ, ಬೆಂಗಳೂರು "ವಾಂಗ ವಾಂಗ.." ಅಂತ ಕರದಂಗ ಕನಸು ಬೀಳಲಿಕ್ಕೆ ಶುರು ಆಗಿತ್ತು!!
*****
ಚೆನ್ನಾಗಿದೆ… ನಿಮ್ ಗೆಳೆಯರ ಬಳಗದ ಸುದ್ದಿ.. ನಿಜ, ರಾಜಾಸಾಬ್ ನಂತೆ ಒಬ್ಬೊಬ್ಬರು ನಮಗೆ ಸಿಕ್ಕೇ ಸಿಗುತ್ತಾರೆ…… ನಿಮ್ ಬಾಸ್ ನಂತವರೂ.:P
ಅಮರ್, ನೀವು ಹೇಳಿದ್ದು ಸರಿ. ಎಲ್ಲರ ಬಳಗದಲ್ಲಿ ಒಬ್ಬೊಬ್ಬ ರಾಜಾ ಸಾಬ್ ಇರ್ತಾನೆ, ಗುರುನೂ ಇರ್ತಾನೆ ಹಾಗೇ ಅಮರ್ ಕೂಡ ಇರ್ತಾರೆ! :). ಲೇಖನ ಓದಿ ಮೆಚ್ಚಿದ್ದಕ್ಕೆ ಖುಷಿಯಾಯ್ತು!
ಹೀಗೆ ನಾವು ಗೆಳೆಯರ ಬಳಗವನ್ನು ಹೆಚ್ಛು ಹಚ್ಚಿಕೊಳ್ಳುವದಕ್ಕೆ ನಾವು ಕಾಗೆ ಬಳಗ ಅಂತಾನೇ ಕರೆಯೋದು…….ಏನಂತೀರಿ?
ಅಮರ್, ಹೌದು ಕಾಗೆ ಬಳಗ ಆದರೆ ಸರಿ. 'ಕತ್ತೆ ಬಳಗ' ಆಗ್ಬಾರ್ದು! ನಮ್ಮ ಕಡೆ ಕತ್ತೆ ಪ್ರೀತಿ ಅಂದ್ರೆ ದೂರವಿದ್ದಾಗ ಪ್ರೀತಿಯಿಂದ ನೆನೆಸಿಕೊಳ್ಳೋದು, ಆದರೆ ಹತ್ತಿರ ಬಂದರೆ ಒದೆಯುವುದು 🙂
Too good..! "ಸರ್ರ, ನಿನಗ ವೆಜ್ ಪಪ್ಪಾ ಎಗ್ ಪಪ್ಪಾ.." ಇತ್ಯಾದಿಗಳು ಭಾರೀ ನಗು ತರಿಸ್ತು. ವ್ಯಂಗ್ಯ ಹಾಗೂ ಹಾಸ್ಯದ ಸಮಾಂತರ ಬೆರಕೆ ಚೆನ್ನಾಗಿದೆ. ಬೆಂಗಳೂರು "ವಾಂಗ ವಾಂಗ.." ಅಂತ ಕರೆಯಿತು ಅನ್ನೋ ಮಾತು a real punch !
ಮೂರ್ತಿ, 'ವಾಂಗ್ ವಾಂಗ್'…, ಬರೆಯುವಾಗ ನನಗೂ ಭಾಳ ಖುಷಿ ಕೊಟ್ಟ ಡೈಲಾಗ್! ಅದನ್ನ್ ಮೆಚ್ಚಿದ್ದಕ್ಕೆ ಖುಷಿಯಾಯ್ತು 🙂
ಗುರು ಇನ್ನೂ ಒಂದು ಮುಖ್ಯ್ ಕ್ಯಾರೆಕ್ಟರ್ ಬಿಟ್ರಿ… ಯಾ! ಯಾಯಾ! ಯಾಯಾಯಾ…. ಯಾ! & ನೀವು ಹೇಳಿದ್ದು ಅವರಿಗೆ ತಿಳಿವಲ್ಲದು… ಅವರು ಹೇಳಿದ್ದು ನಿಮೇಗಾ ತಿಳಿವಲ್ಲದು… ಯಾರಂತ್ ಗೊತ್ತಾತು? ಕ್ಯಾರೆಕ್ಟರ್ ಮಾಂತ್ರಿಕನದು, ನಮ್ಮ್ ಉಗ್ರ ವಿಷ್ಣು ಅವತಾರನ್ ರಸಿಕತೆ…ಭಾಳ ಅವಾ ಆದ್ರ ಟೈಮ್ ಕಡಿಮಿ ಆದ ಅನಸ್ತದ… ಇನ್ನೂ ಎರಡು ಮೂರು ಭಾಗ ಮುಂದ ವರಸ್ರಿ.
ಛೊಲೋ ಅನಸ್ತು ಎಲ್ಲಾ ನೆನಪು ಮಾಡಿಕೊಟ್ಟದಕ.
ನಿಮ್ಮ್ ವಿಠಲ
ವಿಠಲ, ಹೌದು ಅವು ದೊಡ್ಡ ಕ್ಯಾರಕ್ಟರು! ಇದಕ್ಕ ಹೆಂಗ ಪ್ರತಿಕ್ರಿಯಾ ಬರ್ತಾವ್ ನೋಡ್ಕೊಂಡು ಮುಂದ ಬರ್ಯೋಣಂತ! 🙂
Veg pappu .. namma bengalurina shuruvatina dinagala nenapu aatu.software kelasasavara paadu ashte… masta baradeeri. Eradu bhaaga chholo moodi bandava..!!
ಸಂಗೀತಾ, ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು! ನಮಗೆ ಮತ್ತೆ ಮತ್ತೆ ಬರೆಯಲು ಇದು ಖಂಡಿತ ಪ್ರೇರೇಪಿಸುತ್ತದೆ!
ಬಹಳ ಚೆನ್ನಾಗಿದೆ…
ಅಕ್ಷಯ, ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು!
good one sir.. ಹಾಸ್ಯ ಲೇಖನ ಚೆನ್ನಾಗಿದೆ
ಧನ್ಯವಾದಗಳು ಗವಿಸ್ವಾಮಿ ಅವರೆ! ನಿಮ್ಮ ನಿರಂತರ ಪ್ರೋತ್ಸಾಹಕ್ಕೆ ನಾನು ಋಣಿ.
ನಿಮ್ಮ ಗೆಳೆಯರ ಬಳಗ ಮಸ್ತ ಅದರಿ. ಇನ್ನಮ್ಯಾಲೆ ’ಪಫ್’ ತಿನ್ನುವಾಗ್ ಒಮ್ಮೆ ನಿಮ್ಮ ಲೇಖನ ನೆನಪಾಗತದ.ಒದಿ ಭಾಳ ನಗು ಬಂತು. ಇದರ ಮುಂದಿನ ಭಾಗಕ್ಕ ಕಾಯಲಿಕತ್ತಿವಿ.
ಅನಂತ, ಲೇಖನ ಪ್ರೀತಿಯಿಂದ ಓದಿ ಮೆಚ್ಚಿದ್ದಕ್ಕೆ ಧನ್ನೋಸ್ಮಿ!